ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ನಾ ದಿವಾಕರ

ಹುಣಸೂರಿನಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಮತ್ತು ಸಂಬಂಧಿತ ಗಲಭೆಗಳನ್ನು ಮತ್ತು ಕುಮಟ, ಹೊನ್ನಾವರದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯನ್ನು ಆಧುನಿಕ ಭಾರತದ ಕಳೆದ ಮೂರು ದಶಕಗಳ ಬೆಳವಣಿಗೆಗಳ ಕಿಂಡಿಯ ಮೂಲಕ ನೋಡುವುದು ಸೂಕ್ತ. 25 ವರ್ಷಗಳ ಹಿಂದೆ ಏಕ್ ಧಕ್ಕಾ ಔರ್ ದೋ ಎಂದು ಕೂಗುತ್ತಿದ್ದ ಸ್ವರಗಳು ಇಂದು ಧಕ್ಕಾ ಕುರಿತು ಮಾತನಾಡುತ್ತಿಲ್ಲ. ಮಂದಿರ್ ವಹೀಂ ಬನಾಯೇಂಗೇ ಎಂಬ ಘೋಷವಾಕ್ಯದ ಪಿತಾಮಹರು ಇಂದು ಮೌನ ತಪಸ್ವಿಗಳಾಗಿದ್ದಾರೆ. ಬಚ್ಚಾ ಸಚ್ಚಾ ರಾಮ್ ಕಾ ಬಾಕಿ ಸಬ್ ಹರಾಮ್ ಕಾ ಎನ್ನುತ್ತಿದ್ದ ಕ್ಷುದ್ರ ಮನಸುಗಳು ಇಂದು ಅಧಿಕಾರ ರಾಜಕಾರಣದ ಫಲಾನುಭವಿಗಳಾಗಿ ಸಂಭಾವಿತರಾಗಿ (?) ಕಾಣುತ್ತಿದ್ದಾರೆ. ಇಟ್ಟಿಗೆಗಳ ಹೊತ್ತು ಕರಸೇವೆಯಲ್ಲಿ ತೊಡಗಿದ್ದ ಪವಿತ್ರ ಕರಗಳು ಇಂದು ಕತ್ತಿ ಮಸೆಯುತ್ತಿವೆ. ಬಾಬ್ರಿ ಮಸೀದಿಯ ಧ್ವಂಸ ಕೇವಲ ಒಂದು ಕಟ್ಟಡ ಅಥವಾ ಸ್ಮಾರಕವನ್ನು ಕೆಡವಲಿಲ್ಲ. ಅದು ಶತಮಾನಗಳ ಸಂಸ್ಕøತಿಯನ್ನು ಒಂದೇ ಕ್ಷಣದಲ್ಲಿ ವಿಧ್ವಂಸಕ ಸಂಸ್ಕøತಿಗೆ ಒಳಪಡಿಸಿತ್ತು. 1992ರ ಡಿಸೆಂಬರ್ 6ರಂದು ಧ್ವಂಸಗೊಂಡ ಮಸೀದಿಯ ಗೋಡೆಗಳಲ್ಲಿ ನಾವು ಕಾಣಬೇಕಿರುವುದು ಇಂದು ನಮ್ಮ ಕಣ್ಣಿಗೆ ಗೋಚರಿಸದ ಭ್ರಾತೃತ್ವ, ಸಹನೆ, ಸಹಿಷ್ಣುತೆ ಮತ್ತು ಮಾನವೀಯತೆಯ ಗುಣಗಳನ್ನು.

ತಾವು ವರಿಸಲು ಬಯಸಿದ ಮಹಿಳೆಯನ್ನು ದಕ್ಕಿಸಿಕೊಳ್ಳಲು ಹಲವು ರುಂಡಗಳನ್ನು ಚೆಂಡಾಡಿದ ಮಹಾಭಾರತದ ಪಂಚಪಾಂಡವರನ್ನು ವೈಭವೀಕರಿಸುವ ನಮ್ಮ ಸಮಾಜ, ತನ್ನ ಪ್ರೀತಿಯ ಮಡದಿಯನ್ನು ಮರಳಿ ಪಡೆಯಲು ಲಂಕಾಪಟ್ಟಣವನ್ನೇ ದಹಿಸಿದ ಶ್ರೀರಾಮನನ್ನು ಆರಾಧಿಸುವ ನಮ್ಮ ಸಮಾಜ ಇಂದು ತಾನು ಪ್ರೀತಿಸಿದ ಯುವತಿಯನ್ನು ವಿವಾಹವಾದ ಯುವಕನ ಸಜೀವ ದಹನವನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದರೆ ಅದಕ್ಕೆ ಕಾರಣ ಬಾಬ್ರಿ ಮಸೀದಿಯ ಧ್ವಂಸ ಮತ್ತು ಅದರ ಹಿಂದಿನ ಕರಸೇವೆಯ ಪಾರಮ್ಯ. 1989ರ ಅಯೋಧ್ಯಾ ಕಾಂಡದ ನಂತರ ಭಾರತೀಯ ಸಮಾಜದಲ್ಲಿ ಸಾವನ್ನು ಸಂಭ್ರಮಿಸುವ ಪರಂಪರೆಯೇ ಸೃಷ್ಟಿಯಾಗಿರುವುದನ್ನು ಗಮನಿಸಬೇಕಿದೆ. ಹಾಗಾಗಿಯೇ ರಾಜಸ್ಥಾನದಲ್ಲಿ ಲವ್ ಜಿಹಾದ್ ಆರೋಪದ ಮೇಲೆ ಜೀವಂತವಾಗಿ ಸುಟ್ಟುಹೋದ ಮೊಹಮ್ಮದ್ ಅಫ್ರಾಜಲ್‍ನ ದಾರುಣ ಸಾವು ಐದು ಲಕ್ಷ ರೂಗಳ ಪರಿಹಾರದ ಚೆಕ್‍ನಲ್ಲೇ ಅಂತ್ಯ ಕಾಣುತ್ತದೆ. ದಾದ್ರಿಯ ಅಖ್ಲಾಕ್, ಊನ ಗ್ರಾಮದ ದಲಿತರು, ರಾಜಸ್ಥಾನದ ಪೆಹ್ಲೂ ಖಾನ್ ಮುಂತಾದವರ ಬದುಕೇ ಪ್ರಶ್ನಾರ್ಹವಾಗುತ್ತದೆ. ಈ ಕೃತ್ಯ ಎಸಗಿದ ಆರೋಪಿ ಶಂಭುಲಾಲ್ ರಾಜಘರ್ ಮತ್ತು ಧಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಲಾಗುವುದಿಲ್ಲ. ಇದು ಸ್ಥಾಪಿತ ವ್ಯವಸ್ಥೆಯ ಒಂದು ಸಾಂಸ್ಕøತಿಕ ಆಯಾಮವನ್ನು ಪ್ರದರ್ಶಿಸುತ್ತದೆ. ಅಂತಿಮ ಶಿಕ್ಷೆಗೊಳಗಾಗುವುದು ಓರ್ವ ವ್ಯಕ್ತಿಯೇ ಆದರೂ ಸ್ಥಾಪಿತ ಮೌಲ್ಯಗಳು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ.ಈ ಸಾಂಸ್ಕøತಿಕ ಆಯಾಮವನ್ನು ಕುಸಿದ ಬಾಬ್ರಿ ಮಸೀದಿಯ ಗೋಡೆಗಳಲ್ಲಿ ಕಾಣಬೇಕಿದೆ. ಪದ್ಮಾವತಿ ಚಿತ್ರದ ದೀಪಿಕಾ ಪಡುಕೋಣೆಯ ಕತ್ತು ಕಡಿದವರಿಗೆ ಹತ್ತು ಲಕ್ಷ ಬಹುಮಾನ ಘೋಷಿಸಿದ ಜನಪ್ರತಿನಿಧಿಯ ಪರಂಪರೆಯನ್ನೂ ಬಾಬ್ರಿ ಮಸೀದಿಯ ಪಳೆಯುಳಿಕೆಗಳಲ್ಲೇ ಕಾಣಬೇಕಾಗುತ್ತದೆ.
ಈ ಪಳೆಯುಳಿಕೆಗಳ ತುಣುಕುಗಳಲ್ಲೇ ಹುಣಸೂರಿನ ಹನುಮ ಜಯಂತಿಯನ್ನೂ ನೋಡಬೇಕಾಗುತ್ತದೆ. ಕರ್ನಾಟಕವನ್ನು ಗುಜರಾತ್ ಮಾಡುವವರು, ಬೆಂಗಳೂರನ್ನು ಸಿಂಗಪೂರ ಮಾಡುವವರು ಹಣಕಾಸು ಬಂಡವಾಳದ ಹರಿವಿನಲ್ಲೇ ತಮ್ಮ ನಾವೆಯನ್ನು ತೇಲಿಸಿಕೊಂಡು ಬಂದಿದ್ದು ಈಗ ಕರ್ನಾಟಕದಲ್ಲೊಂದು ಅಯೋಧ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಎಲ್ ಕೆ ಅಡ್ವಾಣಿ ನೇತೃತ್ವದ ಸೋಮನಾಥ ರಥಯಾತ್ರೆ ಸೃಷ್ಟಿಸಿದ ಅಯೋಧ್ಯೆಯ ಕೂಸುಗಳು ಅಧಿಕಾರ ರಾಜಕಾರಣವನ್ನು ಬಯಸಲಿಲ್ಲ ಬದಲಾಗಿ ಭಾರತೀಯ ಸಮಾಜವನ್ನು ಅಡ್ಡಡ್ಡಲಾಗಿ ಸೀಳುವ ಸಾಂಸ್ಕøತಿಕ ಅಧಿಪತ್ಯವನ್ನು ಬಯಸಿದ್ದವು. ರಾಮಮಂದಿರಕ್ಕೆ ಸಂಗ್ರಹಿಸಲಾದ ಇಟ್ಟಿಗೆಗಳು ಮೂಲತಃ ರಾಮಮಂದಿರ ನಿರ್ಮಾಣಕ್ಕಾಗಿಯೇ ಆಗಿದ್ದರೂ ತಾತ್ವಿಕವಾಗಿ ಇಟ್ಟಿಗೆಗಳ ಹಿಂದೆ ಹಿಂದೂ ಮತಧಾರ್ಮಿಕ ಸಂಪ್ರದಾಯ ಮತ್ತು ಪೂಜಾ ವಿಧಿವಿಧಾನಗಳನ್ನು ಹಂತಹಂತವಾಗಿ ಸಾರ್ವತ್ರೀಕರಣಗೊಳಿಸುವ ಹುನ್ನಾರ ಇದ್ದುದನ್ನು ಗಮನಿಸಬೇಕು.

ರಾಮಮಂದಿರ-ಬಾಬ್ರಿ ಮಸೀದಿ ಮತ್ತು ಮಥುರಾ ಕೃಷ್ಣ-ಶಾಹಿ ಈದ್ಗಾ ಮಸೀದಿ, ಕಾಶಿ ವಿಶ್ವನಾಥ ದೇವಾಲಯ-ಗ್ಯಾನ್‍ವಾಪಿ ಮಸೀದಿ ಈ ಮೂರೂ ಕೇಂದ್ರಗಳು ಸಂಘಪರಿವಾರದ ರಾಜಕೀಯ ಬಂಡವಾಳ ಕೇಂದ್ರಗಳಾಗಿ ಪರಿಣಮಿಸಿದ್ದು ಈಗ ಇತಿಹಾಸ. ಈ ಸ್ಥಾವರಗಳ ಮೂಲಕ ಅಧಿಕಾರ ರಾಜಕಾರಣದ ಅಧಿಪತ್ಯ ವಹಿಸುವ ಪಯಣದಲ್ಲಿ ಉರುಳಿದ ಶವಗಳ ಸಮಾಧಿಯ ಮೇಲೆ ಒಂದು ಸಾಮ್ರಾಜ್ಯವನ್ನೇ ಸೃಷ್ಟಿಸಿರುವುದನ್ನು ಇತ್ತೀಚಿನ ಹೊನ್ನಾವರ, ಕುಮಟಾದಲ್ಲೂ ಕಾಣಬಹುದು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ 1989 ರಿಂದ 1992ರವರೆಗೆ ಈ ಮೂರೂ ಸ್ಥಳಗಳಲ್ಲಿನ ಮುಸ್ಲಿಂ ಪ್ರಾರ್ಥನಾ ಮಂದಿರಗಳನ್ನು ಧ್ವಂಸಗೊಳಿಸಿ ಹಿಂದೂ ಗರಿಮೆಯನ್ನು ಎತ್ತಿಹಿಡಿಯುವ ಘೋಷಣೆ ಕೂಗುತ್ತಿದ್ದ ಸಂಘಪರಿವಾರ ನಂತರದಲ್ಲಿ ತೆಪ್ಪಗಾಗಿತ್ತು. ಕಾರಣ ಬಿಜೆಪಿ ಮತ್ತು ಸಂಘಪರಿವಾರದ ರಾಜಕೀಯ ಉನ್ನತಿಗೆ ಇದು ಅತ್ಯವಶ್ಯವಾಗಿರಲಿಲ್ಲ.

ಜನಸಾಮಾನ್ಯರ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆ ಒಂದು ರಾಜಕೀಯ ಸಾಮ್ರಾಜ್ಯ ವಿಸ್ತರಣೆಗೆ ಮೂಲ ಬಂಡವಾಳವಾಗಿ ಪರಿಣಮಿಸುವ ವಿಕೃತ ಪರಂಪರೆಯನ್ನು ಅಯೋಧ್ಯೆಯಿಂದ ಹುಣಸೂರಿನವರೆಗೆ ಕಾಣಬಹುದು. ಒಬ್ಬ ಅಮಾಯಕ ವ್ಯಕ್ತಿಯ ಸಾವು ಸಮಾಜದಲ್ಲಿ ಸಾಂತ್ವನದ ಅಲೆ ಸೃಷ್ಟಿಸುತ್ತಿದ್ದ ಕಾಲಘಟ್ಟದಿಂದ ಬಹುದೂರ ಸಾಗಿರುವ ಭಾರತೀಯ ಸಮಾಜ ಇಂದು ಒಂದು ಸಾವಿನ ಸುತ್ತ ರಾಜಕೀಯ ದ್ವೇಷದ ಹುತ್ತ ನಿರ್ಮಿಸುವ ನಿಟ್ಟಿನಲ್ಲಿ ಸಾಗುತ್ತಿರುವುದನ್ನು ಕುಮಟಾದ ಪರೇಶ್ ಮೇಸ್ತಾ ಪ್ರಕರಣದಲ್ಲಿ ಕಾಣಬಹುದು. ಈ ವಿಕೃತ ಮನೋಭಾವದ ಮೂಲ ಇರುವುದು ಅಯೋಧ್ಯೆಯ ಕರಸೇವೆಯಲ್ಲಿ, ಸೋಮನಾಥ ರಥಯಾತ್ರೆಯಲ್ಲಿ, ಬಾಬಾ ಬುಡನ್‍ಗಿರಿಯಲ್ಲಿ, ಹುಣಸೂರಿನ ಹನುಮ ಜಯಂತಿಯಲ್ಲಿ.

ತನ್ನ ಫ್ಯಾಸಿಸ್ಟ್ ಸಾಮ್ರಾಜ್ಯ ವಿಸ್ತರಣೆಗೆ ಸಂಘಪರಿವಾರ ಆಯ್ದುಕೊಂಡಿದ್ದು ಜನಸಾಮಾನ್ಯರು ನಿತ್ಯ ಪ್ರಾರ್ಥನೆ ಸಲ್ಲಿಸುವ ದೇವಾಲಯಗಳನ್ನಲ್ಲ. ಅಥವಾ ತಿರುಪತಿ, ಧರ್ಮಸ್ಥಳ, ಮಂತ್ರಾಲಯ ಮುಂತಾದ ಸಾರ್ವತ್ರಿಕ ಭಕ್ತಿ ಕೇಂದ್ರಗಳನ್ನಲ್ಲ ಎನ್ನುವುದು ಗಮನಾರ್ಹ ಅಂಶ. ಸಾಮರಸ್ಯ ಸಾರುವ , ಭ್ರಾತೃತ್ವ ಬೆಳೆಸುವ ಮತ್ತು ಮತಧರ್ಮಗಳ ಆಚರಣೆಗಳಿಂದ ಮುಕ್ತವಾಗಿದ್ದ ಅಯೋಧ್ಯೆ, ಬಾಬಾಬುಡನ್‍ಗಿರಿ ಸಂಘಪರಿವಾರದ ಪ್ರಾತ್ಯಕ್ಷಿಕೆಗೆ ಬಲಿಯಾಗಲು ಕಾರಣ ಎಂದರೆ ಇಲ್ಲಿ ಸೌಹಾರ್ದತೆಯನ್ನು ಭಂಗಗೊಳಿಸಿ ಸಮಷ್ಟಿಯನ್ನು ಒಡೆಯುವ ಸಾಧ್ಯತೆಗಳು ಹೆಚ್ಚಾಗಿತ್ತು. ಸ್ಥಾವರಗಳನ್ನು ಕೆಡವುವ ಮೂಲಕ ಜಂಗಮ ಸ್ವರೂಪಿ ಮಾನವ ಸೌಹಾರ್ದತೆಯನ್ನು ಪ್ರಕ್ಷುಬ್ಧಗೊಳಿಸುವ ವಿಕೃತ ತಂತ್ರಗಾರಿಕೆಯನ್ನು ಸಂಘಪರಿವಾರ ಅನುಸರಿಸಿದೆ ಇಂದಿಗೂ ಅನುಸರಿಸುತ್ತಿದೆ. ಈ ಸಾಂಸ್ಥಿಕ ಕುತಂತ್ರಗಳ ಸಾಫಲ್ಯವನ್ನು ಕಾಪಾಡಿಕೊಳ್ಳಲು ಹಿಂದೂ ಮತಧಾರ್ಮಿಕ ಆಚರಣೆಗಳನ್ನೂ ಬೀದಿಗೆ ತರುವುದರಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ. ಇದರ ಪರಿಣಾಮವನ್ನು ಹುಣಸೂರಿನ ಹನುಮ ಜಯಂತ್ಯೋತ್ಸವದಲ್ಲಿ ಕಾಣುತ್ತಿದ್ದೇವೆ.

ಅಯೋಧ್ಯೆಯ ನಂತರದಲ್ಲಿ ಸಾರ್ವಜನಿಕ ಜೀವನದಲ್ಲಿ ನುಸುಳಿರುವ ಹಿಂದೂ ಧಾರ್ಮಿಕ ಆಚರಣೆ ಮತ್ತು ಪೂಜೆಗಳು ಅಸಂಖ್ಯ. ಸಂಸ್ಕøತಿ ಮತ್ತು ಮತಧಾರ್ಮಿಕ ಆಚರಣೆ ಪೂಜೆಗಳನ್ನು ಸಮೀಕರಿಸುವ ಮೂಲಕ ಯುವ ಪೀಳಿಗೆಯಲ್ಲಿ ಹೋಮ, ಹವನ, ವ್ರತ, ಪೂಜೆ ಮುಂತಾದ ಆದರಣೆಗಳನ್ನೇ ಸಂಸ್ಕøತಿಯ ಒಂದು ಅಂಶಿಕ ಭಾಗವನ್ನಾಗಿ ಮಾಡುವಲ್ಲಿ ಸಂಘಪರಿವಾರ ಯಶಸ್ಸು ಸಾಧಿಸಿದೆ. ಗಣ ಹೋಮ, ಸಂಕಷ್ಟಿ, ಸತ್ಯನಾರಾಯಣ ಪೂಜೆ, ಮಹಾರುದ್ರ ಯಾಗ ಮುಂತಾದ ಆಚರಣೆಗಳು ಮಧ್ಯಮ ವರ್ಗದ ಜನರ ನಿತ್ಯಕರ್ಮಗಳಂತಾಗಿವೆ. ಕೇವಲ ಎರಡು ದಶಕಗಳ ಹಿಂದೆ ನಾಲ್ಕು ಗೋಡೆಗಳಲ್ಲಿ ಕಾಣಲಾಗುತ್ತಿದ್ದ ವರಮಹಾಲಕ್ಷ್ಮಿ ವ್ರತ ಇಂದು ಗಲ್ಲಿ ಗಲ್ಲಿಗಳಲ್ಲಿ ರಾರಾಜಿಸುತ್ತಿದ್ದು ಬಹುಶಃ ಕೆಲವೇ ವರ್ಷಗಳಲ್ಲಿ ಸಾರ್ವತ್ರಿಕ ಆಕರ್ಷಣೆ ಪಡೆಯುತ್ತದೆ. ಕಾರ್ತಿಕ ಸೋಮವಾರ, ಶ್ರಾವಣ ಶನಿವಾರ, ಶನಿದೇವರ ಪೂಜೆ ಮುಂತಾದ ಆಚರಣೆಗಳು ಸಾರ್ವಜನಿಕ ಸ್ವರೂಪ ಪಡೆಯುತ್ತಿದ್ದು ಸಾಮೂಹಿಕ ಅನ್ನ ದಾಸೋಹ, ಅನ್ನಸಂತರ್ಪಣೆ ಮತ್ತು ಅನ್ನ ದಾನ ಸಾಮಾನ್ಯ ಸಂಗತಿಯಾಗಿದೆ.
ಮತಧರ್ಮಗಳ ಆಚರಣೆಗಳನ್ನು ಸಾರ್ವತ್ರೀಕರಣಗೊಳಿಸುವ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಸಾರ್ವಜನಿಕ ಸಮೂಹ ಸನ್ನಿಗೊಳಪಡಿಸುವ ಪ್ರಕ್ರಿಯೆಗಳು ಜನಸಾಮಾನ್ಯರಲ್ಲಿ ಭಕ್ತಿಗಿಂತಲೂ ಹೆಚ್ಚಾಗಿ ಅತಂಕ ಮತ್ತು ಭೀತಿಯನ್ನುಂಟುಮಾಡುತ್ತಿವೆ. ಜನಸಾಮಾನ್ಯರ ಆತಂಕಗಳು ಮತಾಂಧರ ಬಂಡವಾಳವಾಗುತ್ತಿದೆ.

ಈ ಆಚರಣೆಗಳಲ್ಲಿ ಸಕ್ರಿಯವಾಗುವುದರಿಂದಲೇ ತಮ್ಮ ಕಷ್ಟ ವ್ಯಸನಗಳು ಮರೆಯಾಗುತ್ತವೆ ಎಂಬ ಭ್ರಮೆ ಇಡೀ ಸಮಾಜವನ್ನು ಆವರಿಸಿದೆ. ಹನುಮ ಜಯಂತಿಯೂ ಸಹ ಇಂತಹ ವಿದ್ಯಮಾನಗಳಲ್ಲಿ ಒಂದಾಗಿದೆ. ಅಯೋಧ್ಯೆ ಕರಸೇವೆ, ಬಾಬಾಬುಡನ್‍ಗಿರಿಯ ದತ್ತಮಾಲೆ ಅಭಿಯಾನ ಮತ್ತು ಹನುಮ ಜಯಂತ್ಯೋತ್ಸವಗಳು ಸಮಸ್ತ ನಾಗರಿಕರನ್ನು ಕೋಮುವಾದಿಗಳನ್ನಾಗಿಯೋ ಅಥವಾ ಮತಾಂಧರನ್ನಾಗಿಯೋ ಮಾಡುವುದಿಲ್ಲ ನಿಜ, ಆದರೆ ಜನಸಂಸ್ಕøತಿಯನ್ನು ಅಡ್ಡಡ್ಡಲಾಗಿ ಸೀಳಿ ಒಂದು ನಿರ್ದಿಷ್ಟ ಮತಧಾರ್ಮಿಕ ಸಂಸ್ಕøತಿಯನ್ನು ಹೇರುವುದರದಲ್ಲಿ ಯಶಸ್ವಿಯಾಗುತ್ತವೆ. ಹುಣಸೂರಿನ ಬೆಳವಣಿಗೆಗಳ ಬೇರುಗಳನ್ನು ಅಯೋಧ್ಯೆಯಲ್ಲಿ, ಕೊಂಬೆಗಳನ್ನು ಬಾಬಾ ಬುಡನ್‍ಗಿರಿಯಲ್ಲಿ ಕಂಡಾಗ ಮಾತ್ರ ವಾಸ್ತವ ಸನ್ನಿವೇಶವನ್ನು ಗ್ರಹಿಸಲು ಸಾಧ್ಯ.

ಜನಸಾಮಾನ್ಯರ ಅಸಹಾಯಕತೆ, ನಿತ್ಯ ಜೀವನದ ಅನಿವಾರ್ಯಗಳು ಮತ್ತು ಕಠಿಣ ಜೀವನದ ಆತಂಕಗಳು ಮತಾಂಧರ ಅಧಿಪತ್ಯ ರಾಜಕಾರಣದ ಬಂಡವಾಳವಾಗಿರುವ ಸಂದರ್ಭದಲ್ಲಿ ಕುಮಟ, ಹೊನ್ನಾವರ, ಹುಣಸೂರು ಸಹಜ ಪ್ರಕ್ರಿಯೆಯಾಗಿಯೇ ಕಾಣುತ್ತದೆ.

Leave a Reply

Your email address will not be published.