ಯವ್ವನದ ಸಾವು

ಗೋಪಾಲ ಕೃಷ್ಣ ಎ. ಆರ್

ಬೆಳೆದ ಕಾಲಕೆಲ್ಲಕೂ ನೆರಳಾಗಿದ್ದ ಕಾಲ
ಇಂದು ಮರೆಯಾಗುವ ಸಂದರ್ಭ
ಅದು ಬಾಲ್ಯ ಕಾಲವೋ
ಬೆಳೆದ ದೇಹವೂ
ಮುದಿಯಾದ ಸುಕ್ಕು ದೇಹದ ನೆರೆಯ ಸೌಂದರ್ಯವೋ
“ಅಂತೂ ಈ ಗಳಿಗೆಯಲ್ಲಿ ಅಲ್ಲಿಗೇ ನಿಂತ
ನನ್ನ ರೂಪ” ನಂತರ ಜೀರ್ಣದ ವಸ್ತು
ಇಷ್ಟು ತಿಳಿದಾಗ
ಅದು ಭ್ರಮೆಯೆಂದು ಗೊತ್ತಾಯಿತು.
ಉಸಿರಾಡುವ ದೇಹ, ನಡೆದಾಡುವ ಭೂಮಿ
ಎಲ್ಲವೂ ಭ್ರಮೆ ಈ ಹೊತ್ತಲಿ

ಹೇಗೆ ಬದುಕಿದ್ದು
ಮುಂದಿನ ಗಳಿಗೆಗಳನ್ನು ಎಣಿಸುತ್ತಾ
ಪ್ರತಿ ಹುಟ್ಟು ಹಬ್ಬ ದಿನದಂದು
‘ತುಂಬಾ ಹುಟ್ಟು ಹಬ್ಬ ಆಚರಿಸಿಕೋ
ನೂರ್ಕಾಲ ಸುಖವಾಗಿ ಬಾಳು’ ಆ ಆಶೀರ್ವಾದಗಳಲಿ ನಿಖರತೆ ಇಲ್ಲ
ಅದು ಹೇಳುವ ಅವರಿಗೂ,
ಕೇಳುವ ನನಗೂ ಗೊತ್ತು

ಈಗ ಹೀಗಿದ್ದೇನೆ
ತುಂಬು ದೇಹ, ಕರಿಕೂದಲು
ಬಿಸಿ ರಕ್ತ ಕಬ್ಬಿಣದ ಮೂಳೆ
ಏನಕ್ಕಾದರೂ ಹೋಲಿಸಿ ನನ್ನಂತ ವಸ್ತು ಬೇರೊಂದು ಇಲ್ಲ
ಅಷ್ಟು ಸೊಕ್ಕು ನನಗೆ
ಮೀಸೆ ಮೊಳೆತಾಗ ಜಗ ಕಾಣುವುದಿಲ್ಲ ನಿಜ.
ಅವು ಬೆಳೆದಾಗ, ನರೆತಾಗ? ಕಾಣುವುದೋ
ಕಣ್ಣ ಪಾಪಿಯಲಿ ಪೊರೆಬೆಳೆದಾಗ ಇರುವ ಹಲ್ಲೆಲ್ಲಾ ಉದುರಿ ಇಲಿಯ ಬಾಯಿ ಆದಾಗ?

ಪ್ರತಿ ಗಳಿಗೆಗೂ ಒಂದೊಂದು ಪ್ರಾಯ
ಎಳೆಪ್ರಾಯ ಮುಗಿದಿತ್ತು ಹಳೆಕಾಲದಲ್ಲಿ
ಸಾವು ಕಾಲದ್ದೋ ಪ್ರಾಯದ್ದೋ?
ಹೊಸಕಾಲದಲ್ಲಿ ಈ ಯವ್ವನ
ಈಗ ಕಾಲವೋ ಯವ್ವನವೋ?
ಯವ್ವನವೇ ಕೊಲ್ಲು ಆಕಾಲವನ್ನು…
ನೂರ್ಕಾಲ ನೀನೇ ಸುಖವಾಗಿ ಬಾಳು.

ಸಾವು ಭೀಕರ ನಿಜ
ನನ್ನ ಗೈರು ಹಾಜರಿಯಲ್ಲೂ ಜಗವ ಬದುಕಿಸುವುದು
ಈ ಹೊತ್ತೋ ಆ ಹೊತ್ತೋ
ಬಂದೇ ಬರುವುದು
ನನ್ನ ನೆರಳಿನಲಿ ಕರಿಕಾಲ ಕಾಯುತಿಹುದು
ಹೊಂಚುತಿಹುದು…. ಏನೇ ಆಗಲಿ
‘ಸಾವೆಂಬುದು ಸನಿಹವಿದ್ದಾಗಲೂ ಗೊತ್ತಾಗ ಬಾರದಷ್ಟೆ’

ಯವ್ವನವೇ ಕೊನೆ ನನಗೆ
ಮುಪ್ಪೆಂಬುದಿಲ್ಲ
ಯವ್ವನದ ಮನಸ್ಸು
ಯವ್ವನದ ಹುಚ್ಚು
ಅಂತರ್ದಾನವೂ ಯವ್ವನದಲ್ಲಿಯೇ…

Leave a Reply

Your email address will not be published.