ಮೂತ್ರವರ್ಧನೆಗೆ, ಕೆಮ್ಮಿಗೆ ಚಳ್ಳೆಹಣ್ಣು ಉತ್ತಮ ಔಷಧ

-ಸಿದ್ಧರಾಮ ಹಿರೇಮಠ, ಕೂಡ್ಲಿಗಿ.

FB_IMG_1494665888791ಸಾಮಾನ್ಯವಾಗಿ ಯಾರನ್ನಾದರೂ ಯಾಮಾರಿಸಿದಾಗ ಚಳ್ಳೆಹಣ್ಣು ತಿನ್ನಿಸಿದ ಎಂಬುದು ಆಡುನುಡಿ. ಆದರೆ ಚಳ್ಳೆಹಣ್ಣನ್ನೇ ಯಾಕೆ ಬಳಸಿದರೋ ಗೊತ್ತಿಲ್ಲ. ಯಾಕೆಂದರೆ ಅತ್ಯಂತ ಸಿಹಿಯಾದ ಆರೋಗ್ಯಕ್ಕೂ ಪೂರಕವಾದ ಗ್ರಾಮೀಣ ಭಾಗದಲ್ಲಿ ಚಿರಪರಿಚಿತವಾದ ಹಣ್ಣೆಂದರೆ ಚಳ್ಳೆಹಣ್ಣು. ಮೇಲಿನ ಸಿಪ್ಪೆಯನ್ನು ತೆಗೆದರೆ ಒಳಗೆಲ್ಲ ಅಂಟುಅಂಟಾಗಿದ್ದರೂ ಬಾಯಲ್ಲಿ ಸವಿ ನೀಡುವ ಈ ಹಣ್ಣು ಗ್ರಾಮದ ಮಕ್ಕಳಿಗೆಲ್ಲ ಚಿರಪರಿಚಿತವಾದುದು. ಅತ್ಯಂತ ಸುಲಭವಾಗಿ, ಉಚಿತವಾಗಿ, ಆರೋಗ್ಯಕ್ಕೆ ಪೂರಕವಾಗಿ ಸಿಗುವ ಹಣ್ಣೆಂದರೆ ಚಳ್ಳೆಹಣ್ಣು. ದ್ರಾಕ್ಷಿಯ ಗೊಂಚಲಿನಂತೆಯೇ ಗಿಡಗಳಲ್ಲಿ ಹಳದಿಮಿಶ್ರಿತ ಹಣ್ಣುಗಳನ್ನು ಕಂಡರೆ ಯಾರಿಗೇ ಆಗಲಿ ಬಾಯಲ್ಲಿ ನೀರೂರದೆ ಇರದು. ಬಾಯಲ್ಲಿಟ್ಟೊಡನೆ ಸಿಪ್ಪೆಯನ್ನು ತೆಗೆದು ಹಣ್ಣನ್ನು ತಿಂದಾಗ ಮೊದಲಿಗೆ ಅಂಟಂಟೆನಿಸಿದರೂ ಅದರ ಸಿಹಿ ಮಧುರವಾಗಿರುತ್ತದೆ. ಅಷ್ಟು ಅಂಟಂಟಾಗಿದ್ದರೂ ಮತ್ತಷ್ಟು ತಿನ್ನಬೇಕೆನಿಸುವುದು ಈ ಹಣ್ಣಿನ ವಿಶೇಷತೆ.

ಇದೀಗ ಚಳ್ಳೆಹಣ್ಣಿನ ಕಾಲ. ಕಾಡಿನಲ್ಲಿ ಗೊಂಚಲು ಗೊಂಚಲಾಗಿ ತೂಗಾಡುವ ಚಳ್ಳೆಹಣ್ಣನ್ನು ಇಂಗ್ಲೀಷ್‌ನಲ್ಲಿ ಬರ್ಡ್ ಲೈಮ್ ಎಂದು ಕರೆಯುತ್ತಾರೆ. ಕನ್ನಡದಲ್ಲಿಯೇ ವಿವಿಧ ಪ್ರದೇಶಗಳಲ್ಲಿ ಇದನ್ನು ಸೊಳ್ಳೆ, ಬೊಟ್ಟೆ, ಚಡ್ಲು ಎಂದು ವಿವಿಧ ಹೆಸರಿನಿಂದ ಕರೆಯಲಾಗುತ್ತದೆ. ಮೇ ತಿಂಗಳಿನಿಂದ ಜುಲೈ ತಿಂಗಳವರೆಗೂ ಚಳ್ಳೆಹಣ್ಣುಗಳ ಕಾಲ. ಚಳ್ಳೆಹಣ್ಣಿನಲ್ಲಿ ಪ್ರೋಟೀನ್, ಕಬ್ಬಿಣಾಂಶ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣದ ಅಂಶವಿರುತ್ತದೆ. ಈ ಕಾಯಿಯಿಂದ ಉಪ್ಪಿನಕಾಯಿ, ಸಾಂಬಾರ್ ನ್ನೂ ಮಾಡಲಾಗುತ್ತದೆ. ಮೂತ್ರವರ್ಧನೆಗೆ, ಕೆಮ್ಮಿಗೆ ಈ ಹಣ್ಣು ಉತ್ತಮ ಔಷಧ. ಗಾಯಕ್ಕೆ ಇದರ ತೊಗಟೆಯನ್ನು ತೇದು ಹಚ್ಚಬಹುದಾಗಿದೆ. ಹಣ್ಣಿನ ತಿರುಳನ್ನು ಅಂಟಿನಂತೆಯೂ ಬಳಸಲಾಗುತ್ತದೆ.

FB_IMG_1494665891475ಏಷ್ಯಾ ಮೂಲದ ಚಳ್ಳೆಗಿಡ ೮-೧೦ ಮೀ ಎತ್ತರಕ್ಕೆ ಬೆಳೆಯಬಲ್ಲದು. ತೆಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು ಇರುತ್ತವೆ. ಚಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ ಹೊಂದುತ್ತದೆ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು ತುಂಬಿರುತ್ತದೆ. ಬೀಜ ಮತ್ತು ದಂಟುಸಸಿಗಳಿಂದ ಸಸ್ಯಾಭಿವೃದ್ಧಿ ಮಾಡಬಹುದಾಗಿದೆ. ಹಕ್ಕಿ ಕೋತಿಗಳಿಂದ ಸಾಮಾನ್ಯವಾಗಿ ಇದರ ಬೀಜಪ್ರಸಾರವಾಗುತ್ತದೆ.

ಹೆಚ್ಚಾಗಿ ಯಾರ ಕಣ್ಣಿಗೂ ಬೀಳದಿರುವ ಈ ಹಣ್ಣಿನ ಮಹತ್ವ ಗೊತ್ತಾದರೆ ಅಥವಾ ಇದರಲ್ಲಿ ಔಷಧೀಯ ಅಂಶವಿದೆಯೆಂದು ವೈದ್ಯರು ಹೇಳಿದಲ್ಲಿ ಬಹುಶ: ಇದಕ್ಕೂ ಬೆಲೆ ಬರಬಹುದು. ಅಲ್ಲಿಯವರೆಗೂ ಎಲೆಮರೆಯ ಕಾಯಿಯಂತೆ, ಈ ಹಣ್ಣುಗಳು ಎಲೆಯ ಮರೆಯಲ್ಲಿಯೇ ಉಳಿದುಬಿಡುತ್ತಿವೆ. ಇದಕ್ಕೂ ಒಂದು ಕಾಲ ಬರಬಹುದು. ಆಗ ಎಲ್ಲರೂ ಚಳ್ಳೆಹಣ್ಣಿನ ಗಿಡಗಳನ್ನು ಹುಡುಕಿ ಹಣ್ಣುಗಳನ್ನು ಮಾರಾಟ ಮಾಡಲೂಬಹುದು.

Leave a Reply

Your email address will not be published.