ರಂಗಕಥನ: ಮಲ್ಲಿಕಾರ್ಜುನ ಮನಸೂರರ ರಸಯಾತ್ರೆ,

-ಡಾ.ಮಲ್ಲಯ್ಯ ಸಂಡೂರು

ಉತ್ತರ ಕರ್ನಾಟಕ ವೃತ್ತಿರಂಗಭೂಮಿಯಲ್ಲಿ ರಂಗಗೀತೆಗಳನ್ನು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ಹಾಡಿ ಉಳಿಸಿದವರಲ್ಲಿ ಮಲ್ಲಿಕಾರ್ಜುನ ಮನಸೂರರು(1911-1992) ಒಬ್ಬರು. ತಂದೆ ಭೀಮರಾಯಪ್ಪ ಹಿರಿಯ ಮಗ ಬಸವರಾಜ ಮನಸೂರರಿಗೆ ಕರ್ನಾಟಕಿ ಗಾಯಕ ಅಪ್ಪಯ್ಯಸ್ವಾಮಿಯವರನ್ನು ಕರೆಸಿ ತಾಲೀಮು ಕೊಡಿಸುವಾಗ, ಅದನ್ನು ಮಲ್ಲಿಕಾರ್ಜುನರು ಕೇಳಿಸಿಕೊಳ್ಳುತ್ತಿದ್ದರು. ತಾಯಿ ನೀಲಮ್ಮನವರ ಕಂಠದಿಂದ ಬೀಸುವ ಪದಗಳು, ಲಾಲಿಹಾಡುಗಳು, ಭಕ್ತಿಯ ಹಾಡುಗಳು ಹೊರಹೊಮ್ಮುತ್ತಿದ್ದವು. ಮಲ್ಲಿಕಾರ್ಜುನರಿಗೆ ಚಿಕ್ಕಂದಿನಲ್ಲಿಯೇ ಹೀಗೆ ಸಂಗೀತದ ಆಸಕ್ತಿ ಬೆಳೆಯಿತು. ಅವರು ಶಾಲೆಯನ್ನು ನಿರ್ಲಕ್ಷಿಸಿ ಸಂಗೀತ ಮತ್ತು ನಾಟಕದ ಹುಚ್ಚನ್ನು ಹತ್ತಿಸಿಕೊಂಡರು.

ಅವರ ಹೆಣ್ಣಜ್ಜ ಅನಾಡ ಚೆನ್ನವೀರಪ್ಪನವರ ಆಶ್ರಯದಲ್ಲಿ ಧಾರವಾಡದಲ್ಲಿ ಬೆಳೆಯುವಾಗ ಈ ಹುಚ್ಚು ಇನ್ನಷ್ಟು ಹೆಚ್ಚಿತು. ಧಾರವಾಡದಲ್ಲಿ ವಾಮನರಾವ್ ಮಾಸ್ತರರ ‘ವಿಶ್ವಗುಣಾದರ್ಶ ಸಂಗೀತ ನಾಟಕ ಮಂಡಳಿ’ ಧಾರವಾಡದಲ್ಲಿ ಮೊಕ್ಕಾಮು ಹೂಡಿದ್ದಾಗ ಮಲ್ಲಿಕಾರ್ಜುನರ ನಾಟಕದ ನಂಟು ಆರಂಭಗೊಂಡಿತು. ಅವರು ಮನೆಯವರ ಅಡ್ಡಿಯನ್ನು ಲೆಕ್ಕಿಸಿದೆ ಕಂಪನಿಯ ಹಿಂದೆ ಬಿದ್ದು, ಅಥಣಿಗೆ ಹೋದರು. ಹುಡುಗ ಮಲ್ಲಿಕಾರ್ಜುನನಲ್ಲಿದ್ದ ಪ್ರತಿಭೆಯನ್ನು ವಾಮನರಾಯರ ಕಂಪನಿ ಕಂಡುಕೊಂಡಿತು. ಕಂಪನಿಯಲ್ಲಿ ಅವರ ಅಣ್ಣ ಬಸವರಾಜರು ಆಗಲೇ ನಟರಾಗಿ ಸೇರಿಕೊಂಡಿದ್ದರು. ಅಣ್ಣನೊಂದಿಗೆ ಮಲ್ಲಿಕಾರ್ಜುನ ‘ಭಕ್ತಪ್ರಹ್ಲಾದ’ದಲ್ಲಿ ಪ್ರಹ್ಲಾದನಾಗಿ ‘ಕೃಷ್ಣಲೀಲೆ’ಯಲ್ಲಿ ವಿಜಯನಾಗಿ, ‘ಮಹಾನಂದ’ದಲ್ಲಿ ನಾರದನಾಗಿ, ‘ಬಾಜೀರಾವ’ದಲ್ಲಿ ಸ್ವರಾಜ್ಯಲಕ್ಷ್ಮಿಯಾಗಿ ಮತ್ತು ‘ವರಪ್ರದಾನ’ದಲ್ಲಿ ವಿದ್ಯಾರಣ್ಯರಾಗಿ ಅಭಿನಯಿಸಿದರು. ಸೋದರರ ಅಭಿನಯ ಮತ್ತು ಹಾಡುಗಾರಿಕೆ ರಸಿಕರಿಗೆ ಇಷ್ಟವಾಯಿತು.

ಮಲ್ಲಿಕಾರ್ಜುನ ಅವರು ತಮ್ಮ ಆತ್ಮಕಥೆಯಲ್ಲಿ “ನನ್ನ ಎಳೆತನದಲ್ಲಿಯೇ ನನ್ನ ಮನಸ್ಸಿನ ಮೇಲಾದ ಸಂಸ್ಕಾರಗಳು ಹಾಗೂ ರಂಗಭೂಮಿಯ ಮೇಲೆ ನಾನು ಕಲಿತ ಪಾಠಗಳು ನನ್ನೊಳಗಿನ ಕಲಾಪ್ರೇಮಕ್ಕೆ ಸಾಣೆಹಿಡಿಯಲು ನೆರವಾದವು. ನನ್ನ ಆಕಾಂಕ್ಷೆಗೆ ತಕ್ಕ ಅವಕಾಶಗಳೂ ಆ ನಾಟಕ ಕಂಪನಿಯಲ್ಲಿ ದೊರೆತವು” ಎಂದು ಹೇಳಿಕೊಳ್ಳುತ್ತಾರೆ.12 (ಮಲ್ಲಿಕಾರ್ಜುನ ಮನ್ಸೂರ್, ನನ್ನ ರಸಯಾತ್ರೆ, ಪು.24) ವಾಮನರಾವ್ ಕಂಪನಿಯಲ್ಲಿ ಮಲ್ಲಿಕಾರ್ಜುನರಿಗೆ ಹಾರ್ಮೋನಿಯಂ ಮಾಸ್ತರ ಪಾಂಡೋಬಾ ಮತ್ತು ಕುಕನೂರಿನ ಸಂಗನ ಬಸಪ್ಪನವರು ರಂಗಗೀತೆಗಳನ್ನು ಕಲಿಸಿದರು. ಅಥಣಿಯಿಂದ ಕಂಪನಿ ಬಾಗಲಕೋಟೆಗೆ ಹೋದಾಗ ಮಲ್ಲಿಕಾರ್ಜುನರಿಗೆ ಹಾವೇರಿಯ ಹುಕ್ಕೇರಿ ಮಠದ ಶ್ರೀ ಶಿವಬಸವಸ್ವಾಮಿಗಳ ಭೇಟಿಯಾಯಿತು. ಸ್ವಾಮಿಗಳ ಜೊತೆಗೆ ಹಾರ್ಮೋನಿಯಂ ಮಾಸ್ತರರಾದ ಪಾಂಡೋಬಾರವರ ಗುರುಗಳಾದ ನೀಲಕಂಠಬುವಾ ಆಲೂರಮಠ ಇದ್ದರು.

ನೀಲಕಂಠಬುವಾ ಅವರು ಪಾಂಡೋಬ ಅವರಿಗೆ ‘ನಿಮ್ಮ ಕಂಪನಿಯೊಳಗ ಒಬ್ಬ ಹುಡುಗ ಪಸಂದಾಗಿ ಹಾಡ್ತಾನಂತಲ್ಲ? ಅಂವ ಎಲ್ಲಿದ್ದಾನ?’ ಎಂದು ವಿಚಾರಿಸಿ, ಮಲ್ಲಿಕಾರ್ಜುನ ಅವರನ್ನು ಕಂಡರು. ಈ ಪ್ರಸಂಗವನ್ನು ಮಲ್ಲಿಕಾರ್ಜುನ ಅವರು ಹೀಗೆ ಹೇಳಿಕೊಳ್ಳುತ್ತಾರೆ: “ನೀಲಕಂಠ ಬುವಾ ಅವರು ನನ್ನನ್ನು ಒಂದು ಪದಾ ಹೇಳಿ ತೋರಿಸಪ್ಪ’ ಎಂದು ಅಪ್ಪಣೆಯಿತ್ತರು. ನಾನು ಹಾಡಿದೆ. ನನ್ನ ಹಾಡು ಕೇಳಿ ನೀಲಕಂಠಬುವಾ ಅವರ ಮುಖದ ಮೇಲೆ ಆನಂದದ ನಗೆಯರಳಿದಂತೆ ಕಂಡಿತು. ಆ ಕೂಡಲೇ ಅವರು ನಮ್ಮಣ್ಣ ಬಸವರಾಜನನ್ನು ಕರೆದು ‘ಈ ಹುಡುಗನನ್ನು ನನ್ನ ಕಡೆಗೆ ಕೊಟ್ಟುಬಿಡ್ರಿ. ಒಬ್ಬ ಒಳ್ಳೇ ಸಂಗೀತಗಾರನನ್ನು ತಯಾರಿಸುವೆ. ಇವನು ನಾಟಕ ಕಂಪನಿಯಲ್ಲಿದ್ದು ತನ್ನ ಪ್ರತಿಭೆಯನ್ನು ಹದಗೆಡಿಸಬಾರದು’ ಎಂದರು. ಅವರ ವಿಶ್ವಾಸವನ್ನು ಕಂಡು ನಮ್ಮಣ್ಣ ಮರುಮಾತನಾಡದೆ ಸಮ್ಮತಿ ನೀಡಬೇಕಾಯಿತು.”13(ಪಾಟೀಲ ಪುಟ್ಟಪ್ಪ, ಗಾನಗಾರುಡಿಗ, ಸಂಗೀತಗಾರರ ಸಂಗೀತಗಾರ ಪಂ.ಮಲ್ಲಿಕಾರ್ಜುನ ಮನಸೂರ, ಪು.38) ಮುಂದೆ ನೀಲಕಂಠಬುವಾರವರು ಮಲ್ಲಿಕಾರ್ಜುನರನ್ನು ತಮ್ಮೊಂದಿಗೆ ಮೀರಜಿಗೆ ಕರೆದೊಯ್ದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬುನಾದಿಯನ್ನು ಹಾಕಿದರು.

mallikarjuna mansurಮಲ್ಲಿಕಾರ್ಜುನ ಅವರಿಗೆ ಸಂಗೀತ ಕಲಿತ ಬಂದ ಬಳಿಕ ವೃತ್ತಿಯಾಗಿ ಸಂಗೀತ ಗಾಯನವನ್ನು ಸ್ವೀಕರಿಸುವುದೋ ನಾಟಕ ಕಂಪನಿಯನ್ನು ಸೇರುವುದೊ ಎಂಬ ಗೊಂದಲವಾಯಿತು. ಸಂಗೀತದಿಂದ ಜೀವನ ನಡೆಸುವುದು ಕಷ್ಟವೆಂದು ಅರಿತು, ವಾಮನಮಾಸ್ತರರ ಆಹ್ವಾನದ ಮೇರೆಗೆ 1929ರ ಸುಮಾರಿಗೆ ವಿಶ್ವಗುಣಾದರ್ಶ ಮಂಡಳಿ
ಸೇರಿಕೊಂಡರು. ರಂಗಚರಿತ್ರೆಕಾರರ ಪ್ರಕಾರ, “ಮಲ್ಲಿಕಾರ್ಜುನ ಅವರು ಕಂಪನಿ ಸೇರಿದಾಗ, ಮಾಲೀಕರಾದ ವಾಮನರಾವ್ ಮಾಸ್ತರರು ‘ವೀರಅಭಿಮನ್ಯು’ ನಾಟಕವನ್ನು ಕೂಡಿಸುತ್ತಿದ್ದರು. ಅದರಲ್ಲಿ ಅವರು ಮನ್ಸೂರರಿಗೆ ಶಕುನಿ ಪಾತ್ರ ಕೊಟ್ಟರು. ಮಲ್ಲಿಕಾರ್ಜುನ ಅವರಿಗೆ ಈ ಪಾತ್ರದಲ್ಲಿ ಹಾಡಲು ಎರಡು ಹಾಡುಗಳಿದ್ದವು. ಪ್ರೇಕ್ಷಕರು
ಆ ಎರಡು ಹಾಡುಗಳಿಗಾಗಿ ನಾಟಕ ನೋಡಲು ಬರುತ್ತಿದ್ದರು. ಆ ಹಾಡುಗಳಿಗೆ ‘ಒನ್ಸ್‍ಮೋರ್’ ಬೀಳುತ್ತಿದ್ದವು.”14 (ಪಾಟೀಲ ಪುಟ್ಟಪ್ಪ, ಗಾನಗಾರುಡಿಗ, ಸಂಗೀತಗಾರರ ಸಂಗೀತಗಾರ ಪಂ.ಮಲ್ಲಿಕಾರ್ಜುನ ಮನಸೂರ,
ಪು.38)

ಮನಸೂರರು ಆ ಎರಡು ಹಾಡುಗಳ ಬಗ್ಗೆ ಹೀಗೆ ಹೇಳಿಕೊಳ್ಳುವರು. “ಕಾಮೋದದಲ್ಲಿಯ ‘ಅರಿಯು ಪ್ರಬಲವಾಗಿ ದ್ವಾರದಿ’, ದೇಸಕಾರದಲ್ಲಿಯ ‘ರಣರಂಗದಿ ವೀರರಾಗಿ’ ಬಹಳ ಲೋಕಪ್ರಿಯವಾದವು. ಅರ್ಧರ್ಧ ಘಂಟೆಯವರೆಗೂ ಒಂದೊಂದು ರಚನೆಯನ್ನು ಹಾಡಿದ ನಂತರವೂ ಜನರ ‘ಒನ್ಸ್‍ಮೋರ್’ ತಪ್ಪುತ್ತಿರಲಿಲ್ಲ. ಹುಬ್ಬಳ್ಳಿಯಲ್ಲಿಯೇ ಈ ನಾಟಕದ 80 ಪ್ರಯೋಗಗಳು ಜರುಗಿದವು.”15 (ಮಲ್ಲಿಕಾರ್ಜುನ ಮನ್ಸೂರ್, ನನ್ನ ರಸಯಾತ್ರೆ, ಪುಟ.29)ಮುಂದೆ ಮಲ್ಲಿಕಾರ್ಜುನ ಯರಾಸಿ ಭರಮಪ್ಪನವರ ‘ವಾಣಿವಿಲಾಸ ಸಂಗೀತ ನಾಟಕ ಮಂಡಳಿ’ಗೆ ಬಂದರು. ಆಗ ಯರಾಸಿ ಭರಮಪ್ಪನವರು ರಂಗಕವಿಗಳಾಗಿ ಚಿಕ್ಕೋಡಿ ಶಿವಲಿಂಗಸ್ವಾಮಿಗಳ ‘ಕಿತ್ತೂರುರುದ್ರಮ್ಮ’ ನಾಟಕವನ್ನು ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡಿದ್ದರು. ಸಂಗೀತಕ್ಕಾಗಿ ಮಲ್ಲಿಕಾರ್ಜುನ ಮನಸೂರರನ್ನು ಅವರ ಗುರುಗಳಾದ ನೀಲಕಂಠಬುವಾ ಅವರ ಸಮೇತ ಕಂಪನಿಯಲ್ಲಿಟ್ಟುಕೊಂಡಿದ್ದರು. ಕಂಪನಿಯಲ್ಲಿ ಅವರು ‘ಕಿತ್ತೂರು ರುದ್ರಮ್ಮ’ ಮತ್ತು ‘ವರಪ್ರದಾನ’ ನಾಟಕಗಳಲ್ಲಿ ಮಲ್ಲಿಕಾರ್ಜುನ ಅಭಿನಯಿಸಿದರು. 

ಅದರಲ್ಲಿ ಮಲ್ಲಿಕಾರ್ಜುನ ಮನಸೂರರು ದಿಲಾವರಖಾನನ ಪಾತ್ರದಲ್ಲಿ, ಭೀಮಪಲಾಸ ರಾಗದಲ್ಲಿ ‘ವಂದ್ಯ ಧರ್ಮ ವಿಘಾತ ಖಲಾತ್ಮಜ| ಭೂರಿ ಭುವನ ಭಾರ ದೇಶೋದ್ಧಾರಕ’ ಮಿಯಾ ಮಲ್ಲಾರ ರಾಗದಲ್ಲಿ ‘ಪ್ರೇಮಾತ್ಮ ಸುಗುಣಾತ್ಮಾ ಪ್ರೇಮದಿ| ಪಾಲಿಸು ಖ್ಯಾತಿಯುತಾ’ ಮತ್ತು ಗೌಡಮಲ್ಹಾರ ರಾಗದಲ್ಲಿ ‘ಸುಜಾತ ಪೊರೆಪೊರೆ ವೀರನೃಪ’ ಎನ್ನುವ ಮೂರು ಹಾಡುಗಳು ಹಾಡಿದರು. ಈ ಹಾಡುಗಳು ಕೇಳುಗರ ಮನಸೂರೆಗೊಂಡವು. ಮುಂದೆ ಕಂದಗಲ್ಲ ಹಣಮಂತರಾಯ ಕೃತ ‘ವರಪ್ರದಾನ’ ನಾಟಕದಲ್ಲಿ ಮಲ್ಲಿಕಾರ್ಜುನ ಮನಸೂರರು ವಿದ್ಯಾರಣ್ಯರಾಗಿ ನಟಿಸಿದರು. ಅದರಲ್ಲಿ ಮನಸೂರರು ಮಾಲಕಂಸ ರಾಗದಲ್ಲಿ ‘ಕಾಲ ಬೆದರಿ ಗಮಿಸುವಾ ಪಾಪಿಯೆ ಹರನ ಭಕುತಿಗೆ’ ಎನ್ನುವ ರಂಗಗೀತೆಯನ್ನು ಹಾಡುತ್ತಿದ್ದರು.

ಈ ನಾಟಕದಲ್ಲಿ ಮಲ್ಲಿಕಾರ್ಜುನ ಮನಸೂರರ ಗಾಯನ ಮತ್ತು ನಟನೆಯ ಬಗ್ಗೆ ಎನ್ಕೆಯವರು ಈ ರೀತಿಯಾಗಿ ವರ್ಣಿಸುತ್ತಾರೆ: “ಮಲ್ಲಿಕಾರ್ಜುನ
ಮನಸೂರ ಮಧ್ಯರಾತ್ರಿಯ ನಾಟಕದ ಮಧ್ಯಭಾಗದ ಪ್ರವೇಶವಂತೂ ಅದ್ಭುತ ಪರಿಣಾಮಕಾರಿಯಾಗಿತ್ತು. ಕೈಯಲ್ಲಿ ದಂಡ ಕಮಂಡಲು, ಕಾಲಲ್ಲಿ ಆವುಗೆ, ಕೊರಳಲ್ಲಿ ಜಪಮಣಿ, ಮೈಮೇಲೆ ಕಾವಿಯ ಬಟ್ಟೆ ಧರಿಸಿ, ಮಾಲಕಂಸ ರಾಗದಲ್ಲಿ ‘ಕಾಲ ಬೆದರಿ ಗಮಿಸುವಾ ಪಾಪಿಯೇ ಹರನ ಭಕುತಗೇ’ ಎಂದು ರೋಷಾವೇಶದಿಂದ ಹಾಡುತ್ತ ಪ್ರವೇಶ ಮಾಡಿದಾಗ ಪ್ರೇಕ್ಷಾಗೃಹ ಪುಲಕಗೊಂಡಿತ್ತು.”16 (ಎನ್ಕೆ ಕುಲಕರ್ಣಿ, ಮಲ್ಲಿಕಾರ್ಜುನ ಮನ್ಸೂರ್,
ಪು.18)

ಇದಾದ ನಂತರ ಮಲ್ಲಿಕಾರ್ಜುನ ಮನಸೂರರು ರಂಗಭೂಮಿಗೆ ವಿದಾಯ ಹೇಳಿ ಹಿಂದೂಸ್ತಾನಿ ಸಂಗೀತ ವೃತ್ತಿಗೆ ತೆರಳಿದರು. ಆದರ ಅವರಿಗೆ ರಂಗಭೂಮಿಯ ಮಾಯೆ ಬಿಡಲಿಲ್ಲ. ಅವರು ವಿಷ್ಣುಪಂತ ಕುಲಕರ್ಣಿ ಮತ್ತು ಹಕ್ಕಂಡಿ ವೀರಪ್ಪನವರ ನೇತೃತ್ವದ ‘ವಿಶ್ವ ರಂಜನಿ ಕಂಪನಿ’(ಸು.1935)ಯ ‘ಹೇಮರಡ್ಡಿ ಮಲ್ಲಮ್ಮ’ ನಾಟಕಕ್ಕೆ ಸಂಗೀತವನ್ನು ಸಂಯೋಜಿಸಬೇಕಾಯಿತು. ಇದನ್ನು ಏಣಗಿ ಬಾಳಪ್ಪನವರು “ಮಲ್ಲಿಕಾರ್ಜುನ ಹೆಸರಾಗಿದ್ದು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ, ಇದಕ್ಕ ರಂಗಭೂಮಿ ಏಣಿ ಆಯಿತು” ಎಂದು ಸರಿಯಾಗಿಯೇ ಗುರುತಿಸುತ್ತಾರೆ.”17 (ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪು.137)ಆದರೆ ಮುಂದೆ
ಮನಸೂರರು ಶಾಸ್ತ್ರೀಯ ಸಂಗೀತಕ್ಕೆ ಕೊಟ್ಟ ಪ್ರಾಧಾನ್ಯತೆ ರಂಗಗೀತೆಗಳಿಗೆ ಕೊಡಲಿಲ್ಲ ಎಂಬ ಆಪಾದನೆ ಉಳಿಯಿತು.

Leave a Reply

Your email address will not be published.