ಮೇಯುತಿರುವ ಬೇಲಿಗಳೂ ಬೇಯುತಿರುವ ಶ್ರಮಿಕರೂ

ನಾ ದಿವಾಕರ

MayDayCartoon lgಮೇ ದಿನಾಚರಣೆ ವಿಶ್ವ ಕಾರ್ಮಿಕರಿಗೆ ಹಬ್ಬದ ದಿನವಲ್ಲ. ವಿಶ್ರಾಂತಿಯ ದಿನವಲ್ಲ. ವಿಜೃಂಭಿಸುವ ದಿನವಲ್ಲ. ಅಥವಾ ಆಚರಣೆಯೂ ಅಲ್ಲ. 130 ವರ್ಷಗಳಿಂದ ವಿಶ್ವದ ಶ್ರಮಜೀವಿಗಳನ್ನು ಒಂದುಗೂಡಿಸುವ ಭೌತಿಕ ವೇದಿಕೆಯಾಗಿ, ಬೌದ್ಧಿಕ ಚಿಂತನೆಯಾಗಿ, ಲೌಕಿಕ ಚಿಮ್ಮುಹಲಗೆಯಾಗಿ, ರಾಜಕೀಯ ಭೂಮಿಕೆಯಾಗಿ ಮೇ ದಿನಾಚರಣೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕಾರಣ ಶ್ರಮಜೀವಿಗಳ ಬದುಕು ಇನ್ನೂ ಸವಾಲುಗಳನ್ನು ಎದುರಿಸುತ್ತಲೇ ಇದೆ. ಶ್ರಮಜೀವಿಗಳ ಸ್ವರೂಪ ಬದಲಾಗಿದೆ, ಧೋರಣೆ ಬದಲಾಗಿದೆ, ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳು ಬದಲಾಗಿವೆ, ರಾಜಕೀಯ ಪರಿಭಾಷೆ ಬದಲಾಗಿದೆ ಆದರೆ ಶೋಷಣೆ ಯಥಾಸ್ಥಿತಿಯಲ್ಲಿದೆ. ಬಂಡವಾಳ ವ್ಯವಸ್ಥೆಯ ದೌರ್ಜನ್ಯ ತನ್ನ ಹೊಸ ಅವತಾರಗಳಲ್ಲಿ ಅನಾವರಣಗೊಳ್ಳುತ್ತಲೇ ಇದೆ. ಬಂಡವಾಳ ಮತ್ತು ಶ್ರಮದ ನಡುವಿನ ಕಂದರ ಹೆಚ್ಚಾಗುತ್ತಿರುವಂತೆಯೇ ಸಂಪತ್ತು ಮತ್ತು ದಾರಿದ್ರ್ಯತೆಯ ಅಂತರವೂ ಹೆಚ್ಚಾಗುತ್ತಿದೆ. ಮೇಲ್ನೋಟಕ್ಕೆ ಇಂದಿನ ದುಡಿಯುವ ವರ್ಗಗಳು ಸುಧಾರಿತ ಬದುಕನ್ನು ಅನುಭವಿಸುತ್ತಿರುವಂತೆ ತೋರುತ್ತದೆ. ಆದರೆ ಆಂತರಿಕವಾಗಿ ನೋಡುವವರಿಗೆ ಶ್ರಮಜೀವಿಗಳ ಅಂತರಂಗದ ಆಕ್ರೋಶ, ತಳಮಳ ಮತ್ತು ತುಡಿತಗಳು ನಿಲುಕುತ್ತವೆ. ಇದು ಕಾಣ್ಮೆಯ ಪ್ರಶ್ನೆ, ಜಾಣ್ಮೆಯ ಪ್ರಶ್ನೆಯಲ್ಲ.

ಮೊಬೈಲ್, ಲ್ಯಾಪ್‍ಟಾಪ್, ಸ್ಮಾರ್ಟ್ ಫೋನ್, ಆಂಡ್ರಾಯ್ಡ್, ಟ್ಯಾಬ್ಲೆಟ್, ಜಿಯೋ ಸಿಮ್ ಇವುಗಳೇ ಬದುಕಿನ ಗುಣಮಟ್ಟದ ಮಾನದಂಡಗಳಾಗಿರುವ ನವ ಉದಾರವಾದದ ನವ ಯುಗದಲ್ಲಿ ಲೌಕಿಕ ಜೀವನ ಎನ್ನುವುದು ತಂತ್ರಜ್ಞಾನದ ಸೂಕ್ಷ್ಮ ತರಂಗಗಳಂತೆಯೇ ಕಾಣುತ್ತಿದೆ. ಆದರೆ ಈ ಸೂಕ್ಷ್ಮ ತರಂಗಗಳ ನಡುವೆ ಹೊಯ್ದಾಡುವ ಬಿಸಿ ಉಸಿರು ಅಧಿಕಾರ ಪೀಠಾಧಿಪತಿಗಳಿಗೆ ತಟ್ಟುತ್ತಲೇ ಇಲ್ಲ. ಆತ್ಮಹತ್ಯೆಗೆ ಶರಣಾಗುತ್ತಿರುವ ರೈತ, ಬೀದಿ ಪಾಲಾಗುತ್ತಿರುವ ಕಾರ್ಖಾನೆಯ ಕಾರ್ಮಿಕರು, ನಿತ್ಯ ಸಾವಿನ ಬದುಕು ಸವೆಸುತ್ತಿರುವ ಪೌರ ಕಾರ್ಮಿಕರು, ನಾಳಿನ ಕೂಳಿಗಾಗಿ ನಾಡು ಅಲೆಯುತ್ತಿರುವ ವಲಸೆ ಕಾರ್ಮಿಕರು, ತಮ್ಮದಲ್ಲದ ಸಂಪತ್ತಿನ ಶಿಲ್ಪಗಳನ್ನು ರೂಪಿಸಲು ಹಗಲಿರುಳೂ ಬೆವರು ಸುರಿಸುತ್ತಿರುವ ಕಟ್ಟಡ ಕಾರ್ಮಿಕರು, ತಾವು ಎಂದಿಗೂ ಭೋಗಿಸದ ಆಧುನಿಕ ಐಷಾರಾಮಿ ನಗರಗಳನ್ನು ಸೃಷ್ಟಿಸಲು ನೆತ್ತರು ಹರಿಸುತ್ತಿರುವ ಶ್ರಮಿಕರು ತಂತ್ರಜ್ಞಾನ ಯುಗದ ತರಂಗಗಳ ನಡುವೆ ಮರೆಯಾಗುತ್ತಿದ್ದಾರೆ.

ದಶಕಗಳ ಹೋರಾಟಗಳ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡ ಸುಭದ್ರ ಜೀವಿಗಳು ಇಂದು ತಮ್ಮ ಶ್ರಮದ ದಿನಗಳನ್ನು ಮಾತ್ರವೇ ಅಲ್ಲದೆ ಶ್ರಮದ ಮೌಲ್ಯವನ್ನೂ ಮರೆತಂತೆ ಭೌತಿಕ ಜಗತ್ತಿನ ಐಭೋಗಗಳನ್ನು ಅನುಭವಿಸುತ್ತಿದ್ದಾರೆ. ಜಾಗತೀಕರಣ ಮತ್ತು ನವ ಉದಾರವಾದ ಸೃಷ್ಟಿಸಿರುವ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಮಾಜಿ ಶ್ರಮಜೀವಿಗಳು, ಆಧುನಿಕ ಮೇಲ್ವರ್ಗದ ಪ್ರತಿನಿಧಿಗಳು ತಮ್ಮ ಅಸ್ಮಿತೆಗಳನ್ನು ಧರ್ಮ, ಜಾತಿ, ಪಂಗಡ ಮತ್ತು ಭಾಷೆಯ ಪೀಠಗಳಿಗೆ ಅರ್ಪಿಸಿ ಧನ್ಯರಾಗಿರುವುದೂ ಸತ್ಯ. ಹಾಗಾಗಿಯೇ ಇಂದು ದುಡಿಯುವ ವರ್ಗಗಳ ಹೋರಾಟಗಳು ಸತತವಾಗಿ ನಡೆಯುತ್ತಲೇ ಇದ್ದರೂ ಸಾಮಾಜಿಕ ವಲಯದಲ್ಲಿ, ಸಾರ್ವಜನಿಕ ಜೀವನದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸುತ್ತಿಲ್ಲ. ಇತ್ತೀಚಿನ ಮಾರುತಿ ನೌಕರರ ಹೋರಾಟ, ಮುಂಬಯಿ ಪೌರಕಾರ್ಮಿಕರ ಹೋರಾಟ, ಕರ್ನಾಟಕದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ಯಶಸ್ವಿಯಾಗಿದ್ದರೂ ಇತರ ಶ್ರಮಜೀವಿಗಳ ಸಂಘರ್ಷಗಳಿಗೆ ಇವು ಸ್ಪೂರ್ತಿಯಾಗುತ್ತಿಲ್ಲ. ಏಕೆಂದರೆ ಶ್ರಮಜೀವಿಗಳು ಅಸ್ಮಿತೆಗಳಿಗೆ ಬಲಿಯಾಗುತ್ತಿದ್ದಾರೆ.

ಮತೀಯವಾದ, ಜಾತಿವಾದ ಮತ್ತು ಪ್ರಾದೇಶಿಕತೆ ಕಾರ್ಮಿಕರ ಒಗ್ಗಟ್ಟನ್ನು ಅಡ್ಡಡ್ಡಲಾಗಿ ಕತ್ತರಿಸುತ್ತಿದೆ. ಆದರೆ ಇದೇ ಮತೀಯವಾದ, ರಾಷ್ಟ್ರೀಯವಾದ ಮತ್ತು ಭಾಷಾ ಪ್ರೇಮ ಕಾರ್ಮಿಕರ ಭಾಷೆಯಾಗಿ ವ್ಯಕ್ತವಾಗುತ್ತಿಲ್ಲ. ಕನ್ನಡ ಒಂದು ಭಾವಾವೇóಷದ ಅಸ್ಮಿತೆಯಾಗಿ ಹೊರಹೊಮ್ಮುತ್ತಿದೆ ಆದರೆ ಔದ್ಯಮಿಕ ಅಸ್ಮಿತೆಯನ್ನು ಪಡೆಯುತ್ತಿಲ್ಲ. ಹಾಗಾಗಿಯೆ ಬಾಹುಬಲಿ ರಾಜ್ಯಾದ್ಯಂತ ಉನ್ಮತ್ತ ಭಾಷಾಭಿಮಾನವನ್ನು ಉಕ್ಕಿಸುತ್ತದೆ, ಮೈಸೂರು ಬ್ಯಾಂಕ್‍ನ ಅವಸಾನ ಕೂದಲನ್ನೂ ಕೊಂಕಿಸುವುದಿಲ್ಲ. ಹೆಚ್‍ಎಂಟಿ ಅವಸಾನದತ್ತ ಸಾಗಿದೆ, ಬಿಇಎಂಎಲ್ ಖಾಸಗಿ ಸ್ವತ್ತಾಗಲಿದೆ ಆದರೆ ಕನ್ನಡದ ಕೂಗು ಕಾರ್ಮಿಕರ ಎದೆಯನ್ನು ತಟ್ಟಿಯೇ ಇಲ್ಲ. ಏಕೆ ಭಾಷೆ, ಕಾರ್ಮಿಕ ಮತ್ತು ಹೋರಾಟದ ಸಮೀಕರಣ ಸಾಧ್ಯವಿಲ್ಲವೇ ? ಬೆಂಗಳೂರಿನಲ್ಲಿ ಮಲಗುಂಡಿಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಅಮಾಯಕರು ಸಾಯುತ್ತಾರೆ. ವಿಪರ್ಯಾಸವೆಂದರೆ ಈ ಸಾವು ರಾಜ್ಯದ ಮೇಲ್ವರ್ಗದ ಕಾರ್ಮಿಕರ ಪ್ರಜ್ಞೆಯನ್ನೂ ಬಡಿದೆಬ್ಬಿಸುವುದಿಲ್ಲ, ವಿಶಾಲ ಅರ್ಥದಲ್ಲಿ ದಲಿತರ ಪ್ರಜ್ಞೆಯನ್ನೂ ಬಡಿದೆಬ್ಬಿಸುವುದಿಲ್ಲ. ಏಕೆ ಹೀಗೆ ? ಮಲಗುಂಡಿಯಲ್ಲಿ ಮಡಿದ ಅಮಾಯಕರು ಶ್ರಮಜೀವಿಗಳಲ್ಲವೇ ?

ಇದು ಒಂದು ದಿನದ ಪ್ರತಿಭಟನೆ, ಧರಣಿ, ಮುಷ್ಕರದ ಪ್ರಶ್ನೆಯಲ್ಲ. ಬಂಡವಾಳ ಮತ್ತು ಶ್ರಮದ ನಡುವೆ ಶತಮಾನಗಳಿಂದ ನಡೆದುಬರುತ್ತಿರುವ ಸಂಘರ್ಷದ ಪ್ರಶ್ನೆ. ನಿಜ ನಾವು ಹೋರಾಡುತ್ತಿದ್ದೇವೆ. ಎಡಪಕ್ಷಗಳು ನಿರಂತರ ಹೋರಾಟಗಳಲ್ಲಿ ತೊಡಗಿವೆ. ಯಶಸ್ಸನ್ನೂ ಸಾಧಿಸಿವೆ. ಜನಜಾಗೃತಿಗಾಗಿ ಹಗಲಿರುಳೂ ಶ್ರಮಿಸುತ್ತಿವೆ. ಆದರೆ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ಕೆಂಬಾವುಟ ಹಿಡಿದು “ ಕಾರ್ಮಿಕ ಐಕ್ಯತೆ ಚಿರಾಯುವಾಗಲಿ ” ಎಂದು ಕೂಗುವ ಮೇಲ್ವರ್ಗದ ಕಾರ್ಮಿಕರು, ವೈಟ್ ಕಾಲರ್ ನೌಕರರು, ಮರುಕ್ಷಣದಲ್ಲೇ ಮತೀಯವಾದ, ಜಾತಿವಾದಕ್ಕೆ ಬಲಿಯಾಗುತ್ತಿರುವುದು ದುರಂತವಲ್ಲವೇ ? ಇಂದು ಭಾರತದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ, ಸುಶಿಕ್ಷಿತ ಮಧ್ಯಮ ವರ್ಗದ ಕಾರ್ಮಿಕರಿಗೆ ಆಧುನಿಕ ಭಾರತದ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಅಂಗೈಯ್ಯಲ್ಲಿದೆ. ಹಾಗೆಯೇ ದೇಶದ ಅರ್ಥವ್ಯವಸ್ಥೆ ಸಾಗುತ್ತಿರುವ ಮಾರ್ಗವೂ ಅವರ ಕಣ್ಣೆದುರಿನಲ್ಲೇ ಇದೆ. ನೋಟು ಅಮಾನ್ಯೀಕರಣದ ಮೂಲ ಧ್ಯೇಯ ಏನು ಎನ್ನುವುದು ಅರ್ಥವಾಗದಂತಹ ಗ್ರಂಥವಲ್ಲ, ಅರಗಿಸಿಕೊಳ್ಳಲಾಗದ ಕಬ್ಬಿಣದ ಕಡಲೆಯೂ ಅಲ್ಲ. ಆದರೆ ಶ್ರಮಜೀವಿಗಳನ್ನು ಪ್ರತಿನಿಧಿಸುವ ಮುಂಚೂಣಿ ಸಮುದಾಯಗಳು, ಕಾರ್ಮಿಕ ಬಂಧುಗಳು ತಮ್ಮ ಮೂಲ ನೆಲೆಯನ್ನು, ತಮ್ಮ ಶ್ರಮದ ಸೆಲೆಯನ್ನು ಮರೆತಿರುವುದರಿಂದ ಅಮಾನ್ಯೀಕರಣ ಕಾರ್ಮಿಕರಲ್ಲಿ ಸಂಚಲನ ಮೂಡಿಸಲಿಲ್ಲ. ಸತ್ತ ಪ್ರಜ್ಞೆಯನ್ನು ಬಡಿದೆಬ್ಬಿಸಲಿಲ್ಲ.

MAY-DAY1886ರಲ್ಲಿ ಚಿಕಾಗೋದಲ್ಲಿ ನಡೆದ ಕಾರ್ಮಿಕರ ವೀರೋಚಿತ ಹೋರಾಟದ ನಂತರ ಗಲ್ಲುಶಿಕ್ಷೆಗೊಳಗಾದ ನಾಲ್ವರು ಹೋರಾಟಗಾರರು, ಗಲ್ಲುಶಿಕ್ಷೆಯ ಮುನ್ನಾದಿನ ಸ್ಫೋಟಕ ವಸ್ತುವನ್ನು ನುಂಗಿ ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ಹೋರಾಟಗಾರ ಇಂದಿನ ಪೀಳಿಗೆಗೆ ಅವಿಸ್ಮರಣೀಯರಾಗಬೇಕು. ಈ ಹೋರಾಟದ ನಂತರ ವಿಶ್ವ ಕಾರ್ಮಿಕ ಸಮುದಾಯ ಬಂಡವಾಳ ವ್ಯವಸ್ಥೆಯ ವಾರಸುದಾರರಿಗೆ “ ಇಂದು ನೀವು ದಮನಿಸಿ ಹೊಸಕಿಹಾಕುತ್ತಿರುವ ಪ್ರತಿರೋಧದ ದನಿಗಳಿಗಿಂತಲೂ ಪ್ರಬಲವಾಗಿ ನಮ್ಮ ಮೌನವೇ ನಮ್ಮ ಅಸ್ತ್ರವಾಗುವ ದಿನ ಬಂದೇ ತೀರುತ್ತದೆ ” ಎಂದು ಎಚ್ಚರಿಕೆ ನೀಡಿದ್ದರು. ಆದರೆ ಇಂದು ಮೌನ ಪ್ರಬಲವಾಗಿಲ್ಲ, ಹೋರಾಟದ ಅಸ್ತ್ರವಾಗಿಯೂ ಇಲ್ಲ, ನಿಷ್ಕ್ರಿಯತೆಯ ಸಂಕೇತವಾಗಿದೆ. ಮತ್ತೊಂದೆಡೆ ಆಳುವ ವರ್ಗಗಳ ಮೌನ ಶ್ರಮಜೀವಿಗಳ ಪಾಲಿಗೆ ಮಾರಣಾಂತಿಕವಾಗಿದೆ. ಆಡಳಿತಾರೂಢ ಪಕ್ಷದ ಮನದ ಮಾತುಗಳಲ್ಲಿ ಶ್ರಮಜೀವಿಗಳ ಬೆವರು, ನೆತ್ತರಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ ಎನ್ನುವುದು ಅಮಾನ್ಯೀಕರಣದ ಸಂದರ್ಭದಲ್ಲಿ ಸಾಬೀತಾಗಿದೆ.
ಶೇ 1ರಷ್ಟು ಜನರು ದೇಶದ ಶೇ 58ರಷ್ಟು ಸಂಪತ್ತಿನ ಒಡೆತನ ಹೊಂದಿರುವ ಆಧುನಿಕ ಭಾರತದಲ್ಲಿ ನಾವು ಸ್ವಚ್ಚ ಭಾರತ ಅಭಿಯಾನ ಆಚರಿಸುತ್ತಿದ್ದೇವೆ, ಜನಧನಮನ ಹಾಡುತ್ತಿದ್ದೇವೆ, ಅಖಂಡ ಭಾರತದ ಘೋಷಣೆ ಮೊಳಗುತ್ತಿದ್ದೇವೆ, ದೇಶಪ್ರೇಮದ ಗೀತೆ ಹಾಡುತ್ತಿದ್ದೇವೆ. ಆದರೆ ಇಲ್ಲಿ ಶ್ರಮಜೀವಿಯ ಆಹಾರವೇ ಶಿಕ್ಷೆಯ ಮೂಲ ಆಗುತ್ತಿದೆ. ಶ್ರಮವೇ ಶ್ರಮಜೀವಿಗೆ ಕಂಟಕವಾಗುತ್ತಿದೆ. ಗೋಮಾಂಸದ ತುಂಡು, ದನದ ಚರ್ಮ ಇಂದು ಮಾನವನ ಜೀವಕ್ಕಿಂತಲೂ ಅಮೂಲ್ಯವಾಗುತ್ತಿದೆ. ಅನ್ನ ಬೆಳೆಯುವ ರೈತನ ಶವ ರಾಜಕೀಯ ಪಗಡೆಯಲ್ಲಿ ದಾಳಗಳಾಗಿ ಪರಿಣಮಿಸಿವೆ. ರೈತರ ಆತ್ಮಹತ್ಯೆ ಇಂದು ಸುದ್ದಿಯಾಗುತ್ತಲೇ ಇಲ್ಲ. ಮಲಗುಂಡಿಯಲ್ಲಿ ಮಡಿದ ಪೌರಕಾರ್ಮಿಕ, ಕೃಷಿ ಭೂಮಿಯಲ್ಲಿ ಮರಕ್ಕೆ ನೇತಾಡುವ ರೈತ, ಸೇತುವೆಯ ಭಾರಕ್ಕೆ ನಲುಗಿ ಜೀವ ತೆತ್ತ ಕಟ್ಟಡ ಕಾರ್ಮಿಕ, ಕೂಳಿಲ್ಲದೆ, ಸೂರಿಲ್ಲದೆ ಸಾಯುವ ವಲಸೆ ಕಾರ್ಮಿಕ ಭಾರತದ ಪ್ರಗತಿಯ ಮಾರ್ಗದಲ್ಲಿ ಹಾಸುಗಲ್ಲಿನಂತೆ ಚಪ್ಪಟೆಯಾಗಿಬಿಟ್ಟಿದ್ದಾನೆ.

ಸ್ವತಂತ್ರ ಭಾರತದಲ್ಲಿ ಸಮಾನತೆ, ಭ್ರಾತೃತ್ವ, ಐಕ್ಯತೆ ಮತ್ತು ಮಾನವತೆಯನ್ನು ಮೆರೆಸುವ ಸುಭಿಕ್ಷ ಬೆಳೆಯನ್ನು ಶ್ರಮಜೀವಿಗಳು ಬೆಳೆದಿದ್ದಾರೆ. ಆದರೆ ನಮ್ಮ ಫಸಲನ್ನು ನಾವೇ ನಿರ್ಮಿಸಿರುವ ಬೇಲಿಯೇ ಮೇಯುತ್ತಿದೆ. ರಕ್ತಬೀಜಾಸುರಂತೆ ದಾಂಗುಡಿಯಿಡುತ್ತಿರುವ ಲಾಭಕೋರರ ತೀರದ ದಾಹಕ್ಕೆ ನಮ್ಮ ದೇಶದ ಅರಣ್ಯ, ಜಲಸಂಪನ್ಮೂಲಗಳು, ಬೆಟ್ಟಗುಡ್ಡಗಳು, ಹಸಿರು ಹೊದಿಕೆಗಳು, ಕೃಷಿ ಭೂಮಿ ಎಲ್ಲವೂ ಬಲಿಯಾಗುತ್ತಿವೆ. ಇದೀಗ ನಗದು ರಹಿತ ಅರ್ಥವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಎಲ್ಲ ಸಹಜ ಸಂಪತ್ತುಗಳನ್ನೂ ಕಾರ್ಪೋರೇಟ್ ಉದ್ಯಮಿಗಳಗೆ ಪರಭಾರೆ ಮಾಡಲು ನಾಡಿನ ದೊರೆಗಳು ಸಿದ್ಧರಾಗುತ್ತಿದ್ದಾರೆ. ಕಾರ್ಮಿಕ ಹೋರಾಟಗಳಿಗೆ ಮುಂಚೂಣಿ ನಾಯಕತ್ವ ಒದಗಿಸಬೇಕಾದ ಮಧ್ಯಮ ವರ್ಗದ ಕಾರ್ಮಿಕರು ಈ ಬೆಳವಣಿಗೆಗಳನ್ನು ಸೀಮಿತ ಚೌಕಟ್ಟಿನೊಳಗೇ ವಿಶ್ಲೇಷಿಸುತ್ತಿದ್ದಾರೆ. ದಾದ್ರಿ ಮುಸ್ಲಿಮನ ಪ್ರಶ್ನೆಯಾಗುತ್ತದೆ, ಊನ ದಲಿತನ ಪ್ರಶ್ನೆಯಾಗುತ್ತದೆ, ಬೆಂಗಳೂರಿನ ಮಲಗುಂಡಿ ಸ್ವಚ್ಚತೆಯ ಪ್ರಶ್ನೆಯಾಗುತ್ತದೆ, ರೈತರ ಆತ್ಮಹತ್ಯೆ ಸ್ವಾರ್ಥದ ಪ್ರಶ್ನೆಯಾಗುತ್ತದೆ, ನಿರ್ಭಯ ಮಹಿಳೆಯ ಪ್ರಶ್ನೆಯಾಗುತ್ತಾಳೆ, ಉತ್ತರ ಪ್ರದೇಶದ ಕಸಾಯಿಖಾನೆಗಳು ಅಕ್ರಮ ಸಕ್ರಮದ ಪ್ರಶ್ನೆಗಳಾಗುತ್ತವೆ.

ಆದರೆ ಈ ಎಲ್ಲ ಬಲಿಪಶುಗಳು ಈ ದೇಶದ ಶ್ರಮಜೀವಿಗಳ, ದುಡಿಯುವ ವರ್ಗಗಳ ಭಾವನಾತ್ಮಕ ಸಂಕೇತ ಎಂದೇಕೆ ನಾವು ಭಾವಿಸುತ್ತಿಲ್ಲ. 1886ರಲ್ಲಿ ನೇಣುಗಂಬ ಏರಿದ ನಾಲ್ವರು ಹೋರಾಟಗಾರರು ಪ್ರತಿನಿಧಿಸಿದ ಆತಂಕ, ಹತಾಶೆ , ಆಕ್ರೋಶ, ತುಡಿತ ಮತ್ತು ಸವಾಲುಗಳನ್ನು ಈ ಮೇಲಿನ ಘಟನೆಗಳಲ್ಲಿ ಕಾಣುವುದೇ ಆದರೆ ಮೇ ದಿನಾಚರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಇಲ್ಲವಾದಲ್ಲಿ ಮತ್ತೊಂದು ಮೇ ದಿನಕ್ಕಾಗಿ ಕಾಯುವುದು ನಿತ್ಯ ಸತ್ಯವಾಗುತ್ತದೆ.

Leave a Reply

Your email address will not be published.