ರವೀಂದ್ರನಾಥ ಠಾಕೂರ್: ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

-ಸಂಪಿಗೆ ತೋಟದಾರ್ಯ

ರವೀಂದ್ರನಾಥ ಠಾಕೂರ್ ನಮ್ಮ ದೇಶದಲ್ಲಿ ಮನೆಮಾತಾಗಿರುವ ಹೆಸರು. ಅವರ ಹೆಸರು ಕೇಳಿದೊಡನೇ ಎಲ್ಲರಿಗೂ ಅವರ ಋಷಿಸದೃಶ ರೂಪು, ಕವಿ ಸಾಮ್ರಾಟರೆಂಬ ಭಾವವೂ ಮನದಲ್ಲಿ ಮೂಡುತ್ತದೆ. ಅದರೆ ರವೀಂದ್ರನಾಥ ಅವರದು ಬಹುಮುಖ ಪ್ರತಿಭೆ. ಸಾಹಿತ್ಯಕ್ಷೇತ್ರದಲ್ಲಿ ಅಭೂತಪೂರ್ವವೆನಿಸುವ ಕಾವ್ಯ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ. ಸಂಗೀತಕ್ಷೇತ್ರದಲ್ಲಿ ಅವರದೇ ಹೆಸರಿನಲ್ಲಿ ಹೊಸ ಸಂಗೀತ ಪಂಥವೇ ಇದೆ. ನೃತ್ಯ, ಶಿಕ್ಷಣ, ಸಮಾಜ ಸೇವೆಗಳಲ್ಲೂ ಅವರದೇ ಆದ ಛಾಪು ಮೂಡಿಸಿದ್ದಾರೆ. ಇವೆಲ್ಲದರ ಜೊತೆಗೇ ಚಿತ್ರಕಲೆಯಲ್ಲೂ ಅವರು ಪ್ರಪಂಚದ ಗಮನಸೆಳೆಯುವಂತಹ ಕಲಾಕೃತಿಗಳನ್ನು ನೀಡಿದ್ದಾರೆ. ಅವರು ಹೀಗೆ ವಿವಿಧ ಮಾಧ್ಯಮಗಳಲ್ಲಿ ಮುಟ್ಟಿರುವ ಎತ್ತರ ನೋಡಿದರೆ ಅವರ ದೈತ್ಯ ಪ್ರತಿಭೆಯ ದರ್ಶನವಾಗುತ್ತದೆ. ಮತ್ತು ಸಾಧನೆಯ ಹಾದಿಯಲ್ಲಿ ಇರುವವರಿಗೆ ಮಾರ್ಗದರ್ಶಕವೂ, ಆದರ್ಶವೂ ಆಗುವಂತಿದೆ.

tagore_section_13ಆದರೂ ಅವರ ಇನ್ನಿತರ ಕಲಾಪ್ರಕಾರಗಳಂತೆ ಚಿತ್ರಕಲಾ ಪ್ರಕಾರದಲ್ಲಿ ಅವರ ಸಾಧನೆಯು ಜನರಿಗೆ ಹೆಚ್ಚು ಪರಿಚಯವಿಲ್ಲ. ಅವರ ಕಲಾಕೃತಿಗಳನ್ನು ನೋಡಿದರೂ, ಅವನ್ನು ಅರ್ಥೈಸಿಕೊಳ್ಳಲು ಬೇಕಾದ ಹಿನ್ನೆಲೆಗಳು ತಿಳಿದಿಲ್ಲ. ಚಿತ್ರಕಲೆಯು ಬೇರೆ ಕಲಾಪ್ರಕಾರಗಳಂತೆ ಜನಪ್ರಿಯವಾಗಿಲ್ಲದೇ ಇರುವುದಕ್ಕೆ ಅನೇಕ ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಅವು ಜನಸಾಮಾನ್ಯರ ಗಮನಕ್ಕೆ ಬರುವ ಹಾಗೆ ಹೆಚ್ಚೆಚ್ಚು ಪ್ರದರ್ಶನಗಳು ಆಗದೇ ಇರುವುದು, ಮತ್ತು ಕಲೆಯನ್ನು ಅರ್ಥಮಾಡಿಕೊಳ್ಳಲು ಬೇಕಾದ ತಿಳಿವಳಿಕೆಯನ್ನು ನೀಡದೇ ಇರುವುದು ಕಾರಣ. ಇವೆರಡನ್ನೂ ಒಟ್ಟಿಗೆ ಸಾಧಿಸುವ ನಿಟ್ಟಿನಲ್ಲಿ ಶಾಂತಿನಿಕೇತನದ ಕಲಾವಿಭಾಗವು ಪ್ರಪಂಚದ ವಿವಿಧ ಕಲಾಸಂಗ್ರಹಾಲಯಗಳಲ್ಲಿ ಕಲಾಸಕ್ತರಿಗೆ ಪ್ರದರ್ಶನಗಳನ್ನು, ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬರುತ್ತಿದೆ. ಇದರಿಂದ ರವೀಂದ್ರನಾಥ ಠಾಕೂರರ ಚಿತ್ರಕಲೆಯು ಪ್ರಪಂಚದ ಕಲಾಸಕ್ತರಿಗೆ ಹೆಚ್ಚು ಪರಿಚಯ ಆಗುತ್ತಿದೆ. ಇಂತಹ ಒಂದು ಪ್ರದರ್ಶನ ಬೆಂಗಳೂರಿನಲ್ಲಿ 2013ರ ಜುಲೈ ತಿಂಗಳಲ್ಲಿ ಏರ್ಪಾಡಾಗಿತ್ತು. ಆ ಸಮಯದಲ್ಲಿ ಜನರಿಗೆ ಅಪರಿಚಿತವಾಗಿದ್ದ, ರವೀಂದ್ರನಾಥರು ಚಿತ್ರಕಲಾವಿದರಾದ ಬಗೆ, ಅವರ ಮೇಲೆ ಬೀರಿರುವ ಪ್ರಭಾವಗಳು, ತಾತ್ವಿಕತೆ, ಸೃಜನಶೀಲತೆ, ವೈಶಿಷ್ಟ್ಯತೆ ಇವನ್ನೆಲ್ಲಾ ಕುರಿತು ಶಾಂತಿನಿಕೇತನ ಕಲಾಭವನದ ಕಲಾಚರಿತ್ರೆ ವಿಭಾಗದ ಮುಖ್ಯಸ್ಥರೂ, ಕಲಾ ಚರಿತ್ರಕಾರರೂ ಆದ ಪೆÇ್ರ. ಆರ್. ಶಿವಕುಮಾರ್ ಅವರು ಇಂಗ್ಲಿಷ್‍ನಲ್ಲಿ “Rabindranath’s pursuit of painting and modernism”ಎಂಬ ಉಪನ್ಯಾಸ ನೀಡಿದ್ದರು. ಅದರ ಕನ್ನಡ ಅನುವಾದವೇ “ರವೀಂದ್ರನಾಥ ಠಾಕೂರ್ ಅವರ ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ” ಎಂಬ ಈ ಪುಸ್ತಕ. ಅನುವಾದಿಸಿರುವವರು ಸ್ವತಃ ಕಲಾವಿದರೂ, ಸಿನಿಮಾ ಛಾಯಾಗ್ರಾಹಕರೂ ಆದ ಬಿ. ಆರ್. ವಿಶ್ವನಾಥ ಅವರು.

ಈ ಪುಸ್ತಕದಲ್ಲಿ ರವೀಂದ್ರರು ಚಿತ್ರಿಸಿರುವ ಒಂಬತ್ತು ಪ್ರಾತಿನಿಧಿಕ ಕಲಾಕೃತಿಗಳಿವೆ. ಜೊತೆಗೇ ಸ್ವತಃ ವಿಶ್ವನಾಥ್ ರಚಿಸಿರುವ ರವೀಂದ್ರನಾಥ ಠಾಕೂರ್ ಅವರ ಸುಂದರ ರೇಖಾಚಿತ್ರವೂ ಇದೆ. ರವೀಂದ್ರರ ಚಿತ್ರಕಲೆಯ ವೈಶಿಷ್ಟ್ಯವನ್ನು ಕುರಿತು ಸೋದಾಹರಣವಾಗಿ ವಿವರಿಸಿರುವ ಕಲಾವಿಮರ್ಶಕ ಕೆ. ಎಸ್. ಶ್ರೀನಿವಾಸ ಮೂರ್ತಿ ಅವರ ಹಿನ್ನುಡಿ ಇದೆ. ‘ಅನುಬಂಧ’ ದಲ್ಲಿ ಮೂಲ ಇಂಗ್ಲಿಷ್ ಉಪನ್ಯಾಸದ ಲೇಖನವೂ ಇರುವುದು ಈ ಪುಸ್ತಕದ ವಿಶೇಷವಾಗಿದೆ. 114 ಪುಟಗಳಷ್ಟಿರುವ ಈ ಪುಸ್ತಕದ ವಿನ್ಯಾಸ, ಮತ್ತು ಮುದ್ರಣ ಸೊಗಸಾಗಿದ್ದು, ಕಲೆ ಕುರಿತ ಪುಸ್ತಕವೊಂದು ಇರಬೇಕಾದ ರೀತಿಯಲ್ಲಿದೆ. ಇಂತಹ ಸುಂದರ ಪುಸ್ತಕದ ಬೆಲೆ ಕೇವಲ 130 ರೂಪಾಯಿ ಇದ್ದು ಎಲ್ಲರೂ ಕೊಳ್ಳಬಹುದಾಗಿದೆ.

ಶಿವಕುಮಾರ್ ತಮ್ಮ ಉಪನ್ಯಾಸದಲ್ಲಿ ರವೀಂದ್ರನಾಥ ಠಾಕೂರ್ ಅವರು ಚಿತ್ರಕಲೆಯಲ್ಲಿ ಮೊದಮೊದಲು ಹಿಂದೆ ಬಿದ್ದಿದ್ದರೂ, ಕಲಾಪ್ರಪಂಚದೊಡನೆ ಸತತ ಆತ್ಮೀಯ ಒಡನಾಟ ಇಟ್ಟುಕೊಂಡು ನಡೆಸಿದ ಕಲಾಯಾತ್ರೆ ಮೂಲಕ ತಮ್ಮಲ್ಲಿಯೇ ಹುದುಗಿದ್ದ ಕಲಾವಿದನನ್ನು ಕಂಡುಕೊಂಡ ಬಗೆಯನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಇದಕ್ಕೆ ಶಿವಕುಮಾರ್ ಅವರು ಸ್ವತಃ ರವೀಂದ್ರನಾಥರ ಹೇಳಿಕೆಗಳನ್ನೂ, ಕಲಾವಿಮರ್ಶಕರ ಹೇಳಿಕೆಗಳನ್ನೂ ಆಧಾರವಾಗಿ ನೀಡಿದ್ದಾರೆ. ರವೀಂದ್ರನಾಥರ ಮೇಲೆ ಪ್ರಭಾವ ಬೀರಿದ ದೇಶವಿದೇಶಗಳ ಪ್ರಾಚೀನ ಕಲೆ, ಆಧುನಿಕ ಕಲಾಪಂಥಗಳ ಸಂಕ್ಷಿಪ್ತವಾದರೂ ಸಾರವತ್ತಾದ ಪರಿಚಯ ಮಾಡಿಸಿದ್ದಾರೆ. ಈ ಉಪನ್ಯಾಸ ಕಲಾಚರಿತ್ರೆಯಲ್ಲಿನ ಒಂದು ರಸ ಅಧ್ಯಾಯದಂತಿದೆ. ಕಲಾಸಕ್ತರೆಲ್ಲರೂ ಪದೇ ಪದೇ ಓದುವಂತಿದೆ.

ರವೀಂದ್ರನಾಥರ ಚಿತ್ರಕಲೆಯ ಪ್ರಾರಂಭದ ದಿನಗಳ ಬಗ್ಗೆ ಹೇಳುತ್ತಾ ಶಿವಕುಮಾರ್, ರವೀಂದ್ರನಾಥರು ಅನೇಕ ಮಾಧ್ಯಮಗಳಲ್ಲಿ ಪ್ರಾವೀಣ್ಯ ಗಳಿಸಿದ್ದರೂ “ಚಿತ್ರಕಲೆ ಮಾತ್ರ ಅವರಿಗೆ ಸಲೀಸಾಗಿ ದಕ್ಕಿರಲಿಲ್ಲ. ಇದರ ಸಿದ್ಧಿಗಾಗಿ ಅವರು ತಮ್ಮ ನಲವತ್ತನೇ ವಯಸ್ಸಿನವರೆಗೂ ಪ್ರಯತ್ನಿಸುತ್ತಲೇ ಇದ್ದರು.” ಎಂದು ತಿಳಿಸಿದ್ದಾರೆ. ರವೀಂದ್ರರು ತಮ್ಮನ್ನು ಚಿತ್ರಕಲಾವಿದನನ್ನಾಗಿ ಗುರುತಿಸಿಕೊಳ್ಳುವ ಹಿಂದೆ ಇರಬಹುದಾದ ಕಾರಣಗಳನ್ನು ಊಹಿಸುತ್ತಾ, “ರವೀಂದ್ರರು ಚಿತ್ರಕಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಲ್ಲದೆ ಇದ್ದಾಗಲೂ ತಮ್ಮ ಸಮಕಾಲೀನ ಕಲಾಸನ್ನಿವೇಶದೊಂದಿಗೆ ಆತ್ಮೀಯ ಸಂಬಂಧ ಉಳಿಸಿಕೊಂಡಿದ್ದುದು, ಬಹು ಸಾಂಸ್ಕೃತಿಕ ಪರಿಸರ ವೈಯಕ್ತಿಕ ಬೆಳವಣಿಗೆಗೆ ಸಹಕಾರಿ ಎಂದು ಭಾವಿಸಿದ್ದುದ್ದು, ಅವರಿಗೆ ತಮ್ಮನ್ನು ಚಿತ್ರ ಕಲಾವಿದನನ್ನಾಗಿ ಗುರುತಿಸಿಕೊಳ್ಳಲು ಸಹಾಯಮಾಡಿರಬಹುದಾದ ಕಾರಣಗಳಾಗಿವೆ”, ಎಂದು ಹೇಳುತ್ತಾರೆ.

ರವೀಂದ್ರರು ಚಿತ್ರಕಲಾವಿದನಾಗುವುದರಲ್ಲಿ ‘ಅನ್ಯ’ ಸಂಸ್ಕೃತಿಗಳು ನಿರ್ಣಾಯಕ ಪಾತ್ರನಹಿಸಿರುವ ಬಗ್ಗೆ ಶಿವಕುಮಾರ್ ವಿವರಿಸಿದ್ದಾರೆ. ರವೀಂದ್ರರು ಮುಕ್ತ ಮನಸ್ಸು ಹೊಂದಿದ್ದು ಯಾವುದೇ ಮೌಲ್ವಿಕ ಸಂಗತಿ, ವಿಚಾರಗಳು ಎಲ್ಲಿಂದಲೇ ಬರಲಿ ಅವನ್ನು ಸ್ವೀಕರಿಸುತ್ತಿದ್ದರು. “ ‘ಅನ್ಯ’ವೊಂದು ತಮ್ಮ ಸೃಜನಶೀಲತೆಗೆ ಇಂಬುಕೊಡುವುದಾದರೆ ಅದನ್ನು ಅವರು ನಿರ್ಭಯವಾಗಿ ಸ್ವೀಕರಿಸುತ್ತಿದ್ದರು.” ರವೀಂದ್ರರೇ ಈ ಬಗ್ಗೆ ಹೇಳುತ್ತಾ “ಮೇಧಾವಿಗಳ ಪ್ರತಿಭೆಯು ಹೇಗಿರುತ್ತದೆ ಎಂದರೆ, ಅನ್ಯಮೂಲಗಳಿಂದ ಎರವಲು ಪಡೆಯುವುದು ಅವರಿಗೆ ತೀರಾ ಸಹಜವಾದದ್ದು. ಇದೊಂದು ಅಸಾಧಾರಣ ಸಾಮರ್ಥ್ಯ. ತಮ್ಮ ವ್ಯವಹಾರಗಳಲ್ಲಿ ಸಾಲ ತೀರಿಸುವ ಬಗೆ ತಿಳಿಯದ ಸಾಮಾನ್ಯರು ಮಾತ್ರ ಎರವಲಿಗೆ ನಾಚಿಕೆ, ಭಯ ಪಡುತ್ತಾರೆ.” ಎಂದಿದ್ದಾರೆ.

ಇದೇ ಭಾವನೆ ಅವರ ಸಾಹಿತ್ಯ ಮಾಧ್ಯಮದಲ್ಲೂ, ಸಂಗೀತ ಮಾಧ್ಯಮದಲ್ಲೂ ಕೆಲಸ ಮಾಡಿದೆ. “ಹಲವು ಸಂಸ್ಕೃತಿ, ಹಾಗೂ ಸಾಂಸ್ಕೃತಿಕ ಪದರುಗಳ ಜೊತೆ ಬೆಸೆದ ವಿವಿಧ ಸಂಗೀತ ಪ್ರಕಾರಗಳು ಅವರ ಸಂಗೀತಕ್ಕೆ ಬಳುವಳಿಯಾಗಿವೆ” ಎಂಬುದನ್ನು ಶಿವಕುಮಾರ್ ನಮ್ಮ ಗಮನಕ್ಕೆ ತರುತ್ತಾರೆ. ಹಾಗೇ ಅವರು ಒಬ್ಬ ಚಿತ್ರಕಲಾವಿದನಾಗುವುದರಲ್ಲೂ ‘ಅನ್ಯ’ ಸಂಸ್ಕೃತಿಗಳು ನಿರ್ಣಾಯಕ ಪಾತ್ರವಹಿಸಿವೆ ಎಂಬುದಕ್ಕೆ ರವೀಂದ್ರರು ಕಂಡ, ಗ್ರಹಿಸಿದ, ಪ್ರಭಾವಗೊಂಡ ವಿವಿಧ ದೇಶಗಳ ಪ್ರಾಚೀನ ಕಲೆ, ಆಧುನಿಕ ಕಲಾಪಂಥಗಳನ್ನೂ ಅವುಗಳ ವೈಶಿಷ್ಟ್ಯತೆಯನ್ನೂ ಶಿವ ಕುಮಾರ್ ಸವಿಸ್ತಾರವಾಗಿ ವಿವರಿಸಿದ್ದಾರೆ. ಹಾಗೆ ಆಧುನಿಕ ಕಲೆಯು ಹೊರಹೊಮ್ಮಿದ ರೀತಿಯನ್ನು ಅದರ ಪ್ರಮುಖ ಶಾಖೆಗಳನ್ನು, ಮುಖ್ಯ ಕಲಾವಿದರನ್ನೂ ಪರಿಚಯಿಸುತ್ತಾರೆ.

ರವೀಂದ್ರರು ಸ್ವದೇಶವೂ ಸೇರಿದಂತೆ ಜಪಾನ್, ಯೂರೋಪ್, ಆಫ್ರಿಕಾ, ಈಜಿಪ್ಟ್, ಕೊಲಂಬಿಯಾ, ಪೆರು ಮುಂತಾದ ದೇಶಗಳ ಕಲೆಗಳನ್ನು, ಅವುಗಳ ಕಲಾತ್ಮಕತೆಯನ್ನು, ತಾತ್ವಿಕತೆಯನ್ನು, ಸೌಂದರ್ಯಶಾಸ್ತ್ರವನ್ನೂ ಗ್ರಹಿಸಿದ್ದರು. ಈ ಕಲಾಯಾತ್ರೆಯಲ್ಲಿ ರವೀಂದ್ರರು ಸರ್ರಿಯಲಿಸ್ಟ್ ಪಂಥದ ಆಜೂಬಾಜೂ ಕಲೆಗಳಲ್ಲಿ ಸರ್ರಿಯಲಿಸ್ಟ್ ಪಂಥದವರಲ್ಲಿ, ಕಲಾವಿದರಾದ ಆಂದ್ರೆ ಮಾಸ್ಸೋನ್  ಮತ್ತು ಜೋನ್ ಮಿರೋ ಅವರ ಚಿತ್ರಗಳಲ್ಲಿ, ಅಮೇರಿಕಾದ ಅಬ್ಸ್ಟ್ರಾಕ್ಟ್ ಎಕ್ಸ್ಪ್ರೆಷನಿಸ್ಟ್ (Abstract Expressionist) ಕಲಾವಿದರಲ್ಲಿ ಅದರಲ್ಲೂ ಮುಖ್ಯವಾಗಿ Jackson Pollack ಅವರ ಚಿತ್ರಗಳಲ್ಲಿ ಗೀಚಾಟವು ಪ್ರಮುಖ ಪಾತ್ರವಹಿಸಿರುವುದನ್ನು ಕಂಡರು. ಇದಲ್ಲದೆ ಆಧುನಿಕ ಕಲಾವಿದರು ‘ಪ್ರಾಚೀನ ಕಲೆ’ ಮತ್ತು ಗೀಚು ಚಿತ್ರಗಳನ್ನು ಅಳವಡಿಸಿಕೊಂಡಿರುವುದನ್ನೂ, ಕ್ಯೂಬಿಸಂ ಶೈಲಿಯ ಮುಖ್ಯಕಲಾವಿದನಾದ ಪಿಕಾಸೊ; ಪ್ರಾಚೀನ ಕಲೆಯಲ್ಲಿ ಅಭಿವ್ಯಕ್ತಿಸಾಮರ್ಥ್ಯದ ಆತ್ಯಂತಿಕ ಸ್ವರೂಪ ಗುರುತಿಸಿದ್ದನ್ನೂ, ಪ್ರಸಿದ್ಧ ಕಲಾವಿದ ವ್ಯಾನ್ ಗಾಹ್ (Van Gogh) ಹಾಗೆ ವಿರೂಪವೂ ಮಹತ್ತಾದ ಅಭಿವ್ಯಕ್ತಿ ಆಗಲು ಸಾಧ್ಯವೆಂದು ಕಂಡುಕೊಂಡಿದ್ದನ್ನೂ ಗಮನಿಸಿದ್ದರು. ರವೀಂದ್ರರಿಗೆ ಗೀಚುಚಿತ್ರಗಳು ಸೃಜನಾತ್ಮಕ ಕಲೆಯ ಕೇಂದ್ರಬಿಂದುವಾಗಿದೆ ಎಂಬುದು ಗೋಚರಿಸಿತು.

ಗೀಚು ಚಿತ್ರಗಳು ಅವರಿಗೆ ಮೂಲಸ್ರೋತವಾಗಿದ್ದವು. ಹಾಗಾಗಿ ಕೌಶಲ್ಯದ ಬದಲಾಗಿ ಸೃಜನಾತ್ಮಕ ಪ್ರಚೋದನೆಯಿಂದ ಮತ್ತು ಪೂರ್ವಯೋಜಿತ ವಿಷಯ, ಎಣಿಕೆಗಳಿಲ್ಲದೆಯೂ ಕಲಾಕೃತಿಗಳನ್ನು ರಚಿಸಲು ಅದು ಸಹಕಾರಿಯಾಯಿತು.

ರವೀಂದ್ರನಾಥರಿಗೆ “ಪ್ರಾಚೀನ ಕಲೆಯೂ ಸೇರಿದಂತೆ, ಇನ್ನಿತರ ಹವ್ಯಾಸೀ ಮೂಲದ ಆಧುನಿಕ ಪಾಶ್ಚಾತ್ಯ ಕಲೆ ಮತ್ತು ಕಲಾವಿದರ ಕೃತಿಗಳು ನಿಕಟವಾಗಿದ್ದಂತೆ ಕಂಡರೂ, ಅವರ ಗ್ರಹಿಕೆ ಮಾತ್ರ ಅಂತರ್ಬೋಧೆಯದಾಗಿತ್ತು. ಅವರ ಗ್ರಹಿಕೆಯ ಚೌಕಟ್ಟು ಪಾಶ್ಚಾತ್ಯ ಕಲಾವಿದರ ಅಥವಾ ವಿಮರ್ಶಕರ ನಿಲುವಿಗೆ ಸದಾ ತಾಳೆಯಾಗುತ್ತಿರಲಿಲ್ಲ.

ಕಲಾವಿದನು ತನ್ನನ್ನು, ತನ್ನ ವ್ಯಕ್ತಿತ್ವವನ್ನು ಕಲೆಯಲ್ಲಿ ಪ್ರಕಟಗೊಳಿಸುವನು ಎಂಬ ಪಾಶ್ಚಾತ್ಯ ಕಲಾವಿದರ ಭಾವನೆಯನ್ನು ಒಪ್ಪಿದರೂ, ವ್ಯಕ್ತಿತ್ವ ಪ್ರಪಂಚದಿಂದ ಮುಕ್ತವಾಗಿರುವುದಿಲ್ಲ ಎಂದು ನಂಬಿದ್ದರು. ಆಧುನಿಕ ಚಿತ್ರಕಲೆ ಮತ್ತು ಸೌಂದರ್ಯಶಾಸ್ತ್ರದಂಥ ವಿಷಯಗಳ ಜೊತೆಗೆ ತಮ್ಮ ಅಂತರ್ಬೋಧೆಯ ನಂಟನ್ನು ಸದಾ ಹಂಚಿಕೊಳ್ಳುತ್ತಿದ್ದರು.

ಪ್ರಾಚೀನ ಕಲೆ ಮತ್ತು ಆಧುನಿಕ ಕಲೆಗಳಿಗೆ ಪ್ರತ್ಯೇಕ ರಚನಾತತ್ವ ಮತ್ತು ಸೌಂದರ್ಯ ಶಾಸ್ತ್ರಗಳಿವೆ. ಇಂಥ ವಿಭಿನ್ನ ಕಲೆಗಳ ಮುಖಾಮುಖಿಯಿಂದಾಗಿ ರವೀಂದ್ರರು ಸಹಜವಾಗಿ ಒಬ್ಬ ಕಲಾವಿದನಾಗಿ ಬೆಳೆಯಲು ಕಾರಣವಾಯಿತು. ರವೀಂದ್ರರಿಗೆ ಈ ಕಲೆಗಳ ಮುಖಾಮುಖಿಯಿಂದ ಪಡೆಯಬೇಕಾದುದಕ್ಕಿಂತಲೂ ಸೌಂದರ್ಯಶಾಸ್ತ್ರದ ವಿಭಿನ್ನ ದೃಷ್ಟಿಕೋನವು ಬಹುಮುಖ್ಯ ಅವಶ್ಯಕತೆಯಾಗಿತ್ತು. ಇದನ್ನು ಸಾಧಿಸಲು ಅವರಿಗೆ ಗೀಚು ಚಿತ್ರಗಳು ಕ್ರಮೇಣ ಸಹಕಾರಿಯಾದವು.

ಯಾವ ಕಟ್ಟುಪಾಡುಗಳಿಗೂ ಒಳಪಡದೆ ಕಲಾವಿದ ತನ್ನ ಬುದ್ಧಿ ಭಾವಗಳಿಗೆ ಅನುಸಾರವಾಗಿ ಸ್ವತಂತ್ರವಾಗಿ ಕೃತಿನಿರ್ಮಾಣದಲ್ಲಿ ತೊಡಗುವುದನ್ನು ಹಾಗೂ ತಾತ್ವಿಕ ಗುರಿಸಾಧನೆಯ ಆಧುನಿಕ ಆಲೋಚನೆಗಳನ್ನು ರವೀಂದ್ರರು ಅನುಸರಿಸಿದರು. ಅಲ್ಲದೆ ಅದಕ್ಕೆ ಸೂಕ್ತವಾದ ಮಾಧ್ಯಮಗಳಲ್ಲಿ ಪ್ರಯತ್ನಿಸಿದರು. ಈ ಮನೋಭಾವವೇ ರವೀಂದ್ರರನ್ನು ಗೀಚುಚಿತ್ರಗಳ ಕಡೆಗೆ ಸೆಳೆಯಲು ಕಾರಣವಾಗಿದೆ ಎನ್ನಬಹುದು. ರವೀಂದ್ರರು ಈ ಕಲಾಯಾತ್ರೆಯಲ್ಲಿ ತಮ್ಮ ಗೀಚಾಟಗಳು ಎಂತಹ ಪಾತ್ರವಹಿಸಿವೆ ಎಂಬುದನ್ನು ಹೇಳುತ್ತಾ, “ನಾನು ನನ್ನ ಬಾಲ್ಯದಲ್ಲಿ ಪಡೆದ ಒಂದೇ ಒಂದು ತರಬೇತಿಯೆಂದರೆ, ಭಾವದ ಲಯ, ಶಬ್ದದ ಲಯ. ಲಯವು ಸ್ವತಃ ಅಸಂಬದ್ಧವಾದುದ್ದಕ್ಕೆ, ಅಪ್ರಸ್ತುತವಾದುದಕ್ಕೆ ಅಸ್ತಿತ್ವವನ್ನು ಕೊಡುವಂಥದ್ದು ಎಂಬುದನ್ನು ಅರಿತಿದ್ದೆ. ಹಾಗಾಗಿ ನನ್ನ ಹಸ್ತಪ್ರತಿಯಲ್ಲಿನ ಗೀಚಾಟಗಳು ತಮ್ಮ ಬಿಡುಗಡೆಗಾಗಿ ಯಾಚಿಸುವಾಗ ಮತ್ತು ಅಪ್ರಕೃತ ಕುರೂಪದಿಂದ ನನ್ನ ಕಣ್ಣುಗಳಿಗೆ ಎರಗುವಾಗ, ನನ್ನ ಪ್ರಯತ್ನವು ಆ ಗೀಚಾಟಗಳನ್ನು ಯಾವುದೋ ಒಂದು ಸ್ಪಷ್ಟ ಗುರಿಯೆಡೆಗೆ ಕೊಂಡೊಯ್ಯುವುದಾಗಿರಲಿಲ್ಲ. ಬದಲಾಗಿ ಸದಾ ಲಯದ ಅರ್ಥಗರ್ಭಿತ ನೆಲೆಯಲ್ಲಿ ಅವನ್ನು ಕಾಪಾಡುವುದಕ್ಕಾಗಿ ನಾನು ಹೆಚ್ಚು ಸಮಯ ತೆಗೆದುಕೊಂಡಿದ್ದೇನೆ.” ಎಂದಿದ್ದಾರೆ. ಈ ಪ್ರಕ್ರಿಯೆಯನ್ನು “ಚಿತ್ರಕಲೆಯ ನನ್ನ ಅಪ್ರಜ್ಞಾ ತರಬೇತಿ” ಎಂದು ಕರೆದಿದ್ದಾರೆ.

ಅವರಿಗೆ ತಮ್ಮ ಚಿತ್ರ ನಿರ್ಮಾಣ ಪ್ರಕ್ರಿಯೆಯು ತಮ್ಮ ಬರವಣಿಗೆಯ ಪ್ರಕ್ರಿಯೆಗೆ ವಿರುದ್ಧವಾದುದು ಎಂಬುದು ಅವರ ಅರಿವಿಗೆ ಬಂದಿತು. ಇದನ್ನು ಅವರು ಹೀಗೆ ವಿವರಿಸಿದ್ದಾರೆ, “ಮೊದಲಿಗೆ ಒಂದು ಗೆರೆ ಸುಳಿಯುತ್ತದೆ. ನಂತರದಲ್ಲಿ ಆ ಗೆರೆಯು ಒಂದು ರೂಪವಾಗಿ ಮಾರ್ಪಡುತ್ತದೆ. ರೂಪವು ನಿಶ್ಚಿತವಾಗುತ್ತಿರುವ ಹಾಗೆಯೇ ಸುಸ್ಪಷ್ಟವೂ ಆಗುತ್ತಾ ನನ್ನ ಕಲ್ಪನೆಯ ಚಿತ್ರವಾಗಿ ಮಾರ್ಪಡುತ್ತದೆ. ರೂಪದ ಈ ಸೃಷ್ಟಿ ಅನಂತವಾದ ಒಂದು ಬೆರಗಿನ ಸ್ರೋತ.” ರವೀಂದ್ರರಿಗೆ “ಬರವಣಿಗೆಯು ಭಾಷಾಪಾಂಡಿತ್ಯದ ಒಂದು ಮರುಹೇಳಿಕೆಯಾಗಿದ್ದರೆ, ಚಿತ್ರಕಲೆಯು ಹುಡುಕಾಟದ ಪ್ರಕ್ರಿಯೆಯಾಗಿತ್ತು.”

ರವೀಂದ್ರರು ಇಷ್ಟಪಡುತ್ತಿದ್ದ ಮುಕ್ತಮನಸ್ಸು, ಪೂರ್ಣ ಸ್ವಾತಂತ್ರ್ಯ, ಸೃಜನಶೀಲತೆ, ಸೌಂದರ್ಯಪ್ರಜ್ಞೆಗಳಿಗೆ ಸರಿಯಾಗಿ ಗೀಚಾಟಗಳು ಚಿತ್ರರಚನೆಯ ಪ್ರಕ್ರಿಯೆಗೆ ದಾರಿ ಒದಗಿಸಿದ್ದು ಆಶ್ಚರ್ಯವೇನಲ್ಲ. ಏಕೆಂದರೆ ಗೀಚು ಚಿತ್ರಗಳ ಹುಟ್ಟುವ ಪ್ರಕ್ರಿಯೆಯೇ ಯಾವ ಪೂರ್ವಯೋಜಿತ ತಯಾರಿ ಬೇಕಿಲ್ಲದೆ, ಕೇವಲ ಸೃಜನಾತ್ಮಕತೆ, ಸೌದರ್ಯ ಪ್ರಜ್ಞೆಗಳ ಬೆಳಕಿನಲ್ಲಿ ಹೊರಹೊಮ್ಮುವದಾಗಿದೆ. ನವ್ಯಕಲೆ ಹಾಗೂ ಆದಿಮ ಸೂಚ್ಯಾರ್ಥಗಳನ್ನು ಬಳಸಿ ಸ್ವಲ್ಪ ಬದಲಾವಣೆ ಮಾಡುವ ಮೂಲಕ ಗೀಚುಚಿತ್ರಗಳನ್ನು ಅಲಂಕಾರಿಕ ಅಥವಾ ವಿಕೃತ ಸಂಕೇತಗಳಾಗಿ ಮಾರ್ಪಡಿಸಲು ಸಾಧ್ಯ ಎಂಬದೂ ಬಹುಬೇಗ ರವೀಂದ್ರರ ಅರಿವಿಗೆ ಬಂದಿತು.

ಹೀಗೆ ರವೀಂದ್ರರು ತಮಗೆ ಯಾವ ಚಿತ್ರಕಲೆ ಒಲಿಯುವುದಿಲ್ಲ ಎಂದುಕೊಂಡಿದ್ದರೊ ಅದು ಅವರ ಕಲಾಪ್ರಪಂಚದ ಜೊತೆಗಿನ ಒಡನಾಟದಿಂದ, ಅವರೊಳಗೇ ಹುದುಗಿದ್ದ, ಅವರ ಕೈಬರೆಹದ ರೂಪದಲ್ಲೇ ಹೊಮ್ಮುತ್ತಿದ್ದ, ಲಿಪಿಗಾರಿಕೆಯ ಕೌಶಲವೇ ಅವರನ್ನು ಗೀಚುಚಿತ್ರಗಳ ಮೂಲಕ ಚಿತ್ರಕಲೆಯ ಸಾಕ್ಷಾತ್ಕಾರ ಮಾಡಿಸಿದ ವಿಸ್ಮಯಕಾರಿ ಸಂಗತಿಯನ್ನು ಶಿವ ಕುಮಾರ್ ಸುಸಂಗತವಾಗಿ, ನಮ್ಮೆದುರು ಮಂಡಿಸಿದ್ದಾರೆ. ಶಿವಕುಮಾರ್ ಅವರು ರವೀಂದ್ರರು ಕಲಾವಿದರಾಗಿ ಬೆಳೆದ ಮಾರ್ಗ ಗುರುತಿಸುತ್ತಲೇ ನಮಗೆ ಪ್ರಪಂಚದ ಚಿತ್ರಕಲಾಕ್ಷೇತ್ರದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನೂ ವೈಶಿಷ್ಟ್ಯಗಳನ್ನೂ, ಮುಖ್ಯ ಕಲಾವಿದರ ಕೃತಿಗಳ ತಾತ್ವಿಕತೆಯನ್ನೂ ಪರಿಚಯಿಸಿ ಓದುಗನಿಗೆ ಕಲಾಪ್ರಪಂಚದ ಕಡೆ ಆಸಕ್ತಿ ಕುದುರುವಂತೆ ಮಾಡಿದ್ದಾರೆ.

ರವೀಂದ್ರರ ಕೈಬರೆಹ ಅತ್ಯುತ್ತಮವಾಗಿತ್ತು. ಸುಂದರ ಲಿಪಿಗಾರಿಕೆಯ ಕೌಶಲಕ್ಕೆ ಬೇಕಾದ ಹಿನ್ನೆಲೆ, ಸೌಂದರ್ಯ ಪ್ರಜ್ಞೆಗಳು ಅವರಲ್ಲಿದ್ದವು. “ಅರಿವಿಗೆ ಬಾರದ ಹಾಗಿದ್ದ ಅವರ ಕೈಬರಹದ ಇಂಥ ರಚನಾಕೌಶಲವು ಕಾಲಕ್ರಮೇಣ ಸ್ಫುರಣೆಗೆ ಬಂದಾಗ ತಾನು ಚಿತ್ರಕಲಾವಿದನಾಗುವ ಸಾಧ್ಯತೆಯೊಂದು ಅವರಿಗೆ ಕಂಡಿರಬಹುದು. ಇದು ಯಾವಾಗ ಹೇಗೆ ಆಗಿರಬಹುದೆಂಬುದನ್ನು ರವೀಂದ್ರನಾಥರು ನೇರವಾಗಿ ಹೇಳಿಲ್ಲ.” ಎಂದು ತಿಳಿಸಿರುವ ಶಿವ ಕುಮಾರ್, ಅಂಥ ಅರಿವಿನ ಸ್ಪುರಣ ಲಿಪಿಗಾರಿಕೆಯ ಕೌಶಲದಿಂದ ಹೇಗೆ ಸಾಧ್ಯವಾಗುತ್ತದೆಂದು ತತ್ತ್ವಜ್ಞ ರೋಲಾ ಬಾರ್ತ್ ಅವರ ವಿವರಣೆ ಮೂಲಕ ತಿಳಿಸಿಕೊಡುತ್ತಾರೆ.

ರವೀಂದ್ರರು, ‘ಗ್ರಹಿಕೆ’ಯ ಪ್ರ್ರಾಮುಖ್ಯವನ್ನು, ಮತ್ತು ‘ಆಧುನಿಕತೆ’ಯ ಬಗೆಗಿನ ಸ್ಪಷ್ಟನೆಯನ್ನೂ ತಿಳಿಸಿರುವುದನ್ನು ಅವರ ಬರವಣಿಗೆಗಳ ಉಲ್ಲೇಖದಿಂದಲೇ ಶಿವ ಕುಮಾರ್ ನೀಡಿದ್ದಾರೆ. “ನಾನಿನ್ನೂ ಚಿತ್ರಕಲೆಯಲ್ಲಿ ತೊಡಗಿರಲಿಲ್ಲ, ಆಗ ಐಂದ್ರಿಕ ಪ್ರಪಂಚದ ಮಾಧುರ್ಯ ನನ್ನ ಕಿವಿಗಳಿಗೆ ಕೇಳುತ್ತಿತ್ತು. ಹಾಗೆ ಮೂಡಿದ ಸಂವೇದನೆ ಮತ್ತು ಭಾವನೆಗಳು ನನ್ನ ಮನಸ್ಸಿನ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತಿದ್ದವು. ಆದರೆ ನಾನು ಚಿತ್ರಕಲೆಗೆ ತಿರುಗಿದಾಗ ಒಮ್ಮೆಲೇ ದೃಶ್ಯಜಗತ್ತಿನ ಭವ್ಯ ಮೆರವಣಿಗೆಯಲ್ಲಿ ನನ್ನ ಸ್ಥಾನವನ್ನು ಗುರುತಿಸಿಕೊಂಡೆ. ಮರಗಿಡಗಳು, ಮನುಷ್ಯರು ಮತ್ತು ಮೃಗಗಳು, ಪ್ರತಿಯೊಂದೂ ಅವುಗಳ ವಿಭಿನ್ನ ಪ್ರಕಾರಗಳಲ್ಲಿ ಸಹಜವಾಗಿ ತೋರಿದವು. ನಂತರ ಗೆರೆಗಳು ಮತ್ತು ಬಣ್ಣಗಳು ನನಗೆ ಪ್ರಕೃತಿಯ ಘನವಸ್ತುಗಳ ಚೈತನ್ಯವನ್ನು ಪ್ರಕಟಗೊಳಿಸಿದವು. ಕಲಾವಿದರು ಶುದ್ಧ ಹಾಗೂ ಸರಳ ನೋಡುಗರಾಗಿ ತಮ್ಮ ಪಾತ್ರವನ್ನು ನಿರ್ವಹಿಸುವುದಾದರೆ ಮುಂದೆಂದೂ ಅವರಿಗೆ ಅಸ್ತಿತ್ವ ಸ್ಪಷ್ಟೀಕರಣದ ಅಗತ್ಯವೇ ಬರುವುದಿಲ್ಲ”. ಗ್ರಹಿಕೆಯ ಸಾಮರ್ಥ್ಯವಿಲ್ಲದ ಬಹುತೇಕ ಜನರನ್ನು, ಕಲಾವಿದ ತಾನು ನೇರವಾಗಿ ಗ್ರಹಿಸಿದ ದೃಶ್ಯಪ್ರಪಂಚದ ಆನಂದದೆಡೆ, ಬಲವಂತವಾಗಿ ಸೆಳೆಯಬೇಕಾಗಿದೆ. ಇದೊಂದು ಸವಾಲೇ ಸರಿ….” ನಿಜ. ಇದು ಎಲ್ಲಾ ಸಾಧಕ ಕಲಾವಿದರೂ ಎದುರಿಸುವ ಸವಾಲೇ. ಇದಕ್ಕೂ ಮೊದಲು ಕಲಾವಿದ ತನ್ನ ಗ್ರಹಿಕೆಯ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅದನ್ನು ರವೀಂದ್ರರು “ಯಾವಾಗ ನಾವು ನಮ್ಮ ಇಂದ್ರಿಯ ಗ್ರಹಿಕೆಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಶಕ್ತರಾಗುತ್ತೇವೋ, ಆಗ ನಾವು ನಮ್ಮಇರುವಿಕೆಯನ್ನೂಅರಿಯುತ್ತೇವೆ” ಎಂದು ಹೇಳಿದ್ದಾರೆ. ಇದು ನಮ್ಮ ಯುವ ಕಲಾವಿದರು ಅರಿಯಬೇಕಾದ ಸಂಗತಿಯೇ ಆಗಿದೆ.

guruಮೆಲ್ರೊಪಾಂತಿ ದೃಷ್ಟಿಯಲ್ಲೂ ಸಹ ಆಧುನಿಕ ಕಲಾಸಾಧನೆ ಎಂದರೆ, “…ಮತ್ತೆಮತ್ತೆ ವಿಸ್ಮೃತಿಗೆ ತಳ್ಳುವಂಥ ಪ್ರಪಂಚವನ್ನು ಪುನಃ ಕಂಡುಕೊಳ್ಳಲು ಅನುವು ಮಾಡಿಕೊಡುವುದೇ ಆಧುನಿಕಕಲೆ ಮತ್ತು ತತ್ತ್ವದ ಮಹತ್ತರ ಸಾಧನೆಗಳಲ್ಲೊಂದಾಗಿದೆ.”
ರವೀಂದ್ರರು ಇಂತಹ ಸಾಧನೆಯ ಹಂತ ತಲುಪಿದ್ದು ತಮ್ಮ ಚಿತ್ರಗಳಿಂದಲೇ. ಆದರೆ ಈ ವಿಚಾರ ತರಂಗಗಳು ನಂತರದ ಅವರ ಕಲೆ ಕುರಿತ ಬರವಣಿಗೆಗಳಲ್ಲಿ ನಿರಂತರವಾಗಿ ಪ್ರವಹಿಸಿವೆ. ಅವರು ್ಲಆಧುನಿಕ ಕವಿತೆ ಬಗ್ಗೆ 1937ರಲ್ಲಿ ನೀಡಿರುವ ಸ್ಪಷ್ಟನೆಯೊಂದನ್ನು ನಾವಿಲ್ಲಿ ಗಮನಿಸಬಹುದು.

“ಅಪ್ಪಟ ಆಧುನಿಕತೆ ಎನ್ನುವುದು ಏನು? ಎಂದು ನೀವು ನನ್ನನ್ನು ಕೇಳಿದರೆ, ಪ್ರಪಂಚವನ್ನು ನಿರ್ಭಾವುಕ ಏಕಾಗ್ರತೆಯಲ್ಲಿ, ವೈಯಕ್ತಿಕ ಬಾಂಧವ್ಯದಿಂದ ಮುಕ್ತವಾಗಿ ನೋಡುವುದು ಎಂದು ಹೇಳುತ್ತೇನೆ. ಈ ನೋಟ ಪ್ರಖರವೂ ಮತ್ತು ಶುದ್ಧವೂ ಆದುದು; ಇಂತಹ ನಿಷ್ಕಪಟ ದೃಷ್ಟಿಯಲ್ಲಿ ನಿಜವಾದಸಂತೋಷವಿದೆ…
ಅದು ಮಾತ್ರವೇ ನಿತ್ಯವಾಗಿ ಆಧುನಿಕವಾದ್ದು.” ಈ ಮಾತುಗಳನ್ನು ಗಂಭೀರವಾಗಿ, ಆಳವಾಗಿ ಚಿಂತಿಸತೊಡಗಿದಾಗ ಭಗವದ್ಗೀತೆಯಲ್ಲಿ ಕೃಷ್ಣ ಕರ್ಮಯೋಗ ಕುರಿತು ಹೇಳುವ ಮಾತುಗಳ ಪ್ರತಿಧ್ವನಿ ಕೇಳಿಸುತ್ತದೆ. ಇಂತಹ ಋಷಿಸದೃಶ ಮನಸ್ಥಿತಿಯನ್ನು ಪಡೆಯಲು ರವೀಂದ್ರನಾಥ ಠಾಕೂರ್ ಅವರು ಏಕಚಿತ್ತದಿಂದ, ಅರಿವಿನೆಡೆಗೆ ಸಾಗುವ ತಹತಹದಿಂದ, ಸಾಧನೆಯ ದಾರಿಯಲ್ಲಿ ಬಂದ ಎಲ್ಲದರ ಸಾರ ಹೀರಿಕೊಳ್ಳುತ್ತಾ ಮುನ್ನಡೆದ ಪರಿಯ ದರ್ಶನವನ್ನು ಈ ಉಪನ್ಯಾಸ ನೀಡಿದೆ.

ಈ ಉಪನ್ಯಾಸ ಓದಿದ ಯಾರಿಗೇ ಆದರೂ ಶಿವಕುಮಾರ್ ಅವರ ಪಾಂಡಿತ್ಯದ ಹರವು, ಗ್ರಹಿಕೆ, ಮತ್ತು ವಿಶ್ಲೇಷಣಾ ಸಾಮರ್ಥ್ಯ ಹಾಗೂ ಸಂವಹನಾ ಕೌಶಲಗಳೂ ಗೋಚರಿಸುತ್ತವೆ. ನೂರಾರು ಪುಟಗಳಷ್ಟು ಬರೆಯಬಹುದಾದ ವಿಷಯವನ್ನು ಸಂಕ್ಷೇಪಗೊಳಿಸಿ ಕೆಲವೇ ಪುಟಗಳಲ್ಲಿ, ವಿಷಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ಸಮರ್ಥವಾಗಿ, ಸೊಗಸಾಗಿ ಮಂಡಿಸಿದ್ದಾರೆ. ಇಡೀ ಉಪನ್ಯಾಸ ಒಂದು ರೀತಿ ರಸಯಾತ್ರೆಯ ಅನುಭವ ನೀಡುತ್ತದೆ. ಇಂತಹ ಉಪನ್ಯಾಸ ನೀಡಿದ ಶಿವಕುಮಾರ್ ಅವರಿಗೆ ಕಲಾಸಕ್ತರೆಲ್ಲರೂ ಆಭಾರಿಯಾಗಿದ್ದಾರೆ. ಹೃತ್ಪೂರ್ವಕ ಅಭಿನಂದನೆಗಳು ಶಿವಕುಮಾರ್.

ಹಾಗೇ ಇದನ್ನು ಸಮರ್ಥವಾಗಿ, ಸೊಗಸಾಗಿ ಅನುವಾದಿಸಿರುವ ಬಿ. ಆರ್. ವಿಶ್ವನಾಥ್ ಅವರಿಗೂ ಕೂಡ ಅಭಿನಂದನೆಗಳು ಸಲ್ಲಬೇಕು. ಕುರುಡು ಅನುವಾದ ಮಾಡದೆ, ವಿಷಯ ಗ್ರಹಿಸಿಕೊಂಡು, ಮೂಲಕ್ಕೆ ಧಕ್ಕೆ ಬಾರದಂತೆ, ಕನ್ನಡದ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ, ಭಾಷೆ, ಶೈಲಿ, ವಾಕ್ಯರಚನೆ ಎಲ್ಲವೂ ಸಹಜವಾಗಿ ಹೊಂದಿಕೊಂಡು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಅನುವಾದಿಸಿದ್ದಾರೆ. ಈ ಅನುವಾದ ವಿಶ್ವನಾಥ್ ಅವರೊಬ್ಬ ಉತ್ತಮ ಅನುವಾದಕರು ಎಂಬುದನ್ನು ಸಾಬೀತುಪಡಿಸಿದೆ. ಅವರು ಇನ್ನೂ ಹೆಚ್ಚು ಹೆಚ್ಚು ಕಲೆಯ ಬಗೆಗಿನ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಕನ್ನಡದಲ್ಲಿ ಕಲಾಸಾಹಿತ್ಯವನ್ನು ಹೆಚ್ಚಿಸಬೇಕೆಂದು ಸ್ನೇಹಪೂರ್ವಕ ಒತ್ತಾಯ ಮಾಡುತ್ತೇನೆ.

 

One Response to "ರವೀಂದ್ರನಾಥ ಠಾಕೂರ್: ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ"

  1. Thontadarya  November 19, 2016 at 10:10 pm

    namma lekhana prakatisiddakkagi vandanegalu. Ide models baari nimma e patrike nodide . Chennagide . Naanu e patrike iduvarege oodiye iralilla. Prasaara hegide ? Nanna Parichayada professor obbaru Kannada lipi sudharane bagge tumba chintanarha lekhana barediddare . Neevu prakatisuviradare adannu kalisi koduttene . E mail mulaka tilisi . Shbhashayagalu .

    Reply

Leave a Reply

Your email address will not be published.