ರಂಗಕಥನ -11: ಜೋಳದರಾಶಿ ದೊಡ್ಡನಗೌಡ

joladarashi doddana gowdaruಜೋಳದರಾಶಿ ದೊಡ್ಡನಗೌಡರು(1910-1994) ಗಮಕಿ, ನಟ, ಪ್ರವಚನಕಾರ, ನಾಟಕಕಾರ, ಚಿಂತಕರಾಗಿ ಬಹುಮುಖ ಪ್ರತಿಭೆಯನ್ನು ತೋರಿದವರು. ಅವರು ಹೆಸರು ಮಾಡಿದ್ದು ಗಮಕ ಹಾಗೂ ನಟನೆಯಲ್ಲಿ. ಗಮಕಕಲೆಯನ್ನು ತಮ್ಮ ರಂಗಪ್ರಜ್ಞೆಗೆ ಧಾರೆಯೆರೆದು ಅವರು ನಾಟಕೀಯ ಗೊಳಿಸಿದರು. ಗಮಕ ಕಲೆಗೂ ಹಾಗೂ ಅಭಿನಯ ಕಲೆಗೂ ಇಲ್ಲಿ ಸಾವಯವ ಸಂಬಂಧವಿದೆ. ಗಮಕ ಕಲೆ ಅಭಿಯನಕ್ಕೆ ಪೋಷಕವಾದರೆ, ಅಭಿನಯಕಲೆ ಗಮಕ ಕಲೆಗೆ ಶಕ್ತಿಕೊಡುತ್ತದೆ. ಮುಂದೆ ಬಳ್ಳಾರಿಯ ಹೆಸರಾಂತ ನಟ ಟಿ. ರಾಘವರ ಒಡನಾಟದಲ್ಲಿ ಗೌಡರ ಗ್ರಾಮೀಣ ಕಲಾ ಪ್ರತಿಭೆಗೆ ಅಭಿಜಾತದ ಆಯಾಮ ದೊರೆಯಿತು. ರಾಘವರನ್ನು ‘ನಾಟಕದ ಗುರುಗಳು’ ಎಂದು ಭಾವಿಸಿ ಅವರಿಂದ ಗೌಡರು ಸಾಕಷ್ಟು ಕಲಿತರು. ಇವರ ಜೋಡಿ ಮೂರು ನಾಲ್ಕು ದಶಕಗಳಲ್ಲಿ ನಾಟಕ ರಂಗದಲ್ಲಿ ಅನೇಕ ಸಾಹಸಗಳನ್ನು ಮಾಡಿತು.

ಇಂತಹ ಪ್ರತಿಭಾವಂತ ಕಲಾವಿದರಾದ ದೊಡ್ಡನಗೌಡರು ಬಳ್ಳಾರಿ ಜಿಲ್ಲೆಯ ಜೋಳದರಾಶಿಯಲ್ಲಿ ಪಂಪನಗೌಡ-ರುದ್ರಮ್ಮ ದಂಪತಿಗಳ ಮಗನಾಗಿ ಜನಿಸಿದರು. ದೊಡ್ಡನಗೌಡರ ತಾತ ಹೊನ್ನೇಗೌಡರು ಮೂಲತಃ ಪ್ರಸಿದ್ಧ ಬಯಲಾಟದ ಕವಿ ಮತ್ತು ನಟ ಆಗಿದ್ದರು. ಹೀಗಾಗಿ 1931ರಲ್ಲಿ ‘ಸರ್ವಜನ ಮನೋರಂಜನಾ ನಾಟಕ ಸಭಾ’ದ ಪ್ರಖ್ಯಾತ ನಾಟಕಗಳಾದ ‘ಗರುಡ ಗರ್ವಭಂಗ’, ‘ಜಲಂಧರ’, ‘ಚವತಿ ಚಂದ್ರ’, ‘ಶಾಪವಿಮೋಚನೆ’ಯಂಥ ನಾಟಕಗಳಲ್ಲಿ ಕಬೀರ್, ನಾರದ, ಚಂದ್ರಗುಪ್ತ ಮೊದಲಾದ ಪಾತ್ರಗಳನ್ನು ಗೌಡರು ಅಬಿsನಯಿಸಿದರು. ಜೋಳದರಾಶಿಯಲ್ಲಿ ಅಲ್ಲದೆ ಬಳ್ಳಾರಿ, ಆದೋನಿ, ರಾಯಚೂರು, ಕೊಪ್ಪಳ, ಉರವಕೊಂಡ ಹಲವಾರು ಪ್ರದೇಶಗಳಲ್ಲಿ ತಮ್ಮ ನಾಟ್ಯ ಮತ್ತು ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು.

ಗೌಡರು ‘ಶ್ರೀ ಗವಿಮಠದ ಚೆನ್ನಬಸವೇಶ್ವರ ಕೃಪಾಪೋಷಿತ ತ ಸಂಗೀತ ನಾಟಕ ಸಂಘ’ ಎಂಬ ಸ್ವಂತ ನಾಟಕ ಮಂಡಳಿಯನ್ನು ಕಟ್ಟಿದರು. ಇದರ ಮೂಲಕ ರೈತಾಪಿ ಮಕ್ಕಳಿಗೆ ರಂಗಭೂಮಿಯ ಹುಚ್ಚನ್ನು ಹಿಡಿಸಿದರು. ಗೌಡರು ಬಳ್ಳಾರಿ ರಾಘವ ಅವರ ‘ಆಟ್ರ್ಸ್ ಲವರ್ಸ್ ಲೀಗ್’ನಲ್ಲಿ ಪಾತ್ರವಹಿಸುತ್ತ ಆಂಧ್ರದಲ್ಲೂ ಸುತ್ತಿದರು. ಆಂಧ್ರದಲ್ಲಿ ಇವರ ಗಾಯನದ ಅಭಿಮಾನಿಗಳು ಬಹಳ ಜನರಿದ್ದರು.

ಜೋಳದರಾಶಿಯವರು 1948ರಲ್ಲಿ ಗ್ರಾಮೀಣ ನಾಟಕ ಕಲಾವಿದರ ಕಲಾಬಿsವೃದ್ಧಿಗಾಗಿ ‘ಬಳ್ಳಾರಿ ಜಿಲ್ಲಾ ನಾಟಕಕಲಾ ಪರಿಷತ್ತು’ ಸ್ಥಾಪಿಸಿದರು. ಇದರ ಸಮಾವೇಶ ಜೋಳದರಾಶಿಯಲ್ಲಿ ಗರುಡ ಸದಾಶಿವರಾಯರು ಅಧ್ಯಕ್ಷತೆಯಲ್ಲಿ ನಡೆಯಿತು. 1950ರಲ್ಲಿ ಎರಡನೆಯ ಪರಿಷತ್ತು ಬಳ್ಳಾರಿಯಲ್ಲಿ ಆರ್.ನಾಗೇಂದ್ರರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. 1952ರಲ್ಲಿ ಮೂರನೇ ಪರಿಷತ್ತು ಕಣೆಕಲ್ಲಿನಲ್ಲಿ ಅ.ನ.ಕೃಷ್ಣರಾಯರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ನಾಡಿನ ನಾಟಕಕಾರರು, ನಟರು, ನಿರ್ಮಾತೃಗಳು ಹಾಗೂ ವಿಮರ್ಶಕರು ಒಂದೆಡೆಗೆ ಸೇರಿ ರಂಗಭೂಮಿಯ ಸಂಸ್ಥೆಗಳನ್ನು ಪರಿಶೀಲಿಸಿ, ಹೊಸಮಾರ್ಗವನ್ನು ಶೋಧಿಸುವುದು ಈ ಪರಿಷತ್ತಿನ ಉದ್ದೇಶವಾಗಿತ್ತು.

ಗೌಡರು ಜೋಳದರಾಶಿಯಲ್ಲಿ ‘ರಾಮೇಶ ಕಲಾಮಂದಿರ’ ಕಟ್ಟಿದರು. 1943ರಲ್ಲಿ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವು ಗೌಡರನ್ನು ಸನ್ಮಾನಿಸಿ ‘ಗಮಕ ಕಲಾ ಪ್ರವೀಣ’ ಬಿರುದು ನೀಡಿತು. 1945ರಲ್ಲಿ ಧಾರವಾಡದ ಮರುಘಾಮಠವು ‘ಗಮಕ ಕಲಾನಿಧಿ’ ಬಿರುದು ಕೊಟ್ಟಿತು. 1979ರಲ್ಲಿ ಗದುಗಿನ ತೋಂಟದಾರ್ಯಮಠವು ‘ಗಮಕ ಗಂಧರ್ವ’ ಎಂಬ ಬಿರುದನ್ನು ನೀಡಿತು.

Leave a Reply

Your email address will not be published.