ಕಥನ ಆರಂಭ-2
ನನ್ನ ಹೆಸರು ಎತ್ತಿನ ಬೋರಯ್ಯ. ನಮ್ಮ ಮನೆತನದವರನ್ನು ‘ಎತ್ತಿನ ಮನೆತನ’ ಎಂದು ಕರೆಯುತ್ತಾರೆ. ಅದಕ್ಕೆ ನಮ್ಮ ಹೆಸರುಗಳ ಜೊತೆಗೆ ಎತ್ತಿನ ಅಂತ ಸೇರಿಸುತ್ತಾರೆ. ನಮ್ಮ ಅಪ್ಪ, ತಾತ ಇವರೆಲ್ಲರಿಗೂ ಹಿಂಗೆ ಕರೀತಿದ್ರು. ನಾವು ನಾಲ್ಕು ಜನ ಗಂಡು ಮಕ್ಕಳು. ಅದರಲ್ಲಿ ಒಬ್ರು ಸತ್ಹೋದ್ರು. ಇನ್ನು ಮೂರು ಜನ ಇದ್ದೀವಿ. ನಾನು ಬೇರೆ ಇದ್ದೀನಿ. ಇನ್ನಿಬ್ರು ಬೇರೆ ಬೇರೆ ಇದ್ದಾರೆ. ಜಮೀನಿನಲ್ಲಿ ನಾನು ಇನ್ನು ಯಾವುದೇ ಭಾಗ ತಗೊಂಡಿಲ್ಲ. ನನ್ನ ಭಾಗವನ್ನು ಅವರಿಬ್ಬರೇ ಮಾಡ್ಕೊಂಡು ತಿಂತಾರೆ. ನಮ್ಮಪ್ಪ ನಮ್ಮನ್ನು ಚೆನ್ನಾಗಿ ಸಾಕಿದ್ದ. ನಮ್ಮ ಚಿಕ್ಕಪ್ಪ ಆಗ ದೇವರೆತ್ತುಗಳನ್ನು ಕಾಯ್ತಿದ್ದ. ಆವಾಗಿನಿಂದ ನಮ್ಮ ಮನೆತನ ಯಾವ ತೊಂದರೆಗಳಿಲ್ಲದೆ ನಡ್ಕೊಂಡು ಬಂದಿದೆ. ಆ ದೇವರ ದಯೆ ನಮ್ಮ ಮೇಲಿದೆ.
ನಾನು ಸಣ್ಣವನಿದ್ದಾಗ ನಮ್ಮ ಅಪ್ಪ-ಅಮ್ಮ ಇಸ್ಕೂಲಿಗೆ ಕಳುಸಿದರು. ನಮ್ಮೂರಾಗೆ ಇಸ್ಕೂಲು ಬಾಲಬೋಧೆಯಿಂದ ಐದನೇ ತರಗತಿಯವರೆಗೆ ಇತ್ತು. ನಾನು ಒಂದೆರಡು ದಿನ ಇಸ್ಕೂಲಿಗೆ ಹೋದೆ. ಆವಾಗ ಮೂರು ಜನ ಮೇಸ್ಟ್ರುಗಳಿದ್ರು. ನಾವು ಹುಡುಗರು ಒಂದು ನಲವತ್ತು ಜನ ಇದ್ವಿ. ಆವಾಗ ಎತ್ತಿನಹಟ್ಟಿ ಬೊಮ್ಮಣ್ಣ, ದೇವರಹಟ್ಟಿ ಸೂರಪ್ಪ, ಇನ್ನೊಬ್ರು ಯಾರೋ ಒಟ್ಟು ಮೂರು ಜನ ಮೇಸ್ಟ್ರುಗಳಿದ್ರು, ಅವರು ಬಾರೀ ಬಿಗಿಯಾಗಿ ಕಲ್ಸುತಿದ್ರು, ಈಗಿನಂತೆ ಹುಡುಗರೇ ಹೇಳಿಕೊಡಂಗೆ ಮಾಡುತ್ತಿರಲಿಲ್ಲ. ನಾಲ್ಕೈದು ಲಕ್ಕಿಲಿ (ಒಂದು ಜಾತಿಯ ಗಿಡ) ಬರಲುಗಳನ್ನು ಜೋಡಿಗೆ ಸೇರಿಸಿಕೊಂಡು ಬಾರಿಸುತ್ತಿದ್ದು, ಈ ಬರಲುಗಳನ್ನು ಹುಡುಗರೇ ತಂದು ಕೊಡಬೇಕಾಗಿತ್ತು.
ಆವಾಗ ಇಸ್ಕೂಲಗೆ ಶಾರದ ಪೂಜೆ ಮಾಡ್ತಿದ್ವಿ. ಆವಾಗ ಈಗಿನಂತೆ ದುಡ್ಡು ಹಾಕ್ತಿರಲಿಲ್ಲ. ಕಾಳು ಕೊಡ್ತಿದ್ವಿ. ಅಂಗೆ ಕೊಟ್ಟ ಕಾಳುಗಳನ್ನು ದುಂಡ್ಗಾಕಿ, ಮೇಸ್ಟ್ರುಗಳು ತಗೋಂಡ್ಹೋಗಿ ಅಂಗಡಿಗೆ ಹಾಕಿ ಮಂಡಕ್ಕಿ ತತ್ರ್ತಿದ್ದ್ರು. ನಮ್ಮ ಕಾಲಕ್ಕೆ ಮಾರನಾಮಿ (ಮರನವಮಿ) ಹುಡುಗರು ಅಂಥ ಅಗ್ತಿದ್ರು, ನಾನೂ ಆಗಿದ್ದೆ.
ಮಾರನಾಮಿ ಹುಡುಗರಾಗಿ ಊರಗೆ ತಿರಿಕ್ಕೊಂಡು ಬರ್ತಿದ್ವಿ. ಇವಾಗ ದಿನಾಚರಣೆಗಳ ದಿನ ಹುಡುಗರು ತಿರುಗ್ತಾರಲ್ಲ ಹಾಗೆ. ಹಿಂಗೆ ತಿರುಗುವಾಗ ಮೇಸ್ಟ್ರುಗಳು ಹಾಡುಗಳನ್ನು ಹೇಳಿಕೊಡ್ತಾ ಇದ್ರು. ಅವರು ಹೇಳಿ ಕೊಟ್ಟಂಗೆ ನಾವು ಹೇಳ್ತಿದ್ವಿ. ಈಗ ನಾಟಕಗಳಂತೆ, ಅದಂತೆ-ಇದಂತೆ ಮಾಡ್ತಾರೆ. ಈಗಿನ ಹುಡುಗರಂಗೆ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ಈಗ ಇನ್ನು ದುರುಗದ ಗುಡ್ಡಕ್ಕಂತೆ, ಹಂಪೆ ಹೊಸಪೇಟೆಗಳಂತೆ, ಪಾವಗಡಕ್ಕಂತೆ ಅಂತ ಹುಡುಗರನ್ನು ಕರ್ಕೊಂಡು ತಿರುಗುತ್ತಾರೆ. ಗಣೇಶನ ಹಬ್ಬಾನೂ ಸಹಿತ ಮಾಡುತ್ತಿರಲಿಲ್ಲ. ಹಿಂಗೆ ಇರುವಾಗ ನಾನು ಎರಡನೇ ತರಗತಿ ಓದ್ತಾ ಇದ್ದೆ.
ಮೇಸ್ಟ್ರುಗಳ ಹೊಡೆತಗಳಿಗೆ ತಡೆಯಲಾರದೆ ತಪ್ಪಿಸಿಕೊಂಡು ಅದೇ ಹೋಗ್ತಿದ್ದೆ. ಕೊನೆಗೆ ಮೇಸ್ಟ್ರುಗಳ ಹೊಡೆತಗಳಿಗೆ ತಪ್ಪಿಸಿಕೊಂಡು ಓಡಿಹೋಗಿ ಬೇಸಾಯಕ್ಕೆ ಬಿದ್ದೆ. ನಮ್ಮ ಜೊತೆಗೆ ಗಗ್ಗಬೋರಣ್ಣ ಅವರೆಲ್ಲ ಓದುತ್ತಿದ್ರು, ಆವಾಗ ಅ,ಆ,ಇ,ಈ, ಕಾಗುಣಿತ, ಮಗ್ಗಿಗಳನ್ನು ಓದಿಸುತಿದ್ರು, ನಮ್ಮ ಜೊತೆಗೆ ಓದಿದವರು ಯಾರೂ ಕೆಲಸಕ್ಕೆ ಹೋಗ್ಲಿಲ್ಲ. ಇತ್ತಿತ್ಲಗೆ ಕೆಲಸಗಳಿಗೆ ಹೋಗಿರೋದು.
ನಮ್ಮ ಕಾಲಕ್ಕೆ ನಾವು ಕೆಲವು ಆಟಗಳನ್ನು ಆಡ್ತಿದ್ವಿ. ಅವುಗಳು ಯಾವೂ ಇವೊತ್ತು ಇಲ್ಲ. ಚಿಣ್ಣಿ-ದಾಂಡು, ಕಲ್ಲುಗಳಲ್ಲಿ ಗೋಲಿಆಟ, ಕೊಕ್ಕು (ಹೆಗ್ಗಣ) ಇನ್ನು ಯಾವ್ಯೂದೋ ಆಟಗಳನ್ನು ಆಡುತ್ತಿದ್ವಿ. ಈಗ ಕಿರಿಕೆಟ್ ಮತ್ತೆ ಕಲ್ಲುಕಟ್(ಚದುರಂಗ) ಇನ್ಯಾತ್ಯಾತರವೋ ಆಟಗಳು ಆಡ್ತಾರೆ. ನಮಗೆ ಅವುಗಳ ಬಗ್ಗೆ ಏನೂ ಗೊತ್ತಿಲ್ಲ. ಅದಕ್ಕೆ ಅವುಗಳನ್ನು ನೋಡಕ್ಕಾಗ್ಲಿ, ಆಡಕ್ಕಾಗ್ಲಿ ಹೋಗೋಲ್ಲ.
ಇಸ್ಕೂಲಿಗೆ ತಪ್ಪಿಸಿಕೊಂಡು ಎಮ್ಮೆ ಕಾಯಕ ಹೋಗುತ್ತಿದ್ದೆ. ಆವಾಗ ಇನ್ನೂ ಕೆಲವು ಹುಡುಗರು ಜೊತೆ ಸೇರಿಕೊಂಡು ಭಾರಿ ಕಥೆ ಮಾಡ್ತಿದ್ವಿ, ಒಂದ್ಸಲ ಯರಬೋತ್ಲ ಓಬಯ್ಯ, ತಿಪ್ಪಯ್ಯ, ಕೋಡ್ಲು ಚಿತ್ತಯ್ಯಗಳ ಚಿನ್ನಯ್ಯ ಇವರು ನಾವೆಲ್ಲ ಎಮ್ಮೆ ಕಾಯ್ತಾ ಇದ್ವಿ. ಈಗಿರುವಾಗ ಯರಬೋತಲ ಓಬಯ್ಯನನ್ನು ಎಮ್ಮೆ ಕಾಯದು ಬಿಡಿಸಿ ಕುರಿಮರಿ ಕಾಯಕ್ಕೆ ಹಾಕಿದ್ರು, ಹಾಕಿದ್ದು ಇನ್ನೇನು ಮಾಡ್ತಿ, ನಾವು, ಚಿನ್ನಯ್ಯ, ಸಣ್ಣಬೋರಯ್ಯ ಮಾವನ ಮಗ ಗೊಂಚಿಕಾರ ಅಂತ ಒಬ್ಬ ಇದ್ದ. ಆತ ಬೇರೆದೇವರಿಗೆ ಕೂದ್ಲು ತೆಗಸಾಕೆ ಹೋಗಿ, ದೇವರಹಟ್ಟಿ ಹತ್ತಿರ ಗಾಡಿಗಳು ಬಿದ್ದು ಸತ್ತೋದ. ಇವರಿಬ್ಬರು, ನಾನು ಸೇರಿ ಯರಬೋತಲ ಓಬಯ್ಯನ ಕುರಿಮರಿಗಳು ಸತ್ತರೆ ಅವುನ್ನ ಚರ್ಮ ತೆಗೆದು ಅಂಗೆ ಸುಟ್ಟು ಬಿಡ್ತಿದ್ವಿ. ಮರಿಯನ್ನು ಸುಟ್ಟಾಗ ನಮಗಿಂತ ಸ್ವಲ್ಪ ಚಿಕ್ಕವನಾದ ಎರಬೋತ್ಲ ಓಬಯ್ಯನಿಗೆ ಕೊಡುತ್ತಿರಲಿಲ್ಲ. ಕೊಟ್ಟರೂ ಬರೀ ಎಲಗಗಳನ್ನು ಮಾತ್ರ. ಚನ್ನಯ್ಯಗೆ ಮಾತ್ರ ಯರಬೋತ್ಲ ಓಬಯ್ಯನ ಮೇಲೆ ಆಸೆ. ಆದಕ್ಕೆ ಯೆರಬೋತೂ ಹಿಡಿ ಅಂತ ಸ್ವಲ್ಪ ಖಂಡ ಕೊಡುತ್ತಿದ್ದ. ಇವಾಗಲೂ ನಾವು ಸೇರಿಕೊಂಡ್ರೆ. ಅದನ್ನ ನೆನಸಿಕೊಂಡು ಭಾರಿ ನಗ್ತೀವಿ.
ನಾನು ಸಣ್ಣವನಿದ್ದಾಗ ನಮ್ಮ ಹಿರಿಯರು ಹೇಳ್ತಿದ್ರು. ಏನಂತ ಅಂದ್ರೆ ಯಾವಾಗ್ಲೂ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಅಂತ. ಯಾಕೆಂದ್ರೆ, ಒಂದು ದಿನ ಪಾರ್ವತಿ ಮೈತೊಳಕೊಳ್ಳುವಾಗ ಮೈಯ್ಯಾಗಿನ ಕೊಳೆಯನ್ನು ತೆಗೆದು ಒಂದು ಹುಡುಗನನ್ನು ಮಾಡಿ ಜೀವಕಳೆ ತುಂಬಿ ಬಾಗಿಲಿಗೆ ಕಾವುಲು ಕೂರಿಸಿದಳಂತೆ. ಅಂಗೆ ಈಶ್ವರ ಬಂದ್ನಂತೆ. ಈಶ್ವರ ಬಂದು ಹುಡುಗನನ್ನು ದಾರಿ ಬಿಡು ಅಂತ ಕೇಳಿದನಂತೆ. ಅದಕ್ಕೆ ಆ ಹುಡುಗ ದಾರಿಬಿಡಲಿಲ್ಲವಂತೆ ಆವಾಗ ಈಶ್ವರನಿಗೆ ಸಿಟ್ಟು ಬಂದು ಆ ಹುಡುಗನ ಕುತ್ತಿಗೆಯನ್ನು ಕತ್ತರಿಸಿದನಂತೆ. ಪಾರ್ವತಿ ಇದನ್ನು ನೋಡಿ ನನ್ನ ಮಗನನ್ನು ಉಳಿಸಿಕೊಡಬೇಕೆಂದು ಹಟ ಹಿಡಿದಳು. ಆವಾಗ ಈಶ್ವರ ದೂತನನ್ನು ಕರೆದು ಉತ್ತರ ದಿಕ್ಕಿಗೆ ಮಲಗಿದ ಪ್ರಾಣಿಯ ತಲೆಯನ್ನು ಕತ್ತರಿಸಿ ತರಬೇಕು ಅಂತ ಹೇಳಿದನಂತೆ. ಏನುಗ(ಆನೆ) ಮಾತ್ರ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಿಗಿತ್ತಂತೆ. ಆವಾಗ ಅದರ ತಲೆಯನ್ನು ಕಡಿದುಕೊಂಡು ಹೋಗಿ ಈಶ್ವರನಿಗೆ ಕೊಟ್ಟರಂತೆ. ಈಶ್ವರ ಆ ಹುಡುಗನ ದೇಹಕ್ಕೆ ಅದರ ರುಂಡವನ್ನಿಟ್ಟು ಬದುಕಿಸಿದನಂತೆ. ಬದುಕಿದ ಆ ಹುಡುಗನೇ ಗಣೇಶನಾದನಂತೆ. ಆದ್ದರಿಂದ ಉತ್ತರ ದಿಕ್ಕಿಗೆ ತಲೆ ಮಾಡಿ ಯಾರೂ ಮಲಗುವುದಿಲ್ಲ. ನಾನೂ ಕೂಡ ಯಾವೊತ್ತು ಅಂಗೆ ಮಲಗುವುದಿಲ್ಲ. ಈ ಗಣೇಶನನ್ನು ಈಗ ಇಸ್ಕೂಲುಗಳಲ್ಲಿ ಊರವರು ಎಲ್ಲ ಸೇರಿ ಚಾವಡಿಯಲ್ಲಿ ಕೂರಿಸುತ್ತಾರೆ. ನಾವು ಓದುತ್ತಿದ್ದಾಗ ಹಿಂಗೆ ಮಾಡುತ್ತಿರಲೇ ಇಲ್ಲ. ಹಿಂಗೆ ನಾನು ಸಣ್ಣವ£ದ್ದಾಗ ಹುಡುಗರ ಜೊತೆ ಕಾಲ ಕಳೆದು ಬೇಸಾಯ ಮಾಡ್ತಾ ಬದುಕುತ್ತಿದ್ವಿ. ಆವಾಗ ನನ್ನನ್ನು ಕಿಲಾರಿ ಮಾಡಿದರು.
ಕಿಲಾರಿಯಾದಾಗ ದೇವರ ಎತ್ತುಗಳ ಕಿಲಾರಿತನವನ್ನು ನಮ್ಮ ಮನೆತನಕ್ಕಿಂತ ಹಿಂದೆ ಬೇರೆ ಮನೆತನದವರು ಮಾಡಿದ್ದಾರೆ. ನನಗಿಂತ ಹಿಂದೆ ನಮ್ಮ ಚಿಕ್ಕಪ್ಪರು ಕಾಯ್ತ ಇದ್ದರು. ಹಿಂಗೆ ಕಾಯುವಾಗ ಪೆದ್ದಗಳಿಗೂ (ಹಿರಿಯರು) ಮತ್ತೆ ನಮ್ಮ ಚಿಕ್ಕಪ್ಪನಿಗೂ ಎದುರಾಯ್ತು. ಯಾಕೆಂದ್ರೆ ನಮ್ಮ ಸಂಪ್ರದಾಯದಲ್ಲಿ ಮಕ್ಕಳಿಗೆ ಕೂದಲು ಬಿಡುತ್ತಾರೆ. ದೇವರೆತ್ತುಗಳ ಹೆಸರೇಳಿ ಬಿಟ್ಟ ಕೂದಲನ್ನು ನಮ್ಮ ದೇವರ ಪೂಜಾರಿ ತೆಗಿಬೇಕು. ಆದರೆ ನಮ್ಮ ಚಿಕ್ಕಪ್ಪ ಕೂದಲು ತೆಗೆಯುವ ಹಕ್ಕು ನನ್ನದು ಎಂದು ಹಟ ಇಡಿದ. ಯಾವಾಗೆಂದ್ರೆ ನಮ್ಮೂರಿನ ನೆಲಗೇತಯ್ಯನ ಕೂದಲು ತೆಗಿಸುವಾಗ. ಆ ಸಂದರ್ಭದಲ್ಲಿ ಬೊಮ್ಮದೇವಡ್ಲ ಹೊಲದಲ್ಲಿ ಗೂಡು ಹಾಕಿದ್ರು. ಹಿಂಗೆ ನಮ್ಮ ಚಿಕ್ಕಪ್ಪ ಹಟ ಹಿಡಿದಾಗ ಪೆದ್ದಗಳೆಲ್ಲಾ ಸೇರಿಕೊಂಡು ನಮ್ಮ ಚಿಕ್ಕಪ್ಪನಿಗೆ ಹೇ ನೀನು ಇರಂಗಿಲ್ಲಣ್ಣ ನಡಿ ಎಂದು ಮನೆಗೆ ಕಳಿಸಿದರು. ಆಮೇಲೆ ಊರಲ್ಲಿ ಎಲ್ಲರೂ ಸೇರಿಕೊಂಡು ನಮ್ಮ ತಂದೆಯನ್ನು ಕರಿಸಿದ್ರು. ಕರಿಸಿ ನಿನ್ನ ಮಗನನ್ನು ದೇವರೆತ್ತುಗಳಿಗೆ ಕಳಿಸಬೇಕು ಅಂತ ಕೇಳಿದರು. ಇದಕ್ಕೆ ನಮ್ಮಪ್ಪ ಒಪ್ಪಿದ. ಹಿಂಗೆ ಒಪ್ಪಿಕೊಂಡು ಬಂದು ನಮ್ಮಪ್ಪ ನನಗೆ ಹಿಂಗಿಂಗೆ ಅಂತ ಹೇಳ್ದ. ಆವಾಗ ನಾನು ಏನೂ ಮಾತಾಡಲಿಲ್ಲ.
ಒಂದು ದಿನ ಶುಕ್ರವಾರ ಕಂಪ್ಳದೇವರ ಗುಡ್ಡೆ ಹತ್ತಿರ ಊರಿನ ಕುಲಸಾವರಿದವರು, ಪೆದ್ದಗಳೂ ಸೇರಿಕೊಂಡು ನನಗೆ ವಿಭೂತಿ ನಾಮ (ಉದ್ದುಗೆ) ಹಾಕಿ ಕಿಲಾರಿಯಾಗಿ ಮಾಡಿದರು. ಅವೊತ್ತಿನಿಂದ ನಾನು ದೇವರೆತ್ತುಗಳನ್ನು ಕಾಯಲು ಹೋದೆ. ಈಗ ಹೇಳಿದ ಕಂಪ್ಳದೇವರ ಗುಡ್ಡಯು ಊರಿನ ಪಕ್ಕದಲ್ಲಿ ಇದೆ. ನಾವು ಯಾವುದೇ ದೇವರಾದರೂ ಆ ದೇವರ ಸೋಮುವಾರದ ಹಿಂದಿನ ಶುಕ್ರವಾರ ಈ ಕಂಪ್ಳದೇವರ ಪೂಜೆ ಮಾಡುತ್ತೇವೆ. ಈಗ ಈ ಗುಡ್ಡೆ ನಲ್ಲನವರ ಹೊಲದಲ್ಲಿದೆ. ಒಂದು ಬನ್ನಿ ಮರಕ್ಕೆ ಹಬ್ಬದ ದಿನ ಊರಿನ ಎಲ್ಲಾ ಜನ ತಮ್ಮ ಕೈಯಲ್ಲಿ ಎರಡೋ ನಾಲ್ಕೋ ಕಲ್ಲುಗಳನ್ನು ತಂದು ಆ ಬನ್ನಿಮರದ ಬುಡಕ್ಕೆ ಆಕ್ತಾರೆ. ಹಿಂದಿನಿಂದಲೂ ಹಿಂಗೆ ಹಾಕ್ತಾ ಬಂದಿರುವುದರಿಂದ ಕಲ್ಲುಗಳ ದೊಡ್ಡ ರಾಶಿಯಾಗಿದೆ. ಈ ಕಲ್ಲುಗಳ ನಡುವೆ ದೇವರೆತ್ತುಗಳು ಸತ್ತಾಗ ಅವುಗಳ ಕೊಂಬುಗಳನ್ನು ತೆಗೆದುಕೊಂಡು ಬಂದು ಈ ಕಂಪಳದೇವರ ದಿನ ಪೆದ್ದಗಳಿಗೆ ಒಪ್ಪಿಸಬೇಕು. ಅವರು ಈ ಕೊಂಬನ್ನು ಅಲ್ಲಿಟ್ಟು ಮುಂದಕ್ಕೆ ಅವುಗಳನ್ನು ಪೂಜೆ ಮಾಡ್ತಾರೆ. ಈ ಜಾಗದಾಗೆ ನನಗೆ ಕಿಲಾರಿ ಪಟ್ಟ ಕಟ್ಟಿದರು.
ನಾನು ಕಿಲಾರಿಯಾಗಿ ದೇವರೆತ್ತುಗಳನ್ನು ಕಾಯಲು ಗೂಡಿಗೆ ಹೋದೆ. ದೇವರೆತ್ತುಗಳ ಜೊತೆಗೆ ಊರಿನ ಕೆಲವು ಜನ ನಮ್ಮ ದನಗಳನ್ನು ಸೇರಿಸಿಕೊಂಡು ಕಾಯ್ತಾ ಇದ್ದರು. ಇಲ್ಲಿ ನನಗೆ ಮೊದಮೊದಲು ಯಾವ ಮುದ್ದೆ-ಸಾರು ಮಾಡಕೂ ಬರುತ್ತಿರಲಿಲ್ಲ. ಬೊಮ್ಮದದೇವಡ್ಲ ಬೊಮ್ಮಜ್ಜ ಅಂತ ಒಬ್ಬಜ್ಜ ಇದ್ದ. ಅವಜ್ಜನ ಕೇಳಿಕೊಂಡು ಅದು-ಇದು ಮಾಡ್ತಿದ್ದೆ. ಒಟ್ನಾಗೆ ಉಡದ ಸಾರು ಮಾಡೋದು, ಒಟ್ಟು ಯಾವುದೇ ಮಾಂಸದ ಸಾರು ಆದರೂ ಮಾಡ್ತೀನಿ. ಬೇರೆ ಬೇರೆ ತರಹದ ಸಾರನ್ನು ಮಾಡ್ತೀನಿ. ಗೂಡಲ್ಲಿ ಆಕಳುಗಳು ಕರಿತಾವಲ್ಲ ಆವಾಗ ಹಾಲನ್ನು ಮೊಸರು ಮಾಡೋದು. ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯೋದು ಇದನ್ನೆಲ್ಲ ಮಾಡ್ತಿನಿ. ಇದನ್ನೆಲ್ಲಾ ನನಗೆ ಕಲ್ಸಿದ್ದು ಬೊಮ್ಮದೇವಡ್ಲ ಬೊಮ್ಮಜ್ಜ. ಪಾಪ ಕಲ್ಸಿದ್ನ ಕಲ್ಸಿಲ್ಲ ಅಂದ್ರೆ ಯಾರೋಪ್ತಾರೆ? ನಾನು ಮೊದಲು ಕಿಲಾರಿಯಾಗಿ ಹೋದಾಗ ‘ಮುತ್ತಯ್ಯಗಳ ಕಳ್ಳಿ’ಗಳ ಹತ್ತಿರ ಗೂಡು ಇತ್ತು. ಆವಾಗ ನಲ್ಲನ ಬೋರಯ್ಯ (ದೇವರ ಪ್ರಮುಖ ಯಜಮಾನ) ಈಗಲ ಚೆನ್ನಯ್ಯ, ಕುಂಟಿಪಾಲಯ್ಯ, ಬೊಮ್ಮಜ್ಜ ಅವರು ಅವರ ದನಗಳನ್ನು ಮುತ್ತಯ್ಯಗಳ ಜೊತೆಗೆ ಸೇರಿಸಿಕೊಂಡು ನಮ್ಮ ಜತೆ ಇದ್ರು. ನಾವೆಲ್ಲರೂ ಗೂಡಿನ ಮುಂದೆಯೇ ಮಲಗುತ್ತಿದ್ದೆವು.
ನಾವು ಎತ್ತುಗಳನ್ನು ಮೊದಲು ಕಾವಲಿಗೆ ಸುಮ್ನೆ ಹೊಡೆದು ಬಿಟ್ಟು ಆರಾಮಾಗಿ ಎಲ್ಲಿಯಾದರೂ ಒಂದು ಹತ್ರ ಕುಂತು ಬಿಡ್ತಿದ್ವಿ. ಆವಾಗ ಏನೂ ಕಾಟವಿರಲಿಲ್ಲ. ಎತ್ತುಗಳಿಗೆ ಪ್ರಾಣಿಗಳದೇ ಆಗಲಿ ಇನ್ಯಾತರದೇ ಆಗಲಿ ಕಾಟ ಇರಲಿಲ್ಲ. ನಮಗೆ ಮಾತ್ರ ಪಾರಂನವರಿಗೆ ಕಾಟ. ಇದು ಅಮೃತ್ ಮಹಲ್ ಕಾವಲು ಇದ್ದಾಗ ಆಗ್ತಿರಲಿಲ್ಲ. ಪಾರ್ಮ್ ಯಾವಾಗಾಯ್ತು ಆವಾಗ ಪಾರಂ ಕಾಯೋರು ಬಂದು ನಮಗೆ ಕಾಟ ಕೊಡಕೆ ಹತ್ತಿದರು. ಆವಾಗ ಬೆಳಗ್ಗೆ ಉಂಡು ಹೋಗಿದ್ದು ಮತ್ತೆ ಸಾಯಂಕಾಲಾನೇ ಉಣ್ಣುತಿದ್ದು, ನೀರು ಕೂಡ ಹಳ್ಳಗಳಲ್ಲಿ ಎಲ್ಲಿಯಾದರೂ ಸಿಕ್ಕರೆ ಕುಡಿತಿದ್ದೆ-ಇಲ್ಲವಾದರೆ ಇಲ್ಲ ಹಿಂಗೆ ಮುತ್ತಯ್ಯಗಳನ್ನು ಕಾವಲಿಗೆ ಹೊಡೆದು ದೊಡ್ಡ ಪೊದೆಗಳಗುಂಟೆ ಜೇನು ಮುರುಕೊಂಡು ತಿಂದುಕೊಂಡು ಕಾಲ ಕಳಿತಿದ್ವಿ. ತುಪ್ಪನ ಸೋರಿಸಿಕೊಂಡು ತಿನ್ನೋದಕ್ಕೆ ಜನ್ನೆ (ಎಕ್ಕೆ ಎಲೆಗಳಿಂದ ಮಾಡಿದ ದೊನ್ನೆ) ಹೊಲಿದುಕೊಂಡು ಅದರಾಕೆ ಸೋರಿಸಿಕೊಂಡು ತಿನ್ನುತ್ತಿದ್ವಿ.
ಪಾರಂ ಕಾಯುವವರು ದೇವರೆತ್ತುಗಳು ಅಂದ್ರೆ ಸುಮ್ನೆ ಇರುತ್ತಿದ್ರು. ಆದರೆ ಕೆಲವು ಜನ ಕಾವಲುಗಾರರು ಸುಮ್ನೆ ಇರುತ್ತಿರಲಿಲ್ಲ. ನಮ್ಮನ್ನು ಬಯ್ಯೋದು, ಹೊಡೆಯೋದು ಎಲ್ಲಾ ಮಾಡ್ತಾರೆ. ಅದಕ್ಕೆ ಕಾವಲಲ್ಲಿ ಎತ್ತುಗಳನ್ನು ಬಿಟ್ಟು ಆರಾಮಾಗಿ ಕೂತುಕೊಳ್ಳುವಂಗಿಲ್ಲ. ಅವರು ಬರುವುದನ್ನೇ ಕಾಯ್ತಾ ಕುಂತಿರಬೇಕು. ಅವರು ಕಾಣಿಸಿದ ತಕ್ಷಣ ಎತ್ತುಗಳನ್ನು ಹಿಂದಕ್ಕೆ ಹೊಡೆದುಕೊಳ್ಳಬೇಕು. ಇಲ್ಲಿ ಬೈದ್ರು ಅಂದ್ರೆ ಮತ್ತೊಂದು ಕಡೆ, ಅಲ್ಲಿಯೂ ಬೈದರೆ ಇನ್ನೊಂದು ಕಡೆ, ಹಿಂಗೆ ಕಾಲ ಕಳೆಯುತಿದ್ವಿ. ದೇವರೆತ್ತುಗಳ ವಿಷಯದಲ್ಲಿ ಏನೆ ಆದರೂ ನಾನು ಬೈಸಿಕೊಳ್ಳಬೇಕು. ಊರ ಯಜಮಾನ್ರು ಯಾರೂ ಈ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ. ಎಲ್ಲಿಯಾದ್ರೂ ಎತ್ತುಗಳನ್ನು ಪಾರಂನವರು ಹಿಡಿದರೆ ಅವುಗಳನ್ನು ಬಿಡಿಸಲು ಮಾತ್ರ ಬರುತ್ತಾರೆ.
ಮೊದಲು ಪಾರಂ ಕಾಯೋರು ಇದ್ರೆಲ್ಲ ಅವರು ನನ್ನನ್ನು ಏನಪ್ಪ ಅಂತ ಮಾತಾಡಿಸುತ್ತಿರಲಿಲ್ಲ. ಸುಮ್ನೆ ಎತ್ತುಗಳನ್ನು ದೊಡ್ಡಿಗೆ ಹೋಡೀತಿದ್ರು. ನಾನು ಇಂಥದ್ರಲ್ಲಿ ಬಾರಿ ಕಷ್ಟಪಟ್ಟಿದ್ದೀನಿ. ಒಂದ್ಸಲ ಎತ್ತುಗಳನ್ನು ಹೊಡಕೊಂಡು ನಾಲ್ಕನೇ ರಪ್ಪದ (ಸರ್ಕಾರಿ ಕುರಿಸಾಕಾಣಿಕೆಗೆ ನಿರ್ಮಿಸಿದ ದೊಡ್ಡಿ) ಹತ್ತಿರಕ್ಕೆ ಹೋದೆ. ಇಲ್ಲಿಗೆ ಎರಡು ವರ್ಷದ ಹಿಂದೆ ಇದು ನಡೆದದ್ದು. ನೀರಿಗೆ ಅಂಥ ಅಲ್ಲಿಗೆ ಹೋದೆ. ಅಲ್ಲಿ ಪಾರಂ ಕಾಯುವವನಿಗೆ ನನ್ನ ಬಗ್ಗೆ ನಮ್ಮ ದೇವರೆತ್ತುಗಳ ಬಗ್ಗೆ ಏನೂ ಗೊತ್ತಿಲ್ಲ. ಇನ್ನೊಬ್ಬನು ಸಾಹೇಬ್ರಾಗಿ ಬಂದಿದ್ದ. ಅವನಿಗೆ ಭಾರೀ ಮೆಜಾರಿಟಿ ಇತ್ತು ಅಷ್ಟೇ. ಇಂಥವನಿಗೆ ಯಾರೋ ಕುಮ್ಮಕ್ಕು ಕೊಟ್ಟು ಹೇಳಿ ನನ್ನ ಹೊಡ್ಸಿದ್ರು. ಅವನೇನು ತಿಳಿದವನು ಹೊಡೆದ. ಅವನಿಗೆ ಏನು ಎಂಗೆ ಮಾಡಬೇಕೆಂದು ತಿಳಿಯದೆ ಬಂದ ನನ್ನನ್ನು ಹೊಡದೇಬಿಟ್ಟ. ಅವೊತ್ತು ನಾನು ಮುತ್ತಯ್ಯಗಳನ್ನು ಗೂಡಿಗೆ ಹೊಡಕೊಂಡು ಬಂದು ನಾಳೆ ನಾನು ಅವರ ಸಾವು ಸುದ್ದಿ ಕೇಳಬೇಕು, ಮತ್ತ ನಮ್ಮ ಎತ್ತುಗಳನ್ನು ಅದೇ ಜಾಗಕ್ಕೆ ನೀರು ಕುಡಿಯಲು ಅವರೇ ಹೊಡಕೊಂಡು ಹೋಗಬೇಕು ಅಂತ ಗೂಡಿನಲ್ಲಿ ಕೈಮುಗಿದೆ. ಅವೊತ್ತು ರಾತ್ರಿಕೇನೆ ನನ್ನ ಹೊಡೆದಿದ್ದನಲ್ಲ ಅವನಪ್ಪ ಬಚ್ಚಲಲ್ಲಿ ಮುಖ ತೊಳಕೊಳ್ಳೋಕೆ ಅಂತ ಹೋಗಿ ಬಿದ್ದು ಸತ್ತನಂತೆ. ತಿರಗ ದಿನ ಬೆಳಗ್ಗೆ ಕಾವಲಾಗೆ ತತ್ಮರಡಿ ಹತ್ತಿರಕ್ಕೆ ಎತ್ತು ವಡಕೊಂಡು ಹೋದೆ. ಕಲ್ಲನಹಳ್ಳಿ ಬೋರಯ್ಯ, ಕಾಟಮನಹಳ್ಳಿ ಓಬಯ್ಯ ಬಂದು ಮುತ್ತಯ್ಯಗಳನ್ನು ವಡಕೊಂಡು ಬಾರಪ್ಪ ರಾತ್ರೆ ಅವರಪ್ಪ ಸತ್ತೋಗಿಬಿಟ್ಟ ಅಂತ ಅದೇ ತೊಟ್ಟಿಗೆ ಹೋದ್ರು. ಆವಾಗ ಕಣ್ಣಿಗೆ ಕಾಣ್ಸಿದ್ದು ನನ್ನ ಹೊಡೆದವನು ಮತ್ತೆ ಕಣ್ಣಿಗೆ ಕಾಣಲೇ ಇಲ್ಲ. ಅವನು ಕೊನೆಗೆ ವರ್ಗ ಆಗಿ ಹೋಗಿಬಿಟ್ಟ.
ದೇಶದಲ್ಲಿ ಕಾಂಗ್ರೆಸ್ ಇರುವಾಗ ಪಾರಂನಲ್ಲಿ ಗಾರ್ಡುಗಳೆಲ್ಲ ಭಾರಿ ಜೋರು ಮಾಡುತ್ತಿದ್ದರು. ಹಿಂಗೆ ಮಾಡಿದ್ದಕ್ಕೆ ಒಂದ್ಸಲ ನನ್ನಿವಾಳದವರು ಸಾಹೇಬಗಳನ್ನು ಗಿಹೇಬಗಳನ್ನು ಎಲ್ಲ ತುಕರ ಹೊಡೆದಿದ್ದರು. ಅಂದ್ರೆ ಆಸ್ಪತ್ರೆಗೆ ಹೋಗುವಂತೆ ಹೊಡೆದಿದ್ರು, ಸೆಂಟ್ರಲ್ ಗೌರ್ಮೆಂಟ್ನವರ್ನ ಹೊಡೆದ್ರೆ ಸುಮ್ನೆ ಬಿಡ್ತಾರ? ಅದಕ್ಕಾಗಿ ನನ್ನಿವಾಳದವರನ್ನು ಟೇಶನ್ಗೆ ಹಿಡಕೊಂಡು ಹೋಗಿದ್ದರು. ನನ್ನಿವಾಳದ ಜನರೆಲ್ಲ ಮನೆ ಮನೆಗೆ ಚಂದಾ ಹಾಕಿ ಆ ಕೇಸನ್ನ ಗೆದ್ದಿದ್ದರು. ಅದಕ್ಕೆ ದುರುಗದಲ್ಲಿದ್ದ ವಕೀಲ ಬೋರಪ್ಪ ಅಂತ ಅದ್ನನಲ್ಲ ಆತ ಮುಂದೆ ನಿಂತಿದ್ದ. ನಿಂತು ಎಂಥ ದೊಡ್ಡ ಕೇಸನ್ನು ಗೆದ್ದುಬಿಟ್ಟ.
ಆ ಕಾಲದಾಗೆ ಪಾರಂನಲ್ಲಿ ಇರುವ ಗಾರ್ಡುಗಳು ತುಂಬಾ ಜೋರು. ಮೇಕೆಯವನು, ದನದವನು, ಕುರಿಯವನು ಯಾರೂ ಸಿಕ್ಕರೂ ಬಿಡುತ್ತಿರಲಿಲ್ಲ. ಅದು ಅಲ್ಲದೇ ಗಾರ್ಡುಗಳ ಜೊತೆಗೆ ಪೋಲಿಸರು ಬರುತ್ತಿದ್ದರು. ಒಂದ್ಸಲ ನಮ್ಮ ಎಂ.ಎಲ್.ಎ (ಪುರ್ನಮುತ್ತಪ್ಪ)ನ ಮುತ್ತಪ್ಪೋ-ಪಿತ್ತಪ್ಪೋ ಅಂದಿದ್ರಂತೆ, ಯಾರೆಂದ್ರೆ ದೊಡ್ಡ ಸಾಹೇಬ್ರೆ, ಅವೊತ್ತು ದೇವರೆತ್ತುಗಳನ್ನು ದೊಡ್ಡಿಗೆ ಕೂಡಿದ್ದರು. ಅವುಗಳನ್ನು ಬಿಡಿಸಲು ಬಂದಿದ್ದ, ಆವಾಗ ಇಂಥ ಮಾತು ಆಡಿದ್ದರು. ಆವಾಗ ಎಂ.ಎಲ್.ಎ ಇನ್ನೇನು ಲಾಯರ್ಗೆ ಹೇಳಿಬಿಟ್ಟ. ಲಾಯರ್ ಇನ್ನೇನು ಕೇಸ್ ಹಾಕ್ಬಿಟ್ಟ. ಅಲ್ಲಿಂದ ಒಂದೇ ಸಲ ಪೋನ್ ಮಾಡ್ಬಿಟ್ಟ. ಏನಂತ ಕೇಸ್ ಹಾಕ್ಬಿಟ್ರು ಅಂದ್ರೆ, ದೇವರೆತ್ತುಗಳು, ಕಿಲಾರಿ ಯಾರು ಬಂದಿಲ್ಲ. ದೊಡ್ಡಿಗೆ ಹೊಡಕೊಂಡೋದ ಸಾಹೇಬ್ರು ನಮ್ಮ ಕಿಲಾರಿ ಮತ್ತು ದೇವರೆತ್ತುಗಳನ್ನು ಎಲ್ಲೋ ಗೈರುಹಾಜರಿ ಮಾಡಿದ್ದಾರೆ ಅಂತ ಹೇಳಿದರು. ನಾನು ಮತ್ತು ದೇವರೆತ್ತುಗಳನ್ನು ಬಂದು ಊರು ಸೇರಿದ್ವಿ. ಆದರೂ ಆ ಸಾಹೇಬನ್ನ ಹೆದರಿಸಬೇಕು ಅಂಥ ಹಿಂಗೆ ಮಾಡಿದ್ರು. ಆ ಸಾಹೇಬು ಕೂಡ ಕೇಸು ಇಟ್ಟಿದ್ದ. ನಾವು ಹಿಂಗೆ ಕೇಸು ಕೊಟ್ಟಿದ್ದರಿಂದ ಅವರು ತಪ್ಪಾಯಿತು ಅಂತ ಕೇಸು ವಾಪಸ್ಸು ತೆಗೆದುಕೊಂಡ್ರು. ಈ ಕೇಸ್ ಭಾರಿ ಬಿಗಿಯಾಗಿತ್ತು. ಆವಾಗ್ಲು ಕೂಡ ವಕೀಲ ಬೋರಪ್ಪ ಮುಂದೆ ನಿಂತಿದ್ದ.
ಈ ವಕೀಲ ಬೋರಪ್ಪ ಗುಪ್ಪನೋರು (ಮ್ಯಾಸನಾಯಕರ ಒಂದು ಬೆಡಗು) ಪೈಕಿ – ಈತನನ್ನು ಪಂಕ್ಷನ್ (ಸಮಾರಂಭ)ಗೆ ಅಂತ ಕರ್ಸಿಕೊಂಡು ಊಟದಲ್ಲೋ ಕಾಫಿಯಲ್ಲೋ ಹಾಕಿಬಿಟ್ರು. ಆಮೇಲೆ ಸುಮ್ಸುಮ್ನೆ ಹಾಟ್ ಫೇಲ್ ಆದ ಆಂಥ ಹೇಳ್ಬಿಟ್ರು. ಆತ ಆ ಮೀಟಿಂಗ್ಗೆ ಹೋಗಿದ್ದೆ ಅಲ್ಲ. ಆತ ಒಂದ್ಸಲ ಎಲಕ್ಷನ್ಗೆ ನಿಂತಿದ್ದ ಆವಾಗ ಆತನ ಮನೆ-ಮಠ ಎಲ್ಲಾ ಮಾರಿದ್ದ ಆ ಮೇಲೆ ನಮ್ಮೂರವರೇ (ನೆಲಗೇತನಹಟ್ಟಿ) ಅವನ್ನ ಬಿಡಿಸಿಕೊಟ್ಟರು.
ಗುಪ್ಪನೋಬಜ್ಜ ಎಂಬುವನನ್ನು ನಮ್ಮೂರವರೇ ನೀಗಿದರು. ಮದ್ದು-ವಿಷ ಏನೂ ಆಕಲಿಲ್ಲ ಏನೂ ಇಲ್ಲ ಸುಮ್ನೆ ನೀಗಿದರು. ಅವನನ್ನು ಹೆಂಗೆ ನೀಗಿದರು ಅಂದ್ರೆ ಅವನಿಗೇನು ಹೊಟ್ಟೆಗೆ ಆಕ್ಲಿಲ್ಲ ಏನೂ ಇಲ್ಲ. ಒಂದ್ಸಲ್ಲ ಅಡಗಟ್ಟ ಹಬ್ಬಕ್ಕೆ ಕಂಪಳದೇವರಿಗೆ ಹೋಗಿದ್ವಿ. ಗುಪ್ಪನೋಬಜ್ಜನ ಭಾವಮೈದುನ ಒಬ್ಬನಿದ್ದ, ಅವನು ಈ ಗುಪ್ಪನೋಬಜ್ಜ ಎನ್ನುವವನೂ ಸೇರ್ಕೊಂಡು ನಲಗೇತನಹಟ್ಟಿಯವರನ್ನು ಮರ್ಯಾದೆ ತೆಗೀ ಬೇಕು ಅಂತೇಳಿ ದೇವರು ಮಾಡುವ ವಿಚಾರವೊಂದರಲ್ಲಿ ಬಂದ್ರು. ನಲಗೇತಲಹಟ್ಟಿಯ ಮರ್ಯಾದೆ ಹೋದ್ರೆ ನನ್ದು ಹೋದಂಗೆ ಅನ್ನೋದು ಗುಪ್ನೋಬಜ್ನನಿಗೆ ಗೊತ್ತೆ ಆಗಲಿಲ್ಲ. ನಮ್ಮೂರವರಿಗೆ ಯಾವುದೋ ದೇವರ ಹಕ್ಕನ್ನು ಕೊಡಲ್ಲ ಅಂಥೇ ಅಕಡೆ(?)ಯವರು ಕುಳಿತಿದ್ರು. ಅವರ ಪರವಾಗಿ ಈ ಗುಪ್ಪನೋಬಜ್ಜ ಕುಳಿತ್ತಿದ್ದ. ಇದರ ಬಗ್ಗೆ ಪಂಚಾಯಿತಿ ಆಯ್ತು. ಆಗ ಗುಪ್ಪನೋಬಜ್ಜ ನೆಲಗೇತಲಹಟ್ಟಿಯವರು ಪ್ರಮಾಳ ಮಾಡ್ಲಿ ಇದು ಯಾವೊತ್ತಿಗೂ ನಾವೇ ಮಾಡಿದ್ದು ಅಂತ ಯಾವುದೋ ಒಬ್ಬ ಕಣ್ಣು ಕಾಣದ ಅಜ್ಜನನ್ನು ಕರೆದುಕೊಂಡು ಬಂದು ಪ್ರಮಾಳ ಮಾಡಿಸಿಬಿಟ್ರು! ಅವನೂ ಮಾಡ್ಬಿಟ್ಟ.
ಆವಾಗಿನ್ನೇನು ಹಬ್ಬ ಯಾರಿಗೆ ಬೇಕು? ನಮ್ಮೂರವರೆಲ್ಲಾ ಹಣ್ಣು-ಕಾಯಿ ಏನೂ ಮಾಡ್ಸಿಲಿಲ್ಲ ಅಂಗೆ ಹೊರಟಬಿಟ್ರು. ವಾಪಸ್ಸು ಬಂದು ಜನ್ನೇನಹಳ್ಳದ ಗಡ್ಡೆ ಹತ್ತಿ ಅಲ್ಲಿ ಒಂದು ಕಲ್ಲಿನ ಹಾಕಿ; ಅಲ್ಲಿ ದೇವರ್ನ ಮಾಡಿ, ನೀನೇ ನೋಡಿಕೊಳ್ಬೇಕು ಅಂತ ಕೈಮುಗಿದು ಈಗಿರುವ ತುಪ್ಪಲಯ್ಯ (ವ್ಯಕ್ತಿಯೊಬ್ಬರ ಹೆಸರು)ಗೆ ಕಂಬ್ಳಿ ಕೊಪ್ಪ ಹಾಕಿ ಮಗೆ (ಕೋಲುಕ) ಹೊರಿಸಿ, ಗುಡ್ಡ ಸುತ್ತ, ಸತ್ತವರಿಗೆ ತಲೆ ಬುರುಡೆ ಬಡಿಯುವಾಗ ಮಾಡುವಂತೆ ಮಗೆಯನ್ನು ತೂತು ಮಾಡಿಕೊಂಡು ಮೂರು ಸುತ್ತು ತಿರುಗಿಸಿದರು. ಗುಪ್ಪನೋಬಜ್ಜ ಮತ್ತು ಅವನು ಭಾವ ಮೈದುನರ ಹೆಸರೇಳಿ ತಲೆ ಬುರುಡೆ ಬಡಿದರು. ಬಡಿದು ಅದೇ ಬಂದ್ಬಿಟ್ರು. ಅವ್ರು ವರ್ಷ ತುಂಬುವುದರೊಳಗೆ ಸತ್ತೋಗಿಬಿಟ್ರು. ಇಂಥ ಶಕ್ತಿ ನಮ್ಮ ದೇವರಿಗೆ ಇದೆ. ಈಗಲೂ ಎಲ್ಲರೂ ಕಲೆತು ಯಾರನ್ನಾದರೂ ಇಂಥವರು ಹೋಗಬೇಕು ಅಂಥ ಕೈಮುಗೆದರೆ ಈ ಪವಾಡ ನಡೆಯುತ್ತೆ. ನನ್ನ ಅನುಭವದಲ್ಲಿ ಇದೇ ತರ ಏನೂ ಆಗಿಲ್ಲ. ಆದರೂ ಬೇರೆ ತರ ಆಗಿರುವುದನ್ನು ನೋಡಿದ್ದೇನೆ.
(ಮುಂದುವರಿಯುವುದು)
Super msg sm mutthu