ರಂಗಕಥನ -13: ‘ಗಾನಮನೋಹರ’ ಮಧ್ವರಾಜ ಉಮರ್ಜಿ

-ಡಾ.ಮಲ್ಲಯ್ಯ ಸಂಡೂರು

ಮಧ್ವರಾಜ ಉಮರ್ಜಿಯವರು(1914-1952) ಗರುಡ ಸದಾಶಿವರಾಯರ ಅಭಿನಯ ಕಲೆಯನ್ನು ಕರಗತ ಮಾಡಿಕೊಂಡು ನಟನಾಗಿ, ಹಾಡುಗಾರರಾಗಿ ಹೆಸರಾದವರು. ‘ನಟರಾಜ’, ‘ನಾಟ್ಯನಿಪುಣ’, ‘ಗಾನಮನೋಹರ’ ಮತ್ತು ‘ಗಾನರತ್ನ’ರೆಂಬ ಅಭಿದಾನಕ್ಕೆ ಪಾತ್ರರಾಗಿದ್ದ ಉಮರ್ಜಿಯವರು ತಮ್ಮ ನಾಯಕ ಪಾತ್ರಗಳಿಂದ ಜನಪ್ರಿಯರಾದವರು. ಉತ್ತರ ಕರ್ನಾಟಕದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಉಮರ್ಜಿಯವರು ಬೀಳಗಿಯಲ್ಲಿ ಜನ್ಮತಾಳಿದರು. ಇದು ಕನ್ನಡ ರಂಗಭೂಮಿಯ ಕಲಾವಿದರಾದ ಅಮೀರ್‍ಬಾಯಿ ಮತ್ತು ಗೋಹರ್‍ಬಾಯಿಯವರ ಊರು. ಉಮರ್ಜಿಯವರ ಪ್ರಾಥಮಿಕ ಶಿಕ್ಷಣದ ಗುರುಗಳು ಕನ್ನಡದ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರ ತಂದೆ ತಮ್ಮಣ್ಣ ಭಟ್ಟರು. ಉಮರ್ಜಿಯವರಿಗೆ ಸಂಗೀತದ ಆಸಕ್ತಿಯಿದ್ದ ಕಾರಣ, ಅವರು ಶಾಲೆಯನ್ನು ಅರ್ಧಕ್ಕೆ ಬಿಟ್ಟು, ಪಂಡಿತ ತಾರಾನಾಥರ ಪಟ್ಟ ಶಿಷ್ಯರಲ್ಲಿ ಒಬ್ಬರಾದ ಕಸ್ತೂರಿ ಮಹಾವೀರಪ್ಪನವರಲ್ಲಿ ಉತ್ತರಾದಿ ಸಂಗೀತವನ್ನು ಕಲಿತರು. ಇದು ಅವರು ಗಾಯಕನಟರಾಗಿ ಹೊಮ್ಮಲು ಬುನಾದಿ ಹಾಕಿಕೊಟ್ಟಿತು.

Madvaraj Umarjiಮಧ್ವರಾಜರು ‘ಚವತಿಯ ಚಂದ್ರ’ ನಾಟಕದಲ್ಲಿ ಕೃಷ್ಣನಾಗಿ, ‘ಮಾಯಾಬಜಾರ’ ನಾಟಕದಲ್ಲಿ ಅಭಿಮನ್ಯುವಾಗಿ ನಟಿಸಿದರು. ಇದು ಅವರಿಗೆ ಕೀರ್ತಿ ತಂದುಕೊಟ್ಟಿತು. ಅವರು ‘ಕಂಸವಧೆ’ಯಲ್ಲಿ ಕೃಷ್ಣನಾಗಿ, ‘ಸತ್ಯಸಂಕಲ್ಪ’ದಲ್ಲಿ ಪದ್ಮನಾಭನಾಗಿ, ‘ನಮ್ಮ ಭಾಗ್ಯೋದಯ’ದಲ್ಲಿ ರಮಾನಂದನಾಗಿ, ‘ಚಿತ್ರಾಂಗದಾ’ ನಾಟಕದಲ್ಲಿ ಅರ್ಜುನನಾಗಿ, ‘ಅಕ್ಷಯಾಂಬರ’, ‘ಕುರುಕ್ಷೇತ್ರ’, ‘ರಕ್ತರಾತ್ರಿ’ ನಾಟಕಗಳಲ್ಲಿ ಕೃಷ್ಣನಾಗಿ ಮತ್ತು ‘ಉಷಾಸ್ವಯಂವರ’ ನಾಟಕದಲ್ಲಿ ಅನಿರುದ್ಧನಾಗಿ ನಟಿಸಿರು. ಪೌರಾಣಿಕ ನಾಟಕಗಳಲ್ಲಿ ಶೃಂಗಾರಾಭಿನಯಗಳಿಗೆ ಉಮರ್ಜಿ ಹೆಸರಾಗಿದ್ದರು. ಆದರೆ ಐತಿಹಾಸಿಕ ನಾಟಕಗಳಾದ ‘ಟೀಪೂ ಸುಲ್ತಾನ್’ ನಾಟಕದಲ್ಲಿ ಕಾರ್ನವಾಲೀಸ್‍ನಾಗಿ, ‘ಎಚ್ಚಮನಾಯಕ’ ನಾಟಕದಲ್ಲಿ ಶ್ರೀರಂಗರಾಯನಾಗಿ ‘ಸಂಗೊಳ್ಳಿರಾಯಣ್ಣ’ದಲ್ಲಿ ಸಂಗೊಳ್ಳಿರಾಯಣ್ಣನಾಗಿ, ಮುಂಡಗೈ ಭೀಮರಾಯನಾಗಿ ಮತ್ತು ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಸವಣ್ಣನಾಗಿ ಕೂಡ ಉಮರ್ಜಿ ಕೆಲಸ ಮಾಡಿದರು. ಉಮರ್ಜಿಯವರ ಅಭಿನಯ ಮತ್ತು ಹಾಡುಗಾರಿಕೆ ಕುರಿತು ಹೆಚ್.ಕೆ.ರಂಗನಾಥ್ ಅವರು ಬಣ್ಣಿಸುತ್ತಾ “ತೂಗಿ ಆಡುವ ಮಾತು, ಭಾವಕ್ಕೆ ತಕ್ಕ ಅಭಿನಯ, ಎದೆತುಂಬಿ ಹೊಮ್ಮಿದ ಗಾನ, ಇವುಗಳಿಂದಾಗಿ ಪಾತ್ರದ ಮೂರ್ತಿವಂತ ಸ್ವರೂಪವೇ ಆಗಿ ಮಧ್ವರಾಜರು ಹತ್ತು ವರುಷಗಳ ಕಾಲ ಉತ್ತರ ಕರ್ನಾಟಕದ ಒಬ್ಬ ನಾಯಕ ನಟನೆಂಬ ಕೀರ್ತಿಯನ್ನು ಗಳಿಸಿದರು” ಎಂದು ಹೇಳುತ್ತಾರೆ. (ಎಚ್.ಕೆ. ರಂಗನಾಥ್, ಬಣ್ಣಬೆಳಕು, ಪು.120)

ಸ್ವತಃ ಉಮರ್ಜಿಯವರು ತಮ್ಮ ಯಶಸ್ಸನ್ನು ಹೀಗೆ ಬಣ್ಣಿಸಿಕೊಳ್ಳುವರು: “ಒಳ್ಳೆಯದು ಎನಿಸಿದ್ದನ್ನು ಹತ್ತೂ ಕಡೆಯಿಂದ ಎತ್ತಿಹಾಕಿದ್ದೇನೆ. ಒಬ್ಬರ ಅಭಿನಯದ ರೀತಿ, ಮತ್ತೊಬ್ಬರ ರಂಗಸಂಗೀತದ ಧಾಟಿ, ಮಗದೊಬ್ಬರ ಮಾತಿನ ಬಾನಿ, ಇನ್ನೊಬ್ಬರ ಪಾತ್ರ ಚಿತ್ರಣದ ವೈಶಿಷ್ಟ್ಯ ಹೀಗೆ ಹತ್ತು ಮಂದಿ ಪರಿಣತ ನಟರಿಂದ ಕದ್ದು ನನ್ನದೆಯಲ್ಲಿ ಮೇಳೈಸಿದ್ದೇನೆ. ಬೆಳಸಿ ಭಾವತುಂಬಲು ಪ್ರಯತ್ನಿಸಿದ್ದೇನೆ. ಸಾಧನೆಗಾಗಿ ಶ್ರಮಪಡಬೇಕಾಗುತ್ತದೆ. ನಾನೊಬ್ಬನೇ ಇದ್ದಾಗಲೂ ಮನಸಿನೊಳಗೆ ಪಾತ್ರದ ಅಭಿನಯ ನಡೆಯುತ್ತಲೇ ಇರುತ್ತದೆ. ನಟರಿಂದ ಮಾತ್ರವೇ ಕದ್ದು ಕಲಿಯಬೇಕೆಂದಿಲ್ಲ…. ಕಣ್ಣು, ಕಿವಿ, ಬುದ್ಧಿ, ಚುರುಕಾಗಿ ಇದ್ದರೆ ಜಗತ್ತೆಲ್ಲ ಅಭಿನಯದಿಂದ ತುಂಬಿರುವುದು ಅರಿವಿಗೆ ಬರುತ್ತದೆ! ಕಲೆಯನ್ನೂ ಕಳವು ಮಾಡದೆ ಸಾಧಿಸಲಾಗುವುದಿಲ್ಲ.” (ಎಚ್.ಕೆ. ರಂಗನಾಥ್, ಬಣ್ಣಬೆಳಕು, ಪು.118)

ರಂಗಭೂಮಿಯಲ್ಲಿ ಕಲಾವಿದರು ಮತ್ತೊಬ್ಬ ಕಲಾವಿದರನ್ನು ನೋಡಿ ಕಲಿಯುವ ಮತ್ತು ಅವರ ತಂತ್ರಗಳನ್ನ ಅಳವಡಿಸಿಕೊಳ್ಳುವ ಪರಂಪರೆ ಹಿಂದಿನಿಂದಲೂ ಇದೆ. ಉಳಿದವರಿಗಿಂತ ತಾನ ಭಿನ್ನವಾಗಿ ಬೆಳೆಯಬೇಕೆಂಬ ಸ್ಪರ್ಧಾಪ್ರಜ್ಞೆಯೂ ಕಲಾವಿದರಲ್ಲಿದೆ. ಇಂತಹ ಕಲಾವಿದರಲ್ಲಿ ರಂಗಕಲೆಯ ಬಗ್ಗೆ ಒಂದು ಬದ್ಧತೆಯಿರುತ್ತದೆ. ಕನ್ನಡ ರಂಗಭೂಮಿ ಇಂತಹ ಬದ್ಧತೆಯುಳ್ಳ ಕಲಾವಿದರಿಂದ ಬೆಳೆದಿದೆ. ಎಚ್.ಕೆ. ರಂಗನಾಥರು ಮಧ್ವರಾಜರ ಬಹುಮುಖಿ ವ್ಯಕ್ತಿತ್ವವನ್ನು ಹೀಗೆ ವಿವರಿಸುತ್ತಾರೆ: “ನಿಜ ಜೀವನದಲ್ಲಿ, ಕೇಳಿದವರ ಕಿವಿತುಂಬಿ, ಎದೆತುಂಬಿ, ಭಾವತುಂಬಿ ಬರುವಂತೆ ಹಾಡುತ್ತಿದ್ದರು. ಮಾತನ್ನಾಡುತ್ತಿದ್ದರು. ಪದ್ಯಗಳನ್ನು ಬರೆದರು. ನಾಟಕಗಳನ್ನು ರಚಿಸಿದರು. ಸಣ್ಣಕತೆಗಳನ್ನೂ, ವಿನೋದ ಪ್ರಬಂಧಗಳನ್ನು ಕಟ್ಟಿಬರೆದರು. ವಿದ್ಯಾರ್ಥಿವೃಂದಕ್ಕೆ ಅಭಿನಯ ಕಲಿಸಿದರು. ಸಾಹಿತಿಯಾಗಿ, ಶ್ರೋತೃವಾಗಿ, ವಿಮರ್ಶಕರಾಗಿ ಎಳೆಯರ ಬಾಳಿಗೆ ಒತ್ತಾಸೆಕೊಟ್ಟರು. ಬೇಂದ್ರೆಯವರ ಗೀತೆಗಳನ್ನಂತೂ ನಿಂತಲ್ಲಿ ಕುಳಿತಲ್ಲಿ ನೆನೆದು ಹಾಡಬೇಕು.

“ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ” ಎನ್ನುವ ಗೀತೆಯನ್ನಂತೂ, ಅವರ ಬಾಯಿಂದ ಎನ್ನುವುದಕ್ಕಿಂತ ಅವರ ಮುಖದಿಂದ ಕೇಳಬೇಕು.” (ಎಚ್.ಕೆ. ರಂಗನಾಥ್, ಬಣ್ಣಬೆಳಕು, ಪು.122) ಈ ಮಾತನ್ನು ಕೇಳುವಾಗ ಉಮರ್ಜಿಯವರು ರಂಗಭೂಮಿಯನ್ನು ಬಿಟ್ಟು ಸಂಗೀತ ಲೋಕಕ್ಕೆ ಹೋಗಿದ್ದರೆ, ಮಲ್ಲಿಕಾರ್ಜುನ ಮನಸೂರರ ಹಾಗೆ ದೊಡ್ಡದನ್ನು ಸಾಧಿಸುತ್ತಿದ್ದರೊ ಏನೋ ಅನಿಸುವುದು. ‘ಬಡವರ ಬಸವಣ್ಣ’, ‘ಶರಣಬಸವ’ ಮತ್ತು ‘ಅಕ್ಕಮಹಾದೇವಿ’ ನಾಟಕಗಳಲ್ಲಿ ಅವರು ಹಾಡಿದ ಹಾಡುಗಳನ್ನು ಕೊಲಂಬಿಯಾ ರೆಕಾರ್ಡಿಂಗ್ ಕಂಪನಿ ಧ್ವನಿಮುದ್ರಿಸಿತು.
ಉಮರ್ಜಿಯವರು ಅಕಾಲಿಕ ಸಾವಿಗೆ ಈಡಾದರು. ಅವರ ಸಾವನ್ನು ನಲವಡಿಯವರು ಹೇಳಿದ್ದನ್ನು ಈ ರೀತಿ ವಿವರಿಸುತ್ತಾರೆ.

“ಮಧ್ವರಾಜರು ಕನ್ನಡ ನಾಡಿನ ಕಲಾರಂಗದಲ್ಲಿ ನಟರಾಜರೆನಿಸಿ ಮೆರೆದರು. ಕಲಾಪ್ರೇಮಿಗಳು ಅವರು ನಾಟ್ಯಭಿನಯಕ್ಕೂ ನಾಟ್ಯಾನುಗುಣವಾದ ಸಂಗೀತಕ್ಕೂ ಅವರ ಮಧು ಮಧುರ ಸಂಭಾಷಣೆಗೂ ಮೆಚ್ಚಿ, ನಾಟ್ಯ ರಂಗದಲ್ಲಿ ಅವರಿಗೆ ನಾನಾ ವಿಧದ ಪ್ರಶಸ್ತಿ ಪದಕಗಳನ್ನು ಅರ್ಪಿಸಿದರು. ಪುಷ್ಪ ಪರಿಮಳವು ದುಂಬಿಗಳನ್ನು ಜಗ್ಗುವಂತೆ ಅವರ ಕಲಾನೈಪುಣ್ಯವು ಕಲಾಭಿಮಾನಿಗಳನ್ನು ಕರೆದು ತಣಿಸಿತು… ಇಷ್ಟು ಎಳೆ ಹರೆಯದಲ್ಲಿ ಅವರು ವೈಕುಂಠವಾಸಿಗಳಾಗಲು ಅವರ ನಾಟ್ಯ ವೈಖರಿಯನ್ನು ನೋಡುವುದಕ್ಕಾಗಿ ವೈಕುಂಠನಾಯಕನೇ ಅವರನ್ನು ಅವಸರದಿಂದ ಆಮಂತ್ರಿಸಿದಂತಾಯಿತು.” (ಎಚ್.ಕೆ. ರಂಗನಾಥ್, ಬಣ್ಣಬೆಳಕು, ಪು.121)

ಉಮರ್ಜಿಯವರ ಅಭಿನಯ ಮತ್ತು ಗಾಯನಕ್ಕೆ ಮಾರುಹೋದವರಲ್ಲಿ ಶಾಸ್ತ್ರಿಗಳೂ ಒಬ್ಬರು ಇರಬೇಕು. ಕಲಾವಿದರನ್ನು ಮತ್ತೊಬ್ಬ ಕಲಾವಿದರು ಪ್ರೀತಿಯಿಂದ ನೆನೆಯುವ ಈ ಬಗೆಯು ಕನ್ನಡ ರಂಗಭೂಮಿಯ ದೊಡ್ಡತನಕ್ಕೆ ಸಂಕೇತವಾಗಿದೆ.

Leave a Reply

Your email address will not be published.