ಯಾಕೆ ರೈತನ ಸಾಲಮನ್ನಾ ಮಾಡಬೇಕು?

ಕು.ಸ.ಮಧುಸೂದನನಾಯರ್‌ರಂಗೇನಹಳ್ಳಿ

ರೈತರ ಸಾಲಮನ್ನಾ ಮಾಡುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ!

ಕೇಂದ್ರ ಸಚಿವರೊಬ್ಬರ ಆಡಿದ  ಈ ಒಂದು ಮಾತು ರೈತರ ಸಾಲಮನ್ನಾದ ಮೂಲ ಆಶಯಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಲಮನ್ನಾದ ಬಗ್ಗೆ ಹೀಗೆ ಲಘುವಾಗಿ ಮಾತಾಡಿದವರಲ್ಲಿ ಈ ಸಚಿವರೇನು ಮೊದಲಿಗರೆಲ್ಲ. ಈ ಹಿಂದೆಯೇ ಹಲವಾರು ಬಂಡವಾಳಶಾಹಿ ಉದ್ಯಮಿಗಳು, ಉನ್ನತ ಹುದ್ದೆಯಲ್ಲಿರುವ ಅಕ್ಷರಸ್ಥ ವರ್ಗದ ಅನೇಕ ಪ್ರಭೃತಿಗಳು ರೈತರ ಸಾಲಮನ್ನಾ ಮಾಡುವುದರಿಂದ ತೆರಿಗೆದಾರರ ಹಣವನ್ನು  ರೈತರಿಗೆ ಪುಕ್ಕಟೆಯಾಗಿ ನೀಡಿ ಅವರನ್ನು ಆಲಸಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಿದೆ. ಆದರೆ ಇಂತಹ ಮಾತುಗಳನ್ನು ಆಡಿದ ಈ ದೇಶದ ಉದ್ಯಮಿಗಳಿಗೆ ಮತ್ತು ವಿದ್ಯಾವಂತ ಹಣವಂತ ವರ್ಗಕ್ಕೆ ರೈತರ ಬಗ್ಗೆ ಮಾಹಿತಿಯಾಗಲಿ ಕಾಳಜಿಯಾಗಲಿ ಇಲ್ಲದಿರುವುದನ್ನು ತೋರಿಸುತ್ತದೆ.

ನಿಜ, ರೈತರ ಸಾಲಮನ್ನಾದಿಂದ ರೈತರ ಸಮಸ್ಯೆಗಳೆಲ್ಲ ಶಾಶ್ವತವಾಗಿ ಪರಿಹಾರಗೊಳ್ಳುತ್ತವೆ ಮತ್ತು ಆತನ ಅಭ್ಯುದಯ ಆಗಿಬಿಡುತ್ತದೆಯೆಂದು ಯಾರೂ ನಂಬಿಲ್ಲ. ಆದರೂ ಸರಕಾರಗಳು ಒಂದಲ್ಲ ಎಂದು ಹಲವು ಬಾರಿ ಸಾಲಮನ್ನಾ ಮಾಡಿ ರೈತರನ್ನು ಆರ್ಥಿಕ ದುಸ್ಥಿಯಿಂದ ಕಾಪಾಡಲು ಪ್ರಯತ್ನಿಸಿವೆ. ಸಾಲಮನ್ನಾದ ವಿರುದ್ದ ಮಾತಾಡುವವರಿಗೆ ನಮ್ಮ ಕಲ್ಯಾಣರಾಜ್ಯದ ಆಶಯಗಳು ಅರ್ಥವಾಗದೆ ಇರುವುದೇ ಅವರಟೀಕೆಗಳಿಗೆ ಕಾರಣವೆನ್ನಬಹುದು. ಈ ಹಿನ್ನೆಲೆಯಲ್ಲಿಯೇ ನಾವು ಸಾಲಮನ್ನಾದ ಹಿಂದಿರುವ ನೈಜ ಉದ್ದೆಶಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಉದ್ದೆಶಪೂರ್ವಕವಾಗಿ ಯಾವ ರೈತನೂ ಸಾಲಗಾರನಾಗಲು ಬಯಸುವುದಿಲ್ಲ.ಮತ್ತು ಸರಕಾರ ಮನ್ನಾ ಮಾಡಬಹುದೆಂದು ನಂಬಿಕೊಂಡು ಯಾರೂ ಸಾಲ ಮಾಡುವುದಿಲ್ಲ. ಹಾಗಿದ್ದರೂ ಪ್ರತಿವರ್ಷ ರೈತನೊಬ್ಬ ಯಾಕೆ ಸಾಲ ಮಾಡುತ್ತ ಹೋಗುತ್ತಾನೆ? ಇದನ್ನು ಮೊದಲುಅರ್ಥ ಮಾಡಿಕೊಳ್ಳಬೇಕಾಗುತ್ತದೆ.. ಒಂದು ಅಥವಾ ಎರಡು ಏಕರೆ ಭೂಮಿ ಇರುವ ರೈತನ ಬಳಿ ಹೆಚ್ಚೆಂದರೆ ಒಂದು ಹಳೆ ಹೆಂಚಿನ ಮನೆ. ಒಂದೆರಡು ದನಕರುಗಳು, ಅವನ್ನು ಕಟ್ಟಿಹಾಕಲು ಒಂದು ಮುರುಕಲು ಕೊಟ್ಟಿಗೆ ಇರುವುದು ಮಾಮೂಲು.  ಆಹಾರ ಬೆಲೆಗಳನ್ನು ಮಾತ್ರ ಬೆಳೆಯಬಲ್ಲ ಸಣ್ಣ ರೈತನ ಬಳಿ ಇದಕ್ಕಿಂತ ಏನೂ ಹೆಚ್ಚಿಗೆ ಇರಲು ಸಾದ್ಯವಿಲ್ಲವೆಂಬುದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ.

ತನ್ನ ಬಳಿ ಇರುವ  ಭೂಮಿಯಲ್ಲಿ  ಬೆಳೆ ಬೆಳೆಯಲು ಅವನ ಬಳಿ ಇರುವ ಮೂಲ ದ್ರವ್ಯವೆಂದರೆ ಆತನ ದೈಹಿಕ ಶ್ರಮ ಮಾತ್ರ! ಈ ಶ್ರಮದಿಂದ ಅವನು ಭೂಮಿಯನ್ನು ಉತ್ತಲುಮತ್ತು ಹಸನು ಮಾಡಲು ಸಾದ್ಯವೇ ಹೊರತು, ಗುಣಮಟ್ಟದ ಬೀಜಗಳನ್ನು ಖರೀಧಿಸಲು, ಉತ್ತಮ ದರ್ಜೆಯ ಗೊಬ್ಬರವನ್ನು ಕೊಳ್ಳಲು ಹಾಗು ತಾನು ಬಳಸಿಕೊಳ್ಳುವ ಕೂಲಿಕಾರ್ಮಿಕರಿಗೆ ನಿತ್ಯದ ಕೂಲಿ ನೀಡಲು ಆತನಿಗೆ ಹಣದ ರೂಪದ ಬಂಡವಾಳ ಬೇಕಾಗುತ್ತದೆ. ಯಾವತ್ತಿಗೂ ದೊಡ್ಡ ಮೊತ್ತದ ಹಣವನ್ನು ಕಾಣದ ಆತನಲ್ಲಿ ಯಾವುದೇ ಕೂಡಿಟ್ಟ ಹಣ ಇರುವುದಿಲ್ಲ. ಕಷ್ಟಪಟ್ಟು ಒಂದಷ್ಟುಹಣ ಕೂಡಿಡಲು ಆತ ಪ್ರಯತ್ನಿಸಿದರೂ ಆ ಹಣ ಆತನ ಮಕ್ಕಳ ಶಿಕ್ಷಣಕ್ಕೆ, ಅವನ ಕುಟುಂಬದ ಆರೋಗ್ಯಕ್ಕೆ, ಇನ್ನಿತರೆ ಮದುವೆ ಮುಂಜಿ ಕಾರ್ಯಗಳಗೆ ವೆಚ್ಚವಾಗಿರುತ್ತದೆ, ಇಂತಹ ಸಮಯದಲ್ಲಿಯೇ ಆತ  ಬೆಳೆ ಬೆಳೆಯಲು ಬೇಕಾದ ಬೀಜ ಗೊಬ್ಬರಗಳಿಗಾಗಿ ಸಾಲದ ಮೊರೆ ಹೋಗುತ್ತಾನೆ.  ನಮ್ಮ ಯಾವುದೇ ಬ್ಯಾಂಕುಗಳೂ ರೈತ ಹೋದ ತಕ್ಷಣ ಸಾಲ ಕೊಡುವುದಿಲ್ಲ ಮತ್ತು ಹಾಗೆ ಸಾಲ ನೀಡಲು  ಹತ್ತಾರು ದಾಖಲೆಗಳನ್ನುಕೇಳುತ್ತವೆ.

ಹೀಗಾಗಿ ರೈತ ಬಿತ್ತನೆ ಮಾಡಬೇಕಾದ ನಿಗದಿತ ಸಮಯಕ್ಕೆ ಬ್ಯಾಂಕುಗಳಿಂದ ಸಾಲ ದೊರೆಯುವುದಿಲ್ಲ. ಆಗ ರೈತ ಅನಿವಾರ್ಯವಾಗಿ ಖಾಸಗಿಯವರ ಬಳಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯಲು ಮುಂದಾಗುತ್ತಾ ಹೀಗೆ ಖಾಸಗಿಯವರಿಂದ ಪಡೆದ ಸಾಲವನ್ನು ಬ್ಯಾಂಕಿನ ಸಾಲದ ಸಹಾಯದಿಂದತೀರಿಸಿಬಿಡಬಹುದೆಂಬ  ಭರವಸೆ ಆತನದು!  ಅಂತೂ ರೈತ ಬೀಜ ಬಿತ್ತಿ ಕಳೆ ಕೀಳುವ  ಮೊದಲ ಪ್ರಕ್ರಿಯೆ ಮುಗಿದಾಗ ಬ್ಯಾಂಕುಗಳು ಸಾಲದ ಹಣವನ್ನು ನಿಡುತ್ತವೆ. ಈ ಸಾಲದ ಮೊತ್ತ ಹೇಗಿರುತ್ತದೆ ಎಂದರೆ ರೈತನಿಗೆ ನಿಜಕ್ಕೂ ಬೇಕಾದಷ್ಟು ಹಣಕ್ಕಿಂತ ಬಹಳ ಕಡಿಮೆ ಇರುತ್ತದೆ. ಬ್ಯಾಂಕುಗಳ ಅಧಿಕಾರಿಗಳಿಗೆ ಯಾವ ಬೆಳೆಗೆ ಎಷ್ಟು ಖರ್ಚಾಗಬಹುದೆಂಬ ಸಾಮಾನ್ಯ ಮಾಹಿತಿಯೂ ಇರುವುದಿಲ್ಲ. ಹೀಗಾಗಿ ಬ್ಯಾಂಕಿನಿಂದ ದೊರೆತ ಹಣದಿಂದ ಆತ ಖಾಸಗಿಸಾಲವನ್ನೂ ತೀರಿಸಲಾಗದೆ ಬೆಳೆ ಕುಯಿಲಿಗೆ ಬಂದು ಕಟಾವು ಮಾಡಿ ಮಾರುವವರೆಗೂ ಬೇಕಾದ ಹಣವನ್ನು ಹೇಗಾದರು ಮಾಡಿ ಹೊಂದಿಸಲು ಒದ್ದಾಡುತ್ತಿರುತ್ತಾನೆ.

ಈ ಪ್ರಕ್ರಿಯೆಯಲ್ಲಿ ಏನಾದರು ಮಳೆ ಕೈ ಕೊಟ್ಟಿತೊ ಅಲ್ಲಿಗೆ ಆ ರೈತನ ಕತೆ ಮುಗಿದಂತೆಯೆ! ಅದೃಷ್ಟವಶಾತ್ ಬೆಳೆಬಂದು ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ದೊರೆಯಲಿಲ್ಲಿವೋ ಆಗಲೂ ಆ ರೈತನ ಕತೆ ಮುಗಿದಂತೆಯೇ! ಇವೆಲ್ಲವೂ ಸರಿಯಾಗಿಯೇ ನಡೆದು ಹಣ ಕೈಗೆ ಬಂದರೂ  ಬಂದ ಹಣದಲ್ಲಿ  ಮುಕ್ಕಾಲು ಪಾಲು ಖಾಸಗಿಯವರ ಸಾಲ ಮತ್ತು ಬಡ್ಡಿಗೆ ಹೋಗುತ್ತದೆ. ಇನ್ನು ಉಳಿದ ಸ್ವಲ್ಪ ಹಣವನ್ನು ಆತ ದೈನಂದಿನ ಜೀವನ ನಿರ್ವಹಣೆಗೆ ಬಳಸಲೇ ಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ನೀಡಿದ ಸಾಲ ಹಾಗೆಯೇ ಉಳಿದುಬಿಡುತ್ತವೆ. ಇಂಡಿಯಾದ ಸಾಂಪ್ರದಾಯಿಕ ಹಳ್ಳಿಗ¼ಲ್ಲಿ ಬದುಕುವ ರೈತನಿಗೆ ಈ ಸಾಲದ ಋಣ ಆತನ ಸ್ವಾಬಿಮಾನ, ಪ್ರತಿಷ್ಠೆಗೆ ಅಂಟಿಸಿದ ಕಳಂಕದಂತೆ ಕಾಡತೊಡಗುತ್ತದೆ. ಈ ನೋವಿನ ಜೊತೆಗೆ ಬದುಕಬೇಕಾದ ಆತ ಬ್ಯಾಂಕಿನವರ ಸಾಲ ವಸೂಲಾತಿಯ ನೋಟಿಸುಗಳಿಗೆ ಉತ್ತರ ಕೊಡುತ್ತ ಮನೆ ಬಾಗಿಲಿಗೆ ಬರುವ ಅಧಿಕಾರಿಗಳಿಂದ ಅವಮಾನ ಅನುಭವಿಸುತ್ತ, ಅವರಿಂದ ತಪ್ಪಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಲೇ ಹೋಗುತ್ತಾನೆ. ಅಂತರೀಕ ಮತ್ತು ಬಾಹ್ಯ ಒತ್ತಡಗಳು ಹೆಚ್ಚಾದಾಗ ಅನಿವಾರ್ಯವಾಗಿ ಆತ್ಮಹತ್ಯೆಯ ಮೊರೆಹೋಗುತ್ತಾನೆ. ಇದು ಭಾರತೀಯ ರೈತನ ಕರುಣಾಜನಕ ಕತೆ! ಯಾಕೆ ರೈತ ಸಾಲಮನ್ನಾದ ಕಡೆ ಆಸೆಗಣ್ಣಿನಿಂದ ನೋಡುತ್ತಾನೆ ಎಂಬ ಪ್ರಶ್ನೆಗೆ   ಇದೇ ಉತ್ತರ!

ಈಗ ಹೇಳಿ ಸಾಲಮನ್ನಾ ಒಂದುಫ್ಯಾಶನ್ ಹೌದೇ?

 

 

Leave a Reply

Your email address will not be published.