ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಸನ್ಮಾನ್ಯ ಯಡಿಯೂರಪ್ಪನವರು(ಅದ್ಯಕ್ಷರು ಬಾಜಪ), ಶ್ರೀ ಕುಮಾರಸ್ವಾಮಿಯವರು(ಅದ್ಯಕ್ಷರು-ಜನತಾದಳ), ಶ್ರೀ ಪರಮೇಶ್ವರ್(ಅದ್ಯಕ್ಷರು ಕಾಂಗ್ರೇಸ್) ಇವರುಗಳಿಗೆ,

ನಮಸ್ಕಾರ,

ಬರಲಿರುವ ವಿದಾನಸಭಾ ಚುನಾವಣೆಗಳಿಗೆ ವಿವಿಧ ಹೆಸರುಗಳಲ್ಲಿ ಯಾತ್ರೆಗಳನ್ನು ಹಮ್ಮಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿರುವ  ತಮಗೆ ಹೀಗೊಂದು  ಸಾರ್ವಜನಿಕಪತ್ರ ಬರೆದು ತೊಂದರೆ ನೀಡುತ್ತಿರುವುದಕ್ಕೆ ಕ್ಷಮಿಸಿ. ಆದರೆ ಈ ಪತ್ರದ ಮೂಲವಿಚಾರವೇ ಬರಲಿರುವ ವಿದಾನಸಭಾ ಚುನಾವಣೆಗಳ ಮತ್ತು ತಮ್ಮ ಪಕ್ಷಗಳ ಪ್ರಚಾರಕಾರ್ಯದ ಸುತ್ತವೇ ಇರುವುದರಿಂದ ತಾವೇನು ಅನ್ಯಥಾ ಬಾವಿಸಲಾರಿರಿ ಎಂದು ನಂಬಿರುವೆ.

ಇರಲಿ, ವಿಷಯಕ್ಕೆ ಬರುತ್ತೇನೆ:

ಯಾವುದೇ ಚುನಾವಣೆಗಳನ್ನು ಗೆಲ್ಲಲು ಪಕ್ಷಗಳು ನಡೆಸುವ ಚುನಾವಣಾ ಪೂರ್ವ ಪ್ರಚಾರ ಬಹುಮುಖ್ಯವೆಂದು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ತಮ್ಮಗಳಿಗೆ ಗೊತ್ತಿರದ ವಿಷಯವೇನಲ್ಲ! ಆದರೆ ಕೆಲವು ವರ್ಷಗಳಿಂದ ಪ್ರಚಾರ ಕಾರ್ಯಗಳು ಹೇಗೆ ನಡೆಯುತ್ತಿವೆಯೆಂಬುದನ್ನು ನಾವು-ನೀವೆಲ್ಲ ನೋಡುತ್ತಿದ್ದೇವೆ. ಸಾಮಾನ್ಯಜನತೆಯ ದೃಷ್ಠಿಯಲ್ಲಿ ಚುನಾವಣಾ ಪ್ರಚಾರವೆಂದರೆ, ರ್ಯಾಲಿಗಳನ್ನು ನಡೆಸುವುದು, ರೋಡ್ ಶೋಗಳನ್ನು ಮಾಡುವುದು, ಬಾಷಣ ಬಿಗಿಯುವುದು ಹಾಗು  ಚುನಾವಣೆಯ ಹಿಂದಿನ ಎರಡು ದಿನಗಳಲ್ಲಿ  ಮತದಾರರಿಗೆ  ಅನೇಕ ರೀತಿಯ ಆಮೀಷಗಳನ್ನು (ಅವು ಏನು ಬೇಕಾದರು ಆಗಿರಬಹುದು, ಹಣ-ಹೆಂಡ-ಚಿನ್ನ ಇತರೆ ವಸ್ತುಗಳಿಂದ ಹಿಡಿದು ವಿವಿಧರೀತಿಯ ಸೇವೆಗಳನ್ನು ಒಳಗೊಂಡಂತೆ) ಒಡ್ಡಿ ಅವರನ್ನು ಒಲಿಸಿಕೊಳ್ಳುವ ಕ್ರಿಯೆ ಎಂಬಂತಾಗಿದೆ. ಇದೇನು ನನ್ನ ಆರೋಪವಲ್ಲ, ಬದಲಿಗೆ  ನಮ್ಮ ಸಮಾಜವೇ ಕಂಡುಕೊಂಡ ಸತ್ಯ. ಇದನ್ನು ತಾವು ಅಲ್ಲಗೆಳೆಯಲಾರಿರಿ ಎಂದುಕೊಂಡಿದ್ದೇನೆ

ಪ್ರಣಾಳಿಕೆಗಳು ಮತ್ತು ಭರವಸೆಗಳು!

ಇದೀಗ ನನ್ನ ಮುಂದೆ ಕಳೆದ ಮೂರು ವಿದಾನಸಭೆಗಳ ಚುನಾವಣೆಗಳ ಸಮಯದಲ್ಲಿ ತಮ್ಮ ಪಕ್ಷಗಳು ಬಿಡುಗಡೆಗೊಳಿಸಿದ  ಪ್ರಣಾಳಿಕೆಗಳಿವೆ. ಅವುಗಳಲ್ಲಿ ಅಂತಹ  ಬಾರೀ ವ್ಯತ್ಯಾಸಗಳೇನು ನನಗೆ ಕಾಣುತ್ತಿಲ್ಲ. ಇನ್ನು  ಈ ಬಾರಿ ನೀವು ಬಿಡುಗಡೆ ಮಾಡಲಿರುವ ಪ್ರಣಾಳಿಕೆಗಳು ಸಹ ಹಿಂದಿನವಕ್ಕಿಂತ ಹೆಚ್ಚೇನೂ ಬಿನ್ನವಾಗಿರುತ್ತವೆಯೆಂದು ನಂಬಲು ಯಾವ ಕಾರಣಗಳೂ ನನಗಿಲ್ಲ.ನಿಮ್ಮ ಅಷ್ಟೂ ಪ್ರಣಾಳಿಕೆಗಳಲ್ಲಿ ಜನರನ್ನು ಮರುಳು ಮಾಡುವ, ಇನ್ನೂ ಕಟುವಾಗಿ ಹೇಳಬೇಕೆಂದರೆ ಜನತೆಯನ್ನು ವಂಚಿಸುವ ಜನಪ್ರಿಯ ಕಾರ್ಯಕ್ರಮಗಳ ಹೊರತಾಗಿ ಯಾವುದೇ  ಶಾಶ್ವತ ಯೋಜನೆಗಳನ್ನು ಗಂಭೀರವಾಗಿ ಪ್ರಸ್ತಾಪಿಸಿಲ್ಲ. ಕಳೆದ ಒಂದೂವರೆ ದಶಕಗಳಲ್ಲಿ ನೀವು ಮೂರೂ ಪಕ್ಷಗಳೂ ಅಧಿಕಾರ ನಡೆಸಿದ್ದರಿಂದ ಈ ಮಾತು ಹೇಳಬೇಕಾಗಿದೆ. ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸುಲಭವಾಗಿ ದೊರೆಯುವ ಪ್ರಚಾರದತ್ತಲೇ ತಾವೆಲ್ಲ ಗಮನ ಕೇಂದ್ರೀಕರಿಸಿ ಈ ರಾಜ್ಯಕ್ಕೆ  ಅಗತ್ಯವಾದಂತಹ ದೀರ್ಘಕಾಲೀನ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫಲರಾಗಿದ್ದೀರಿ. ಬೇಕಿದ್ದರೆ ನೋಡಿ: ರಾಜ್ಯಕ್ಕಿರುವ ವಿದ್ಯುತ್ತಿನ ಅವಶ್ಯಕತೆಗೆ ಅನುಗುಣವಾಗಿ ಒಂದೇ ಒಂದು ಹೊಸ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಪ್ರಾರಂಭಿಸದ ತಾವುಗಳು ಸ್ಪರ್ದೆಗೆ ಬಿದ್ದಂತೆ ವಿದ್ಯುತ್ ಖರೀಧಿಗೆ ಮುಂದಾಗಿದ್ದುಂಟು. ಒಂದೇ ಒಂದು ಹೊಸ  ಸರಕಾರಿ ಶಾಲೆಯನ್ನು ತೆರೆಯಲು ಸಾದ್ಯವಾಗದೇ ಹೋದರು ಇರುವ ಶಾಲೆಗಳನ್ನು ಮುಚ್ಚಲು ಜನರಿಗೆ ನೀಡಬಹುದಾದ ಸಮಜಾಯಿಷಿಗಳ ಹುಡುಕಾಟದಲ್ಲೆ ಕಾಲ ಕಳೆದಿರಿ.

ಹೊಸ ಹೆದ್ದಾರಿಗಳನ್ನು ಮಾಡುವುದಿರಲಿ ಇರುವ ಹೆದ್ದಾರಿಗಳನ್ನೇ ನಿರ್ವಹಣೆ ಮಾಡಲೂ  ವಿಫಲರಾದಿರಿ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುವ ಬಗ್ಗೆ ಮತ್ತದರ ಮಾರುಕಟ್ಟೆ ವಿಸ್ತರಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಾಲಮನ್ನಾದ ಸುತ್ತಲೇ ಗಿರಕಿ ಹೊಡೆಯುತ್ತ  ಹೊರಗಿನಿಂದ ನೋಡುವವರ ದೃಷ್ಠಿಯಲ್ಲಿ ರೈತರನ್ನು ಬಿಕ್ಷುಕರಾಗಿ ಚಿತ್ರಿಸಿದಿರಿ. ಇಷ್ಟಲ್ಲದೆ ಸಾಲಮನ್ನಾದ ವಿಚಾರದಲ್ಲಿ  ರಾಜ್ಯ ಸರಕಾರ ಕೇಂದ್ರವನ್ನು, ಕೇಂದ್ರ ಸರಕಾರ ರಾಜ್ಯವನ್ನೂ ಬೊಟ್ಟುಮಾಡಿ ತೋರಿಸುತ್ತ, ದೂರುತ್ತಲೇ ಕಳೆದ ಒಂದೂವರೆ ದಶಕಗಳಿಂದಲೂ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಲೇ ಬಂದಿರಿ. ರೈತರ ಆತ್ಮಹತ್ಯೆಗಳನ್ನುತಡೆಯುವ ಯಾವ  ಕಾರ್ಯಕ್ರಮಗಳನ್ನೂ ಹಾಕಿಕೊಳ್ಳದೆ  ಸತ್ತಮೇಲೆ ಪರಿಹಾರದ ಚೆಕ್ ವಿತರಿಸುವಾಗಲೂ ಅವನ ಕುಟುಂಬಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಪೈಪೋಟಿಗೆಇಳಿದಿರಿ.ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ  ಜನರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಬೇಕಿದ್ದ ನಿಮ್ಮ ಸರಕಾರಗಳು  ಈಗಾಗಲೇ ಇರುವ ಆಸ್ಪತ್ರೆಗಳನ್ನು ಇನ್ನಷ್ಟು ಭ್ರಷ್ಟಾಚಾರಗಳಿಗೆ ನೂಕಿದಿರಿ.ನೀವು ಮೂರೂ ಪಕ್ಷಗಳೂ  ಪೈಪೋಟಿಗೆ ಬಿದ್ದಂತೆ ಜನವಿರೋಧಿಯಾಗೇ ಕಾರ್ಯನಿರ್ವಹಿಸುತ್ತಾ ಬಂದಿದ್ದೀರಿ.

ಕಳೆದ ಒಂದೂವರೆ ದಶಕಗಳಿಂದಲೂ ಲಕ್ಷಲಕ್ಷಗಟ್ಟಲೆ ರೂಪಾಯಿಗಳ ಬಜೆಟ್ ಮಂಡಿಸಿದ್ದೇವೆಂದು ಜಂಬ ಕೊಚ್ಚಿಕೊಂಡು ಬಂದ ನೀವು ಆ ಲಕ್ಷಗಟ್ಟಲೆ ಹಣದಲ್ಲಿ ನಿಜಕ್ಕೂ ಯೋಜನೆಗಳಿಗೆ ಒದಗಿದ್ದೆಷ್ಟು, ಖರ್ಚಾಗಿದ್ದೆಷ್ಟು ಎಂಬ ಬಗ್ಗೆ ಸ್ಪಷ್ಟವಾಗಿ, ನಿಖರವಾದ ಅಂಕಿಅಂಶಗಳನ್ನು ಜನರ ಮುಂದಿಡದೆ ಮುಚ್ಚುಮರೆ ಮಾಡುತ್ತಲೇ ಬಂದಿರಿ. ಪರಸ್ಪರ ಆರೋಪಗಳನ್ನು ಮಾಡುತ್ತಲೇ ಯಾಂತ್ರಿಕವಾಗಿ ಕಾಲ ಕಳೆಯುತ್ತಲೇ ಇದ್ದೀರಿ.ಲಕ್ಷ ಇರಲಿ ವರ್ಷಕ್ಕೆ ಹತ್ತು ಸಾವಿರ ಖಾಯಂಉದ್ಯೋಗಗಳನ್ನು ಸೃಷ್ಠಿಸಲೂ ವಿಫಲವಾಗಿರುವ ನಿಮ್ಮ ಮುಂದೆ ಉದ್ಯೋಗಸೃಷ್ಠಿಯ  ಮಾರ್ಗೋಪಾಯಗಳೇನಾದರು ಇದ್ದಲ್ಲಿ ಪ್ರಣಾಳಿಕೆಗಳ ಮೂಲಕ ಜನರ ಮುಂದಿಟ್ಟು ಜನರಮತ ಪಡೆಯಲು ಪ್ರಯತ್ನಿಸಿ.

ಇನ್ನು ನಿಮ್ಮ ಪ್ರಣಾಳಿಕೆಗಳ ವಿಷಯಕ್ಕೆ ಬಂದರೆ  ಜನಪ್ರಿಯ ಕಾರ್ಯಕ್ರಮಗಳ ಹೊರತಾಗಿ  ಪ್ರಾಥಮಿಕ ಶಿಕ್ಷಣ, ಆರೋಗ್ಯ, ಕೃಷಿ, ವಿದ್ಯುತ್ ಉತ್ಪಾದನೆಗಳ ಬಗ್ಗೆ  ನಿಮ್ಮಲ್ಲಿ ಏನಾದರೂ ದೀರ್ಘಕಾಲೀನ ಯೋಜನೆಗಳಿದ್ದರೆ ಅವನ್ನು ಜನರ ಮುಂದಿಡಲು ಸಾದ್ಯವೆ?ಅಂತಹದೊಂದು ಪ್ರಣಾಳಿಕೆಯನ್ನು ಸಿದ್ದ ಪಡಿಸಲು ಸಾದ್ಯವೇ ಮತ್ತು ಅದನ್ನು ಅನುಷ್ಠಾನಗೊಳಿಸಲು ಬೇಕಾದ ಹಣಕಾಸಿನ ಮೂಲದ ಬಗ್ಗೆಯೂ ಮೊದಲೇ ಜನತೆಗೆ ತಿಳಿಸಲು ಸಾದ್ಯವೆ? ಎಲ್ಲಕ್ಕೂ ಮುಖ್ಯವಾಗಿ ಈ ನಾಡಿನ ರೈತರ ಹಿತಕಾಯಬಲ್ಲಂತಹ ನೀರಾವರಿ ಯೋಜನೆಗಳ ಬಗ್ಗೆ  ತಾವುಗಳು ಏನು ಮಾಡಬಲ್ಲಿರಿ ಎಂಬುದನ್ನು ಜನತೆಗೆ ತಿಳಿಯಪಡಿಸಲು ನಿಮ್ಮಿಂದಾಗುತ್ತದೆಯೆ?

  ಕೀಳು ಮಟ್ಟದ ಪ್ರಚಾರ

ಆದರೆ ಅದಕ್ಕಿಂತ ಬಹು ಮುಖ್ಯವಾದ ವಿಚಾರವೆಂದರೆ ಕಳೆದ ಆರು ತಿಂಗಳುಗಳಿಂದ ನೀವುಗಳು ಅಂದರೆ ನಿಮ್ಮ ಪಕ್ಷಗಳ ನಾಯಕರುಗಳು ನಡೆದುಕೊಳ್ಳುತ್ತಿರುವರೀತಿಯನ್ನು, ಅವರುಗಳು ಬಳಸುತ್ತಿರುವ ಬಾಷೆಯನ್ನು ಒಮ್ಮೆ ಗಮನಿಸಿ ನೋಡಿ. ಅದನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ ನಿಮಗಿದ್ದುದೇ ಆಗಿದ್ದರೆ   ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಎಲ್ಲಾ ನಾಯಕರುಗಳೂ  ಸಭ್ಯತೆಯ ಎಲ್ಲೆಯನ್ನು  ಮೀರುತ್ತಿರುವುದನ್ನು ನೀವು ನೋಡಬಲ್ಲಿರಿ.ಒಬ್ಬನೇ ಒಬ್ಬ ನಾಯಕನೂ ಈ ರಾಜ್ಯದ ನೈಜ ಅಭಿವೃದ್ದಿಗೆ ಅಗತ್ಯವಿರುವಂತಹ ವಿಷಯವನ್ನೂಪ್ರಸ್ತಾಪಿಸುತ್ತಿಲ್ಲ. ಬದಲಿಗೆ ಹುಚ್ಚ, ಹುಚ್ಚಾಸ್ಪತ್ರೆ,  ಗಂಡಸ್ತನ, ಬೂಟು ನೆಕ್ಕುವುದು ಸೇರಿದಂತೆ ತಾವು ಉಪಯೋಗಿಸುತ್ತಿರುವ ಬಾಷೆಯಾದರು ಎಂತಹುದು ಎಂಬುದರ ಬಗೆಗಿನ ವಿವೇಚನೆಯನ್ನೇ ಕಳೆದುಕೊಂಡಂತೆ ಮಾತಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಎದುರಾಳಿಯೊಬ್ಬನಿಗೆ ನೀಡಬೇಕಾದ ಕನಿಷ್ಠ ಗೌರವವನ್ನೂ ಕೊಡದೆ   ಬಳಸುತ್ತಿರುವ ಈ ಬಾಷೆಯನ್ನು ತಾವು ಒಪ್ಪುತ್ತೀರಾ? ಮತ್ತು ಅದು ಸರಿಯೆಂದು ನೀವು ಬಾವಿಸುವುದಾದರೆ ನನ್ನದೇನು ಅಭ್ಯಂತರವಿಲ್ಲ. ಆದರೆ ನಮ್ಮ ನಾಯಕರಾಗಬೇಕಿರುವವರಿಗೆ ಕನಿಷ್ಠ ಸೌಜನ್ಯ ಇರಬೇಕೆಂದು ಬಯಸುವುದು ಈ ರಾಜ್ಯದ ಜನತೆಯ ತಪ್ಪೇ? ಹೇಳಿ, ನಿಮ್ಮ ನಾಯಕರುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಾ? ಯಾವೊಬ್ಬ ನಾಯಕನೂ ಎದುರಾಳಿ ಪಕ್ಷದ ನಾಯಕನೊಬ್ಬನ ಮೇಲೆ ವೈಯುಕ್ತಿಕಟೀಕೆ ಮಾಡುವಾಗ ಅಸಭ್ಯ ಬಾಷೆ ಬಳಸಬಾರದೆಂದು ಅಧಿಕೃತವಾಗಿ ಸಾರ್ವಜನಿಕ ಆದೇಶ ಹೊರಡಿಸಲು ನಿಮ್ಮಿಂದ ಸಾದ್ಯವೇ? ಅದನ್ನೂ ಮೀರಿ ಅಂತಹಬಾಷೆಯನ್ನು ಬಳಸುವ ನಾಯಕರುಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ-ಪಕ್ಷದಿಂದ ಹೊರಹಾಕುವ ಭರವಸೆಯನ್ನು ಮತದಾರರಿಗೆ ನೀಡಲು ನಿಮಗೆ ಧೈರ್ಯವಿದೆಯೇ?

ಜಾತಿ ಧರ್ಮಗಳ ದುರುಪಯೋಗ!

ಇದಕ್ಕಿಂತ ಅಪಾಯಕಾರಿಯಾದುದು ಮುಂದಿನ ಚುನಾವಣೆಗಳಲ್ಲಿ ಲಾಭ ಮಾಡಿಕೊಳ್ಳಲು ಜಾತಿ-ಧರ್ಮವನ್ನು ದಾಳವಾಗಿ ಬಳಸಿಕೊಳ್ಳುವ  ಅಡ್ಡಹಾದಿಯನ್ನೂ ನಿಮ್ಮ ಪಕ್ಷಗಳು ಹಿಡಿಯುತ್ತಿವೆ. ಜಾತಿಗಳನ್ನುವಿಭಜಿಸಿ ನಿಮ್ಮ ಮತಬ್ಯಾಂಕುಗಳನ್ನಾಗಿ ಮಾಡಿಕೊಳ್ಳಲು ಹುನ್ನಾರ ನಡೆಸುತ್ತಿದ್ದೀರಿ. ಇದನ್ನು ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೋ ಮೂರೂ ಪಕ್ಷಗಳು ಮಾಡುತ್ತಲೇ ಬಂದಿದ್ದೀರಿ. ಚುನಾವಣೆಯ ಸಮಯದಲ್ಲಿ ಧರ್ಮದ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸದೆ ಕೋಮು ಸೌಹಾರ್ದ ಕಾಪಾಡಲು ನಾವು ಬದ್ದರೆಂದು ಸಾರ್ವಜನಿಕವಾಗಿ  ಹೇಳುವಿರಾ?  ಕರ್ನಾಟಕದ ಅಭಿವೃದ್ದಿಗೆ ಅಪ್ರಸ್ತುತವಾಗಿರುವ  ಧರ್ಮಾಧಾರಿತ ವಿಷಯಗಳನ್ನು ನಮ್ಮ ಚುನಾವಣಾ ಪ್ರಚಾರದಲ್ಲಿ  ಬಳಸುವುದಿಲ್ಲವೆಂದು ಘಂಟಾಘೋಷವಾಗಿ ಸಾರಿ ಹೇಳಲು, ಹೇಳಿದಂತೆ ನಡೆದುಕೊಳ್ಳಲು ನಿಮಗೆ ಸಾದ್ಯವಿದೆಯೇ?

ಒಂದು ರಾಜಕೀಯ ಪಕ್ಷದ ಅದ್ಯಕ್ಷರಾಗಿ ನಾನು ಮೇಲೆ ಹೇಳಿದ ಬಹುತೇಕ ವಿಚಾರಗಳಲ್ಲಿಯೂ ಸ್ಪಷ್ಟವಾದ ನಿರ್ದಾರವನ್ನು ತೆಗೆದುಕೊಳ್ಳುವ ಅಧಿಕಾರ ನಿಮಗಿದೆಯೆಂದು ನಾನು ಬಲ್ಲೆ. ಆದರೆ ಅಂತಹ ನಿರ್ದಾರವನ್ನು ತೆಗೆದುಕೊಳ್ಳಬಲ್ಲ ತಮ್ಮ  ಮನಸ್ಥಿತಿಯ ಬಗ್ಗೆ ನನಗೇನೂ ಗೊತ್ತಿಲ್ಲ.   ಈ ನೆಲದ ಒಬ್ಬ ಮತದಾರನಾಗಿ ನನ್ನ ಅನಿಸಿಕೆಗಳನ್ನು ತಮ್ಮ ಮುಂದಿಟ್ಟಿದ್ದೇನೆ. ಇವುಗಳನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದು ನಿಮಗೆ ಬಿಟ್ಟ ವಿಷಯ      ನಾನೇನಾದರು  ತಪ್ಪು ಹೇಳಿದ್ದರೆ ಮನ್ನಿಸಿ,

ಒಬ್ಬ ಸಾಮಾನ್ಯ ಮತದಾರ.

 

 

 

Leave a Reply

Your email address will not be published.