ಮುಂಗಾರು ಕಥಾ ಸ್ಪರ್ಧೆಯ ಫಲಿತಾಂಶ

 ಮುಂಗಾರು ಕಥಾ ಸ್ಪರ್ಧೆಯ ಬಹುಮಾನ ವಿಜೇತರು

ಮೊದಲನೆಯ ಬಹುಮಾನ: ಕುಮಾರಿ ಫಾತಿಮಾ ಸುರಯ್ಯ, ಬಿ.ಎಸ್ಸಿ.,
ಸಂತ ಆಗ್ನೇಸ್ ಕಾಲೇಜು, ಮಂಗಳೂರು

ಕತೆ: ಕುರುಡು ಕಾಂಚಾಣ

ಎರಡನೆಯ ಬಹುಮಾನ: ನಾಗರಾಜ ಕೋರಿ, ಸಂಶೋಧನಾ ವಿದ್ಯಾರ್ಥಿ,
ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕತೆ: ತನುಬಿಂದಿಗೆ

ಮೂರನೆಯ ಬಹುಮಾನ: ಕುಮಾರಿ ಮೇಘನಾ ರಾಣಿ, ಪ್ರಥಮ ಬಿ.ಎ.
ಅಕ್ಕಮಹಾದೇವಿ ಮಹಿಳಾ ವಿದ್ಯಾಲಯ, ಬೀದರ್

ಕತೆ: ಪ್ರಾಮಾಣಿಕತೆ

ಮುಂಗಾರು ಕಥಾ ಸ್ಪರ್ಧೆಯ ಫಲಿತಾಂಶ : ತೀರ್ಪುಗಾರರ ಅಭಿಪ್ರಾಯಗಳು  

       ಈ ಕಥಾ ಸ್ಪರ್ಧೆಗೆ ಬಂದ ಕಥೆಗಳನ್ನು ನೋಡಿ ನಿರಾಸೆಯಾಯಿತು. ಸಂಪಾದಕರಿಗೂ ಇದೇ ಭಾವ ಹುಟ್ಟಿತ್ತು.

ನಮ್ಮ ವಿದ್ಯಾರ್ಥಿಗಳಿಗೆ ಕಥೆಯ  ರಚನಾ ವಿಧಾನದ ಬಗ್ಗೆಯೇ ಅರಿವಿಲ್ಲ ಎನ್ನಿಸುವಷ್ಟು ಬಾಲ ಮಟ್ಟದ (ಒಂದಾನೊಂದು ಕಾಲದಲ್ಲಿ..)ಕಥೆಗಳೂ ಇದ್ದವು.  ಈ ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲಾ 18-21ರ ಒಳಗಿನವರು).  ಈ ವೇಳೆಗೆ ಕನ್ನಡದ ಹತ್ತಾರು  ಕಥಾ ಕೇಂದ್ರಿತ ನಿಯತಕಾಲಿಕೆಗಳು, ವಾರಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆದಿರುತ್ತದಷ್ಟೇ.  ಗುಣಮಟ್ಟದ ಕಥಾ ಸಂಕಲನಗಳಲ್ಲದಿದ್ದರೂ ಜನಪ್ರಿಯ ಹಂದರದ ಕಥೆಗಳನ್ನಾದರೂ ಓದಿರುತ್ತಾರೆ.

 ಆದರೆ ಇಲ್ಲಿಗೆ ಬಂದ ಬಹುತೇಕ ಕಥೆಗಳನ್ನು ನೋಡಿದರೆ ಕಥೆಯ ಮೂಲ ರಚನಾ ಕೌಶಲ್ಯದ ಅರಿವೇ ಇಲ್ಲದಂಥಾ ರಚನೆಗಳಿದ್ದವು(ಉದಾ: ಕಥಾ ಸಾರಾಂಶ, ಕಥೆಯ ನೀತಿ, ಪಾತ್ರವರ್ಗದ ವಿವರಣೆ ಇತ್ಯಾದಿ ಕೊಟ್ಟ ಮಕ್ಕಳಿದ್ದರು!) ಅಂದರೆ ಈ ಮಕ್ಕಳು ಕಥೆಗಳನ್ನುಓದುತ್ತಿಲ್ಲವೇ?

ಈ ಎಲ್ಲಾ ರಚನೆಗಳ ಮಧ್ಯೆ ಮೂರು ಕಥೆಗಳು ಗಮನ ಸೆಳೆದವು.  ಅದೂ ಕಥಾ ರಚನೆಯ ಬೇರೆ ಬೇರೆ ಕಾರಣಗಳಿಗೆ.

ಮೊದಲನೆಯ ಸ್ಥಾನ ಪಡೆದ ‘ ಕುರುಡು ಕಾಂಚಾಣ’ ಬಹುಮಾನದ ಆಮಿಷಕ್ಕೆ ಬಲಿಬಿದ್ದು ಬರ್ಬಾದಾದ ಕುಟುಂಬದ ಬಗ್ಗೆ. ಸಾಕಷ್ಟುಸಾವಧಾನದಲ್ಲಿ ವಿವರಗಳನ್ನು ಇಡುತ್ತಾ ಈ ಕಥೆ ಬೆಳೆಯುತ್ತದೆ. ಕೊನೆಯ ಭಾಗ ಕೊಂಚ ನಾಟಕೀಯವಾದರೂ ಈ ಕಥೆಯರಚನೆಯಲ್ಲಿ ಹಿಡಿತ ಕಂಡುಬರುತ್ತದೆ.

ಎರಡನೇ ಸ್ಥಾನ ಪಡೆದ ‘ತನುಬಿಂದಿಗೆ’ ಪ್ರಾದೇಶಿಕ ಭಾಷೆ ಸಂಸ್ಕøತಿಯ ವಿವರಗಳನ್ನು ಇಡುತ್ತದೆ. ಗ್ರಾಮೀಣ ಪ್ರದೇಶದಪಾಳೇಗಾರಿಕೆಯಲ್ಲಿ ನಲುಗುವ ಕಥಾ ಹೂರಣ ಈಗಾಗಲೇ ಬಂಡಾಯದ ಖಾಯಂ ವಸ್ತುವಾಗಿ ಸವಕಲಾಗಿದೆ. ಆದರೂ ಕಥೆಯಪ್ರಾದೇಶಿಕ ವಿವರಗಳು ಇದನ್ನು ನಿಜ ನಿಜ ಎಂಬಂತೆ ಕಟ್ಟಿಕೊಡುತ್ತದೆ.

ಮೂರನೇ ಸ್ಥಾನ ಪಡೆದ “ ಪ್ರಾಮಾಣಿಕತೆ” ರಚನೆಯ ದೃಷ್ಟಿಯಿಂದ ಅಷ್ಟೇನೂ ಉತ್ಕøಷ್ಟ ಅಲ್ಲ. ಕೊಂಚ ವಾಚ್ಯವೂ ಆಗಿದೆ. ಆದರೆಕಥೆಯ ತಂತ್ರ ಗಮನಾರ್ಹ. ಒಬ್ಬ ಇನ್ನೊಬ್ಬನಿಗೆ ಹೇಳುವ ತಂತ್ರದ ಮೂಲಕ ಕಥೆಗಾರ/ಕಥೆಗಾರ್ತಿ ಭಾವನಾತ್ಮಕ ಸುಳಿಗೆ ಬೀಳದೇಮಾನಸಿಕ ದೂರ ಕಾಪಾಡಿಕೊಂಡು ಕಥೆ ಕಟ್ಟುವ ಪ್ರಯತ್ನ ಇದೆ. ಮಾಸ್ತಿ ಹಾಕಿಕೊಟ್ಟ ಈ ದಾರಿ ಎಲ್ಲಾ ಎಳೆಯ ಬರಹಗಾರರಿಗೂಮುಖ್ಯ.

ಈ ಕಥೆಗಳನ್ನು ಸ್ಪರ್ಧೆಯಲ್ಲಿ ಭಾಗಿಯಾದ ಇತರ ತರುಣ ಕಥೆಗಾರರೂ ಓದಿದರೆ ತಮ್ಮ ರಚನೆಯ ಅರೆಕೊರೆಗಳನ್ನುತಿದ್ದಿಕೊಳ್ಳಬಹುದು.ದೊಡ್ಡ ಮಾದರಿಯನ್ನು ತುಲನೆಗೆ ಇಡುವ ಬದಲು ಸರೀಕರ ರಚನೆ ಓದಿಕೊಳ್ಳುವುದು ತಿದ್ದಿಕೊಳ್ಳಲು ಅನುಕೂಲ.

 ಈ ಕಥೆಗಾರರೆಲ್ಲಾ ಕಾಲೇಜುಗಳ ಮುಖ್ಯಸ್ಥರ ಪ್ರಮಾಣ ಪತ್ರದ ಮೂಲಕ ಸ್ಪರ್ಧೆಗೆ ಕಥೆ ಕಳಿಸಿದ್ದಾರೆ.

ಇದೇನು ಸ್ಥಳದಲ್ಲೇ ಕಥೆ ಬರೆಯುವ ಸ್ಪರ್ಧೆ ಅಲ್ಲ. ಆದ್ದರಿಂದ ಈ ಕಥೆಗಳನ್ನು ಆಯಾಯ ಕಾಲೇಜಿನ ಭಾಷಾ ಉಪನ್ಯಾಸಕರೋ,ಸಾಹಿತ್ಯಾಸಕ್ತ ಉಪನ್ಯಾಸಕರೋ ಒಮ್ಮೆ ನೋಡಿ ಮಾರ್ಗದರ್ಶನ ಮಾಡಬಹುದಿತ್ತು.  ಪ್ರಾಯಶಃ ಅಂಥಾ ಜವಾಬ್ದಾರಿ ಮುಖ್ಯ ಅಂತಕಾಲೇಜಿನ ಮೇಷ್ಟ್ರುಗಳಿಗೆ ಅನ್ನಿಸಿಲ್ಲವೋ ಏನೋ..!!

 ನಾವೆಲ್ಲಾ ಬರೆಯುವಾಗ ನಮ್ಮ ಮೇಷ್ಟ್ರುಗಳು ಏನು ಬರೆದರೂ ಓದಿ ಸಲಹೆ ನೀಡುತ್ತಿದ್ದರು. ಇದರಿಂದಾಗಿ ನನ್ನಂಥವನುಕಥೆಗಾರನಾಗಿ ಬೆಳೆಯದಿದ್ದರೂ, ನನ್ನ ಸಂವೇದನೆ ಬೆಳೆಯಲು ಸಹಾಯವಾಯಿತು. ಎಳೆ ಪ್ರತಿಭೆಗಳನ್ನು ಈ ಹಂತದಲ್ಲೇ ಗುರುತಿಸುವಕಣ್ಣು ಉಪನ್ಯಾಸಕರಿಗೆ ಬಾರದಿದ್ದರೆ  ಬರೆಯುವ ಉತ್ಸಾಹ ತೋರಿಸುವ ಮಕ್ಕಳೆಲ್ಲಾ   ಬೆಳೆದಂತೆ ಕೃಷವಾದದ್ದನ್ನೋವಿಕಾರವಾದದ್ದನ್ನೋ ಬರೆಯಬಹುದು.

 ಈ ಕಥೆಗಳನ್ನು ಓದಿ ತೀರ್ಪು ನೀಡುವ ಅವಕಾಶ ಕೊಟ್ಟು ಒಂದು ಭರವಸೆ ಮತ್ತು ಕಳವಳ ಎರಡೂ ನನ್ನಲ್ಲಿ ಹುಟ್ಟಿಸಿದಸಂಚಾಲಕರಿಗೆ ನಾನು ಋಣಿ.

ಕೆ ಪಿ ಸುರೇಶ 

Leave a Reply

Your email address will not be published.