ಯಕ್ಷಗಾನ ಪ್ರಸಂಗಗಳು ಸಂವಿಧಾನಕ್ಕೆ ವಿರುದ್ಧ

-ಡಾ. ಟಿ. ಗೋವಿಂದರಾಜು

ಈಚೆಗೆ ಹೊನ್ನಾವರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಕರಾವಳಿ ಯಕ್ಷಗಾನ ಕಲೆಯ ಪ್ರವೃತ್ತಿಗಳನ್ನು ಕುರಿತು ಮಾತನಾಡುತ್ತಾ, ‘ ಕೆಲವೊಂದು ಯಕ್ಷಗಾನ ಪ್ರಸಂಗಗಳು ಭಾರತೀಯ ಸಂವಿಧಾನಕ್ಕೆ ವಿರುದ್ಧವಾದ ತತ್ವಗಳನ್ನು ಪ್ರಚುರಪಡಿಸುತ್ತಿವೆ. ಪುರಾಣ ಕತೆಯ ಹೆಸರಲ್ಲಿ ಕೆಲವೆಡೆ ಜಾತಿ ನಿಂದನೆಯೂ ನಡೆಯುತ್ತಿದೆ. ‘ಕನಕಾಂಗಿ ಕಲ್ಯಾಣ’ದಲ್ಲಿ ಜಾತಿ ನಿಂದನೆಯ ಮಾತು ಬರುತ್ತದೆ. ಜಲಂಧರನ ಪ್ರಸಂಗದಲ್ಲಿ, ಜಲಂಧರನ ವೇಷದಲ್ಲಿ ಬರುವ ವಿಷ್ಣುವು ಜಲಂಧರನ ಪತ್ನಿಯ ಶೀಲ ಕೆಡಿಸುವುದಲ್ಲದೆ, ಆಕೆ ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡು, ಮರುಜನ್ಮ ಪಡೆದಾಗ ಆಕೆಯನ್ನೇ ವಿವಾಹವಾಗುತ್ತಾನೆ; ತನ್ನ ದುರಾಚಾರಗಳಿಗಾಗಿ ಶಾಪ ಪಡೆವ ಕಂಸನು, ಕುಲವಧುವನ್ನು ವಿವಾಹವಾಗುವ ಮೂಲಕ ಶಾಪವಿಮೋಚನೆಗೊಳ್ಳಬಹುದೆಂದೂ ಹೇಳಲಾಗಿದೆ.

yaksha1ಕೆಲವೊಮ್ಮೆ, ಜಾತಿ ಕಾರಣವಾಗಿ, ಕೆಲವು ಕಲಾವಿದರನ್ನು ತುಳಿಯುವ, ಕೆಲವರನ್ನು ಎತ್ತಿಕಟ್ಟುವ ಕೆಲಸಗಳೂ ನಡೆಯುತ್ತಿವೆ. ಇಂತಹ ಆತಂಕಕಾರಿಯಾದ ಪ್ರವೃತ್ತಿಗಳು ತಪ್ಪಬೇಕು; ಯಕ್ಷಗಾನ ಕಲೆಯನ್ನು ಕೆಲವು ಮಠಗಳು, ದೇವಸ್ಥಾನಗಳು ತಮ್ಮ ‘ಆಶ್ರಯ’ ಎಂಬ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಜನರು ಭಕ್ತಿಯಿಂದ ತೊಡಗಿಸಿಕೊಳ್ಳುವ ಪೌರಾಣಿಕ ಕತೆ, ಪಾತ್ರಗಳ ಮೂಲಕ ತಮ್ಮ ‘ಗುಪ್ತ ಕಾರ್ಯಸೂಚಿ’ಗಳನ್ನು ಜಾರಿಗೊಳಿಸುವ ಹುನ್ನಾರ ನಡೆಸುತ್ತಿವೆ’ ಎಂದರು.

ಭಾಗವಹಿಸಿದ್ದ ಇನ್ನೂ ಕೆಲವು ಹಿರಿಯ ಅನುಭವೀ ಕಲಾವಿದರು, ‘ಆಧುನಿಕತೆ ಹಾಗೂ ಜನಾಕರ್ಷಣೆಯ ಹೆಸರಲ್ಲಿ ಬರುತ್ತಿರುವ ಕೆಲ ನವೀನ ಪ್ರಸಂಗಗಳು ಯಕ್ಷಗಾನದ ಹೆಸರಲ್ಲಿ ತಪ್ಪು ಅಭಿರುಚಿಯನ್ನು ಹುಟ್ಟುಹಾಕುತ್ತಿರುವುದಲ್ಲದೆ, ಸಾಂಪ್ರದಾಯಿಕ ಯಕ್ಷಗಾನದ ಗುಣ ಮೌಲ್ಯಗಳನ್ನು ಹಾಳು ಮಾಡುತ್ತಿವೆ; ಇಂಥಾ ನಡವಳಿಕೆಗಳು ಯಕ್ಷಗಾನದ ‘ಅವನತಿ’ಗೆ ಕಾರಣವಾಗಬಹುದೆಂಬ ಆತಂಕವನ್ನು ವ್ಯಕ್ತ ಮಾಡಿದರು. ಅವರ ಮಾತಿನಲ್ಲಿ ವಾಸ್ತವ ಸಂಗತಿಗಳಿರುವುದು ಇತರರ ಗಮನಕ್ಕೂ ಬಂದಿರುವ ಸಾಧ್ಯತೆಗಳಿವೆ. ಪಾರ್ತಿಸುಬ್ಬನ ಕಾಲದ ಯಕ್ಷಗಾನವೇ ಯಥಾವತ್ತಾಗಿ ಇಂದೂ ಉಳಿದಿದೆ ಎಂದು ನಂಬುವುದು ಸಾಧ್ಯವಿಲ್ಲ.

ವೇಷ ಭೂಷಣ, ಸಂಭಾಷಣೆ, ಹಾಡುಗಾರಿಕೆಗಳೊಂದಿಗೆ ಪಠ್ಯವೂ ಕಾಲಕಾಲಕ್ಕೆ, ಕಲಾವಿದರು, ಭಾಗವತರ ಇಂಗಿತಕ್ಕೆ ತಕ್ಕಂತೆ ಬದಲಾಗಿರುತ್ತದೆ. ಶ್ರೀಕೃಷ್ಣನ ಮುಖವರ್ಣಿಕೆ ಇಂಥದ್ದೇ ಲಾಂಛನಗಳಿಂದ ಕಂಗೊಳಿಸುತ್ತಿರಬೇಕೆಂದು ಮಠದ ಸ್ವಾಮಿಯೊಬ್ಬರು ತಮ್ಮ ಮೇಳಕ್ಕೆ ಕಟ್ಟಾಜ್ಞೆ ಮಾಡಿದ್ದ ಬಗೆಗೆ ಹಿಂದೊಮ್ಮೆ ಪತ್ರಿಕೆಗಳಲ್ಲಿ ಪ್ರಸ್ತಾಪವಾಗಿದ್ದಿತು. ಭೂತದೈವಗಳ ಬಾಯಲ್ಲೂ ತಮಗೆ ಬೇಕಾದುದನ್ನೇ ಹೇಳಿಸುವ ಯಜಮಾನ ವ್ಯವಸ್ಥೆಯಲ್ಲಿ, ನಾಟಕದ ಪಾತ್ರಧಾರಿಗಳೂ ಏನನ್ನಾದರೂ ಹೇಳಬೇಕಾಗಿಬರುವುದು ಅಚ್ಚರಿಯದೇನಲ್ಲ. ನಮ್ಮ ಹೆಚ್ಚಿನ ಕಲೆಗಳು ಶುದ್ಧಾಂಗ ಕಲೆಗಳಲ್ಲ; ಅವು ಭಕ್ತಿ ಪಂಥದ ಪ್ರಚಾರ ಮಾಧ್ಯಮಗಳು. ಅನೇಕ ಜನಪದ ಪ್ರದರ್ಶಕ ಕಲೆಗಳು ಭಕ್ತಿಪಂಥದಿಂದಾಗಿಯೇ ಹುಟ್ಟಿವೆ ಎಂಬುದನ್ನು ನನ್ನ ಒಂದು ಪರಿಶೋಧನೆಯಲ್ಲಿ ಈಗಾಗಲೇ ದಾಖಲಿಸಿದ್ದೇನೆ. ಈಚೆಗೆ ರಾಜಕೀಯ ಪಕ್ಷಗಳು ಹಾಗೂ ಸರ್ಕಾರೀ ಯೋಜನೆಗಳ ಪ್ರಚಾರಕ್ಕೂ ಜನಪದ ಕಲೆಗಳನ್ನು ಬಳಸಿಕೊಳ್ಳುತ್ತಿರುವುದು ಮತ್ತೊಂದು ಉದಾಹರಣೆ, ಅಷ್ಟೆ.

ಕರಾವಳೀ ಯಕ್ಷಗಾನಕ್ಕಿರುವ ಈ ಬಗೆಯ ಆತಂಕ ಪ್ರವೃತ್ತಿಗಳಿಂದ ಸ್ವಲ್ಪ ಮಟ್ಟಿಗಾದರೂ ಬಯಲುಸೀಮೆಯ ಯಕ್ಷಗಾನ ಪ್ರಕಾರಗಳು ‘ಮುಕ್ತ’ವಾಗಿವೆ ಎನ್ನಬಹುದು. ಏಕೆಂದರೆ, ಈ ಪ್ರಕಾರಗಳು ಮುಖ್ಯವಾಗಿ ತಮಗಿರುವ ಪ್ರೋತ್ಸಾಹದ ಕೊರತೆಯಿಂದಾಗಿ, ಇನ್ನೂ ಜೀವ ಉಳಿಸಿಕೊಳ್ಳುವುದೇ ಕಷ್ಟ ಎಂಬ ಸಂದಿಗ್ಧತೆಯಲ್ಲಿವೆ. ‘ವಾಣಿಜ್ಯ ಉದ್ದಿಮೆ’ಯಂತಾಗಿರುವ ಕೆಲವು ಕರಾವಳಿ ಮೇಳಗಳು ಭಾರತೀಯ ಸಂವಿಧಾನದ ಆಶಯಗಳಿಗೆ ವಿರುದ್ಧ ದಿಕ್ಕಿನಲ್ಲಿ ಬೆಳೆಯುತ್ತಿದ್ದು, ಜಾತಿ ತಾರತಮ್ಯ, ಸ್ತ್ರೀ ಮೌಲ್ಯಗಳ ಕಡೆಗಣನೆ, ಮೌಢ್ಯಾಚಾರಗಳ ಪ್ರೋತ್ಸಾಹ ಇತ್ಯಾದಿಗಳನ್ನು ನಡೆಸುತ್ತಿವೆ- ಎಂದಾದಲ್ಲಿ, ಪ್ರಾಜ್ಞರೆಲ್ಲರೂ ಆ ಬಗೆಗೆ ಚಿಂತಿಸಿ, ಕಲೆಯನ್ನೂ, ಮಾನವೀಯ ಮೌಲ್ಯಗಳನ್ನೂ ಕಾಪಾಡಿಕೊಳ್ಳುವ ತುರ್ತು ಇಂದು ಬಹಳವಾಗಿದೆ.

ಈ ದಿಸೆಯಲ್ಲಿ ಸಂಬಂಧಿಸಿದವರ ಅವಗಾಹನಗೆ ತರಬಯಸುವ ಒಂದೆರಡು ಸಲಹೆಗಳೆಂದರೆ, ಪುರಾಣ ಗಳಲ್ಲಿಯೂ ಇರುವ ಮಾನವೀಯ ಮೌಲ್ಯಗಳ ಕತೆಗಳನ್ನೇ ಆಯ್ದುಕೊಳ್ಳುವುದು ಅಥವಾ, ಆಧುನಿಕತೆಗೆ ತಕ್ಕಂತೆ ಬದಲಿಸಿಕೊಳ್ಳುವುದು; ವೈಚಾರಿಕ ಅರಿವಿನಲ್ಲಿ ಈಚೆಗೆ ರಚಿತವಾಗಿರುವ ಪುರಾಣ, ಇತಿಹಾಸಗಳ ಹಿನ್ನೆಲೆಯ ಸಣ್ಣ ಕತೆ, ಕಾದಂಬರಿಗಳನ್ನು ಅಳವಡಿಸಿಕೊಳ್ಳುವುದು, ಮಹಿಳೆಯರು ಬರೆದ ಅಥವಾ, ಸ್ತ್ರೀಯರ ಗೌರವವನ್ನು ಎತ್ತಿ ಹಿಡಿಯುವ, ತಳಮೂಲ ಸಂಸ್ಕøತಿಗಳ ಹಿತ ಚಿಂತನೆ ಮಾಡುವಂತಹ ಪಠ್ಯಗಳನ್ನು ಬಳಸುವ ಅಥವಾ ಹೊಸದಾಗಿ ರಚಿಸುವ ಕೆಲಸ ಮಾಡುವುದು, ಅಗತ್ಯವಿದ್ದಲ್ಲಿ ಧಾರ್ಮಿಕ ಸಂಸ್ಥೆಗಳ ಆವರಣದಿಂದ ಹೊರಬರುವುದು. ಆಧುನಿಕತೆ, ಕೇವಲ ಜನಾಕರ್ಷಣೆಗಳ ಬೆನ್ನುಬೀಳದೆ, ಜಾಗತಿಕ ರಂಗಭೂಮಿಯಲ್ಲಿ ಯಕ್ಷಗಾನದ ಅನನ್ಯತೆಗಳನ್ನು ಎತ್ತಿಹಿಡಿಯುವ ಗುಣ ಲಕ್ಷಣಗಳನ್ನು ಕಡ್ಡಾಯವಾಗಿ ಉಳಿಸಿಕೊಳ್ಳುವುದು.. ಇಂತಹವುಗಳಿಂದ, ಯಕ್ಷಗಾನಕ್ಕೆ ಹೊಸ ಶಕ್ತಿ, ದೀರ್ಘ ಬಾಳಿಕೆಯ ಗುಣಗಳು ಪ್ರಾಪ್ತವಾಗುವುದು ಸಾಧ್ಯವಾದೀತು.

ಯಕ್ಷಗಾನವು ಅದೇ ಕಥಾಕಥಿತ ಹಳೇ ಪುರಾಣವನ್ನು ಈಗಲೂ ಯಥಾವತ್ತು ನಿರೂಪಿಸಬೇಕಿಲ್ಲ. ಹಾಗೆಂದು, ಹೇಗೆ ಬೇಕಾದರೂ ಬಗ್ಗಿಸಬಹುದೆಂದು ಹಿಂಜುವುದೂ ಸೂಕ್ತವಲ್ಲ. ಎಲಾಸ್ಟಿಕ್ ಸಹ ಅತಿಯಾಗಿ ಎಳೆದರೆ ಕಿತ್ತುಹೋಗುತ್ತದೆ- ಎಂಬ ವಿವೇಕ ಇಟ್ಟುಕೊಂಡೇ ಪ್ರಯೋಗಶೀಲರಾಗಬೇಕಾಗುತ್ತದೆ.

Leave a Reply

Your email address will not be published.