ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಕವಿತೆ-ಒಂದು.

ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು

ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು

ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ!

 

ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು

ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು

ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ!

 

ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು

ಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ!

ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ

ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ

ತರಿದ ತಲೆಗಳ

ಭೋಗಿಸಿದ ಯೋನಿಗಳ

ಕಚ್ಚಿದ ಮೊಲೆಗಳ

ಕಲಸಿಹಾಕಿದ ಭ್ರೂಣಗಳ

ನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ

ಪ್ರತಿ ಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ

ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ

ನೋಡು ಬರೆಯುವಾಗಲೂ ಇದನು ಕೆಕ್ಕರಿಸಿ ನೋಡುತಿದೆ ಮೃಗವೊಂದು

ರಣಹಸಿವಿನಿಂದ!

 

ಕವಿತೆ-ಎರಡು.

ಹೆಬ್ಬಾವಿನಂತ ಹೆದ್ದಾರಿಯಲೀಗ

ಟ್ರಕ್ಕು,  ಲಾರಿ, ಟ್ಯಾಂಕರು ಬಸ್ಸು ಕಾರುಗಳ  ವಾಹನಗಳ ನಾಗಾಲೋಟ

ನೂರಾರು ಹಳ್ಳಿಗಳ ಎದೆ ಬಗೆದು

ಹಳೆ ಹುಣಸೆ ಮಾವು ಹೊಂಗೆ ಮರಗಳ ಕಡಿದು

ತೊಡೆ ಚಾಚಿ ಮಲಗಿಕೊಂಡ

ರಸ್ತೆಯಲ್ಲೀಗ  ಟೈರುಗಳ ಉರುಳಾಟದ ಸಂಭ್ರಮವೋ ಸಂಭ್ರಮ!

 

ಮನೆ ಮಾರುಗಳ ಬಿಟ್ಟುಕೊಟ್ಟ

ಹಳ್ಳಿಗಳ ರೈತರಲ್ಲಿ ಕೆಲವರು ಪಡೆದ ದುಗ್ಗಾಣಿ ಕಾಸಲ್ಲಿ

ಅದೇ ಹೆದ್ದಾರಿಯ ಪಕ್ಕದಲ್ಲಿ

ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದಾರೆ

ಉಳಿವರು ಹೈವೇ ಪಕ್ಕದಲ್ಲಿ ಶುರುವಾಗಿರುವ

ಹೈಟೆಕ್ ಡಾಬಾಗಳಲ್ಲಿ ಟೇಬಲ್ ಒರೆಸುತ್ತ

ತಟ್ಟೆ ತೊಳೆಯುತ್ತ ಬಿದ್ದಿದ್ದಾರೆ

ಮನೆಯೊಳಗಿನ ಹೆಂಗಸರು

ರಾಸುಗಳ ಕಟ್ಟಿಕೊಂಡ ತಪ್ಪಿಗೆ

ಹಸಿ ಮೇವ ಅರಸುತ್ತ ಹೆದ್ದಾರಿಯ ಆಚೀಚೆ

ಅಲೆಯುತ್ತಿದ್ದಾರೆ

ಮೊನ್ನೆ ಯಾರೊ ಬಂದು ಮೈಲಿಗೊಂದರಂತೆ

ಬೋರ್ಡುಗಳ ನೆಟ್ಟುಹೋದರು:

‘ಬರಲಿವೆ ಒಳ್ಳೆಯ ದಿನಗಳು’

‘ಸಾಗುತ್ತಿದೆ ದೇಶ ವಿಕಾಸ ಪರ್ವದತ್ತ’

———————-

 

 

Leave a Reply

Your email address will not be published.