‘ಯೂರೋಪಿಯನ್ನರು ನಡೆದಲ್ಲೆಲ್ಲ ಸಾವು ಹಿಂಬಾಲಿಸಿದಂತೆ ಕಾಣುತ್ತದೆ’

ಡಾ. ರಾಜೇಗೌಡ ಹೊಸಹಳ್ಳಿ

ಭೂಗೋಳವೇ ಒಂದು ಚೆಂಡು. ಅದು ದೇವರಾಡುವ ಚೆಂಡು. ಪ್ರಕೃತಿಯೆಂಬ ಚಕ್ರದ ಅರೆಕೋಲುಗಳ ಏರಿಳಿತದ ಅರಿವು ಮಿದುಳು ಬಲವಿರುವ ಅಂಗೈಯೊಳಗಿರುವ ಹೆಬ್ಬೆರಳಿನ ಅಹಂಕಾರವಿರುವ ಮನುಷ್ಯನಿಗಿರಬೇಕಾಗಿತ್ತು. ರಣಬಿಸಿಲು ಬಿಸಿಗಾಳಿ ಬೆಂಗಳೂರು ಚೆನ್ನೈ ದಿಲ್ಲಿಗಳೆಲ್ಲವನ್ನು ಸಮಾನ ಸ್ಥಾನದಲ್ಲಿ ನಿಲ್ಲಿಸುತ್ತಿದೆ. ರಾಜಸ್ಥಾನ ಮಾದರಿಯ ಮರು ಭೂಮೀಕರಣಕ್ಕೆ ಸಜ್ಜು ಮಾಡುತ್ತಿದೆ. ಇದು ಪ್ರಕೃತಿಯ ಪ್ರತಿಭಟನೆ. ಪ್ರಕೃತಿ ಮತ್ತು ಹೆಣ್ಣು ಅವಳಿಜವಳಿ. ಈ ಜೀವಿಗಳಿಗೆ ಪ್ರತಿಭಟನೆ ಇಲ್ಲವೆನ್ನುವುದು ನಾಗರೀಕತೆಯ ಮೂರ್ಖತನ. ಇತ್ತೀಚೆಗೆ ಯುಗೋಸ್ಲೋವಿಯಾದಲ್ಲಿ ಮರಿನಾ ಅಬ್ರಾಮೋವಿಕ್ ಎಂಬಾಕೆ ಆಧುನಿಕ ನಾಗರೀಕರ ಮಾಲ್ ಸ್ಥಳದಲ್ಲಿ 6 ಗಂಟೆ ಬೊಂಬೆ ಮಾದರಿಯಲ್ಲಿ ನಿಲ್ಲುತ್ತಾಳೆ. ನೋಡಲು ಬಂದವರೆಲ್ಲಾ ಅವಳ ಸುತ್ತಲಿನಲ್ಲಿದ್ದ ಅವಳ ವಸ್ತುಗಳನ್ನು ಎತ್ತಿಕೊಳ್ಳುತ್ತಾರೆ. ಅವಳ ಬಟ್ಟೆ ಬಿಚ್ಚುತ್ತಾರೆ. ಬ್ಲೇಡಿನಿಂದ ಮುಖಮೋರೆ ಮೈಕೈ ಗೀರುತ್ತಾರೆ. ಅವಳು ಸಹಿಸಿ ನಿಲ್ಲುತ್ತಾಳೆ. ಆಯ್ತು ಅದೇ ಮಾದರಿಯಲ್ಲಿ ನಡೆದು ಹೋಗುತ್ತಾಳೆ.

earthಈ ಕೃತ್ಯ ಎಸೆಗಿದವರು ಏನೂ ಅಲ್ಲವೆಂಬಂತೆ ಅವಳೆದುರಿಗೇ ತಿರುಗಾಡುತ್ತಾರೆ. ಕಲಾ ಪ್ರದರ್ಶನವೆಂಬ ನೆಪದ ಮೂಲಕ ಮನಶಾಸ್ತ್ರೀಯವಾಗಿ ಬುದ್ಧಿಯಿರುವ ಮಾನವರನ್ನು ಪರೀಕ್ಷಿಸಿದ ವಿಧಾನವಿದು. ಅಂಗೈ ಮೇಲಿನ ಮೊಬೈಲಿನಲ್ಲಿನ ಈ ವೈರಲ್ ಪ್ರಕೃತಿಯ ಅತ್ಯಾಚಾರವನ್ನು ಹೆಣ್ಣಿನ ಮೂಲಕ ಹೇಳುತ್ತಿದೆ. ಈ ಅತ್ಯಾಚಾರ ಮಾಡುತ್ತಿರುವುದು ಮಾಡಿದ್ದು ವಿಜ್ಞಾನ ಅಳವಡಿಸಿಕೊಂಡ ಲೋಕ. ಅದು ಆಧುನಿಕತೆ ಅಥವಾ ನಾಗರೀಕತೆಯ ರೂಪಕ. ‘ವಿಜ್ಞಾನವು ಯಶಸ್ಸಿನ ಮೇಲೆ ಯಶಸ್ಸು ಪಡೆಯಬಹುದು. ಆದರೆ ಪ್ರಕೃತಿಯನ್ನು ಅದು ಬಹಳ ಅಲಕ್ಷಿಸುತ್ತದೆ. ಪ್ರಕೃತಿಯೂ ಭಯಂಕರ ರೀತಿಯಲ್ಲಿ ತನ್ನ ಸೇಡು ತೀರಿಸಿಕೊಳ್ಳಬಹುದು’ ಎಂದು ಹೇಳುತ್ತಿರುವ ಈ ಮಾತು ವಿಜ್ಞಾನದಿಂದ ಇತರೆ ದೇಶಗಳಿಗೆ ಸಮಾನವಾಗಿಸುವ ಬಡ ಭಾರತ ಕನಸಿನ ನೆಹರೂವಿನದು. ಇದನ್ನೆ ಗಾಂಧಿ ನಾನೇನು ವಿಜ್ಞಾನ ವಿರೋಧಿಯಲ್ಲ ಆದರೆ ‘ಪಶ್ಚಿಮದ ವಿಜ್ಞಾನಿ ದೇವರ ಸೃಷ್ಟಿಯಲ್ಲಿನ ಕೆಳಸ್ತರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು. ಜೀವಂತ ಜಂತುಗಳ ದೇಹಚ್ಛೇದನೆ ನನಗೆ ಅಸಹ್ಯವೆನಿಸುತ್ತದೆ’ ಎನ್ನುತ್ತಾರೆ.

ಬಿಳಿಯರು ಅಮೆರಿಕಾ ಭಾರತಗಳಿಗೆ ಕಾಲಿಟ್ಟಾಗಲೇ ಅಪಶಕುನಗಳಾಗಿರಬಹುದು. ಇದನ್ನೆ ಚಾಲ್ರ್ಸ್ ಡಾರ್ವಿನ್ ‘ಯೂರೋಪಿಯನ್ನರು ನಡೆದಲ್ಲೆಲ್ಲ ಸಾವು ಹಿಂಬಾಲಿಸಿದಂತೆ ಕಾಣುತ್ತದೆ’ ಎಂದು ಬಿಡುತ್ತಾನೆ. ಅಲ್ಲಿ ಅಟ್ಲಾಂಟಾದಿಂದ ಮಿಸಿಸಿಪಿವರೆಗೆ ನೆಲಕ್ಕೆ ಬಿಸಿಲು ತಾಗದ ವೃಕ್ಷ ಜೀವ ಸೆಲೆಯಿತ್ತು. ಅದಕ್ಕೆ ಪ್ರತಿಯಾಗಿ ಕಬ್ಬಿಣ ಸಿಮೆಂಟು ಅಡವಿ ಕವಿಯಿತು. ಅಮೆರಿಕಾ ಕೃಷಿ ಕಂಪೆನಿಗಳೀಗ ಅಮೆಜಾನ್ ಅಡವಿಗೆ ಲಗ್ಗೆ ಸಹಾ ಇಟ್ಟಿವೆ. 2030 ರವರೆಗೆ ಈ ಕರಾರುಗಳಲ್ಲಿರುವ ಕಾರ್ಗಿಲ್ ಅಂತಹ ಕಂಪೆನಿಗಳಿಂದ ಹಾಗೇ ಮುಂದುವರಿದರೆ ಅಡವಿ ಮಾಯವಾಗುತ್ತದೆ’. ಇದೇ ಸಾಲಿನಲ್ಲಿ ಟಿಬೆಟ್ ಎಂಬ ನೀರಬಾನಿ ಚೈನಾದಿಂದ ಹರಣವಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಅವುಗಳ ಬಾಲಗಳಾಗಿವೆ. ಇತ್ತ ನೆಲಜಲದ ಕಥನ ಹೀಗಿದ್ದರೆ ಸಾಗರದ ಕಥನ ಬಿಸಿಯುಕ್ಕಿ ಅಬ್ಬರಿಸುತ್ತಿದೆ. ಆಸ್ಟ್ರೇಲಿಯಾದ ಕಡಲ ತಡಿಯ ಕೋರಲ್ ರೀಫ್ ಎಂಬುದರ ಮೇಲೆ ಅತ್ಯಾಚಾರವಾಗುತ್ತಿದೆಯೆಂಬ ಸುದ್ಧಿ ಎಲ್ಲಾ ದೇಶಗಳ ಕಡಲ ತಡಿಯನ್ನು ಮಾನವನ ದುರಾಸೆ ಅಗಿದುಗಿಯುತ್ತಿರುವ ದುರಂತದ್ದು. ಒಂದು ನಿದರ್ಶನದಲ್ಲಿ ಹೇಳುವುದಾದರೆ ಜಗತ್ತಿನ ವಿದ್ಯುತ್ ಮೂಲದ ಕಾರ್ಬನ್ ಡೈ ಆಕ್ಸೈಡ್ ವಿಷಾನಿಲ ಶೇ. 37ರಷ್ಟು ಅಮೆರಿಕಾ ಮೂಲದಿಂದಲೇ ಬರುತ್ತಿದೆ. ಇದು ದೊಡ್ಡಣಂದಿರು ಹಾಳು ಮಾಡುತ್ತಿರುವ ದಾರಿ. ನಮ್ಮಲ್ಲಂತೂ ನೆಹರು ಕಾಲ ಸರಿಯಿತು. ಏಳು ದಶಕವೂ ಕಳೆಯಿತು. ಮೇಲಿನ ಹೆಣ್ಣು ಮರಿಯಾ ರೂಪಕದಲ್ಲೆ ಇನ್ನೂ ಈ ದೇಶವಿದೆ.

ಒಂದು ಸ್ಥಳೀಯ ನಿದರ್ಶನ ಮೂಲಕ ಹೇಳುವುದಾದರೆ ಆಗುಂಬೆ ಹುಲಿಕಲ್ ನಡುವೆ ವರಾಹಿ ಘಟಕವೊಂದನ್ನು ವಿದ್ಯುತ್‍ಗಾಗಿ ನಿರ್ಮಿಸಿ ಜಗತ್ತಿನ ಮಹಾ ಅಡವಿಯೊಂದನ್ನು ಮುಳುಗಿಸಲಾಯಿತು. ಆಗ ಆಚೆಗೆ ಬಂದ ಹಂದಿಗಳು ಶತಮಾನಗಳಿಂದ ಬಿಸಿಲು ತಾಗದೆ ಬೆಳ್ಳಗಿದ್ದವಂತೆ. ಅಂತಾ ಪಶ್ಚಿಮ ಘಟ್ಟ ಬರಿದಾಗಿದೆ. ಬರಿದಾಗುತ್ತಿದೆ. ಸಹ್ಯಾದ್ರಿ 1500 ಕಿ.ಮೀ ಹಬ್ಬಿದಾಮಲೆ. ಅದರಲ್ಲಿ ಶೇ.60 ಭಾಗ ಒಡೆತನ ನಮ್ಮ ರಾಜ್ಯಕ್ಕುಂಟು. ಸಹ್ಯಾದ್ರಿ ಬತ್ತಿದರೆ ದಕ್ಷಿಣ ಭಾರತ ಬತ್ತಿ ಹೋಗುತ್ತದೆಂಬ ಪ್ರಜ್ಞೆ ಯಾವ ಆಳುವ ಭೂಪರಿಗೂ ಇಲ್ಲ. ಅಂದು ಕ್ರಿ.ಶ. 1770 ರಷ್ಟರಲ್ಲಿ ಬಿಹಾರ ಬಂಗಾಳ ನೆಲದಲ್ಲಿ ಕ್ಷಾಮ ಬಂದು ಅಲ್ಲಿನ 1/3 ಜನಸಂಖ್ಯೆ ಸಾವಿಗೆ ಶರಣಾಯಿತು. ಅದೇ ಬಂಗಾಳ ನೆಲದಲ್ಲಿ ಎರಡನೇ ಮಹಾಯುದ್ಧ ಸಮಯದಲ್ಲಿ 4 1/2 ಲಕ್ಷ ಮಂದಿ ಕ್ಷಾಮದಲ್ಲಿ ಸತ್ತರು. ಆಗ ಆಳುವ ವಿದೇಶಿಗಳಿದ್ದರು. ‘ಕಲ್ಕತ್ತ ನಗರ ಬೀದಿಗಳಲ್ಲಿ ಹೆಣಗಳು ಕೊಳೆತು ಈ ಭೀಕರ ನಾಟ್ಯ ನಡೆಯುತ್ತಿದ್ದಾಗ ನಗರದ ಹತ್ತು ಸಾವಿರ ಶ್ರೀಮಂತರ ಸಮಾಜ ಜೀವನ ಮಾತ್ರ ಅದೇ ವೈಭವದಿಂದ ಮುಂದುವರಿಯುತ್ತಿತ್ತು’ ಎಂದು ಪ್ರತ್ಯಕ್ಷ ದರ್ಶಿಯಾಗಿ ನೆಹರೂ ಹೇಳುತ್ತಾರೆ. ಗಾಂಧಿ ಕೊರಗುತ್ತಾರೆ. ಈಗ ಪ್ರಭುತ್ವ ದೇಶೀಯತೆಗೆ ಬದಲಾಗಿದೆ.

ಆದರೆ ಇಲ್ಲಿ ಜೀವನ ವೈಭವ ಕೇವಲ ಶೇ.1 ಸಿರಿವಂತರ ತೆಕ್ಕೆಯಲ್ಲಿದೆ. ‘ಮಾತೃಭೂಮಿಯ ಹಿಡಿಮಣ್ಣು ಪರದೇಶದ ಹೊನ್ನಿನ ರಾಶಿಗಿಂತಲೂ ಶ್ರೇಷ್ಠ. ಆದ್ದರಿಂದ ಕುಡಿ’ ಎಂದು ಹೂಯನತ್ಸಾಂಗ್ ವಿದೇಶ ಯಾತ್ರೆ ಹೊರಟಾಗ ಅಲ್ಲಿನ ಚಕ್ರವರ್ತಿ ತಾಂಗ್ ಮಣ್ಣು ಕದಡಿ ಕುಡಿಯಲು ಹೇಳಿದ್ದನಂತೆ. ಈ ಮಣ್ಣೆಂಬ ದೇಶೀ ಪ್ರಜ್ಞೆ, ಮಣ್ಣಿನಿಂದ ಮುಗಿಲಿನ ಕಡೆಗೆ ಚಾಚುವ ಹಸಿರು ಪ್ರಜ್ಞೆ ಇಂದಿನ ಪ್ರಭುಗಳಲ್ಲಿ ಉಳಿದಿಲ್ಲ. ಹೊನ್ನಿನ ರಾಶಿಯೇ ಕನಸಿನಲ್ಲೂ ಇಣುಕುತ್ತದೆ. ನಿಸರ್ಗ ನ್ಯಾಯದ ನಿರಾಕರಣೆ ಹಂಚುಣ್ಣುವುದನ್ನೆ ನಿರಾಕರಿಸುತ್ತಿದೆ. ಇಂದು ಅಮೆರಿಕೆ ವಿಶ್ವ ಪಂಚಾಯ್ತಿಯ ಹಿರಿಸ್ಥಾನದಲ್ಲಿರುವುದು ಹೌದು. ಆದರೆ ನ್ಯಾಯ ಹೇಳುವಾದ ಹಸಿದವರ ಪರವಾಗಿಲ್ಲ. ಎಮೆನ್ ಒಮೆನ್ ಸೂಡಾನ್ ಲಿಬಿಯಾ ಈ ಎಲ್ಲರ ಊಟದ ತಟ್ಟೆ ಕಿತ್ತುಕೊಳ್ಳುವ ಸಂಭ್ರಮದಲ್ಲಿದೆ. ಸಿರಿಯಾ ಸುತ್ತಲಿನ ಪಂಚದೇಶಗಳ ಮಕ್ಕಳ ತಾಯಂದಿರ ಕಳ್ಳುಬಳ್ಳಿಯನ್ನು ಮತವೆಂಬ ಭ್ರಾಂತು ತಡೆಗೋಡೆ ಎಬ್ಬಿಸಲಾಗುತ್ತಿದೆ. ಇದು ಜಗದ ನ್ಯಾಯವೇ ಆಗಿ ಮಾರ್ಪಾಟಾಗುತ್ತಿದೆ. ಭಾರತ ಕೂಡ ಈ ನ್ಯಾಯವನ್ನೆ ಸ್ವೀಕರಿಸುತ್ತಿದೆ. ಈ ಎಲ್ಲವನ್ನು ಧಾಟುವುದು ಗಾಂಧಿ ನೆರಳಿನ ಪ್ರಜಾಪ್ರಭುತ್ವವಾಗಬೇಕಿತ್ತು. ಆದರೆ ಆಧುನಿಕತೆಯ ಭೂತ ದೇಶದ ತುಂಬಾ ಸಂಚರಿಸುತ್ತಿದೆ.

ಈ ದೇಶದ ಪ್ರಜಾಪ್ರಭುತ್ವ ನಿಧಾನಕ್ಕೆ ಬೆಳೆವ ಸಸ್ಯವಾಗಬೇಕಿತ್ತು. ಈಗ ಆತುರದ 76 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳಿಂದ ತಳತಳಿಸುತ್ತಿದೆ. ಅದರ ನೂರಾರು ಪಟ್ಟು ರಾಜ್ಯ ಹಾಗೂ ಕಿರು ದಾರಿ ಹೆದ್ದಾರಿಗಳಿಂದ ಜಗತ್ತಿನ ಎಲ್ಲಾ ಮಾದರಿಯ ವಾಹನಗಳನ್ನು ಬರಮಾಡಿಕೊಂಡಿದೆ. ಅಶೋಕನ ಕಾಲದ ನಿಸರ್ಗ ನೆರಳು ಹಾದಿಗಳಿಗಿಲ್ಲ. ರಾಜಮಹಾರಾಜರ ಕೆರೆಕಟ್ಟೆಗಳು ಉಳಿದಿಲ್ಲ. ನೆಲದ ಮೇಲೂ ನೀರಿಲ್ಲ ನೆಲದಾಳದಲ್ಲೂ ನೀರಿಲ್ಲ. ಹಾಗಾದರೆ ಏನು ಮಾಡಬೇಕು? ಮೇಲಿನ ಎಲ್ಲಾ ರಸ್ತೆ ಬದಿಯಲ್ಲಿ ಕೋಟ್ಯಾಂತರ ಮರಗಳ ನೆರಳು ಬರಬೇಕು. ಅದು ರಾಜಕೀಯ ಪ್ರಜ್ಞೆಯಾಗಬೇಕು. ಸಮಾಜದ ಒತ್ತಾಯವಾಗಬೇಕು. ಯಾವುದೇ ಸಬ್ಸಿಡಿಯ ಆಮಿಷವಿಲ್ಲದೆ ಜನ ಕೆಲಸ ಮಾಡಲಾರರು ಎಂಬುದು ರಾಜಕೀಯ ಲೆಕ್ಕಾಚಾರ. ನೀರ ನೆಮ್ಮದಿಯ ನಾಳೆಯನ್ನು ಹುಡುಕಲು ಹೊರಟಿರುವುದು ಪ್ರಜಾ ಲೆಕ್ಕಾಚಾರ.

ಕನ್ನಡದ ನಟ ಯಶ್ ಮಾದರಿ, ಹಿಂದಿಯ ನಟ ಅಮೀರ್ ಖಾನ್ ಮಾದರಿಗಳು ಪರಂಪರೆಯ ಜ್ಞಾನ ವಿಜ್ಞಾನಗಳು. ಅವು ಗ್ರಾಮ ಸಮುದಾಯದ ಮಾದರಿಗಳು. ಅವೇ ಗಾಂಧಿ ಹೇಳಿದ ರೀತಿ ನೀತಿಗಳು. ಕೆರೆ ಕಟ್ಟೆಗಳ ಪುನರ್ಜೀವೀಕರಣ ರಸ್ತೆ ಬದಿಯ ಹಸುರೀಕರಣ ಪಾತಾಳ ಕೊರೆಯುವ ನಿಯಂತ್ರಣ ಇವೆಲ್ಲದರ ಜೊತೆಗೆ ಸರಳ ಬದುಕು ಮೂಲಕ ಪ್ರಕೃತಿಯನ್ನು ಹರಿದು ಮುಕ್ಕುವಿಕೆಗೆ ನಿಯಂತ್ರಣ ಹೇರಿಕೊಂಡರೆ ಪ್ರಕೃತಿ ಎಂಬ ಚಕ್ರ ಪರಂಪರೆಯ ಪ್ರಜ್ಞೆಯನ್ನು ಬದುಕಿಗೆ ತಳಿಕೆ ಹಾಕಬಲ್ಲದು. ‘ಸ್ವರ್ಗದ ಜೊತೆ ಮಾತನಾಡಲು ಭೂಮಿ ನಡೆಸುತ್ತಿರುವ ಸತತ ಪ್ರಯತ್ನಗಳೇ ಮರಗಳು’ ಎನ್ನುವ ರವೀಂದ್ರರ ನುಡಿ ಆ ಬೇರಿನೊಳಗೆ ನೀರು ಜಿನುಗಿಸಿ ಜಗದಂತ್ಯವನ್ನು ಮುಂದೂಡಬಲ್ಲದು. ಅದೇ ಎಲ್ಲರೂ ಪುನಃ ಹೊರಡಬೇಕಾಗಿರುವ ದಂಡಿಯ ಪಯಣ.

ಡಾ|| ರಾಜೇಗೌಡ ಹೊಸಹಳ್ಳಿ
413 ಟೀಚರ್ಸ್ ಕಾಲನಿ, ನಾಗರಬಾವಿ, ಬೆಂ – 72 ಫೋನ್ : 9980066070

Leave a Reply

Your email address will not be published.