ರಂಗಕಥನ -12: ನಡೆದಾಡುವ ರಂಗಭೂಮಿಯ ವಿಶ್ವಕೋಶ ಏಣಗಿ ಬಾಳಪ್ಪ

-ಡಾ.ಮಲ್ಲಯ್ಯ ಸಂಡೂರು

ನೂರು ತುಂಬಿರುವ ಬಾಳಪ್ಪನವರು ಆಧುನಿಕ ಕನ್ನಡ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಎರಡನೆಯ ತಲೆಮಾರಿನ ಕಲಾವಿದರಲ್ಲಿ ಒಬ್ಬರು. ಕನ್ನಡ ವೃತ್ತಿರಂಗಭೂಮಿಯ ಮಟ್ಟಿಗೆ ‘ನಡೆದಾಡುವ ರಂಗಭೂಮಿಯ ವಿಶ್ವಕೋಶ’ದಂತಿರುವ ಅವರು, ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯಲ್ಲಿ ಬಾಲನಟರಾಗಿ ರಂಗಪ್ರವೇಶಿಸಿ, ಗಾಯಕನಟರಾಗಿ, ನಂತರದಲ್ಲಿ ಸ್ವತಂತ್ರ ನಾಟಕ ಕಂಪನಿ ಕಟ್ಟಿದ ಮಾಲೀಕರಾಗಿ ಐದು ದಶಕಗಳನ್ನು ಮೀರಿದ ಬಣ್ಣದ ಬದುಕಿನ ಹಾದಿಯಲ್ಲಿ ನಡೆದವರು. ಇದರಿಂದ ಬಾಳಪ್ಪನವರ ಶತಮಾನದ ಬದುಕಿನ ಚರಿತ್ರೆಯೊಂದಿಗೆ ಕನ್ನಡ ರಂಗಭೂಮಿಯ ಶತಮಾನದ ಇತಿಹಾಸವೂ ತಳಕು ಹಾಕಿಕೊಂಡಿದೆ.

Yenagi balappa40ರ ದಶಕದಲ್ಲಿ ‘ಕಲಾವೈಭವ ನಾಟ್ಯ ಸಂಘ’ ಸ್ಥಾಪಿಸಿದ ಬಾಳಪ್ಪನವರು ಶಿವಮೂರ್ತಿಸ್ವಾಮಿ ಕಣಬರ್ಗಿಮಠ ಅವರಂತೆ ತಮ್ಮ ವಿಶಿಷ್ಟ ಪ್ರಯೋಗಶೀಲತೆ ಹಾಗೂ ಕಲಾನಿಷ್ಠೆಯಿಂದಾಗಿ ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ತಂದು ಕೊಟ್ಟವರಲ್ಲಿ ಒಬ್ಬರು. ಅವರು ತಮ್ಮ ಸ್ಫುರದ್ರೂಪ, ಮಾತಿನ ಠೀವಿ, ಹಾಡಿನ ಧಾಟಿ ಹಾಗೂ ಬಹುಮುಖಿ ಅಭಿನಯದ ಕೌಶಲಗಳಿಂದ ಪ್ರೇಕ್ಷಕರನ್ನು ಪ್ರಭಾವಿಸಿದ ನಟರು. ಸಂಗೀತದ ಪ್ರಾಧಾನ್ಯತೆ ಕಳೆದು ಹೋಗುವ ಕಾಲಾವಧಿಯಲ್ಲಿ ಬಾಳಪ್ಪನವರು ಸಂಗೀತ ಮತ್ತು ಅಭಿನಯಗಳನ್ನು ಸಸಮಸಮವಾಗಿ ತೂಗಿಸಿಕೊಂಡು ಹೋದವರು; ಕಂಪನಿ ಮಾಲೀಕರಾಗಿ ಅವರು ಅನೇಕ ಶ್ರೇಷ್ಠ ಕಲಾವಿದರನ್ನು ಬೆಳಕಿಗೆ ತಂದರು. ಪುರುಷ ಪಾತ್ರಗಳಲ್ಲಿಯೂ ಮಿಂಚಿದ ಅವರು, ‘ಜಗಜ್ಯೋತಿ ಬಸವೇಶ್ವರ’ ನಾಟಕದ ಬಸವೇಶ್ವರ ಪಾತ್ರದಿಂದ ಜನಪ್ರಿಯರಾದರು. ತಮ್ಮ ನಟನೆಯ ಬದುಕು ನಿಂತಬಳಿಕ, ರಂಗಭೂಮಿ ಕುರಿತ ಉಪನ್ಯಾಸ, ಪ್ರಾತ್ಯಕ್ಷಿಕೆ, ರಂಗಗಾಯನ ಹಾಗೂ ನಿರ್ದೇಶನದ ಕೆಲಸಗಳನ್ನು ಅವರು ಮಾಡಿದರು.

ಬಾಳಪ್ಪನವರು ಕರ್ನಾಟಕ ಏಕೀಕರಣ ಚಳವಳಿ, ರಾಷ್ಟ್ರೀಯ ಸ್ವಾತಂತ್ರ್ಯಾಂದೋಲನ ಹಾಗೂ ಗೋಕಾಕ್ ಚಳವಳಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ‘ಆಡಂಬರ ಅಶ್ಲೀಲ ಮಾತುಗಳ ಜಾಗದಲ್ಲಿ ಉಡುಪು ಮತ್ತು ಅಭಿನಯದ ಪ್ರಾಧಾನ್ಯತೆ ಪಡೆದಾಗಲೇ ನಮ್ಮ ನಾಟಕಗಳು ಸತ್ವಪೂರ್ಣವಾಗುವುದು’ ಎಂಬುದು ಅವರ ನಂಬಿಕೆಯಾಗಿದೆ. ರಂಗಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಇದ್ದರೂ ರಂಗಗೀತೆಗಳ ಪ್ರಕಾರವನ್ನು ಉಳಿಸಲು ಅವರು ಮಾಡುತ್ತಿರುವ ಯತ್ನಗಳು ಅಪೂರ್ವವಾಗಿವೆ.

ಬಾಳಪ್ಪನವರು ಲೋಕೂರ ಮನೆತನವೆಂದು ಕರೆಯಲ್ಪಡುತ್ತಿದ್ದ ಕುಟುಂಬದಲ್ಲಿ ಕರಿಬಸಪ್ಪ, ಬಾಳಮ್ಮ ಅವರ ಮಗನಾಗಿ ಏಣಗಿಯಲ್ಲಿ 1914ರಲ್ಲಿ ಜನಿಸಿದರು. ಬಾಲ್ಯದಿಂದಲೂ ನಾಟಕದ ಗೀಳನ್ನು ಬೆಳೆಸಿಕೊಂಡಿದ್ದ ಬಾಳಪ್ಪನವರಿಗೆ ಅವರ ಊರಿನ ಪರಿಸರವೇ ಮುಖ್ಯ ಪ್ರೇರಣೆ ಕೊಟ್ಟಿತು. ಒಮ್ಮೆ ಅವರ ಊರಲ್ಲಿ ಗಂಗಪ್ಪ ಅಗಸಿಮನಿ, ವೀರಭದ್ರಯ್ಯ ಮಠಪತಿ, ರಾಯಪ್ಪ ಮೇಟಿ, ಚನ್ನಬಸಪ್ಪ ಕಾದ್ರೊಳಿ ಬಸವಣ್ಣೆಯ್ಯ ಹೂಲಿಮಠ ಮುಂತಾದವರು ಸೇರಿ ‘ಭಕ್ತ ಮಾರ್ಕಂಡೇಯ’ ಎಂಬ ಬಯಲಾಟ ಆಡಲು ನಿರ್ಧರಿಸಿದರು. ಬಾಳಪ್ಪನವರ ಅಣ್ಣನಾದ ಬಸಪ್ಪನಿಗೆ ಆ ನಾಟಕದಲ್ಲಿ ಒಂದು ಗಣಪತಿ ಪಾತ್ರವನ್ನು ನೀಡಲಾಗಿತ್ತು. ಅಣ್ಣನ ರಂಗತಾಲೀಮನ್ನು ನೋಡಲು ಬಾಳಪ್ಪನವರೂ ಹೋಗುತ್ತಿದ್ದರು. ಹಾಗಾಗಿ ಗಣಪತಿ ಪಾತ್ರಧಾರಿಯ ಮಾತು, ಹಾಡು ಕಂಠಪಾಠವಾಗತೊಡಗಿದವು. ಬೀಗರ ಊರಿಗೆ ಹೋಗಿದ್ದ ಬಸಪ್ಪನು ಬಯಲಾಟದ ಪ್ರದರ್ಶನದ ಹೊತ್ತಿಗೆ ಬರದೆಹೋದಾಗ, ಗಣಪತಿ ಪಾತ್ರವನ್ನು ಮಾಡಲು ಊರಿನ ಹಿರಿಯರು ಬಾಳಪ್ಪನವರ ಹೆಸರನ್ನು ಸೂಚಿಸಿದರು. ಆಗಲೇ ಆಟದ ಮಾತು ಹಾಡು ಕಂಠಪಾಠ ಮಾಡಿಕೊಂಡಿದ್ದ ಬಾಳಪ್ಪನವರು ಗಣಪತಿ ಪಾರ್ಟಿನ ಮೂಲಕ ರಂಗಭೂಮಿ ಪ್ರವೇಶಿಸಿದರು. ಕಂಚಿನ ಕಂಠ ಹೊಂದಿದ ಅವರು ನಾಟಕದಲ್ಲಿ ಆ ಪಾತ್ರಕ್ಕೆ ಜೀವತುಂಬಿದರು.

Yenigi balappaಸಂಗ್ರೇಸಕೊಪ್ಪದ ಗುರುಸಿದ್ಧಯ್ಯನವರು ಏಣಗಿ ಕಲಾರಸಿಕರ ಮೂಲಕ ‘ಲವಕುಶ’ ಬಯಲಾಟವನ್ನು ಆಡಿಸಿದಾಗ ಅದರಲ್ಲಿ ಬಾಳಪ್ಪನವರು ಲವನ ಪಾತ್ರ ನಿರ್ವಹಿಸಿದರು. ಇದೇ ಗುರುಸಿದ್ಧಯ್ಯನವರು ಗರುಡ ಸದಾಶಿವರಾಯರು ಬರೆದ ‘ಪಾದುಕಾ ಪಟ್ಟಾಭಿಷೇಕ’ ನಾಟಕ ವಾಡಿಸುವ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದರು. ಆ ನಾಟಕದ ಕಲಾವಿದರಲ್ಲಿ ಒಬ್ಬನಾದ ಭರತನ ಸೇವಕನ ಪಾತ್ರವನ್ನು ಮಾಡುವ ಹುಡುಗನು ಬಾರದೇ ಹೋದಾಗ, ಆ ಪಾತ್ರವನ್ನು ಬಾಳಪ್ಪನವರೇ ಭಾವಪೂರ್ಣವಾಗಿ ಅಭಿನಯಿಸಿದರು. ಮುಂದೆ ಬಾಳಪ್ಪ ಅದೇ ಕಥೆಯನ್ನು ಏಣಗಿಗೆ ತಂದು ಊರ ಕಲಾವಿದರ ಮೂಲಕ ನಾಟಕವಾಡಿಸಿದರು. ಅದರಲ್ಲಿ ಭರತನ ಪಾತ್ರವನ್ನು ವಹಿಸಿದ್ದ ಬಾಳಪ್ಪನವರು, ನಾಟಕದ ಸಂಗೀತವನ್ನೂ ಕೂಡಿಸಿದರು. ನಾಟಕ ಯಶಸ್ವಿಯಾಯಿತು.

ಬಾಳಪ್ಪನವರನ್ನು ಕಲಾವಿದರೆಂದು ಹೊರಹೊಮ್ಮುವಂತೆ ಮಾಡಿದವರು ಶಿವಲಿಂಗಸ್ವಾಮಿಗಳು. ಆ ಕಾಲದ ಹೆಸರಾಂತ ಬಹುತೇಕ ನಟರು ಚಿಕ್ಕೋಡಿ ಶಿವಲಿಂಗಸ್ವಾಮಿಗಳ ಗರಡಿಯಲ್ಲಿ ಬೆಳೆದವರು. ಅವರಂತಹ ನಾಟಕ ಮಾಸ್ತರರ ಕೈಯಲ್ಲಿ ಬಾಳಪ್ಪನವರು ರೂಪಗೊಂಡರು. ಬೈಲಹೊಂಗಲದ ಹುಕ್ಕೇರಿಯ ಬಸವಪ್ರಭು ನಾಯಕರ ಕಂಪನಿಯು ಗರುಡ ಸದಾಶಿವರಾಯರ ‘ಪಾದುಕಾ ಪಟ್ಟಾಭಿಷೇಕ’ ನಾಟಕವನ್ನು ಪ್ರಯೋಗಿಸುತ್ತಿತ್ತು. ಆ ನಾಟಕವನ್ನು ಶಿವಲಿಂಗಸ್ವಾಮಿಗಳೇ ನಿರ್ದೇಶಿಸುತ್ತಿದ್ದರು. ನಾಟಕದಲ್ಲಿ ಪಾತ್ರವೊಂದರ ಗೈರುಹಾಜರಿಯಲ್ಲಿ ನಾಟಕವನ್ನು ರದ್ದುಗೊಳಿಸುವ ಪ್ರಸಂಗ ಒದಗಿ ಬಂದಿತು. ಆಗ ಗಿರಿಧರಲಾಲ್ ಶೇಡಜಿ ಎಂಬುವರು ನಾಟಕವನ್ನು ನಿಲ್ಲಿಸಬೇಡಿ. ಭರತನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಹುಡುಗ ಏಣಗಿಯಲ್ಲಿದ್ದಾನೆಂದು ತಿಳಿಸಿ ಬಾಲಕ ಬಾಳಪ್ಪನವರನ್ನು ಕರೆತಂದರು. ಭರತನ ಪಾತ್ರದ ಮಾತು ಹಾಗೂ ಹಾಡುಗಳನ್ನು ಏಣಗಿಯವರು ಆಡಿ ಹಾಡಿದರು. ದಶರಥನ ಪಾತ್ರದಲ್ಲಿದ್ದ ಚಿಕ್ಕೋಡಿ ಶಿವಲಿಂಗಸ್ವಾಮಿಗಳಿಗೆ ಬಾಳಪ್ಪನವರ ನಟನೆ ಇಷ್ಟವಾಯಿತು. ನಾಟಕ ಯಶಸ್ವಿಯಾಯಿತು.

ಬಾಳಪ್ಪನವರು ‘ಲಿಂಗರಾಜ ಸಂಗೀತ ನಾಟಕ ಕಂಪನಿ’ಯಲ್ಲಿ ಮೊದಲಿಗೆ ‘ಮಹಾನಂದಾ’ ನಾಟಕದಲ್ಲಿ ನಾರದನ ಪಾತ್ರ ಮಾಡಿದರು. ಆ ಪಾತ್ರಕ್ಕೆ ಬಹಳ ಹಾಡು ಹಾಡಬೇಕಿತ್ತು. ಆ ಪಾತ್ರವನ್ನು ಕಂಪನಿಗಳಲ್ಲಿ ಸಾಮಾನ್ಯವಾಗಿ ನಾರದ ಪಾತ್ರವನ್ನು ಬಾಲಕರಿಂದಲೇ ಮಾಡಿಸುತ್ತಿದ್ದರು. ಒಳ್ಳೆಯ ಕಂಠವಿದ್ದ ಬಾಳಪ್ಪ ಈ ಪಾತ್ರವನ್ನು ಸಹಜವಾಗಿ ನಿಭಾಯಿಸಿದರು. ಶಿವಲಿಂಗ ಸ್ವಾಮಿಗಳು ಈ ನಾಟಕದಲ್ಲಿ ಈಶ್ವರನ ಪಾತ್ರ ನಿರ್ವಹಿಸುತ್ತಿದ್ದರು. ಇವರಂತಹ ದೊಡ್ಡ ಕಲಾವಿದರ ಜತೆ ಪಾತ್ರವಹಿಸಿದ್ದು ಬಾಳಪ್ಪನವರಿಗೆ ದೊಡ್ಡ ಅನುಭವ ಕೊಟ್ಟಿತು. ಸಂಗೀತ ಮಾಸ್ತರರೂ ಆಗಿದ್ದ ಬಾಬಯ್ಯ ಸ್ವಾಮಿಯವರ ಕಂಪನಿಯಲ್ಲಿ ಪ್ರಸಿದ್ಧ ಸಂಗೀತವಿದುಷಿ ಹಾವೇರಿಯ ಮರ್ದಾನ್‍ಜಾನ್ ಕೆಲಸ ಮಾಡುತ್ತಿದ್ದರು. ‘ಮಹಾದಾನಂದ’, ಹಾಗೂ ‘ಪಾದುಕಾಪಟ್ಟಾಭಿಷೇಕ’ ಕಂಪನಿಯ ಜನಪ್ರಿಯ ನಾಟಕಗಳಾಗಿದ್ದವು. ಬಾಳಪ್ಪನವರು ‘ಮಹಾನಂದಾ’ ನಾಟಕದಲ್ಲಿ ನಾರದನ ಪಾತ್ರವನ್ನೂ ‘ಪಾದುಕಾಪಟ್ಟಾಭಿಷೇಕ’ ನಾಟಕದಲ್ಲಿ ಭರತನ ಪಾತ್ರವನ್ನೂ ನಿರ್ವಹಿಸಿದರು.

1928ರಲ್ಲಿ ಚಿಕ್ಕೋಡಿ ಶಿವಲಿಂಗಸ್ವಾಮಿಗಳು ಶಿರಸಂಗಿ ಲಿಂಗರಾಜರನ್ನು ಕುರಿತು ಬರೆದ ನಾಟಕವನ್ನು ಆಡಿಸಲು ನಿರ್ಧರಿಸಿದರು. ಸ್ವಾಮಿಗಳು ತಮ್ಮ ಪ್ರತಿಭಾವಂತ ಶಿಷ್ಯರನ್ನೆಲ್ಲ ಆಗ ಆಹ್ವಾನಿಸಿದರು. ಅವರು ಭರತನ ಪಾತ್ರವಾಡಿದ್ದ ಬಾಳಪ್ಪನವರನ್ನು ಸಹ ಆಗ ಆಹ್ವಾನಿಸಿದರು. ತಮ್ಮ ಕಂಪನಿ ಮುಚ್ಚಬೇಕಾದ ಪ್ರಸಂಗ ಬಂದಾಗ, ಅವರು ತಮ್ಮ ಕಂಪನಿ ಕಲಾವಿದರನ್ನು ಅಣ್ಣಿಗೇರಿಯವರ ಕಂಪನಿಗೆ ಸೇರಿಸಿದರು. ಆದರೆ ಬಾಳಪ್ಪನವರನ್ನು ಮಾತ್ರ ಸೂಡಿ ಹುಚ್ಚಪ್ಪನವರ ಅಧೀನಕ್ಕೆ ಕೊಟ್ಟರು. ಸೂಡಿಯವರ ಕಂಪನಿಯಲ್ಲಿ ‘ರಾಜಾಗೋಪಿಚಂದ’, ‘ಭಕ್ತಪುಂಡಲೀಕ’ ಹಾಗೂ ‘ಕೃಷಲೀಲಾ’ ನಾಟಕಗಳನ್ನು ಆಡಲಾಗುತ್ತಿತ್ತು. ಆಕರ್ಷಕ ಶರೀರ ಹಾಗೂ ಶಾರೀರವಿದ್ದ ಬಾಳಪ್ಪ ‘ಕೃಷಲೀಲಾ’ ನಾಟಕದಲ್ಲಿ ಕೃಷ್ಣನಾಗಿ ಅಭಿನಯಿಸಿದರು.

ಈ ನಾಟಕದ ಇಪ್ಪತ್ತೈದು ಹಾಡುಗಳನ್ನು ಕಷ್ಟಪಟ್ಟು ಕಲಿತು ಹಾಡಿದರು. ಮುಂದೆ ಅಬ್ಬಿಗೇರಿ ಬಸವನಗೌಡರ ‘ಕನ್ನಡ ಸಾಹಿತ್ಯ ಸೇವಾ ಸಂಗೀತ ನಾಟಕ ಮಂಡಳಿ’ ಆರಂಭವಾದಾಗ ಶಿವಲಿಂಗಸ್ವಾಮಿಗಳ ಶಿಷ್ಯರೆಲ್ಲರೂ ಅಲ್ಲಿ ಕೂಡಿಕೊಂಡರು. ಕರ್ನಾಟಕ ಗಂಧರ್ವ ಮುರಗೋಡ ಗಂಗಾಧರಪ್ಪ, ಹಳ್ಳಿಗುಡಿ ಸದಾಶಿವಪ್ಪ, ನಾಗಪ್ಪ ಲಕ್ಷ್ಮೇಶ್ವರ, ನಾರಾಯಣಪ್ಪ ಚೌಡಿ, ಪರಪ್ಪ ಸವಡಿ, ಸೂಡಿ ಹುಚ್ಚಪ್ಪ, ದೇವೇಂದ್ರಪ್ಪ ಅದರಗುಂಚಿ, ವೀರಭದ್ರಯ್ಯ ತೊಂಡಿಹಾಳ, ಶಿವಾಜಿ ಮಲ್ಲೂರ, ಲಕ್ಷ್ಮಣರಾವ್ ಸೊಂಡೂರು, ಗದಗದ ರತ್ನಾ ಮೊದಲಾದ ನಟರ ಸಹಯೋಗದಲ್ಲಿ ‘ಕಿತ್ತೂರು ಚೆನ್ನಮ್ಮ’ ನಾಟಕ ರಂಗಪ್ರದರ್ಶನಗೊಂಡಿತು. ಈ ನಾಟಕದಲ್ಲಿ ಬಾಳಪ್ಪನವರು ಬಾಲಕನಾದರೂ ಚೆನ್ನಮ್ಮ ರಾಣಿಯ ದತ್ತಕ ಮಗನ ಪಾತ್ರವನ್ನು ನಿರ್ವಹಿಸಿದರು. ನಾಟಕ ಗದಗ, ಹುಬ್ಬಳ್ಳಿ, ಧಾರವಾಡಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯಿತು.

Balappaಬಾಲಕ ಪಾತ್ರಗಳನ್ನು ಮಾಡುತ್ತಿದ್ದ ಬಾಳಪ್ಪನವರು ಮುಂದೆ ‘ಕಿತ್ತೂರು ರುದ್ರಮ್ಮ’ ನಾಟಕದಲ್ಲಿ ರುದ್ರಮ್ಮನ ಮೂಲಕ ಸ್ತ್ರೀಪಾತ್ರಗಳಲ್ಲಿ ಅಭಿನಯಿಸತೊಡಗಿದರು. ‘ಹೇಮರಡ್ಡಿ ಮಲ್ಲಮ್ಮ’ ನಾಟಕದಲ್ಲಿ ಮಲ್ಲಮ್ಮನ ಪಾತ್ರ ಮಾಡುತ್ತಿದ್ದ ಅವರ “ಆಹಾ, ಮಮತೆ ಮಾತೆ ಕಾಣೆ ಮಹಾ ಶಾಂತಿ| ವನದಿ ಮಹಾಘೋರ ತಪವನುಗೈದೆ| ಅತಿಸಂತೋಷ ಭಾವಪೂತೆ” ಹಾಡುವಾಗ ಪ್ರೇಕ್ಷಕರು ತಲ್ಲೀನರಾಗಿ ಕೇಳುತ್ತಿದ್ದರಂತೆ. ಶಿವಲಿಂಗಸ್ವಾಮಿಗಳ ‘ಗುರುವಿರಕ್ತ ಪ್ರಪಂಚ’ವೆಂಬ ನಾಟಕದಲ್ಲಿಯೂ ಅವರು ಸ್ತ್ರೀಪಾತ್ರ ಮಾಡಿದರು. ನಲವಡಿ ಶ್ರೀಕಂಠಶಾಸ್ತ್ರಿಗಳ ‘ಸೋಹಂ’ ನಾಟಕದಲ್ಲಿ ಬಾಳಪ್ಪನವರು ವೇಶ್ಯೆಯ ಮಗಳಾಗಿ ಅಭಿನಯಿಸಿದರು. ಚಿಕ್ಕೋಡಿ ಶಿವಲಿಂಗಸ್ವಾಮಿಗಳ ‘ವೀರರಾಣಿ ರುದ್ರಮ್ಮ’ ನಾಟಕದಲ್ಲಿ ರುದ್ರಮ್ಮನ ಪಾತ್ರ ಮಾಡುತ್ತಿದ್ದ ಧಾರವಾಡದ ಭಾಗೀರಥಿ ಬಾಯಿ ಬರದ ಕಾರಣ, ಬಾಳಪ್ಪನವರು ರುದ್ರಮ್ಮನ ಪಾತ್ರವನ್ನು ನಿರ್ವಹಿಸಿ ಯಶಸ್ವಿಯಾದರು.

ಬಾಳಪ್ಪನವರು ಹಾಗೂ ಸೂಡಿ ಹುಚ್ಚಪ್ಪನವರು ಸೇರಿ ಕಿತ್ತೂರ ಜನಾಶ್ರಯ ಪಡೆದು ಗುರುಗಳ ನೆನಪಿನಲ್ಲೇ ‘ಗುರುಸೇವಾ ಸಂಗೀತ ನಾಟಕ ಮಂಡಳಿ, ಸಂಸ್ಥಾನ ಕಿತ್ತೂರ’(1933) ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಈ ಕಂಪನಿಯಲ್ಲಿ ಬೇವೂರ ಬಾದಷಾ ಗವಾಯಿಗಳು ‘ಅಸ್ಪøಶ್ಯತಾ ನಿವಾರಣೆ’ ನಾಟಕದಲ್ಲಿ ಬಸವೇಶ್ವರನ ಪಾತ್ರ ಮಾಡುತ್ತಿದ್ದರು. ಬಾಳಪ್ಪನವರು ಹರಿಜನ ಕನ್ಯೆಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ಕಂಪನಿಯಲ್ಲಿರುವಾಗಲೇ ಸಂಗೀತದ ಪ್ರಾಥಮಿಕ ಪಾಠವು ಬಾದಷಾ ಸಾಹೇಬರ ಅವರಿಂದ ಆರಂಭವಾಯಿತು. ಅದು ರಂಗಕ್ಕೆ ಬೇಕಾಗುವಷ್ಟು ಶಾಸ್ತ್ರೀಯ ಜ್ಞಾನವಾಗಿತ್ತು. ಮುಂದೆ ಅವರು ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಒಬ್ಬ ಗುರುಗಳ ಮೂಲಕ ಕಲಿತರು. ಅನೇಕ ಕಂಪನಿಗಳಲ್ಲಿ ಹಾಗೂ ತಾವೇ ಕಟ್ಟಿದ ಕಂಪನಿಗಳಲ್ಲಿ ಕೆಲಸ ಮಾಡಿದ ಬಾಳಪ್ಪನವರು, ರಂಗದಿಂದ ನಿವೃತ್ತಿಯಾದರೂ, ರಂಗಗೀತೆಗಳಿಂದ ಮುಕ್ತರಾಗಿಲ್ಲ. ಇದಕ್ಕೆ ಅವರು ಹೊರತಂದಿರುವ ರಂಗಗೀತೆ ಕುರಿತ ಕೃತಿಗಳು ಹಾಗೂ ಸಿಡಿಗಳೇ ಸಾಕ್ಷಿಯಾಗಿವೆ.

Leave a Reply

Your email address will not be published.