ಮೊಬೈಲು ನಮ್ಮೊಳಗಿನ ಮಾತು ಕಸಿದುಕೊಳ್ಳುತ್ತಿದೆಯೇ?

- ಶರತ್ ಹೆಚ್. ಕೆ

taaytanaಮೊನ್ನೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದೆ. ನನ್ನನ್ನೂ ಒಳಗೊಂಡಂತೆ ಬಹುತೇಕ ಎಲ್ಲರೂ ಸಮಯ ನೂಕಲು ತಮ್ಮ ಮೊಬೈಲು ಅಥವಾ ನಿದ್ರೆಯ ಮೊರೆ ಹೋಗಿದ್ದರು. ಎಲ್ಲೋ ಕೆಲವರು ಮಾತ್ರ ಪರಸ್ಪರ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು. ಪ್ರಯಾಣದೊಂದಿಗೆ ಹುಟ್ಟಿಕೊಳ್ಳುತ್ತಿದ್ದ ಹೊಸ ಒಡನಾಟಗಳಿಗೆಲ್ಲ ಮೊಬೈಲು ಎಳ್ಳು ನೀರು ಬಿಡುತ್ತಿದೆಯೇ ಎಂಬ ಪ್ರಶ್ನೆಯೊಂದಿಗೆ ಮನಸ್ಸು ಗುದ್ದಾಡುವ ಹೊತ್ತಿಗೆ ಸರಿಯಾಗಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಪ್ಪ-ಮಗನ ನಡುವಿನ ಮಾತುಕತೆ ಕಿವಿಗೆ ಬೀಳಲಾರಂಭಿಸಿತು. ಐದಾರು ವರ್ಷದ ಪುಟ್ಟ ಹುಡುಗ, ‘ಪಪ್ಪಾ ಒನ್ಗೆ ಅರ್ಜೆಂಟ್ ಆಗ್ತಿದೆ’ ಅಂತ ತನ್ನ ಅಳಲು ತೋಡಿಕೊಳ್ಳಲಾರಂಭಿಸಿದ್ದ.

‘ಇನ್ನೇನು ಥರ್ಟಿ ಮಿನಿಟ್ಸ್ ಅಷ್ಟೇ ಪುಟ್ಟ’ ಎಂಬ ಅಪ್ಪನ ಮಾತಿಗೆ ಒಂದೆರಡು ನಿಮಿಷವಷ್ಟೆ ಸುಮ್ಮನಿದ್ದು ಮತ್ತೆ ‘ಪಪ್ಪಾ ತಡ್ಯೋಕೆ ಆಗ್ತಿಲ್ಲ’ ಅಂತ ಹೇಳುವ ದನಿಯಲ್ಲೇ ಅಳುವ ಸೂಚನೆ ನೀಡಿದ. ‘ಇರು ಪುಟ್ಟ, ಡ್ರೈವರ್-ಕಂಡಕ್ಟರ್ ಅಂಕಲ್ಗಳ್ಗೆ ಬಸ್ ನಿಲ್ಸೋಕೆ ರಿಕ್ವೆಸ್ಟ್ ಮಾಡ್ಕೊತೀನಿ’ ಅಂತೇಳಿ ಡ್ರೈವರ್ ಬಳಿ ಹೋದ್ರು. ಮೊದಲೇ ಟ್ರಾಫಿಕ್ಕು, ಟೋಲ್ ಗೇಟುಗಳ ಎದುರು ಕಂಡ ವಾಹನಗಳ ಉದ್ದನೆ ಸಾಲುಗಳಿಂದ ರೋಸಿ ಹೋಗಿದ್ದ ಡ್ರೈವರ್, ‘ಇದುನ್ನೇನು ನಿಮ್ಮನೆ ಅಂದ್ಕಂಡಿದ್ದೀರೇನ್ರಿ? ಹಿಂದಿನ ಸ್ಟಾಪ್ನಲ್ಲಷ್ಟೆ ಹತ್ತಿದ್ದೀರಿ. ಅಷ್ಟೂ ಗೊತ್ತಾಗಲ್ವ’ ಅಂತ ಮಂಗಳಾರತಿ ಎತ್ತಿದ ಮೇಲೆ, ‘ಮುಂದೆ ಇಳುಸ್ತೀನಿ. ಡೋರ್ ಹತ್ರ ಹೋಗಿ’ ಅಂತ ಸೂಚಿಸಿದರು. ಡ್ರೈವರ್ ಸಿಟ್ಟು ತಣಿಸಲು ಮುಂದಾದ ಕಂಡಕ್ಟರ್, ‘ಪಾಪ ಪುಟ್ಟ ಮಕ್ಳಲ್ವ ಹೋಗ್ಲಿ ಬಿಡಿ. ಅವು ಹೇಳೋದ್ ಸರ್ಯಾಗಿ ಹೇಳ್ಬೇಕಲ್ಲ’ ಅಂತಂದ್ರು.

ತನ್ನ ನಂಬರ್ ಒನ್ ಪ್ರಾಬ್ಲಮ್ ರಸ್ತೆ ಬದಿಯಲ್ಲಿ ಪರಿಹರಿಸಿಕೊಂಡು ಬಂದ ಪುಟ್ಟ ಹುಡುಗ, ‘ಪಪ್ಪಾ ಈಗ ಫುಲ್ ಫ್ರೀಯಾಯ್ತು’ ಅಂತಂದು ನಗು ಬೀರಿದ. ಮಗನ ದೆಸೆಯಿಂದ ಪೀಕಲಾಟ ಅನುಭವಿಸಿದ ತಂದೆ, ‘ಪುಟ್ಟ ನೋಡು ಇನ್ಮೇಲೆ ಈ ಥರ ಮಾಡ್ಬಾರ್ದು. ನಿಂಗೆ ಟಾಯ್ಲೆಟ್ ಮಾಡ್ಬೇಕು ಅನ್ಸಿದ್ರೆ ಅದ್ನ ಬಸ್ ಹತ್ತುವುದಕ್ಕಿಂತ ಮೊದ್ಲೇ ಹೇಳ್ಬೇಕು ಆಯ್ತಾ’ ಅಂತ ತಿಳುವಳಿಕೆ ನೀಡಿದರು. ‘ಓಕೆ ಪಪ್ಪಾ, ಆದ್ರೆ ಅರ್ಜೆಂಟ್ ಆದ್ಮೇಲೆ ಅಲ್ವಾ ನಮ್ಗೆ ಗೊತ್ತಾಗೋದು? ಮೊದ್ಲೆ ಹೇಳೋದು ಹೇಗೆ?’ ಎಂದು ಗೊಣಗಿಕೊಳ್ಳುತ್ತಲೇ ಆ ವಿಷಯಕ್ಕೆ ಪೂರ್ಣವಿರಾಮವಿಟ್ಟು ತನ್ನೊಳಗೆ ಆಯಾ ಕ್ಷಣಕ್ಕೆ ಮೂಡುವ ಪ್ರಶ್ನೆಗಳಿಗೆಲ್ಲ ತನ್ನ ಅಪ್ಪನಿಂದ ಉತ್ತರ ಪಡೆದುಕೊಳ್ಳಲಾರಂಭಿಸಿದ. ಬಸ್ಸು ಸಾಗುವ ರಸ್ತೆ ಬದಿಯಲ್ಲಿದ್ದ ‘ಪವರ್ ಗ್ರಿಡ್’ ನೋಡಿ ‘ಪಪ್ಪಾ ಇದೇನು?’ ಅಂದ.

‘ನಮ್ಮನೆ ಲೈಟ್ ಹತ್ತೋಕೆ ಕರೆಂಟ್ ಬೇಕಲ್ಲ ಅದು ಇಲ್ಲಿಂದಲೇ ಸಪ್ಲೈ ಆಗೋದು ಪುಟ್ಟ’ ಎಂದು ಅವರಪ್ಪ ಉತ್ತರಿಸುವ ಪ್ರಯತ್ನ ಮಾಡಿದ್ರು. ‘ಹಾಗಾದ್ರೆ ಇಲ್ಲಿಂದ ಕರೆಂಟ್ನ ಡಬ್ಬಿಗೆ ತುಂಬಿ ಮನೆಗೆ ಕಳುಹಿಸ್ತಾರ ಪಪ್ಪಾ?’ ಎಂಬ ಪ್ರಶ್ನೆ ಒಡ್ಡಿದ. ‘ಡಬ್ಬಿಗೆ ಕರೆಂಟ್ ತುಂಬೋಕೆ ಆಗಲ್ಲ ಪುಟ್ಟ. ಅಲ್ಲಿ ಲೈಟ್ ಕಂಬ ಕಾಣ್ತಿದವಲ್ಲ ಅದರಲ್ಲಿ ವೈರ್ಗಳಿದವಲ್ಲ ಅದ್ರು ಮೂಲಕ ಇಲ್ಲಿಂದ ಮನೆಗೆ ಕರೆಂಟ್ ಬರುತ್ತೆ ಗೊತ್ತಾಯ್ತ’ ಎಂಬ ಅಪ್ಪನ ಉತ್ತರಕ್ಕೆ ಸಮಾಧಾನ ಗೊಂಡಿರುವುದನ್ನು ಖಾತ್ರಿ ಪಡಿಸಲು ‘ಓಕೆ ಪಪ್ಪಾ’ ಅಂತಂದು ತಲೆಯಾಡಿಸಿದ. ಇದೇ ಧಾಟಿಯ ಒಂದಷ್ಟು ಮುಗ್ಧ ಪ್ರಶ್ನೆಗಳನ್ನು ಕೇಳಿ ತನ್ನ ತಂದೆಯಿಂದ ಉತ್ತರ ಪಡೆದುಕೊಂಡ ನಂತರ ಆ ಹುಡುಗ ಕೇಳಿದ ಪ್ರಶ್ನೆಯೊಂದು ನನ್ನ ಕಿವಿ ನಿಮಿರುವಂತೆ ಮಾಡಿತು.

‘ಪಪ್ಪಾ ಮನಸ್ಸಲ್ಲೇ ಮಾತಾಡ್ಕೊಬಹುದಾ?’

‘ಹೌದು ಪುಟ್ಟ?’

‘ಏನ್ ಬೇಕಾದ್ರು ಮಾತಾಡ್ಕೊಬಹುದಾ?’

‘ಹೌದು, ಏನ್ ಬೇಕಾದ್ರು ಮಾತಾಡ್ಕೊಬಹುದು’

school2‘ಮನಸ್ಸಲ್ಲಿ ಮಾತಾಡೋದು ಹೇಗೆ ಅಂತ ಹೇಳು ಪಪ್ಪಾ’

‘ಈಗ ನೀನು ಮನೆಗೆ ಹೋದ್ಮೇಲೆ ಹೋಂ ವರ್ಕ್ ಮಾಡ್ಬೇಕು ಇಲ್ಲಾಂದ್ರೆ ಮಿಸ್ ಬಯ್ತಾರೆ’ ಅಂತೆಲ್ಲ ನಂಗೆ ಹೇಳ್ದಲೇ ನಿನ್ನೊಳಗೆ ನೀನೆ ಅಂದ್ಕೊಳ್ತಿರ್ತಿಯಲ್ಲ, ಅದನ್ನೇ ಮನಸ್ಸಿನೊಳಗೆ ಮಾತಾಡೋದು ಅನ್ನೋದು ಪುಟ್ಟ’

ಆ ಹುಡುಗನ ಪ್ರಶ್ನೆ ನನ್ನೊಳಗೂ ಒಂದಷ್ಟು ಪ್ರಶ್ನೆಗಳನ್ನು ಕೇಳಲಾರಂಭಿಸಿತು.

‘ನಾವಿಂದು ಮನಸ್ಸಲ್ಲಿ ಮಾತಾಡೋದು ಕಮ್ಮಿ ಮಾಡಿದ್ದೀವಾ?’ ‘ತೋರಿಕೆಯ ಮಾತು ಮತ್ತು ಬದುಕಿಗಷ್ಟೇ ಮನ್ನಣೆ ನೀಡುತ್ತಿದ್ದೇವಾ?’ ‘ಮನಸ್ಸಿನ ಮಾತು ಕೇಳುವ ವ್ಯವಧಾನ ಕಳೆದುಕೊಳ್ಳುತ್ತಿದ್ದೇವಾ?’ ‘ಮೊಬೈಲು ಲ್ಯಾಪ್ಟಾಪ್ ನೋಟ್ಬುಕ್ಕು ಐಪಾಡುಗಳೆಂಬ ವಸ್ತುಗಳು ನಮ್ಮೊಳಗಿನ ಮಾತು ಕಸಿದುಕೊಳ್ಳುತ್ತಿವೆಯಾ?’

ಪುಟಾಣಿ ಕೇಳಿದ ಆ ಒಂದು ಪ್ರಶ್ನೆಯ ಮನಸ್ಸಿನೊಳಗೆ ಇನ್ನೆಷ್ಟು ಪ್ರಶ್ನೆಗಳಿದ್ದವೋ? ಆ ಅಪ್ಪನೂ ಮಗನೂ ಮೊಬೈಲು ಮೋಹಿತರಾಗಿದ್ದರೆ, ಅವರಿಬ್ಬರ ನಡುವಿನ ಒಂದೊಳ್ಳೆ ಮಾತುಕತೆ ನನ್ನಂತಹವನ ಕಿವಿಗೆ ಬೀಳುವ ಸಾಧ್ಯತೆ ಇತ್ತೆ? ಮೊಬೈಲು ಮನಸ್ಸಿನ ಮಾತು ಕಸಿದುಕೊಳ್ಳುವುದರೊಂದಿಗೆ ಮಕ್ಕಳ ಪ್ರಶ್ನೆಗಳನ್ನೂ ಪಕ್ಕಕ್ಕೆಸೆಯುವಂತೆ ಬುದ್ಧಿವಂತ ಜಗತ್ತನ್ನು ಪುಸಲಾಯಿಸುತ್ತಿದೆಯೇ?

3 Responses to "ಮೊಬೈಲು ನಮ್ಮೊಳಗಿನ ಮಾತು ಕಸಿದುಕೊಳ್ಳುತ್ತಿದೆಯೇ?"

 1. Manju.N  January 21, 2017 at 3:50 pm

  nice story bro

  Reply
 2. Praveen salagar  January 21, 2017 at 4:31 pm

  ಸರ್ ನಮಸ್ಕಾರ ದಯವಿಟ್ಟು ಬಡ ಕುಟುಂಬದವರಿಗೆ ಸಹಾಯಮಾಡೊಣ.plz plz plz plz plz sir….

  Reply
 3. shivamagouda  February 15, 2017 at 12:52 pm

  Nice story sir

  Reply

Leave a Reply

Your email address will not be published.