ಮೋದಿಯ ಮೂರು ವರ್ಷದ ಆಡಳಿತದ ನಂತರ ಅಂಬೇಡ್ಕರ್ ಪುನರ್‍ಮನನ

ದೀಪಂಕರ್ ಭಟ್ಟಾಚಾರ್ಯ: ಅನು : ನಾ ದಿವಾಕರ

ಭಾರತದ ಮಹಾನ್ ನಾಯಕರೆಲ್ಲರನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತವಾಗಿರುವ ಬಿಜೆಪಿ ಈಗ ತನ್ನ ಹಿಂದುತ್ವ ರಾಜಕಾರಣಕ್ಕಾಗಿ ಅಂಬೇಡ್ಕರ್ ಅವರನ್ನೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಜಾತಿ ತಾರತಮ್ಯಗಳಿಂದ ಹೊರತಾದ ಒಂದು ಸುಭದ್ರ ದೇಶವನ್ನು ನಿರ್ಮಿಸುವುದು ಅಂಬೇಡ್ಕರರ ಕನಸಾಗಿತ್ತು. ಇದೇ ಧ್ಯೇಯವನ್ನು ಬಿಜೆಪಿ ಹಿಂದೂಗಳನ್ನು ಒಂದಾಗಿಸುವ ಮೂಲಕ ಸಾಧಿಸಲು ಯತ್ನಿಸುತ್ತಿದೆ. ಅಂಬೇಡ್ಕರ್ ದಲಿತರ ಸಬಲೀಕರಣಕ್ಕಾಗಿ ಶ್ರಮಿಸಿದ್ದರು. ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಲು ರಾಮನಾಥ್ ಕೋವಿಂದ ಎಂಬ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದೆ. ಅಂಬೇಡ್ಕರ್ ಆಧುನಿಕ ಭಾರತದ ಸಂವಿಧಾನ ರಚನೆಯಲ್ಲಿ ಮುಂಚೂಣಿಯಲ್ಲಿದ್ದವರು. ಆದರೆ ಬಿಜೆಪಿ ಅಂಬೇಡ್ಕರ್ ಅವರನ್ನು ಆಧುನಿಕ ಮನು ಎಂದೇ ಪರಿಗಣಿಸುತ್ತದೆ. ಅಂಬೇಡ್ಕರ್ ಅವರ ಕಟ್ಟಕಡೆಯ ಪ್ರತಿರೋಧ ವ್ಯಕ್ತವಾದದ್ದು ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ. ಆದರೆ ಸಂಘಪರಿವಾರ ಇದನ್ನು ತನ್ನ ಮರುಮತಾಂತರದ ಆಂದೋಲನದಲ್ಲಿ ಧಾರ್ಮಿಕ ನೆಲೆಯಲ್ಲಿ ಬಳಸಿಕೊಳ್ಳುತ್ತಿದೆ. ಸಂಘಪರಿವಾರದ ದೃಷ್ಟಿಯಲ್ಲಿ ಬೌದ್ಧ ಧರ್ಮ ಹಿಂದೂ ಧರ್ಮದ ವಿಸ್ತøತ ರೂಪವಷ್ಟೇ ಅಗಿದೆ. ಹಾಗಾಗಿ ಘರ್ ವಾಪಸಿ ಅಂದೋಲನವನ್ನು ಹಮ್ಮಿಕೊಂಡಿರುವ ಸಂಘಿಗಳು ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುತ್ತಿವೆ.

ಆದರೆ ಸಂಘಪರಿವಾರ ಮತ್ತು ಬಿಜೆಪಿಯ ರಾಜಕೀಯ ಚಿಂತನೆಯನ್ನು ಕುರಿತಂತೆ ಅತಿ ವಿಶ್ವಾಸಾರ್ಹವಾದ ಮತ್ತು ಬಲವಾದ ವಿಮರ್ಶೆಯನ್ನು ಅಂಬೇಡ್ಕರ್ ಅವರಿಂದಲೇ ಕಾಣಬಹುದು. ಇಂದು ನಾವು ಎದುರಿಸುತ್ತಿರುವ ದುರಂತಮಯ ಸನ್ನಿವೇಶದ ಬಗ್ಗೆ ಅಂಬೇಡ್ಕರ್ ತಮ್ಮ ಬರಹಗಳಲ್ಲಿ ಹಲವಾರು ಬಾರಿ ಎಚ್ಚರಿಕೆ ನೀಡಿದ್ದಾರೆ. ದುರಾದೃಷ್ಟವಶಾತ್ ಭಾರತದ ಜಾತಿ ವ್ಯವಸ್ಥೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕುರಿತು ಸಾಕಷ್ಟು ಒಳನೋಟ ನೀಡುವ ಅಂಬೇಡ್ಕರ್ ಅವರ ವ್ಯಾಖ್ಯಾನಗಳನ್ನು ಮತ್ತು ಸ್ವತಂತ್ರ ಭಾರತದ ಪವಿತ್ರ ಗ್ರಂಥ ಎನಿಸಿರುವ ಸಂವಿಧಾನದಲ್ಲಿ ಅಡಕವಾಗಿರುವ ವೈರುಧ್ಯಗಳು ಮತ್ತು ಆತಂಕಗಳನ್ನು ಕುರಿತು ಅಂಬೇಡ್ಕರ್ ಮಾಡಿರುವ ವಿಮರ್ಶಾತ್ಮಕ ವ್ಯಾಖ್ಯಾನಗಳನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದ್ದು ಅಂಬೇಡ್ಕರ್ ಅವರನ್ನು ಒಬ್ಬ ದಲಿತ ನಾಯಕನಾಗಿ, ಐಕಾನ್ ಆಗಿ ಪರಿಗಣಿಸಲಾಗುತ್ತಿದೆ. ಅಥವಾ ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಒಬ್ಬ ನ್ಯಾಯವಾದಿಯಾಗಿ ಕಾಣಲಾಗುತ್ತಿದೆ. ಅಂಬೇಡ್ಕರ್ ಅವರ ಸಿದ್ಧಾಂತವನ್ನು ನಿರ್ಲಕ್ಷಿಸುತ್ತಿರುವುದು, ಅವರ ತೀವ್ರವಾದಿ ಚಿಂತನೆಗಳನ್ನು ಕಡೆಗಣಿಸಿ ಕೇವಲ ಅಸ್ಮಿತೆಯ ರಾಜಕಾರಣದ ಐಕಾನ್ ಆಗಿ ಬಳಸಿಕೊಳ್ಳುತ್ತಿರುವುದು ಅಂಬೇಡ್ಕರ್ ಅವರನ್ನು ಸುಲಭವಾಗಿ ಸಂಘಪರಿವಾರದ ಬಾಹುಗಳಲ್ಲಿ ಸಿಲುಕಿಸಲು ನೆರವಾಗಿದೆ. ಹಾಗಾಗಿ ಪ್ರಜಾತಂತ್ರ ರಕ್ಷಣೆಯನ್ನು ಬಯಸುವ ಪ್ರತಿಯೊಬ್ಬರೂ ಸಹ ಅಂಬೇಡ್ಕರ್ ಅವರ ಜಾತಿ, ದೇಶ, ಸಂವಿಧಾನ ಮತ್ತು ಪ್ರಜಾತಂತ್ರವನ್ನು ಕುರಿತ ದಾರ್ಶನಿಕ ಚಿಂತನೆಗಳು ಮತ್ತು ತೀವ್ರವಾದಿ ನಿಲುವುಗಳನ್ನು ರಕ್ಷಿಸುವಲ್ಲಿ ನೆರವಾಗಬೇಕಿದೆ. ಆಡಳಿತಾರೂಢ ಪಕ್ಷದ ಸರ್ವಾಧಿಕಾರಿ ಧೋರಣೆಗೆ ಸವಾಲೆಸೆಯಬೇಕಿದೆ.
ಭಾರತದ ಆಳುವ ವರ್ಗಗಳ ಪೈಕಿ ಪ್ರಧಾನ ಪಕ್ಷವಾಗಿ ಬಿಜೆಪಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ಮತ್ತು ಹಿಂದುತ್ವ ಶಕ್ತಿಗಳ ಆಕ್ರಮಣಕಾರಿ ಧೋರಣೆ ತೀವ್ರವಾಗುತ್ತಿರುವ ಸನ್ನಿವೇಶದಲ್ಲಿ ಸಮಾಜದಲ್ಲಿ ಗಂಭೀರ ಸ್ವರೂಪದ ಪಲ್ಲಟಗಳು ಸಂಭವಿಸುತ್ತಿವೆ. ಮುಸ್ಲಿಂ ಸಮುದಾಯದೊಂದಿಗೇ ದಲಿತರು ಸಹ ಹಿಂದುತ್ವ ದಾಳಿಗೆ ತುತ್ತಾಗುತ್ತಿದ್ದಾರೆ. ವಿಡಂಬನೆ ಎಂದರೆ ಇದೇ ವೇಳೆ ಬಿಜೆಪಿ ದಲಿತರನ್ನು ಸೆಳೆಯುತ್ತಲೇ ಅವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿದೆ. ಒಂದೆಡೆ ದಲಿತರ ದಮನ ನಡೆಯುತ್ತಿರುವಂತೆಯೇ ದಲಿತ ಅಸ್ಮಿತೆಯನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ದಲಿತರನ್ನು ಹಿಂದುತ್ವ ಕಾರ್ಯಸೂಚಿಯ ಕಾಲಾಳುಗಳಂತೆ ಬಳಸುತ್ತಿರುವುದು ದೇಶದ ದಲಿತ ರಾಜಕಾರಣದ ಮುಂದಿರುವ ಮಹತ್ತರವಾದ ಸವಾಲಾಗಿದೆ.

ವಸಾಹತೋತ್ತರ ಭಾರತದಲ್ಲಿ ಮುಖ್ಯವಾಹಿನಿಯ ದಲಿತ ರಾಜಕಾರಣಕ್ಕೆ ಮೀಸಲಾತಿಯೇ ಮುಖ್ಯ ತಳಹದಿಯಾಗಿದ್ದು ಪ್ರಸ್ತುತ ಸಂದರ್ಭದ ತುರ್ತು ಅಗತ್ಯತೆಗಳಿಗೆ ಸ್ಪಂದಿಸಲು ತೊಡಕಾಗುತ್ತಿದೆ. ಮೀಸಲಾತಿ ಸೌಲಭ್ಯದಿಂದ ದಲಿತರಲ್ಲಿನ ಒಂದು ಸಣ್ಣ ವರ್ಗ ಮಾತ್ರವೇ ಅನುಕೂಲತೆಗಳನ್ನು ಪಡೆದಿದ್ದು ಅಪಾರ ಸಂಖ್ಯೆಯ ಇತರ ಹಿಂದುಳಿದ ಜಾತಿಗಳು ಜಮೀನ್ದಾರಿ ನಿಷೇಧ ನೀತಿಯಿಂದ ಮತ್ತು ಹಸಿರು ಕ್ರಾಂತಿ ಪ್ರೇರಿತ ಕೃಷಿ ಉತ್ಪಾದನೆಯಿಂದ ಲಾಭ ಪಡೆದಿವೆ. ಜಾತಿ ಮತ್ತು ವರ್ಗ ಎರಡೂ ನೆಲೆಗಳಲ್ಲಿ ಸ್ವಾತಂತ್ರ್ಯ ಗಳಿಸಿದ ಆರಂಭದ ವರ್ಷಗಳಲ್ಲಿ ಅಧಿಕಾರ ರಾಜಕಾರಣದ ಪ್ರಾಬಲ್ಯ ಸಾಕಷ್ಟು ಬದಲಾವಣೆ ಕಂಡಿತ್ತು. ಒಂದೆಡೆ ಮಧ್ಯವರ್ತಿ ಜಾತಿಗಳಿಗೆ ಸೇರಿದ ಶ್ರೀಮಂತ ರೈತ ವರ್ಗಗಳು ಮೇಲ್ಜಾತಿಗೆ ಸೇರಿದ ಊಳಿಗಮಾನ್ಯ ದೊರೆಗಳೊಡನೆ ಬೆರೆತು ಅಧಿಕಾರ ರಾಜಕಾರಣದ ಮೇಲೆ ತಮ್ಮ ಅಧಿಪತ್ಯ ಸಾಧಿಸಿದ್ದವು. ಮತ್ತೊಂದೆಡೆ ಪ್ರವರ್ಧಮಾನಕ್ಕೆ ಬರುತ್ತಿದ್ದ ವ್ಯಾಪಾರಿಗಳು ಮತ್ತು ಬಂಡವಾಳಿಗರು ಸ್ಥಳೀಯ ಬಂಡವಾಳ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದ್ದರು. ಒಬಿಸಿ ಮೀಸಲಾತಿಗಾಗಿ ಮಂಡಲ್ ವರದಿ ಜಾರಿಯಾಗುವ ವೇಳೆಗೆ ಶಕ್ತಿಯುತ ಒಬಿಸಿ ವರ್ಗಗಳು ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಧಾನ ಸಾಮಾಜಿಕ ಶಕ್ತಿಯಾಗಿ ಮುಂಚೂಣಿಗೆ ಬಂದಿದ್ದರು. ಮಂಡಲ್ ಆಯೋಗದ ಆಗಮನದೊಂದಿಗೆ ಈ ಅಧಿಕಾರ ರಾಜಕಾರಣ ವಿಭಿನ್ನ ಸ್ತರಗಳಲ್ಲಿ ವ್ಯಾಪಿಸಿತ್ತು. ಈ ಅಧಿಕಾರ ಕೇಂದ್ರಗಳನ್ನು ವಿಭಿನ್ನ ಸ್ತರಗಳಲ್ಲಿ ಕ್ರೋಢೀಕರಿಸುವುದಕ್ಕೆ ಮಂಡಲ್ ಆಯೋಗದ ವರದಿ ಉಪಯುಕ್ತವಾಗಿತ್ತು. ಪ್ರಾಂತೀಯ ಸರ್ಕಾರಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಈ ವಿದ್ಯಮಾನವನ್ನು ಗಮನಿಸಬಹುದು.

ಸಂಘಪರಿವಾರದ ಪ್ರೋತ್ಸಾಹ, ಪ್ರೇರಣೆ ಮತ್ತು ಪ್ರಚೋದನೆಯಿಂದ ಮುಂದುವರೆದ ಜಾತಿಗಳ ತೋರುತ್ತಿದ್ದ ಆಕ್ರಮಣಕಾರಿ ಧೋರಣೆಯ ವಿರುದ್ಧದ ಹೋರಾಟದಲ್ಲಿ ದಲಿತರು ಒಬಿಸಿ ಶಕ್ತಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದುದನ್ನು ಆರಂಭದ ದಿನಗಳಲ್ಲಿ ಕಾಣಬಹುದಿತ್ತು. ಆದರೆ ಕೆಲವೇ ವರ್ಷಗಳಲ್ಲಿ ದಲಿತರ ಆಶಯಗಳು ಮತ್ತು ಹಕ್ಕುಗಳು ಒಬಿಸಿ ಅಧಿಕಾರ ಕೇಂದ್ರಗಳಿಗೆ ಅಪಥ್ಯವಾಗತೊಡಗಿತ್ತು. ಉತ್ತರಪ್ರದೇಶದಲ್ಲಿ ಮಾಯಾವತಿ, ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದಿಂದ ದೂರವಾಗಬೇಕಾಯಿತು. ಬಿಹಾರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ತಮ್ಮದೇ ಆದ ಅಸ್ತಿತ್ವವನ್ನು ಕಲ್ಪಿಸಿಕೊಂಡು ಲಲ್ಲೂ ಪ್ರಸಾದ್ ಛಾಯೆಯಿಂದ ಹೊರಬರಬೇಕಾಯಿತು. ಒಬಿಸಿ ಅಧಿಕಾರದ ಅಧಿಪತ್ಯವನ್ನು ಎದುರಿಸುವ ಪ್ರಕ್ರಿಯೆಯಲ್ಲಿ ಮುಖ್ಯವಾಹಿನಿಯ ದಲಿತ ನಾಯಕರು ಬಿಜೆಪಿ ಕಡೆಗೆ ಆಕರ್ಷಿತರಾದರು. ಆ ವೇಳೆಗಾಗಲೇ ಮಂಡಲ್ ಮುಖವಾಡವನ್ನು ಧರಿಸಿ ತನ್ನ ಬ್ರಾಹ್ಮಣ್ಯದ ಸಿದ್ಧಾಂತವನ್ನು ಹಿನ್ನೆಲೆಗೆ ತಳ್ಳಲು ಯತ್ನಿಸುತ್ತಿದ್ದ ಬಿಜೆಪಿ ಸಮ್ಮಿಶ್ರ ಸರ್ಕಾರದ ನೆಪದಲ್ಲಿ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡಲಾರಂಭಿಸಿತ್ತು. ಗುಜರಾತ್ ಹತ್ಯಾಕಾಂಡದ ನಂತರ ಮಾಯಾವತಿ ಮೋದಿ ಪರ ಪ್ರಚಾರ ಮಾಡಲು ಗುಜರಾತ್‍ಗೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅನೇಕ ದಲಿತ ನಾಯಕರು ಬಿಜೆಪಿಗೆ ಸೇರ್ಪಡೆಯಾಗದಿದ್ದರೂ ಎನ್‍ಡಿಎ ಮೈತ್ರಿಕೂಟಕ್ಕೆ ಸೇರುತ್ತಿದ್ದಂತೆಯೇ ಉತ್ತರಪ್ರದೇಶದಲ್ಲಿ ಮಾಯಾವತಿ ಬಿಜೆಪಿಯೊಡನೆ ಸರ್ಕಾರ ರಚಿಸಿದ್ದರು. ಈ ಪ್ರವೃತ್ತಿ 2014ರ ಚುನಾವಣೆಗಳಲ್ಲೂ ವ್ಯಕ್ತವಾಗಿತ್ತು. ನಂತರದಲ್ಲಿ ಉದಿತ್ ರಾಜ್ ಬಿಜೆಪಿ ಸೇರುತ್ತಿದ್ದಂತೆ ರಾಮ್ ವಿಲಾಸ್ ಪಾಸ್ವಾನ್ ಎನ್‍ಡಿಎ ಮೈತ್ರಿಕೂಟ ಸೇರಿದ್ದರು. ಬಿಹಾರದಲ್ಲಿ ನೀತಿಶ್ ಕುಮಾರ್ ವಿರುದ್ಧ ಬಂಡಾಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಸಹ ಬಿಜೆಪಿ ಸೇರಿದ್ದರು.

ಈ ವೇಳೆಗಾಗಲೇ ಮಾಯಾವತಿಯ ಬಿಎಸ್‍ಪಿ ವೋಟ್ ಹಮಾರ ರಾಜ್ ತುಮ್ಹಾರಾ ನಹಿ ಚಲೇಗಾ ನಹಿ ಚಲೇಗಾ ( ಮತ ನಮ್ಮದು ರಾಜ್ಯಭಾರ ನಿಮ್ಮದು ನಡೆಯುವುದಿಲ್ಲ ನಡೆಯುವುದಿಲ್ಲ) ಆಂದೋಲನವನ್ನು ಆರಂಭಿಸಿತ್ತು. ಅಧಿಕಾರ ರಾಜಕಾರಣದ ಮೇಲೆ ಅಧಿಪತ್ಯ ಸಾಧಿಸಲು ಸರಳ ಸೂತ್ರವನ್ನು ಅನುಸರಿಸಿದ ಬಿಎಸ್‍ಪಿ ಮತಗಳ ಮೂಲಕ ಮುಖ್ಯಮಂತ್ರಿ-ಪ್ರಧಾನಮಂತ್ರಿ ಹುದ್ದೆ ಪಡೆಯುತ್ತೇವೆ ಮೀಸಲಾತಿ ಮೂಲಕ ಮ್ಯಾಜಿಸ್ಟ್ರೇಟ್-ಎಸ್‍ಪಿ ಹುದ್ದೆ ಪಡೆಯುತ್ತೇವೆ ಎಂಬ ಘೋಷಣೆಯಡಿ ಆಂದೋಲನ ಆರಂಭಿಸಿತ್ತು. ಆರ್ಥಿಕ ಶೋಷಣೆ, ಉತ್ಪಾದನೆ ಮತ್ತು ಆಸ್ತಿ ಕುರಿತ ಸಂಬಂಧಗಳು ಅಧಿಕಾರ ಕೇಂದ್ರಗಳ ತಳಹದಿಯಾಗಿವೆ ಎಂಬ ಅಂಶವನ್ನು ಪರಿಗಣಿಸಲೇ ಇಲ್ಲ. ಭೂ ಸುಧಾರಣಾ ಕ್ರಮಗಳನ್ನು ಕಡೆಗಣಿಸಿದ್ದು ಮತ್ತು ಇದರ ಪರಿಣಾಮ ಬಹುಪಾಲು ಭೂರಹಿತ ಕೃಷಿಕಾರ್ಮಿಕರೇ ಆಗಿರುವ ಗ್ರಾಮೀಣ ದಲಿತ ಸಮುದಾಯಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಬಹುಜನ ಸಮಾಜ ಪಕ್ಷದ ಚರ್ಚೆಗಳಲ್ಲಿ ಪ್ರಸ್ತಾಪವಾಗಲೇ ಇಲ್ಲ. ಆದರೂ ಬಿಎಸ್‍ಪಿ ಚುನಾವಣೆಗಳಲ್ಲಿ ಜಯಗಳಿಸಿ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನವನ್ನೂ ಗಳಿಸಿದ್ದಾರೆ. ಮುಖ್ಯವಾಹಿನಿಯ ದಲಿತ ರಾಜಕಾರಣಕ್ಕೆ ಮಾಯಾವತಿಯ ಈ ಸಾಧನೆಯೇ ಸಾಕು ಎನಿಸಿದ್ದೂ ಹೌದು.

ಇಂದು ಬಹುಜನ ಸಮಾಜ ಪಕ್ಷದ ರಾಜಕೀಯ ವೈಫಲ್ಯ ಮತ್ತು ದಲಿತರ ಮೇಲೆ ಹೆಚ್ಚುತ್ತಿರುವ ಆಕ್ರಮಣಗಳು ಪರ್ಯಾಯಗಳ ಶೋಧನೆಗೆ ಪ್ರೇರೇಪಿಸುತ್ತಿವೆ. ದಲಿತರಲ್ಲಿ ಅಂಬೇಡ್ಕರ್ ಕುರಿತು ಜಾಗೃತಿ ಮೂಡಿಸಲು ಪ್ರಚೋದಿಸುತ್ತಿದೆ. ರೋಹಿತ್ ವೇಮುಲನ ಸಾಂಸ್ಥಿಕ ಹತ್ಯೆಯ ವಿರುದ್ಧ ವ್ಯಕ್ತವಾದ ಪ್ರತಿರೋಧದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪಾಲ್ಗೊಂಡಿದ್ದು ಈ ಪ್ರಕ್ರಿಯೆಗೆ ಹೊಸ ಚಾಲನೆ ನೀಡಿದೆ. ಹೈದರಾಬಾದ್ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಜೆಎನ್‍ಯು ವಿದ್ಯಾರ್ಥಿಗಳು ರೋಹಿತ್ ವೇಮುಲನಿಗೆ ನ್ಯಾಯ ದೊರಕಿಸುವ ಆಂದೋಲನ ಹಮ್ಮಿಕೊಂಡಿದ್ದು, ಈ ಅಂದೋಲನವನ್ನು ಹತ್ತಿಕ್ಕಲು ಮೋದಿ ಸರ್ಕಾರ ಸಕಲ ಪ್ರಯತ್ನಗಳನ್ನೂ ಮಾಡಿದ್ದು , ಪೊಲೀಸ್ ದಬ್ಬಾಳಿಕೆ ಮತ್ತು ದೇಶದ್ರೋಹದ ಆರೋಪಗಳನ್ನು ಹೊರಿಸಿದ್ದು ಸರ್ಕಾರಕ್ಕೇ ತಿರುಗುಬಾಣವಾಗಿದೆ. ಊನ ಘಟನೆ ಈ ಪ್ರಕ್ರಿಯೆಯಲ್ಲಿ ಮತ್ತೊಂದು ತಿರುವು ನೀಡಿತ್ತು. ದಾದ್ರಿಯಿಂದ ಲಾಟೆಹಾರ್‍ವರೆಗೆ ಸಂಘಪರಿವಾರ ಪ್ರೇರಿತ ಗೋರಕ್ಷಕರು ದಲಿತರು ಮತ್ತು ಮುಸ್ಲಿಮರ ಮೇಲೆ ಸತತವಾದ ದಾಳಿ ನಡೆಸುತ್ತಲೇ ಇದ್ದಾರೆ. ಆದರೆ ಊನಾ ಒಂದು ಪ್ರಬಲ ಪ್ರತಿರೋಧದ ನೆಲೆಯಾಗಿ ಪರಿಣಮಿಸಿ ಮುಸ್ಲಿಮರೂ ಸಹ ಈ ಪ್ರತಿರೋಧದಲ್ಲಿ ಭಾಗಿಯಾಗಿದ್ದರು. ದಲಿತ ಮುಸ್ಲಿಂ ಐಕ್ಯತೆಯ ಈ ಸಕಾರಾತ್ಮಕ ಬೆಳವಣಿಗೆಯೊಂದಿಗೆ ಊನ ಘಟನೆ ದಲಿತರು ಮತ್ತು ಎಡಪಂಥೀಯರ ನಡುವೆ ಸೈದ್ಧಾಂತಿಕ-ರಾಜಕೀಯ ಹೊಂದಾಣಿಕೆಗೆ ನಾಂದಿ ಹಾಡಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಶಹರನಪುರ ಘಟನೆಗಳು ಭೀವi ಸೇನೆಯ ಸ್ಥಾಪನೆಗೆ ಎಡೆಮಾಡಿಕೊಟ್ಟಿತ್ತು. ಸಂಘಪರಿವಾರದ ಆಕ್ರಮಣಕಾರಿ ಧೋರಣೆಗೆ ಪ್ರತಿಯಾಗಿ ತೀವ್ರವಾದಿ ಹೋರಾಟ ನಡೆಸುವ ಅವಶ್ಯಕತೆ ಇಂದು ಹೆಚ್ಚಾಗಿ ಕಾಣುತ್ತಿರುವುದು ಸತ್ಯ.

ಊನ ಪ್ರತಿರೋಧದ ಹಿನ್ನೆಲೆಯಲ್ಲಿ ಜಾತಿ ಆಧಾರಿತ ವೃತ್ತಿ ಮೀಸಲಾತಿ ನೀತಿಗೂ ವಿರೋಧ ವ್ಯಕ್ತವಾಗಿದೆ. ದಲಿತರು ಎಲ್ಲ ರೀತಿಯ ಕೀಳರಿಮೆಯ ನೌಕರಿಯನ್ನು ಮಾಡಲು ಪ್ರೇರೇಪಿಸುವ, ಸತ್ತ ಪ್ರಾಣಿಗಳ ಹೆಣ ಹೊರುವುದರಿಂದ ಸಫಾಯಿ ಕರ್ಮಚಾರಿ ಕೆಲಸದವರೆಗೂ ನಿರ್ವಹಿಸುವ ಪ್ರವೃತ್ತಿಗೆ ವ್ಯತಿರಿಕ್ತವಾಗಿ ಊನ ಪ್ರತಿಭಟನೆ ಪರ್ಯಾಯ ಆರ್ಥಿಕ ಪ್ರಗತಿಗೆ ಭೂ ವಿತರಣೆಯನ್ನೂ ಒಂದು ಪರಿಹಾರ ಮಾರ್ಗವಾಗಿ ಸೂಚಿಸಿದೆ. ಇದು ತಮ್ಮ ಲೇಬರ್ ಪಕ್ಷ ಕಾರ್ಯಪ್ರವೃತ್ತವಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ್ದ ಆರ್ಥಿಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಈ ಸಂದರ್ಭದಲ್ಲಿ ಅಂಬೇಡ್ಕರ್, ಶೋಷಿತ ಸಮುದಾಯಗಳಿಗೆ ನೈಜ ಪ್ರಜಾತಂತ್ರ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಬಂಡವಾಳ ವ್ಯವಸ್ಥೆ ಮತ್ತು ಬ್ರಾಹ್ಮಣವಾದ ಎರಡೂ ಪ್ರಮುಖ ಶತ್ರುಗಳು ಎಂದು ಸ್ಪಷ್ಟವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ದಲಿತ ಚಳುವಳಿಯಲ್ಲಿ ಎಡಪಂಥೀಯ ಧೋರಣೆಯ ಬಗ್ಗೆ ಒಲವು ಮೂಡಿರುವುದು, ಕ್ರಾಂತಿಕಾರಿ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿರುವುದು, ವರ್ಗ ರಾಜಕಾರಣದ ಕಮ್ಯುನಿಸ್ಟ್ ಮಾರ್ಗದಲ್ಲಿ ದಲಿತರ ಹಕ್ಕೊತ್ತಾಯದ ಪ್ರಾಮುಖ್ಯತೆ ಇವೆಲ್ಲವೂ ದಲಿತ ಚಳುವಳಿ ಮತ್ತು ಕಮ್ಯುನಿಸ್ಟ್ ಚಳುವಳಿಯ ಐಕ್ಯತೆಗೆ ಸುಭದ್ರ ತಳಪಾಯ ಒದಗಿಸಲಿದೆ. ದಲಿತ ವಿಮೋಚನೆ ಮತ್ತು ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಇದು ಮಹತ್ತರ ಬೆಳವಣಿಗೆಯಾಗಲಿದೆ.

ಶ್ರೇಣೀಕೃತ ಅಸಮಾನತೆಯಾಗಿ ಜಾತಿ ಮತ್ತು ಜಾತಿ ವಿನಾಶದ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ವೈಚಾರಿಕ ದೃಷ್ಟಿಕೋನ
ದಲಿತರ ವಿಮೋಚನೆ ಮತ್ತು ಸಬಲೀಕರಣ ಜಾತಿ ವಿನಾಶದಿಂದ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ದೃಢವಾಗಿ ನಂಬಿದ್ದರು. ಜಾತಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಬಯಸದೆ, ವೈಚಾರಿಕ ಪರಿವರ್ತನೆಯನ್ನು ಬಯಸದೆ ಅಂಬೇಡ್ಕರ್ ಸಂಪೂರ್ಣ ಜಾತಿ ವಿನಾಶದ ಗುರಿ ಹೊಂದಿದ್ದರು. ತಮ್ಮ ಈ ತೀವ್ರವಾದಿ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ನಾಯಕರಾಗಿದ್ದ ಮಹಾತ್ಮ ಗಾಂಧಿಯನ್ನು ಎದುರಿಸುವುದು ಅನಿವಾರ್ಯವಾಗಿತ್ತು. ಜಾತಿಯನ್ನು ಶ್ರಮವಿಭಜನೆ ಅಥವಾ ವರ್ಣಾಶ್ರಮ ಎಂದು ಪರಿಗಣಿಸಿದ್ದ ಗಾಂಧೀಜಿಯ ನಿಲುವನ್ನು ಅಂಬೇಡ್ಕರ್ ತಿರಸ್ಕರಿಸಿದ್ದರು. ಜಾತಿಯನ್ನು ಶ್ರೇಣೀಕೃತ ಅಸಮಾನತೆ ಎಂದು ಬಣ್ಣಿಸಿದ್ದರು. ಶ್ರಮವಿಭಜನೆ ಮೂಲತಃ ಸಾಮಾಜಿಕ ಚಲನೆಗೆ ಮಾರಕವಾಗಿ ಪರಿಣಮಿಸುವುದಿಲ್ಲ. ಆದರೆ ಜಾತಿ ಸಾಮಾಜಿಕ ಚಲನೆಯನ್ನು ಸ್ಥಗಿತಗೊಳಿಸುತ್ತದೆ. ಜಾತಿಯನ್ನು ದೈವದತ್ತ ವ್ಯವಸ್ಥೆ ಎಂದು ಪರಿಗಣಿಸುವಂತೆ ಜಾತಿ ವ್ಯವಸ್ಥೆ ಸಮಾಜವನ್ನು ಒತ್ತಾಯಿಸುತ್ತದೆ. ದೈವದತ್ತವಾದ , ಪ್ರಶ್ನಾತೀತವಾದ ಶ್ರೇಣಿಕೃತ ಸಾಮಾಜಿಕ ವಿಭಜನೆಯೇ ಜಾತಿಯನ್ನು ಭ್ರಷ್ಟ ವ್ಯವಸ್ಥೆಯನ್ನಾಗಿಸುತ್ತದೆ. ಹಾಗಾಗಿಯೇ ಅಂಬೇಡ್ಕರ್ ಜಾತಿ ಸುಧಾರಣೆಯನ್ನು ಕುರಿತು ಆಲೋಚಿಸಲೇ ಇಲ್ಲ.
ಜಾತಿ ವಿನಾಶದ ಚಿಂತನೆಯೇ ಅಂಬೇಡ್ಕರರನ್ನು ಭಾರತದ ಇತರ ಸಮಾಜ ಸುಧಾರಕರು ಮತ್ತು ವ್ಯಾಖ್ಯಾನಕಾರರಿಂದ ಭಿನ್ನ ನೆಲೆಯಲ್ಲಿ ನಿಲ್ಲಿಸುತ್ತದೆ. ತಮ್ಮ ಕಡೆಯ ದಿನಗಳಲ್ಲಿ ಅಂಬೇಡ್ಕರ್ ಮಾಕ್ರ್ಸ್‍ನಿಂದ ಎಷ್ಟೇ ವಿಮುಖರಾಗಿದ್ದರೂ ಜಾತಿ ಸಬಲೀಕರಣ ಮತ್ತು ವಿಮೋಚನೆಯ ಹಾದಿಯಲ್ಲಿ ಜಾತಿ ವಿನಾಶವೇ ಅಂತಿಮ ಧ್ಯೇಯ ಎಂಬ ಅವರ ನಿಲುವು ಅವರನ್ನು ಮಾಕ್ರ್ಸ್‍ವಾದಕ್ಕೆ ಹತ್ತಿರ ತರುತ್ತದೆ. ಶ್ರಮಜೀವಿಗಳ ವಿಮೋಚನೆಗೆ ಮಾಕ್ರ್ಸ್ ಇಂತಹುದೇ ಧೋರಣೆಯನ್ನು ತಳೆದಿದ್ದರು. ಒಂದು ವರ್ಗ ಸಮಾಜದಲ್ಲಿ ಶ್ರಮಜೀವಿಗಳು ಹೇಗೆ ತಮ್ಮ ಅಂತಿಮ ವಿಮೋಚನೆಯನ್ನು ಕಾಣಲಾಗುವುದಿಲ್ಲವೋ ಅಂಬೇಡ್ಕರರ ದಲಿತರು ಜಾತಿ ಸಮಾಜದೊಡನೆ ಸೌಹಾರ್ದತೆಯಿಂದ ಬಾಳಲಾಗುವುದಿಲ್ಲ. ದಲಿತರು ವಿಮೋಚನೆ ಪಡೆಯಬೇಕೆಂದರೆ ಜಾತಿ ವಿನಾಶ ಪರಿಪೂರ್ಣವಾಗಿ ಆಗಲೇಬೇಕು.

ಶ್ರೇಣಿಕೃತ ವ್ಯವಸ್ಥೆಗೆ ಪೂರಕವಾಗಿ ದೈವದತ್ತ ಆಜ್ಞೆಯಿಂದಲೇ ಜಾತಿ ಭಾರತೀಯ ಸಮಾಜದಲ್ಲಿ ಮಾನ್ಯತೆ ಪಡೆದಿರುವುದರಿಂದ ಅಂಬೇಡ್ಕರ್ ಈ ದೈವೀಕ ಅಂಶವನ್ನೇ ಸಾರಾಸಗಟಾಗಿ ನಿರಾಕರಿಸಲು ಹೆಚ್ಚಿನ ಮಹತ್ವ ನೀಡಿದ್ದರು. ಅಂಬೇಡ್ಕರ್ ಅವರು ಬ್ರಾಹ್ಮಣ್ಯವನ್ನು ನಿರಾಕರಿಸಿದ್ದು ಮತ್ತು ಮನುವಾದಿ ತತ್ವಗಳನ್ನು ತಿರಸ್ಕರಿಸಿದ್ದು ಅವರ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಕ್ಕೆ ತಳಹದಿಯಾಗಿದೆ. ಆದರೆ ಬ್ರಾಹ್ಮಣ್ಯ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆಸ್ತಿ ಸಂಬಂಧಗಳು ಮತ್ತು ಅಧಿಕಾರ ಶಕ್ತಿ ಕೇಂದ್ರಗಳು ಪೂರಕವಾಗಿದ್ದವು ಎಂಬ ಅಂಶವನ್ನು ಅಂಬೇಡ್ಕರ್ ಅರಿತಿದ್ದರು. ಹಾಗಾಗಿ ಜಾತಿ ವಿನಾಶವನ್ನು ಸಾಧಿಸಬೇಕಾದಲ್ಲಿ ಬ್ರಾಹ್ಮಣ್ಯವನ್ನು ತಿರಸ್ಕರಿಸುವುದು ಮಾತ್ರವಲ್ಲದೆ ಪ್ರಸ್ತುತ ಅಧಿಕಾರ ರಾಜಕಾರಣದ ಮೂಲ ಸಂರಚನೆಯನ್ನೂ ಮೆಟ್ಟಿ ನಿಲ್ಲುವುದು ಅವಶ್ಯಕ ಎಂದು ಭಾವಿಸಿದ್ದರು. 1930ರಲ್ಲಿ ಅಂಬೇಡ್ಕರ್ ಹುಟ್ಟುಹಾಕಿದ ಸ್ವತಂತ್ರ ಕಾರ್ಮಿಕರ ಪಕ್ಷ ಬ್ರಾಹ್ಮಣವಾದ ಮತ್ತು ಬಂಡವಾಳವಾದವನ್ನು ಪಕ್ಷದ ಪರಮ ಶತ್ರುಗಳೆಂದು ಪರಿಗಣಿಸಿದ್ದರು. ಖಾಸಗಿ ಆಸ್ತಿಯ ನಿಷೇಧ ಮತ್ತು ಭೂಮಿಯ ರಾಷ್ಟ್ರೀಕರಣ ಈ ಎರಡೂ ಅಂಶಗಳು ಅಂಬೇಡ್ಕರ್ ಅವರ ಆರ್ಥಿಕ ತತ್ವಶಾಸ್ತ್ರದ ಭೂಮಿಕೆಯಾಗಿದ್ದವು. ನಂತರ ಅಳವಡಿಸಲಾದ ಭಾರತದ ಸಂವಿಧಾನದಲ್ಲಿ ಈ ಎರಡೂ ಅಂಶಗಳನ್ನು ಜಾರಿಗೊಳಿಸಲಾಗದೆ ಹೋದರೂ , ತಮ್ಮ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಲ್ಲಿ ಅಂಬೇಡ್ಕರ್ ಭಾರತದಲ್ಲಿ ಪ್ರಚಲಿತವಾಗಿದ್ದ ಅಸಮಾನ ಭೂ ಸಂಬಂಧಗಳು ಮತ್ತು ಸಂಪತ್ತಿನ ವಿತರಣೆಯ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು.

ಜಾತಿ ವ್ಯವಸ್ಥೆಯ ಬಗ್ಗೆ ಗಾಂಧೀಜಿಯೊಡನೆ ನಡೆಸಿದ ವಾದ ಸರಣಿಯಲ್ಲಿ ಅಂಬೇಡ್ಕರ್ ಒಂದು ಮಹತ್ತರವಾದ ಅಂಶವನ್ನು ಮಂಡಿಸುತ್ತಾರೆ. ಗಾಂಧೀಜಿಯ ವರ್ಣಾಶ್ರಮ ಅಥವಾ ಶ್ರಮವಿಭಜನೆಯ ಮೀಮಾಂಸೆಯನ್ನು ತಿರಸ್ಕರಿಸುವ ಅಂಬೇಡ್ಕರ್ “ ಜಾತಿ ವ್ಯವಸ್ಥೆ ಕೇವಲ ಶ್ರಮವಿಭಜನೆ ಅಲ್ಲ,ಇದು ಶ್ರಮಿಕರ ವಿಭಜನೆಯೂ ಆಗಿದೆ. ನಾಗರಿಕ ಸಮಾಜಕ್ಕೆ ಶ್ರಮ ವಿಭಜನೆ ಅಗತ್ಯ. ಆದರೆ ಯಾವುದೇ ನಾಗರಿಕ ಸಮಾಜದಲ್ಲಿ ಶ್ರಮಿಕರನ್ನು ವಿಭಜಿಸುವ ಮೂಲಕ ಶ್ರಮವಿಭಜನೆಯನ್ನು ಅನುಸರಿಸುವುದಿಲ್ಲ. ಮೇಲಾಗಿ ಶ್ರಮ ವಿಭಜನೆ ಮತ್ತು ಶ್ರಮಿಕರ ವಿಭಜನೆ ಪ್ರತ್ಯೇಕ ವಿದ್ಯಮಾನಗಳಾದರೂ ಜಾತಿ ವ್ಯವಸ್ಥೆಯನ್ನು ಕೇವಲ ಶ್ರಮಿಕರ ವಿಭಜನೆಗೆ ಸೀಮಿತಗೊಳಿಸಲಾಗುವುದಿಲ್ಲ. ಈ ವ್ಯವಸ್ಥೆಯಲ್ಲಿ ವಿಭಜಿತ ಶ್ರಮಿಕರನ್ನು ಒಬ್ಬರ ಮೇಲೊಬ್ಬರಂತೆ ಇರಿಸಿ ಶ್ರೇಣೀಕರಣಕ್ಕೊಳಪಡಿಸಲಾಗುತ್ತದೆ. ಹಾಗಾಗಿ ಜಾತಿಯನ್ನು ಎದುರಿಸಲು ಮುಖ್ಯವಾಗಿ ಜಾತಿ ವಿಭಜನೆಯನ್ನು ಮೀರಿ ಶ್ರಮಿಕರ ಐಕ್ಯತೆ ಸಾಧಿಸುವುದು ಅತ್ಯಗತ್ಯ ” ಎಂದು ಹೇಳುತ್ತಾರೆ ( ಜಾತಿ ವಿನಾಶ. ಡಾ. ಬಿ ಆರ್ ಅಂಬೇಡ್ಕರ್)

ವರ್ಗ ಮತ್ತು ಜಾತಿಯ ಮುಖಾಮುಖಿಯಲ್ಲಿ ಒಂದು ಸೂಕ್ಷ್ಮ ಸುಳಿವನ್ನು ಇದು ಒದಗಿಸುತ್ತದೆ. ಜಾತಿಯಾಧಾರಿತ ಶೋಷಣೆ ಮತ್ತು ತಾರತಮ್ಯಗಳ ವಾಸ್ತವನ್ನು ಮೀರಿ ವರ್ಗ ಪ್ರಜ್ಞೆ ಜಾತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕು. ಈ ರೀತಿಯ ಸಾಮಾಜಿಕ ಸಂವೇದನೆಯ ಮೂಲಕ ಗ್ರಹಿಸಲ್ಪಟ್ಟ ವರ್ಗ ಪ್ರಜ್ಞಾವಂತ ಸಾಮಾಜಿಕ ಕ್ರೋಢೀಕರಣದ ಕೇಂದ್ರವಾಗುತ್ತದೆ. ಈ ಕ್ರೋಢೀಕರಣ ಮತ್ತು ಚಲನಶೀಲತೆಯೇ ಶ್ರೇಣೀಕೃತ ಮತ್ತು ವಂಶಪಾರಂಪರಿಕ ಜಾತಿ ವ್ಯವಸ್ಥೆಯ ಜಡತ್ವ ಮತ್ತು ಅಧಿಪತ್ಯ ರಾಜಕಾರಣವನ್ನು ಮೀರಿ ನಿಲ್ಲಲು ನೆರವಾಗುತ್ತದೆ. ವರ್ಗ ಸಂಘರ್ಷದ ಪ್ರತಿಪಾದಕರು ಮತ್ತು ವಿರೋಧಿಗಳು ಬಹುತೇಕ ಸಂದರ್ಭಗಳಲ್ಲಿ ವರ್ಗ ಸಂಘರ್ಷವನ್ನು ಆರ್ಥಿಕ ವಲಯಕ್ಕೇ ಸೀಮಿತಗೊಳಿಸುತ್ತಾರೆ. ಹಾಗಾಗಿಯೇ ವರ್ಗ ಸಂಘರ್ಷ ಎನ್ನುವುದು ಜಾತಿ ಆಧಾರಿತ ಸಾಮಾಜಿಕ ಶೋಷಣೆ ಮತ್ತು ಅನ್ಯಾಯಗಳಿಗೆ ವಿಮುಖವಾಗಿದೆ ಎಂಬ ಸಾಮಾನ್ಯ ಅಪವಾದವನ್ನು ಎದುರಿಸಬೇಕಾಗುತ್ತದೆ. ಬಾಹ್ಯ ಸಮಾಜದ ಸೊಂಕಿಲ್ಲದೆ ತನ್ನೊಳಗೇ ಸೀಮಿತವಾಗಿ ಬೆಳೆಯುವ ಜಾತಿ ವ್ಯವಸ್ಥೆಯ ಮೂಲ ರಚನೆಯನ್ನು ಕುರಿತು ಅಂಬೇಡ್ಕರ್ ಪದೇಪದೇ ಎಚ್ಚರಿಸುತ್ತಾರೆ. ಸಹಭೋಜನ ಮತ್ತು ದೇವಾಲಯ ಪ್ರವೇಶದಂತಹ ಸಾಮುದಾಯಿಕ ಪರಿಹಾರ ಮಾರ್ಗಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ಅಂಬೇಡ್ಕರ್ ಬಹು ಮುಖ್ಯವಾಗಿ ಅಂತರ್ಜಾತಿ ವಿವಾಹಗಳ ಮೂಲಕ ಜಾತಿಯ ಗಡಿರೇಖೆಗಳನ್ನು ಭೇಧಿಸಲು ಪ್ರಚೋದಿಸುತ್ತಾರೆ. ಆದರೆ ಜಾತಿಯ ಗಡಿ ರೇಖೆಗಳನ್ನು ಸಮರ್ಪಕವಾಗಿ ತೊಡೆದುಹಾಕಬೇಕೆಂದರೆ ಇನ್ನೂ ಹೆಚ್ಚಿನ ಸಾಮಾಜಿಕ ಚಲನೆ ಮತ್ತು ಸ್ವಾತಂತ್ರ್ಯ ಅಗತ್ಯವಾಗುತ್ತದೆ. ಮಹಿಳೆಯರು ತಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಪಡೆಯಬೇಕಾಗುತ್ತದೆ. ಪ್ರೀತಿ, ಪ್ರೇಮ ಮತ್ತು ವಿವಾಹದ ವಿಚಾರಗಳಲ್ಲಿ ಪೂರ್ಣ ಸ್ವಾತಂತ್ರ್ಯ ಹೊಂದಿರಬೇಕಾಗುತ್ತದೆ. ಅಂದರೆ ಜಾತಿ ಅಧಿಪತ್ಯ ಮತ್ತು ಪಿತೃಪ್ರಧಾನ ವ್ಯವಸ್ಥೆ ಶಕ್ತಿಯುತವಾಗಲು ಹೇಗೆ ಪರಸ್ಪರ ನೆರವಾಗುವುದೋ ಹಾಗೆಯೇ ಎರಡೂ ವ್ಯವಸ್ಥೆಗಳು ಶಿಥಿಲವಾಗಲೂ ನೆರವಾಗುತ್ತದೆ. ಲಿಂಗ ನ್ಯಾಯಕ್ಕಾಗಿ ನಡೆಯುವ ಹೋರಾಟಗಳು ಜಾತಿ ವಿನಾಶದ ಹೋರಾಟದಲ್ಲಿ ಈ ಕಾರಣಕ್ಕಾಗಿಯೇ ಮುಖ್ಯಪಾತ್ರ ವಹಿಸುತ್ತವೆ.

ಬ್ರಾಹ್ಮಣವಾದದ ಧರ್ಮಶಾಸ್ತ್ರಗಳ ನಿರಾಕರಣೆ, ಊಳಿಗಮಾನ್ಯ ವ್ಯವಸ್ಥೆ ಮತ್ತು ಬಂಡವಾಳಶಾಹಿಯ ಅಧಿಕಾರ ಸಂರಚನೆಗೆ ಪ್ರತಿರೋಧ, ವರ್ಗ ಏಕೀಕರಣದ ಪ್ರಯತ್ನಗಳು, ಲಿಂಗನ್ಯಾಯಕ್ಕಾಗಿ ನಿರಂತರ ಹೋರಾಟ, ಪುರುಷ ಸಮಾಜದ ಅಧಿಪತ್ಯದಿಂದ ಮಹಿಳೆಯರ ವಿಮೋಚನೆ ಇವೆಲ್ಲವೂ ಅಂಬೇಡ್ಕರ್ ಅವರ ದಾರ್ಶನಿಕ ಚಿಂತನೆಗಳ ಮೂಲ ತತ್ವಗಳಾಗಿದ್ದು ಜಾತಿ ವಿನಾಶದ ನಿಟ್ಟಿನಲ್ಲಿ ಪ್ರಮುಖ ಅಸ್ತ್ರಗಳಾಗಿವೆ. ಆದರೆ ವಾಸ್ತವ ನೆಲೆಯಲ್ಲಿ ನೋಡಿದಾಗ ಸಾಮಾಜಿಕ ನ್ಯಾಯದ ಮುಖ್ಯವಾಹಿನಿ ರಾಜಕಾರಣದಲ್ಲಿ ಜಾತಿ ಆಧಾರಿತ ಮೀಸಲಾತಿ, ಜಾತಿ ಆಧಾರಿತ ಸಾಮಾಜಿಕ ಜಾಗೃತಿ ಮತ್ತು ಅಂದೋಲನ, ಚುನಾವಣಾ ಸಾಧ್ಯತೆಗಳ ನಿರ್ವಹಣೆ ಇವುಗಳ ಸುತ್ತಲೂ ಗಿರಕಿ ಹೊಡೆಯತ್ತಿರುವುದನ್ನು ಕಾಣಬಹುದು. ಈ ಸನ್ನಿವೇಶದಲ್ಲಿ ಜಾತಿ ವಿನಾಶದ ಸೈದ್ಧಾಂತಿಕ ನೆಲೆಗಳನ್ನೂ ಸಹ ಹಿಂಬದಿಗೆ ತಳ್ಳಲಾಗಿದೆ. ಇದರ ಫಲವಾಗಿ ಉದ್ಭವವಾಗಿರುವ ಅಸ್ಮಿತೆಯ ರಾಜಕಾರಣ ಬ್ರಾಹ್ಮಣವಾದದ ಅಧಿಪತ್ಯ ರಾಜಕಾರಣದೊಡನೆ ಹೊಂದಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಬಿಹಾರದಲ್ಲಿ ಸಂಯುಕ್ತ ಜನತಾ ದಳ ಪಕ್ಷದೊಡನೆ ಮೈತ್ರಿಕೂಟ ರಚಿಸುವ ಮೂಲಕ ಬಿಜೆಪಿ ಈ ಸಾಮಾಜಿಕ ತಂತ್ರಗಾರಿಕೆಯ ಮೇಲೆ ತನ್ನ ನಿಯಂತ್ರಣ ಸಾಧಿಸಿರುವುದನ್ನು ಕಾಣಬಹುದು. ಇತರ ರಾಜ್ಯಗಳಲ್ಲೂ ಸಹ, ವಿಶೇಷವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ ಇದೇ ತಂತ್ರಗಾರಿಕೆಯನ್ನು ಅನುಸರಿಸಿದೆ. ಇಂದಿನ ದುರ್ಗಮ ಪರಿಸ್ಥಿತಿಯಲ್ಲಿ ಒಂದೆಡೆ ಕಾರ್ಪೋರೇಟ್ ಔದ್ಯಮಿಕ ನಿಯಂತ್ರಣದ ಪರಾಕಾಷ್ಠೆಯನ್ನು ಕಾಣುತ್ತಿದ್ದರೆ ಮತ್ತೊಂದೆಡೆ ಬ್ರಾಹ್ಮಣವಾದ ಮತ್ತು ಮನುವಾದ ಸಿದ್ದಾಂತಗಳ ಪುನರುತ್ಥಾನವನ್ನು ಕಾಣುತ್ತಿದ್ದೇವೆ. ಈ ಎರಡೂ ಪ್ರಕ್ರಿಯೆಗಳಿಗೆ ಒಬಿಸಿ ಸಮುದಾಯದ ಪ್ರಧಾನ ಮಂತ್ರಿ ನೇತೃತ್ವ ವಹಿಸುತ್ತಿದ್ದಾರೆ. ಈ ಪ್ರಧಾನ ಮಂತ್ರಿಯ ಸರ್ಕಾರಕ್ಕೆ ದಲಿತ ರಾಷ್ಟ್ರಪತಿಗಳು ಬೆಂಗಾವಲಾಗಿ ನಿಲ್ಲುತ್ತಿದ್ದಾರೆ.

ಸಂವಿಧಾನ ಅಂಬೇಡ್ಕರರ ದೂರದೃಷ್ಟಿಯ ಎಚ್ಚರಿಕೆ ; ಸಂವಿಧಾನದ ಅವಗಣನೆ, ವ್ಯಕ್ತಿ ಆರಾಧನೆ ಮತ್ತು ಹೆಚ್ಚಾಗುತ್ತಿರುವ ಅಸಮಾನತೆ
ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನದ ಕರ್ತೃ ಎಂದೇ ಪರಿಗಣಿಸಲಾಗುತ್ತದೆ. ಪಾಶ್ಚಿಮಾತ್ಯ ಪ್ರಜಾತಂತ್ರ ವ್ಯವಸ್ಥೆಗಳಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ಪರಾಮರ್ಶಿಸಿದ್ದ ಅಂಬೇಡ್ಕರ್ ಭಾರತದಲ್ಲಿ ಪ್ರಚಲಿತವಾಗಿದ್ದ ಸಾಮೂಹಿಕ ಆಡಳಿತ ನಿರ್ವಹಣೆಯ ಚರಿತ್ರೆಯನ್ನೂ ಆಳವಾಗಿ ಅಧ್ಯಯನ ಮಾಡಿದ್ದರು. ಬೌದ್ಧ ಸಂಘಗಳ ಕಾರ್ಯ ನಿರ್ವಹಣೆಯನ್ನು ವಿಶೇಷವಾಗಿ ಅಧ್ಯಯನ ಮಾಡಿ ಆಧುನಿಕ ಭಾರತಕ್ಕೆ ಪ್ರಜಾತಂತ್ರ ವ್ಯವಸ್ಥೆಯ ನೀಲಿ ನಕ್ಷೆಯನ್ನು ಅಂಬೇಡ್ಕರ್ ಸಿದ್ಧಪಡಿಸಿದ್ದರು. ಇಲ್ಲಿ ಕುತೂಹಲಕಾರಿಯಾದ ಸಂಗತಿ ಎಂದರೆ ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿದ್ದ ಹಲವಾರು ವೈರುಧ್ಯಗಳು ಮತ್ತು ವಿರೋಧಾಭಾಸಗಳನ್ನು ಕುರಿತು ಅಂಬೇಡ್ಕರ್ ಸಮರ್ಪಕವಾದ ವ್ಯಾಖ್ಯಾನವನ್ನೂ ನಮಗೆ ನೀಡಿದ್ದಾರೆ. ಸಂವಿಧಾನವನ್ನು ಅಧಿಕೃತವಾಗಿ ಅನುಮೋದಿಸಿದ ದಿನದಂದೇ ಅಂಬೇಡ್ಕರ್ ಪ್ರಜಾತಂತ್ರವನ್ನು ಶ್ಲಾಘಿಸಿ ಈ ಚಾರಿತ್ರಿಕ ಸಂದರ್ಭವನ್ನು ಸಂಭ್ರಮಿಸಲಿಲ್ಲ. ಬದಲಾಗಿ ಇದೇ ಸಂದರ್ಭವನ್ನು ಬಳಸಿಕೊಂಡು ಅಂಬೇಡ್ಕರ್ ಸಂವಿಧಾನದಲ್ಲಿ ಅಂತರ್ಗತವಾಗಿರುವ ಈ ವೈರುಧ್ಯಗಳೇ ಪ್ರಜಾಸತ್ತಾತ್ಮಕ ಭಾರತದ ಸಾಂವಿಧಾನಿಕ ಅಡಿಪಾಯವನ್ನು ಅಭದ್ರಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

1949ರ ನವಂಬರ್ 2ರಂದು ಸಂವಿಧಾನ ರಚನಾ ಮಂಡಲಿಯಲ್ಲಿ ತಮ್ಮ ಕೊನೆಯ ಚಾರಿತ್ರಿಕ ಭಾಷಣ ಮಾಡಿದ ಅಂಬೇಡ್ಕರ್ ಕರಡು ಸಿದ್ಧತಶ ಸಮಿತಿಯನ್ನು ಸಮರ್ಥಿಸುತ್ತಲೇ ಸಂವಿಧಾನದ ವಿರುದ್ಧದ ಅನೇಕ ಟೀಕೆಗಳನ್ನು ಅಲ್ಲಗಳೆದಿದ್ದರು. ಆದರೆ ತಮ್ಮ ಭಾಷಣದ ಅಂತ್ಯದಲ್ಲಿ ಅಂಬೇಡ್ಕರ್ ಭಾರತದಲ್ಲಿ ಪ್ರಜಾತಂತ್ರದ ಭವಿಷ್ಯವನ್ನು ಕುರಿತು ಎಚ್ಚರಿಕೆಯ ಮಾತುಗಳನ್ನೂ ಆಡಿದ್ದರು. ಭಾರತದಲ್ಲಿ ಪ್ರಜಾತಂತ್ರ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳುತ್ತಲೇ ಸರ್ವಾಧಿಕಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಮೂರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದರು. (1) ಪ್ರಭುತ್ವ ಮತ್ತು ಪ್ರಜೆಗಳು ಸಂವಿಧಾನವನ್ನು ಆಧರಿಸಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅರಾಜಕತೆ ನುಸುಳುತ್ತದೆಯೇ (2) ಪ್ರಜಾತಂತ್ರದ ಅವಸಾನಕ್ಕೆ ನಿಸ್ಸಂಶಯವಾಗಿ ನೆರವಾಗುವ ವ್ಯಕ್ತಿ ಪೂಜೆ ಮತ್ತು ಆರಾಧನಾ ಸಂಸ್ಕøತಿಯನ್ನು ಮೀರಿ ನಿಲ್ಲಲು ಭಾರತಕ್ಕೆ ಸಾಧ್ಯವೇ, ಇಲ್ಲವಾದಲ್ಲಿ ಸರ್ವಾಧಿಕಾರ ಆಕ್ರಮಿಸುತ್ತದೆ(3) ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಈ ಮೂರು ತ್ರಿವಳಿ ತತ್ವಗಳು ಸಂವಿಧಾನದ ಆಧಾರ ಸ್ತಂಭಗಳಾಗಿದ್ದು ಇವುಗಳನ್ನು ಕಾರ್ಯತಃ ಎತ್ತಿಹಿಡಿಯಲಾಗುವುದೇ ಅಥವಾ ಹೆಚ್ಚಾಗುವ ಅಸಮಾನತೆ ಮತ್ತು ಇದರ ಪರಿಣಾಮವಾಗಿ ಸ್ವಾತಂತ್ರ್ಯವೇ ವಿನಾಶವಾಗಿ ಪ್ರಜಾತಂತ್ರ ವ್ಯವಸ್ಥೆಯ ಮೂಲ ರಚನೆಯೇ ಕುಸಿದುಬೀಳುತ್ತದೆಯೇ ? ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಮೂರೂ ಎಚ್ಚರಿಕೆಗಳೂ ಸಹ ನಮ್ಮ ಎದುರು ಪ್ರತ್ಯಕ್ಷವಾಗಿ ಗೋಚರಿಸುತ್ತಿವೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಸಂಸದೀಯ ಪ್ರಜಾತಂತ್ರದ ಎಲ್ಲ ಸಂಸ್ಥೆಗಳನ್ನೂ ಧಿಕ್ಕರಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. (ಉದಾಹರಣೆಗೆ ಆಧಾರ್ ಕಾರ್ಡ್‍ನ್ನು ಜನರ ಮೇಲೆ ಹೇರಲಾಗುತ್ತಿದ್ದು ಸಂಸತ್ತಿನ ಪ್ರತಿರೋಧವನ್ನೂ ಕಡೆಗಣಿಸಲಾಗುತ್ತಿದೆ, ಆಧಾರ್ ಕಡ್ಡಾಯ ಮಾಡುವಂತಿಲ್ಲ ಎಂಬ ಸುಪ್ರೀಂಕೋರ್ಟ್‍ನ ತೀರ್ಪನ್ನೂ ಅಲಕ್ಷಿಸಲಾಗುತ್ತಿದೆ). ಇಂದು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ. ಅಂಥವರ ವಿರುದ್ಧ ದೇಶದ ಕಾನೂನು ಕ್ರಮ ಕೈಗೊಳ್ಳಬೇಕೇ ಎಂದು ಸರ್ಕಾರ ನಿರ್ಧರಿಸುತ್ತದೆ. ಸಮೂಹ ಥಳಿತದ ಗುಂಪುಗಳು ಇಂದು ಸಾರ್ವಜನಿಕವಾಗಿಯೇ , ಚಲಿಸುವ ರೈಲುಗಳಲ್ಲೂ ಸಹ ತಮ್ಮ ಆಕ್ರಮಣವನ್ನು ಮುಂದುವರೆಸಿವೆ.

ಸಾಮಾಜಿಕ ಧ್ಯೇಯ ಸಾಧನೆಗೆ ಮತ್ತು ಆರ್ಥಿಕ ಧ್ಯೇಯ ಸಾಧನೆಗೆ ಎಲ್ಲ ಪ್ರಜೆಗಳಿಗೂ ಸಾಂವಿಧಾನಿಕ ಅವಕಾಶಗಳು ಮತ್ತು ವಿಧಾನಗಳು ಲಭ್ಯವಾದಲ್ಲಿ, ಪ್ರತಿಭಟನೆ ಮತ್ತು ಸಂಘರ್ಷ ನಿವಾರಣೆಯ ಅಸಾಂವಿಧಾನಿಕ ಮಾರ್ಗಗಳು (ಈ ಸಂದರ್ಭದಲ್ಲಿ ಅಂಬೇಡ್ಕರ್ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳುವಳಿ, ನಾಗರಿಕ ಅವಿಧೇಯತೆ ಮತ್ತು ಸತ್ಯಾಗ್ರಹ ನೀತಿಗಳನ್ನೂ ಉಲ್ಲೇಖಿಸಿದ್ದರು) ಅನವಶ್ಯಕವಾಗುತ್ತವೆ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಬಗೆಹರಿಯದ ಚಾರಿತ್ರಿಕ ಸಮಸ್ಯೆಗಳಾದ ಕಾಶ್ಮೀರ ವಿವಾದ, ಈಶಾನ್ಯ ರಾಜ್ಯಗಳ ಸಮಸ್ಯೆ, ಕೃಷಿ ಬಿಕ್ಕಟ್ಟು ಪರಿಹಾರ, ದೇಶದ ಶ್ರಮಜೀವಿಗಳಿಗೆ ಘನತೆವೆತ್ತ ಜೀವನ ಒದಗಿಸುವ ಪ್ರಯತ್ನಗಳು, ಜಾತಿ ಮತ್ತು ಲಿಂಗ ಆಧಾರಿತ ದೌರ್ಜನ್ಯ ಹಾಗೂ ಶೋಷಣೆಗಳಿಗೆ ತುತ್ತಾದವರು, ಕೋಮು ಸಂಘರ್ಷದ ಸಂತ್ರಸ್ತರು ಈ ಎಲ್ಲ ಸಂದರ್ಭಗಳಲ್ಲಿ ಪ್ರಭುತ್ವ ವ್ಯವಸ್ಥಿತವಾಗಿ ಸಾಂವಿಧಾನಿಕ ಮಾರ್ಗಗಳನ್ನು ಬದಿಗೊತ್ತಿ ಅಸಾಂವಿಧಾನಿಕ ಮಾರ್ಗಗಳ ಮೂಲಕ ದಮನಕಾರಿ ನೀತಿಯನ್ನು ಅನುಸರಿಸುತ್ತಿರುವುದು ವಾಸ್ತವ.

ಅಂಬೇಡ್ಕರ್ ನೀಡಿದ ಎರಡನೆಯ ಎಚ್ಚರಿಕೆ, ಜಾನ್ ಸ್ಟುವರ್ಟ್ ಮಿಲ್ಲ ಪ್ರಜಾತಂತ್ರವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನೀಡಿದ ಎಚ್ಚರಿಕೆಯ ಮಾತುಗಳಿಂದ ಹೊರಸೂಸಿದೆ. ಎಂತಹ ಮಹಾನ್ ವ್ಯಕ್ತಿಯಾದರೂ ನಿಮ್ಮ ಸ್ವಾತಂತ್ರ್ಯವನ್ನು ಆ ವ್ಯಕ್ತಿಯ ಪಾದಗಳಿಗೆ ಅರ್ಪಿಸಬೇಡಿ ಅಥವಾ ಅಂತಹ ಮಹಾನ್ ವ್ಯಕ್ತಿಗೆ ಅಪ್ರತಿಮ ಅಧಿಕಾರವನ್ನು ನೀಡಿ ಪ್ರಜಾತಂತ್ರದ ಸಂಸ್ಥೆಗಳ ದುರ್ಬಳಕೆಗೆ ಅವಕಾಶ ನೀಡಬೇಡಿ ಎಂದು ಸ್ಟುವರ್ಟ್ ಮಿಲ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಮಾತುಗಳು ಇತರ ಯಾವುದೇ ದೇಶಕ್ಕಿಂತಲು ಭಾರತದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಮತ್ತು ಅವಶ್ಯ ಎನಿಸುತ್ತದೆ ಎಂದು ಅಂಬೇಡ್ಕರ್ ನೆನಪಿಸಿದ್ದರು. ಏಕೆಂದರೆ ಭಾರತದಲ್ಲಿ ಭಕ್ತಿ ಅಥವಾ ಉಪಾಸನೆಯ ಮಾರ್ಗಗಳು ಆಳವಾಗಿ ಬೇರೂರಿದ್ದು ಈ ಮಾರ್ಗಗಳು ದೇಶದ ರಾಜಕಾರಣವನ್ನು ಮತ್ತಾವುದೇ ದೇಶದ ರಾಜಕಾರಣದಲ್ಲಿ ಕಾಣದಷ್ಟು ಮಟ್ಟಿಗೆ ಆವರಿಸುತ್ತದೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು.

ಮತಧರ್ಮಗಳಲ್ಲಿ ಭಕ್ತಿ ಮೋಕ್ಷದ ಮಾರ್ಗವಾಗುತ್ತದೆ ಆದರೆ ರಾಜಕೀಯದಲ್ಲಿ, ಅಂಬೇಡ್ಕರ್ ಹೇಳುವಂತೆ, ಭಕ್ತಿ ಅಥವಾ ವ್ಯಕ್ತಿ ಆರಾಧನೆ ಅವನತಿಯ ಮಾರ್ಗವಾಗುತ್ತದೆ, ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ಈ ವ್ಯಕ್ತಿ ಆರಾಧನೆಯ ಪ್ರವೃತ್ತಿ ತುರ್ತುಪರಿಸ್ಥಿತಿಯ ದುರಂತಕ್ಕೆ ಕಾರಣವಾಗಿದ್ದನ್ನು 1975ರಲ್ಲಿ ಕಂಡಿದ್ದೇವೆ. ಕಾಂಗ್ರೆಸ್ ಪಕ್ಷದ ವಂದಿಮಾಗಧರು ಇಂದಿರಾಗಾಂಧಿಯನ್ನು ಭಾರತಕ್ಕೆ ಹೋಲಿಸಿ ಇಂದಿರಾ ಅಂದರೆ ಭಾರತ ಭಾರತ ಅಂದರೆ ಇಂದಿರಾ ಎಂಬ ಘೋಷಣೆ ಮೊಳಗಿಸಿದ್ದರು. ಪರಿಣಾಮ ತುರ್ತುಪರಿಸ್ಥಿತಿಯನ್ನು ದೇಶ ಎದುರಿಸಬೇಕಾಯಿತು. ಇಂದು ಇದೇ ಪಂಥಾಭಿಮಾನ, ಅಂಧಾಭಿಮಾನ ಮೋದಿಯ ಸುತ್ತ ನಿರ್ಮಾಣವಾಗುತ್ತಿದೆ. ಮೋದಿ ಆರಾಧನೆಯ ಮೂಲ ಉದ್ದೇಶ ಕೇವಲ ಸೈದ್ಧಾಂತಿಕ ವಿರೋಧಿಗಳನ್ನು ಅಥವಾ ರಾಜಕೀಯ ವಿರೋಧಿಗಳನ್ನು ದಮನಿಸುವುದಲ್ಲ ಬದಲಾಗಿ ಅಧಿಕೃತ ನಿಲುವಿಗೆ ಬದ್ಧರಾಗದ ಪ್ರತಿಯೊಬ್ಬ ಬಿಜೆಪಿ ನಾಯಕರೂ ಸಹ ಈ ದಮನಕ್ಕೆ ಗುರಿಯಾಗಬೇಕಾಗುತ್ತದೆ.

ಮೂರನೆಯ ಎಚ್ಚರಿಕೆಯಾಗಿ ಅಂಬೇಡ್ಕರ್ ಕೇವಲ ರಾಜಕೀಯ ಪ್ರಜಾತಂತ್ರಕ್ಕೆ ಸಂತೃಪ್ತರಾಗದೆ ರಾಜಕೀಯ ಪ್ರಜಾತಂತ್ರವನ್ನು ಸಾಮಾಜಿಕ ಪ್ರಜಾತಂತ್ರವನ್ನಾಗಿ ಪರಿವರ್ತಿಸಲು ಯತ್ನಿಸುವಂತೆ ಕರೆ ನೀಡಿದ್ದರು. ಈ ಸಾಮಾಜಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಜೀವನದ ಮೂಲ ತತ್ವಗಳಾಗಿ ಪರಿಣಮಿಸುತ್ತವೆ. ಈ ಮೂರು ತತ್ವಗಳು ತ್ರಿವಳಿ ಸೂತ್ರಗಳಾಗಿದ್ದು ಪರಸ್ಪರ ಕೂಡಿಯೇ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರಜಾತಂತ್ರದ ಮೂಲ ಆಶಯಗಳೇ ಇಲ್ಲವಾಗುತ್ತವೆ ಎಂದು ಎಚ್ಚರಿಸಿದ್ದರು. ಈ ಅಂಶವನ್ನು ಮಂಡಿಸುವ ಸಂದರ್ಭದಲ್ಲಿ ಅಂಬೇಡ್ಕರ್ ವಿಶೇಷ ಒತ್ತು ನೀಡಿದ್ದರು. “ ಭಾರತೀಯ ಸಮಾಜದಲ್ಲಿ ಎರಡು ಅಂಶಗಳು ಯಾವುದೇ ಸಂದರ್ಭದಲ್ಲಿಯೂ ಕಾಣುವುದಿಲ್ಲ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಲೇಬೇಕು. ಮೊದಲನೆಯದು ಸಮಾನತೆ. ಸಾಮಾಜಿಕ ಸ್ತರದಲ್ಲಿ ಭಾರತೀಯ ಸಮಾಜದಲ್ಲಿ ಶ್ರೇಣೀಕೃತ ಅಸಮಾನತೆ ಜಾರಿಯಲ್ಲಿದೆ. ಅಂದರೆ ಕೆಲವರನ್ನು ಮೇಲಕ್ಕೇರಿಸುತ್ತಲೇ ಉಳಿದವರನ್ನು ಕೆಳಕ್ಕೆ ತಳ್ಳುವ ಪ್ರವೃತ್ತಿ ಸ್ಥಾಪಿತವಾಗಿದೆ. ಎರಡನೆಯದಾಗಿ ಆರ್ಥಿಕ ನೆಲೆಯಲ್ಲಿ ನಮ್ಮ ಸಮಾಜದಲ್ಲಿ ಕೆಲವರ ಬಳಿ ಅಪಾರ ಪ್ರಮಾಣದ ಸಂಪತ್ತು ಸಂಗ್ರಹವಾಗಿದ್ದರೆ ಅನೇಕರು ದಾರಿದ್ರ್ಯ ಎದುರಿಸುತ್ತಿದ್ದಾರೆ ” ಇದರ ಪರಿಣಾಮ ಎಂದರೆ ಔಪಚಾರಿಕ ರಾಜಕೀಯ ಸಮಾನತೆ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಯ ನಡುವೆ ಮೂಲತಃ ಸಂಘರ್ಷ ಸದಾ ಕಾಲ ಇದ್ದೇ ಇರುತ್ತದೆ.

ಭಾರತದ ಸಾಂವಿಧಾನಿಕ ಪ್ರಜಾತಂತ್ರ ವ್ಯವಸ್ಥೆಗೆ ಅಸಮಾನತೆಯೇ ಪ್ರಮುಖ ಅಪಾಯ ಒಡ್ಡುತ್ತದೆ ಎಂದು ಗುರುತಿಸುವಲ್ಲಿ ಅಂಬೇಡ್ಕರ್ ಕಿಂಚಿತ್ತೂ ಹಿಂಜರಿದಿರಲಿಲ್ಲ. “ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಇನ್ನೆಷ್ಟು ಕಾಲ ಸಮಾನತೆಯನ್ನು ಅಲ್ಲಗಳೆಯಲು ಸಾಧ್ಯ ? ದೀರ್ಘ ಕಾಲ ನಾವು ಹೀಗೆಯೇ ಅಲ್ಲಗಳೆಯುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾತಂತ್ರವನ್ನೇ ಅಪಾಯಕ್ಕೊಡ್ಡುವುದು ಖಚಿತ. ಆದಷ್ಟು ಶೀಘ್ರವಾಗಿ ಈ ವೈರುಧ್ಯವನ್ನು ನಾವು ಹೋಗಲಾಡಿಸಬೇಕಿದೆ. ಇಲ್ಲವಾದಲ್ಲಿ ಅಸಮಾನತೆಯಿಂದ ಬಳಲುವ ಪ್ರಜೆಗಳು ಈ ಶಾಸನಸಭೆ ಕಷ್ಟ ಪಟ್ಟು ನಿರ್ಮಿಸಿರುವ ರಾಜಕೀಯ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಂಭವ ಇರುತ್ತದೆ ” ಎಂದು ಅಂಬೇಡ್ಕರ್ ಹೇಳುತ್ತಾರೆ. ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಅಸಮಾನತೆ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದುದೇ ಅಲ್ಲದೆ ತಾಂಡವಾಡುತ್ತಿತ್ತು. ಇದೇ ಅಸಮಾನತೆ ಇಂದು ನವ ಉದಾರವಾದಿ ನೀತಿಗಳ ಪರಿಣಾಮವಾಗಿ ಮರುಕಳಿಸುತ್ತಿದೆ. 2014-16ರ ಅವಧಿಯಲ್ಲಿ ದೇಶದ ಶೇ 1ರಷ್ಟು ಜನರ ಸಂಪತ್ತು ಶೇ 10ರಷ್ಟು ಹೆಚ್ಚಾಗಿದೆ. ಅಂದರೆ ದೇಶದ ಒಟ್ಟು ಸಂಪತ್ತಿನ ಶೇ 60ರಷ್ಟು ಶೇ 1ರಷ್ಟು ಜನರ ಪಾಲಾಗಿದೆ. ಈ ಅಸಮಾನತೆ ತೀವ್ರವಾಗುತ್ತಿರುವಂತೆಯೇ ಎಲ್ಲ ರೀತಿಯ ತಾರತಮ್ಯ ಮತ್ತು ಅಸಮತೆ ತೀವ್ರವಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳು, ಕೃಷಿ ಬಿಕ್ಕಟ್ಟು ಮತ್ತು ಕಾರ್ಪೋರೇಟ್ ಲೂಟಿ ಹಾಗು ಕಾರ್ಪೋರೇಟ್ ಸಂಪತ್ತಿನ ವೃದ್ಧಿ, ಮುಂದುವರೆದ ಪ್ರದೇಶ ಮತ್ತು ಹಿಂದುಳಿದ ಪ್ರದೇಶ ಹೀಗೆ ಎಲ್ಲ ಸ್ತರಗಳಲ್ಲೂ ಅಸಮಾನತೆ ಹೆಚ್ಚಾಗುತ್ತಲೇ ಇದೆ. ಅಪಾರ ಆರ್ಥಿಕ ಅಸಮಾನತೆಯೇ ಅಲ್ಲದೆ ಜಾತಿ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಕೋಮು ದೃವೀಕರಣವೂ ತೀವ್ರವಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎನ್ನುವ ತ್ರಿವಳಿ ತತ್ವಗಳು ಕಾಲ್ಪನಿಕ ಎನಿಸುತ್ತಿದೆ.

ರಾಷ್ಟ್ರ, ಜಾತಿ ಮತ್ತು ಹಿಂದೂ ರಾಜ್

ಒಂದು ದೇಶವಾಗಿ ರೂಪುಗೊಳ್ಳಲು ಅವಶ್ಯವಾದ ಭ್ರಾತೃತ್ವ ಭಾರತದಲ್ಲಿ ಇಲ್ಲ ಎನ್ನುವುದನ್ನು ಮನಗಂಡಿದ್ದ ಅಂಬೇಡ್ಕರ್ “ ಭಾರತವನ್ನು ಒಂದು ದೇಶ ಎಂದು ಭಾವಿಸುವಲ್ಲಿ ನಾವು ಭ್ರಮೆಯ ಹಿಂದೆ ಅಲೆಯುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಸಾವಿರಾರು ಜಾತಿಗಳಲ್ಲಿ ವಿಂಗಡಿಸಲ್ಪಟ್ಟಿರುವ ಜನರನ್ನು ಒಂದು ದೇಶದವರು ಎಂದು ಗುರುತಿಸುವುದಾದರೂ ಹೇಗೆ ? ಸಾಮಾಜಿಕ ನೆಲೆಯಲ್ಲಿ ಮತ್ತು ಮಾನಸಿಕ ನೆಲೆಯಲ್ಲಿ ನಾವು ಒಂದು ದೇಶವಾಗಿ ಉಳಿದಿಲ್ಲ ಎಂಬ ವಾಸ್ತವವನ್ನು ನಾವು ಎಷ್ಟು ಬೇಗನೆ ಮನಗಾಣುತ್ತೇವೆಯೋ ಅಷ್ಟು ಒಳ್ಳೆಯದು. ಆಗಲೇ ನಾವು ಒಂದು ದೇಶವಾಗಿ ರೂಪುಗೊಳ್ಳಲು ಯತ್ನಿಸುತ್ತೇವೆ. ನಮ್ಮ ಧ್ಯೇಯಗಳನ್ನು ಸಾಧಿಸುವ ಮಾರ್ಗ ಮತ್ತು ವಿಧಾನಗಳನ್ನು ಕಂಡುಕೊಳ್ಳುತ್ತೇವೆ ” ಎಂದು ಹೇಳುತ್ತಾರೆ.

ಅಂಬೇಡ್ಕರ್ ದೃಷ್ಟಿಯಲ್ಲಿ ಜಾತಿ ಪೀಡಿತ ಸಮಾಜದಲ್ಲಿ ರಾಷ್ಟ್ರದ ಪರಿಕಲ್ಪನೆ ಮೂಡುವುದು ಅಸಾಧ್ಯ. ಜಾತಿಗಳು ರಾಷ್ಟ್ರವಿರೋಧಿ ನೆಲೆಗಳು ಎಂದು ಅಂಬೇಡ್ಕರ್ ಯಾವುದೇ ಅನುಮಾನವಿಲ್ಲದೆ ಹೇಳುತ್ತಾರೆ. ಏಕೆಂದರೆ ಜಾತಿ ಸಾಮಾಜಿಕ ಜೀವನದಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುತ್ತದೆ. ವಿಭಿನ್ನ ಜಾತಿಗಳ ನಡುವೆ ಅಸೂಯೆ ಮತ್ತು ದ್ವೇಷ ಹುಟ್ಟಿಸುವ ಜಾತಿ ಪ್ರಜ್ಞೆ ರಾಷ್ಟ್ರ ವಿರೋಧಿ ಎಂದು ಅಂಬೇಡ್ಕರ್ ಭಾವಿಸುತ್ತಾರೆ. ಈ ಜಾತಿ ಪ್ರಜ್ಞೆ ಹಿಂದೂ ರಾಷ್ಟ್ರದ ಕಲ್ಪನೆಯನ್ನೇ ಭಂಗಗೊಳಿಸುತ್ತದೆ. ಹಿಂದೂ ಅಸ್ಮಿತೆ ಕೇವಲ ಹಿಂದು ಮುಸ್ಲಿಂ ಕಲಹಗಳ ಸಂದರ್ಭದಲ್ಲಿ ಪ್ರಸ್ತುತವಾಗುತ್ತವೆ. ಇಲ್ಲವಾದಲ್ಲಿ ಈ ಜಾತಿಗಳ ಸಂತೆಯಲ್ಲಿ ಐಕ್ಯತೆ, ಸಹಕಾರ ಅಥವಾ ಸಾಮುದಾಯಿಕ ಪ್ರಜ್ಞೆ ಇರಲು ಸಾಧ್ಯವೇ ಇಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ.

ರಾಷ್ಟ್ರೀಯತೆ ಮತ್ತು ಸಾಂವಿಧಾನಿಕ ಪ್ರಜಾತಂತ್ರದ ಮತ್ತೊಂದು ವಿಚಾರ, ಅಲ್ಪಸಂಖ್ಯಾತರ ಹಕ್ಕುಗಳನ್ನು ಕುರಿತು ಅಂಬೇಡ್ಕರ್ ವ್ಯಾಪಕವಾಗಿ ಅಧ್ಯಯನ ನಡೆಸಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ರಾಜ್ಯಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ 1947ರ ಮಾರ್ಚ್ 24ರಂದು , ಸಂವಿಧಾನ ರಚನಾ ಮಂಡಲಿಯ ಸಲಹಾ ಸಮಿತಿ ಮೂಲಭೂತ ಹಕ್ಕುಗಳ ಬಗ್ಗೆ ರಚಿಸಿದ್ದ ಉಪಸಮಿತಿಗೆ ಸಲ್ಲಿಸಿದ ತಮ್ಮ ಮನವಿ ಪತ್ರದಲ್ಲಿ ಅಂಬೇಡ್ಕರ್ ಬಹುಸಂಖ್ಯಾತವಾದವನ್ನು ಕಟುವಾಗಿ ಖಂಡಿಸುತ್ತಾರೆ. “ ದುರಾದೃಷ್ಟವಶಾತ್ ಭಾರತದಲ್ಲಿನ ಅಲ್ಪಸಂಖ್ಯಾತರ ಪಾಲಿಗೆ ಭಾರತೀಯ ರಾಷ್ಟ್ರೀಯತೆ ಹೊಸ ತತ್ವವನ್ನೇ ಸೃಷ್ಟಿಸಿದ್ದು ಈ ತತ್ವದ ಅನುಸಾರ ಬಹುಸಂಖ್ಯಾತರ ಇಚ್ಚಾನುಸಾರ ಬುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಆಡಳಿತ ನಡೆಸಲು ಸಾಧ್ಯವಾಗುವಂತಿದೆ. ಅಧಿಕಾರವನ್ನು ಹಂಚಿಕೊಳ್ಳುವ ಅಲ್ಪಸಂಖ್ಯಾತರ ಆಗ್ರಹವನ್ನೇ ಕೋಮುವಾದ ಎಂದು ಪರಿಗಣಿಸಲಾಗುತ್ತದೆ. ಬಹುಸಂಖ್ಯಾತರು ಆಡಳಿತ ವ್ಯವಸ್ಥೆಯ ಮೇಲೆ ಸ್ಥಾಪಿಸುವ ಅಧಿಪತ್ಯವನ್ನು ರಾಷ್ಟ್ರೀಯತೆ ಎನ್ನಲಾಗುತ್ತದೆ ” ಎಂದು ಅಂಬೇಡ್ಕರ್ ಈ ಮನವಿ ಪತ್ರದಲ್ಲಿ ಪ್ರತಿಪಾದಿಸುತ್ತಾರೆ.

ಭಾರತವನ್ನು ಪ್ರತಿನಿಧಿಸುವ ಧಾರ್ಮಿಕ, ಭಾಷಿಕ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಅಪಾರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ನಡುವೆ ಅನೇಕ ಕಂದಕಗಳನ್ನು ಕಾಣಬಹುದು. ರಾಷ್ಟ್ರ ನಿರ್ಮಾಣದ ಯಾವುದೇ ಪ್ರಯತ್ನಕ್ಕೆ ಬಿಜೆಪಿ ಅನುಸರಿಸುತ್ತಿರುವ ಹಿಂದೂ-ಹಿಂದಿ-ಹಿಂದುಸ್ತಾನ ನೀತಿ ಅಪಾಯಕಾರಿಯಾಗಲೂಬಹುದು. ಈ ಅಪಾಯದ ಬಗ್ಗೆ ತಮ್ಮ ದೂರದರ್ಶಿತ್ವದಿಂದ ಅಂಬೇಡ್ಕರ್ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದರು. “ ಹಿಂದೂ ರಾಜ್ ಸಾಕಾರಗೊಳ್ಳುವುದೇ ಆದರೆ ಈ ದೇಶಕ್ಕೆ ಅದು ವಿನಾಶಕಾರಿಯಾಗಿ ಪರಿಣಮಿಸುತ್ತದೆ. ಹಿಂದೂಗಳು ಏನಾದರೂ ಹೇಳಲಿ, ಹಿಂದೂ ಧರ್ಮ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳಿಗೆ ಮಾರಕವಾಗುತ್ತದೆ. ಹಿಂದೂ ಧರ್ಮ ಪ್ರಜಾತಂತ್ರ ವ್ಯವಸ್ಥೆಗೆ ಹೊಂದಾಣಿಕೆಯಾಗುವುದಿಲ್ಲ. ಹಿಂದೂ ರಾಜ್ ಸ್ಥಾಪನೆಯಾಗುವುದನ್ನು ಹೇಗಾದರೂ ಮಾಡಿ ತಡೆಗಟ್ಟಲೇಬೇಕು ” ಎಂದು ಅಂಬೇಡ್ಕರ್ ಹೇಳುತ್ತಾರೆ.

ಇಂದು ಮೋದಿ ಸರ್ಕಾರ ಭಾರತವನ್ನು ಹಿಂದೂ ರಾಷ್ಟ್ರ ಅಥವಾ ಹಿಂದೂ ಪ್ರಭುತ್ವ ಎಂದು ಘೋಷಿಸಲು ಕ್ಷಿಪ್ರ ಕ್ರಾಂತಿಗೆ ಪ್ರಯತ್ನಿಸಿಲ್ಲವಾದರೂ ಈ ನಿಟ್ಟಿನಲ್ಲಿ ದೇಶವನ್ನು ಕೊಂಡೊಯ್ಯಲು ಸರ್ವಪ್ರಯತ್ನಗಳನ್ನೂ ಮಾಡುತ್ತಿರುವುದು ಸ್ಪಷ್ಟ. ಶಾಸನಸಭೆಯ ವ್ಯಾಪ್ತಿಯಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯವೇ ಇಲ್ಲದಂತೆ ಮಾಡಲಾಗುತ್ತಿದೆ. ಈ ರಾಜಕೀಯ ಪರಮಾಧಿಪತ್ಯಕ್ಕೆ ಪೂರಕವಾಗಿ ಎಲ್ಲೆಡೆ ಭೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಆಹಾರದಿಂದ ಜೀವನ ಶೈಲಿಯವರೆಗೆ, ಶಿಕ್ಷಣ ಮತ್ತು ಸಂಸ್ಕøತಿಯ ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಮಾರಣಾಂತಿಕ ಆಕ್ರಮಣ ನಡೆಯುತ್ತಿದೆ. ಈ ಆಕ್ರಮಣಕಾರಿ ಬಹುಸಂಖ್ಯಾತ ಆಡಳಿತ ವ್ಯವಸ್ಥೆ ಅಷ್ಟೇ ದಲಿತ ವಿರೋಧಿಯೂ ಆಗಿದ್ದು ಬಡಜನತೆಯ ವಿರೋಧಿಯೂ ಆಗಿದೆ.

ಭಾರತದಲ್ಲಿ ಸಾಂವಿಧಾನಿಕ ಪ್ರಜಾತಂತ್ರ ಕರಾಳ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಒಂದು ಪ್ರಬಲ ಹೋರಾಟವನ್ನು ರೂಪಿಸುವುದು ಅತ್ಯವಶ್ಯವಾಗಿದೆ. ಫ್ಯಾಸಿಸ್ಟ್ ಆಕ್ರಮಣವನ್ನು ಪ್ರತಿಯೊಂದು ಹಂತದಲ್ಲೂ ವಿರೋಧಿಸಿ ಹೋರಾಡುವ ಮೈತ್ರಿಕೂಟದ ರಚನೆ ಇಂದಿನ ತುರ್ತು ಅಗತ್ಯತೆಯಾಗಿದೆ. ಇದು ಕೇವಲ ಅಧಿಕಾರಾರೂಢ ಪಕ್ಷಗಳ ಪದಚ್ಯುತಿಯ ಉದ್ದೇಶ ಹೊಂದಿರಬೇಕಿಲ್ಲ. ಬದಲಾಗಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತ್ರಿವಳಿ ತತ್ವಗಳನ್ನಾಧರಿಸಿ ಭಾರತದ ಮರುನಿರ್ಮಾಣ ಮಾಡುವ ಉದ್ದೇಶ ಹೊಂದಿರಬೇಕು. ಆಗಲೇ ಅಂಬೇಡ್ಕರರ ಕಲ್ಪನೆಯನ್ನು ಸಾಕಾರಗೊಳಿಸಿದಂತಾಗುತ್ತದೆ.

ಅಂಬೇಡ್ಕರ್ ನಿಖರವಾಗಿ ಎತ್ತಿ ತೋರಿದ್ದ ವೈರುಧ್ಯಗಳು ಸಾಕಾರಗೊಳ್ಳುತ್ತಿರುವುದರಿಂದಲೇ ದೇಶ ಇಂದು ತೀವ್ರ ಸಂಕಷ್ಟ ಮತ್ತು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಸಂಘಪರಿವಾರ ಮತ್ತು ಬಿಜೆಪಿಯ ಫ್ಯಾಸಿಸ್ಟ್ ಶಕ್ತಿಗಳು ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಲು ಶ್ರಮಿಸುತ್ತವೆ. ತನ್ಮೂಲಕ ತಮ್ಮ ಕಾರ್ಪೋರೇಟ್ ಕೋಮುವಾದಿ ಕಾರ್ಯಸೂಚಿಯನ್ನು ಪ್ರಜೆಗಳ ಮೇಲೆ ಹೇರಲು ಯತ್ನಿಸುತ್ತವೆ. ಈ ಫ್ಯಾಸಿಸ್ಟ್ ಸವಾಲನ್ನು ಮೆಟ್ಟಿ ನಿಲ್ಲುವುದು ಎಂದರೆ ಒಂದು ಪುರೋಗಾಮಿ ದೃಷ್ಟಿಕೋನದ, ನಿಖರ ಪ್ರಜಾಸತ್ತಾತ್ಮಕ ನಿರ್ಣಯಕ್ಕೆ ನಾವು ಕಟಿಬದ್ಧರಾಗಬೇಕಿದೆ. ಅಂಬೇಡ್ಕರ್ ಅವರ ವೈಚಾರಿಕ ಹಾಗೂ ತೀವ್ರಗಾಮಿ ಪ್ರತಿಪಾದನೆಗಳು ಅಮೂಲ್ಯವಾಗಿದ್ದು ಭಾರತದ ಮರುನಿರ್ಮಾಣ ಮತ್ತು ನೈಜ ಪ್ರಜಾತಂತ್ರದ ತಳಹದಿಯ ನಿರ್ಮಾಣ ಕಾರ್ಯದಲ್ಲಿ ಈ ಪ್ರತಿಪಾದನೆಗಳು ನಮ್ಮ ಬಲವರ್ಧನೆಗೆ ಸಹಾಯಕವಾಗುತ್ತದೆ.

Leave a Reply

Your email address will not be published.