ಯುದ್ಧೋನ್ಮಾದ ಬಾಹುಬಲಿ ಮತ್ತು ಮಾಧ್ಯಮಗಳು

ನಾ ದಿವಾಕರ

bahubali-2-posterಮಾನವ ಸಮಾಜ ನವ ಉದಾರವಾದ ಮತ್ತು ಜಾಗತೀಕರಣದ ಸುಳಿಗೆ ಸಿಲುಕಿ ಗ್ರಾಹಕ ಸಂಸ್ಕøತಿಯನ್ನೇ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು, ಮಾನವ ಸಂವೇದನೆ ಮತ್ತು ಮನುಜ ಸಂಬಂಧಗಳು ಕ್ರಮೇಣ ನಶಿಸುತ್ತಿವೆ. ಕ್ರೌರ್ಯ , ಅಸಹನೆ, ಆಕ್ರೋಶ, ಹತಾಶೆ ಮತ್ತು ದ್ವೇಷ ಈ ಋಣಾತ್ಮಕ ಗುಣಗಳು ನಾಗರಿಕ ಸಮಾಜವನ್ನು ಆವರಿಸಿವೆ. ಮಾನವ ಸಮಾಜ ಯಾವುದೇ ಕ್ಷೇತ್ರದಲ್ಲೂ ಸ್ವಾರ್ಥತೆ ಇಲ್ಲದ, ಸಹನೆ ಸಂವೇದನೆ ಇರುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿಲ್ಲ. ಬದಲಾಗಿ ಭಾಷೆ, ಜಾತಿ,ಧರ್ಮ, ಪಂಗಡ ಮತ್ತಿತರ ಸಂಕುಚಿತ ಅಸ್ಮಿತೆಗಳ ಬಲೆಗೆ ಸಿಲುಕಿ ತನ್ನ ಸತ್ವವನ್ನೇ ಕಳೆದುಕೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಜನಸಾಮಾನ್ಯರಿಗೆ ಒಂದು ಆದರ್ಶಪ್ರಾಯ ಮಾರ್ಗದರ್ಶನದ ಅವಶ್ಯಕತೆ ಇದೆ. ಆದರೆ ಮಾರ್ಗದರ್ಶಿ ಸೂತ್ರಗಳು ಲಭ್ಯವಾಗುತ್ತಿಲ್ಲ. ದ್ವೇಷವನ್ನು ಪ್ರೀತಿಯಿಂದಲೂ ಗೆಲ್ಲಬಹುದು, ಶತ್ರುವನ್ನು ಸ್ನೇಹದಿಂದಲೂ ಗೆಲ್ಲಬಹುದು ಎಂದು ಜಗತ್ತಿಗೇ ಸಾರಿದ ಭಾರತದ ನಾಗರೀಕತೆಯ ಆಧುನಿಕ ಅವತಾರದಲ್ಲಿ ಈ ಉದಾತ್ತ ಮೌಲ್ಯಗಳು ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಮಾರುಕಟ್ಟೆ ಆರ್ಥಿಕತೆ ಕೇವಲ ಅರ್ಥವ್ಯವಸ್ಥೆಯಲ್ಲಿ ಮಾತ್ರವೇ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಬೇಕು. ದುರಂತವೆಂದರೆ ಭಾರತೀಯ ಸಮಾಜದಲ್ಲಿ ಈ ಮಾರುಕಟ್ಟೆ ಧೋರಣೆ ಮಾನವ ಸಂಬಂಧಗಳಲ್ಲೂ ಬೆಸೆದುಕೊಂಡಿದೆ. ಬಳಸಿ ಬಿಸಾಡುವ ಧೋರಣೆ ಮನುಜ ಸಂಬಂಧಗಳಲ್ಲೂ ವ್ಯಕ್ತವಾಗುತ್ತಿದೆ. ಹಾಗಾಗಿಯೇ ತ್ರಿವಳಿ ತಲಾಖ್‍ನಂತಹ ಕ್ರೂರ ಪದ್ಧತಿಯನ್ನು ಕೈಬಿಡಲು ಕಠಿಣ ಕಾನೂನುಗಳ ಮೊರೆ ಹೋಗಬೇಕಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಕರಾಳ ಶಾಸನಗಳ ಮೊರೆ ಹೋಗಲಾಗುತ್ತದೆ. ಆದರೂ ನಿರ್ಭಯ, ಸೌಜನ್ಯ ಮತ್ತೆ ಮತ್ತೆ ನಮ್ಮ ಸಮಾಜದ ಕ್ರೂರ ಮುಖವಾಡವನ್ನು ಕಳಚುತ್ತಲೇ ಇರುತ್ತಾರೆ. ಶಾಂತಿ ಮಂತ್ರವನ್ನು ಹೇಳುತ್ತಲೇ ಕ್ರೌರ್ಯದ ಪರಮಾವಧಿ ತಲುಪುವ ಕಲೆಯನ್ನು ಕರಗತ ಮಾಡಿಕೊಂಡಿರುವ ಸುಶಿಕ್ಷಿತ ಸಮಾಜಕ್ಕೆ ತನ್ನದಲ್ಲದ ಅಪರಾಧಕ್ಕೆ ಹತ್ಯೆಗೊಳಗಾಗುವ ವ್ಯಕ್ತಿಗಿಂತಲೂ ಆ ವ್ಯಕ್ತಿಯ ಅಸ್ಮಿತೆಯೇ ಪ್ರಧಾನವಾಗುತ್ತದೆ. ದೇಶದ ರಕ್ಷಣೆಯ ಪಣತೊಟ್ಟು ಬೇಲಿ ಕಾಯುವ ಯೋಧನ ಸಾವು ನಮ್ಮೊಳಗಿನ ದೇಶಭಕ್ತಿಯನ್ನು ಉಕ್ಕಿಸುತ್ತದೆ. ಆದರೆ ದಿನನಿತ್ಯವೂ ದೇಶದ ಅಭಿವೃದ್ಧಿಗಾಗಿ ಹೊಲಗದ್ದೆಗಳಲ್ಲಿ ಬೆವರು ಸುರಿಸುವ ರೈತನ ಆತ್ಮಹತ್ಯೆ ಸುದ್ದಿಯಾಗುವುದೇ ಇಲ್ಲ. ದಾದ್ರಿಯ ಅಕ್ಲಾಖ್, ಆಲ್ವಾರ್‍ನ ಪೆಹ್ಲು ಖಾನ್, ಕೇವಲ ಒಂದು ಮಾಂಸದ ತುಂಡಿಗಾಗಿ ಪ್ರಾಣ ತೆರಬೇಕಾಗುತ್ತದೆ. ಊನ ಗ್ರಾಮದ ಬಡಪಾಯಿ ದಲಿತರು ತಮ್ಮ ಕಸುಬು ಮಾಡಿದ್ದಕ್ಕಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇದಾವುದೂ ನಮ್ಮೊಳಗಿನ ಸ್ಪಂದನೆಯ ತಂತುಗಳನ್ನು ಮೀಟುವುದೇ ಇಲ್ಲ. ಏಕೆಂದರೆ ನಾವು ಸಾವಿನ ಮಾನದಂಡಗಳನ್ನು ನಿರ್ಧರಿಸಿಬಿಟ್ಟಿದ್ದೇವೆ. ಹುಟ್ಟಿನ ಮಾನದಂಡಗಳನ್ನೇ ಅನುಸರಿಸಿ ಶತಮಾನಗಳ ಕಾಲ ಶೋಷಣೆ, ದೌರ್ಜನ್ಯ ಮತ್ತು ಅಟ್ಟಹಾಸದ ಮೂಲಕ ನಿರ್ದಿಷ್ಟ ಜಾತಿ ಶ್ರೇಷ್ಠತೆಯನ್ನು ಸಾರಿದ ಭಾರತೀಯ ಸಮಾಜ ಈಗ ಸಾವಿನ ಮಾನದಂಡಗಳನ್ನು ನಿಗದಿಪಡಿಸುತ್ತಿದೆ. ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುವವರೆಲ್ಲರೂ ಸಾಯುವ ಅರ್ಹತೆ ಪಡೆದುಕೊಳ್ಳುತ್ತಿದ್ದಾರೆ. ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ದನಿ ಎತ್ತುವವರೆಲ್ಲರೂ ಬದುಕುವ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ. ಐದು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಭರತಖಂಡದಲ್ಲಿ ಇಂದು ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಭಕ್ತಿಯನ್ನು ಬಾಹ್ಯ ರೂಪದಲ್ಲಿ ಪ್ರದರ್ಶಿಸಬೇಕಿದೆ. ಈ ಪ್ರಾತ್ಯಕ್ಷಿಕೆಗಳಿಗೆ ರಾಷ್ಟ್ರೀಯವಾದದ ಲೇಪನ ನೀಡುತ್ತಿದ್ದೇವೆ. ಸಮಸ್ತ ಭಾರತೀಯರನ್ನು ಪ್ರತಿನಿಧಿಸುವ ರಾಷ್ಟ್ರಧ್ವಜ ತನ್ನ ಸ್ವಾತಂತ್ರ್ಯಪೂರ್ವ ಮೌಲ್ಯಗಳನ್ನು ಕಳಚಿಕೊಂಡು ಈ ಪ್ರಾತ್ಯಕ್ಷಿಕೆಗೆ ಭೂಮಿಕೆಯಾಗಿ ಪರಿಣಮಿಸಿದೆ.

ಭಾರತೀಯ ಯೋಧರ ದೇಹವನ್ನು ತುಂಡರಿಸುವ ಪಾಕಿಸ್ತಾನ ಸೇನೆಯ ಕ್ರಮ ಅಮಾನವೀಯ. ಇದು ಹೇಯ ಕೃತ್ಯವಷ್ಟೇ ಅಲ್ಲ ನಾಗರಿಕ ಸಮಾಜ ಒಪ್ಪಲಾರದಂತಹ ಕೃತ್ಯ. ಯುದ್ಧೋನ್ಮಾದ ಇಂತಹ ವಿಕೃತಿಗಳನ್ನು ಸೃಷ್ಟಿಸುತ್ತದೆ. ಶತ್ರುವಿನ ಛಾಯೆ ಇಲ್ಲದೆ ತನ್ನ ಅಸ್ತಿತ್ವವನ್ನೇ ಉಳಿಸಿಕೊಳ್ಳಲಾಗದ ಸಮಾಜ ನಿರ್ಮಾಣವಾದಾಗ ಇಂತಹ ವಿಕೃತಿಗಳು ಸಹಜವಾಗಿಯೇ ಕಾಣುತ್ತವೆ. ಬಹುಶಃ ಭಾರತ ಇಂತಹುದೇ ಸನ್ನಿವೇಶದತ್ತ ದಾಪುಗಾಲು ಹಾಕುತ್ತಿದೆ. ಭಾರತ ಭಾರತವಾಗಿರಬೇಕಾದರೆ ಪಾಕಿಸ್ತಾನ ಇರಬಾರದು ಎಂಬ ವಿಕೃತ ಮನೋಭಾವ ಆಳುವ ವರ್ಗಗಳಲ್ಲೂ ಮನೆಮಾಡಿದೆ, ಜನಮಾನಸದಲ್ಲೂ ಮನೆ ಮಾಡಿದೆ. ಒಂದು ಶವ ಉರುಳಿದರೆ ಪ್ರತೀಕಾರಕ್ಕಾಗಿ ಹತ್ತು ಶವ ಉರುಳಿಸುವ ಭೀಷ್ಮ ಪ್ರತಿಜ್ಞೆಗಳ ನಡುವೆಯೇ ತಲೆಗಳು ಉದರುತ್ತಲೇ ಇವೆ. ದಾದ್ರಿಯಲ್ಲಿ ಉರುಳಿದ ಅಕ್ಲಾಖ್ ತಲೆ, ಅಲ್ವಾರ್‍ನಲ್ಲಿ ಉರುಳಿದ ಪೆಹ್ಲುಖಾನ್ ತಲೆ, ಕರ್ನಾಟಕದಲ್ಲಿ ಉರುಳಿದ ಕಲಬುರ್ಗಿ ತಲೆ, ಮಹಾರಾಷ್ಟ್ರದ ಪನ್ಸಾರೆ ಮತ್ತು ಧಬೋಲ್ಕರ್ ತಲೆ ಇದಾವುದೂ ಪಾಕ್ ಸೇನಾನಿಯ ಗುಂಡಿಗೆ ಬಲಿಯಾಗಿಲ್ಲ. ಬದಲಾಗಿ ನಮ್ಮೊಳಗಿನ ನಾಜೂಕಯ್ಯನ ಕುತಂತ್ರಕ್ಕೆ ಬಲಿಯಾಗಿವೆ. ತುಂಡರಿಸಿದ ಯೋಧನ ದೇಹ ಉಕ್ಕಿಸುವ ಉನ್ಮಾದವನ್ನು ಅಕ್ಲಾಖ್, ಪೆಹ್ಲುಖಾನ್, ಕಲಬುರ್ಗಿ ದೇಹಗಳೇಕೆ ಉಕ್ಕಿಸುವುದಿಲ್ಲ. ಮಾನವೀಯತೆಯ ಸ್ಥಾನವನ್ನು ಉನ್ಮತ್ತ ರಾಷ್ಟ್ರೀಯತೆ ಆವರಿಸಿದಾಗ ಇಂತಹ ವಿಕೃತಿಗಳು ತಾಂಡವಾಡುತ್ತವೆ.

b2ಹಾಗಾದಲ್ಲಿ ನಮ್ಮ ದೇಶದಲ್ಲೂ ಉನ್ಮಾದಕ್ಕೂ ಒಂದು ಅಸ್ಮಿತೆ ಇದೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಕೇವಲ ಬದುಕಿಗೆ ಒಂದು ಶ್ರೇಣಿಯನ್ನು ಒದಗಿಸಿಲ್ಲ, ಸಾವಿಗೂ ಒದಗಿಸಿದೆ. ಸಾವಿನಲ್ಲೂ ಶ್ರೇಷ್ಠ – ಕನಿಷ್ಠ , ಉಚ್ಚ – ನೀಚ, ಸಹನೀಯ-ಅಸಹನೀಯ ಸಾವುಗಳನ್ನು ವರ್ಗೀಕರಿಸಲಾಗಿದೆ. ಹುಟ್ಟಿನಲ್ಲಿ ವ್ಯಕ್ತವಾಗುತ್ತಿದ್ದ ಅಸ್ಮಿತೆಗಳು ಸಾವಿನಲ್ಲೂ ವ್ಯಕ್ತವಾಗುತ್ತಿದೆ. ಇಲ್ಲವಾದಲ್ಲಿ ಒಂದು ತಲೆಗೆ ಹತ್ತು ತಲೆ ಕಡಿಯಲು ಮುಂದಾಗುವ ಉನ್ಮತ್ತ ಹೃದಯಗಳು ಕಂಬಾಲಪಲ್ಲಿಯಲ್ಲಿ, ಕರಂಚೇಡುವಿನಲ್ಲಿ, ಬತಾನಿತೊಲಾದಲ್ಲಿ, ಖೈರ್ಲಾಂಜಿಯಲ್ಲಿ, ಸವಣೂರಿನಲ್ಲಿ ಏಕೆ ಸ್ಪಂದಿಸಲೇ ಇಲ್ಲ ? ಇಲ್ಲಿ ಗೋಮಾಂಸ ಸೇವಿಸಿದವ ಸಾವಿಗೆ ಅರ್ಹನಾಗುತ್ತಾನೆ. ಗೋವನ್ನು ಕಡಿಯುವವ ಸಾವಿಗೆ ಅರ್ಹನಾಗುತ್ತಾನೆ. ಗೋವು ಸಾಗಾಣಿಕೆ ಮಾಡುವ ಬಡಪಾಯಿ ಸಾವಿಗೆ ಅರ್ಹನಾಗುತ್ತಾನೆ. ಆದರೆ ಗೋಮಾಂಸ ರಫ್ತು ಮಾಡುವ ಉದ್ಯಮಿ, ಶಿಕ್ಷೆಗೊಳಗಾಗುವುದಿರಲಿ ಬೆಳಕಿಗೇ ಬರುವುದಿಲ್ಲ. ಹಾಗಾದರೆ ಪ್ರಬುದ್ಧ ಭಾರತೀಯ (ಹಿಂದೂ) ಸಂಸ್ಕøತಿ ಹೋರಾಡುತ್ತಿರುವುದು ಗೋಹತ್ಯೆಯ ವಿರುದ್ಧವೋ ಗೋವಿನ ನೆರಳಲ್ಲಿ ಕಾಣುವ ಅಮಾಯಕರ ವಿರುದ್ಧವೋ ? ಉನ್ಮತ್ತ ಮನಸ್ಸಿಗೆ ವ್ಯವಧಾನ ಇರುವುದಿಲ್ಲ. ಆದರೆ ಒಂದು ಇಡೀ ಸಮಾಜ ಉನ್ಮತ್ತ ಸ್ಥಿತಿಯನ್ನು ತಲುಪಬಾರದು. ತಲುಪಿದರೆ ಏನಾಗುತ್ತದೆ ಎಂದು ಭಾರತದ ಪ್ರಸ್ತುತ ಸಂದರ್ಭ ವಿವರಿಸುತ್ತದೆ.

ಇಷ್ಟೆಲ್ಲಾ ಕ್ರೌರ್ಯ, ಹಿಂಸೆ, ಅಸಹನೆ, ಮಾತ್ಸರ್ಯ, ದ್ವೇಷ ಮತ್ತು ಅಸೂಯೆಯ ನಡುವೆ ಬಾಳುತ್ತಿರುವ ನಾಗರಿಕ ಸಮಾಜಕ್ಕೆ ಸಾಂತ್ವನ ಹೇಳಬೇಕಾದ ಗುರುತರ ಹೊಣೆಗಾರಿಕೆ ಇಂದು ಮಾಧ್ಯಮಗಳ ಮೇಲಿದೆ. “ ಕಟ್ಟಪ್ಪ ಏಕೆ ಬಾಹುಬಲಿಯನ್ನು ಕೊಲ್ಲುತ್ತಾನೆ ” ಎಂದು ವಾರಗಟ್ಟಲೆ ಹರಿಕಥೆ ಮಾಡುವ ಮಾಧ್ಯಮಗಳು ಪೆಹ್ಲು ಖಾನ್ ಏಕೆ ಕೊಲೆಯಾಗುತ್ತಾನೆ ಎಂದೇಕೆ ಕೇಳುವುದಿಲ್ಲ ? “ ನನ್ನನ್ನು ರಾಕ್ಷಸ ಎಂದರೂ ಚಿಂತೆಯಿಲ್ಲ ದಾವೂದ್ ಇಬ್ರಾಹಿಂನನ್ನು ತುಂಡುತುಂಡಾಗಿ ಕತ್ತರಿಸುವುದನ್ನು ನೋಡಿಯೇ ತೀರುತ್ತೇನೆ ” ಎಂದು ತಮ್ಮ ಹೆಬ್ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮಾಧ್ಯಮ ಪುತ್ರರಿಗೆ ಊನ ಘಟನೆಯ ರೂವಾರಿಗಳೇಕೆ ನೆನಪಾಗುವುದಿಲ್ಲ ? ಪ್ರತಿಯೊಬ್ಬ ಯೋಧನ ಸಾವೂ ಟಿಆರ್‍ಪಿ ಹೆಚ್ಚಿಸುವ ಸಾಧನವಾಗುವ ಮಾಧ್ಯಮಗಳಲ್ಲಿ ಆತ್ಮಹತ್ಯೆಗೆ ಶರಣಾಗುವ ಲಕ್ಷಾಂತರ ರೈತರೇಕೆ ಬಂಡವಾಳವಾಗುವುದಿಲ್ಲ ? ಮೊದಲ ನಾಲ್ಕು ದಿನಗಳಲ್ಲೇ ಐನೂರು ಕೋಟಿ ರೂ ಗಳಿಸಿದ ಬಾಹುಬಲಿಯನ್ನು ವಿಜೃಂಭಿಸಿ ಮೆರೆದಾಡುವ ಮಾಧ್ಯಮಗಳಿಗೆ, ಅಮಾನ್ಯೀಕರಣದ ನಂತರ ತಮ್ಮ ಜೀವನದ ನೆಲೆಯನ್ನೇ ಕಳೆದುಕೊಂಡಿರುವ ಕೋಟ್ಯಂತರ ವಲಸೆ ಕಾರ್ಮಿಕರ ಬವಣೆ ಏಕೆ ಗೋಚರಿಸುತ್ತಿಲ್ಲ ?

ಇದನ್ನು ಬೌದ್ಧಿಕ ದಾರಿದ್ರ್ಯತೆ ಎನ್ನೋಣವೋ, ರಾಜಕೀಯ ಅನಿವಾರ್ಯತೆ ಎನ್ನೋಣವೋ ಅಥವಾ ಬಂಡವಾಳ ವ್ಯವಸ್ಥೆಯ ಅವಶ್ಯಕತೆ ಎನ್ನೋಣವೋ ? ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ತನ್ನ ಸಾಮಾಜಿಕ ನೆಲೆಯನ್ನೇ ಕಳಚಿಕೊಂಡು ಮಾರುಕಟ್ಟೆ ಆರ್ಥಿಕತೆಯ ವಿಕೃತಿಗಳಿಗೆ ಬಲಿಯಾದರೆ ಮಾನವೀಯ ಸಂವೇದನೆಗೆ ಸ್ಪಂದಿಸುವ ವೇದಿಕೆಯನ್ನು ಮತ್ತೆಲ್ಲಿ ಅರಸಲು ಸಾಧ್ಯ ? ಒಂದು ಸುಶಿಕ್ಷಿತ ಪ್ರಬುದ್ಧ ಸಮಾಜ ಬದುಕಿಗೆ ಸ್ಪಂದಿಸಬೇಕು. ಆದರೆ ನಾವು ಸಾವಿಗೆ ಸ್ಪಂದಿಸುತ್ತಿದ್ದೇವೆ. ಬದುಕು ಕಟ್ಟಿಕೊಳ್ಳುವವರನ್ನು ನಿರ್ಲಕ್ಷಿಸುತ್ತಲೇ ಸಾವಿನ ದಲ್ಲಾಳಿಗಳನ್ನು ಮೆರೆಸುತ್ತಿದ್ದೇವೆ. ಮಾಧ್ಯಮಗಳು ಈ ಮೆರವಣಿಗೆಯ ಸಾರಥ್ಯ ವಹಿಸುತ್ತಿವೆ. ಬದುಕುವ ನಿರೀಕ್ಷೆಯಲ್ಲಿ ಸಾವುಗಳನ್ನು ಸಹಿಸಿಕೊಂಡು ಮುನ್ನಡೆಯುವ ಮಾನವ ಸಮಾಜವನ್ನು ಕಡೆಗಣಿಸಿ, ಸಾವಿನ ನಿರೀಕ್ಷೆಯಲ್ಲಿ ಬದುಕನ್ನೇ ಮೂರಾಬಟ್ಟೆ ಮಾಡುತ್ತಿರುವ ವಿಕೃತ ಸಮಾಜವನ್ನು ವಿಜೃಂಭಿಸುತ್ತಿದ್ದೇವೆ. ಮಾಧ್ಯಮಗಳು ಈ ಬೆಳವಣಿಗೆಗೆ ಯಾವ ರೀತಿ ಸ್ಪಂದಿಸಬೇಕು ? ಇದು ಕನ್ನಡ ವಿದ್ಯುನ್ಮಾನ ಮಾಧ್ಯಮಗಳನ್ನು ಕಾಡಲೇಬೇಕಾದ ಪ್ರಶ್ನೆ.

Leave a Reply

Your email address will not be published.