ಮಾನವ ವಿರೋಧಿಗಳಾಗುವುದಕ್ಕಿಂತಲೂ ಹಿಂದೂ ವಿರೋಧಿಗಳಾಗುವುದು ಒಳಿತು :ಪೇಜಾವರರಿಗೊಂದು ಬಹಿರಂಗ ಪತ್ರ

-ನಾ ದಿವಾಕರ

ಚಲೋ ಉಡುಪಿಯ ನಂತರ ಉಡುಪಿಯಲ್ಲಿ ನಡೆದ ಕನಕನಡೆ ಎಂಬ ಶುದ್ಧೀಕರಣ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪೇಜಾವರರು ಬುದ್ಧಿಜೀವಿಗಳು ನಡೆದಾಡಿದ ಜಾಗವನ್ನು ಶುದ್ಧೀಕರಣಗೊಳಿಸುವುದು ತಪ್ಪೇನಲ್ಲ ಎನ್ನುವ ಮೂಲಕ ಅಸ್ಪøಶ್ಯ ಸಮುದಾಯಗಳಿಗೆ ಹೊಸ ಸೇರ್ಪಡೆ ಮಾಡಿದ್ದಾರೆ ಈ ಕುರಿತು ಪೇಜಾವರರಿಗೆ ಒಂದು ಬಹಿರಂಗ ಪತ್ರ.

ಬುದ್ಧಿಜೀವಿಗಳು ಎಂದರೆ ಯಾರು ? ಈ ಪ್ರಶ್ನೆಗೆ ಇಡೀ ವಿಶ್ವದಲ್ಲಿ ಒಂದು ಉತ್ತರ ಬಂದರೆ ಭಾರತದಲ್ಲಿ ವಿಭಿನ್ನವಾದ ಉತ್ತರ ದೊರೆಯುತ್ತದೆ. ಆಂಗ್ಲಭಾಷೆಯ Intellectual ಎಂಬ ಪದವನ್ನು ಕನ್ನಡದಲ್ಲಿ ಬುದ್ಧಿಜೀವಿ ಎಂದು ಕರೆಯಲಾಗುತ್ತದೆ. ಜಾಗತಿಕ ಇತಿಹಾಸದಲ್ಲಿ ಬುದ್ಧಿಜೀವಿ ಎಂಬ ಪದ ಅನಾವರಣಗೊಂಡಿದ್ದು 18ನೆಯ ಶತಮಾನದಲ್ಲಿ, ಜ್ಞಾನೋದಯದ ಕಾಲಘಟ್ಟದಲ್ಲಿ ಮತ್ತು ಸಾಮಾಜಿಕ-ಸಾಂಸ್ಕøತಿಕ ಪುನರುತ್ಥಾನದ ಸಂದರ್ಭದಲ್ಲಿ. ಸ್ಥಾಪಿತ ವ್ಯವಸ್ಥೆಯ ಮನುಕುಲ ವಿರೋಧಿ ಧೋರಣೆಗಳನ್ನು ಮಾನವೀಯ ನೆಲೆಯಲ್ಲಿ ಖಂಡಿಸುವ, ವಿರೋಧಿಸುವ ಮತ್ತು ಬದಲಾಯಿಸಲು ಪ್ರಯತ್ನಿಸುವ ಒಂದು ವರ್ಗದ ಜನರನ್ನು ಬುದ್ಧಿಜೀವಿಗಳೆಂದು ಕರೆಯುವುದು ವಾಡಿಕೆಯಾಗಿತ್ತು. ಅಂದರೆ ಸಾಂಪ್ರದಾಯಿಕ ಮೌಲ್ಯಗಳು, ಧಾರ್ಮಿಕ ಅಧಿಪತ್ಯ, ಧರ್ಮ ಮತ್ತು ಮತ ಕೇಂದ್ರಗಳ ಪ್ರಾಬಲ್ಯ ಹಾಗೂ ಧರ್ಮ ಮತ್ತು ಸಂಪ್ರದಾಯಗಳ ಬಿಗಿ ಹಿಡಿತದಿಂದ ಜನಸಾಮಾನ್ಯರು ಬಳಲುತ್ತಿದ್ದ ಸಂದರ್ಭದಲ್ಲಿ, ಮೌಢ್ಯತೆಯ ಕೂಪಕ್ಕೆ ತಳ್ಳಲ್ಪಡುತ್ತಿದ್ದ ಸಂದರ್ಭದಲ್ಲಿ, ಜನತೆಗೆ ಒಂದು ಮಾನವೀನ ನೆಲೆಯ ಸಮಾಜವನ್ನು ತೆರೆಯುವ ಪ್ರಯತ್ನವನ್ನು ಬುದ್ಧಿಜೀವಿಗಳು ಮಾಡಿದ್ದರು. ಹಾಗಾಗಿಯೇ ರಾಜಕೀಯ ಪರಿಭಾಷೆಯಲ್ಲಿ ಈ ವರ್ಗದ ಜನರನ್ನು ಪ್ರಗತಿಪರರು ಅಥವಾ ಪುರೋಗಾಮಿಗಳೆಂದೂ ಗುರುತಿಸಲಾಯಿತು. ನಿಘಂಟಿನ ಅರ್ಥವನ್ನೇ ಪರಿಗಣಿಸಿದರೆ ಇವರನ್ನು

kanakanadeಪ್ರಜ್ಞಾಶಾಲಿಗಳೆಂದು ಕರೆಯುವುದು ಉಚಿತ. ಬುದ್ಧಿಜೀವಿ ಎನ್ನುವ ಪದ ಹೇಗೆ ಹುಟ್ಟಿಕೊಂಡಿತೋ ಪರಿಶೀಲಿಸಬೇಕು.
ಇರಲಿ. ಯೂರೋಪ್‍ನ ಇತಿಹಾಸದಲ್ಲಿ ಉಗಮಿಸಿದ ಈ ಪ್ರಜ್ಞಾಶೀಲರ ಬಳಗ ಇಂದು ವಿಶ್ವವ್ಯಾಪಿಯಾಗಿರುವುದೇ ಅಲ್ಲದೆ ಮನುಕುಲದ ಪ್ರಗತಿಯ ಮಾರ್ಗದಲ್ಲಿ ಉನ್ನತ ಆದರ್ಶಗಳನ್ನು ಬಿತ್ತುವುದರಲ್ಲಿ ಯಶಸ್ವಿಯಾಗಿರುವುದು ಅಲ್ಲಗಳೆಯಲಾಗದ ಸತ್ಯ. ಈ ಪ್ರಜ್ಞಾಶೀಲರು ಎಂದಿಗೂ ಸ್ಥಾಪಿತ ವ್ಯವಸ್ಥೆಯ ಆರಾಧಕರಾಗಿ ವರ್ತಿಸಿಲ್ಲ. ಅಥವಾ ಎಂತಹುದೇ ಕಠಿಣ ಪರಿಸ್ಥಿತಿಯಲ್ಲೂ ಸ್ಥಾಪಿತ ವ್ಯವಸ್ಥೆಯ ದಬ್ಬಾಳಿಕೆ ಮತ್ತು ಅಧಿಪತ್ಯಕ್ಕೆ ಶರಣಾಗಿಲ್ಲ. ಶತಮಾನಗಳ ತಾರತಮ್ಯಗಳನ್ನು, ಅಧಿಪತ್ಯ ರಾಜಕಾರಣದ ದೌರ್ಜನ್ಯಗಳನ್ನು ಮತ್ತು ಶೋಷಿತ ಜನಸಮುದಾಯಗಳು ಎದುರಿಸುತ್ತಿದ್ದ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಜ್ಞಾಶೀಲರು ಸಕ್ರಿಯರಾಗಿರುವುದು ಚಾರಿತ್ರಿಕ ಸತ್ಯ. ಆದರೆ ಈ ಪ್ರಜ್ಞಾಶೀಲರ ಜನಪರ ಆಲೋಚನೆಗಳು ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವ ಪ್ರಭುತ್ವಗಳಿಗೆ ಮತ್ತು ಸ್ಥಾಪಿತ ವ್ಯವಸ್ಥೆಯ ಸಮರ್ಥಕರಿಗೆ ಅಪ್ಯಾಯಮಾನವಾಗುವುದಿಲ್ಲ. ಧರ್ಮ, ಭಾಷೆ, ವರ್ಗ, ಕೋಮು, ಜಾತಿ, ವರ್ಣ ಹೀಗೆ ಮಾನವ ಸಮಾಜದ ಅನಿವಾರ್ಯ ಲಕ್ಷಣಗಳನ್ನು ತಮ್ಮ ಶೋಷಣೆಗೆ ಚಿಮ್ಮುಹಲಗೆಗಳನ್ನಾಗಿ ಪರಿವರ್ತಿಸಿ ಅಧಿಪತ್ಯ ಮೆರೆಯುವ ಶೋಷಕ ವರ್ಗಗಳಿಗೆ ವ್ಯವಸ್ಥೆಯನ್ನು ವಿರೋಧಿಸುವ ಯಾವುದೇ ದನಿ ಸಹನೀಯ ಎನಿಸುವುದಿಲ್ಲ. ಹಾಗಾಗಿಯೇ ಪ್ರಜ್ಞಾಶೀಲ ವರ್ಗಗಳು ಸದಾ ಆಳುವ ವರ್ಗಗಳ ವಿರೋಧಿ ನೆಲೆಯಲ್ಲೇ ಕಾರ್ಯ ನಿರ್ವಹಿಸಿದ್ದಾರೆ.

ಭಾರತದ ಸಂದರ್ಭದಲ್ಲಿ, ಜಾಗತಿಕ ಸಂದರ್ಭದಲ್ಲೂ ಸಹ, ಈ ಪ್ರಜ್ಞಾಶೀಲ ವರ್ಗಗಳ ಇತಿಹಾಸವನ್ನು ಶತಮಾನಗಳಿಂದಲೂ ಗುರುತಿಸಬಹುದು. ಚಾರ್ವಾಕನಿಂದ ಹಿಡಿದು ಬಸವಣ್ಣನವರೆಗೆ, ಅಂಬೇಡ್ಕರ್-ಗಾಂಧೀಜಿಯವರೆಗೆ, ವಿವೇಕಾನಂದರವರೆಗೆ ಈ ಇತಿಹಾಸದ ಹೆಜ್ಜೆಗಳು ನಮ್ಮನ್ನು ಬಡಿದೆಬ್ಬಿಸುತ್ತಲೇ ಇರುತ್ತವೆ. ಹಿಂದೂ ಧರ್ಮದಲ್ಲಿರುವ ಮಾನವ ವಿರೋಧಿ ಮೌಲ್ಯಗಳನ್ನು ಖಂಡಿಸಿದವರೆಲ್ಲರೂ ಆಧುನಿಕ ಪರಿಭಾಷೆಯ ಬುದ್ಧಿಜೀವಿಗಳ ಪಟ್ಟಿಗೆ ಸೇರುತ್ತಾರೆಯೇ ಎಂಬ ಪ್ರಶ್ನೆ ಎದುರಾದಾಗ ಹೌದು ಮತ್ತು ಇಲ್ಲ ಎರಡೂ ಉತ್ತರ ಹೇಳಬಹುದು. ಹೌದೆಂದಾದರೆ ಬಸವಣ್ಣ, ಸೂಫಿ ಸಂತರು, ದಾಸ ಪರಂಪರೆಯ ಗಣ್ಯರು ಮತ್ತು ಸ್ಥಾಪಿತ ವ್ಯವಸ್ಥೆಯ ಅಮಾನವೀಯ ಮೌಲ್ಯಗಳನ್ನು ಖಂಡಿಸಿದ ಅನೇಕ ದಾರ್ಶನಿಕರು ಪೇಜಾವರರ ದೃಷ್ಟಿಯಲ್ಲಿ ಬುದ್ಧಿಜೀವಿಗಳಾಗುವುದೇ ಅಲ್ಲದೆ ಅಸ್ಪøಶ್ಯರೂ ಆಗುತ್ತಾರೆ. ನಾವು ದಲಿತರು ನಡೆದಾಡಿದ್ದಾರೆ ಎಂದು ಕನಕನಡೆ ಹಮ್ಮಿಕೊಂಡಿಲ್ಲ, ಬುದ್ಧಿಜೀವಿಗಳು ಹಿಂದೂ ವಿರೋಧಿಗಳಾಗಿರುವುದರಿಂದ ಅವರು ನಡೆದಾಡಿದ ಜಾಗವನ್ನು ಶುದ್ಧೀಕರಣಗೊಳಿಸುತ್ತೇವೆ ಎಂದು ಕನಕನಡೆಯ ಹೆಗಲ ಮೇಲೆ ಕೈಯ್ಯಿಟ್ಟು ಹೇಳಿರುವ ಪೇಜಾವರರಿಗೆ ಇನ್ನೇನು ಹೇಳಲು ಸಾಧ್ಯ ?

ಹಿಂದುತ್ವವಾದಿಗಳು ಪ್ರತಿಪಾದಿಸುವ ತತ್ವಗಳೇ ಹಿಂದೂ ಧರ್ಮವೇ ? ಪೇಜಾವರರ ಮಾಧ್ವ ಪರಂಪರೆಯೇ ಹಿಂದೂ ಧರ್ಮವೇ ? ಅಥವಾ ಸಂಘಪರಿವಾರ ಪ್ರತಿಪಾದಿಸುವ ಸಿದ್ಧಾಂತವೇ ಹಿಂದೂ ಧರ್ಮವೇ ? ಹೀಗೆಂದು ಪೇಜಾವರರು ಎದೆಯ ಮೇಲೆ ಕೈಯ್ಯಿಟ್ಟು ಹೇಳಲು ಸಿದ್ಧರಾಗಿದ್ದಾರೆಯೇ ? ಹೌದೆಂದಾದರೆ ಹಿಂದೂ ಧರ್ಮದಲ್ಲಿರುವ ವಿಭಿನ್ನ ವ್ಯಾಖ್ಯಾನಗಳ ಪಾಡೇನು ? ಶಂಕರರ ತತ್ವಗಳನ್ನು ಪೇಜಾವರರು ಅಳವಡಿಸುತ್ತಾರೆಯೇ ? ಉಡುಪಿ ಕೃಷ್ಣ ಮಠದಲ್ಲಿ ದಲಿತರ ಪ್ರವೇಶ ಇರಲಿ, ಶಿವಲಿಂಗ ಪ್ರತಿಷ್ಠಾಪನೆ ಮಾಡಲು ಅವರಿಂದ ಸಾಧ್ಯವೇ ? ಅಥವಾ ಒಂದು ದಿನದ ಮಟ್ಟಿಗಾದರೂ ತಮ್ಮ ಗಂಧದ ಲೇಪನ ತೊರೆದು ವಿಭೂತಿ ಹಚ್ಚಲು ಸಾಧ್ಯವೇ ? ವಿಶಿಷ್ಟಾದ್ವೈತದ ನಾಮ ಧರಿಸಲು ಸಾಧ್ಯವೇ ? ಇಲ್ಲ ಎಂದಾದಲ್ಲಿ ಏಕೆ ಎಂದು ಸ್ಪಷ್ಟಪಡಿಸಲಿ. ತಾವು ಪರಿಭಾವಿಸುವ ಹಿಂದೂ ಧರ್ಮವನ್ನು ಒಪ್ಪದ ಬುದ್ಧಿಜೀವಿಗಳನ್ನು ಅಸ್ಪøಶ್ಯರು ಎಂದು ಭಾವಿಸುವ ಪೇಜಾವರರಿಗೆ ಮತ್ತು ಮಾಧ್ವ ಮಠದವರಿಗೆ ತಮ್ಮ ಬ್ರಾಹ್ಮಣರಲ್ಲೇ ಅಸ್ಪøಶ್ಯರು ಏಕೆ ಕಾಣುತ್ತಾರೆ ? ಪಂಕ್ತಿಭೇದ ಇಲ್ಲಿಯೂ ಚಾಲ್ತಿಯಲ್ಲಿದೆ ಅಲ್ಲವೇ ? “ ತಾವು ಬ್ರಾಹ್ಮಣರೊಡನೆಯೂ ಕುಳಿತು ಊಟ ಮಾಡುವುದಿಲ್ಲ ಏಕೆಂದರೆ ಬ್ರಾಹ್ಮಣರಲ್ಲಿಯೂ ಮಾಂಸಾಹಾರ ಸೇವಿಸುವವರಿದ್ದಾರೆ ” ಎಂದು ಹೇಳುವ ಪೇಜಾವರರಿಗೆ ತಮ್ಮದೇ ಸಮುದಾಯದವರ ಮೇಲೆಯೇ ನಂಬಿಕೆ ಇಲ್ಲದ ಮೇಲೆ ಇನ್ನು ಸಮಸ್ತ ಜನತೆಯನ್ನು ನಂಬಲು ಹೇಗೆ ಸಾಧ್ಯ ? ಪರಸ್ಪರ ವಿಶ್ವಾಸ ಇಲ್ಲದಿರುವುದು ಮತ್ತು ತಾವೇ ಶ್ರೇಷ್ಠ ಎಂಬ ಭಾವನೆ ಇವೇ ಬ್ರಾಹ್ಮಣ್ಯದ ಮೂಲ ಸಿದ್ಧಾಂತ ಎಂದು ಪೇಜಾವರರು ತಮ್ಮ ಮಾತುಗಳ ಮೂಲಕವೇ ಸ್ಪಷ್ಟಪಡಿಸಿದ್ದಾರೆ ಅಲ್ಲವೇ ?

IMG_9061
ಈ ಪ್ರಶ್ನೆಗಳು ಒತ್ತಟ್ಟಿಗಿರಲಿ. ಪ್ರಜ್ಞಾಶೀಲರನ್ನು, ಸಮಾಜದ ಸಕಾರಾತ್ಮಕ ಪರಿವರ್ತನೆಗಾಗಿ ಶ್ರಮಿಸುವವರನ್ನು ಬುದ್ಧಿಜೀವಿಗಳು ಎಂದು ಕರೆಯಲಾಗುತ್ತಿದೆ. ಇದರ ವಿರುದ್ಧ ಪದ ಏನು ? ಬುದ್ಧಿ ಇಲ್ಲದ ಜೀವಿಗಳು ಎನ್ನಬಹುದೇ ? ಅಥವಾ ಬುದ್ಧಿಯೂ ಇಲ್ಲದ ಜೀವವೂ ಇಲ್ಲದವರು ಎನ್ನಬಹುದೇ ? ನಿಜ. ಬುದ್ಧಿಜೀವಿಗಳು ಹಿಂದೂ ವಿರೋಧಿಗಳು. ಆದರೆ ಇದು ಪೂರ್ಣಸತ್ಯವಲ್ಲ ಪೇಜಾವರರೇ. ಹಿಂದೂ ಧರ್ಮದಲ್ಲಿರುವ ಮಾನವ ವಿರೋಧಿ ಮೌಲ್ಯಗಳನ್ನು ಪ್ರಜ್ಞಾಶೀಲರು, ಪ್ರಗತಿಪರರು ವಿರೋಧಿಸುತ್ತಾರೆ. ಹಿಂದೂ ಧರ್ಮದ ಸಂಪ್ರದಾಯ, ಆಚರಣೆ, ವಿಧಿ ವಿಧಾನಗಳನ್ನು ನಿರಾಕರಿಸಬಹುದು. ಅದು ಅವರ ಹಕ್ಕು. ಆದರೆ ಅದು ಮಾನವೀಯ ನೆಲೆಯಲ್ಲಿ ಮಾನ್ಯತೆ ಪಡೆಯುತ್ತದೆ. ದೇವರ ಪ್ರಸಾದವನ್ನು , ತೇದಿದ ಪವಿತ್ರ (?) ಗಂಧದ ಚೂರನ್ನು ಭಕ್ತಾದಿಗಳ ಕೈಗೆ ಬಿಸಾಡುವ ಉಡುಪಿ ಮಠದವರಿಗೆ ಇದು ಅರ್ಥವಾಗಬೇಕು. ಎಲ್ಲರೂ ನಮ್ಮವರೇ ಎಂಬ ಮಾತುಗಳು ಸಾಂತ್ವನ ನೀಡುವುದಿಲ್ಲ. ಒಂದು ಅಪ್ಪುಗೆ ಸಾಂತ್ವನ ನೀಡುತ್ತದೆ. ಮಾನವ ಸಂಬಂಧಗಳು ಬೆಸೆಯುವುದು ಮಾತುಗಳಿಂದಲ್ಲ, ಕೃತಿಯಿಂದ ಎನ್ನುವ ಸತ್ಯವನ್ನು ಗ್ರಹಿಸದೆ ಹೋದರೆ ಇಡೀ ಸಮಾಜವೇ ಅಸ್ಪøಶ್ಯವಾಗುತ್ತದೆ. ಪೇಜಾವರರು ಈ ವಾಸ್ತವವನ್ನು ಗ್ರಹಿಸಬೇಕು.

ಹಿಂದೂ ವಿರೋಧಿಗಳಾದ ಮಾತ್ರಕ್ಕೆ ಬುದ್ಧಿಜೀವಿಗಳು ನಡೆದಾಡಿದ ಮಾರ್ಗಗಳನ್ನು ಶುದ್ಧೀಕರಿಸಲು ಮುಂದಾಗಿರುವ ತಮ್ಮ ಶಿಷ್ಯರಿಗೆ ಪೇಜಾವರರು ವಿವೇಕಾನಂದರ ನುಡಿಗಳನ್ನು ಮನದಟ್ಟು ಮಾಡಬಾರದೇಕೆ ? ಬಸವಣ್ಣ ಸಾರಿದ ತತ್ವಗಳನ್ನು ಮನದಟ್ಟು ಮಾಡಬಾರದೇಕೆ ? ಗಾಂಧೀಜಿಯ ತಾತ್ವಿಕ ನೆಲೆಯನ್ನು ಮನನ ಮಾಡಬಾರದೇಕೆ ? ಇವರಾರೂ ಹಿಂದೂ ವಿರೋಧಿಗಳಲ್ಲ. ಪ್ರಜ್ಞಾಶೀಲರೂ ಹಿಂದೂ ವಿರೋಧಿಗಳಲ್ಲ. ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಶೋಷಣೆ ಮತ್ತು ದಬ್ಬಾಳಿಕೆ, ದೌರ್ಜನ್ಯದ ವಿರೋಧಿಗಳು. ಈ ದೌರ್ಜನ್ಯವೇ ಹಿಂದೂ ಧರ್ಮದ ತಿರುಳು, ಇದನ್ನು ವಿರೋಧಿಸುವ ಪ್ರಜ್ಞಾಶೀಲರು ಅಸ್ಪøಶ್ಯರು ಎಂದು ನೀವು ಭಾವಿಸಿದಲ್ಲಿ, ಬುದ್ಧಿಜೀವಿಗಳೆಂದು ಕರೆಯಲ್ಪಡುತ್ತಿರುವ ಪ್ರಜ್ಞಾಶೀಲರು ನಿಮ್ಮನ್ನೂ ಅಸ್ಪøಶ್ಯರೆಂದೇ ಪರಿಗಣಿಸಬೇಕಾಗುತ್ತದೆ ಪೇಜಾವರರೇ.

2 Responses to "ಮಾನವ ವಿರೋಧಿಗಳಾಗುವುದಕ್ಕಿಂತಲೂ ಹಿಂದೂ ವಿರೋಧಿಗಳಾಗುವುದು ಒಳಿತು :ಪೇಜಾವರರಿಗೊಂದು ಬಹಿರಂಗ ಪತ್ರ"

 1. Shivanand G S  November 5, 2016 at 8:36 pm

  It is truth!

  Reply
 2. ದೊಡ್ಡಿಪಾಳ್ಯ ನರಸಿಂಹಮೂರ್ತಿ  November 8, 2016 at 8:25 am

  ಅನಿಕೇತನದ ಎಲ್ಲಾ ಗೆಳೆಯ/ ಗೆಳತಿಯರಲ್ಲಿ ಒಂದು ಮನವಿ.

  ಆರೆಸ್ಸೆಸ್, ಭಜರಂಗದಳ, ವಿಎಚ್‍ಪಿ, ಇತ್ಯಾದಿ ಶಕ್ತಿಗಳು ತಾವು ಹಿಂದೂಗಳ ಪರವಾಗಿ, ಹಿಂದೂಗಳಿಗಾಗಿ ಹೋರಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳಲು ಹಲವಾರು ದಶಕಗಳಿಂದಲೂ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಕಾರ್ಪೊರೇಟ್ ಖದೀಮರ ಹಣದ ಬೆಂಬಲ ಮತ್ತು ನೀತಿಗೆಟ್ಟಿರುವ ಮಾಧ್ಯಮಗಳ ಬೆಂಬಲದಿಂದ ಈ ನಿಟ್ಟಿನಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸಂಘಟನೆಗಳಿಗೆ “ಹಿಂದೂ ಪರ” ಸಂಘಟನೆಗಳು, “ಹಿಂದೂವಾದಿಗಳು” ಅಥವ “ಹಿಂದುತ್ವವಾದಿಗಳು” ಇತ್ಯಾದಿ ವಿಶೇಷಣಗಳು ಅಂಟಿಕೊಂಡಿರುವುದು ಮಾಮೂಲು.

  ಆದರೆ ಕೋಮುವಾದಿಗಳ ಹುನ್ನಾರವನ್ನು ವಿರೋಧಿಸಿ ಹೋರಾಡುತ್ತಿರುವ ಶಕ್ತಿಗಳು ಅರ್ಥಾತ್ ಪ್ರಗತಿಪರರು, ಎಡಪಂಥೀಯರೂ ಕೂಡ ಇದೇ ನುಡಿಗಟ್ಟುಗಳನ್ನು ಅತ್ಯಂತ ಸಹಜವೆಂಬಂತೆ ಬಳಸುತ್ತಿರುವುದು ದೊಡ್ಡ ದುರಂತ. ನಾವು ಜನಸಾಮಾನ್ಯರ ದೃಷ್ಟಿಯಲ್ಲಿ “ಹಿಂದೂ ವಿರೋಧಿ”ಗಳಾಗಿ ಬಿಂಬಿತವಾಗಲು ಇಂಥಾ ಭಾಷಾ ಬಳಕೆಯೂ ಕೂಡ ಒಂದು ಕಾರಣ ಎಂಬುದು ನನ್ನ ಖಚಿತ ಅಭಿಪ್ರಾಯ.

  ಸಾಕಷ್ಟು ಪರಿಶ್ರಮದಿಂದ ಮತ್ತು ತಮ್ಮ ಅಪಾರ ವಿದ್ವತ್ತಿನಿಂದ ಈ ಫ್ಯಾಸಿಸ್ಟ್ ಶಕ್ತಿಗಳ ಹುಟ್ಟು, ಬೆಳವಣಿಗೆ, ಹಿನ್ನೆಲೆ ಇತ್ಯಾದಿಗಳನ್ನು ಬಹಿರ್ಗತಗೊಳಿಸಿದ/ ಗೊಳಿಸುತ್ತಿರುವ ಹಲವಾರು ಗಣ್ಯರು ಕೂಡ ನುಡಿಗಟ್ಟುಗಳ ಬಳಕೆಯಲ್ಲಿ ತಮ್ಮ ವಿರೋಧಿಗಳ ಖೆಡ್ಡಾದಲ್ಲಿ ಬಿದ್ದಿದ್ದಾರೆ ಎಂದು ಯಾವುದೇ ಅನುಮಾನವಿಲ್ಲದೇ ಹೇಳಬಹುದು. ಇದು ಕೇವಲ ಮೇಲಿನ ಪತ್ರದ ಲೇಖಕ ನಾ.ದಿವಾಕರ್‍ ಒಬ್ಬರಿಗೆ ಸಂಬಂಧಿಸಿದ್ದು ಮಾತ್ರವಲ್ಲ; ಬಹುತೇಕರ ಸಮಸ್ಯೆಯೂ ಆಗಿದೆ. ಜೀವವಿರೋಧಿ, ಫ್ಯಾಸೀವಾದಿ ಶಕ್ತಿಗಳನ್ನು ನಾವು “ಹಿಂದೂ ಪರರು” ಎಂದು ಮಾನ್ಯ ಮಾಡುವ ಕಾರ್ಯದಲ್ಲಿ ಅಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡಿರುವುದನ್ನು ಕಂಡು ವಿಷಾದವೆನಿಸುತ್ತದೆ.

  ಪ್ರಜ್ಞಾಶೀಲರು / ಬುದ್ಧಿಜೀವಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಸೂಕ್ತ. ಮಾತ್ರವಲ್ಲದೆ, ಈ ಸಮಾಜಘಾತುಕ ಶಕ್ತಿಗಳನ್ನು ಸಂಭೋಧಿಸಲು ಸೂಕ್ತ ನುಡಿಗಟ್ಟುಗಳನ್ನು ಹುಟ್ಟುಹಾಕಲು ಕೂಡ ಎಲ್ಲರೂ ಪ್ರಯತ್ನಶೀಲರಾಗಬೇಕು.
  ಈ ವಿಷಯದ ವಿಸ್ತೃತ ಚರ್ಚೆಗೆ ‘ಅನಿಕೇತನ’ ಒಂದು ವೇದಿಕೆಯಾಗಲಿ ಎಂಬುದು ನನ್ನ ಆಶಯ.

  ಸಕಾರಾತ್ಮಕ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…
  *ದೊಡ್ಡಿಪಾಳ್ಯ ನರಸಿಂಹಮೂರ್ತಿ

  Reply

Leave a Reply

Your email address will not be published.