ಮೇ ದಿನವನ್ನು  ನೆನೆಯುತ್ತಾ

 ಅನು: ಶಿವಸುಂದರ್

“On May 1, 1886, Chicago unionists, reformers, socialists,anarchists, and ordinary workers combined to make the city the center of the national movement for an eight-hour day. Between April 25 and May 4, workers attended scores of meetings and paraded through the streets at least 19 times. On Saturday, May 1, 35,000 workers walked off their jobs. Tens of thousands more, both skilled and unskilled, joined them on May 3 and 4. Crowds traveled from workplace to workplace urging fellow workers to strike. Many now adopted the radical demand of eight hours’ work for ten hours’ pay. Police clashed with strikers at least a dozen times, three with shootings.”

eightಚಿಕಾಗೋದ ಹೇ ಮಾರುಕಟ್ಟೆಯಲ್ಲಿ ಬಲಿಯಾದ ಹುತಾತ್ಮರನ್ನು ಗೌರವಿಸೋಣ. ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಸೌಹಾರ್ದತೆಗೆ ಮರಳಿ ಜೀವ ತುಂಬೋಣ.

ಬಂಡವಾಳಶಾಹಿ ಆಳುವವರ್ಗಗಳು ಸತತ ನಾಲಕ್ಕು ದಶಕಗಳಿಂದ ಜಗತ್ತಿನಾದ್ಯಂತ ನಡೆಸುತ್ತಿರುವ ದಾಳಿಯಿಂದಾಗಿ ಕಾರ್ಮಿಕ ವರ್ಗವು ತನ್ನ ವೀರೋಚಿತ ಇತಿಹಾಸವನ್ನೇ ಮರೆತುಬಿಡುವಂತೆ ಮಾಡಿಬಿಟ್ಟಿದೆ. ಇಲ್ಲದಿದ್ದರೆ ಮೇ ದಿನದ ಹುಟ್ಟನ್ನು ಕಾರ್ಮಿಕ ವರ್ಗವು ಹೇಗೆ ತಾನೇ ಮರೆಯಲು ಸಾಧ್ಯ?

ಪ್ರಾಯಶಃ ಈ ಸಂಕಷ್ಟದ ಕಾಲದಲ್ಲಿ ಕಾರ್ಮಿಕ ಚಳವಳಿಯೊಳಗೂ ಈ ಇತಿಹಾಸವನ್ನು ಹೇಳಿಕೊಡುವುದು ನಿಂತುಹೋಗಿರಬೇಕು. ವಾಸ್ತವವಾಗಿ, ಕಾರ್ಮಿಕ ವರ್ಗವು ತನ್ನ ಸುದೀರ್ಘ ವರ್ಗ ಸಂಘರ್ಷದಲ್ಲಿ  ರೂಢಿಸಿಕೊಂಡ ಪ್ರತಿರೋಧದ ಸಂಸ್ಕೃತಿಯು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿರುವ ಇಂದಿನ ಸಂದರ್ಭದಲ್ಲೇ ಕಾರ್ಮಿಕ ವರ್ಗದ ಕ್ರಾಂತಿಕಾರಿ ಇತಿಹಾಸದ ನೆನಪಿನ ಮೇಲೆ ದೀರ್ಘ ದಮನವೂ ನಡೆಯುತ್ತಿದೆ. ಆಗಲೂ-೧೯ನೇ ಶತಮಾನದಲ್ಲಿ- ಇಂದಿನ ದಿನಗಳಂತೆ ಉದ್ಯೋಗಿಯಾಗಿರುವುದಕ್ಕಿಂತ ಭೀಕರವಾದದ್ದೆಂದರೆ ನಿರುದ್ಯೋಗಿಯಾಗಿರುವುದು ಎಂಬಂಥ ಸ್ಥಿತಿಯೇ ಇತ್ತು. ಇಂದಿನಂತೆ ಆಗಲೂ ಬಂಡವಾಳಿಗರಿಗೆ ಕಾರ್ಮಿಕರೆಂದರೆ ಕೇವಲ ಒಂದು ಉತ್ಪಾದನಾ ವೆಚ್ಚವಷ್ಟೇ ಆಗಿದ್ದರು. ಆದರೆ ಆಗ ಕಾರ್ಮಿಕರು ಭಯ ತೊರೆದು ಕೆಲಸದ ಅವಧಿಯನ್ನು ಎಂಟುಗಂಟೆಗಳಿಗೆ ಮಾತ್ರ ಸೀಮಿತಗೊಳಿಸಬೇಕೆಂಬ ಹಕ್ಕನ್ನು ಒಳಗೊಂಡಂತೆ ಇತರ ಹಕ್ಕುಗಳಿಗಾಗಿ ವೀರೋಚಿತವಾಗಿ  ಹೋರಾಡಿದರು.

೧೮೮೬ರ ಮೇ ೧ರ ಮೊದಲ ಮೇ ದಿನದಂದು ಎಂಟುಗಂಟೆ ಕೆಲಸ ಅವಧಿಯನ್ನು ಒತ್ತಾಯಿಸಿ ಉತ್ತರ ಅಮೆರಿಕಾದ ಲಕ್ಷಾಂತರ ಕಾರ್ಮಿಕರನ್ನು ಸಂಘಟಿಸಲಾಯಿತು. ಆ ದಿನಗಳಲ್ಲಿ ಚಿಕಾಗೋ ನಗರವು ಕಾರ್ಮಿಕ ವರ್ಗದ ಸಂಘಟನೆಗಳ ಕೇಂದ್ರವಾಗಿತ್ತು. ಕಾರ್ಮಿಕ ಚಳವಳಿಯಲ್ಲಿನ ಎಡಪಂಥೀಯರ ಹೃದಯವಾಗಿತ್ತು. ಅನಾರ್ಕಿಸ್ಟ್ ಚಿಂತನೆಯ (ಅರಾಜಕತಾವಾದಿ)ಅಂತರರಾಷ್ಟ್ರೀಯ ಶ್ರಮಜೀವಿಗಳ ಸಂಘಟನೆಗಳ ಒಕ್ಕೂಟವು ಅದರ ಮುಂಚೂಣಿಯಲ್ಲಿತ್ತು. ನಿರೀಕ್ಷೆಯಂತೆ ಈ ಕಾರ್ಮಿಕರ ಚಳವಳಿಯು ಬಂಡವಾಳಶಾಹಿಗಳ ಸಂಘಟಿತ ವಿರೋಧವನ್ನು ಎದುರಿಸಬೇಕಿತ್ತು. ಅವರಿಗೆ ವ್ಯಾಪಾರಿ ಮಾಧ್ಯಮ ಸಂಸ್ಥೆಗಳ ಮತ್ತು ಕ್ರೂರ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಬೆಂಬಲವಿತ್ತು.  ೧೮೮೬ರ ಮೇ ತಿಂಗಳಲ್ಲಿ ಚಿಕಾಗೋದ ಹೇ ಮಾರುಕಟ್ಟೆಯ ಚೌಕದ ಬಳಿ ಬಾಂಬ್ ಒಂದನ್ನು ಸ್ಫೋಟಿಸಿದರೆಂಬ ಸುಳ್ಳು ಆರೋಪದ ಮೇಲೆ ನಾಲಕ್ಕು ಅಮಾಯಕರನ್ನು ಗಲ್ಲಿಗೇರಿಸಲಾಯಿತು. ಅವರಲ್ಲಿ ಅರಾಜಕತಾವಾದಿ ಸಿದ್ಧಾಂತದ ಆಗಸ್ಟ್ ಸ್ಪೈಸ್ ಮತ್ತು ಆಲ್ಬರ್ಟ್ ಪಾರ್ಸನ್ಸ್ ಎಂಬ ಇಬ್ಬರು ಇದ್ದರು. ಅವರು ಎಸಗಿದ ಒಂದೇ ಅಪರಾಧವೆಂದರೆ ಎಂಟುಗಂಟೆ ಯ ದುಡಿತವನ್ನು ಒಳಗೊಂಡಂತೆ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದ ಕ್ರಾಂತಿಕಾರಿ ಕಾರ್ಮಿಕ ಸಂಘಟನೆಯ ಭಾಗವಾಗಿದ್ದದ್ದು.

ಆ ವೇಳೆಗಾಗಲೇ ಹಲವಾರು ರಾಜ್ಯಗಳಲ್ಲಿ ಎಂಟುಗಂಟೆಯ ದುಡಿತವು ಶಾಸನವೇ ಆಗಿದ್ದರೂ ಬಂಡವಾಳಿಗರು ಅದರ ಅನುಷ್ಠಾನವನ್ನು ವಿರೋಧಿಸುತ್ತಲೇ ಬಂದಿದ್ದರು. ಶಾಸಕರು ಮತ್ತು ಕಾನೂನು ಪಾಲಕರು ಈ ಬಹಿರಂಗ ಕಾನೂನು ಉಲ್ಲಂಘನೆಯನ್ನು ನಿರ್ಲಕ್ಷಿಸುತ್ತಲೇ ಹೋದರು. ಹೀಗಾಗಿ ಕಾರ್ಮಿಕರಿಗೆ ಮೇ ೧ ರಿಂದ ಮುಷ್ಕರವನ್ನು ಹೂಡುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ವಕೀಲರು ಕಾರ್ಮಿಕರ ವಿರುದ್ಧ ಹೀಗೆ ಕೆಂಡಕಾರಿದರು:

ಕಾನೂನೇ ವಿಚಾರಣೆಗೊಳಗಾದಂತಾಗಿದೆ..ಅರಾಜಕತಾವಾದವು ವಿಚಾರಣೆಗೊಳಪಟ್ಟಿದೆ..ಈ ವ್ಯಕ್ತಿಗಳನ್ನು ಶಿಕ್ಷಿಸಿ ಗಲ್ಲಿಗೇರಿಸಿದರೆ ಮಾತ್ರ ಉಳಿದವರು ಇವರನ್ನು ಅನುಸರಿಸದಂತೆ ಮಾಡಬಹುದು. ಮತ್ತು ನಮ್ಮ ಸಮಾಜವನ್ನು ಮತ್ತು ನಮ್ಮ ಸಂಸ್ಥೆಗಳನ್ನು ಕಾಪಾಡಿಕೊಳ್ಳಬಹುದು.

ಆದರೆ ಗಲ್ಲಿಗೇರುವ ಮೂನ ಸ್ಪೈಸ್ ಹೀಗೆ ಎಚ್ಚರಿಸಿದರು:

ನಮ್ಮನ್ನು ಗಲ್ಲಿಗೇರಿಸುವ ಮೂಲಕ ಕಾರ್ಮಿಕ ಚಳವಳಿಯನ್ನು ದಮನ ಮಾಡಬಹುದೆಂದು ನೀವು ಭಾವಿಸಿದ್ದರೆ..ಯಾವ ಚಳವಳಿಯ ಮೂಲಕ ಬಡತನ ಮತ್ತು ಬಯಕೆಗಳ ಬೇಗುದಿಗಳಲ್ಲಿ ಬಳಲುತ್ತಾ ಶ್ರಮಿಸುತ್ತಿರುವ ಲಕ್ಷಾಂತರ ಶ್ರಮಜೀವಿಗಳು ವಿಮೋಚನೆಯನ್ನು ಕಾಣಬಯಸುತ್ತಾರೋ ಅಂಥಾ ಚಳವಳಿಯನ್ನು ನೀವು ನಮ್ಮನ್ನು ಗಲ್ಲಿಗೇರಿಸುವ ಮೂಲಕ ದಮನ ಮಾಡಬಹುದೆಂದು ನೀವು ಭಾವಿಸಿದ್ದರೆ..ಬನ್ನಿ.. ನಮ್ಮನ್ನು ಗಲ್ಲಿಗೇರಿಸಿ! ಇಲ್ಲಿ ನೀವು ಒಂದು ಕಿಡಿಯನ್ನು ನಂದಿಸಬಹುದು. ಆದರೆ ಅದೋ ಅಲ್ಲಿ, ಇಲ್ಲಿ, ನಿಮ್ಮ ಹಿಂದೆ, ನಿಮ್ಮ ಮುಂದೆ ..ಎಲ್ಲೆಲ್ಲೂ ಹೋರಾಟದ ಜ್ವಾಲೆಗಳು ಹಬ್ಬಿಕೊಳ್ಳಲಿವೆ. ಇದು ಭೂಮಿಯ ಒಳಗಿಂದ ಉಕ್ಕುತ್ತಿರುವ ಕಾಳ್ಗಿಚ್ಚು. ನೀವು ಅದನ್ನು ನಂದಿಸಲಾರಿರಿ.

iwwಆ ದಿನಗಳಲ್ಲಿ ಚಿಕಾಗೋ ಕಾರ್ಮಿಕರು ಚತುರ ನಾಯಕರನ್ನೂ, ಜೊತೆಗೆ ಸ್ಪೈಸ್ ಸಂಪಾದಕತ್ವದಲ್ಲಿದ್ದ  ಅರ್ಬೆತಿರ್-ಜೆತುಂಗ್ ಎಂಬ ದಿನಪತ್ರಿಕೆಯನ್ನೂ ಒಳಗೊಂಡಂತೆ ಸಕ್ರಿಯವಾಗಿದ್ದ ಎಡ ಒಲವಿನ ಮಾಧ್ಯಮದ ಬೆಂಬಲವನ್ನು ಹೊಂದಿದ್ದರು. ಅಂದಿನ ದಿನಗಳಲ್ಲಿ ಶ್ರೀಮಂತ ವರ್ಗದವರು ಕಾರ್ಮಿಕರನ್ನು ಅಪಾಯಕಾರಿ ವರ್ಗಗಳೆಂದು ಕರೆಯುತ್ತಿದ್ದರು. ಆದರೆ ವಿಷಾದದ ವಿಷಯವೆಂದರೆ ಇಂದು ಅಮೆರಿಕದ ಬಹುಪಾಲು ಕಾರ್ಮಿಕ ವರ್ಗ ಸಂಘಟನೆರಹಿತವಾದ ಕಾರ್ಮಿಕ ವರ್ಗವಾಗಿದೆ. ಅಷ್ಟು ಮಾತ್ರವಲ್ಲ ರಸ್ಟ್ ಬೆಲ್ಟ್ ಸ್ಟೇಟ್ಸ್  (ಹಿಂದೊಮ್ಮೆ ಪ್ರಬಲ ಕೈಗಾರಿಕೆಗಳನ್ನು ಹೊಂದಿದ್ದು ಆ ನಂತರದಲ್ಲಿ ಆರ್ಥಿಕ ಹಿಂದ್ಸರಿತದ ಕಾರಣದಿಂದಾಗಿ ಕೈಗಾರಿಕೆಗಳು ಮುಚ್ಚಿಕೊಂಡು ವಲಸೆ ಇನ್ನಿತ್ಯಾದಿ  ಆರ್ಥಿಕ ಹಿನ್ನೆಡೆಗೆ ಗುರಿಯಾದ ಉತ್ತರ ಅಮೆರಿಕಾದ ಮಹಾನ್ ಸರೋವರ ಮತ್ತು ವಾಯುವ್ಯ ಅಮರಿಕೆದ ನಡುವಿನ ಪ್ರದೇಶವನ್ನು ರಸ್ಟ್ ಬೆಲ್ಟ್ ಪ್ರದೇಶ- ತುಕ್ಕು ಹಿಡಿದ ಸಂಸ್ಥಾನಗಳು ಎಂದು ಬಣ್ಣಿಸಲಾಗುತ್ತದೆ- ಅನುವಾದಕನ ಟಿಪ್ಪಣಿ) ಎಂದು ಕರೆಸಿಕೊಳ್ಳಲ್ಪಡುವ ಅಯೋವಾ, ಮಿಚಿಗನ್, ಒಹಿಯೋ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ಪ್ರದೇಶಗಳ ಕಾರ್ಮಿಕರ ಓಟುಗಳಿಂದಲೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಡೋನಾಲ್ಡ್ ಟ್ರಂಪ್‌ನಂಥ ಜನಾಂಗೀಯವಾದಿ, ದುರಭಿಮಾನಿ ಸಂಕುಚಿತ ರಾಷ್ಟ್ರೀಯವಾದಿಯನ್ನು ಗೆಲ್ಲುವಂತೆ ಮಾಡಲು ಸಹಾಯ ಮಾಡಿತೆಂದು ಹೇಳಲಾಗುತ್ತದೆ.

ಟ್ರಂಪ್‌ನಂಥವರೇ ಇಂದು ಜಗತ್ತಿನ ಇತರೆಡಗಳಲ್ಲೂ ಮೇಲೇರುತ್ತಿದ್ದಾರೆ. ಫ್ರಾನ್ಸಿನ ನ್ಯಾಷನಲ್ ಫ್ರಂಟ್, ಬ್ರೆಕ್ಸಿಟ್ (ಬ್ರೆಕ್ಸಿಟ್-ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂದು ನಡೆದ ಚಳವಳಿ- ಅನುವಾದಕನ ಟಿಪ್ಪಣಿ) ಚಳವಳಿಗೆ ನಾಯಕತ್ವ ನೀಡಿದ ಯುನೈಟೆಡ್ ಕಿಂಗ್‌ಡಮ್‌ನ ಇಂಡಿಪೆಂಡೆಟ್ ಪಾರ್ಟಿ, ಇಟಲಿಯ ಫೈವ್ ಸ್ಟಾರ್ ಚಳವಳಿ (ಸಂಕುಚಿತ ರಾಷ್ಟ್ರೀಯವಾದಿ ಚಳವಳಿ-ಅನು), ಜರ್ಮನಿಯ ಪೆಡಿಗಾ (ಪಶ್ಚಿಮ ದೇಶಗಳಲ್ಲಿ ಇಸ್ಲಾಮಿನ ಪ್ರಭಾವವನ್ನು ವಿರೋಧಿಸಿ ಕಟ್ಟಲಾಗುತ್ತಿರುವ ಸಂಕುಚಿತ ರಾಷ್ಟ್ರೀಯವಾದಿ ಚಳವಳಿ- ಅನುವಾದಕನ ಟಿಪ್ಪಣಿ) ಮತ್ತದರ ಜೊತೆಗೆ ಅಲ್ಟರ್ನೇಟೀವ್ ಫಾರ್ ಜರ್ಮನಿಯೆಂಬ ನಿರಾಶ್ರಿತರ ವಿರೋಧಿ ಆಂದೋಲನಗಳು ಈ ವಿದ್ಯಮಾನಕ್ಕೆ ಕೆಲವು ಉದಾಹರಣೆಗಳಷ್ಟೆ.

ಭಾರತದಲ್ಲಿ ನರೇಂದ್ರಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸು ನಿಂತಿರುವುದೇ ತಾತ್ಕಾಲಿಕ ಅಥವಾ ಗುತ್ತಿಕೆ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವುದರ ಮೇಲೆ. ಈ ಗುತ್ತಿಗೆ/ತಾತ್ಕಾಲಿಕ ಕಾರ್ಮಿಕರು  ಖಾಯಂ ಕಾರ್ಮಿಕರಷ್ಟೇ ಕೆಲಸ ಮಾಡಿದರೂ ಅವರ ಕಾಲು ಭಾಗದಷ್ಟೂ ಸಂಬಳವೂ ದೊರೆಯುವುದಿಲ್ಲ. ಕೆಲಸದ ಭದ್ರತೆಯೂ ಇರುವುದಿಲ್ಲ. ಇದರ ಜೊತೆಗೆ ಅಲ್ಲಿ ಮಾಲೀಕರ ಕೈಗೊಂಬೆ ಕಾರ್ಮಿಕ ಸಂಘಸಂಸ್ಥೆಗಳನ್ನು ಬಿಟ್ಟರೆ ಯಾವುದೇ ಸ್ವತಂತ್ರ ಕಾರ್ಮಿಕ ಸಂಘಟನೆಗಳಿಗೆ ಪ್ರವೇಶ ನಿಷಿದ್ಧ. ಇದರ ಜೊತೆ ಸ್ಥಳೀಯ ಪೊಲೀಸರು ಸಹ ಮಾಲೀಕರ ಜೊತೆ ಶಾಮೀಲಾಗಿರುತ್ತಾರೆ. ಒಂದು ವೇಳೆ ಭಾರತದ ಕಾರ್ಮಿಕ ಕಾನೂನಿನಲ್ಲಿ ಖಾತರಿಪಡಿಸಿರುವ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಡಿದಲ್ಲಿ ಹರ್ಯಾಣದ  ಮಾರುತಿ-ಮಾನೇಸರ್ ಕಾರ್ಮಿಕರ ಮೇಲೆ ನಡೆಸಿದ ದಮನದಂತೆ ತೀವ್ರ ರೀತಿಯ ದಮನ ಕಾರ್ಯಾಚರಣೆಯನ್ನು ಮಾಡಿ ಕಾರ್ಮಿಕರ ಹಕ್ಕುಗಳನ್ನು ದಮನಮಾಡಲು ಪೋಲಿಸರೇ ಮುಂದಾಗುತ್ತಾರೆ.

russiaನಿಯಮಿತ ಕೆಲಸಗಾರರಾಗಿ ಹಲವು ಅತ್ಯಗತ್ಯ ಸಮಾಜ ಸೇವೆಗಳನ್ನು ಮಾಡುವ ಲಕ್ಷಾಂತರ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಾ ನೇರ ಉದ್ಯೋಗದಾತ (ಎಂಪ್ಲಾಯರ್)ನಾಗಿರುವ ಸರ್ಕಾರವೇ ಅವರ ಹಕ್ಕುಗಳನ್ನು ಗುರುತಿಸಲು ನಿರಾಕರಿಸುತ್ತಿದೆ. ಅಂಗನವಾಡಿ ಕೆಲಸಗಾರರಿಗೆ, ಸರ್ವ ಶಿಕ್ಷಾ ಅಭಿಯಾನದ ಪೂರಕ ಶಿಕ್ಷಕರಿಗೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನಿನಡಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಲಾಗಿದೆ. ವಿಷಾದದ ಸಂಗತಿಯೆಂದರೆ, ಕೆಲಸವನ್ನು ತಾತ್ಕಾಲಿಕಗೊಳಿಸುವುದು ಮತ್ತು ಅವನ್ನು ಗುತ್ತಿಗೆಗೆ ವಹಿಸುವುದರ ವಿರುದ್ಧ, ಕಡಿಮೆ ವೇತನದ ವಿರುದ್ಧ, ಸುದೀರ್ಘ ದುಡಿಮೆಯ ಅವಧಿಯ ವಿರುದ್ಧ, ಮತ್ತು ಕೆಲಸ ಮಾಡುವ ಜಾಗದಲ್ಲಿ ಕನಿಷ್ಟ ಸೌಲಭ್ಯವಿಲ್ಲದ ಸಮಸ್ಯೆಗಳ ವಿರುದ್ಧ ಅತ್ಯಗತ್ಯವಾಗಿರುವ ಕಾರ್ಮಿಕ ದಂಗೆಯನ್ನು ಸಂಘಟಿಸಲು ಸಾಧ್ಯವಾಗದಷ್ಟು ಕಾರ್ಮಿಕ ಸಂಘಟನೆಗಳು ಛಿದ್ರಗೊಂಡಿವೆ.

ಇಂದು ಬಹಳಷ್ಟು ಟ್ರೇಡ್ ಯೂನಿಯನ್ನುಗಳಿಗೆ ಮೇ ದಿನವು ಇತಿಹಾಸದಲ್ಲಿ ಕಾರ್ಮಿಕ ವರ್ಗವು ನಡೆಸಿದ ಹೋರಾಟಗಳನ್ನು ಸ್ಮರಿಸುವ ದಿನವೂ ಸಹ ಅಲ್ಲ.. ಹೀಗಿರುವಾಗ ಮೇ ದಿನವನ್ನು  ಬಂಡವಾಳಶಾಹಿ ಸಮಾಜದಾಚೆಗೆ ಭವಿಷ್ಯದ ಹೋರಾಟದ ಪ್ರತೀಕದಂತೆ  ನೋಡುತ್ತಾರೆಂದು ಭಾವಿಸುವುದು ದೂರದ ಮಾತಾಯಿತು. ಅಂಥವರಿಗೆ ೧೮೮೦ರ ಕಾಲದಲ್ಲಿ ಚಿಕಾಗೋದಲ್ಲಿ ಕಾರ್ಮಿಕವರ್ಗ ಹಾಡುತ್ತಿದ್ದ ಎಂಟು ಗಂಟೆಗಳ ದುಡಿತದ ಹಾಡ ನ್ನು ನೆನಪಿಸಬೇಕು. ಆ ಹಾಡಿನ ಕೊನೆಯ ಸಾಲುಗಳು ಹೆಚ್ಚೂ-ಕಡಿಮೆ ಹೀಗೆ ಸಾಗುತ್ತದೆ:

ಆನುಭವಿಸಬೇಕು ನಾವು  ಸೂರ್ಯನ ಬೆಳಕನ್ನು;  ಆಸ್ವಾದಿಸಬೇಕು ಹೂವಿನ ಪರಿಮಳವನ್ನು

ಬಲ್ಲೆವು ದೈವದ ಸಮ್ಮತಿ ಇದಕಿದೆಯೆಂದು, ಎಂಟುಗಂಟೆಗಳ ದುಡಿತ ಸಾಕೆಂಬ ಧೃಢ ಸಂಕಲ್ಪವಿಂದು

ಹೊರಟಿವೆ ನೋಡಿ, ನಮ್ಮ ಪಡೆಗಳು ಗಿರಣಿಗಳಿಂದ, ಕಾರ್ಖಾನೆಗಳಿಂದ, ಹಡಗುಕಟ್ಟೆಗಳಿಂದ

ಎಂಟು ಗಂಟೆ ದುಡಿಮೆಗೆ, ಎಂಟು ಗಂಟೆ ವಿರಾಮಕ್ಕೆ, ಇನ್ನೆಂಟು ಗಂಟೆ ನನಗೆ, ನನ್ನಿಷ್ಟಕ್ಕೆ.

 

 ಕೃಪೆ: Economic and Political Weekly;     April 29, 2017. Vol. 52. No. 17.

Leave a Reply

Your email address will not be published.