ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಒಂದು

-ಲಕ್ಷ್ಮೀಪತಿ ಕೋಲಾರ

We are all African under the skin.
-chris stinger, Director, Humans origin program
Natural History museum, London.

ಭೂಮಿಯ ಮೇಲೆ ಇವತ್ತು ಬದುಕಿರುವ ಮಾನವ ಸಂತತಿಯ ಇನ್ನೂರು ಜನರಲ್ಲಿ ಒಬ್ಬ ಖಚಿತವಾಗಿ ಚೆಂಗೀಸ್ ಖಾನನ ವಂಶಸ್ಥನಾಗಿರುತ್ತಾನೆ? ಅಷ್ಟೇಕೆ, ಮುಸ್ಲಿಂ ಭಯೋತ್ಪಾದನೆಯನ್ನು ತೊಡೆದು ಹಾಕಬೇಕೆನ್ನುವ ಸೋಗಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯ ನೆಲೆಗಳನ್ನು ವಿಸ್ತರಿಸುತ್ತಿರುವ ಜಾರ್ಜ್ ಬುಷ್ ಮಹಾಶಯ ಬಿನ್ ಲಾಡೆನ್ ಅಥವಾ ಆಫ್ಘನ್ ತಾಲಿಬಾನಿಯೊಬ್ಬರ ನಿಕಟ ವಂಶಸಂಬಂಧಿಯಾಗಿರಬಲ್ಲ! ಕೇವಲ ಭಿನ್ನ ಚರ್ಮದ ಬಣ್ಣ, ಎತ್ತರ, ಗಾತ್ರಗಳ ಕಾರಣದಿಂದಾಗಿಯೋ ಅಥವಾ ಭಿನ್ನ ಹವಾಮಾನದ ಪ್ರಾದೇಶಿಕತೆಯಿಂದಾಗಿಯೋ ನಾವು, ಆಧುನಿಕ ಮನುಷ್ಯರು ಪ್ರತ್ಯೇಕ ಪ್ರತ್ಯೇಕ ಜನಾಂಗಗಳಲ್ಲಿ ಗುರುತಿಸಿಕೊಳ್ಳುವುದು ಕ್ಷುಲ್ಲಕ ವಿಚಾರವಷ್ಟೇ ಅಲ್ಲ, ಅವೈಜ್ಞಾನಿಕವಾದುದು ಕೂಡ. ಯಾಕೆಂದರೆ ಇವತ್ತು ಬದುಕಿರುವ ಪ್ರತಿಯೊಬ್ಬರು 60,000 ವರ್ಷಗಳ ಹಿಂದೆ ಆಫ್ರಿಕದಲ್ಲಿ ಜೀವಿಸಿದ್ದ ಪೂರ್ವೀಕ ಬುಷ್‍ಮನ್ ಬುಡಕಟ್ಟಿನವನೊಬ್ಬನ ಸಂತತಿಯವರೇ ಆಗಿದ್ದಾರೆ. ಬೆಚ್ಚಿ ಬೀಳಿಸುವ ಇಂತಹ ಹೇಳಿಕೆಗಳನ್ನು ನೀಡಿರುವವರು ಅಮೆರಿಕದ ಅನುವಂಶಿಕ ವಿಜ್ಞಾನಿ ಡಾ. ಆರ್. ಸ್ಪೆನ್ಸರ್ ವೆಲ್ಸ್

ವಾಸ್ತವ ಬದುಕಿನ ಆಡಂ ಆಗಿರುವ ಆ ಆಫ್ರಿಕನ್ ಪೂರ್ವೀಕ ನಮ್ಮೆಲ್ಲರಿಗೂ ಹೇಗೆ ಪ್ರಪಿತಾಮಹನಾದ? ಹಾಗಿದ್ದರೆ, ಅವನ ಕಾಲದಲ್ಲಿ ಬದುಕಿದ್ದಿರಬಹುದಾದ ಇನ್ನಿತರ ಆಡಂಗಳ ಸಂತತಿಯ ಗತಿ ಏನಾಯಿತು? ನಾವೆಲ್ಲರೂ ಒಬ್ಬನೇ ಪೂರ್ವೀಕ ಪಿತೃವಿನ ವಂಶಸ್ಥರಾದಲ್ಲಿ ರೂಪ, ಗಾತ್ರ, ಬಣ್ಣಗಳೊಂದಿಗೆ ಅಸಂಖ್ಯ ಜನಾಂಗೀಯ ಗುಂಪುಗಳು ಹೇಗಾದವು? ‘ಮೈಟೋಕಾಂಡ್ರಿಯಲ್ ಈವ್’ ಎಂದು ಹೆಸರಿಸಲ್ಪಟ್ಟಿರುವ ನಮ್ಮೆಲ್ಲರ ಪೂರ್ವೀಕ ‘ಮಹಾಮಾತೆ’ 1,50,000 ವರ್ಷಗಳ ಹಿಂದಿನ ಆಫ್ರಿಕನ್ನಳಾದರೆ, ಆಡಂ ಮತ್ತು ಈವ್ ಎಂದೂ ಸಂಧಿಸಿರಲಿಲ್ಲವೆಂದೇ ನಾವು ನಂಬಬೇಕಾಗುತ್ತದೆ. ಯಾಕೆಂದರೆ ಇವರಿಬ್ಬರ ನಡುವೆ 80 ರಿಂದ 90,000 ವರ್ಷಗಳಷ್ಟು ದೀರ್ಘ ಕಾಲದ ಅಂತರ ಉಳಿಯುತ್ತದೆ!

San-Bushmenಇಷ್ಟೆಲ್ಲಾ ಅನುಮಾನಗಳ ನಡುವೆಯೂ ಅನುವಂಶಿಕ ವಿಜ್ಞಾನಿ ವೆಲ್ಸ್ ಹೇಳುತ್ತಾನೆ: “ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ವೈಯಕ್ತಿಕ ಇತಿಹಾಸದ ಪುಸ್ತಕವನ್ನು ನಮ್ಮೊಳಗೇ ಹೊತ್ತೊಯ್ಯುತ್ತಿದ್ದೇವೆ. ಆದರೆ ಅದನ್ನು ಓದುವ ಬಗೆಯನ್ನಷ್ಟೇ ನಾವು ಕಲಿಯಬೇಕಿದೆ”. ಹೀಗೆ ಅನುವಂಶಿಕತೆಯಲ್ಲಿ ನಿಜವಾದ ಇತಿಹಾಸವನ್ನೂ, ಇತಿಹಾಸದಲ್ಲಿ ಕಾವ್ಯವನ್ನೂ ಕಾಣಬಲ್ಲ ವೆಲ್ಸ್ ಆಸ್ಟ್ರೇಲಿಯಾದ ಮೂಲ ನಿವಾಸಿಗಳು ತಮ್ಮ ಪೂರ್ವಜರ ವಲಸೆಯಾನವನ್ನು, ಸಮುದಾಯ ನೆನಪುಗಳಿಗೂ ಆಚೆಗಿನ ಸ್ವಪ್ನಕಾಲದ ಪಯಣವನ್ನು ಕುರಿತಂತೆ ಸಂಗೀತ ಕಥನದ ಮೂಲಕ ಹಾಡಿಕೊಳ್ಳುವ Songlineಗಳನ್ನು ಈ ಜಗತ್ತಲ್ಲಿ ಕಳೆದು ಕೊಂಡಿರುವವರೆಲ್ಲರಿಗೂ ಮತ್ತೆ ಕಟ್ಟಿಕೊಡುವ ಪ್ರಯತ್ನ ತಮ್ಮದೆಂದು ಭಾವಿಸಿದ್ದಾರೆ.

ಅಮಿಬಾ ಪೂರ್ವಜರಿಂದ ಹಿಡಿದು ಇಂದಿನವರೆಗಿನ ಎಲ್ಲಾ ಇತಿಹಾಸದ ದಾಖಲೆಗಳ ಗುಟ್ಟುಗಳನ್ನು ತನ್ನೊಳಗೆ ಅಡಗಿಸಿಕೊಂಡು ಬಂದಿರುವಂತಹದು ನಮ್ಮ ಡಿ.ಎನ್.ಎ. ಬಿಲಿಯ ವರ್ಷಗಳ ವಿಕಾಸದ ಕುಸುರಿಗೆಲಸದ ಅಂತಿಮ ಫಲಿತಾಂಶವಾದ, ಮನುಜರಾದ ನಾವು ಮತ್ತು ನಮ್ಮೊಳಗೇ ಇರುವ ಆ ಡಿ.ಎನ್.ಎ. ಗಳೊಳಗಿನ ಹೊಲಿಗೆ – ಬೆಸುಗೆಗಳ ಗುರುತುಗಳು ನಮ್ಮದೇ ಅತ್ಯಂತ ದೀರ್ಘ ಪಯಣದ ಕಥೆಗಳನ್ನು ಉಸುರುತ್ತವೆ. ಒಂದೇ ರೀತಿಯಲ್ಲಿನ ಜೆನೆಟಿಕ್ ಕೋಡ್‍ಗಳು ಇತಿಹಾಸವನ್ನು ಕುರಿತು ತಮ್ಮಿಂತಾವೇ ಏನನ್ನೂ ಹೇಳುವುದಿಲ್ಲ. ಆದರೆ ಹಲವರಲ್ಲಿನ ಡಿ.ಎನ್.ಎಗಳ ಹೋಲಿಕೆಯಿಂದಾಗಿ ಕಾಣುವ ವ್ಯತ್ಯಾಸವೇ ನಮ್ಮ ವಂಶವಾಹಿಗಳ ನಿಜವಾದ ಇತಿಹಾಸದ ಭಾಷೆಯಾಗಿರುತ್ತದೆ. ಈ ಭಾಷೆ ಕಟ್ಟಿಕೊಡುವ Songlineಗಳನ್ನು ಅಧ್ಯಯನ ಮಾಡುವುದೇ ವೆಲ್ಸ್ ಅವರ ನಿಜವಾದ ಆಸಕ್ತಿ. ಈ Songlineಗಳಲ್ಲೇ ನಮ್ಮ ಪೂರ್ವಿಕರ ವಲಸೆಯ ನಕ್ಷೆಗಳಡಗಿವೆ. ಕಾಲಮಾನದ ಕಚ್ಚಾ ಅಂದಾಜುಗಳಿವೆ. ಜೀವ ಕೌತುಕಗಳಿವೆ.

ಜಗತ್ತಿನ ಜೀವ ವಿಜ್ಞಾನಿಗಳು, ಅನುವಂಶಿಕ ವಿಜ್ಞಾನಿಗಳು, ಪುರಾತತ್ವ ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಇತಿಹಾಸಕಾರರು ಹಾಗೂ ಸಂಸ್ಕøತಿ ಚಿಂತಕರನ್ನೆಲ್ಲ ‘ಮಾನವ ಕುಲದ ಪೂರ್ವಿಕ ಯಾರು?’ ಎಂಬ ಜಟಿಲ ಪ್ರಶ್ನೆ ಎಂದಿನಿಂದಲೋ ಕಾಡುತ್ತಿರುವಂತಹದು. ಹತ್ತಿಪ್ಪತ್ತು ಲಕ್ಷವರ್ಷಗಳ ಹಿಂದೆಂದೋ ಹೋಮೋ ಎರೆಕ್ಟಸ್ ಅವಸ್ಥೆಯ ಪ್ರಾಚೀನ ಮಾನವರು ಆಫ್ರಿಕಾ ತೊರೆದು ಏಷ್ಯಾ, ಯುರೋಪ್‍ಗಳಲ್ಲೂ ಆಫ್ರಿಕನ್ನರಂತೆಯೇ ಸ್ವತಂತ್ರವಾಗಿ, ಏಕಕಾಲದಲ್ಲೇ ವಿಕಾಸಗೊಂಡು ಆಧುನಿಕ ಮಾನವ ಸಮುದಾಯಗಳಾಗಿ ರೂಪುಗೊಂಡರೆಂಬುದು ‘ಮಲ್ಟಿ ರೀಜನಲ್ ಮಾಡೆಲ್’. ಈ ಸಿದ್ಧಾಂತಕ್ಕೆ ಬೆಂಬಲವಿರುವ ಮಾತಂತಿರಲಿ. ಕ್ರಿಸ್ ಸ್ಟಿಂಜರ್ ನಂತಹವರು ಇದು ಸತ್ತ ವಿಚಾರವೆಂದು ತಳ್ಳಿಹಾಕಿದ್ದಾರೆ. ಇನ್ನುಳಿದಿರುವುದು ‘ಔಟ್ ಆಫ್ ಆಫ್ರಿಕ’ ಥಿಯರಿ. ವೆಲ್ಸ್ ಕೂಡ ನಿರೂಪಿಸಿರುವ ಈ ಸಿದ್ಧಾಂತ ವ್ಯಾಪಕ ಮನ್ನಣೆಯನ್ನು ಪಡೆದಿದೆ. ಹಾಗಿದ್ದರೆ ವೆಲ್ಸ್‍ನ ವಿಶೇಷತೆ ಏನು?

ಇದುವರೆಗಿನ ಬಹುತೇಕ ವಿಜ್ಞಾನಿಗಳೆಲ್ಲರೂ ಮಾನವಕುಲದ ಪೂರ್ವೀಕನನ್ನು ಪತ್ತೆಹಚ್ಚಲು ತಾಯಿಯಿಂದ ಮಕ್ಕಳಿಗೆ ಹರಿದುಬರುವ ಮೈಟೋಕಾಂಡ್ರಿಯಲ್ ವರ್ಣತಂತುವಿನ ವಿಶ್ಲೇಷಣೆಗಳನ್ನು ನಡೆಸುತ್ತಿದ್ದರು. ಆದರೆ ಸ್ಪೆನ್ಸರ್ ವೆಲ್ಸ್ ಇಡೀ ಮನುಕುಲದ ವಂಶವೃಕ್ಷದ ಮಾಯಾನಕ್ಷೆಯನ್ನು ಬಿಡಿಸಲು ಮತ್ತು ಆ ಮೂಲಕ ಪ್ರಪ್ರಾಚೀನ ಪಿತಾಮಹನನ್ನು ಪತ್ತೆಹಚ್ಚಲು ತಂದೆಯಿಂದ ಮಗನಿಗೆ ಮಾತ್ರ ಹರಿದು ಬರುವ ಙ-ವರ್ಣತಂತುವಿನ ಡಿ.ಎನ್.ಎ. ವಿಶ್ಲೇಷಣೆಯನ್ನು ನಡೆಸಿದರು. ವೆಲ್ಸ್ ಪ್ರಕಾರ ಎಲ್ಲ ಮನುಷ್ಯರ ಡಿ.ಎನ್.ಎ.ಗಳೂ ಶೇಕಡ 99.9 ರಷ್ಟು ಒಂದೇ ರೀತಿಯಲ್ಲಿರುತ್ತವೆ. ಇನ್ನುಳಿದ ಅತ್ಯಲ್ಪಭಾಗವೇ ಬಣ್ಣ, ಗಾತ್ರ, ಎತ್ತರ, ವಲಸೆಯ ಚಹರೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಮರುಸಂಯೋಗ ಹೊಂದದ ಈ ಙ-ವರ್ಣತಂತು ಪುರುಷ ವಂಶವಾಹಿ ವ್ಯವಸ್ಥೆಯಲ್ಲಿನ ಒಂದು ಸ್ಥಿರಭಾಗವಾಗಿದೆ. ಙ-ವರ್ಣತಂತುವಿನಲ್ಲಿನ ಡಿ.ಎನ್.ಎ. ಒಂದು ಅತ್ಯದ್ಭುತ ಕಾಲಯಂತ್ರವಿದ್ದಂತೆ. ಅನುವಂಶಿಕತೆ, ವಲಸೆಯ ಇತಿಹಾಸ, ಪ್ರಾಕ್ತನ ಹವಾಮಾನ ಶಾಸ್ತ್ರವನ್ನಾಧರಿಸಿ ನಿರ್ಧರಿಸಬಹುದಾದ ಪೂರ್ವೀಕರ ವಲಸೆಯ ಮಾರ್ಗ ಮತ್ತು ಕಾಲ ಹಾಗೂ ಪೀಳಿಗೆಗಳ ನಡುವಿನ ಅಜ್ಞಾತ ವಿವರಗಳು ಡಿ.ಎನ್.ಎ.ನ ಮಾಹಿತಿ ಭಂಡಾರದಲ್ಲಿ ಅಚ್ಚೊತ್ತಲ್ಪಟ್ಟಿರುತ್ತವೆ. ಙ-ವರ್ಣತಂತುವಿನಲ್ಲಿನ ಈ ಬಗೆಯ ಉತ್ಪರಿವರ್ತನೆ (Mutation)ಗಳನ್ನೇ ವೆಲ್ಸ್ ಅವರು ವಿವಿಧ ಮಾರ್ಕರ್‍ಗಳೆಂದು ಸಂಕೇತಿಸಿದರು.

ವೆಲ್ಸ್ ಅವರು ತಮ್ಮ ಅಧ್ಯಯನ, ಸಂಶೋಧನೆಗಳನ್ನು ಸಾಮುದಾಯಿಕವಾಗಿಸಿ, ಎಂಟು ದೇಶಗಳ ವಿಜ್ಞಾನಿಗಳ ತಂಡವನ್ನು ಕಟ್ಟಿ, ಇಂಡಿಯ, ಪಾಕಿಸ್ತಾನ, ಕಾಂಬೋಡಿಯ, ಆಸ್ಟ್ರೇಲಿಯ, ನ್ಯೂಗಿನಿ, ಅಮೆರಿಕ, ಮಾಲಿ, ಸೂಡಾನ್, ಇಥಿಯೋಪಿಯಾ ಹಾಗೂ ಜಪಾನ್‍ಗಳನ್ನು ಒಳಗೊಂಡಂತೆ ಇಪ್ಪತ್ತೆರಡು ಭಿನ್ನ ಭೌಗೋಳಿಕ ಪ್ರದೇಶಗಳ 1062 ಪುರುಷರ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಅವರ ಙ-ವರ್ಣತಂತುವಿನಲ್ಲಿನ ಅನಿರ್ದಿಷ್ಟ ಉತ್ಪರಿವರ್ತನೆ, ಬದಲಾವಣೆ, ವ್ಯತ್ಯಾಸಗಳನ್ನು ಅಧ್ಯಯನಕ್ಕೊಳಪಡಿಸಿದರು. ಕ್ಷೇತ್ರ ಕಾರ್ಯದಲ್ಲಿ ಬುಡಕಟ್ಟು ಮೂಲ ಹಾಗೂ ಪ್ರಾದೇಶಿಕ ಮೂಲಗಳೆರಡೂ ಅಂಶಗಳನ್ನು ಎಚ್ಚರದಿಂದ ಪರಿಗಣಿಸಿದ್ದರು. ಮಾನವ ಕುಲದ ಬೃಹತ್ ವಂಶವೃಕ್ಷದ ನಕ್ಷೆಯನ್ನು ಬಿಡಿಸುವಲ್ಲಿ ವೆಲ್ಸ್ ಅವರು ವಿವಿಧ ಙ-ವರ್ಣತಂತುಗಳಲ್ಲಿ ಅಚ್ಚೊತ್ತಲ್ಪಟ್ಟಿದ್ದ ಒಟ್ಟು 200 ಮಾರ್ಕರ್‍ಗಳನ್ನು ಅಭ್ಯಸಿಸಿದರು. ಅವುಗಳಲ್ಲಿ ಕೆಲವು ಗಣನೀಯ ಪ್ರಮಾಣದ ಮಾರ್ಕರ್‍ಗಳನ್ನು ಹೊಂದಿದ್ದು ವ್ಯಾಪಕ ವಲಸೆ ಹಾಗೂ ಸಂಕರಗಳ ಪ್ರತಿಫಲನವೆಂಬುದು ವೆಲ್ಸ್ ಅಭಿಪ್ರಾಯ.

ವರ್ಣತಂತುಗಳಲ್ಲಿ ಅಡಗಿರುವ ಮಾನವ ಇತಿಹಾಸದ ರಹಸ್ಯಗಳ ಬೆನ್ನು ಹತ್ತಿ ಹೊರಟ ಡಾ.ವೆಲ್ಸ್ ಅವರ ಈ ಯಾನ ಸಾವಿರಾರು ವರ್ಷಗಳ ಹಿಂದಿನ ಪೂರ್ವೀಕ ಹೆಜ್ಜೆ ಜಾಡನ್ನರಸುವ ಸುಂದರ ಮಹಾಕಾವ್ಯದಂತಿದೆ. ಮರೆತವರು ಮತ್ತೆ ನೆನಪಿಸಿಕೊಳ್ಳುವ ಸಂಗೀತದ ಕಥನವಾದ soಟಿgಟiಟಿeಗಳಂತಿವೆ. ವೆಲ್ಸ್ ಅವರ ವಾದವಿದು. ನಮೀಬಿಯದ ಸ್ಯಾನ್ ಬುಷ್‍ಮನ್ ಬುಡಕಟ್ಟಿನ ಙ-ವರ್ಣತಂತುವಿನ ನಕ್ಷೆಯಲ್ಲಿ ದೊರೆತ ಅತ್ಯಂತ ಪ್ರಾಚೀನ ಗುರುತು 60,000 ವರ್ಷಗಳಿಗೂ ಹಿಂದಿನದೆಂಬುದನ್ನು ನಿಷ್ಕರ್ಷಿಸಿದ ನಾವು ಅದಕ್ಕೆ ಮಾರ್ಕರ್-130 ಎಂದು ಸಂಕೇತಿಸಿದವು. ಇದೇ ಗುರುತು ಶತಾಂಶ 5 ರಿಂದ 7ರವರೆಗೂ ಸೌರಾಷ್ಟ್ರದ ಯಾದವರಲ್ಲೂ, ಮಧುರೆಯ ಪಿರಮಲೈ ಕಳ್ಳಾರರಲ್ಲೂ, ಶತಾಂಶ 10, 15 ರಷ್ಟು ಮಲೇಷಿಯಾ ಹಾಗೂ ಪಪುವಾ ನ್ಯೂಗಿನಿಯಲ್ಲೂ ಹಾಗೂ ಶತಾಂಶ 60ರಷ್ಟು ಗುರುತು ಆಸ್ಟ್ರೇಲಿಯಾದ ಮೂಲ ನಿವಾಸಿಗಳಲ್ಲೂ ಕಂಡು ಬಂದಿತು.

ಆ ಮೂಲಕ ನಮ್ಮೆಲ್ಲರ ಪೂರ್ವೀಕ ಪಿತೃವಿನ ವಲಸೆ ಮಾರ್ಗವನ್ನು ಆಫ್ರಿಕದಿಂದ ದಕ್ಷಿಣ ಭಾರತದ ಕರಾವಳಿಯನ್ನೊಳಗೊಂಡಂತೆ ಆಸ್ಟ್ರೇಲಿಯಾದವರೆಗೂ ಗುರುತಿಸಲು ಸಾಧ್ಯವಾಯಿತು. ಆಸ್ಟ್ರೇಲಿಯಾದ ಮೂಲನಿವಾಸಿಗಳು ಎರಡು ಮೂರು ಶತಮಾನಗಳ ಹಿಂದಿನವರೆಗೂ ಇತರರೊಂದಿಗೆ ಸಂಕರಗೊಳ್ಳದೇ ಇದ್ದದ್ದರಿಂದಲೇ ಅವರ ಙ ವರ್ಣತಂತುಗಳಲ್ಲಿ ಮಾರ್ಕರ್- 130ರ ಚಹರೆಗಳು ಅಧಿಕ ಪ್ರಮಾಣದಲ್ಲಿ ಕಂಡುಬಂದವು. ಬಹುಶಃ ಕಲಹರಿ ಮರುಭೂಮಿಯಿಂದ ಪುಟ್ಟ ಗುಂಪಾಗಿ ಬುಷ್‍ಮನ್‍ಗಳು ಪ್ರಯಾಣ ಆರಂಭಿಸಿದ ಕಾಲಘಟ್ಟದಲ್ಲಿ ಇಡೀ ಜಗತ್ತೇ ಹಿಮಯುಗದ ಕ್ರೂರ ಅಪ್ಪುಗೆಯಲ್ಲಿ ಮುಸುಕಿತ್ತು. ಆಫ್ರಿಕನ್ನರು ಅಳಿವಿನ ಅಂಚಲ್ಲಿದ್ದರು. ಹಿಮಯುಗವಾದ್ದರಿಂದ ಸಮುದ್ರ 100 ಮೀಟರ್‍ಗಳಷ್ಟು ಕೆಳಮಟ್ಟದಲ್ಲಿತ್ತು. ಇಂದಿನ ಸಮುದ್ರ ತೀರಗಳಿಂದ 200 ಕಿಲೋಮೀಟರ್‍ಗಳಷ್ಟು ಒಳಗೆ, ಸಮುದ್ರಭಾಗದಲ್ಲೂ ಆಗ ನೆಲವೇ ಇತ್ತು. ಶ್ರೀಲಂಕಾ ದಕ್ಷಿಣ ಭಾರತದ ತುತ್ತತುದಿಯಾಗಿತ್ತು. ಮಲಯದಿಂದ ಇಂಡೋನೇಷಿಯಾದವರೆಗಿನ ದ್ವೀಪಸಮೂಹಗಳ ಭಾಗದಲ್ಲೂ ನೀರಿರಲಿಲ್ಲ. ಆಸ್ಟ್ರೇಲಿಯಾ ಖಂಡವನ್ನು ತಲುಪಲು ಮಾತ್ರ 250 ಕಿಲೋಮೀಟರ್‍ಗಳ ಸಮುದ್ರ ಭಾಗವನ್ನು ದಾಟಬೇಕಿತ್ತು. ಉತ್ತರ ಧ್ರುವದಲ್ಲಿ ಹಿಮಪಟ್ಟಿಗಳು ಅಗಾಧವಾಗಿ ವಿಸ್ತರಿಸಿಕೊಂಡಿದ್ದು, ಉಷ್ಣಾಂಶದಲ್ಲೂ 10 ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿಮುಖವಾಗಿತ್ತು. ಆಫ್ರಿಕದಿಂದ ಆಸ್ಟ್ರೇಲಿಯದವರೆಗಿನ ಪ್ರಯಾಣದ ಅವಧಿ ಬಹುಶಃ 1000 ವರ್ಷಗಳದ್ದಿರಬಹುದು. ಆಫ್ರಿಕವನ್ನು ಬಿಟ್ಟರೆ, ಹೋಮೋ ಸೇಪಿಯನ್ನರು ಕಾಲಿಟ್ಟ ಎರಡನೇ ಭೂಭಾಗವೇ ಪೂರ್ವ ಕರಾವಳಿ ಭಾರತ.

Chris_stringerಆ ಹೋಮೋ ಸೇಪಿಯನ್ನರ ಮಾರ್ಕರ್ 130ರ ಚಹರೆಯನ್ನೇ 2000 ತಲೆಮಾರುಗಳ ನಂತರವೂ ತನ್ನ ಙ-ವರ್ಣತಂತುವಿನಲ್ಲಿ ಜತನವಾಗಿ ಉಳಿಸಿಕೊಂಡು ಬಂದ ಮಧುರೆಯ ಪಿರಮಲೈ ಕಳ್ಳಾರ್ ಜನಾಂಗದ ವೀರಮಾಂಡಿ ಬುಷ್‍ಮನ್ ಆಫ್ರಿಕನ್ನರ ಮೊದಲ ವಲಸೆಯ ಐತಿಹಾಸಿಕ ಘಟನೆಗೆ ಇಂದು ತಾನೇ ಜೀವಂತ ಪುರಾವೆಯಾಗಿ ಉಳಿದಿದ್ದಾನೆ. ವೆಲ್ಸ್ ತಂಡದ ವಿಜ್ಞಾನಿಗಳಲ್ಲಿ ಮಧುರೆಯ ಕಾಮರಾಜ್ ವಿಶ್ವವಿದ್ಯಾನಿಲಯದ ಇಮ್ಯುನಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿಚ್ಚಪ್ಪನ್ ಅವರೂ ಪ್ರಮುಖ ಸದಸ್ಯರಾಗಿದ್ದು, ಈ ವಂಶವಾಹಿ ಅಧ್ಯಯನದಲ್ಲಿ ಹಾಗೂ ಆಫ್ರಿಕ – ಆಸ್ಟ್ರೇಲಿಯಾಗಳ ನಡುವೆ ಕೊಂಡಿಯಾಗಿರುವ ದಕ್ಷಿಣ ಭಾರತದಲ್ಲಿ missing genetic marker – 130 ರ ಚಹರೆಗಳನ್ನು ಪತ್ತೆಹಚ್ಚುವಲ್ಲಿಯೂ ಅವರದು ಪ್ರಧಾನಪಾತ್ರ. ವೀರಮಾಂಡಿಯ ವಂಶವಾಹಿನಿಗಳಲ್ಲಿನ amino acid bands ಇಂದಿನ ಆಫ್ರಿಕನ್ ಬುಷ್‍ಮನ್‍ನಲ್ಲಿನ amino acid bandsನೊಂದಿಗೆ ತದ್ವತ್ತು ಹೋಲಿಕೆಯನ್ನು ಹೊಂದಿದ್ದು, ದಕ್ಷಿಣ ಭಾರತದಲ್ಲೂ ಮಾರ್ಕರ್-130 ಇರುವುದು ದೃಢಪಟ್ಟಿತು. ವೀರಮಾಂಡಿ ಅಥವಾ ಪಿರಮಲೈ ಕಳ್ಳಾರ್‍ರಲ್ಲಷ್ಟೇ ಅಲ್ಲದೆ ದಕ್ಷಿಣ ಭಾರತದ ಅನೇಕ ಬುಡಕಟ್ಟುಗಳಲ್ಲೂ ಮಾರ್ಕರ್-130ರ ಚಹರೆ ಇದ್ದಿರಬಹುದಾಗಿದೆ. 45,000 ವರ್ಷಗಳ ಹಿಂದೆ ಆಫ್ರಿಕದಿಂದ ಎರಡನೆಯ ವಲಸೆ ಹೊರಟು, ಮಧ್ಯ ಪ್ರಾಚ್ಯ, ಮಧ್ಯ ಏಷ್ಯಾ, ಚೀನಾ, ಯೂರೋಪ್, ಅಮೆರಿಕಾ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಮಾನವ ಸಂತತಿ ಹಬ್ಬಿತು. ಈ ಗುಂಪಿನ ಙ-ವರ್ಣತಂತುವಿನ ಗುರುತು ಒ-89 ಎಂದು ಸಂಕೇತಿಸಲಾಗಿದ್ದು, ಆ ಗುಂಪಿನಿಂದ ಹೋಳಾಗಿ ವಾಯುವ್ಯ ದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದ ವಂಶಾವಳಿಯ ಗುರುತು ಒ-20 ಎಂದು ನಮೂದಿಸಲಾಗಿದೆ. ಈ ಗುಂಪಿನ ಜನರನ್ನು ದ್ರಾವಿಡರೆಂದು ಗುರುತಿಸಲಾಗಿದೆ.

ನಮ್ಮೆಲ್ಲರ ಮೂಲಪುರುಷ ಒಬ್ಬನೇ ಬುಷ್‍ಮನ್ ಎನ್ನುವುದರ ಅರ್ಥ ಆ ಘಟ್ಟದ ಇನ್ನುಳಿದ ಬುಷ್‍ಮನ್‍ಗಳ ಙ-ವರ್ಣತಂತುಗಳು ಉಳಿಯಲಿಲ್ಲವೆಂದಷ್ಟೇ ಆಗುತ್ತದೆ. ವೆಲ್ಸ್ ಅವರ ಅನುವಂಶಿಕ ಅಧ್ಯಯನ ಇನ್ನೂ ಮುಂದುವರೆಯುತ್ತಲೇ ಇದೆ. ಆದರೂ ವೆಲ್ಸ್ ಅವರ ಸಂಶೋಧನೆ. ವಾದಸರಣಿಯನ್ನು ಅಂತಿಮ ಸತ್ಯವೆಂದೋ ಅಥವಾ ಎಲ್ಲರೂ ಒಪ್ಪುತ್ತಾರೆಂದೋ ಭಾವಿಸಬೇಕಾದ್ದಿಲ್ಲ. ಆದರೂ ಅನುವಂಶಿಕತೆಯೊಂದಿಗೆ ಇನ್ನಿತರ ಅನ್ಯಶಿಸ್ತೀಯ ಅರಿವುಗಳೂ ಜೊತೆಗೂಡಿದಾಗ ಇನ್ನಷ್ಟು ನಿಖರ ಸತ್ಯಗಳು ಹೊರಬಂದಾವು. ಯಾಕೆಂದರೆ ವೆಲ್ಸ್ ಅವರ ಪ್ರಮೇಯವನ್ನು ಸಮರ್ಥಿಸುವಂತಹ ಅನೇಕ ಅಂಶಗಳು ಭಾಷಾ ವಿಜ್ಞಾನ, ಪುರಾತತ್ವ ಶಾಸ್ತ್ರ – ನಂಬಿಕೆ, ಆಚರಣೆಯಂತಹ ಸಂಸ್ಕøತಿ ಸಂಗತಿಗಳಲ್ಲಿ ಹೇರಳವಾಗಿವೆ. ಅವುಗಳ ಅಧ್ಯಯನ ಖಂಡಿತ ವೆಲ್ಸ್ ತನ್ನ ಇದುವರೆಗಿನ ಅಧ್ಯಯನದ ಒಟ್ಟಾರೆ ಅರಿವನ್ನು ಸಾರವತ್ತಾಗಿಸಿ ‘The History of humanity is really a history of movement and mixing’ ಎಂದು ಕವಿಯಂತೆ, ದಾರ್ಶನಿಕನಂತೆ ನಗುತ್ತಾ ಉದ್ಗರಿಸುತ್ತಾರೆ. ಡಾಕ್ಟರ್ ವೆಲ್ಸ್ ಅವರು ಮರುಪ್ರತಿಪಾದಿಸಿದ ouಣ oಜಿ ಂಜಿಡಿiಛಿಚಿ ಸಿದ್ಧಾಂತ ಹಾಗೂ ಅನುವಂಶಿಕ ಪುರಾವೆಗಳ ಪ್ರಕಾರ ನಿಸ್ಸಂಶಯವಾಗಿಯೂ ಎಲ್ಲ ಮಾನವರ ಮೂಲ ಆಫ್ರಿಕವೇ.

ತಮಿಳರ ಮೂಲಗುಂಪು ವಿಶಿಷ್ಟ ಸಾಂಸ್ಕøತಿಕ ಪಂಗಡವಾಗಿ ರೂಪುಗೊಂಡ ನಂತರ ಒ-20 ಅವರ ನಿಕಟ ಪೂರ್ವೀಕ ಸಂಬಂಧಿಗಳು ನೆಲೆಸಿದ್ದ ಕ್ರೀಟ್ (ಛಿಡಿeಣe) ಎಂಬ ಮೆಡಿಟರೇನಿಯನ್ ಸಮುದ್ರದ ನಡುವಿನ ದ್ವೀಪವೇ ಬಹುಶಃ ದಕ್ಷಿಣ ಭಾರತದ ಇಂದಿನ ತಮಿಳರ ಸಾಂಸ್ಕøತಿಕ ತವರು ನೆಲ!
ಮಹಾಬಲಿಪುರಂನ ಸಮುದ್ರ ತೀರದಲ್ಲಿರುವ ದೇವಾಲಯ ಅಂತಹ ಏಳು ಭವ್ಯ ಹಾಗೂ ಕಲಾತ್ಮಕÀ ದೇವಾಲಯಗಳ ಸರಣಿಯಲ್ಲಿ ಕೊನೆಯದು! ಇನ್ನುಳಿದ ಆರು ದೇವಾಲಯಗಳು ಸಮುದ್ರದಲ್ಲಿ ಮುಳುಗಡೆಯಾಗಿ ಹೋಗಿವೆ. ದಕ್ಷಿಣ ಭಾರತ, ಅಷ್ಟೇಕೆ ಇಡೀ ಭಾರತದ ಮೊಟ್ಟಮೊದಲ ಹಾಗೂ ಅತ್ಯಂತ ಪ್ರಾಚೀನ ದೇವರು ಬಹುಶಃ ಮುರುಗನೇ! ಮುರುಗನ ಕಾಲಮಾನದ ಸಮಕ್ಕೆ ನಿಲ್ಲಬಲ್ಲ ಮತ್ಯಾವುದಾದರೂ ಪ್ರಪ್ರಾಚೀನ ದೈವತವಿದ್ದಲ್ಲಿ ಪ್ರಾಯಶಃ ಅದು ಲಿಂಗ ಮಾತ್ರ; ಶಿವನು ಕೂಡ ಅಲ್ಲ! ಕಾಲ-ದೇಶಗಳ ದೃಷ್ಟಿಯಿಂದ ವಿಪರೀತದ ವಿರೋಧಾಭಾಸದಂತೆ ಕಾಣುವ ಈ ಎಲ್ಲಾ ಅಂಶಗಳ ನಡುವೆ ಒಂದು ಸುಸಂಗತವಾದ ಇತಿಹಾಸದ ಎಳೆ ಹೆಣೆದುಕೊಂಡಿರಬಹುದೇ? ಖಂಡಿತ ಇದ್ದಿರಬಹುದು ಎಂಬ ಸಾಧ್ಯತೆಯ ತೂಕವೇ ಒಂದು ಕೈ ಹೆಚ್ಚಿರುವಂತೆ ಈ ಸಧ್ಯ ತೋರುತ್ತಿದೆ.
ಪುರಾತತ್ವ ಶಾಸ್ತ್ರಜ್ಞರು, ಸಂಸ್ಕøತಿ ಹಾಗೂ ಇತಿಹಾಸ ಶೋಧಕರು ಇಂದಲ್ಲ ನಾಳೆಯಾದರೂ ಕಣ್ಣು ಕುಕ್ಕುವ ಈ ಐತಿಹಾಸಿಕ ಸತ್ಯಗಳನ್ನೆಲ್ಲ ಜಗತ್ತಿನೆದುರು ಮಂಡಿಸಬಹುದು. ಯಾಕೆಂದರೆ ಮೇಲ್ನೋಟಕ್ಕೆ ಅಸಂಗತವಾಗಿ ಕಂಡುಬರುವ ಈ ಎಲ್ಲಾ ಮಾತುಗಳ ನಡುವಿನ ಸುಸಂಬದ್ಧ ಕೊಂಡಿ ಅಜ್ಞಾತದಾಳದಲ್ಲೆಲ್ಲೋ ಹುದುಗಿಹೋಗಿದ್ದರೂ, ಡಾಕ್ಟರ್ ವೆಲ್ಸ್ ಅವರು ಅನುವಂಶಿಕ ಪುರಾವೆಗಳ ಮೂಲಕ ಸಾಬೀತುಪಡಿಸಿರುವ ಆದಿಮಾನವನ ಆಫ್ರಿಕಾದಿಂದ ಆಸ್ಟ್ರೇಲಿಯಾದವರೆಗಿನ ವಲಸೆಯ ಮಾರ್ಗ, ಸ್ಥಳಗಳು ಹಾಗು ಕಾಲಗಳೊಂದಿಗೆ ಮೇಲೆ ವಿವರಿಸಿರುವ ಅಂಶಗಳು ತಳುಕು ಹಾಕಿಕೊಂಡಿವೆ. ಅದಷ್ಟೇ ಅಲ್ಲದೆ ಇನ್ನಿತರ ಪುರಾತತ್ವ, ಸಾಂಸ್ಕøತಿಕ ಹಾಗು ಭಾಷಿಕ ಸಾಕ್ಷ್ಯಗಳು ಕೂಡ ಈ ಸತ್ಯದ ಸರಳ ರೇಖೆಯ ಸಮೀಪವೇ ಬಂದು ನಿಲ್ಲುತ್ತಿವೆ. ಇದು ನಿಜವೆಂದು ಸಾಬೀತಾದ ದಿನ ಇತಿಹಾಸವನ್ನು, ಅದರಲ್ಲು ದಕ್ಷಿಣ ಭಾರತದ ಇತಿಹಾಸವನ್ನು ಗ್ರಹಿಸುತ್ತಿರುವ ಜಗತ್ತಿನ ದೃಷ್ಟಿಕೋನವೇ ಬದಲಾಗಬಹುದು. ದಕ್ಷಿಣ ಭಾರತದ ಸಮುದ್ರ ತೀರಗಳು ಮತ್ತು ಕಡಲಿನಾಳದಲ್ಲಿ ಮುಖ ಮರೆಸಿಕೊಂಡಿರುವ ನಗರ ನಾಗರಿಕತೆಗಳು ಪ್ರಪಂಚದಲ್ಲೇ ಅತ್ಯಂತ ಪ್ರಾಚೀನ ನಾಗರಿಕತೆಗಳೆನಿಸಿಕೊಳ್ಳುತ್ತವೆ.

ಇವತ್ತಿನ ಬಹುತೇಕ ತಮಿಳು ಜನಾಂಗದವರು ಆಫ್ರಿಕದಿಂದ ಹೊರಟ ವಲಸೆಯ ಎರಡನೆಯ ಗುಂಪಿಗೆ ಸೇರಿದವರೆಂದುಕೊಳ್ಳಬಹುದು. ಅದು 30,000-45,000 ವರ್ಷಗಳ ಅವಧಿಯ ನಡುವಿನದಾದರೂ, ದಕ್ಷಿಣ ಭಾರತಕ್ಕೆ ಅವರು ಕಾಲಿಟ್ಟಿದ್ದು ಬಹುಶಃ 10,000 ವರ್ಷಗಳ ಹಿಂದೆ. ಆದರೂ ಬುಷ್‍ಮನ್ ಬುಡಕಟ್ಟಿನ ಆದಿಮ ಪಿತೃವಿನ ವಂಶಾವಳಿಯ ಮಾರ್ಕರ್-130 ಈ ತಮಿಳರ ವಂಶವಾಹಿಗಳನೇಕರಲ್ಲಿ ಕಂಡುಬರಬಹುದು. ಹಾಗೆಯೇ ಕಾಲಾನುಗತಿಯಲ್ಲಿ ಬದಲಾದ ಮಾರ್ಕರ್‍ಗಳೂ ಕಾಣಿಸಬಹುದು. ವಿವಿಧ ಗುಂಪುಗಳೊಂದಿಗೆ ಸಂಕರಗೊಳ್ಳುತ್ತ ಮಾರ್ಕರ್‍ಗಳಲ್ಲೂ ವ್ಯತ್ಯಾಸ ತಲೆದೋರಿರಬಹುದು.
ಹೆಲೆನಿಕ್ ಪೂರ್ವ (ಹೆಲೆನಿಕ್ = ಗ್ರೀಸ್ ದೇಶದ ಪ್ರಾಚೀನ ಹೆಸರು) ಕ್ರೀಟ್ ದೇಶದ ಜನರು ತಮ್ಮನ್ನು ‘ತರ್ಮಿಳೈ’ (Termilai) ಜನಾಂಗವೆಂದೇ ಕರೆದುಕೊಳ್ಳುತ್ತಿದ್ದರೆಂಬ ಅಂಶವನ್ನು ಹೆರೊಡೊಟಸ್ ಎಂಬ ವಿದ್ವಾಂಸರು ದಾಖಲಿಸಿರುವುದನ್ನು ಡಾ.ಯು.ಪಿ.ಉಪಾಧ್ಯಾಯ ಅವರು ತಮ್ಮ ‘ಡ್ರಾವಿಡಿಯನ್ ಅಂಡ್ ನೀಗ್ರೋ ಆಫ್ರಿಕನ್‍ರ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.(ಪುಟ 20-21). ಪ್ರಾಚೀನ ಕ್ರೀಟನ್ನರ ಈ ಜನಾಂಗಸೂಚಕ ಪದ ಯಾವ ಮೂಲಕಾರಣ ಹಾಗೂ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿತೋ ಗೊತ್ತಿಲ್ಲವಾದರೂ ಮೆಡಿಟರೇನಿಯನ್ ಪ್ರದೇಶದ ಆ ಮೂಲ ಗುಂಪಿಂದ ಕುಡಿಯೊಡೆದು ದಕ್ಷಿಣ ಭಾರತಕ್ಕೆ ವಲಸೆ ಬಂದ ಜನರಿಂದಾಗಿಯೇ ತರ್ಮಿಳೈ>ತಮಿಳೈ>ತಮಿಳ್ ಎಂದಾಗಿರಬಹುದೆಂಬುದು ವಿದ್ವಾಂಸರ ಅಭಿಮತ. ಈ ‘ತಮಿಳೈ’ ಎಂಬ ಜನಾಂಗ ಸೂಚಕ ಪದವು ತಮಿಳು ಭಾಷೆಯ ವ್ಯಾಕರಣ ಲಕ್ಷಣಗಳಿಗೆ ಅನುಗುಣವಾಗಿಯೂ ‘ಐ’ತ್ವಕಾರದ ಪ್ರತ್ಯಯದೊಂದಿಗೆ ಕೊನೆಗೊಂಡಿರುವುದು ಕೂಡ ಗಮನಾರ್ಹ. (ಉದಾಹರಣೆಗೆ ಗಮನಿಸಿ : ಮಧುರೈ, ಕಡವುಳ್ ಇಲ್ಲಯೇ ‘ಇಲ್ಲೈ’ ಮಲೈ ಇತ್ಯಾದಿಯಾಗಿ) ದಕ್ಷಿಣ ಗ್ರೀಸಿನಲ್ಲೂ ‘ತ್ರಿಮಿಳೈ’ ಎಂಬ ಹೆಸರಿನ ಜನಾಂಗವಿದ್ದದ್ದರ ಬಗ್ಗೆ ಕೆ.ಕೆ. ಪಿಳ್ಳೈ ಅವರೂ ದಾಖಲಿಸಿದ್ದಾರೆ.

ಕ್ರಿ.ಪೂ.1000 ವರ್ಷಗಳಿಗೂ ಹಿಂದಿನ ತಿರುನೆಲ್ವೇಲಿ ಬಳಿಯ ಅಡಿಚ್ಚನಲ್ಲೂರು ಹಾಗೂ ಶ್ರೀಲಂಕಾದ ಪೂಂಪರಿಪ್ಪು ಎಂಬಲ್ಲಿನ ಪ್ರಾಚೀನ ಸಮಾಧಿಗಳಲ್ಲಿ ಮುರುಗನ ಆಯುಧವಾದ ‘ವೇಲ್’ ದೊರೆತಿದ್ದು, ಸೈಪ್ರಸ್ ಹಾಗೂ ಪ್ಯಾಲೆಸ್ತೀನಿನ ಪ್ರಾಚೀನ ಸಮಾಧಿಗಳಲ್ಲೂ ತದ್ವತ್ತು ಅಂಥವೇ ವೇಲ್‍ಗಳು ದೊರೆತಿವೆ! ಇಂಥವೇ ಹಲವಾರು ಸಮಾನ ದ್ರಾವಿಡ ಸಂಸ್ಕøತಿ ಮೂಲದ ಪರಿಕರ, ಆಭರಣಗಳು ಕ್ರೀಟ್‍ನ ಸಮಾಧಿಗಳಲ್ಲಿ ಕಂಡುಬಂದಿವೆ. ಆಫ್ರಿಕ, ಮೆಡಿಟರೇನಿಯನ್ ಹಾಗೂ ದಕ್ಷಿಣ ಭಾರತದಲ್ಲಿ ಪಿತೃಗಳು ಮರುಜನ್ಮ ತಳೆದು ಬರುವರೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಸತ್ತ ಹಿರಿಯರ ಶವಗಳನ್ನು ಮಣ್ಣಿನ ಗುಡಾಣಗಳಲ್ಲಿಟ್ಟು ಹೂಳುತ್ತಿದ್ದರು. ಇಂತಹ ಮಣ್ಣಿನ ಶವಗುಡಾಣಗಳು ಮೆಸಪೋಟೇಮಿಯ, ಪಾಂಡಿಚೆರಿ ಹಾಗೂ ತಂಗಭದ್ರ ನದಿ ಬಯಲಿನ ತೆಕ್ಕಲ ಕೋಟೆಯಲ್ಲಿ ಸಿಕ್ಕಿದ್ದು ಅವುಗಳ ನಡುವೆ ನಿಕಟ ಹೋಲಿಕೆಗಳಿವೆ. ಆಫ್ರಿಕ, ಮೆಡಿಟರೇನಿಯನ್ ಹಾಗೂ ದಕ್ಷಿಣ ಭಾರತದಲ್ಲಿ ಸತ್ತ ಹಾವುಗಳನ್ನು, ವಿಶೇಷವಾಗಿ ನಾಗಗಳನ್ನು ಹೂಳುವ ಪದ್ಧತಿ ಇದೆ. ಕೆ.ಎಂ.ಪಣಿಕ್ಕರ್ ಅವರ ಪ್ರಕಾರ ಸರ್ಪಾರಾಧನೆ ಅತ್ಯಂತ ಪ್ರಾಚೀನ ಆಚರಣೆಯಾಗಿದ್ದು, ಆಫ್ರಿಕ, ದಕ್ಷಿಣ ಭಾರತ ಹಾಗೂ ಮೆಡಿಟರೇನಿಯನ್ ಪ್ರದೇಶಗಳಲ್ಲಿರುವಂತಹ ಶ್ರದ್ಧಾಪೂರ್ವಕ ಹಾಗು ವೈವಿಧ್ಯಮಯವಾದ ಸರ್ಪಾರಾಧನೆಯ ರೂಪಗಳು ಜಗತ್ತಿನ ಬೇರಾವುದೇ ಭಾಗದಲ್ಲೂ ಕಂಡುಬರುವುದಿಲ್ಲ.

ಈಜಿಪ್ಟಿನ ಮಮ್ಮಿಗಳಲ್ಲಿ ದೊರೆತಿರುವ ಕಪಾಲರಚನೆಗಳು ದಕ್ಷಿಣ ಭಾರತದ ಕಪಾಲ ರಚನೆಗಳನ್ನು ಬಹುತೇಕ ಹೋಲುತ್ತವೆಂದು ಚೀಕ್ ಡಿಯೊಪ್ ಎನ್ನುವ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಬಳ್ಳಾರಿ ಬಳಿಯ ಬ್ರಹ್ಮಗಿರಿಯಲ್ಲಿ ದೊರೆತ ಅಸ್ಥಿಪಂಜರಗಳು, ಕಪಾಲ ಬುರುಡೆಗಳಲ್ಲಿ ಕೆಲವು ವೆಡ್ಡಾಯಿಡ್ ಮತ್ತು ಆಸ್ಟ್ರಲಾಯ್ಡ್ ಎಂಬ ದ್ರಾವಿಡಪೂರ್ವ ಜನಾಂಗದ ಲಕ್ಷಣಗಳನ್ನು ಹೊಂದಿದ್ದರೆ ಮತ್ತೆ ಕೆಲವು ದಕ್ಷಿಣ ಈಜಿಪ್ಟ್ ಹಾಗೂ ನೈಲ್ ಕಣಿವೆಯಲ್ಲಿದ್ದ ಡೋಲಿಕೋ ಸೆಫಾಲಿಕ್ ಮೆಡಿಟರೇನಿಯನ್ ಜನಾಂಗದ ಲಕ್ಷಣಗಳನ್ನು ಹೊಂದಿವೆಯೆಂದು ನಿರ್ಧರಿಸಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಕಂಡುಬಂದಿರುವ ಬೃಹತ್ ಕಲ್ಲಿನ ಚಪ್ಪಡಿಗಳ ಕೋಣೆಗೋರಿಗಳು ದಕ್ಷಿಣ ಭಾರತದಲ್ಲಂತೂ ಹೇರಳವಾಗಿವೆ. ನಮ್ಮಲ್ಲಿ ಅಂತಹ ಗೋರಿಗಳನ್ನು ಪಾಂಡವರ ಮನೆಗಳೆಂದು ಕರೆಯುವ ಪದ್ಧತಿ ಇದೆ. ಇಂತಹ ಇನ್ನೂ ಅನೇಕ ಸಾಂಸ್ಕøತಿಕ ಆಚರಣೆಗಳಲ್ಲಿ ಸಮಾನ ಅಂಶಗಳಿರುವುದು ಅಂತಿಮವಾಗಿ ದ್ರಾವಿಡ ಭಾಷಾ ವರ್ಗದ ಜನ ಆಫ್ರಿಕದಿಂದ ವಲಸೆ ಬಂದ ಮೆಡಿಟರೇನಿಯನ್ ಮೂಲದವರೆಂದೇ ಸ್ಪಷ್ಟಪಡಿಸುವಂತಿವೆ.

ಮಹಾಬಲಿಪುರಂನ ಬೆಸ್ತರಲ್ಲಿ ಬಹಳ ಹಿಂದಿನಿಂದಲೂ ದಂತಕಥೆಯೊಂದು ಚಾಲ್ತಿಯಲ್ಲಿದೆ. ಈ ದಂತಕಥೆಯ ಪ್ರಕಾರ ಮಹಾಬಲಿಪುರಂನ ಸಮುದ್ರ ತೀರದಲ್ಲಿ ಈಗಿರುವ ದೇವಾಲಯ ಅಂತಹ ಏಳು ದೇವಾಲಯಗಳ ಸರಣಿಯಲ್ಲಿ ಕೊನೆಯದು. ಇನ್ನುಳಿದ ಆರು ದೇವಾಲಯಗಳು ಅನುಕ್ರಮವಾಗಿ ಸಮುದ್ರದಲ್ಲಿ ಮುಳುಗಡೆಯಾಗಿ ಹೋದವು. ದೇವತೆಗಳಿಗೆ ಈ ದೇವಾಲಯಗಳ ಕಲಾತ್ಮಕ ಚೆಲುವು ಹಾಗೂ ಅವುಗಳನ್ನು ಸುತ್ತುವರೆದ ನಗರಗಳ ಸೌಂದರ್ಯ ಅಸೂಯೆ ಹುಟ್ಟಿಸಿದ್ದರಿಂದ ಸಾಗರ ಪ್ರಕೋಪ ಅವುಗಳನ್ನು ಅಪೋಶನ ತೆಗೆದುಕೊಂಡುಬಿಟ್ಟಿತಂತೆ. ಮಹಾಬಲಿಪುರಂನಲ್ಲಿನ ಮತ್ತೊಂದು ದಂತಕಥೆ ಈಗಿರುವ ದೇವಾಲಯದ ಅಡಿಯಲ್ಲೇ ಉಳಿದ ಆರು ದೇವಾಲಯಗಳು ಹೂತುಹೋಗಿವೆ ಎನ್ನುತ್ತದೆ. 1798ರಲ್ಲಿ ಬ್ರಿಟಿಷ್ ಪ್ರವಾಸಿ ಜೆ.ಗೋಲ್ಡಿಂಗ್ ಹ್ಯಾಮ್ ಎನ್ನುವವರು ಅದನ್ನೋದಿ ಪ್ರಭಾವಿತರಾಗಿ ದಂತಕಥೆಯ ಸತ್ಯಾಸತ್ಯತೆಯನ್ನರಿಯಲು ತಾವೇ ಕಡಲಿಗೆ ಧುಮುಕಿದರು. ಐದಾರು ವರ್ಷಗಳ ಹಿಂದೆ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಹ್ಯಾನ್‍ಕಾಕ್ ಎಂಬ ಸಾಗರದಾಳದ ಪುರಾತತ್ವ ತಜ್ಞ ತಮ್ಮ ಸಾಹಸಗಾಥೆಯ ಸಾಗರದಾಳದ ಉತ್ಖನನದ ಅನುಭವಗಳನ್ನು ಬಿಚ್ಚಿಟ್ಟರು.

ಅವರ ಪ್ರಕಾರ ಪೂಂಪುಹಾರ್ ಹಾಗೂ ಮಹಾಬಲಿಪುರಂನ ಕಡಲಿನಾಳದಲ್ಲಿ ಸಿಕ್ಕಿದ ಪುರಾತನ ನಗರದ ಅವಶೇಷಗಳು ದಕ್ಷಿಣ ಭಾರತದ ಸಮುದ್ರತೀರ ಪ್ರದೇಶವನ್ನು ಆಧುನಿಕ ನಾಗರಿಕತೆಯ ತೊಟ್ಟಿಲೆಂಬುದಾಗಿ ಸಾಬೀತುಪಡಿಸಬಲ್ಲವು. ಕ್ರಿಸ್ತಪೂರ್ವ 7,000 ರಿಂದ 17,000 ವರ್ಷಗಳ ಹಿಂದಿನ ಹಿಮಯುಗದ ಅಂತಿಮ ಕಾಲಘಟ್ಟದಲ್ಲೆಂದೋ ಬಹುಶಃ 400 ಮೀಟರ್ ಎತ್ತರದ ಅಲೆಗಳು ಈ ಸಂಪದ್ಭರಿತವಾಗಿದ್ದ ಬಂದರು ನಗರಗಳನ್ನು ಮುಳುಗಿಸಿಬಿಟ್ಟಿರಬಹುದು. ಹರಪ್ಪ, ಮೊಹೆಂಜೊದಾರೋಗಳಿರಲಿ, ಅದಕ್ಕಿಂತಲೂ 1300 ವರ್ಷಗಳಷ್ಟು ಪ್ರಾಚೀನವಾದ ಇಂದಿನ ಇರಾಕಿನಲ್ಲಿದ್ದ ಮೆಸಪೊಟೇಮಿಯಾದ ಸುಮೇರಿಯನ್ ನಾಗರಿಕತೆಗಿಂತಲೂ ಪೂಂಪುಹಾರ್ ಹಾಗೂ ಮಹಾಬಲಿಪುರಂ ನಗರ ಸಂಸ್ಕøತಿಗಳು ಹೆಚ್ಚು ಪುರಾತನವಾದವು. ಏಪ್ರಿಲ್ 2002ರಲ್ಲಿ ಇಂಗ್ಲೆಂಡಿನ ಸೈಂಟಿಫಿಕ್ ಎಕ್ಸ್‍ಪ್ಲೊರೇಷನ್ ಸೊಸೈಟಿ ಹಾಗೂ ಭಾರತದ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಜಂಟಿಯಾಗಿ ಮಹಾಬಲಿಪುರಂ ಕಡಲಿನಾಳದಲ್ಲಿ ಉತ್ಖನನ ನಡೆಸಿ, ಮುಳುಗಡೆಯಾಗಿದ್ದ ಪ್ರಾಚೀನ ನಗರಾವಶೇಷಗಳನ್ನು ಪತ್ತೆಹಚ್ಚಿದರು. ಕಲ್ಲು ಕೆತ್ತನೆಗಳು, ಮಾನವ ನಿರ್ಮಿತ ಬಾವಿಯ ಅಂಚುಗಳು, ಪಾಳುಗೋಡೆಗಳ ಅವಶೇಷಗಳು, ಚೌಕಾಕಾರವಾಗಿ ಕತ್ತರಿಸಲ್ಪಟ್ಟ ಕಲ್ಲು ತುಂಡುಗಳು. ಲಾಳಾಕಾರದ ಕಟ್ಟಡಗಳು, ದೇವಾಲಯ ಇತ್ಯಾದಿಗಳನ್ನು ವಿವಿಧ ಕಡೆಗಳಲ್ಲಿ ಪತ್ತೆಹಚ್ಚಿದರು. ಆ ಮೂಲಕ 6000 ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ನಗರ ಸಂಸ್ಕøತಿಯ ನಾಗರಿಕತೆಗಳೇ ಇರಲಿಲ್ಲವೆಂದು ಭಾವಿಸಿದ್ದವರು ಕೂಡ ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕಾಯಿತು.

 

3 Responses to "ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಒಂದು"

 1. sanaravikuma  March 12, 2016 at 1:10 pm

  Very Nice and informative………………………………

  Reply
 2. ಹನುಮಂತಪ್ಪ ಮದ್ದೇರು  March 13, 2016 at 12:57 am

  ಮೈ ನವಿರೇಳಸುವ ಮಾಹಿತಿಗಳು

  Reply
 3. lakshman  March 13, 2016 at 10:49 am

  Thank you for this beautiful article

  Reply

Leave a Reply

Your email address will not be published.