ಮುಂಗಾರುಮಳೆಯೇ…

-ಹರಿಪ್ರಸಾದ್

By mtkopone (http://www.flickr.com/photos/mtkopone/3146168459/) [CC BY 2.0 ]

By mtkopone (http://www.flickr.com/photos/mtkopone/3146168459/) [CC BY 2.0 ]

ಮುಂಗಾರು ಮಳೆ. ಆ ಹೆಸರೇ ಒಂದು ರೋಮಾಂಚನ. ಕಾಲೇಜು ಹುಡುಗ-ಹುಡುಗಿಯರಿಗೆಲ್ಲ ಎಷ್ಟೊಂದು ನೆನಪು, ಖುಷಿ ಏನೆಲ್ಲ ತರಬಹುದಾದ ಪದವೇ ಮುಂಗಾರು ಮಳೆ. ಆದರೆ ನಾನು ಬರೆಯುತ್ತಿರುವುದು ಮುಂಗಾರು ಮಳೆ ಸಿನಿಮಾ ಕುರಿತು ಅಲ್ಲ. ಬರೇ ಮುಂಗಾರುಮಳೆ ಕುರಿತು ಮಾತ್ರ. ಆದರೆ ಮುಂಗಾರುಮಳೆ ಎಂಬುದು ಮಳೆ ಮಾತ್ರ ಅಲ್ಲವೇ ಅಲ್ಲ. ಮುಂಗಾರು ಎಂದೊಡನೆ ರೈತನಿಗೆ ಆ ಸಾಲಿನಲ್ಲಿ ಬೀಳುವ ಮೊದಲ ಮಳೆಯ ಸದ್ದು ಕೇಳಿಸುತ್ತದೆ. ಅದರ ಜೊತೆಗೆ ಆತನಿಗೆ ಜಮೀನು ಉಳುವ, ಪೈರು ನಾಟಿ ಮಾಡುವ ತನ್ಮೂಲಕ ತನ್ನ ಬದುಕನ್ನು ಇನ್ನೊಂದು ವರ್ಷ ಕಟ್ಟಿಕೊಡುವ ಭರವಸೆಯೇ ಈ ಮುಂಗಾರುಮಳೆ.

ದೇಶ ಎಷ್ಟೇ `ಭೂಭಾರತ’ಕ್ಕೆ ಒಳಗೊಳ್ಳುತ್ತಿರಬಹುದು, ಜಿಡಿಪಿ ಬಗ್ಗೆ ತಜ್ಞರು ಏನೇ ಹೇಳುತ್ತಿರಬಹುದು, ಟೆಕ್ಕಿಗಳು ಬಿಸಿಲಲ್ಲಿ ಒಣಗುವ ಬೇಸಾಯ ಲಾಭದಾಯಕವಲ್ಲ ಎಂದು ತಮ್ಮ ಅನುಭವವೇ ಇಂಡಿಯಾ ಎನ್ನುವ ಮಾತುಗಳನ್ನಾಡುತ್ತಿರಬಹುದು. ಭಾರತ ಮೂಲತಃ ಕೃಷಿ ಪ್ರಧಾನ ದೇಶವೇ ಇನ್ನೂ ಆಗಿರುವುದರಿಂದ ಮುಂಗಾರುಮಳೆ ರೈತರ ಬದುಕಿನ ಭರವಸೆಯ ಆಸರೆ. ಅಥವಾ ಮುಂಗಾರು ಎಂಬುದೇ ಎಲ್ಲರ ಬದುಕಿನ ಮುನ್ನುಡಿ. ರೈತರಿಂದ ಹಿಡಿದು ವ್ಯಾಪಾರಿಯವರೆಗೆ ಎಲ್ಲರ ಬದುಕನ್ನು ನಿರ್ಣಯಿಸುವುದು ಈ ಮುಂಗಾರುಮಳೆಯೇ. ಮಳೆಯೇ ಈ ಜಗತ್ತಿನ ಸೂತ್ರ ಎಂಬ ರೈತರ ಅನುಭವದ ಮಾತನ್ನು ಕೊಂಚ ನವೀಕರಿಸಿ, ಮುಂಗಾರು ಮಳೆಯನ್ನು ಹೊಸ ತವಕದ, ಹೊಸ ತಲ್ಲಣದ ಅಥವಾ ಮುಂಬರುವ ವರ್ಷದ ಬದುಕಿನ ದಿಕ್ಸೂಚಿ ಎಂದು ಕರೆಯಬಹುದು.

ಕಳೆದ ಸಂಕ್ರಾಂತಿ ವೇಳೆಗೆ ಧಾನ್ಯ ಒಕ್ಕಣೆ ಮಾಡಿ ಮನೆಗೆ ತಂದುಕೊಂಡಿದ್ದ ರೈತಾಪಿ ವರ್ಗ ಆ ವರ್ಷದ ಬೆಳೆ-ಮಳೆ, ಮಾರುಕಟ್ಟೆಯ ಏರಿಳಿತ, ಲಾಭ-ನಷ್ಟ ಎಲ್ಲವನ್ನು ಮೆಲುಕು ಹಾಕುತ್ತಿರುತ್ತದೆ. ಹೀಗೆ ತನ್ನ ಕಳೆದ ಒಂದು ಬೇಸಾಯದ ವರುಷದಿಂದ ತಾತ್ಕಾಲಿಕ ಬಿಡುವು ಪಡೆದುಕೊಂಡ ರೈತರು ಶಿವರಾತ್ರಿಯಿಂದ ಹಿಡಿದು ಅಂದರೆ ಫೆಬ್ರವರಿಯ ಆಚೀಚೆಯಿಂದ ಮೇ ತಿಂಗಳ ತನಕ ಊರೂರುಗಳಲ್ಲಿ ಜಾತ್ರೆ, ಉತ್ಸವಗಳಲ್ಲಿತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇದು ಅವರ ಬಿಡುವೂ ಹೌದು, ಮುಂಬರುವ ವರ್ಷಕ್ಕಾದರೂ ಒಳ್ಳೆ ಮಳೆ-ಬೆಳೆ ಕೊಡು ಅಂತ ದೇವರಲ್ಲಿ ಮೊರೆಯಿಡುವ ಭಕ್ತಿ-ನಂಬಿಕೆಯ ಪರಿಯೂ ಹೌದು. ಈ ಅವಧಿಯಲ್ಲಿ ನಡೆವ ಜಾತ್ರೆಗಳಲ್ಲಿ ಎತ್ತುಗಳನ್ನು ಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ. ಈ ಜಾತ್ರೆಗಳಲ್ಲಿ ಎತ್ತು ಕೊಡಿಸುವ, ಮಾರುವ ದಲ್ಲಾಳಿಗಳ ಬದುಕೂ ನಡೆಯುತ್ತದೆ ಎಂಬುದೂ ಅಷ್ಟೇ ನಿಜ. ಎತ್ತುಗಳನ್ನು ಕೊಳ್ಳುವುದು ಅಂದರೆ ಮುಂದಿನ ವರುಷದ ಬೇಸಾಯಕ್ಕೆ ತಾನು ಸಿದ್ದ ಎಂದು ರೈತ ಸಾರಿದಂತೆ. ಅಥವಾ ಬದಲಾಗಿರುವ ಇಂದಿನ ಕೃಷಿ ಸಂದರ್ಭದಲ್ಲಿ ಟ್ರಾಕ್ಟರ್ ಸಾಲಕ್ಕೊ, ಟ್ರಿಲ್ಲರ್ ಕೊಳ್ಳುವುದರ ಬಗ್ಗೆ ರೈತ ಚಿಂತಿಸುವುದೂ ಕೂಡ ವ್ಯವಸಾಯದ ಮುನ್ನುಡಿ ಎನ್ನಬಹುದೆ?

ಏಪ್ರಿಲ್ ಕೊನೆಯಿಂದಲೆ ಹವಾಮಾನದ ತಜ್ಞರು ಈ ಬಾರಿಯ ಮುಂಗಾರು ಹೇಗಿರುತ್ತದೆ, ಎಷ್ಟೆಷ್ಟು ಸೆಂಟಿಮೀಟರ್ ಮಳೆ ಆಗುತ್ತದೆ, ಯಾವ ಭಾಗಕ್ಕೆ ಹೆಚ್ಚು, ಯಾವ ಭಾಗಕ್ಕೆ ಕಡಿಮೆ? ಇತ್ಯಾದಿ ವಿವರಗಳನ್ನೆಲ್ಲ ನೀಡಲು ಆರಂಭಿಸುತ್ತಾರೆ. ಹಾಗೆ ನೋಡಿದರೆ ಸರ್ಕಾರಗಳು ಈ ಬಾಬತ್ತಿಗೆ ಈಚೆಗಂತೂ ವಿಪರೀತ ಖರ್ಚು ಮಾಡತೊಡಗಿವೆ. ಅನೇಕ ಇಲಾಖೆ, ನಿಗಮ, ಸೆಲ್‍ಗಳು ಇದಕ್ಕಾಗಿ ಕೆಲಸ ಮಾಡುತ್ತಿವೆ. ಆದರೆ ಉದ್ದೇಶಗಳು ಈಡೇರುತ್ತಿವೆಯೇ? ಈ ಎಲ್ಲವೂ ನೀಡುತ್ತಿರುವ ವೈಜ್ಞಾನಿಕ ವಿವರಣೆಗಳು ಏನೇ ಇದ್ದರೂ, ರೈತರು ಇಂದಿಗೂ ಪಂಚಾಂಗ ಏನು ಹೇಳುತ್ತದೆ ಎಂಬುದರ ಬಗ್ಗೆಯೇ ಹೆಚ್ಚು ಕಾತುರರಾಗಿರುತ್ತಾರೆ ಅಥವ ಹಾಗೆ ನಂಬಿಸಲಾಗಿದೆ. ಅಥವಾ ತಮ್ಮ ನಿರ್ದಿಷ್ಟ ಅನುಭವ ಹೆಕ್ಕಿ ತೆಗೆದು, ಯಾವ ವರ್ಷ ಯಾವ ಮಳೆ ಹುಯ್ಯಿತು, ಯಾವುದು ಕೈಕೊಟ್ಟಿತು ಇತ್ಯಾದಿ ವಿಷಯಗಳ ಬಗ್ಗೆ ಅರಳಿಕಟ್ಟೆ, ಚಾದಂಗಡಿಗಳಲ್ಲಿ ಕೂತು ಮಾತಾಡುವುದು ಇಂದಿಗೂ ಸಾಮಾನ್ಯ ಸಂಗತಿಯೇ.

ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ, ಪಂಚಾಂಗಗಳು ಇಂದಿಗೂ ಪ್ರಬಲ ಅಸ್ತ್ರವೇ ಆಗಿರುವುದರಿಂದ, ಜೊತೆಗೆ ವಿಜ್ಞಾನ ಕೂಡ ರೈತರ ಬದುಕನ್ನು ಇಡಿಯಾಗಿ ತಲುಪಲು ಇನ್ನೂ ಅಸಾಧ್ಯವೇ ಆಗಿರುವುದರಿಂದ ಇದೊಂದು ಅಂತರ ಕೃಷಿಕ್ಷೇತ್ರದಲ್ಲಿ ಕಂಡುಬರುವ ನ್ಯೂನತೆಯೆಂದು ಪರಿಗಣಿಸಬೇಕಾಗಿದೆ. ಇದೆಲ್ಲಾ ಏನೇ ಇದ್ದರೂ ಮೊದಲ ಮಳೆ ಬಿದ್ದಾಗ ಊರುಗಳಲ್ಲಿ ಆಗುವ ಸಂಭ್ರಮ ಹೇಳತೀರದ್ದು. ಏಕೆಂದರೆ ಈ ಮೊದಲೇ ಹೇಳಿದಂತೆ ಮುಂಗಾರುಮಳೆ ಆಯಾ ವರ್ಷದ ಭರವಸೆಯ ಆಸರೆಯಾದ್ದರಿಂದ ರೈತರ ಹುರುಪು ಮತ್ತೆ ಗರಿಗೆದರುತ್ತದೆ. ಹೋದ ವರ್ಷದ ಎಲ್ಲ ಕಹಿ-ಸಿಹಿ ನೆನಪುಗಳ ನಡುವೆಯೂ ಮತ್ತೆ ಬದುಕಿನಲ್ಲಿ ಆಶಾಕಿರಣವೊಂದನ್ನು ಮುಂಗಾರಿನ ಮೊದಲ ಹನಿ ಬಿದ್ದಾಗ ರೈತ ಪಡೆಯುತ್ತಾನೆ. ಕೊಟ್ಟಿಗೆಯಲ್ಲೋ, ಹಿತ್ತಲಿನಲ್ಲೋ ಮೂಲೆ ಸೇರಿದ್ದ ನೇಗಿಲು-ನೊಗ, ಅಲಬೆದಿಂಡು-ಕುಂಟೆಗಳು ತಮ್ಮ ಸರದಿ ಬಂತು ಎಂಬಂತೆ ಹೊರಬರುತ್ತವೆ. ಅವುಗಳಿಗೆ ಮೇಣಿಯೋ, ಕುಳವೋ ಮುರಿದು ಹೋಗಿದ್ದರೆ ಬಡಗಿಗೆ ಊರಿನಲ್ಲಿ ಮಾನ್ಯತೆ ಬರುತ್ತದೆ. ಅವನಿಗೂ ನಾಲ್ಕು ಕಾಸಿಗೆ ಅದಕ್ಕಿಂತ ಮುಖ್ಯವಾಗಿ ಉದ್ಯೋಗದ ಮೂಲಕ ಅನ್ನಕ್ಕೆ ದಾರಿ ಮಾಡಿಕೊಡುತ್ತದೆ ಈ ಮುಂಗಾರುಮಳೆ. (ಹೀಗೆ ಬರೆವಾಗ ಬರಗಾಲದ ಪರೋಕ್ಷ ಪರಿಣಾಮಗಳನ್ನು ಹುಡುಕಿ ಬರೆದ ಪತ್ರಕರ್ತ ಪಿ.ಸಾಯಿನಾಥ್‍ರ `ಒಬ್ಬ ಬಡಗಿಯ ಸಾವು’ ಲೇಖನ ಯಾಕೋ ನೆನಪಾಗುತ್ತಿದೆ)

ಮಳೆ ಬಿದ್ದೊಡನೆ ಕಣಜದಲ್ಲಿ, ಗೂಡೆಗಳಲ್ಲಿ ಅಥವಾ ಗುಡಾಣಗಳಲ್ಲಿ ಬೂದಿ ಬೆರೆಸಿ ಇಟ್ಟಿದ್ದ ಕಾಳುಗಳು ಹೊರಬರುತ್ತವೆ. ಕಾಳುಗಳು ಶೇಖರಿಸಿ ಇಡದವರು ಆ ವಾರದ ಸಂತೆಗೆ ಧಾವಿಸುತ್ತಾರೆ. ಆ ಸಂತೆಯಲ್ಲಿ ಅವರಿಗೆ ಬೇಕಿರುವ ಕಾಳಿನ ಬೆಲೆ ಏರಿಕೆ ಕಂಡಿರುತ್ತದೆ. ಆದರೂ ರೈತ ಅದನ್ನು ಖರೀದಿಸುತ್ತಾನೆ. ಯಾಕೆಂದರೆ ಮೊದಲ ಮಳೆ ಬಿದ್ದಾಗಲೇ ಉಳುಮೆ ಮಾಡಿ ಕಾಳು ಎರಚಿ ಬಿಟ್ಟರೆ ಬೇಗ ಬೆಳೆ ಬರಬಹುದು. ಕಾಳು ಮನೆಗೆ ಆಗಿ, ಮೇವು ದನಗಳಿಗೆ ಸಿಕ್ಕುವುದು. ಕಳೆದ ಮೂರ್ನಾಕು ತಿಂಗಳಿಂದ ಬರಿ ಒಣಹುಲ್ಲು ತಿಂದು ಬೇಸರಿಸಿಕೊಂಡಿರುವ ಎಮ್ಮೆ-ಹಸುಗಳು ಹೊಸ ಹಸಿರು ಮೇವಿಂದ ಗೆಲುವಾಗುತ್ತವೆ. ಮಳೆ ಚೆನ್ನಾಗಿ ಆಗಿ, ಬೆಳೆ ಬಂದರೆ ಅವಕ್ಕೂ ಹೆಚ್ಚೇ ಮೇವು ಸಿಕ್ಕಿ ದಷ್ಟಪುಷ್ಟವಾಗುತ್ತವೆ. ಕೊಡುವ ಹಾಲೂ ಕೂಡ ಹೆಚ್ಚು ರುಚಿಯಾಗುತ್ತದೆ. ಅದರಿಂದ ಮನೆಯಲ್ಲಿ ಹೈನು ಅಭಿವೃದ್ದಿ ಆಗುತ್ತದೆ. ಮಕ್ಕಳು-ಮುದುಕರಿಗೆ ಬೆಣ್ಣೆತುಪ್ಪ ಸಿಕ್ಕರೆ, ಹೆಂಗಸರಿಗೆ ಕಾಸು ಕೂಡಿಡುವ ಕರಾಮತ್ತಿಗೆ ಬೆಂಬಲ ಬರುತ್ತದೆ. ಈ ಬೆಳೆಯು ವೈನಾಗಿ ಬಂದುಬಿಟ್ಟರೆ, ಹಿಂಗಾರಿಗೆ ಇನ್ನೊಂದು ಬೆಳೆ ಬೆಳೆಯಲು ದೊಡ್ಡ ಚೈತನ್ಯವನ್ನೇ ರೈತ ಪಡೆಯುತ್ತಾನೆ. ಹೀಗೆ ಕೃಷಿಯ ನಿರಂತರ ಚಕ್ರ ರೈತನನ್ನು ಸೆಳೆಯುತ್ತದೆ. ಇಂಥ ಎಲ್ಲ ಮೋಹಗಳನ್ನು ಬಿತ್ತುವ ಕೆಲಸವೇ ಮುಂಗಾರುಮಳೆಯದು.

By Yann (Own work) [GFDL (http://www.gnu.org/copyleft/fdl.html) or CC BY-SA 4.0-3.0-2.5-2.0-1.0 (http://creativecommons.org/licenses/by-sa/4.0-3.0-2.5-2.0-1.0)]

By Yann (Own work) [GFDL (http://www.gnu.org/copyleft/fdl.html) or CC BY-SA 4.0-3.0-2.5-2.0-1.0 (http://creativecommons.org/licenses/by-sa/4.0-3.0-2.5-2.0-1.0)]

ಮುಂಗಾರುಮಳೆ ಧಾರಾಕಾರವಾಗಿ ಹುಯ್ಯದಿದ್ದರೂ ರೈತರು ಅದನ್ನು ಲೆಕ್ಕಿಸುವುದಿಲ್ಲ. ಒಂದು ಸೂಚನೆ ಕೊಟ್ಟರೂ ಸಾಕು ಎಂಬುದಷ್ಟೆ ಅವರು ಈ ಮಳೆಯನ್ನು ಕೇಳುವುದು. ಕರ್ನಾಟಕದಾದ್ಯಂತ ಈ ಮಳೆಗಾಗಿ ಪ್ರಾರ್ಥಿಸುವ ರಿಚುಯಲ್‍ಗಳ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಸರಣಿಯಾಗುತ್ತದೆ. ಏಕೆಂದರೆ ಎಷ್ಟೋ ಸಲ ಮುಂಗಾರಿನಲ್ಲಿ ಒಂದು ಮಳೆಯಾಗಿ ಆಮೇಲೆ ನಿಂತುಬಿಡುತ್ತದಲ್ಲ. ಆಗ ಕೂಡ ರೈತ ಏನಾದರೂ ಬಿತ್ತಿಯೇ ಬಿತ್ತುತ್ತಾನೆ. ಮತ್ತೆ ಮಳೆಗಾಗಿ ಕಾಯುತ್ತಾನೆ. `ಬರೀ ಒಂದು ಮಳೆಗೆ ಬಿತ್ತುತ್ತೀರಲ್ಲ, ಇನ್ನೊಂದೆರೆಡು ಮಳೆ ಕಾಯಬಹುದಲ್ಲ’ ಎಂದು ಶ್ರೀರಂಗಪ್ಪ ಎಂಬ ರೈತರನ್ನು ಕೇಳಿದೆ. ಅದಕ್ಕಾತ `ಅಯ್ಯೋ ಹೀಗೆ ಲೆಕ್ಕಾಚಾರ ಹಾಕೋನು ರೈತನೇ ಅಲ್ಲ ತಗೋ. ಬೀಜ ಮನೇಲಿ ಇಡೋ ಬದಲಿಗೆ ಭೂಮ್ತಾಯಿ ಹೊಟ್ಟೆಗೆ ಹಾಕಿದ್ರೆ ಆಯ್ತು. ಅವಳು ಇಂದು ಕೊಡದಿದ್ರೂ, ನಾಳೆಗಾದರೂ ಕೊಟ್ಟೇ ಕೊಡ್ತಾಳೆ ತಗೋ’ ಅಂದ. ಆ ನಂಬಿಕೆಯೇ ರೈತಾಪಿಬದುಕಿಗೆ ಅದಮ್ಯ ಚೈತನ್ಯ ತಂದುಕೊಡುತ್ತದೆ.

ಕೃಷಿ ಈಗ ಜಾನುವಾರುಗಳಿಂದ ಬಿಡುಗಡೆಗೊಂಡು ಯಂತ್ರಗಳಿಗೆ ಬಲಿಯಾಗಿದೆ ಎಂದು ಅನೇಕ ಚಿಂತಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅವರ ಆತಂಕದಲ್ಲಿ ಹುರುಳಿದೆಯಾದರೂ, ಊರುಗಳು ಕೃಷಿಯಿಂದ ಪೂರ್ಣ ವಿಮುಖಗೊಂಡಿಲ್ಲವೆಂಬುದೂ ಅಷ್ಟೇ ನಿಜ. ಯಾಕೆಂದರೆ ಈಚೆಗೆ ಡೀಸೆಲ್ ಅಭಾವ ಇದ್ದಕ್ಕಿದ್ದಂತೆ ಸೃಷ್ಟಿಯಾಯಿತಲ್ಲ. ಆದಿನ ನಾನೊಂದು ಊರಿಗೆ ಹೋಗಿದ್ದೆ. ಹಿಂದಿನ ರಾತ್ರಿ ಆ ಊರಿನಲ್ಲಿ ಮಳೆ ಬಿದ್ದು ಗಿಡ, ಮರಗಳು ತೊಳೆದಿಟ್ಟಂತೆ ಹೊಳೆಯುತ್ತಿದ್ದವು. ಮಣ್ಣಿನ ಘಮಲು ಮೂಗಿಗೆ ಅಡರುತ್ತಿತ್ತು. ಆ ಊರಿನಲ್ಲಿ ಎತ್ತು ಸಾಕಿದ್ದವರು ನೇಗಿಲು ಹೂಡಿಕೊಂಡು ಹೊಲ-ಗದ್ದೆಗಳ ಕಡೆಗೆ ಹೋಗುತ್ತಿದ್ದರು. ಆದರೆ ಅದಕ್ಕಿಂತ ಕುತೂಹಲಕರ ಸಂಗತಿ ಎಂದರೆ ಆ ಊರಿನಲ್ಲಿದ್ದ ಟ್ರಾಕ್ಟರ್-ಟಿಲ್ಲರ್ ಹೊಂದಿದ್ದ ರೈತರ ಚಡಪಡಿಕೆ. ಅವರೂ ಬೇಸಾಯ ಹೂಡಬೇಕು. ಆದರೆ ದಿಢೀರ್ ಡೀಸೆಲ್ ಅಭಾವದಿಂದಾಗಿ ಉಂಟಾದ ಅಸಹಾಯಕತೆ ಅವರನ್ನು ತೀವ್ರವಾಗಿ ಬಾಧಿಸುತ್ತಿತ್ತು.

ಊರ ಅರಳಿಕಟ್ಟೆ ಮುಂದೆ ನಿಂತಿದ್ದ ಹತ್ತಾರು, ಟ್ರಾಕ್ಟರ್-ಟಿಲ್ಲರ್‍ಗಳು. ಅವುಗಳನ್ನು ನೋಡಿದಾಗ ನನಗೆ ಮೇವಿಲ್ಲದೆ ಮುಖ ಒಣಗಿಸಿಕೊಂಡು ನಿಂತಿರುವ ಎತ್ತುಗಳಂತೆ ಭಾಸವಾಗುತ್ತಿತ್ತು. ಯಾವುದೋ ದೇಶದಲ್ಲಿ ಉತ್ಪಾದನೆ ಆಗುವ ತೈಲದ ನಿಕ್ಷೇಪ, ಅದು ಇನ್ನಾವುದೋ ದೇಶದ ಕೃಷಿ ಮೇಲೆ ಹೀಗೂ ಪರಿಣಾಮ ಉಂಟುಮಾಡಬಲ್ಲದೆ? ಇದ್ದಕ್ಕಿದ್ದಂತೆ ಯಾರದೋ ಮೊಬೈಲ್‍ಗೆ ಜಿಲ್ಲಾ ಕೇಂದ್ರವೊಂದರಲ್ಲಿ ಡೀಸೆಲ್ ಲಭ್ಯವಿದೆ. ಆದರೆ ತುಸು ಬೆಲೆ ಹೆಚ್ಚು ಎಂಬ ಮಾಹಿತಿ ಬಂತು. ಅದೊಂದು ಮಾಹಿತಿ ಅಲ್ಲಿ ಮಿಂಚಿನ ಸಂಚಾರವನ್ನೆ ತಂದಿತು. ಸುಮಾರು 40-50 ಕಿ.ಮೀ. ದೂರದ ಜಿಲ್ಲಾಕೇಂದ್ರದ ಕಡೆಗೆ ಬೈಕುಗಳು ಹೊರಟವು. ಸವಾರನ ಬೆನ್ನಿಗೊಬ್ಬ, ಆತನ ಕೈಲಿ ಒಂದೆರಡು ಡೀಸೆಲ್ ಕ್ಯಾನುಗಳು. ಮತ್ತೆ ಕೆಲವರು ಅಂದರೆ ಬೈಕು ಇಲ್ಲದವರು-ಲಗ್ಗೇಜು ಆಟೋವೊಂದನ್ನು ಬಾಡಿಗೆ ಹಿಡಿದು- ಹತ್ತಾರು ಕ್ಯಾನುಗಳನ್ನು ತುಂಬಿಕೊಂಡು ಹೋದರು. ಡೀಸೆಲ್ ತಂದರು. ಮಧ್ಯಾಹ್ನದ ವೇಳೆಗೆ ಟ್ರಾಕ್ಟರ್-ಟಿಲ್ಲರ್‍ಗಳೂ ಹೊಲ-ಗದ್ದೆಗಳಿಗೆ ಇಳಿದವು. ಮುಂಗಾರು ಬಿತ್ತನೆ ಅಲ್ಲಿಯೂ ಆಯಿತು.

ಇದೆಲ್ಲ ನೋಡಿದಾಗ ಮುಂಗಾರು ರೈತಾಪಿ ಬದುಕಿನಲ್ಲಿ ಏನೆಲ್ಲ ಸಂಚಲನ ಮೂಡಿಸುತ್ತದೆ, ಎಷ್ಟೆಲ್ಲ ಭರವಸೆಗಳನ್ನು ಹುಟ್ಟಿಸುತ್ತದೆ ಎಂದು ಸೋಜಿಗವಾಗುತ್ತಿತ್ತು. ಆ ಸಂದರ್ಭ ನೋಡಿದಾಗ ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೇ ಇಲ್ಲ ಎಂಬ ನೇಗಿಲಯೋಗಿ ಕವಿತೆ ನೆನಪಾಗುತ್ತಿತ್ತು. ಒಂದು ಬಗೆಯ ಅಸಹಾಯಕತೆ, ಅಧೀರತೆಯಲ್ಲಿರುವ ರೈತಾಪಿ ಜನಕ್ಕೆ ತನ್ನ ಚೈತನ್ಯವನ್ನು ತಾನೇ ಪಡೆದುಕೊಳ್ಳಲು ಇರುವ ಏಕೈಕ ಮಾರ್ಗವೇ ಮುಂಗಾರು ಮಳೆ. ಇನ್ನೊಂದು ಮಾತು: ಮಳೆ ಬೀಳುವ ಮುನ್ನಾ ದಿನ ಜೋಲುಮೋರೆ ಹಾಕಿಕೊಂಡಂತಿರುವ ಮರಗಿಡ, ಮಕಾಡೆ ಮಲಗಿರುವ ಗರುಕೆ-ಪೈರು ಒಂದು ಮಳೆ ಬಿದ್ದ ತಕ್ಷಣ ತಲೆಯೆತ್ತಿ ನಿಂತು ಪುಟಿಯುವುದು ನೋಡಿದರೆ ಪ್ರಕೃತಿ ಎಂಬುದು ನಿಜಕ್ಕೂ ಪವಾಡ ಎನಿಸುತ್ತದೆ.

ಮಳೆಗೆ ಮಿಂದು ಮೃದುವಾಗಿ, ಮೆದುಗೊಂಡ ಮಣ್ಣಿನ ವಾಸನೆಯೆ ಉಲ್ಲಾಸದಾಯಕ. ಬರೇ ಗಿಡ, ಪೈರಷ್ಟೇ ಅಲ್ಲದೇ ಹೊಲಗದ್ದೆಗಳಲಿ, ಕಾಡುಗಳಲ್ಲ್ಲಿ ಯಾವ್ಯಾವುದೋ ಹುಳ-ಹುಪ್ಪಡಿ, ಜೀವಜಂತುಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುತ್ತವೆ. ಅನೇಕಾನೇಕ ಮಳೆಚಿಟ್ಟೆಗಳು ಹಾರಾಡುತ್ತವೆ. ಗಿಡಗಂಟೆಗಳ ಕೊರಳೊಳಗಿಂದ ಏನೇನೋ ನಾದ ಹೊಮ್ಮತೊಡಗುತ್ತದೆ. ಮಳೆ ಬೀಳುವ ಮುನ್ನ ಇವೆಲ್ಲ ಎಲ್ಲಿರುತ್ತವೋ? ಹೇಗಿರುತ್ತವೋ? ಒಂದು ಮಳೆ ಬಿದ್ದೊಡನೆ ಜೀವ ಹೇಗೆ ಬಗೆಬಗೆಯಾಗಿ ಉಕ್ಕುತ್ತದೆ?

Leave a Reply

Your email address will not be published.