ಮೌನ ತಳೆದ ಹುಡುಗಿ

ರುಕ್ಮಿಣಿ ನಾಗಣ್ಣವರ ತೋರಣಗಟ್ಟಿ

ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ ಮೌನಕ್ಕೆ ಶರಣಾಗಿದ್ದ. ಮನದ ಮೈದಾನದಲಿ ಜಾನಕಿಯೆಡೆಗಿನ ವಿಚಾರಗಳು ಕಾಳಗದ ಹೋರಿಯಂತೆ ಕಾದಾಟ ನಡೆಸಿದ್ದವು. ಅರಳು ಹುರಿದಂತೆ ಮಾತಾಡುವ ಜಾನಕಿ ಕಳೆದ ಆರು ತಿಂಗಳಿನಿಂದ ಮೌನವಾಗಿದ್ದಳು. ಆ ದೀರ್ಘಮೌನ ರಮೇಶನನ್ನು ಭಾದಿಸುತ್ತಿತ್ತು.  ತಲೆ ಚಿಟ್ಟೆನ್ನುವ ಅಸಹನೆ. ಅವಳೇಕೆ ಹೀಗಾದಳು? ತನ್ನ ಮನಸ್ಸನ್ನು ತಿವಿದು ತಿವಿದು ಮತ್ತೆ ಮತ್ತೆ ಕೇಳುತ್ತಿದ್ದ. ಮೌನ ಮಾತಾಗದೇ ಎದೆಯ ನೋವು ಹೆಪ್ಪುಗಟ್ಟಿತ್ತು. ಜಾನಕಿಯಿಂದ ಅಸಡ್ಡೆಗೊಳಗಾದ ಮನಸು ಅರಚುತ್ತ ಚೀರುತ್ತ ಗಂಟಲು ಹರಿದುಕೊಳ್ಳುತ್ತ ಕತ್ತಲೆಯ ಕ್ರೂರತೆಗೆ ಬಲಿಪಶುವಾಗಿತ್ತು.

darkಜಾನಕಿ ತನಗಿನ್ನು ಸಿಗುವುದಿಲ್ಲ ಎಂಬ ಅಳುಕು ರಮೇಶನ ಬದುಕಲ್ಲಿ ಮೂಗು ತೂರಿಸತೊಡಗಿತು. ಕುಕ್ಕಿ ತಿನ್ನುವ ಒಂಟಿತನದಿಂದ ತಪ್ಪಿಸಿಕೊಳ್ಳಲು ರಜೆಗಳ ಮೊರೆ ಹೋಗಿ ಪಲಾಯನ ಗೈಯತೊಡಗಿದ. ರಜೆಗೆ ಹೋದಾಗೆಲ್ಲ ಅವ್ವನ ಬಾಯಿಯಿಂದ ಪ್ರಮಿಳೆಯ ವಿಷಯ ಬರುವುದು ಇತ್ತೀಚೆಗೆ ಹೆಚ್ಚಾಗಿತ್ತು. ಅವನಿಗೆ ಆ ಉಪದ್ರವದಿಂದ ಪಾರಾಗಬೇಕಿತ್ತು. ಮನಸಲ್ಲಿ ಬಿಡಾರ ಹೂಡಿದ ಜಾನಕಿ ನೆನಪುಗಳು ಮತ್ತೆ ಮತ್ತೆ ಮೊಳೆತು ಕನಸಾಗಸಕೆ ಹಾರುವ ಹುಚ್ಚು ಹಂಬಲ ಹತ್ತಿಸಿದ್ದವು.

ರಮೇಶನಿಗೆ ಅದೇನೆನ್ನಿಸಿತೋ ಎನೋ. ಅಡ್ಡಲಾಗಿ ಮಲಗಿದ್ದಂತವನು ಗಕ್ಕನೆ ಎದ್ದು ಕುಳಿತ. ಜಾನಕಿಯ ನೆನಪುಗಳನ್ನೆಲ್ಲ ತನ್ನ ಸುತ್ತಲೂ ಹರವಿಕೊಂಡ. ರಮೇಶ್ ಮತ್ತು ಜಾನಕಿ ಗೋಕಾಕದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದಿದವರು. ಕಾಲೇಜು ದಿನಗಳಲ್ಲೇ ಹರಿಣಿ ನಡಿಗೆಯ ಜಾನಕಿಯನ್ನು ಇಷ್ಟಪಡುತ್ತಿದ್ದ. ಪ್ರೀತಿ ಬಲಿತದ್ದು ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿರ್ವಹಣೆಗೆಂದು ಆಕೆ ಪುಣೆಗೆ ಬಂದ ನಂತರವೇ. ಫೇಸ್ಬುಕ್ ಎಂಬ ಜಾಲತಾಣದ ಮೂಲಕ ಸಂಪರ್ಕಕ್ಕೆ ಸಿಕ್ಕಿದ್ದರು. ದಿನ ಕಳೆದಂತೆ ಚಾಟಿಂಗ್ ನಿಂದ ಬೆಳೆದ ಸ್ನೇಹ ಸೆಲ್ಫೋನ್ ನಂಬರ್ಗಳನ್ನು ಎಕ್ಸಚೇಂಜ್ ಮಾಡಿಕೊಳ್ಳುವಲ್ಲಿಗೂ ತಲುಪಿತ್ತು. ಕಾಲ್ ಮತ್ತು ಮೆಸೆಜ್ಗಳು ಮತ್ತಷ್ಟು ನಿಕಟತೆಯನ್ನ ಹೆಚ್ಚಿಸಿದ್ದವು. ತಾಸುಗಟ್ಟಲೆ ಫೋನಿನಲ್ಲಿ ಹರಟುವುದು ನಿತ್ಯದ ಕರ್ಮ. ಇಂತಿರಲು, ಒಂದು ದಿನ ಯಾವುದೋ ಕಾರಣಕ್ಕೆ ಜಾನಕಿ ತನ್ನ ಕೆಲಸದ ಕುರಿತು ಸಂಸ್ಥೆಯ ಅಡ್ರೆಸ್ ಜೊತೆಗೆ ತನ್ನ ದಿನಚರಿಯ ಸಮೇತ ವಿವರಿಸಿದ್ದುದು ರಮೇಶನಿಗೆ ಥಟ್ಟನೆ ಹೊಳೆಯಿತು. ಎಂದಿನಂತೆಯೇ ಆ ದಿನದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಟ್ಟಿದ್ದರ ಪರಿಣಾಮವಾಗಿ ಆಕೆಯನ್ನು ಭೇಟಿ ಮಾಡಲೇಬೇಕೆನ್ನುವ ವಿಚಾರಕ್ಕೆ ಪುಷ್ಠಿ ಸಿಕ್ಕಂತಾಯಿತು.

ಜಾನಕಿಯ ಇಂಪಾದ ಧ್ವನಿ ಕೇಳಿ ರಿಲ್ಯಾಕ್ಸ್ ಆಗುವುದು ರಮೇಶನ ಆ ದಿನಗಳ ನಿತ್ಯದ ರೂಢಿಗಳಲ್ಲಿ ಒಂದು. ಆಕೆಯೇ ಧ್ವನಿಯೇ ಅಂಥದ್ದು. ತುಂಬ ಸೌಮ್ಯ. ಗಿಣಿಯ ಮುದ್ದು. ಪ್ರಶಾಂತ ನದಿ ಮೇಲೆ ಸೂಸುವ ತಣ್ಣನೆ ಗಾಳಿ. ಕೇಳುತ್ತ ಭಾವಪರವಶನಾಗಿ ಕುಳಿತುಬಿಡುತ್ತಿದ್ದ. ನಿತ್ಯವೂ ಹೊಸ ಹೊಸ ಕನಸು ಕಾಣುವವನಿಗೆ ಸ್ಪೂರ್ತಿ ಚಿಲುಮೆ. ಕಟ್ಟಿಕೊಂಡ ಕನಸುಗಳ ಗಮ್ಯದತ್ತ ಸಾಗಹೊರಟವನಿಗೆ ರೆಕ್ಕೆ ಪುಕ್ಕ ಕಟ್ಟಿ ಕೊಡುತ್ತಿತ್ತು.

ಜಾನಕಿಯ ಧ್ವನಿಗೆ ಕಿವಿ ತಾಕಿಸಿಯೇ ನಿದ್ದೆಗೆ ಪರದೆ ಎಳೆಯುವುದು ರಮೇಶನ ಹುಚ್ಚು ಆಸೆ.  ಪರಿಣಾಮ ಎಂಬಂತೆ ವಾಯ್ಸ್ ಕ್ಲಿಪ್ಗಳ ಸಂಖ್ಯೆ ಅರವತ್ತು ದಾಟಿತ್ತು. ತಲಾ ಒಂದು ಕ್ಲಿಪ್ ಹನ್ನೆರಡರಿಂದ ಹದಿನೈದು ನಿಮಿಷದ ಸಂಭಾಷಣೆಯಿಂದ ಕೂಡಿತ್ತು. ಅಡ್ರೆಸ್ ನಮೂದಿಸಿರುವ ಕ್ಲಿಪ್ಪನ್ನು ಹೆಕ್ಕುವ ಹೊತ್ತಿಗೆ ಗೋಡೆಯ ಮೇಲೆ ನೇಣು ಹಾಕಿಕೊಂಡ ಗಡಿಯಾರದ ಕೈಗಳು ಮಾತ್ರ ತಿರುಗುವುದರ ಮೂಲಕ ತಮ್ಮ ಜೀವಂತಿಕೆಯನ್ನು ಪ್ರತಿಪಾದಿಸುತ್ತಿದ್ದವು. ಸಣ್ಣ ಮುಳ್ಳು 2ನ್ನು ತೋರಿಸಿದರೆ ದೊಡ್ಡದು 7ನ್ನು ತೋರಿಸುತ್ತ ಜಾನಕಿಯೆಡೆಗಿನ ರಮೇಶನ ತುಡಿತಗಳನ್ನು ಧಾಕಲಿಸುತ್ತಲೇ ಇದ್ದವು.

ಬೆಳಗಿನ ಜಾವ ಗೆಳೆಯನೊಬ್ಬನ ಗೃಹಪ್ರವೇಶಕ್ಕೆ ಹೊರಟಿರುವುದಾಗಿ ಮನೆಯವರಿಗೆ ಸಣ್ಣದೊಂದು ಸುಳ್ಳು ಹೇಳಿ ಜಾನಕಿಯನ್ನು ನೋಡಲು ಸಾಂಗ್ಲಿಯತ್ತ ಪಯಣ ಬೆಳೆಸಿದ. ಆರು ಗಂಟೆಗೆ ಗೋಕಾಕನಿಂದ ಬಸ್ ಪ್ರಯಾಣ ಶುರುವಾಯಿತು. ಜಾನಕಿಯ ಗುಂಗಿನಲ್ಲಿಯೇ ಧ್ಯಾನಸ್ಥಾಗಿ ಕುಳಿತಿದ್ದವನಿಗೆ ಭಂಗ ತಂದದ್ದು ಚಿಕ್ಕೋಡಿಗೆ ಸೇರಿಕೊಳ್ಳುವ ರಸ್ತೆ. ಅದು ಕಚ್ಚಾ ರಸ್ತೆಗಿಂತಲೂ ಪಕ್ಕಾ ಕಿತ್ತೋದ ಕಚಡಾ ರಸ್ತೆ. ಥೋ, ಈ ರಸ್ತೆಗಳ ಗೋಳೇ ಇಷ್ಟು! ಮೊನ್ನೆ ಮೊನ್ನೆ ಇಲೆಕ್ಷನ್ ಟೈಮ್ನಲ್ಲಿ ರಸ್ತೆಗಳು ಟಾರ್ ಚಮತ್ಕಾರಕ್ಕೆ ಕಪ್ಪಗೆ ಮಿನುಗುತ್ತಲೇ ನುಣುಪಾಗಿ ಕಂಗೊಳಿಸುತ್ತಿದ್ದವು. ಈಗ, ಅರೆಬೆತ್ತಲಾಗಿ ಅಲ್ಲಲ್ಲಿ ತಗ್ಗುಗಳನ್ನು ಕಾಣಿಸಿಕೊಂಡು ಉಸ್ಸಪ್ಪ ಸಾಕು ಸಾಕು ಅನ್ನಿಸುತ್ತಿವೆ ಎಂದು ತನ್ನಲ್ಲೇ ಗೊಣಗಿಕೊಂಡ. ಚಿಕ್ಕೋಡಿ ತಲುಪುವುದರೊಳಗೆ ಧೂಳಿಡಿದ ಮುಖ ಒರೆಸುವಷ್ಚರಲ್ಲಿ ಜೀವ ಹೈರಾಣಾಗಿದ್ದಂತಿತ್ತು. ಬೆಳಗಾವಿ-ಬಿಜಾಪೂರ ಬಸ್ ಹಿಡಿದು ಕೇವಲ ಅರ್ಧ ಗಂಟೆಯಲ್ಲಿ ಶಿರಗುಪ್ಪಿ ತಲುಪಿದ ಮೇಲೆಯೇ ಗೆಲುವಾದ.

ಚಳಿಯಲ್ಲಿ ನಡುಗುತ್ತ ಗಡಿಬಿಡಿಯಿಂದ ಬಸ್ಸಿನಿಂದ ಇಳಿದು ಮೊಬೈಲ್ ನೋಡುತ್ತಾನೆ. ಅದೋ ಪಕ್ಕಾ ಮಿಲಿಟರಿಮ್ಯಾನ್! ಮಳೆ ಚಳಿಗಳ ಪರಿವಿಲ್ಲದೇ 8.30ನ್ನು ತೋರಿಸುತ್ತ ತನ್ನ ಕರ್ತವ್ಯದಲ್ಲಿ ನಿರತವಾಗಿತ್ತು.

ರಮೇಶ್ ಸ್ವಭಾವತಃ ತುಂಬು ಸೌಜನ್ಯದ ಹುಡುಗ. ಈ ರೀತಿ ಒಂದು ಹುಡುಗಿಯನ್ನು ಫಾಲೋ ಮಾಡುವುದು ಅವನ ವ್ಯಕ್ತಿತ್ವಕ್ಕೆ ತಕ್ಕುದಲ್ಲದ್ದು. ಅವಳ ದೃಷ್ಟಿಯಲ್ಲಿ ಚೀಪ್ ಅನ್ನಿಸಿಕೊಳ್ಳುತ್ತೇನೆ ಎನ್ನುವುದು ಅವನಿಗೆ ಮನವರಿಕೆಯಾಗಿತ್ತಾದರೂ, ಹೀಗೆ ಧಿಡೀರನೆ ಇಲ್ಲಿ ಪ್ರತ್ಯಕ್ಷವಾಗುವುದರ ಹಿಂದೆ ಕೆಲವು ಕಾರಣಗಳೂ ಇದ್ದವು.

*****

ಕೆಲಸದಲ್ಲಿನ ಒತ್ತಡಗಳ ನಡುವೆಯೂ ಮಹಾನಗರಿಯಲ್ಲಿನ ಯಾಂತ್ರಿಕ ಜೀವನಕ್ಕೆ ಬೇಸತ್ತು ನೆಮ್ಮದಿ ಅರಸುತ್ತ, ಬಾಯಿತುಂಬ ಕನ್ನಡ ಮಾತಾಡಲು ಹಸಿದ ಮಗುವಿನಂತೆ ರಮೇಶ್ ತಿಂಗಳಲ್ಲಿ ಎರಡುಬಾರಿ ಪುಣೆಯಿಂದ ಗೋಕಾಕಗೆ ಹೋಗಿ-ಬಂದು ಮಾಡುತ್ತಿದ್ದ.

soutine_051314_820pxಪುಣೆ ಲೈಫಿಗೆ ಒಗ್ಗಿಕೊಂಡು ಮೂರು ವರ್ಷಗಳಾಗಿದ್ದರೂ, ಊರಿಗೆ ಬಂದರೆ ತನ್ನ ಕೆಲವು ರೂಢಿಗಳನ್ನು ಮೂಲಭೂತ ಕರ್ತವ್ಯಗಳೇನೊ ಎನ್ನುವಷ್ಟು ಆಸ್ಥೆವಹಿಸಿ ನಿರ್ವಹಿಸುತ್ತಿದ್ದ. ಕನ್ನಡ ಚಿತ್ರರಂಗದ ಅಪ್ಪಟ ಅಭಿಮಾನಿಯಾದ ಅವನು ಪ್ರತಿ ಬಾರಿಯೂ ಒಂದೊಳ್ಳೆಯ ಕನ್ನಡ ಸಿನೆಮಾ ನೋಡುತ್ತಿದ್ದ. ಹೊಲ-ಮನೆಯ ಕೆಲಸ, ಕೊಡು-ತೆಗೆದುಕೊಳ್ಳುವ ವ್ಯವಹಾರಗಳಲ್ಲಿ ಅಪ್ಪನ ಜೊತೆಗಿರುತ್ತಿದ್ದ. ಬಂದಾಗೊಮ್ಮೆ ಮಾವನ ಮಗಳು ಪ್ರಮಿಳೆ ಮನೆಗೂ ಭೇಟಿ ಕೊಡುತ್ತಿದ್ದ.

ರಮೇಶ್ ಮತ್ತು ಪ್ರಮಿಳ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಊರಿಗೆ ಹೋದಾಗಲೆಲ್ಲ ಪ್ರಮಿಳ ಮನೆಗಎ ಭೇಟಿ ನೀಡಿ ಆಕೆಯೊಡನೆ ಹರಟುವುದು ಪರಿಪಾಠ. ಕೇವಲ ಅವಳಷ್ಟೇ ಅಲ್ಲ ಅವಳ ಅಣ್ಣ ತಮ್ಮಂದಿರು ಸಹ ತುಂಬ ಆಪ್ತರು. ಅವರೆಲ್ಲ ತನಗೆ ಸಮಾನ ಮನಸ್ಕರೆನ್ನುವ ಒಂದೇ ಒಂದು ಕಾರಣಕ್ಕೆ ಚೋಟುದ್ದ ಇದ್ದಾಗಿನಿಂದಲೂ ಅವರ ಸ್ನೇಹ ಮುಂದುವರೆದುಕೊಂಡು ಬಂದಿತ್ತು.

ರಮೇಶನ ತಾಯಿಗೆ ತವರು ಮನೆಯ ಹೆಣ್ಣನ್ನು ತನ್ನ ಸೊಸೆ ಮಾಡಿಕೊಳ್ಳುವುದಕ್ಕೂ ಅತೀವ ಬಯಕೆ ಇದ್ದುದರಿಂದಲೋ ಏನೋ ಇತ್ತೀಚೆಗೆ ಒಂದೆರಡು ಬಾರಿ ಹೀಗೆಯೇ ಮಾತು ಮಾತಿನಲಿ ರಮೇಶನ ಹೆಣ್ಣಜ್ಜ ಮದುವೆಯ ವಿಚಾರ ಎತ್ತಿದ್ದರು. ಅದನ್ನು ಕೇಳಿದಾಗಿನಿಂದಲೇ ರಮೇಶನಿಗೆ ಸಂಕಟ ಶುರುವಾಗಿದ್ದು. ತಾನು ಮನಸಾರೆ ಇಷ್ಟಪಡುವ ಹುಡುಗಿಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಆಕೆಯೊಡನೆಯೇ ಬದುಕು ಕಟ್ಟಿಕೊಳ್ಳಬೇಕೆಂದು ಕೊರೆವ ಚಳಿಯಲಿ ಎದ್ದು ಹೀಗೆ ಜಾನಕಿಗಾಗಿ ಓಡಿ ಬಂದುದಾಗಿತ್ತು.
*******
ಆ ಕಡೆಯಿಂದ ಮೀರಜ್ ಬಸ್ಸು ಬರುವುದು ಕಂಡ ರಮೇಶ್ ಒಂದು ಕ್ಷಣ ವಿಚಲಿತನಾಗುತ್ತಾನೆÀ. ಅಲ್ಲಿಯೇ ನಿಂತುಕೊಂಡರೆ ಆಕೆ ತನ್ನನ್ನು ಗುರುತಿಸಬಹುದು ಎಂದೆನಿಸಿ ಸ್ವಲ್ಪ ಮರೆಯಲ್ಲಿ ನಿಲ್ಲುತ್ತಾನೆ. ಬಸ್ಸು ಇಳಿದ ಆಕೆ ಓಡುತ್ತ ಆಫೀಸಿನೆಡೆಗೆ ಸಾಗುವ ಮತ್ತೊಂದು ಬಸ್ಸು ಹತ್ತುವದನ್ನು ಗಮನಿಸಿ ಆಕೆಯ ಹಿಂದೆಯೇ ಧಡಬಡಾಯಿಸಿದ.

ಇಲ್ಲಿ, ತನ್ನನ್ನು ಹೀಗೆ ಕಂಡರೆ ಆಕೆಯ ರೆಸ್ಪಾನ್ಸ್ ಹೇಗೆಲ್ಲ ಬರಬಹುದು? ಜಾನಕಿಯೊಂದಿಗೆ ಏನೆಲ್ಲ ಮಾತಾಡಬೇಕು? ಎಂಬಿತ್ಯಾದಿಗಳನ್ನು ಊಹಿಸಿಕೊಳ್ಳುತ್ತ, ಅವಳನ್ನು ಸಮಾಧಾನಿಸುವ ತಂತ್ರಗಳನ್ನು ಹುಡುಕುವಲ್ಲಿ ಮಗ್ನನಾಗುತ್ತಾನೆ. ಮಿರಜ್ ತಲುಪಿದ್ದು ಗಮನಕ್ಕೆ ಬಂದದ್ದು, ‘ಭಾಯಿ ಸಹಾಬ್, ಉತರಿಯೇ. ಯಹೀ ಲಾಸ್ಟ್ ಸ್ಟಾಪ್ ಹೈ’ ಎನ್ನುವ ಕಂಡಕ್ಟರನ ಗಡಸು ಧ್ವನಿ ಕೇಳಿಯೆ. ಬಸ್ ಇಳಿದ ಜಾನಕಿ ತನ್ನ ಆಫೀಸಿರುವ ದಿಕ್ಕಿನೆಡೆಗೆ ದೊಡ್ಡದಾಗಿ ಹೆಜ್ಜೆ ಹಾಕುತ್ತ ನಡೆಯುದನ್ನು ಕಂಡು, ಕೂಡಲೇ ಆಕೆಯ ಫೋನಿಗೆ ಕರೆ ಮಾಡಿದ. ಕಾಲ್ ಬರುವುದನ್ನು ನೋಟಿಸ್ ಮಾಡಿದರು ಆಕೆ ಫೋನ್ ತೆಗೆಯದಿರುವುದು ರಮೇಶನಲ್ಲಿ ದಿಗಿಲು ಹುಟ್ಟಿಸುತ್ತದೆ.

ಜಾನಕಿ.. ಜಾನಕಿ.. ಎಂದು ಕೂಗುತ್ತ ಆಕೆಯ ಹಿಂದೆಯೇ ಅವಸರದ ಹೆಜ್ಡೆಗಳನ್ನು ಇರಿಸತೊಡಗಿದ. ತಾನು ಜಾನಕಿ ಅಲ್ಲವೇ ಅಲ್ಲ ಎನ್ನುವ ರೀತಿಯಲ್ಲಿ ಜಾನಕಿ ಹೆಜ್ಜೆ ಹಾಕುತ್ತಿದ್ದಳು. “ನೀನು ಜಾನಕಿ ಅಂತ ನನಗೆ ಗೊತ್ತು, ನಿಲ್ಲು ಜಾನಕಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ”. ಎಂದಾಗ,  ಜಾನಕಿ ಒಂದು ಕ್ಷಣಕ್ಕೆ ನಿಂತು ನಂತರ ಹೊರಳಿ ನೋಡಿದಳು. ಆಕೆ ಕೆಂಡಾಮಂಡಲವಾಗಿದ್ದಳು. ದಯವಿಟ್ಟು ಬೈಬೇಡ ಜಾನಕಿ. ನಿನಗೆ ಯಾವೊಂದು ವಿಷಯವನ್ನು ತಿಳಿಸದೆ ಹೀಗೆ ನಿನ್ನನ್ನು ಫಾಲೋ ಮಾಡುತ್ತ ಹೊರಟುಬಂದೆ ಎಂದು ಒಂದೇ ಉಸಿರಿನಲ್ಲಿ ಉಸುರತೊಡಗಿದ. ಯಾವೋದನ್ನು ಕಿವಿಗೆ ಹಾಕಿಕೊಳ್ಳದ ಜಾನಕಿ, “ರಮೇಶ್, ದಯವಿಟ್ಟು ನನ್ನ ಫಾಲೋ ಮಾಡಬೇಡಿ. ನಮ್ ರಿಲೇಟಿವ್ಸ್ ಯಾರಾದ್ರೂ ನೋಡಿದ್ರೆ ಇಬ್ಬರೂ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೇವೆ. ಮೊದಲು ಇಲ್ಲಿಂದ ಹೊರಟುಬಿಡಿ” ಎನ್ನುತ್ತಾಳೆ.
ಜಾನಕಿಯ ಮುಖವನ್ನೇ ನೋಡುತ್ತಿದ್ದ ರಮೇಶ್ ಒಂದು ಕ್ಷಣಕ್ಕೆ ತಣ್ಣಗಾಗುತ್ತ ಎವೆ ಇಕ್ಕದೇ ಆಕೆಯನ್ನು ನೋಡುತ್ತಲೇ ಇದ್ದ. ಜಾನಕಿ ಮಾತ್ರ ತನಗೂ ಅವನಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಹೆಜ್ಜೆ ಕೀಳುತ್ತಾಳೆ. ರಮೇಶನ ಕನಸಿನ ಅರಮನೆ ಒಡೆದು ಹೋಗಿತ್ತು. ಗಂಟಲು ಕಟ್ಟಿಬಂದು ಬಲಹೀನನಾಗಿ ನಿಂತಲ್ಲಿಯೇ ಕುಸಿದು ಬೀಳುತ್ತಾನೆ.

ಗೋಕಾಕನಿಂದ ನೂರಾರು ಮೈಲಿ ಪ್ರಯಾಣಿಸಿ ಸಾಂಗ್ಲಿವರೆಗೆ ಬಂದಿದ್ದೇ ಜಾನಕಿಗಾಗಿ. ದೂರದಿಂದ ಬಂದವನನ್ನು ಕಂಡು ಪ್ರೀತಿಯಿಂದ ಎರಡು ಮಾತೂ ಆಡದೆ ಖಾರವಾಗಿ ರೆಸ್ಪಾನ್ಸ್ ಮಾಡಿದಳಲ್ಲ! ರಮೇಶನಿಗೆ ಅಚ್ಚರಿಯ ಜೊತೆಜೊತೆಗೆ ತನ್ನ ಜೊತೆ ಫೋನಲ್ಲಿ ತಾಸುಗಟ್ಟಲೆ ಹರಟುತ್ತಿದ್ದ ಹುಡುಗಿ ಇವಳೇನಾ ಎನ್ನುವ ಗುಮಾನಿಯೂ ಹುಟ್ಟಿತು. “ರಮೇಶ್, ದಯವಿಟ್ಟು ಇಲ್ಲಿಂದ ಹೊರಟುಬಿಡಿ” ಎಂದು ಜಾನಕಿ ಹೇಳಿದಾಗ ಜಾನಕಿ ಮೇಲಿನ ಪ್ರೀತಿಗೋ, ಆಕೆಯ ಬಗ್ಗೆ ಬೇರೆಯವರು ಏನೆಂದುಕೊಂಡಾರು ಎಂಬ ಕನಿಕರಕ್ಕೋ ಅಥವಾ ತನ್ನದೇ ಮೂರ್ಖತನಕ್ಕೋ ಏನೋ ಆಕೆಯನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ಹೋಗದೇ ಅಲ್ಲಿಂದ ಸುಮ್ಮನೇ ನಡೆದುಬಿಡುತ್ತಾನೆ.
******

ರಮೇಶನ ಅಜ್ಜಿ ಅದಷ್ಟೇ ಊಟ ಮಾಡಿ ಕಟ್ಟೆಗೆ ಕೂತು ಓರಗೆಯ ಅಜ್ಡಿಯರೊಡನೆ ಜೋರಾಗಿ ಮಾತಿಗೆ ಇಳಿದಿದ್ದಳು. “ಪಾಟೀಲ ಕಿಟ್ಟಪ್ಪ ಗೌಡ್ರು ಮಗಳನ್ನ ತೋರ್ಸಾಕ ಸುರು ಮಾಡ್ಯಾರ ಕಾಣ್ತದ. ಹ್ವಾದ್ ಐತಾರ್ ಜಾನಕವ್ವ ಊರಿಗಿ ಬಂದ ಹ್ವಾದ್ರು”. ಎನ್ನುವ ಅಜ್ಜಿ ಮಾತು ರಮೇಶನ ಕಿವಿಗಳನ್ನು ನೆಟ್ಟಗಾಗಿಸಿದವು.

ಜಾನಕಿ ತಂದೆ ಕೃಷ್ಣೇಗೌಡರು ಮೂಲತಃ ಗೋಕಾಕನವರೇ. ಕೃಷ್ಣೇಗೌಡರ ಮಡದಿ ವೆಂಕಟಸುಬ್ಬಮ್ಮ ತನ್ನ ತಂದೆ ತಾಯಿಗೆ ಏಕೈಕ ಸಂತಾನ. ಹೊಲ-ಮನೆ, ದನ-ಕರ, ಆಳು-ಕಾಳು ಎಲ್ಲ ಉಸ್ತುವಾರಿ ನೋಡಿಕೊಳ್ಳುವ ಕಾರಣಕ್ಕೆ ಕೃಷ್ಣೇಗೌಡರು ಇರುವ ಇಬ್ಬರು ಅಣ್ಣಂದಿರು ಮಲಗೌಡ ಹಾಗು ರುದ್ರಗೌಡರಿಗೆ ತಮ್ಮ ಪಾಲಿಗೆ ದಕ್ಕುವ ಆಸ್ತಿಯನ್ನು ಅಣ್ಣಂದಿರಿಗೆ ಉಣ್ಣಲು ಬಿಟ್ಟು ಶಿರಗುಪ್ಪಿಯಲ್ಲಿ ಉಳಿದುಕೊಂಡಿದ್ದರು. ಗೌಡಕಿತನದ ಗತ್ತು ಇರುವುದರಿಂದಲೇ ಮಲಗೌಡ ಮತ್ತು ರುದ್ರಗೌಡರೇ ಊರಿನ ಎಲ್ಲ ಕಾರೋಬಾರುಗಳನ್ನು ನೋಡಿಕೊಳ್ಳುತ್ತಿದ್ದರು. ತಲೆಮಾರುಗಳಿಂದ ಪಾಟೀಲರ ಮನೆತನಕ್ಕೆ ಒಂದು  ಘನತೆಯಿತ್ತು.

ಈ ಹೊತ್ತು ಅಜ್ಜಿಯರೆಲ್ಲ ಜಾನಕಿ ಅಪ್ಪ ಕೃಷ್ಣೇಗೌಡರ ಬಗ್ಗೆ ಮಾತನಾಡುತ್ತಿರುವುದು ಏಕಿರಬಹುದೆಂಬ ಹುಕಿಯಿಂದ ತನ್ನ ಕಿವಿಗಳನ್ನು ಮತ್ತಷ್ಟೂ ಚಾಚಿದ.                                                                                                                                                                                          “ಕಿಟ್ಟಪ್ಪ ಗೌಡ್ರೀಗಿ ಇದ್ದುದ್ದುವ ಯಾಡ ಹೆಣ್ಮಕ್ಕಳು. ದ್ವಾಡ್ದ ಹುಡುಗಿ ಸೀತವ್ವನವ್ರು ಶಾರ ಆಪೀಸ್ನ್ಯಾಗ ಕೆಲಸ ಮಾಡಕೋಂತ ಅಲ್ಲೇ ತಮ್ಮ ಕೂಡ ಕೆಲಸ ಮಾಡ್ತಿದ್ ಹುಡುಗನ ಪಸಂದ್ ಮಾಡಿದ್ರಂತ. ಮದ್ವಿ ಅಂತ ಏನರ ಆದ್ರ ತಾ ಪಸಂದ ಮಾಡಿದ ಹುಡುಗನ ಕೂಡ ಆಗುದು ಅಂತ ಹಠ ಮಾಡಿದ್ರಂತ. ಮನ್ಯಾಗ ಒಪ್ಪಲ್ಲಿಲ್ಲ ಆಗಾನ ಮನಿಯವರಿಗೂ ಹೇಳದ, ಆ ಹುಡುಗನ ಜತಿಲಿ ರಿಜಿಸ್ಟ್ರ ಆಪೀಸ್ನ್ಯಾಗ ಹಾರಾ ಬದ್ಲಿ ಮಾಡ್ಕೊಂಡ್ ಮನಿ ಬಿಟ್ಟ್ ಹ್ವಾದ್ರಂತ. ಎಂದು ಮತ್ತೊಂದು ಅಜ್ಜಿ ಹೇಳುವಾಗ ರಮೇಶನ ಕಿವಿಗಳು ಮತ್ತಷ್ಟು ಚುರುಕುಗೊಂಡಿದ್ದವು.

ಜಾತಿ, ಕುಲ, ಗೋತ್ರ ಗೊತ್ತಿಲ್ಲದ ಹುಡುಗನ ಜತಿ ಮದ್ವಿ ಆಗ್ಯಿ ಮನಿತನದ ಮರಿಯಾದಿ ಮಣ್ಣ ಪಾಲ ಮಾಡಿದ್ಳಲ್ಲ ಅಂತ  ಕಿಟ್ಟಪ್ಪಗೌಡ್ರು ಸೀತವ್ವನವರ ಮ್ಯಾಗ ಕೆಂಡದಂಗ ಸಿಟ್ ಮಾಡ್ಕೊಂಡಿದ್ರು. ಜಾನಕವ್ವನವರೂ ಎಲ್ಲಿ ಸೀತವ್ವನವರ ಹೆಜ್ಜಿ ತುಳದ ಗಿಳದಾರು ಅನ್ನು ಹೆದರಿಕಿ ಕಿಟ್ಟಪ್ಪ ಗೌಡ್ರಿಗಿ. ಪುಣಾದಾಗ ಕೆಲಸ ಮಾಡು ಕೂಸಿನ ಬಿಡಿಸಿ ಶಿರಗುಪ್ಪಿ ಮನಿಗಿ ಕರ್ಸ್ಕೊಂಡ್ರು. ಸಾಂಗ್ಲಿಗಿ ಜಾಬ್ ಮಾಡಿಸ್ಯಾರಂತ. ಜಾನಕವ್ವನವರು ಶಿರಗುಪ್ಪಿಯಿಂದ ಹೋಗಿ ಬಂದು ಮಾಡ್ತಾರಂತ ಎಂದು ಅಜ್ಜಿ ಹೇಳುವಾಗಲೇ ಆರು ತಿಂಗಳುಗಳಿಂದ ಮೌನವಾಗಿದ್ದ ಜಾನಕಿ ನಿಧಾನವಾಗಿ ರಮೇಶನಿಗೆ ಅರ್ಥವಾಗತೊಡಗಿದಳು.  ಬೆಳಿಗ್ಗಿನ ಆಕೆಯ ಬಿರುನುಡಿಯ ಹಿಂದಿನ ಮೃದುತನಕ್ಕೆ ರಮೇಶ್ ಮತ್ತೇ ಕಂಪಿಸಿದ. ಕುಟುಂಬ ಪ್ರೀತಿಯಲ್ಲಿ ಜಾನಕಿ ಕಟ್ಟುಬಿದ್ದಿದ್ದಳು. ಆಕೆಯ ಅಸಹಾಯಕತೆಗೆ ರಮೇಶನ ಕಣ್ಣು ತುಂಬಿ ಬಂತು. ಎದೆಯೊಳಗೆ ಅವಳ ಪ್ರೀತಿಯನ್ನ ಮತ್ತಷ್ಟು ಹಬ್ಬಿಸಿಕೊಂಡು ನಿದಿರೆಗೆ ಜಾರಿದ.

ಝುನುಗುಡುವ ಚಳಿ ರಾತ್ರಿಯಲ್ಲಿ ಜಾನಕಿಯ ನೆನಪಿನ ಕಂಬಿಯೊಳಗೆ ಬಂಧಿಯಾಗುವ ವಿಸ್ಮಯದ ಕನಸು! ಅದೆಷ್ಟು ಸುಂದರ! ಕುತೂಹಲಕ್ಕೆ ಕಣ್ಣು ತೆರೆದು ಸುತ್ತಲೂ ನೋಡಿದ. ಹುಡುಕಾಡಿದ. ಹಪಹಪಿಸಿದ. ಕಣ್ಣು ಹಾಯಿಸಿದಷ್ಟೂ ಬರೀ ಕತ್ತಲೆಯಿತ್ತು.

Leave a Reply

Your email address will not be published.