ಮುಸ್ಲಿಂ ಸಮುದಾಯದ ಆಂತರಿಕ ಮತ್ತು ಬಾಹ್ಯ ಅಂಶಗಳ ಚರ್ಚಿಸುವ ಬಗೆ ಗಮನಾರ್ಹ

-ಆರ್. ಗೋಪಾಲ ಕೃಷ್ಣ

ಜಿನ್ನಿ’ ಕಥಾಸಂಕಲನ
ಮೀರ್ಜಾ ಬಷೀರ್ ರವರ ಎರಡನೆಯ ಕಥಾಸಂಕಲನ ‘ಜಿನ್ನಿ’, ಬಟ್ಟೆ ಇಲ್ಲದ ಊರಿನಲ್ಲಿ ಕಥಾ ಸಂಕಲನದ ಮೂಲಕ ಕಥಾ ಸಾಹಿತ್ಯದಲ್ಲಿ ಪ್ರಮುಖ ಹೆಸರಾಗಿ ಕಾಣಿಸಿಕೊಂಡಿರುವ ಇವರು; ವೃತ್ತಿಯಲ್ಲಿ ಪಶುವೈದ್ಯರೂ ಹಾಗೂ ಕತೆ ಬರೆಯುತ್ತಿರುವ ವಯಸ್ಸು 50 ವರುಷಗಳ ನಂತರ. .! ಇದು ಕುತೂಹಲವೂ ಆಶ್ಚರ್ಯಕರವೂ ಆಗಿದೆ. ಕತೆಯ ಜಾಣ್ಮಯ ನಿರೂಪಣೆ, ಸರಳತೆ, ಗಂಭೀರತೆ, ವಿಡಂಬನೆಯ ಮೂಲಕ ಓದುಗರನ್ನು ಸೆಳೆಯುವಂತೆ ಕತೆ ರಚಿಸುವ ಶೈಲಿ ಇವರಲ್ಲಿ ಕಾಣಬಹುದು.

ಜಿನ್ನಿ ಲೇಖಕರ ಎರಡನೆಯ ಹಾಗು ಹನ್ನೊಂದು ಕತೆಗಳ ಸಂಗ್ರಹ. ಒಂದೆರಡನ್ನು ಬಿಟ್ಟು ಉಳಿದವೆಲ್ಲವೂ ಪ್ರಜಾವಾಣಿ ಮತ್ತು ಮಯೂರದಲ್ಲಿ ಪ್ರಕಟವಾಗಿರುವುದಲ್ಲದೆ, ಕಾಸರಗೋಡು ಕನ್ನಡಶಾಲೆಯಲ್ಲಿ ‘ಪಯಣ’ ಎನ್ನುವ ಕತೆ ಪಠ್ಯವೂ ಆಗಿದೆ.

ಇಲ್ಲಿನ ಕತೆಗಳಲ್ಲಿ ಭಾರತೀಯ ಸಮಾಜದ ಕೆಲವೊಂದು ಪಲ್ಲಟಗಳನ್ನು ಕಾಣಬಹುದು. ಜಿನ್ನಿ ಕಥಾ ಸಂಕಲನದ ಮೊದಲ ಕತೆ, ಪಿಂಜಾರ ಸಮುದಾಯದ ಪ್ರತಿಭಾವಂತ ಹೆಣ್ಣು ಮಗಳೊಬ್ಬಳ ಕತೆ. ಧರ್ಮ, ಸಂಸ್ಕøತಿ, ಶಿಕ್ಷಣ ಇವುಗಳು ಕತೆಯ ಚರ್ಚೆಯಲ್ಲಿ ಕಾಣಬಹುದು. ಪಿಂಜಾರರು ಹಿಂದುಗಳೂ ಅಲ್ಲ ಮುಸ್ಲಿಂಮರೂ ಅಲ್ಲ, ಹೆಸರುಗಳಲ್ಲಿಯೇ ಇಂತಹ ಗೊಂದಲವನ್ನು ಕಾಣಬಹುದು. ಪಿಂಜಾರರ ಸಂಸ್ಕøತಿ ಮುಸ್ಲಿಂ ಸಮುದಾಯಕ್ಕೆ ಹತ್ತಿರವಾಗಿದ್ದರೂ ಮನೆ ಭಾಷೆ ಕನ್ನಡ, ಇಂತಹ ಧರ್ಮ ಸಂಕರದ ಅನೇಕ ಅಂಶಗಳನ್ನು ಕತೆಯಲ್ಲಿ ಕಾಣಬಹುದು. ಹಠಾತ್ತನೆ ಮುಸ್ಲಿಂ ಧರ್ಮಕ್ಕೆ ಪರಿವರ್ತನೆ ಗೊಳ್ಳುವ ಜಿನ್ನಿ ಕುಟುಂಬ ಅನೇಕ ಸಮಸ್ಸೆಗಳನ್ನು ಎದುರಿಸುತ್ತದೆ. ಬುರ್ಕಾ ಧರಿಸುವುದನ್ನು ಅಭ್ಯಸಿಸುವ, ನಮಾಜು ಕಲಿಯುವ, ಉರ್ದು ಭಾಷೆ ಕಲಿಯುವ ಹೊಸತನಗಳು ಜಿನ್ನಿ ತಾಯಿ ಸಣ್ಣಮ್ಮನಿಗೂ ಹಾಗೂ ಆಕೆಯ ಇನ್ನಿಬ್ಬರು ಗಂಡುಮಕ್ಕಳಿಗೂ ತೀರ ಕಷ್ಟವಾದರೂ, ಜಿನ್ನಿ ಅವುಗಳೆಲ್ಲವನ್ನೂ ಸರಾಗವಾಗಿ ಕಲಿಯುತ್ತಾಳೆ.

ಆದರೆ ಇಷ್ಟು ಚುರುಕು ಬುದ್ದಿಯುಳ್ಳ ಜಿನ್ನಿಯ ವಿದ್ಯಾಭ್ಯಾಸ ಧರ್ಮದ ಕಾರಣಕ್ಕಾಗಿ ರದ್ದಾಗುತ್ತದೆ…! ಜಿನ್ನಿಗೆ ಚಿಕ್ಕಂದಿನಿಂದಲೇ ಮದುವೆಯಾಗ ಬೇಕೆಂದು ನಿಶ್ಚಯ ವಾಗಿದ್ದ ಹುಡುಗ ಹುನ್ನೂರ್ ಬರೆದ ಪತ್ರವೇ ಗೊಂದಲವನ್ನು ಸೃಷ್ಟಿಸಿ ಜಿನ್ನಿಯ ಓದು ಮುಕ್ತಾಯಗೊಳ್ಳುತ್ತದೆ. ಅದು ಪ್ರೇಮವೆಂದು, ಸ್ಕೂಲಿಗೆ ಹೋಗುತ್ತಿರುವ ಹುಡುಗಿ ಬುರ್ಕಾ ಹಾಕಲಿಲ್ಲವೆಂದು ಕುಪಿತಗೊಂಡ ಕೆಲವು ಧರ್ಮಾಂಧರು ಜಿನ್ನಿಯ ವಿದ್ಯಾಭ್ಯಾಸಕ್ಕೆ ಕೊನೆ ಹಾಡುತ್ತಾರೆ.

ಒಂದು ಪ್ಲಾಸ್ಟಿಕ್ ಕವರ್ ಕತೆ ಇಂಗ್ಲೀಷ್ ಶಿಕ್ಷಣದ ಅದರ ವ್ಯಾಮೋಹದ ಕುರಿತಾಗಿ ಬರೆದಿರುವ ಕತೆ. ಇದರಲ್ಲಿ ಬರುವ ತಿಮ್ಮ ಇಂಗ್ಲಿಷ್ ಕಲಿಸಬೇಕೆಂದು ಹಠತೊಟ್ಟು ಕಾನ್ವೆಂಟ್‍ಗಳಿಗೆ ಕಳಿಸುವ ತಂದೆ ತಾಯಿಯರ ಕೂಸಾಗಿ ಕಾಣುತ್ತಾನೆ, ಸಹಜತೆ ಇಲ್ಲದ ಶಿಕ್ಷಣ, ತ್ರಾಸದಾಯಕ ಶಿಕ್ಷಣ ಮತ್ತು ಪ್ರಾಯೋಗಿಕವಲ್ಲದ ಶಿಕ್ಷಣದ ಕುರಿತು ಕತೆ ಸೂಕ್ಷ್ಮವಾಗಿ ಚರ್ಚಿಸುತ್ತದೆ. ಕತೆಯ ಕೊನೆಗೆ ಉಗಾದಿ ದಿನ ತಿಮ್ಮನ ತಂದೆ ಧರಣಿ ಸಾಕಿದ್ದ ಎರಡು ಹೋರಿಗಳು ಸುಂಟರ ಗಾಳಿಯಲ್ಲಿ ಬೀಸಿ ಶಬ್ದ ಮಾಡುತ್ತಾ ಬಂದ ಪ್ಲಾಸ್ಟಿಕ್ ಕವರಿಗೆ ಹೆದರಿ ಓಡಿ ಕಾಲು ಮುರಿದುಕೊಳ್ಳುತ್ತವೆ. ಆ ಪ್ಲಾಸ್ಟಿಕ್ ಕವರ್ ಖಾಸಗಿ ಶಾಲೆಯ ಪ್ರಚಾರ ಪತ್ರವಾಗಿರುತ್ತದೆ, ಇಂತಹ ಪ್ರಚಾರಕ್ಕೆ ಮನಸೋತರೆ ಜೀವನವೇ ಕುಂಟಿತವಾಗುತ್ತದೋ ಎನ್ನುವ ಸೂಚನೆಯೊಂದಿಗೆ ಕತೆ ಕೊನೆಯಾಗುತ್ತದೆ,.

‘ದಾಳಿ’ ಒಂದು ಪ್ರಮುಖ ಕತೆ ಮನುಷ್ಯ ತನ್ನ ವಯಕ್ತಿಕ ಆಸೆಗಳಿಗಾಗಿ ಹುಟ್ಟಿಸುವ ಕೋಮುದ್ವೇಶ ಓದುಗರನ್ನು ಗಲಿಬಿಲಿ ಗೊಳಿಸುತ್ತದೆ. ತುಂಬಾ ಸುಂದರವಾದ ಹೆಣ್ಣು ಸಕೀನಾ, ಆಕೆಯ ಗಂಡ ಹೈದರ್, ಹೈದರ್‍ನ ತಾಯಿ ಖಾತೂನ, ಮತ್ತು ಸಕೀನಾಳ ಪುಟ್ಟ ಮಗಳು ಇದು ಬಡ ಕುಟುಂಬ. ಸಕೀನಾಳ ಸೌಂದರ್ಯದ ಕಾರಣಕ್ಕಾಗಿ ಊರಿನ ಪ್ರಮುಖರು ಹೆಣೆಯುವ ಅಮಾನವೀಯ ಕುತಂತ್ರ ಓದುಗರನ್ನು ಬೆಚ್ಚಬೀಳಿಸುತ್ತದೆ. ಹೈದರ್ ಎಂತಹವನೆಂದು ಊರಿಗೆಲ್ಲಾ ಗೊತ್ತಿದ್ದರೂ ಆತ ಸೈಕಲ್ಲಿನಲ್ಲಿ ಮನೆಗಾಗಿ ತಂದ ಕುರಿಮಾಂಸ ಕ್ಷಣಾರ್ಧ ದಲ್ಲಿ ದನದ ಮಾಂಸವಾಗಿ, ಆತ ಉಗ್ರಗಾಮಿಯಾಗಿ ಹೆಸರು ಪಡೆದುಕೊಳ್ಳುತ್ತಾನೆ. ಉಸ್ಮಾನ್ ಸಹೇಬ್ ಮತ್ತು ಊರಿನ ಮುಖ್ಯಸ್ಥ ಸಕೀನಾಳನ್ನು ಪಡೆಯಬೇಕೆಂಬ ಒಂದೇ ಒಂದು ಕಾರಣ ಅಮಾಯಕ ಹೈದರನಿಗೆ ಈ ಗತಿ ಬಂದಿರುವುದು. ಉಸ್ಮಾನ್ ಸಾಹೇಬರ ತೋಟದಲ್ಲಿ ಹೈದರ್ ಇದ್ದಾನೆಂದು ತಿಳಿದು ಅಲ್ಲಿಗೆ ಹೋದ ಸಕೀನಾಳ ಜೀವನ ಕಾರ್ಗತ್ತಲೆಯಲ್ಲಿ ಕೊನೆಗೊಂಡರೆ; ಖಾತೂನ ಗುಡಿಸಿಲಿನಲ್ಲಿ ಕೊನೆಯುಸಿರೆಳೆಯುವ ಮೂಲಕ ಕತೆ ಕೊನೆಯಾಗುತ್ರತದೆ. ಒಟ್ಟಾರೆ ದುರಂತವನ್ನು ತಲುಪುತ್ತದೆ. ಈ ದುರಂತ ವ್ಯಕ್ತಿಗಳ ಸ್ವಾರ್ಥಕ್ಕಾಗಿ ಸೃಷ್ಟಿಯಾದ ದುರಂತ, ಒಂದು ಕುಟುಂಬ ಅಥವಾ ವ್ಯಕ್ತಿಗಳನ್ನೇ ನಿರ್ನಾಮ ಮಾಡುವಷ್ಟು ಶಕ್ತಿ ಧರ್ಮಾಂದತೆಗಿರುವುದು ಭೀಕರ ಸತ್ಯ (ಇಂದು ಕರ್ನಾಟಕದ ಕರಾವಳಿಯಲ್ಲಿ ಇಂತಹ ವಾಸ್ತವವನ್ನು ನೋಡಬಹುದು)

ಹಾಗೆಯೇ ಎಲ್ಲಾ ಕತೆಗಳೂ ಒಂದು ಸನ್ನಿವೇಶವನ್ನು ಮಾತ್ರ ಪ್ರತಿದ್ವನಿಸದೇ ಇಡೀ ಭಾರತದ ಸನ್ನಿವೇಶಗಳನ್ನು ಒಳಗೊಳ್ಳುತ್ತದೆ. ಉಮ್ಮ ಮತ್ತು ಮಸೀದಿ ಕತೆಯಲ್ಲಿ ಧಾರ್ಮಿಕ ಭ್ರಾತೃತ್ವದ, ಜೀವನ ಮೌಲ್ಯದ ಅಂಶಗಳು ಒಂದು ಪ್ರದೇಶದಲ್ಲಿ ನಡೆಯುತ್ತಿದ್ದಾಗ; ಕೆಲವರು ಮಸೀದಿಯನ್ನು ನೆಲಸಮ ಮಾಡಿ ಕುರುಹೂ ಕಾಣದಂತೆ ಮಾಡುತ್ತಾರೆ. ಸ್ವಾತಂತ್ರದ ಲಾಡು ಉಂಡೆಗಳು ಕತೆಯಲ್ಲಿ ಒಂದು ಮಾತು ತೀಕ್ಷ್ಣವಾಗಿರುವುದು “ನಿನಗೆ ಲಾಡು ಬೇಕೆನೋ, ಹೋಗೋ ನಿಮ್ಮ ದೇಶಕ್ಕೆ, ನೆನ್ನೆಯೇ ಮುಗೀತಲ್ಲ ನಿಮ್ಮ ಸ್ವಾತಂತ್ರದ ದಿನ” ಇದು ಭಾರತೀಯ ಸಾಮರಸ್ಸತೆ ಎಷ್ಟುಬೇಗ ಮರೆಯಾಗಿಬಿಡಬಲ್ಲದು ಎನ್ನುವುದಕ್ಕೆ ಉದಾಹರಣೆ.

ಈ ಮಾತುಗಳು ಪ್ರಜ್ಞಾಪೂರ್ವಕವಾಗಿ ಬರದಿದ್ದರೂ ಉಂಟುಮಾಡುವ ಪರಿಣಾಮ ತೀವ್ರಸ್ವರೂಪದ್ದು. ‘ಪಯಣ’ ಮತ್ತು ‘ಉಮ್ಮು ಮತ್ತು ಮಸೀದಿ’ ಧಾರ್ಮಿಕ ಸಾಮರಸ್ಸಯದ ಸುಂದರ ಚಿತ್ರಗಳನ್ನು ನೀಡುತ್ತದೆ. ಧರ್ಮದ ಮೂಲಕ ವ್ಯಕ್ತಿಗಳನ್ನು ವಿಘಟಿಸುತ್ತಿರುವ ಈ ಸಂಧರ್ಭ ದಲ್ಲಿಇಂತಹ ಸಾಮರಸ್ಸದ ಕತೆಗಳು ಬಹಳ ಅವಶ್ಯಕ ಎನಿಸುತ್ತವೆ. ‘ಹುಣಸೆ ಮರದ ದೆವ್ವ’ ಸ್ತ್ರೀ ಪ್ರಧಾನ್ಯತೆ ಕುರಿತು ಒಂದೇ ಪುಟದಲ್ಲಿ ಹೇಳುವ ಕತೆ, ಅಕ್ಕ ತಮ್ಮರ ಸಂಭಾಷಣೆ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಸೂಕ್ಷ ಪ್ರಶ್ನೆಗಳನ್ನು ಒಳಗೊಂಡಿರುವುದು ಕಾಣಬಹುದು. ‘ಹೆಜ್ಜೆ’ ಮತ್ತು ‘ಅವರು ಹೇಳಿದ್ದೆಲ್ಲಾ ಸುಳ್ಳಿರಲಿ’ ಕತೆಗಳಲ್ಲಿ ಪುಟ್ಟ ಮಕ್ಕಳ ಮೂಲಕ ಅನ್ಯೋನ್ಯತೆ, ಮಾನವೀಯತೆ, ಪ್ರೀತಿ ಅಂಶಗಳು ಮುಗ್ದವಾಗಿ ಸುಂದರವಾಗಿ ರೂಪುಗಳ್ಳುತ್ತವೆ. ಓದುಗರನ್ನು ಭಾವತೀವ್ರತೆ ತರಬಹುದಾದ ‘ದಾಳಿ’ ಯ ಕ್ರೌರ್ಯ ಚಿಕ್ಕ ಮಕ್ಕಳ ಮುಗ್ದ ಮಾನವೀಯತೆಗಳು, ಕತೆಯ ಪಾತ್ರಗಳ ಬಡತನ ಕತೆಗಳ ಶಕ್ತಿಯನ್ನು ಹೆಚ್ಚಿಸುತ್ತವೆ. ‘ಗುಬ್ಬಿ ದಾಟಿಸಿದ ದಾರ’ ಕತೆಯ ಕಾಕತಾಳೀಯತೆ ಕೌತುಕದ ಪ್ರಶ್ನೆಗಳಾಗಿಯೇ ಉಳಿಯುತ್ತವೆ.

‘ಕತೆ’ ಹೇಳು-ಕೇಳು ಪರಂಪರೆಯನ್ನು ದಾಟಿ ವಿವಿದ ದಾಟಿಗಳಿಗೆ ತನ್ನನ್ನು ವರ್ಗಾಯಿಸಿಕೊಂಡಿದೆ. ಅದರಲ್ಲಿ ಬರೆಯುವ, ಓದುವ ಕಾಲ ಇಂದು. ಕತೆ ಇಂದು ಏಕಾಂತದ ಓದು ಮತ್ತು ನಿಶ್ಯಬ್ದದ ಓದಾಗಿ ಮುಂದು ವರೆಯುತ್ತಿದೆ(ಇಲ್ಲಿ ಊಂ ಗುಟ್ಟುವಿಕೆ ಇರದು) ಇದು ಕತೆಯ ಮೂಲಭೂತ ಲಕ್ಷಣಕ್ಕೆ ವಿರುದ್ದ ಎನಿಸಿದರೂ ಕನ್ನಡ ಕಥಾ ಜಗತ್ತು ಇದೇ ಸಂಧರ್ಭ ದಲ್ಲಿ ವಿಸ್ತøತ ಗೊಳ್ಳುತ್ತಿದೆ. ಈ ವಿಸ್ತøತ ಗೊಳ್ಳುವಿಕೆಯಲ್ಲಿ ವಿವಿಧ ಕತೆಗಾರರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದರೂ ‘ಕತೆ’ ಸರಳತೆ ಮತ್ತು ಸಹಜತೆಇಂದಲೇ ಪ್ರಖ್ಯಾತಿ ಪಡೆಯುತ್ತಿದೆ. ತೇಜಸ್ವಿ, ಲಂಕೇಶ್, ಚಿತ್ತಾಲರು, ಮಾಸ್ತಿ ಇದೇ ಕಾರಣದಿಂದಲೇ ಜನಜನಿತರು. ಮೀರ್ಜಾ ಬಷೀರ್ ರವರ ಕತೆಗಳಲ್ಲಿ ಇಂತಹ ಸಹಜತೆ ಮತ್ತು ಸರಳತೆಗಳು ಜೊತೆಗೆ ಗಂಭೀರ ವಿಚಾರಗಳ ಚರ್ಚೆ ಇರುವುದು ಗಮನಾರ್ಹ. ವೃತ್ತಿಯ ಸಹಜ ಸುತ್ತಾಟದಿಂದ, ಧಾರ್ಮಿಕ ಸಂಸ್ಕøತಿಯ ಹಿನ್ನೆಲೆಯಿಂದ ಇವರ ಕತೆಗಳು ಮತ್ತಷ್ಟು ವೈವಿದ್ಯವಾಗಿ ಕಾಣಿಸುತ್ತವೆ.

ಮುಸ್ಲಿಂ ಸಮುದಾಯದ ಆಂತರಿಕ ಮತ್ತು ಬಾಹ್ಯ ಅಂಶಗಳನ್ನು ದೇಶದ ರಾಜಕಾರಣದೊಂದಿಗೆ ಚರ್ಚಿಸುವ ಬಗೆ ಗಮನಾರ್ಹವಾದದ್ದು. ಬಲಪಂಥೀಯ ಚಿಂತನೆಗಳು ದೇಶದಲ್ಲಿ ಉಂಟು ಮಾಡಿರುವ ಅರಾಜಕತ್ವದ ಕುರಿತು ಕತೆಗಳು ಮಾತನಾಡುತ್ತವೆ. ಕತೆಗಳಲ್ಲಿನ ವ್ಯಕ್ತಿಗಳು ಇಂತಹ ಅರಾಜಕತ್ವದಲ್ಲಿ ಹಠಾತ್ತನೆ ಸಿಲುಕಿಕೊಳ್ಳುತ್ತಾರೆ, ಇದು ವಾಸ್ತವವೂ ದಾರುಣವೂ ಆಗಿರುವುದು ದುರದೃಷ್ಟಕರ.

ಕೊನೆಯದಾಗಿ ಇದೇ ಪುಸ್ತಕದ ಮುನ್ನುಡಿಯ ಮಾತಿನ ಮೂಲಕ ಈ ಬರಹವನ್ನು ಮುಕ್ತಾಯ ಗೊಳಿಸುವುದು ಉತ್ತಮ “ದೇಶದ ಕೋಮುಹಿಂಸೆಯ ಘಟನೆಗಳನ್ನು ಸಂವೇದನಾಶೀಲರು ಸುಲಭವಾಗಿ ಮರೆಯಲಾರರು. ಒಂದು ವೇಳೆ ಮರೆತರೆ ಅವರು ಪ್ರಕಾಂಡ ಧರ್ಮಬೀರುಗಳೋ ಅಥವಾ ಸಾದತ್ ಹಸನ್ ಮಾಂಟೋ ರವರ ತೋಬಾ ತೇಕ್ ಸಿಂಗ್ ಕತೆಯ ಅರೆ ಹುಚ್ಚನಾಗಿರಬೇಕು”. ಆದರೆ ಬಲಪಂಥೀಯ ಚಿಂತನೆ ಬೆಳೆಸುತ್ತಿರುವ ರಾಷ್ಟ್ರಗಳಲ್ಲಿ ಇಂತಹ ಹಿಂಸೆಯನ್ನು ಮರೆಸುವುದರೊಂದಿಗೆ, ಹಿಂಸೆಯನ್ನು ಪ್ರಚೋದಿಸಿ ವೈಭವೀ ಕರಿಸಲಾಗುತ್ತಿದೆ. ಜನರ ಮನಸ್ಸನ್ನು ಪ್ರಕ್ಷುಬ್ದಗೊಳಿಸಿ ಭ್ರಮೆ ಮತ್ತು ಸುಳ್ಳುಗಳು ನಿಜವೆಂದು ಭಾವಿಸುವಂತೆ ವ್ಯವಸ್ತಿತ ಕುತಂತ್ರಗಳನ್ನು ಮಾಡಲಾಗುತ್ತಿದೆ, ಇಂತಹ ಕುತಂತ್ರಗಳು ವಯಕ್ತಿಕ ಅಥವಾ ರಾಜಕೀಯ ಹಿತಾಸಕ್ತಿಗಳಿಗಾಗಿ ನಡೆಯುತ್ತಿವೆ.

ಆದರೆ ಇಂತಹ ಕುತಂತ್ರಗಳು ಸಮಾಜ ಎಂದೂ ಸುಧಾರಿಸಿಕೊಳ್ಳದಂತಹ ನೋವನ್ನು ಮತ್ತೆ ಮತ್ತೆ ಸೃಷ್ಟಿಮಾಡುತ್ತಲೇ ಇರುತ್ತದೆ. ಸಂಸ್ಕøತಿ, ಏಕತೆ, ದೇಶಪ್ರೇ, ಮತದ ಹೆಸರಿನಲ್ಲಿ ಜನರ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಿಂಸೆಯನ್ನು ಸೃಷ್ಟಿಸಬಲ್ಲದು. ಇದನ್ನು ಗ್ರಹಿಸಿ ಎಚ್ಚರಗೊಳಿಸುವ ಕೆಲಸ ಈ ಕತೆಗಳು ಮಾಡುತ್ತವೆ.

Leave a Reply

Your email address will not be published.