ರಸ್ತೆ ಸೊಟ್ಟಗಿದ್ದರೆ ಬಿಡಿ ಆಡಳಿತ ವ್ಯವಸ್ಥೆ ನೆಟ್ಟಗಿರಲಿ

ನಾ ದಿವಾಕರ

ನಮ್ಮ ಆಡಳಿತ ವ್ಯವಸ್ಥೆಯ ಕೆಲವು ಗ್ರಹಿಕೆಗಳು ವಿಚಿತ್ರ ಎನಿಸುತ್ತದೆ. ಸಹಿ ಮಾಡಲು ಕಲಿತರೆ ಜನ ಸಾಕ್ಷರರು ಎನಿಸಿಕೊಳ್ಳುತ್ತಾರೆ, ಬಡವರಿಗೆ ಉಚಿತ ಭಾಗ್ಯಗಳನ್ನು ನೀಡುವುದು ಸಮಾಜವಾದ ಎನಿಸಿಕೊಳ್ಳುತ್ತದೆ, ಶೌಚಾಲಯ ನಿರ್ಮಿಸಿದರೆ ಸ್ವಚ್ಚತೆಯ ಗರಿ ಮೂಡುತ್ತದೆ, ಗ್ರಾಮಗಳಲ್ಲಿ ಡೆಬಿಟ್ ಕಾರ್ಡ್ ವಿತರಿಸಿದರೆ ಅದು ಡಿಜಿಟಲ್-ನಗದುರಹಿತ ಗ್ರಾಮ ಎನಿಸಿಕೊಳ್ಳುತ್ತದೆ. ಈ ಸಾಂಕೇತಿಕ ಸಾಧನೆಗಳ ನೆಲೆಯಲ್ಲೇ ಅಭಿವೃದ್ಧಿ ಪಥದಲ್ಲಿ ನಾಗಾಲೋಟದಲ್ಲಿ ಮುನ್ನಡೆಯುತ್ತಿರುವ ದೇಶದಲ್ಲಿ ಅಭಿವೃದ್ಧಿಗೂ ಸಾಮಾಜಿಕ ನ್ಯಾಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಪರಿಸರ ರಕ್ಷಣೆಗೂ ಪ್ರಗತಿಯ ಪಥಕ್ಕೂ ನಡುವೆ ಬೃಹತ್ ಕಂದರ ಇರುತ್ತದೆ. ಇದರ ನೇರ ಪರಿಣಾಮವನ್ನು ವಿಷಪೂರಿತ ಗಾಳಿ ಸೇವಿಸುತ್ತಿರುವ ದೆಹಲಿ ನಿವಾಸಿಗಳು ಇಂದು ಎದುರಿಸುತ್ತಿದ್ದಾರೆ. ದೇಶದ ರಾಜಧಾನಿ ವಾಯುಮಾಲಿನ್ಯದಿಂದ ಜರ್ಜರಿತವಾಗಿದ್ದು ಜನರು ಬದುಕುವುದೇ ದುಸ್ತರವಾಗುತ್ತಿದೆ. ಅಭಿವೃದ್ಧಿ-ಪ್ರಗತಿ ಮತ್ತು ಸಾಮಾಜಿಕ ಹೊರೆ ಪರಸ್ಪರ ಪೂರಕವಾಗಿರಬೇಕು ಎಂಬ ಪರಿಜ್ಞಾನವೇ ಇಲ್ಲದ ಪ್ರಭೃತಿಗಳು ಈ ದೇಶವನ್ನು ಆಳುತ್ತಿರುವುದರ ನೇರ ಪರಿಣಾಮ ಇದು.

ನಗರೀಕರಣ ಎಂದರೆ ಗ್ರಾಮೀಣ ಸಂಸ್ಕøತಿಯ ಮೇಲೆ ನಿರ್ಮಿಸುವ ಒಂದು ಐಷಾರಾಮಿ ಸಮಾಧಿ ಎಂದು ನಿಸ್ಸಂಶಯವಾಗಿ ಹೇಳುವ ಮಟ್ಟಿಗೆ ಭಾರತದ ನಗರಗಳು ಬೆಳೆದುನಿಂತಿವೆ. ಭಾರಿ ಮಳೆಯ ಅವಾಂತರಗಳು, ರಸ್ತೆಗಳಲ್ಲಿ ಹೊಳೆಯಂತೆ ಹರಿಯುವ ಕೊಚ್ಚೆಯ ನೀರು, ತುಂಬಿ ಹರಿಯುವ ಮೋರಿ. ಬೆಟ್ಟದಂತೆ ಸಂಗ್ರಹವಾಗುವ ತ್ಯಾಜ್ಯ, ಹೊಂಡಗಳ ನಡುವೆ ಇರುವ ರಸ್ತೆ ಎನ್ನುವ ಸಪಾಟಾದ ನೆಲ, ಧರೆಗುರುಳುವ ಮರಗಳು, ಮನೆಗಳಿಂದ ಮೈದಾನಗಳಿಗೆ ಫುಟ್‍ಪಾತ್‍ಗಳಿಗೆ ಉದ್ಯಾನವನಗಳಿಗೆ ಬಂದು ಬೀಳುವ ತ್ಯಾಜ್ಯ ಇವೆಲ್ಲವೂ ಈ ಸಮಾಧಿಯಲ್ಲಿ ಕಂಡುಬರುವ ಘೋರ ಸತ್ಯ. ದೆಹಲಿ-ನೊಯಿಡಾ-ಅಹಮದಾಬಾದ್-ಮುಂಬಯಿ-ಚೆನ್ನೈ-ಬೆಂಗಳೂರು-ಮೈಸೂರು ಹೀಗೆ ಈ ಘೋರ ದೃಶ್ಯಗಳನ್ನು ಹೊತ್ತ ಮೆಟ್ರೋ ರೈಲಿನ ಪಯಣದಲ್ಲಿ ಒಮ್ಮೆ ಸಂಚರಿಸಿದರೆ ನಗರೀಕರಣದ ರುದ್ರ ದರ್ಶನವಾಗುವುದು ಖಚಿತ.

ಮಾನವ ನಿರ್ಮಿತ ವಿಕೃತಿಗಳಿಗೆ ಪ್ರಕೃತಿ ಬಲಿಯಾಗುತ್ತಿರುವ ಹಂತದಲ್ಲೇ ದೆಹಲಿಯ ಜನಸಾಮಾನ್ಯರು ವಾಯು ಮಾಲಿನ್ಯ, ಧೂಳು, ಹೊಗೆ ಮತ್ತು ಮೈಕೊರೆಯುವ ಚಳಿಗೆ ತತ್ತರಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರಿಸರ ಮಾಲಿನ್ಯ ಪರಾಕಾಷ್ಠೆ ತಲುಪಿದ್ದು ವೈದ್ಯರು ಇದನ್ನು ತುರ್ತುಪರಿಸ್ಥಿತಿ ಎಂದೇ ಬಣ್ಣಿಸಿದ್ದಾರೆ. ಗೋರಖ್‍ಪುರದ ಹಸುಳೆಗಳ ನೆನಪು ಹಸಿರಾಗಿರುವಾಗಲೇ ದೆಹಲಿಯ ಆಸ್ಪತ್ರೆಗಳು ತುಂಬಿತುಳುಕುತ್ತಿವೆ. ದಟ್ಟ ಮಂಜು ಆವರಿಸಿರುವ ಯಮುನಾ ಎಕ್ಸ್‍ಪ್ರೆಸ್‍ವೇನಲ್ಲಿ 20 ವಾಹನಗಳು ಪರಸ್ಪರ ಢಿಕ್ಕಿ ಹೊಡೆದಿದ್ದು 22 ಜನರು ಮೃತಪಟ್ಟಿದ್ದಾರೆ. ನಮ್ಮ ಆಳುವ ವರ್ಗಗಳಿಗೆ 22 ಜನರ ಸಾವು ನಗಣ್ಯ. ಅಭಿವೃದ್ಧಿಗೆ ಇಷ್ಟಾದರೂ ಬಲಿದಾನ ಬೇಡವೇ ? ಮಿದುಳು ಜ್ವರ ಕೇವಲ ಗೋರಖ್‍ಪುರದ ಹಸುಳೆಗಳನ್ನು ಕಾಡುತ್ತಿಲ್ಲ, ನಾವೂ ಮಿದುಳು ಜ್ವರದಿಂದ ಬಳಲುತ್ತಲೇ ನಿಷ್ಕ್ರಿಯರಾಗುತ್ತಿದ್ದೇವೆ ಎಂದು ಆಳುವ ವರ್ಗದ ಪ್ರತಿನಿಧಿಗಳು ಕೂಗಿ ಹೇಳುತ್ತಿರುವುದನ್ನು ಗಮನಿಸಬೇಕಿದೆ.

ಇಲ್ಲಿ ಸ್ವಚ್ಚ ಭಾರತ ಎಂದರೇನು ಎಂಬ ಪ್ರಶ್ನೆ ಉದ್ಭವಿಸದೆ ಹೋದರೆ ನಾವು ಪ್ರಜ್ಞಾಶೂನ್ಯರಾಗಿದ್ದೇವೆ ಎಂದೇ ಅರ್ಥ. ನಿತ್ಯ ಜೀವನದಲ್ಲಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ, ಮಲ ಮೂತ್ರ ವಿಸರ್ಜನೆ ಮತ್ತು ರಸ್ತೆಬದಿಯ ಕಸ ಇಷ್ಟನ್ನು ಸಮರ್ಥವಾಗಿ ವಿಲೇವಾರಿ ಮಾಡಿಬಿಟ್ಟರೆ ಸ್ವಚ್ಚ ಭಾರತ ಸಾಕಾರಗೊಳ್ಳುತ್ತದೆ ಎಂದಾದರೆ ದೆಹಲಿಯ ಜನತೆಗೆ ಹೇಗೆ ಮುಖ ತೋರಿಸಲು ಸಾಧ್ಯ ? ಪ್ರತಿಯೊಂದು ಮನೆಗೂ ಒಂದು ಶೌಚಾಲಯ ಇದ್ದರೆ ಭಾರತ ಸ್ವಚ್ಚವಾಗುತ್ತದೆ ಎಂಬ ಭ್ರಮೆ ಸೃಷ್ಟಿಸಿರುವ ಭಾರತದ ಆಡಳಿತ ವ್ಯವಸ್ಥೆಗೆ ನಮ್ಮ ತಲೆಯ ಮೇಲೆ ಇರುವ ಖಾಲಿ ಜಾಗದಲ್ಲೂ , ಭೂಮಿ ಮತ್ತು ಆಕಾಶದ ನಡುವಿನ ಜಾಗದಲ್ಲೂ, ಮಾಲಿನ್ಯ ಇದೆ ಎಂದೇಕೆ ಅರ್ಥವಾಗುತ್ತಿಲ್ಲ ? ಇದು ಅರ್ಥವಾಗಿದ್ದರೆ ಬಹುಶಃ ಇಂದು ನೊಯಿಡಾ ಎಂಬ ಬೆಂಗಾಡು ಸೃಷ್ಟಿಯಾಗುತ್ತಿರಲಿಲ್ಲ, ಯಮುನಾ ಎಕ್ಸ್‍ಪ್ರೆಸ್‍ವೇ ಇರುತ್ತಿರಲಿಲ್ಲ, ಬೆಂಗಳೂರಿನ ಉಕ್ಕಿನ ಸೇತುವೆಯ ಯೋಚನೆಯೂ ಮೂಡುತ್ತಿರಲಿಲ್ಲ, ಮೈಸೂರಿನಲ್ಲಿ ಸೊಟ್ಟ ರಸ್ತೆಯನ್ನು ನೆಟ್ಟಗೆ ಮಾಡಲು 30 ಮರಗಳನ್ನು ಕಡಿಯುತ್ತಿಲಿಲ್ಲ ಅಲ್ಲವೇ ?

ವಾಹನ ಅಪಘಾತಗಳು ಹೆಚ್ಚಾಗುತ್ತವೆ ಎಂಬ ಕಾರಣಕ್ಕೆ ಸೊಟ್ಟ ರಸ್ತೆಯನ್ನು ನೆಟ್ಟಗೆ ಮಾಡಲು ಮೈಸೂರಿನ ಜಲದರ್ಶಿನಿಯಿಂದ ಪಡುವಾರಹಳ್ಳಿ ವೃತ್ತದವರೆಗಿನ ರಸ್ತೆಯಲ್ಲಿನ 30 ಮರಗಳನ್ನು ಕಡಿದು ಹಾಕಲು ಎಲ್ಲ ರಾಜಕೀಯ ಪಕ್ಷಗಳೂ ಒಂದೇ ವೇದಿಕೆಯ ಮೇಲೆ ಕೂಡುವುದನ್ನು ನೋಡಿದರೆ ಇಂದು ದೆಹಲಿ, ನಾಳೆ ಮೈಸೂರು ಮತ್ತೊಂದು ದಿನ ಬೆಂಗಳೂರು ಎಂದು ಲೆಕ್ಕ ಹಾಕುತ್ತಾ ಕಾಲ ಕಳೆಯಬಹುದೇನೋ ? ಸೊಟ್ಟ ರಸ್ತೆಯನ್ನು ನೆಟ್ಟಗೆ ಮಾಡಲು ಮುಂದಾಗಿ ಪರಿಸರವನ್ನೇ ಸೊಟ್ಟಗೆ ಮಾಡಲು ಮುಂದಾಗುವ ಆಡಳಿತ ವ್ಯವಸ್ಥೆ ನಗರ ಪಾಲಿಕೆಯಾದರೇನು ಕೇಂದ್ರ ಸರ್ಕಾರವಾದರೇನು , ಈ ವಿಕೃತಿಯ ಫಲಾನುಭವಿಗಳು ಜನಸಾಮಾನ್ಯರೇ ಅಲ್ಲವೇ ? ಗೋರಖ್‍ಪುರದಲ್ಲಿ ಮಿದುಳು ಜ್ವರಕ್ಕೆ ಬಲಿಯಾಗಿರುವ ಹಸುಳೆಗಳು ಭಾರತದ ಈ ವಿಕೃತ ಆಡಳಿತ ವ್ಯವಸ್ಥೆಯ ಸಂಕೇತವಾಗಿ ಕಾಣದೆ ಹೋದರೆ ಬಹುಶಃ ನಮ್ಮ ಆಡಳಿತ ವ್ಯವಸ್ಥೆಯ ಮಿದುಳು ನಿಷ್ಕ್ರಿಯವಾಗಿದೆ ಎಂದೇ ಅರ್ಥ.

ಈ ನಿಷ್ಕ್ರಿಯತೆಯಿಂದ ನಾವು ಹೊರಬರುವುದು ಎಂದು ? ತ್ಯಾಜ್ಯ ವಿಲೇವಾರಿ ಎಂದರೆ ವಸತಿ ಪ್ರದೇಶಗಳಲ್ಲಿರುವ ತ್ಯಾಜ್ಯವನ್ನು ಊರ ಹೊರಗಿನ ಖಾಲಿ ಜಾಗದಲ್ಲಿ ಗುಡ್ಡೆ ಹಾಕುವುದು ಎಂದಾದರೆ ನಾವು ಆಕಾಶದತ್ತ ನೋಡುತ್ತಲೇ ಇಲ್ಲ ಎನ್ನುವುದು ಖಚಿತ. ಇತ್ತ ಭೂಮಿಯನ್ನೂ ಸರಿಯಾಗಿ ನೋಡುತ್ತಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಹೆಚ್ಚಿನ ತವಕ ಕಂಡುಬರುತ್ತದೆ. ಏಕೆಂದರೆ ಆಳುವ ವರ್ಗಗಳಿಗೆ ಐದು ವರ್ಷಕ್ಕೊಮ್ಮೆ ಮತ ನೀಡುವ ಮಧ್ಯಮ ವರ್ಗಗಳ ವಾಹನ ಸಂಚಾರಕ್ಕೆ ಇದು ಅಡ್ಡಿಯಾಗುತ್ತದೆ. ಆದರೆ ರಸ್ತೆ ಗುಂಡಿಗಳಿಗಿಂತಲೂ ಹೀನವಾದ, ಕೊಚ್ಚೆಭರಿತ ರಾಜಕಾಲುವೆಗಳಿಗಿಂತಲೂ ಮಲಿನವಾದ ವಸತಿ ಪ್ರದೇಶಗಳಲ್ಲಿ ವಾಸಿಸುವ ಬಡ ಜನತೆಯ ಬವಣೆಯನ್ನು ನೀಗಿಸುವ ಆಲೋಚನೆಯೇ ಮೂಡುವುದಿಲ್ಲ. ಮರಗಳೇ ಇಲ್ಲದ ರಸ್ತೆಗಳು, ಪಾರ್ಥೇನಿಯಂ ಉದ್ಯಾನವನಗಳು, ಖಾಲಿ ನಿವೇಶನಗಳ ಪುಟ್ಟ ಅರಣ್ಯಗಳು, ಹೂಳು ತುಂಬಿದ ಕೆರೆಗಳು, ಗಾಳಿಯಲ್ಲಿ ವಿಷ ತುಂಬಲು ದುಂಬಾಲು ಬೀಳುವ ಅಸಂಖ್ಯಾತ ವಾಹನಗಳು ಇವೆಲ್ಲವೂ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಸಮಸ್ಯೆ ಅಲ್ಲವೇ ಅಲ್ಲ. ಏಕೆಂದರೆ ನಾವು ಆಕಾಶದತ್ತ ನೋಡುತ್ತಿಲ್ಲ. ಭೂಮಿ ನಮಗೆ ಗೋಚರಿಸುವುದಿಲ್ಲ.

ಏಕೆಂದರೆ ನೆಟ್ಟ ದೃಷ್ಟಿಯಲ್ಲಿ ನಡೆಯುತ್ತಿದ್ದೇವೆ. ಸೊಟ್ಟ ರಸ್ತೆಗಳನ್ನು ನೆಟ್ಟಗೆ ಮಾಡುತ್ತಾ ಸರಾಗವಾಗಿ ನಡೆದಾಡಲು ಸಜ್ಜಾಗುತ್ತಿದ್ದೇವೆ. ನಮ್ಮ ದೃಷ್ಟಿ ನೆಟ್ಟಗಿದೆಯೋ ಅಥವಾ ನೆಟ್ಟ ದೃಷ್ಟಿ ಸೊಟ್ಟಗಾಗಿದೆಯೋ ಭವಿಷ್ಯದಲ್ಲಿ ನಿರ್ಧಾರವಾಗುತ್ತದೆ. ಭೂಮಿ ಆಕಾಶದ ನಡುವೆಯೂ ಒಂದು ಜಗತ್ತು ಇದೆ ಎಂಬ ಪರಿಜ್ಞಾನ ಆಡಳಿತ ವ್ಯವಸ್ಥೆಗೆ ಇದ್ದರೆ ಸೊಟ್ಟ ರಸ್ತೆ ಹಾಗೆಯೇ ಉಳಿದು ಆಡಳಿತ ವ್ಯವಸ್ಥೆ ನೆಟ್ಟಗಾಗಲು ಸಾಧ್ಯ. ಇಲ್ಲವಾದಲ್ಲಿ ಮುಂದೊಂದು ದಿನ ಅತ್ಯಾಧುನಿಕ ನಗರದ ಮಕ್ಕಳಲ್ಲಿ ಈ ಪ್ರಶ್ನೆ ಮೂಡಬಹುದು :

ಮರ ಎಂದರೇನು ?

Leave a Reply

Your email address will not be published.