ರಷ್ಯಾದ ದೇಹ-ಭಾರತೀಯ ಆತ್ಮ

ಮಹೇಶ್ ಎಂ

“ಬಾಬಾ ಸಾಹೇಬನಿಗೆ, ಮೋಹನ ದಾಸನಿಗೆ ಶಿರಭಾಗಿ ನಮಿಸಿ ಕಲಿಯಬೇಕಿದೆ ನನಗೆ” ಇದು ಚಳುವಳಿಯಲ್ಲಿ ತನ್ನ ಮಗನನ್ನು ಕಳೆದುಕೊಂಡ ಚಲಕೊಪ್ಪದ ದುರ್ಗವ್ವಳ ಮನದಾಳದ ಬಯಕೆ. ಚಮ್ಮಾರಿಕೆಯನ್ನು ಮಾಡಿ ದುರ್ಗವ್ವ ಮತ್ತು ಅವನ ಮಗ ಬದುಕನ್ನು ದೂಡುತ್ತಿದ್ದಾರೆ. ಅವರು ತಯಾರಿಸುವ ವಸ್ತುಗಳಿಗೂ ತೆರೆಗಿ ವಿಧಿಸಿದ ಸರ್ಕಾರದ ನಿರ್ಧಾರ ಅವರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರ ನಿರ್ಧಾರವನ್ನು ವಿರೋಧಿಸಿ ದುರ್ಗವ್ವಳ ಮಗ ಚೆಲುವ ಚಳುವಳಿಯನ್ನು ರೂಪಿಸುತ್ತಿದ್ದಾನೆ. ಚಳುವಳಿಯಿಂದ ಮಗನನ್ನು ದೂರಮಾಡಲು ಹೋದ ದುರ್ಗವ್ವ ತಾನೇ ಚಳುವಳಿಯ ಒಂದು ಭಾಗವಾಗುತ್ತಾಳೆ. ಅನೇಕ ಕಾರಣಗಳಿಂದಾಗಿ ದುರ್ಗವ್ವ ನಾಟಕದ ಜೀವ ಜಲ.

ಇದು ಕರಕುಸಲ ವಸ್ತಗಳಿಗೆ ಜಿ.ಎಸ್.ಟಿ ವಿಧಿಸಿರುವುದನ್ನು ವಿರೋಧಿಸಿ ಸಾಂಸ್ಕøತಿಕ ಪ್ರತಿಭಟನೆಯ ಭಾಗವಾಗಿ ಟಿ ಪ್ರಸನ್ನ ರಚಿಸಿ, ನಿರ್ದೇಶಿಸಿದ “ತಾಯವ್ವ” ಗೀತ ನಾಟಕದ ಕತೆ. ರಷ್ಯಾದ ಪ್ರಮುಖ ಲೇಖಕ ಮ್ಯಾಕ್ಸಿಂ ಗಾರ್ಕಿಯವರ ‘ದಿ ಮದರ್’ ಕಾದಂಬರಿಯನ್ನು ಪ್ರಸನ್ನ ಅವರೇ ಸಮುದಾಯಕ್ಕಾಗಿ ಹಿಂದೊಮ್ಮೆ ನಿರ್ದೇಶಿಸಿದ್ದರು. ನಾಟಕ ಅದ್ಬುತವಾಗಿ ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿತ್ತು. ಅದೇ ಗೆಲುವಿನ ಕುದುರೆಯನ್ನು ಪ್ರಸನ್ನ ಮತ್ತೊಮ್ಮೆ ಸವಾರಿ ಮಾಡಿದ್ದಾರೆ. ಮೂಲ ಕತೆಯನ್ನು ಹೆಚ್ಚು ಕಡಿಮೆ ಹಾಗೆ ಉಳಿಸಿಕೊಂಡು ಸಂಭಾಷಣೆಯನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿ ರಚಿಸಿಕೊಂಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಭಾಗಿಯಗಾಲು ಹೊರಟು ನಿಂತ ದುರ್ಗವ್ವಳಿಗೆ ಅವಳ ಸಹಚರರೇ ಕೇಳುವ ಪ್ರಶ್ನೆ ನೀನು ಮುದುಕಿ ಅಲ್ಲಿ ಹೋಗಿ ಏನು ಮಾಡುತ್ತೀಯ?.

ಆಗ ‘ಮೈದುಂಬಿ, ಮನದುಂಬಿ ಮುನ್ನಡೆವೆ ಮುದುಕಿ ಏಕಾಗಲಿ ಎಂದು ದಿಟ್ಟವಾಗಿ ಉತ್ತರಿಸುವ ದುರ್ಗವ್ವಳ ಪಾತ್ರದಲ್ಲಿ ಎಂ.ಡಿ ಪಲ್ಲವಿ, ಬೂಜ್ರ್ವವಾಗಿದ್ದು ನಂತರ ಬದಲಾಗಿ ಚಳುವಳಿಗಾರರಿಗೆ ಸಹಾಯಕವಾಗಿರುವ ಅಮರ್ ಅಕ್ಬರ್ ಆಂಟೋನಿ ಪಾತ್ರದಲ್ಲಿ ಎಂ.ಸಿ ಆನಂದ್, ನಮ್ಮೊಳಗಿನ ಕಾಯಿಲೆಗಳ ಮತ್ತು ವ್ಯಾಪರಸ್ಥರ ಪ್ರತಿನಿಧಿಯಾದ ಕ್ಷಯ ಪಾತ್ರದಲ್ಲಿ ಸಿತಾರ, ಎಂ.ಡಿ ಪಲ್ಲವಿ ಅವರ ಸಂಗೀತ ಸಂಯೋಜನೆ ಮತ್ತು ಜನಪ್ರೀಯ ಮಾತುಗಳಿಂದ ಕೂಡಿದ ಸಂಭಾಷಣೆ ನಾಟಕದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತವೆ.

ಪ್ರಸನ್ನ ನಾಟಕದಲ್ಲಿ ಕುಡುಗೋಲು ಮತ್ತು ಸುತ್ತಿಗೆಯನ್ನು ಹೊಂದಿರುವ ಕಮ್ಯೂನಿಷ್ಟರ ಕೆಂಪು ಬಾವುಟ ಹಸಿರಾಗುವ, ಬಾವುಟ ಹಸಿರಾದರೂ ಕುಡುಗೋಲು ಮತ್ತು ಸುತ್ತಿಗೆ ಕೆಂಪಾಗೇ ಇರುವ ಒಂದು ಸಂಕೇತವನ್ನು ಕಟ್ಟಿಕೊಡುತ್ತಾರೆ. ಇದು ಅತ್ಯಂತ ಮಹತ್ವವಾದದ್ದು. ಇದನ್ನು ಎಡ ಪಂಥಿಯ ಹೋರಾಟಗಾರರು ಗಮನಿಸಬೇಕು.

“ಮಣ ಮಣ ಮಂತ್ರವೂ ಪೂಜೆಯೇ? ಹಣ ಹಂಚುವುದು ದಾಸೋಹವೇ? ಜಗಳಗಂಟಿತನ ಧ್ಯಾನವೇ?” ಎನ್ನುವ ಮುಂತಾದ ಪ್ರಶ್ನೆಗಳನ್ನು ಪ್ರೇಕ್ಷಕರ ಮನದಲ್ಲಿ ಬಿತ್ತುತ್ತಾ ತಾಯವ್ವ ನಾಟಕ ಸಾಗುತ್ತದೆ. ಸಮಾಜದ ಎಲ್ಲಾ ಹಾಗು ಹೋಗುಗಳಿಗು ತನ್ನ ಪ್ರತಿಕ್ರಿಯೆಯನ್ನು ನೀಡತ್ತಾ ಹೋದ ನಾಟಕಕಾರ ತನ್ನ ಕೃತಿಯ ಮೂಲ ಉದ್ದೇಶವನ್ನೆ ಮರೆತಿದ್ದಾನೆ. ಉತ್ತಮ ಆರಂಭವನ್ನು ಪಡೆಯುವ ನಾಟಕ ದಾರಿ ತಪ್ಪಿದ ಮಗುವಿನಂತೆ ಎಲ್ಲಾ ಕಡೆ ಅಲೆಯುತ್ತದೆ. ಮಗು ಏನೇ ಮಾಡಿದರು ನೋಡಲು ಚೆನ್ನಾಗಿ ಇರುತ್ತದೆ. ಕೊನೆಯಲ್ಲಿಯಾದರೂ ಮಗು ಗೂಡು ಸೇರಬಹುದು ಎನ್ನುತ್ತ ಕಾಯುವವರಿಗೆ ನಿರಾಶೆ ಮೂಡುವುದಂತು ಸುಳ್ಳಲ್ಲ. ನಾಟಕ ನೋಡಲು ಹೋದ ಪ್ರೇಕ್ಷಕರಿಗೆ ನಟರ ಅದ್ಬುತ ನಟನೆ ಮತ್ತು ಸಂಗೀತ ಮಾತ್ರ ಸಿಗುತ್ತದೆ. ಕತೆ ನಾಟಕದ ಆಚೆ ಪ್ರಸನ್ನ ಮತ್ತು ನೋಡುಗರ ಮನದಲ್ಲಿ ಸಿಗಬೇಕೆ ಹೋರತು ನಾಟಕದಲ್ಲಿ ಸಿಗುವುದು ಕಷ್ಟ.

ಕರಕಶಲ ವಸ್ತುಗಳಿಗೆ ಜಿ.ಎಸ್.ಟಿ ವಿಧಿಸಿರುವುದನ್ನು ವಿರೋಧಿಸಿ ಸಾಂಸ್ಕøತಿಕ ಪ್ರತಿರೋಧವಾಗಿ ಪ್ರದರ್ಶಿಸಿದ ತಾಯವ್ವ ನಾಟಕದ ಪ್ರದರ್ಶನದ ದರ ಜಿ.ಎಸ್.ಟಿ ಗಿಂತ ಹೆಚ್ಚಾದದ್ದು ವಿಪರ್ಯಸವೇ ಸರಿ.

Leave a Reply

Your email address will not be published.