ರಕ್ಷಣೆಯ ಮಂತ್ರ, ನಿಯಂತ್ರಣದ ತಂತ್ರ

ಅರುಣ್ ಜೋಳದಕೂಡ್ಲಗಿ

(ಸಾಮಾಜಿಕ ಸಂರಚನೆಯ ಕಣ್ಕಟ್ಟುಗಳನ್ನು ಒಡೆದು ನೋಡಲು ಒತ್ತಾಯಿಸುವ ಆತ್ಮಕಥನಗಳ ಓದು)

ಇತ್ತೀಚೆಗೆ ಓದಿದ ಎರಡು ಆತ್ಮಕಥನಗಳು ಹಲವು ಪ್ರಶ್ನೆಗಳನ್ನು, ಚಿಂತನೆಗಳನ್ನು ಹುಟ್ಟುಹಾಕಿದುವು. ಒಂದು ತೊಂಬತ್ತು ವಯಸ್ಸು ದಾಟಿದ ನಂತರ ಬರೆದ ಕೊಂಡಪಲ್ಲಿ ಕೋಟೇಶ್ವರಮ್ಮನವರ ‘ಒಂಟಿದಾರಿ’. ಇನ್ನೊಂದು ಎಪ್ಪತ್ತೈದು ಪೂರೈಸಿದ ಡಾ.ವಿಜಯಾ ಅವರ ‘ಕುದಿ ಎಸರು’. ಇಬ್ಬರೂ ನಾವು ಯಾಕೆ ಇದನ್ನು ಬರೆಯಬೇಕು ಎಂಬ ಪ್ರಶ್ನೆ ಎತ್ತುತ್ತಾರೆ. ಹಲವರ ಒತ್ತಾಯವೂ ತಾವು ಬರೆಯಲು ಕಾರಣ ಎನ್ನುತ್ತಾರೆ. ಈಗಾದರೂ ಇವರು ಬರೆದರಲ್ಲ ಅದೇ ಅಚ್ಚರಿ. ಯಾಕೆಂದರೆ ಇವೆರಡು ಪುಸ್ತಕಗಳನ್ನು, ಮಾತ್ರವಲ್ಲ, ಇಂತಹ ಹರಹಿನ ಹಲವು ಆತ್ಮಕಥನಗಳನ್ನು ಓದಿದ ನಂತರ ಇವರು ಇದುವರೆಗೂ ಇದನ್ನೆಲ್ಲ ತಮ್ಮ ಒಡಲೊಳಗೆ ಹೇಗೆ ಹುದುಗಿಸಿಟ್ಟುಕೊಂಡರಪ್ಪಾ ಅನ್ನಿಸುತ್ತದೆ.

ಹೀಗೆ ಮಾತುಗಳನ್ನು ಹುದುಗಿಸಿ ಇಟ್ಟುಕೊಳ್ಳುವ ತರಬೇತಿಗೆ ಹೆಣ್ಣು ಒಳಗಾಗಿರುತ್ತಾಳೆ. ಅವಳು ಮಾತಾಡುತ್ತಲೇ ಇರುತ್ತಾಳೆ. ಆದರೆ ಅವಳು ಇನ್ನಿತರ ಮಾತಿನಲ್ಲಿ ತನ್ನ ಮಾತನ್ನು ಮರೆಸಿಬಿಟ್ಟಿರುತ್ತಾಳೆ. ಹಾಗೆ ಮರೆಸಲು ಹಲವು ಕಾರಣಗಳು ಇರಬಹುದು. ಆದರೆ ಮೊದಲ ಕಾರಣವೇ ಅವಳು ಹೆಣ್ಣಾಗಿರುವುದು. ಕೋಟೇಶ್ವರಮ್ಮನವರ ಅನುಭವದಲ್ಲಿ ಲೋಕಕ್ಕೆ ವಿವರಿಸಬಹುದಾದ, ಲೋಕ ಕಂಡಿರುವ, ಕಣ್ಣಿಗೆ ಕಾಣುವ ದುಃಖಗಳಿವೆ. ಆದರೆ ವಿಜಯಮ್ಮನವರ ಕಥನದಲ್ಲಿ ಲೋಕಕ್ಕೆ ಇದನ್ನೆಲ್ಲಾ ಹೇಗೆ ಹೇಳುವುದು, ಯಾಕೆ ಹೇಳುವುದು, ಹೇಗೆ ಹೇಳದೇ ಇರುವುದು ಎಂಬ ಕಣ್ಣಿಗೆ ಕಾಣದ ಸಂಗತಿಗಳ ಅನಾವರಣ ಇದೆ. ಈಗಾಗಲೇ ನಾವು ಅನುವಾದಿತ ಮತ್ತು ಕನ್ನಡದ್ದೇ ಹಲವು ಆತ್ಮಕಥನಗಳನ್ನು ಓದಿದ್ದೇವೆ. ಒಂದೊಂದೂ ಅದರದ್ದೇ ಆದ ಅನನ್ಯತೆಯನ್ನು ಹೊಂದಿದ್ದೂ, ಈ ಎಲ್ಲ ಹೆಣ್ಣುಮಕ್ಕಳು ಕೈ ಕೈ ಹಿಡಿದು ಸಾಗುತ್ತಿರುವ ಪಯಣ ಇದೆಂದು ಭಾವಿಸುತ್ತೇನೆ. ಮತ್ತು ಅವರೆಲ್ಲಾ ತಮ್ಮ ತಮ್ಮ ಪಯಣದ ಜೊತೆಗೆ ನಮಗೆ ದಾರಿ ತೋರುತ್ತಾ, ಸೂಚನೆಗಳನ್ನು ಕೊಡುತ್ತಾ ನಮ್ಮನ್ನೂ ತಮ್ಮ ಜೊತೆ ಮುನ್ನೆಡೆಸುತ್ತಿದ್ದಾರೆ ಎಂದೇ ನಾನು ಅಂದುಕೊಳ್ಳುತ್ತೇನೆ.

ಒಂದಂತೂ ಖಚಿತ. ಆತ್ಮಚರಿತ್ರೆಗಳು ಅಪ್ಪಟ ಸಾಮಾಜಿಕ ಚರಿತ್ರೆಗಳು. ನಾವಿಲ್ಲಿ ಯಾವುದೋ ವ್ಯಕ್ತಿಯ ವೈಯಕ್ತಿಕ ಕಥೆಯನ್ನು ಓದುತ್ತಿರುವುದಿಲ್ಲ. ಬದಲಿಗೆ ಸಾಮಾಜಿಕ ರಚನೆಗಳು ವ್ಯಕ್ತಿಗಳನ್ನು ನಿಯಂತ್ರಿಸುವುದಕ್ಕೆ ಯಾವೆಲ್ಲ ಸಂಸ್ಥೆಗಳನ್ನು ಬಳಸಿಕೊಳ್ಳುತ್ತವೆ ಎನ್ನುವುದನ್ನು ಓದುತ್ತಿರುತ್ತೇವೆ. ಹೀಗಾಗಿ ಇದನ್ನು ಬರೆದವರು ನೆಪ ಮಾತ್ರ. ಅವರು ಬರೆದದ್ದು ಏನನ್ನು ಹೇಳುತ್ತಿದೆ ಎಂಬುದೇ ಸಮಾಜವನ್ನು ಸ್ವಸ್ಥವಾಗಿ ಕಟ್ಟಬೇಕು ಅಂದುಕೊಂಡವರೆಲ್ಲ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಗಳಾಗಿರುತ್ತವೆ. ಹೀಗೆ ಓದುವಾಗ ಓದಿನ ಸುಖವನ್ನೂ ಬದಿಗಿರಿಸಿ ತಾಳ್ಮೆಯಿಂದ ಮತ್ತು ಜವಾಬ್ದಾರಿಯಿಂದ ಓದುವ ಸಂಕಟಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಕುದಿ ಎಸರು ಓದುವಾಗ ಆರಂಭದ ಹಲವು ಪುಟಗಳಲ್ಲಿ ವಿಜಯಮ್ಮ ಯಾವ್ಯಾವುದೋ ವಿವರಗಳನ್ನು ತರುತ್ತಿದ್ದಾರೆ ಅನ್ನಿಸುತ್ತದೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದೂ ಅನ್ನಿಸುತ್ತದೆ. ಆದರೆ ಮುಂದೆ ಬರುವ ವಿವರಗಳನ್ನು ಓದಿದ ಮೇಲೆ ಗೊತ್ತಾಗಿ ಬಿಡುತ್ತದೆ. ಏನೆಂದರೆ, ವಿಜಯಮ್ಮ ಹೇಳಬೇಕಾದ್ದನ್ನು ಹೇಳಲು ಈ ಹೆಚ್ಚಿನ ವಿವರಗಳನ್ನು ‘ತಳ್ಳುಗೋಲು’ಗಳನ್ನಾಗಿ ಉಪಯೋಗಿಸುತ್ತಿದ್ದಾರೆ ಅಂತ. ಸುಟ್ಟು ಪಾರಾದವಳು ಮತ್ತೆ ಝಳವನ್ನೇಕೆ ನೆನಪಿಸಿಕೊಳ್ಳಬೇಕು? ಅನುಭವಿಸಬೇಕು? ಯಾರಿಗಾಗಿ? ಇದು ಅವರ ಲೇಖನಿಯನ್ನು ಮತ್ತೆ ಮತ್ತೆ ತಡೆದಿದೆ. ಅದು ಅರ್ಥವಾಗುತ್ತದೆ.

ಅವರು ಯಾಕೆ ಬರೆದಿದ್ದಾರೆ ಎಂಬುದಕ್ಕಿಂತಲೂ ನಾವು ಯಾಕೆ ಓದಬೇಕು ಎಂಬುದು ಹೆಚ್ಚು ಮಹತ್ವದ ಪ್ರಶ್ನೆ. ಸಾಮಾಜಿಕ ಸಂರಚನೆಯಲ್ಲಿ ಅಂಚಿಗೆ ದೂಡಲಾದ, ನಿರ್ಲಕ್ಷ್ಯಕ್ಕೆ ಒಳಗಾದ ಎಲ್ಲರ ಕಥನವೂ ಈ ಹಿನ್ನೆಲೆಯಲ್ಲಿ ಮುಖ್ಯವಾದುದು. ಈ ಮೂಲಕ ಸಾಮಾಜಿಕ ಸಂರಚನೆಯನ್ನು ಬದಲಿ ಕಣ್ಣುಗಳಿಂದ ನೋಡುವುದಕ್ಕಾಗಿ, ಅಧಿಕಾರವು ನಿಯಂತ್ರಣಗಳನ್ನು ಯಾವ ಯಾವ ರೂಪಗಳಲ್ಲಿ ಮಾಡುತ್ತದೆ ಎಂಬುದನ್ನು ಅರಿಯುವುದಕ್ಕಾಗಿ, ಈ ನಿಯಂತ್ರಣಕ್ಕಾಗಿಯೇ ಕುಟುಂಬವೂ ಸೇರಿದಂತೆ ಹಲವು ಸಂಸ್ಥೆಗಳನ್ನು ಹೇಗೆ ರೂಪಿಸಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಮತ್ತು ಈ ಎಲ್ಲದರ ಫಲವಾಗಿ ಈ ಕಟ್ಟೋಣದೊಳಗೆ ಬಾಳಿದ ಜೀವಗಳು ತಮ್ಮ ರೆಕ್ಕೆಗಳನ್ನು ಸುಟ್ಟುಕೊಂಡೂ ತಾವೇ ಅಪರಾಧೀ ಪ್ರಜ್ಞೆಯಿಂದ ನರಳುವುದು ಯಾಕೆ ಎಂಬುದನ್ನು ಕೇಳಿಸಿಕೊಳ್ಳುವುದಕ್ಕಾಗಿ ಇಂತಹ ಕೃತಿಗಳನ್ನು ಓದಬೇಕಾಗುತ್ತದೆ.

ಮನುಷ್ಯ ಗಡಿಯನ್ನು ನಿರ್ಮಿಸಿದ ದಿನದಿಂದಲೇ ಯುದ್ಧ ಕೂಡ ನಿರ್ಮಾಣವಾಗುತ್ತದೆ. ಹಾಗೆಯೇ ಅಧಿಕಾರ ವಲಯಗಳು ನಿರ್ಮಾಣವಾಗುತ್ತವೆ. ಈ ಅಧಿಕಾರ ಧಕ್ಕಿಸಿಕೊಳ್ಳಬೇಕೆಂದರೆ ನಿಯಂತ್ರಣಗಳನ್ನು ಹೇರಬೇಕಾಗುತ್ತದೆ. ಆದರೆ ಆ ನಿಯಂತ್ರಣಗಳು ನಿಯಂತ್ರಣಗಳ ಹೆಸರಿನಲ್ಲಿ ಇರುವುದಿಲ್ಲ. ಬದಲಿಗೆ ಅದು ರೂಢಿ, ಆಚಾರ, ನಡಾವಳಿ, ಭಕ್ತಿ, ಗೌರವ, ಮರ್ಯಾದೆ ಹೀಗೆ ಹತ್ತು ಹಲವು ಹೆಸರುಗಳಲ್ಲಿ ಇರುತ್ತವೆ. ಕುಟುಂಬ ಎಂಬ ಸಂಸ್ಥೆ ಮತ್ತು ವಿವಾಹ ಎಂಬ ಸಂಸ್ಥೆಗಳನ್ನು ಗಂಡು ಹೆಣ್ಣನ್ನು ನಿಯಂತ್ರಿಸುವುದಕ್ಕಾಗಿ ಬಹಳ ನಾಜೂಕಾಗಿ ಹೆಣೆದಿದ್ದಾನೆ. ತಲೆಮಾರುಗಳಿಂದ ತಲೆಮಾರುಗಳಿಗೆ ಇದನ್ನು ಯಶಸ್ವಿಯಾಗಿ ದಾಟಿಸಲಾಗುತ್ತಿದೆ. ಹೆಣ್ಣು ಈ ನಿಯಂತ್ರಣಗಳನ್ನು ಹೆಚ್ಚೂ ಕಡಿಮೆ ತಾನೇ ನಿರ್ವಹಿಸಿಕೊಳ್ಳುತ್ತಾಳೆ, ಒಪ್ಪುತ್ತಾಳೆ, ಒಪ್ಪಿಸುತ್ತಾಳೆ. ಇದು ಗಂಡಿನ ಕೆಲಸವನ್ನು ಸುಲಭವಾಗಿಸಿದೆ. ಹೀಗಾಗುವುದಕ್ಕೆ ಅನುಕೂಲವಾಗುವಂತೆ ಅವಳ ಪ್ರಜ್ಞೆಯ ವಿಕಾಸಕ್ಕೆ ಪೂರಕವಾಗುವ ಪರಿಸರವು ಅವಳಿಗೆ ಸಿಗದಂತೆ ವಂಚಿಸುವಲ್ಲೂ ಇವರು ಯಶಸ್ವಿಯಾಗಿದ್ದಾರೆ. ಸ್ತ್ರೀವಾದ ಎನ್ನುವ ಪದ ಕೇಳಿದ ಕೂಡಲೇ ಕೆಲವರಿಗೆ ನಡುಕ ಉಂಟಾಗುವುದು ಈ ಕಾರಣಕ್ಕೇ. ಹೀಗೆ ಹೆಣ್ಣನ್ನು ನಿಯಂತ್ರಿಸಲು ಮೊದಲು ಬಳಕೆಯಾಗುವುದೇ ಹೆಣ್ಣಿನ ದೇಹದ ಸಾಮಾಜೀಕರಣ. ಅಂದರೆ ಲೈಂಗಿಕತೆಯ ವಿಷಯದಲ್ಲಿ ಹೆಣ್ಣಿನ ದೇಹದ ಮೇಲೆ ಹೆಣ್ಣಿಗೇ ಯಾವ ಅಧಿಕಾರವೂ ಇಲ್ಲ ಅನ್ನುವುದನ್ನು ಸಂಪೂರ್ಣ ನಂಬಿಸಿರುವುದು. ಒಂದೋ ಅವಳು ಸಾರ್ವಜನಿಕರ ಸೊತ್ತು. ಇಲ್ಲವೇ ಅವಳು ಪತಿಯ ಸೊತ್ತು.

ಹಿಂಸೆಯನ್ನು ಸಹಿಸುವುದು ಏಕೆ?
‘ಕುದಿ ಎಸರಿ’ನಲ್ಲಿ ಲೇಖಕಿಯೂ ಸೇರಿದಂತೆ ಓದುಗರಿಗೂ ಕೂಡ ಮೊದಲು ಹುಟ್ಟುವ ಪ್ರಶ್ನೆ ಇವರು ಯಾಕೆ ಎಲ್ಲ ಹಿಂಸೆಗಳನ್ನು ತುಟಿಕಚ್ಚಿ ಸಹಿಸಿಕೊಂಡರು? ಎಂಬುದು. ಈ ಪ್ರಶ್ನೆಗೆ ಉತ್ತರ ಕೃತಿಯಲ್ಲಿಯೇ ಸಿಗುತ್ತದೆ. ಅದು ಅವರ ಮದುವೆಯ ಮರುದಿನವೇ ಕಾಣುತ್ತದೆ. ಲೇಖಕಿಯ ಮದುವೆಯ ಸಮಯದಲ್ಲಿ ತಂದೆ ಮೂಲೆಗುಂಪಾಗಿರುತ್ತಾರೆ. ತಾಯಿಯನ್ನು ಅವರು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದರು. ಚಿಕ್ಕಪ್ಪ, ಚಿಕ್ಕಮ್ಮನ ಸಾರಥ್ಯದಲ್ಲಿ ಮದುವೆಯಾಗುತ್ತದೆ. ಲೇಖಕಿಗೆ ತಾಯಿಯಿಲ್ಲದೆ ಅವರಿವರ ಮನೆಯಲ್ಲಿ ಕಳೆದ ಬಾಲ್ಯ ಮತ್ತ ಯೌವ್ವನದ ಕಾರಣದಿಂದ ಮದುವೆ ಎಂಬುದು ಒಂದು ಬಿಡುಗಡೆ ಎಂಬ ಭಾವ ಒಳಗೊಳಗೇ ಇತ್ತು.

ಹೀಗಾಗಿ ಮದುವೆಯ ಬಗೆಗೆ ಕನಸುಗಳಿಲ್ಲದಿದ್ದರೂ ನಿರಾಸಕ್ತಿಯೇನೂ ಇದ್ದಿರಲಿಲ್ಲ. ಆದರೆ ಲೈಂಗಿಕತೆ, ಲೈಂಗಿಕ ಜೀವನದ ಕುರಿತು ಅತಿಯಾದ ಮುಗ್ಧತೆ ಇತ್ತು. ತಾಯಿಯಿಲ್ಲದಿರುವುದೂ ಈ ವಿಷಯದಲ್ಲಿ ಅವರಿಗೊಂದು ಕೊರತೆಯೇ ಆಗಿತ್ತು. ಹೀಗಿರುವಾಗ ಮದುವೆಯ ನಂತರ ಮೊದಲ ರಾತ್ರಿಯೇ ಅವರಿಗೆ ಆಘಾತವಾಗುವಂತ ನಡತೆ ಅವರ ಗಂಡನಿಂದ ಆಗುತ್ತದೆ. ಆತ ಎಲ್ಲೆಂದರಲ್ಲಿ ಹಲ್ಲಿನಿಂದ ಕಚ್ಚಿದ ಗುರುತು ಮೈಮೇಲೆ ಎದ್ದು ಕಾಣುವಂತೆ ಇತ್ತು. ಇದನ್ನು ನೋಡಿದ ಅವರ ದೊಡ್ಡಮ್ಮ, ‘ಅಯ್ಯೋ ಅವನೆಂತಾ ರಾಕ್ಷಸನೇ’ ಎಂದು ಉದ್ಗರಿಸುತ್ತಾರೆ. ಅಲ್ಲಿದ್ದ ಎಲ್ಲರೂ ಇದನ್ನು ನೋಡಿ ಗಾಬರಿಯಾಗುತ್ತಾರೆ. ತಂದೆ ಒಳಗೊಳಗೇ ದುಃಖಿಸುತ್ತಾರೆ. ಆದರೆ ಯಾರೂ ಆತನನ್ನು ಆಕ್ಷೇಪಿಸುವುದಿಲ್ಲ. ಯಾರೂ ಆತನಿಗೆ ಬುದ್ಧಿಮಾತನ್ನಾಗಲೀ ಅಥವಾ ಸಲಹೆ ಸೂಚನೆಗಳನ್ನಾಗಲೀ ಕೊಡುವುದಿಲ್ಲ. ಇಷ್ಟಾದರೂ ಲೇಖಕಿಯನ್ನು ಅವನ ಜೊತೆ ಅವನ ಮನೆಗೆ ಕಳುಹಿಸುತ್ತಾರೆ. ಇಂತಹ ವರ್ತನೆ ಏನನ್ನು ಹೇಳುತ್ತದೆ? ಇಲ್ಲಿ ಆತನ ವರ್ತನೆ ಎಷ್ಟು ಅಮಾನುಷವಾದದ್ದೋ, ಅದನ್ನು ನೋಡಿಯೂ ತುಟಿ ಪಿಟಕ್ಕೆನ್ನದ ಉಳಿದವರ ವರ್ತನೆಯೂ ಅಮಾನುಷವಾದದ್ದೇ.

ಆದರೆ ಅದು ಅಮಾನುಷವೆಂದು ಲೋಕದ ಕಣ್ಣಿಗೆ ಕಾಣುವುದಿಲ್ಲ. ಯಾಕೆಂದರೆ ಎಲ್ಲರೂ ಹೆಣ್ಣು ಗಂಡನ ಸೊತ್ತು, ಆತ ಅವಳನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು. ಅದನ್ನೆಲ್ಲಾ ಸಹಿಸಿ ಬದುಕುವುದು ಹೆಣ್ಣಿಗೊಂದು ಮೌಲ್ಯ. ಅದೆಲ್ಲ ಅವಳ ಅದೃಷ್ಟ ಅಥವಾ ದುರದೃಷ್ಟ ಎಂದು ಭಾವಿಸುತ್ತಾರೆ.
ಹೀಗಾಗಿ ಅವನ ವರ್ತನೆ ನೋಡಿದ ಮೇಲೂ ಅವಳನ್ನು ಒಂಟಿಯಾಗಿ ಗಂಡನ ಮನೆಗೆ ಕಳಿಸುತ್ತಾರೆ. ಹೀಗಿರುವಾಗ ಅವಳು ಯಾವ ಭರವಸೆ ತಾಳಲು ಸಾಧ್ಯ? ಅವಳು ಒಂದೋ ಸಹಿಸಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ಎರಡು ದಾರಿ ಬಿಟ್ಟು ಅವಳಿಗೆ ಇನ್ನೊಂದು ದಾರಿ ಇರುವಂತೆ ನಮ್ಮ ಸಾಮಾಜಿಕ ಕಟ್ಟೋಣವೇ ಇರುವುದಿಲ್ಲ. ಮೂರನೇ ದಾರಿಯಾದ ಬಿಟ್ಟು ಬರುವುದಕ್ಕೆ ತಕ್ಕ ಅವಕಾಶವನ್ನು ಈ ಕಟ್ಟೋಣದಲ್ಲಿ ಮುಕ್ತವಾಗಿ ನೀಡಿಲ್ಲ. ವಿಜಯಾ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದೂ ಇದೆ. ಅದು ವಿಫಲವಾಯ್ತು. ಇನ್ನುಳಿದದ್ದು ಸಹನೆಯ ದಾರಿಯೊಂದೇ. ತನ್ನ ಬಾಲ್ಯದ ಚಿತ್ರ ಕೊಡುವಾಗ ವಿಜಯಾ ಮತ್ತೆ ಮತ್ತೆ ತನಗೆ ವಿಪರೀತ ಹಸಿವು ಎನ್ನುವುದನ್ನು ಹೇಳುತ್ತಾರೆ. ಆ ಹಸಿವಿಗೂ ಮತ್ತು ಅವರ ಸಹಿಸುವಿಕೆಗೂ ಕೂಡ ಸಂಬಂಧವೊಂದು ಇರುತ್ತದೆ. ಯಾಕೆಂದರೆ ಹಸಿದ ಹೊಟ್ಟೆ ತಣಿಸಿಕೊಳ್ಳಲು ಅವರು ಜೀತದೆತ್ತಿನಂತೆ ಗಂಡನ ಮನೆಯಲ್ಲಿ ದುಡಿವುದು ಅನಿವಾರ್ಯ. ಹಸಿವು, ಸೂರು, ಮರ್ಯಾದೆ ಈ ಮೂರು ಹೆಣ್ಣನ್ನು ಕೋಟೆಯಂತೆ ಸುತ್ತುವರಿದಿರುತ್ತದೆ. ಆಗವಳು ಪ್ರತಿಭಟನೆಯ ದಾರಿಗೆ ಹೊರಟರೆ ಇವುಗಳಲ್ಲಿ ಯಾವುದಾದರೂ ಒಂದೆರಡು ಅಂಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆ ರೀತಿಯಲ್ಲಿ ಈ ಸಂಸ್ಥೆಯನ್ನು ರೂಪಿಸಿಕೊಡಲಾಗಿದೆ. ತವರಿನ ಬಲವಿಲ್ಲದ ವಿಜಯಾ ಇವುಗಳನ್ನು ಸಹಿಸಿಕೊಳ್ಳುತ್ತಲೇ ಹೋಗುತ್ತಾರೆ. ಗಂಡ ಎಂಬುದೇ ಅಧಿಕಾರದ ಹುದ್ದೆ ಎಂದು ಅವರೂ ನಂಬಿರದಿದ್ದರೆ ಮತ್ತು ಹೊರಬಂದು ಬದುಕಬಲ್ಲ ಸಾಧ್ಯತೆ ಇದ್ದಿದ್ದರೆ ಅವರಿಗೆ ಈ ಸಹನೆಯ ಅಗತ್ಯ ಕಾಣುತ್ತಿರಲಿಲ್ಲವೋ ಏನೋ. ಅದನ್ನು ನಾವು ಮುಂದೆ ಇದೇ ಕೃತಿಯಲ್ಲಿ ಕಾಣುತ್ತೇವೆ.

ಹೆಣ್ಣು ದೇಹದ ಮೇಲೆ ಅನ್ಯರ ಅಧಿಕಾರ: ಹೆಣ್ಣಿನ ದೇಹವನ್ನೂ ಸಾಮಾಜಿಕ ಸಂಗತಿಯನ್ನಾಗಿಸಲು ಅವಳ ದೇಹದ ಸಂಗತಿಗಳೆಲ್ಲದರ ಮೇಲೆ – ಲೈಂಗಿಕತೆ, ಗರ್ಭ ಧರಿಸುವ ಸಾಧ್ಯತೆ, ಹೆರಿಗೆಯ ಸಂದರ್ಭದ ಅಪಾಯಗಳ ಸಾದ್ಯತೆ, ದೈಹಿಕ ಸಾಮಥ್ರ್ಯ ಆಧರಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ – ಹೆಣ್ಣು ತಾನೇ ನಿರ್ಣಯ ತೆಗೆದುಕೊಳ್ಳಬಲ್ಲ ಅವಕಾಶವನ್ನು ಅವಳಿಂದ ವಂಚಿಸಲಾಗಿದೆ. ಇದನ್ನು ಕುಟುಂಬ ಮತ್ತು ಹಿತೈಷಿಗಳ ಹೆಸರಿನಲ್ಲಿ ಮತ್ತು ಸಮಾಜ ಏನನ್ನುತ್ತದೆ ಎಂಬ ಭೀತಿಯ ಮಾತಿನಲ್ಲಿ ಸಾಧಿಸಿಕೊಳ್ಳಲಾಗುತ್ತದೆ. ಮಾತ್ರವಲ್ಲ, ಹಾಗೇನಾದರೂ ಅವಳು ನಿರ್ಧಾರ ತೆಗೆದುಕೊಂಡರೆ ಅವಳೇ ಕೀಳರಿಮೆಗೆ ಒಳಗಾಗುವಂತೆ ಅವಳ ಮನಸ್ಸನ್ನು ತಿದ್ದಲಾಗಿದೆ. ಗರ್ಭ ಧರಿಸುವ ಮತ್ತು ಗರ್ಭ ತೆಗೆಯುವ ಎರಡೂ ಅಧಿಕಾರ ಅವಳಿಗಿಲ್ಲ. ಈ ಕಥನದಲ್ಲೂ ಅತಿ ಕಾಮಿ ಗಂಡ, ಹೆಂಡತಿ ಗರ್ಭ ಧರಿಸಿದ ಕೂಡಲೇ ಕೋಪಕ್ಕೆ ಒಳಗಾಗುತ್ತಾನೆ. ಅವಳೇ ಏನೋ ಅಪರಾಧ ಮಾಡಿದಳೇನೋ ಎಂಬಂತೆ ಅವಳನ್ನು ಗಂಡನಲ್ಲದೆ ಮನೆಮಂದಿಯೆಲ್ಲ ನೋಡುತ್ತಾರೆ. ಬಹುಶಃ ಆರ್ಥಿಕ ದುಸ್ಥಿತಿಗಾಗಿ ಇವರೆಲ್ಲಾ ಹೀಗೆ ಮಾಡುತ್ತಿದ್ದಾರೇನೋ ಎಂದು ಇದನ್ನು ಸಹಾನುಭೂತಿಯಿಂದ ನೋಡಲು ವಿಜಯಾ ಪ್ರಯತ್ನಿಸುತ್ತಾರೆ. ಘಟನೆ ನಡೆದ ಆಗ ಮಾತ್ರವಲ್ಲ, ಬರೆಯುತ್ತಿರುವ ಈಗ ಕೂಡ! ಆತನ ವರ್ತನೆಗೆ ಕಾರಣ ಕೇವಲ ಆರ್ಥಿಕ ಸಮಸ್ಯೆ ಅಲ್ಲ ಎಂಬುದು ಸ್ಪಷ್ಟ. ಉದಾಹರಣೆಗೆ, ಆತನ ತಮ್ಮ ತನ್ನ ಹೆಂಡತಿಯನ್ನು ಇಷ್ಟು ಕೇವಲವಾಗಿ ನಡೆಸಿಕೊಂಡಿಲ್ಲ. ಹೀಗಾಗಿ ಆಕೆಗೂ ವಿಜಯಾರ ಸಮಸ್ಯೆಯ ತೀವ್ರತೆ ಅರ್ಥವಾಗಿಲ್ಲ. ಆಕೆ ತನ್ನ ಗಂಡನ ಮನೆಯವರನ್ನು ಬುಟ್ಟಿಗೆ ಹಾಕಿಕೊಳ್ಳುವ ಒಳದಾರಿಯ ವಿದ್ಯೆಯನ್ನು ಕಲಿತೇ ಆ ಮನೆಗೆ ಬಂದವಳು. ಇದು ಗಂಡು ಪರವಾದ ಸಂಸ್ಥೆಯನ್ನು ಒಪ್ಪಿಯೂ ತನ್ನ ಹೊಟ್ಟೆಪಾಡಿಗೆ ಸಣ್ಣ ಅನುಕೂಲ ಮಾಡಿಕೊಳ್ಳುವ ಒಳದಾರಿ ಅಷ್ಟೆ. ಹಾಗಾಗಿ ಅವರುಗಳು ಎಂದೂ ಗಂಡುಪರ ವ್ಯವಸ್ಥೆಯನ್ನು ಪ್ರಶ್ನಿಸುವುದಿಲ್ಲ.

ಹೆಣ್ಣು ದೇಹದ ಮೇಲೆ ಗಂಡು ಅಧಿಕಾರವನ್ನು ಒಪ್ಪಿಕೊಳ್ಳುವ ಪರಿ ಎಷ್ಟು ವಿಪರೀತಕ್ಕೆ ಬೇಕಾದರೂ ಹೋಗಬಹುದು ಎಂಬುದನ್ನು ಸಾಬೀತು ಮಾಡುವ ಕೃತಿಯಾಗಿಯೂ ಇದನ್ನು ನೋಡಬಹುದು. ಮೊದಲ ಬಾರಿ ಗರ್ಭಿಣಿಯಾದಾಗ ತುಂಬು ಬಸುರಿ ತವರಿನಲ್ಲಿ ಇದ್ದಾಗಲೂ ರಾತ್ರಿಯೆಲ್ಲಾ ವಿಕೃತ ಕಾಮ ಮಾಡುವ ಲೇಖಕಿಯ ಗಂಡ ಆ ಬಗ್ಗೆ ನಾಚಿಕೆಯನ್ನೂ ಹೊಂದದವ. ಇದನ್ನೆಲ್ಲಾ ಗಮನಿಸಿದ ಲೇಖಕಿಯ ಚಿಕ್ಕಪ್ಪ ‘ಇದೆಂಥಾ ರಾಕ್ಷಸನ ಕೈಗೆ ಕೊಟ್ಟೆವೋ ಈ ಗಿಣಿಮರಿಯನ್ನ’ ಅಂತ ದುಃಖಿಸುತ್ತಾರೆ. ಆದರೆ ಗಮನಿಸಿ: ಅವರು ಎಲ್ಲೂ ಇದನ್ನೆಲ್ಲಾ ನೀನು ಪ್ರತಿಭಟಿಸು ಎಂದು ಹೇಳುವುದೇ ಇಲ್ಲ. ಇದು ಪರೋಕ್ಷವಾಗಿ ತನ್ನ ದುರದೃಷ್ಟವನ್ನಷ್ಟೇ ಹಳಿದುಕೊಳ್ಳುತ್ತಾ ಸಹಿಸಿಕೊಳ್ಳುವುದನ್ನೇ ಪೋಷಿಸುತ್ತದೆ. ಸದಾ ಖಾಯಿಲೆ ಬಿದ್ದು ಗಂಡನ ಅನಾಸ್ಥೆಗೆ ಒಳಗಾದ ತನ್ನ ತಾಯಿ ಅಕಾಲ ಮರಣ ಅಪ್ಪಿದ್ದನ್ನು ನೋಡಿಯೂ ಇವರಾರಲ್ಲೂ ಇದೊಂದು ಪ್ರತಿಭಟಿಸಬೇಕಾದ ಸಂಗತಿ ಎಂಬ ಅರಿವನ್ನು ಮೂಡಿಸುವುದಿಲ್ಲ. ಆಕೆ ಪುನಃ ಗರ್ಭಿಣೆಯಾದಾಗ ಆತನ ನಡೆ ಕ್ರೌರ್ಯದ ಕಡೆ ತಿರುಗುತ್ತದೆ. ಅದು ಗರ್ಭದೊಳಗೆ ಕೈತೂರಿಸಿ ಗರ್ಭವನ್ನು ಕಿತ್ತು ತೆಗೆಯುವ ಕ್ರೌರ್ಯ. ಇದಂತೂ ಕೊಲೆಗೆ ಸಮ.

ವಿಪರೀತ ರಕ್ತಸ್ರಾವವಾಗಿ ಹೆಂಡತಿ ಸಾಯುವ ಸಂಭವವಿದೆ ಎಂದು ಗೊತ್ತಿದ್ದೂ ಇದನ್ನಾತ ಪುನರಾವರ್ತಿಸುತ್ತಾನೆ. ನಿರಂತರ ಗರ್ಭಪಾತ, ಅಪೌಷ್ಠಿಕತೆ, ವಿಪರೀತ ಕೆಲಸಗಳ ಪರಿಣಾಮ ಇವರ ದೇಹದ ಮೇಲಾಗಿ ಡಾಕ್ಟರ್ ಎಚ್ಚರಿಕೆ ಕೊಡುವ ತನಕ ಹೋಗುತ್ತದೆ. ಆಗ ಆತನ ಪ್ರತಿಕ್ರಿಯೆ ಹೀಗಿದೆ: “ನೋಡು ನಿನಗೆ ಖಾಯಿಲೆ ವಾಸಿ ಆಗೋಲ್ಲ ಅನ್ಸುತ್ತೆ. ನಮ್ಮ ಮನೆಯಲ್ಲಿ ನನ್ನ ತಾಯಿ 22-24ರ ವಯಸ್ಸಿಗೇ ತೀರಿಕೊಂಡರು. ನನ್ನ ಸಹೋದರಿಯೂ ಹಾಗೇ. ಇದು ನಮ್ಮ ಮನೆಯಲ್ಲಿ ಪಾರಂಪರಿಕ ಇರಬೇಕು. ನಿನಗೂ ಈಗ 22 ಅಲ್ಲವೇ? ಇನ್ನು ಆರು ತಿಂಗಳೋ ವರ್ಷವೋ ಬದುಕುತ್ತೀ ಅನ್ಸುತ್ತೆ. ಇನ್ನು ಔಷಧಿಗೇಕೆ ಖರ್ಚು ಮಾಡಬೇಕು? ವೃಥಾ ಖರ್ಚು. ಎಲ್ಲಿಂದ ತರೋದು ಹಣ? ಅಲ್ಲವಾ? ಸ್ವಲ್ಪ ಹಾಗೇ ಸಾವರಿಸಿಕೊಂಡು ಬಿಡು. ಹ್ಞಾಂ” ಅಂದರು. ಮೂಗೆತ್ತಿನಂತೆ ತಲೆಯಾಡಿಸಿದ್ದೆ! ಅನ್ನುತ್ತಾರೆ ಲೇಖಕಿ. ನಮ್ಮ ದೇಶದಲ್ಲಿ ಗಂಟೆಗೆ ಐದು ಜನ ಬಾಣಂತಿಯರು ಸಾಯುವುದು ಕೇವಲ ಆಕಸ್ಮಿಕವೇ? ಇವರನ್ನೇನೋ ಪಕ್ಕದ ಮನೆಯವರು ಬಚಾವು ಮಾಡಿದರು. ಅವರೂ ಸಿಕ್ಕದವರು? ಅಂದರೆ ಹೆಣ್ಣಿನ ದೇಹವನ್ನು, ಅದರ ಆರೈಕೆಯನ್ನು ನಿರಾಕರಿಸುವ ಸಾಮಾಜಿಕ ಸಂಸ್ಥೆಗಳನ್ನು ಪೋಷಿಸುವುದೇ ಅಲ್ಲದೇ ಅದೇ ಅವರನ್ನು ಕಾಪಾಡುವ ಸಂಸ್ಥೆಗಳು ಎಂದು ಸುಳ್ಳಾಗಿ ಬಿಂಬಿಸಲಾಗಿದೆ ಅಲ್ಲವೇ?

ಇದನ್ನು ಸಮರ್ಥಿಸುವಂತ ವಿವರಗಳು ‘ಒಂಟಿದಾರಿ’ಲ್ಲೂ ಸಿಗುತ್ತವೆ. ಸದಾ ಜನರ ಕಷ್ಟಗಳಿಗೆ ಹೋರಾಡುವ ಕೊಂಡಪಲ್ಲಿ ಸೀತಾರಾಮ್ ಅವರ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಿದವರು ಕೋಟೇಶ್ವರಮ್ಮ. ಜನ ಚಳುವಳಿಗಾಗಿ ಭೂಗತ ವಾಸ ಮಾಡಿದ್ದಾಗ ಅವರು ಗರ್ಭಿಣಿಯಾಗಿರುತ್ತಾರೆ. “ಕೆಲಸ ಮಾಡಲಾದಿದ್ದರೂ ಪಕ್ಷಕ್ಕೆ ಅಡ್ಡಿಯಾಗುವೆನೇನೋ ಎಂದು ನನಗನ್ನಿಸಿತು. ಪಕ್ಷದ ಕಾಮ್ರೇಡರಿಗೂ ಹಾಗನ್ನಿಸಿತೇನೋ, ಗರ್ಭಪಾತ ಮಾಡಿಸಬೇಕೆಂದುಕೊಂಡರು. ಅಜ್ಞಾತದಲ್ಲಿರುವ ಹೆಣ್ಣನ್ನು ಯಾವ ಡಾಕ್ಟರ ಬಳಿಗೆ ಒಯ್ದರೂ ನಾಯಕರಿಗೆ ಆಪತ್ತು ಒದಗುವುದೇನೋ ಎಂಬ ಉದ್ದೇಶದಿಂದ ಬಸುರಿಳಿಯಲು ನಾಟಿ ಮದ್ದು ನೀಡಿದರು. ಗರ್ಭಪಾತವಾಯಿತಾದರೂ ರಕ್ತಸ್ರಾವ ನಿಲ್ಲಲಿಲ್ಲ.” ಆಮೇಲೆ ಒಬ್ಬ ಪಕ್ಷದ ಪರ ಮಹಿಳಾ ಡಾಕ್ಟರ್ ಬಂದು ಇನ್ನೆಂದೂ ಹೀಗೆ ಮಾಡಬೇಡಿ. ನಾನು ಬರುವುದು ಒಂದು ಗಂಟೆ ತಡವಾಗಿದ್ದರೂ ಇವರ ಪ್ರಾಣ ಉಳಿಯುತ್ತಿರಲಿಲ್ಲ ಎನ್ನುತ್ತಾರೆ. ಇಲ್ಲಿ ಗಮನಿಸಬೇಕಾದ್ದು ಗರ್ಭ ತೆಗೆಯುವ ನಿರ್ಧಾರ ತೆಗೆದುಕೊಳ್ಳುವವರು ಯಾರು ಮತ್ತು ಅದು ಹೇಗೆ ಪ್ರಶ್ನಾರ್ಹವಲ್ಲ ಎಂಬ ಮನಸ್ಥಿತಿ. ಮತ್ತು ಹೆಣ್ಣು ಗಂಡಿನ ಅನುಕೂಲಕ್ಕಷ್ಟೆ ಇರಬೇಕಾದವಳು ಎಂಬುದರ ಕುರಿತಾದ ಒಪ್ಪಿತ ನಿಲುವು ಸಮಾಜ ಬದಲಿಸಬೇಕು ಎಂದು ಹೊರಡುವವರಲ್ಲೂ ಹಾಗೇ ಇದೆ ಎಂಬುದು. ಹೀಗಿರುವಲ್ಲಿ ಕುಟುಂಬ ಮತ್ತು ವಿವಾಹ ಸಂಸ್ಥೆಗಳು ಹೆಣ್ಣಿನ ರಕ್ಷಣೆಗಾಗಿ ಇದೆ ಎಂಬ ಮಿಥ್ಯೆಯನ್ನು ಎಷ್ಟೊಂದು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಈ ಮಿಥ್ಯೆಯನ್ನು ಹೆಣ್ಣಿನ ಮನಸ್ಸಿನಲ್ಲಿ ಭೀತಿಯನ್ನಾಗಿಸಿ ಅವಳನ್ನು ಆಳಲಾಗುತ್ತದೆ. ಈ ಆಳ್ವಿಕೆಗೆ ಸಾಮಾಜಿಕ ಸಮ್ಮತಿಯೂ ಇದೆ. ಹಲವೊಮ್ಮೆ ಇದು ಮೌಲ್ಯವೂ ಆಗಿದೆ. ಹೆಣ್ಣನ್ನು ಆಳಲಾರದ ಗಂಡು ದುರ್ಬಲ ಎಂಬ ಒತ್ತಡವೂ ಗಂಡಿನ ಮೇಲೆ ಇದೆ. ಈ ಭೀತಿ ಎಷ್ಟೊಂದು ವಿಪರೀತಕ್ಕೆ ಹೋಗಬಹುದು ಎಂಬುದಕ್ಕೆ ವಿಜಯಾರ ಬದುಕು ಕೂಡ ಒಂದು ಸಾಕ್ಷಿ. ಡಾಕ್ಟರರ ಟ್ರೀಟ್‍ಮೆಂಟ್‍ನಿಂದಾದ ತಪ್ಪಿನಿಂದ ಅವರ ಪತಿ ನಿರ್ವೀರ್ಯನಾಗುತ್ತಾರೆ. ಆದರೆ ಅವರ ಕಾಮುಕತೆ ನಿಲ್ಲುವುದಿಲ್ಲ. ಈಗದು ಇನ್ನಷ್ಟು ವಿಕೃತಿಗೆ ಎಡೆಮಾಡಿಕೊಡುತ್ತದೆ. ಈ ವಿವರಗಳಂತೂ ಭಯಾನಕ. ದೆಹಲಿಯ ಹುಡುಗಿ ನಿರ್ಭಯಾಳನ್ನು ರೇಪ್ ಮಾಡಿ ಅವರ ಯೋನಿಯೊಳಗೆ ಕಬ್ಬಿಣದ ರಾಡ್‍ಗಳನ್ನು ತುರುಕಿದ ಕ್ರೌರ್ಯ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮಾತ್ರವಲ್ಲ ಅದೇ ಅವಳ ಸಾವಿಗೂ ಮುಖ್ಯ ಕಾರಣವಾಗಿತ್ತು. ಇಲ್ಲಿಯೂ ನಳ್ಳಿ, ರಾಡ್ ಇತ್ಯಾದಿಗಳನ್ನು ತುರುಕುವ ವಿವರಗಳಿವೆ. ಹೀಗೆ ತುರುಕುವ ಹಿಂಸಾನಂದ ಯಾವರೀತಿಯದು? ಇದನ್ನು ಸಹಿಸಿದ ಸಹನೆ ಯಾವ ರೀತಿಯದು? ಅರ್ಥವಾಗುವುದು ಸುಲಭವಲ್ಲ. (ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ದೇಹದ ಕುರಿತು ಹೊಸ ಅರಿವನ್ನು ಪ್ರತಿ ಮಗುವಿಗೂ ಕೊಡುವ ಅನಿವಾರ್ಯತೆ ಇದೆ ಎಂಬುದನ್ನು ಈ ಕೃತಿಯ ಓದು ಒತ್ತಾಯಿಸುತ್ತದೆ.) ಇಷ್ಟೊತ್ತಿಗಾಗಲೇ ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದಾರೆ. ಜೊತೆಗೆ ಸ್ನೇಹಿತರ ಬಳಗ ಸಿಗತೊಡಗಿದೆ.

ಇದರಿಂದಾಗಿ ಈ ಹಿಂಸೆ ಹೊರಗಿನವರಿಗೆ ತಿಳಿಯತೊಡಗುತ್ತದೆ. ಹೆಣ್ಣನ್ನು ನಿಯಂತ್ರಿಸುವ ಇನ್ನೊಂದು ದೊಡ್ಡ ಅಸ್ತ್ರ ಅವಳನ್ನು ಮನೆಯಿಂದ ಹೊರಗೆ ಹಾಕುವುದು. ಹೀಗೆ ಹೆದರಿಸಲು ತಾನು ಅವಳನ್ನು ಬಿಟ್ಟುಬಿಟ್ಟಿದ್ದೇನೆ ಎಂದು ವಿಜಯಾರ ಪತಿ ಪ್ರಚಾರಮಾಡಿ ತೊಡಕುನೀಡಲು ಪ್ರಯತ್ನಿಸುತ್ತಾರೆ. ಮನೆಯೊಳಗಿನ ಅಪಮಾನ ಮನೆ ಹೊರಗೂ ಚಾಚುತ್ತದೆ. ಆಗಲೇ ಹೆಂಗಸರಿಗೆ ಭಂಡ ಧೈರ್ಯ ಶುರುವಾಗುವುದು. ಸ್ನೇಹಿತರ ಬೆಂಬಲವೂ ಸಿಕ್ಕಿದ್ದರಿಂದ ಅವರು ಹೊರಬರುವ ದೈರ್ಯ ಮಾಡುತ್ತಾರೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ ಇದೆ. ಹೀಗೆ ಹೊರಬಂದ ಮೇಲೂ ಅವರಿಗೆ ತನ್ನ ಅಪ್ಪ, ಚಿಕ್ಕಪ್ಪ ಮೊದಲಾದವರು ಬೆಂಬಲಿಸುತ್ತಾರೋ ಇಲ್ಲವೋ ಎಂಬ ಅಳುಕು ಇರುತ್ತದೆ. ಈ ಹಿಂದೆ ನಾನು ಹೇಳಿದಂತೆ ಹೆಣ್ಣು ಹಿಂಸೆ ಸಹಿಸಲು ಇದೂ ಪ್ರಮುಖ ಕಾರಣ. ಅಚ್ಚರಿ ಎಂಬಂತೆ ಅವರು ಇವರ ನಿರ್ಧಾರದ ಪರ ಇರುತ್ತಾರೆ. ಅದಕ್ಕೆ ಅತಿಮುಖ್ಯ ಕಾರಣ ಗೆಳತಿ ಕಮಲಮ್ಮನವರು ಆತನ ಎಲ್ಲ ಲೈಂಗಿಕ ವಿಕೃತಿಗಳನ್ನು ಅವರಿಗೆ ಹೇಳಿದ್ದು. ಈ ಕ್ರೌರ್ಯದ ಅರಿವಾಗದಿದ್ದಲ್ಲಿ, ಹಿಂದೊಮ್ಮೆ ಅವರ ಚಿಕ್ಕಮ್ಮ ಹೇಳಿದಂತೆ ಹೊಂದಾಣಿಕೆಯ ಉಪದೇಶ ಖಂಡಿತಾ ಇರುತ್ತಿತ್ತು. ವಿಜಯಾರ ಮನೆಕೆಲಸದಾಕೆ, “ನಾವೆಲ್ಲಾ ಇಲ್ವಾ? ಗಂಡಸೇ ಎಲ್ಲಾ ಅಂತ ಕುಂತ್ಕಾ ಬ್ಯಾಡಿ. ಬಿಟ್ಟೊಗೀರಿ ಅತ್ತಾಗ” ಎಂದು ಸ್ಪಷ್ಟವಾಗಿ ಹೇಳುವುದು ಶಿಷ್ಟ ಕುಟುಂಬದ ಆದರ್ಶದ ಬೋಧನೆಯ ಆಚೆಗಿರುವುದರಿಂದಲೇ. “ತಂದೆಯ ಗ್ರೀನ್ ಸಿಗ್ನಲ್ ನನ್ನಲ್ಲಿ ನೂರಾನೆಯ ಬಲ ಕೊಟ್ಟಿತ್ತು” ಅನ್ನುತ್ತಾರೆ ವಿಜಯಾ. ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ, ಹಲವು ಹೆಂಗಸರೊಂದಿಗೆ ಸಂಬಂಧ ಹೊಂದಿದ್ದ ವಿಜಯಾರ ತಂದೆ ಮಗಳ ಕಷ್ಟಕ್ಕೆ ಮರುಗುತ್ತಾರೆ ನಿಜ. ಆದರೆ, ಅಳಿಯ ವಿಕೃತ ಹಿಂಸೆ ಕೊಡುತ್ತಾನೆ ಎಂದು ತಿಳಿದಾಗ ಮಾತ್ರ ಕಠಿಣ ನಿಲುವಿಗೆ ಬರುತ್ತಾರೆ.

ಹೆಂಡತಿ ತನ್ನನ್ನು ಬಿಟ್ಟಿರಲು ಸಿದ್ಧ ಎಂದಾಕ್ಷಣವೇ ಆಘಾತಕ್ಕೆ ಒಳಗಾಗುವುದು ವಿಜಯಾರ ಪತಿಯಷ್ಟೇ ಅಲ್ಲ. ಅವರ ಮೈದುನ ಮತ್ತು ಅವನ ಹೆಂಡತಿ ಕೂಡ. ಯಾಕೆಂದರೆ ಇವಳು ಹೇಗೆ ಗಂಡನನ್ನು ಬಿಟ್ಟು ಒಂಟಿಯಾಗಿ ಬದುಕುವುದು ಸಾಧ್ಯ ಎಂದೇ ಅವರೆಲ್ಲಾ ಭಾವಿಸುತ್ತಾರೆ. ಇದೂ ಕೂಡ ಕುಟುಂಬದ ಕುರಿತ ಮಿಥ್ಯಾ ಕಟ್ಟಡವನ್ನೇ ಹೇಳುತ್ತಿದೆ. ಇವೆಲ್ಲದರ ನಡುವೆ ತನ್ನನ್ನು ಕಾಲೇಜಿಗೆ ಕಳಿಸುತ್ತಿರುವ ಗಂಡನೆಡೆಗೆ ಕೃತಜ್ಞತೆ – ಅದು ತನ್ನ ಹಕ್ಕು ಎಂಬ ಅರಿವಿಲ್ಲದ ಕಾರಣಕ್ಕೆ – ಸ್ವಲ್ಪ ಹೆಚ್ಚೇ ಇವರಿಗಿರುತ್ತದೆ. ಆದರೆ ಯಾವಾಗ ಅವರಿಗೆ ಕಲಾಮಂಡಲದ ಪರಿಚಯ ಆಗುತ್ತದೋ ಆಗ ಅವರ ಚಿಂತನೆ ಬದಲಾಗತೊಡಗುತ್ತದೆ. ಅದಕ್ಕೂ ಮೊದಲು ಅವರು ಉದ್ಯೋಗ ಆರಂಭಿಸಿದ್ದರೂ ಆಗಲೂ ಅವರಲ್ಲಿ ಪ್ರಜ್ಞೆಯೊಂದು ಮೊಳೆತಿರಲಿಲ್ಲ. ವಿಜಯಾ ಮತ್ತು ಕೋಟೇಶ್ವರಮ್ಮ ಇಬ್ಬರೂ ಗಂಡ ಇದ್ದಕ್ಕಿದ್ದಂತೆ ತಮ್ಮನ್ನು ತೊರೆದ ಮೇಲೆ ತಮ್ಮೊಳಗಿನ ಪ್ರಜ್ಞೆಯನ್ನು ಬಡಿದೆಬ್ಬಿಸಿಕೊಂಡವರು. ಅಪ್ರಜ್ಞೆಯ ಕಾರಣಕ್ಕೆ ಹೆಂಗಸರು ತವರಿನಿಂದ ಸಿಕ್ಕ ಚಿಕ್ಕಪುಟ್ಟ ಸಂಪತ್ತನ್ನೂ ಕಳೆದುಕೊಳ್ಳುತ್ತಾರೆ. ಒಂಟಿದಾರಿಯ ಕೋಟೇಶ್ವರಮ್ಮನಂತೂ ತನಗೆ ಸಿಕ್ಕಿದ ಭೂಮಿಯನ್ನೂ, ತನ್ನ ಬಳಿ ಇದ್ದ ಒಡವೆಗಳನ್ನೂ ಗಂಡನಿಗೆ ಕೊಟ್ಟು ಮುಂದೆ ಆತ ಇದ್ದಕ್ಕಿದ್ದಂತೆ ತನ್ನನ್ನು ಬಿಟ್ಟಾಗ ಕೂಳಿಗೂ ಗತಿ ಇಲ್ಲದ ಸ್ಥಿತಿ ತಲುಪಿ ಅದು ಹೇಗೋ ಉದ್ಯೋಗ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಾರೆ. ಆದರೆ ಅದೇ ಕಾರಣಕ್ಕೆ ತಮ್ಮ ಮಕ್ಕಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗುತ್ತಾರೆ. ಇದಂತೂ ಅಕ್ಷ್ಯಮ್ಯ.

ಯಾಕೆಂದರೆ ಅವರ ಗಂಡ ಬೇರೆಯವರ ಭೂಹಕ್ಕಿಗಾಗಿ ಹೋರಾಟ ಮಾಡಿದ ಮುಂಚೂಣಿ ನಾಯಕ! ಇಲ್ಲಿ ಎಲ್ಲೂ ನೇರ ದೈಹಿಕ ಹಿಂಸೆ ಇಲ್ಲ. ಆದರೆ ತನ್ನ ಮಕ್ಕಳ ಸಾಂಗತ್ಯವನ್ನು ಕಳೆದುಕೊಳ್ಳುವ ದುರವಸ್ಥೆ ಯಾವ ರೀತಿಯಲ್ಲೂ ಕಡಿಮೆ ಹಿಂಸೆ ಅಲ್ಲ. ಆದರೆ ಸಮಾಜಕ್ಕೆ ಇವ್ಯಾವುದೂ ಕಾಣದೇ ಇರುವುದರ ಕುರಿತು ನಾವು ಯೋಚಿಸಬೇಕಿದೆ. ಇಳಿವಯಸ್ಸಿನಲ್ಲಿ ತನ್ನ ತಪ್ಪಿಗಾಗಿ ಅಳುತ್ತಾ ಹೆಂಡತಿಯನ್ನು ಒಮ್ಮೆ ನೋಡಬೇಕು ಎಂದು ಅಂಗಲಾಚುವ ಸೀತಾರಾಮರ ಬೇಡಿಕೆಯನ್ನು ಕೋಟೇಶ್ವರಮ್ಮ ನಿರಾಕರಿಸುತ್ತಾರೆ. ಆಗ ಅವರಿಗೆ ಸಲಹೆ ಕೊಡುವ ಪಕ್ಷದ ಕಾಮ್ರೇಡರ ಮಾತುಗಳಿಗೆ ಅವರು ನೀಡುವ ಸ್ಪಷ್ಟ ಉತ್ತರ ಗಮನಾರ್ಹವಾದುದು. “ನನಗವರನ್ನು ನೋಡಬೇಕೆನಿಸದು. ಮನುಸಿದ್ಧಾಂತ, ಹಿಂದೂ ಮನೋಧರ್ಮ ನನ್ನಲ್ಲಿ ಜೀರ್ಣವಾಗಿ ಎಷ್ಟೇ ಕಷ್ಟ ಅನುಭವಿಸಿದರೂ ಪತಿವ್ರತೆಯಂತೆ ಗಂಡನನ್ನು ನೋಡಿಕೊಳ್ಳುವೆನೆಂದು ನಾನೊಂದು ವೇಳೆ ಹೇಳಿದರೂ ಬೇಡವೆಂದು ಕಮ್ಯುನಿಷ್ಟರಂತೆ ತಡೆಯಬೇಕಾದ ನೀವು, ಶೋಷಿತ ಮಹಿಳೆಗೆ ಅನ್ಯಾಯ ಮಾಡುವೆಯಾ ಎಂದು ಛೀಮಾರಿ ಹಾಕಬೇಕಿದ್ದ ನೀವೇ ಆತನನ್ನು ನೋಡಿಕೊಳ್ಳಬೇಕೆಂದು ಹೇಳುವುದು ವಿಚಿತ್ರವಾಗಿದೆ” ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಒಂಟಿತನದ ಎಷ್ಟೆಲ್ಲಾ ಕಷ್ಟಗಳ ನಡುವೆಯೂ ಈ ಪ್ರಜ್ಞೆ ಅವರಂತೆಯೇ ಎಲ್ಲ ಗಂಡು ಹೆಣ್ಣುಗಳಲ್ಲೂ ಬೆಳೆಯದೇ ಹೋದರೆ ಶೋಷಣೆ ನಿಲ್ಲಲು ಸಾಧ್ಯವಿಲ್ಲ.

ಶೋಷಣೆಯನ್ನು ಪ್ರತಿರೋಧಿಸುವ ಯಾವುದೇ ಕಣ್ನೋಟ ಮೊದಲೇ ಸಿದ್ಧವಾಗಿರುವುದಿಲ್ಲ. ಅದು ರೂಪುಗೊಳ್ಳುತ್ತಾ ಹೋಗುವಂತದು. ಅದಕ್ಕೊಂದು ಎಚ್ಚೆತ್ತ ಪ್ರಜ್ಞೆ ಬೇಕು. ಹಾಗೆ ಅದು ಎಚ್ಚೆತ್ತುಕೊಳ್ಳಲು ಅದಕ್ಕೊಂದು ಅವಕಾಶ ಬೇಕು. ಆಗ ಅವೆರಡೂ ಒಂದಾಗಿ ತನ್ನ ದಾರಿಯನ್ನು ತಾನು ರೂಪಿಸಿಕೊಳ್ಳಲು ವ್ಯಕ್ತಿಗಳಿಗೆ ಎಲ್ಲ ಶಕ್ತಿಯನ್ನು ನೀಡುತ್ತದೆ. ಮತ್ತು ರಕ್ಷಣೆಯ ಮಂತ್ರ ಹೇಳುತ್ತಾ ನಿಯಂತ್ರಣದ ತಂತ್ರ ಹೆಣೆಯುವ ಎಲ್ಲ ಸಾಮಾಜಿಕ ಸಂಸ್ಥೆಗಳ ನಿಜವನ್ನು ಬಯಲು ಮಾಡುತ್ತದೆ. ಎಲ್ಲ ದಮನಿತರ ಆತ್ಮಕಥನಗಳು ಈ ನಿಜಗಳನ್ನು ಅರಿಯಲು ಒತ್ತಾಯಿಸುವ ಹೊಸನೋಟವನ್ನು ಹೊಂದುವಂತೆ ಪ್ರೇರೇಪಿಸುತ್ತವೆ. ಇವೆಲ್ಲಾ ಕೇವಲ ‘ಅಪವಾದ’ಗಳು ಎಂದು ಭಾವಿಸದೇ ಸಾಮಾಜಿಕ ‘ಅಪರಾಧ’ಗಳ ಅನಾವರಣ ಎನ್ನುವುದನ್ನು ಅರಿಯಬೇಕು. ಇದಕ್ಕಾಗಿ ಆತ್ಮಕಥನಗಳನ್ನು ಓದಬೇಕಾಗಿದೆ. ಬರೆಯಬೇಕಿದೆ.

Leave a Reply

Your email address will not be published.