`ಮಾಣೂಸ್’ ಚಿತ್ರನಟಿಯ ಆತ್ಮಕತೆ

-ರಹಮತ್ ತರೀಕೆರೆ

ಈಚೆಗೆ ಮರಾಠಿಯ ಸುಪ್ರಸಿದ್ಧ `ಮಾಣೂಸ್’ ಚಿತ್ರವನ್ನು ನೋಡಿದೆ. ಅದ್ಭುತವಾದ ಈ ಚಿತ್ರವನ್ನು ಮಾಡಿದವರು ಮೂಲತಃ ಬಿಜಾಪುರ ಸೀಮೆಯವರಾದ ವಿ. ಶಾಂತಾರಾಂ ಅವರು. ಇದು ನಾಯಕಿಯಾಗಿ ನಟಿಸಿ ಹಾಡಿದ ಕಲಾವಿದೆ ಶಾಂತಾ ಹುಬ್ಳೀಕರ್ ಕೂಡ ಕನ್ನಡತಿಯೇ. ಶಾಂತಾ ದೇಶದಾದ್ಯಂತ ಖ್ಯಾತಿ ಪಡೆದಿದ್ದು ಈ ಚಿತ್ರದಿಂದ. ಈ ಚಿತ್ರವನ್ನು ಸ್ವತಃ ಚಾರ್ಲಿಚಾಪ್ಲಿನ್ ನೋಡಿ ಮೆಚ್ಚಿದ್ದರು. ಈ ಚಿತ್ರವನ್ನು ನೋಡಿದ ಬಳಿಕ ಮತ್ತೊಮ್ಮೆ ಶಾಂತಾರ ಆತ್ಮಕತೆ `ಕಶಾಲ ಉದ್ಯಾಚಿ ಬಾತ’ದ ಅನುವಾದವನ್ನು ಓದಿದೆ. ಶಾಂತಾರ ಸಮಕಾಲೀನರಾದ ಅಮೀರ್‍ಬಾಯಿ ಕರ್ನಾಟಕಿ ಅವರ ಜೀವನ ಚರಿತ್ರೆಯನ್ನು ಬರೆಯುವಾಗ ಇದನ್ನು ಓದಿದ್ದೆನಾದರೂ ಇಷ್ಟು ಸಾವಧಾನದಿಂದ ಓದಿರಲಿಲ್ಲ. ಇವತ್ತೂ ಯಾವಾಗಲೂ ಆಳವಾಗಿ ಕಲಕಬಲ್ಲ ಅಪರೂಪದ ಆತ್ಮಕತೆಗಳಲ್ಲಿ ಇದೊಂದು.

M_42314ಕಲಾಲೋಕದಲ್ಲಿ ಸಾಧನೆಯ ಶಿಖರಕ್ಕೆ ಏರಿದ ನಟಿಯೊಬ್ಬಳು ತನ್ನ ವೈಯಕ್ತಿಕ ಬಾಳಿನಲ್ಲಿ ಪಡಬಾರದ ಪಾಡು ಪಡುವ ಕತೆ ಇದರಲ್ಲಿದೆ. ಹುಬ್ಬಳ್ಳಿ ಸಮೀಪದ ಪುಟ್ಟ ಹಳ್ಳಿಯಿಂದ ಅನಾಥ ಬಾಲೆಯಾಗಿ ಹೋದ ಶಾಂತಾ, ಮರಾಠಿ ಸಿನಿಮಾ ಜಗತ್ತಿನಲ್ಲಿ ದೊಡ್ಡ ಗಾಯಕ-ನಟಿಯಾಗಿ ಬೆಳೆದವರು; ಶಾಸ್ತ್ರೀಯ ಸಂಗೀತವನ್ನು ಅಬ್ದುಲ್ ಕರೀಂಖಾನರಲ್ಲಿ ಕಲಿತವರು; ನಾಟಕದ ಮೊದಲ ತರಬೇತಿಯನ್ನು ಗುಬ್ಬಿ ಕಂಪನಿಯಲ್ಲಿ ಪಡೆದವರು. ಆದರೆ ಇಂತಹ ಪ್ರತಿಭಾವಂತ ನಟಿ ತನ್ನ ಬಾಳಿನ ಕೊನೆಯ ದಿನಗಳನ್ನು ಅನಾಥಾಶ್ರಮದಲ್ಲಿ ಅಜ್ಞಾತವಾಗಿ ಕಳೆಯುಬೇಕಾಯಿತು. ಅನಾಥಾಶ್ರಮದಲ್ಲಿ ಎಲ್ಲರೊಟ್ಟಿಗೆ ಕುಳಿತು ತನ್ನವೇ ಸಿನಿಮಾಗಳನ್ನು ನೋಡುವಾಗ `ಈಕೆ ಸತ್ತು ಎಷ್ಟೋ ವರ್ಷಗಳಾದವು’ ಎಂದು ಜನ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಳ್ಳಬೇಕಾಯಿತು. ಶಾಂತಾ ಅವರನ್ನು ಅವರ ಅಜ್ಞಾತತನದಿಂದ ಹೊರಗೆಳೆದು, ಅವರಿನ್ನೂ ಜೀವಂತವಿದ್ದಾರೆ ಎಂದು ಲೋಕಕ್ಕೆ ತಿಳಿಸಿದವನು ಒಬ್ಬ ಪತ್ರಕರ್ತ. ಅವನ ದೆಸೆಯಿಂದಲೇ ಈ ಆತ್ಮಕತೆ ಪ್ರಕಟವಾಯಿತು. ಶಾಂತಾ ತಮ್ಮ ಬಾಳಿನ ನೋವನ್ನು ಮರೆತು ಚಿತ್ರಪ್ರೇಮಿಗಳ ಪ್ರೀತಿಯನ್ನು ಮತ್ತೊಮ್ಮೆ ಪಡೆಯುತ್ತ ನೆಮ್ಮದಿಯ ದಿನಗಳನ್ನು ಅನುಭವಿಸುವಾಗಲೇ ಸಾವು ಕೊನೆಯ ಅಂಕದ ಪರದೆಯನ್ನು ಎಳೆಯಿತು.

ನಾಟಕ ಸಿನಿಮಾಗಳಲ್ಲಿ ಕೂಡ ಕಾಣಲಾಗದ ಊಹಾತೀತ ನಾಟಕೀಯತೆ ಮತ್ತು ವ್ಯಂಗ್ಯ ವಾಸ್ತವಿಕ ಬದುಕಿನಲ್ಲಿರಬಲ್ಲದು ಎಂಬುದಕ್ಕೆ ಈ ಆತ್ಮಕತೆ ಸಾಕ್ಷಿಯಾಗಿದೆ. ಬದುಕಿನಲ್ಲಿದ್ದ ನಾಟಕೀಯ ವ್ಯಂಗ್ಯ ಅವರ ಆತ್ಮಕತೆಯ ಹೆಸರಲ್ಲೂ ಮುಂದುವರೆಯಿತು. ಶಾಂತಾ ತಮಗೆ ಖ್ಯಾತಿ ತಂದುಕೊಟ್ಟ `ಮಾಣೂಸ್’ ಚಿತ್ರದಲ್ಲಿ ಸ್ವತಃ ಹಾಡಿದ ಹಾಡಿನ ಮೊದಲ ಚರಣ-`ಕಶಾಲ ಉದ್ಯಾಚಿ ಬಾತ’. ವೇಶ್ಯಾವಾಟಿಕೆಯಲ್ಲಿರುವ ಚಿಕ್ಕವಯಸ್ಸಿನ ಮುಗ್ಧ ಹುಡುಗಿಯೊಬ್ಬಳು ತನ್ನ ಬಾಳಿನಲ್ಲಿ ಆಕಸ್ಮಿಕವಾಗಿ ಪ್ರವೇಶಿಸುವ ಪೋಲಿಸ್ ಪೇದೆಯೊಬ್ಬನ ಪ್ರೇಮದಲ್ಲಿ ಬಿದ್ದು ಹೊಸಲೋಕಗಳನ್ನು ಹೊಸ ಕನಸುಗಳನ್ನು ಕಾಣುತ್ತ ಮೈಯೆಲ್ಲ ಹಗುರವಾಗಿ ಉಲ್ಲಾಸದಿಂದ ಕೈಬೀಸುತ್ತ ಈ ಹಾಡವ ಹಾಡಿದು. ಆದರೆ ಇಡೀ ಆತ್ಮಕತೆಯು ತನ್ನ ಮುಪ್ಪಿನ ದಿನಗಳಿಗಾಗಿ ಹಣ ಕೂಡಿಡುವುದು, ಅದನ್ನು ಅವಳ ಗಂಡ ಮತ್ತು ಮಗ ಸೂರೆಹೊಡೆಯುವುದು ನಡೆಯುತ್ತ ನಾಳಿನ ಚಿಂತೆಯಲ್ಲಿ ಸದಾ ತೊಳಲಾಟದಿಂದ ತುಂಬಿಕೊಂಡಿದೆ. ಶಾಂತಾ ತಮ್ಮ ಕೊನೆಯ ದಿನಗಳ ಗಂಡ ಹಾಗೂ ಮಗನಿಂದಲೇ ತಪ್ಪಿಸಿಕೊಂಡು ಬದುಕಬೇಕಾಯಿತು. ಕಲೆಯಲ್ಲಿ ಅಪಾರ ಯಶಸ್ಸು ಪಡೆದ ಹೆಣ್ಣೊಬ್ಬಳು ತನ್ನ ಬಾಳಿನಲ್ಲಿ ತನ್ನದಲ್ಲದ ತಪ್ಪಿಗಾಗಿ ಸೋಲುತ್ತ ಹೋಗುವ ದಾರುಣ ಕತೆಯಿದು.

shanta1ಆದರೆ ಈ ದಾರುಣತೆಯ ಅಂಶವನ್ನು ಮೀರುವಂತೆ ತನ್ನ ದುಡಿಮೆಯಿಂದ ಬದುಕನ್ನು ಕಟ್ಟಿಕೊಳ್ಳುವ ಒಬ್ಬ ಹೆಣ್ಣಿನ ಸಾಹಸ ಆತ್ಮವಿಶ್ವಾಸಗಳನ್ನು ಕಾಣಿಸುವುದರಲ್ಲಿ ಆತ್ಮಕತೆಯ ಮಹತ್ವವಿದೆ. ಸ್ವಂತ ಕಾರು ಬಂಗಲೆ ಹೊಂದಿದ್ದ ಸಿರಿವಂತಳಾಗಿದ್ದ ಶಾಂತಾ ತಮ್ಮ ಜೀವನ ನಿರ್ವಹಣೆಗೆ ತರಕಾರಿ ಬೆಳೆದು ಮಾರುವುದು ಕೋಳಿಸಾಕುವುದು ಮಾಡಬೇಕಾಗುತ್ತದೆ. ಅವರ ಹೋರಾಟವು ಮರಳಿಮಣ್ಣಿಗೆ ಕಾದಂಬರಿಯ ಸರಸೋತಿ ಪಾರೋತಿಯರನ್ನು ನೆನಪಿಸುತ್ತದೆ. ಅಲ್ಲಿರುವ ಒರಟುತನದ ರಾಮೈತಾಳ, ಬೇಹೊಣೆಗಾರಿಕೆ ಲಚ್ಚ ಸೇರಿ ಕುಟುಂಬದ ನೆಮ್ಮದಿಯನ್ನು ಹಾಳುಮಾಡುವಂತೆ ಇಲ್ಲಿಯೂ ಶಾಂತಾ ಸೋಮಾರಿಯಾದ ಗಂಡ ಮತ್ತು ಉಡಾಳನಾದ ಮಗ ಅವರ ಬದುಕನ್ನು ಹೈರಾಣಗೊಳಿಸುವರು. ತನ್ನ ಗಂಡ ಸತ್ತಾಗ, ಶಾಂತಾ ನೆಮ್ಮದಿಯ ನಿಟ್ಟುಸಿರು ಬಿಡುತ್ತ `ತನ್ನನ್ನು ಬೀದಿಪಾಲು ಮಾಡಿದ ಗಂಡನಿಗೆ ತನಗೆ ಅಧಿಕಾರವಿದ್ದಿದ್ದರೆ ಆನೆಕಾಲಿಗೆ ಹಾಕಿ ತುಳಿಸುತ್ತಿದ್ದೆ’ ಎಂದು ಹೇಳುತ್ತಾರೆ. ಆಕೆ ತನ್ನ ಶವವನ್ನು ಮಗ ಮುಟ್ಟಬಾರದು ಎಂದೇ ಆಸ್ಪತ್ರೆಗೆ ದೇಹದಾನ ಮಾಡುವ ಉಯಿಲು ಬರೆದಿಟ್ಟು ತೀರಿಕೊಳ್ಳುತ್ತಾರೆ.

ಇದು ಒಬ್ಬ ನಟಿಯ ಕತೆಯಾಗಿದ್ದರೂ, ಓದುತ್ತ ಹೋದಂತೆ ಇದು ಗಂಡೆಜಮಾನಿಕೆಯ ಸಮಾಜದಲ್ಲಿ ಹುಟ್ಟಿದ ತಮ್ಮ ಅಪಾರ ಶ್ರಮ ಶ್ರದ್ಧೆಗಳಿಂದ ಬಿದ್ದಬಾಳನ್ನು ಕಟ್ಟಿಕೊಂಡು ಬೆಳೆದ ನೂರಾರು ಧೀಮಂತ ಮಹಿಳೆಯರ ಕತೆ ಕೂಡ ಅನಿಸುತ್ತದೆ. ಇದರಲ್ಲಿ ಒಡಲಾಳದ ಸಾಕವ್ವನನ್ನು ನೆನಪಿಗೆ ತರುವ ಅಜ್ಜಿ, ಮಕ್ಕಳಿಲ್ಲದ ಕೊರಗಿನಲ್ಲಿ ಸಾಯುವ ಗೆಳತಿ, ಕಾಳಜಿ ದ್ವೇಷ ಎರಡನ್ನೂ ಮಾಡುವ ಮಲತಾಯಿ, ಹಲವು ಮಕ್ಕಳ ತಾಯಾಗಿ ಕಷ್ಟಪಡುವ ಸವತಿ, ಹೀಗೆ ಹಲವು ಮಹಿಳೆಯರ ಜೀವನವೂ ಇದೆ. ಇವರೆಲ್ಲರ ಬಗ್ಗೆ ಸ್ತ್ರೀಸಹಜ ಅನುಭೂತಿಯಿಂದ ಶಾಂತಾ ಬರೆಯುತ್ತಾರೆ. `ಮಾಣುಸ್’ ಎಂದರೆ ಮನುಷ್ಯ ಎಂದರ್ಥ. ಚಿತ್ರದಲ್ಲಿ ವೇಶ್ಯೆ ಒಬ್ಬಳನ್ನು ಭೋಗದ ವಸ್ತುವಾಗಿ ನೋಡುವ ಸಮಾಜದಲ್ಲಿಯೇ ಅವಳನ್ನು ಮನುಷ್ಯಜೀವವಾಗಿ ನೋಡುವ ಪ್ರೇಮಿಯೊಬ್ಬ ಸಿಗುತ್ತಾನೆ. ಅದರಂತೆ ಶಾಂತಾ ಬದುಕಿನಲ್ಲಿ ಅವಳ ಆತ್ಮವಿಶ್ವಾಸ ದುಡಿಮೆಯನ್ನು ಪೋಲುಮಾಡಿ ನೋವಿಗೆ ಕಾರಣವಾಗುವ ಗಂಡ ಮತ್ತು ಮಗ ಇರುವಂತೆ, ಇಲ್ಲಿ ಅವಳನ್ನು ಲಗ್ನವಾಗದಿದ್ದರೂ ಅಪಾರವಾಗಿ ಪ್ರೀತಿಸಿ ನೆಮ್ಮದಿಯ ಸೇಚನ ಮಾಡುವ ಪುರುಷರೂ ಇದ್ದಾರೆ. ಅವರ ಚಿತ್ರ ಕ್ವಚಿತ್ತಾಗಿ ಬರುತ್ತದೆ. ಆಗೆಲ್ಲ ಶಾಂತಾ ಅನುಭವಿಸುವ ಪ್ರೇಮತಲ್ಲಣಗಳ ಸನ್ನಿವೇಶಗಳ ಮಾನವೀಯವಾಗಿದೆ. ಈ ಭಾಗಗಳನ್ನು ಓದುವಾಗ ಪ್ರತಿಭಾ ನಂದಕುಮಾರರ `ನಾವು ಹುಡುಗಿಯರೇ ಹೀಗೆ’ ಪದ್ಯ ನೆನಪಾಗುತ್ತದೆ. ಹೀಗಾಗಿಯೇ ಈ ಆತ್ಮಕತೆ ಗತಿಸಿಹೋದ ಕಾಲವೊಂದರ ಚಾರಿತ್ರಿಕ ಮಹತ್ವದ ವಿದ್ಯಮಾನಗಳ ದಾಖಲಾತಿಯಿಂದ ಮಾತ್ರ ಮುಖ್ಯವಾಗಿಲ್ಲ. ಸ್ತ್ರೀಯೊಬ್ಬಳು ತನ್ನ ಬದುಕನ್ನು ಕಟ್ಟಿಕೊಳ್ಳಲು ಮಾಡುವ ಹೋರಾಟದ ಚಿತ್ರಗಳಿಂದಲೂ ಮುಖ್ಯವಾಗಿದೆ.

shantaಕರ್ನಾಟಕದ ರಂಗನಟಿಯರೂ ಸಿನಿಮಾ ತಾರೆಯರೂ ಶಾಂತಾರ ಸಮಕಾಲೀನರೂ ಆದ ಗಂಗೂಬಾಯಿ ಗುಳೇದಗುಡ್ಡ, ಲಕ್ಷ್ಮಶೇಶ್ವರದ ಬಚ್ಚಾಸಾನಿ, ಅಮೀರ್‍ಬಾಯಿ, ಗೋಹರಬಾಯಿ ಅವರು ತಮ್ಮ ಆತ್ಮಕತೆಗಳನ್ನು ಬರೆದಿದ್ದರೆ ಎಂಬ ಅವು ಹೇಗಿರುತ್ತಿದ್ದವೊ? ವಿಶೇಷವೆಂದರೆ, ಈವರೆಗೆ ಪ್ರಕಟವಾಗಿರುವ ಬಹುತೇಕ ನಟಿಯರ ಆತ್ಮಕತೆಗಳು ಬರೆದವಲ್ಲ. ಶೋತೃವನ್ನು ಮುಂದೆ ಕೂರಿಸಿಕೊಂಡು ಹೇಳಿ ಬರೆಯಿಸಿದವು. ಸ್ವತಃ ಬರೆದಿದ್ದಕ್ಕೂ ಹೇಳಿ ಬರೆಸಿದ್ದಕ್ಕೂ ಏನು ವ್ಯತ್ಯಾಸ? ಬರೆದ ಬರೆಹದಲ್ಲಿ ವ್ಯಕ್ತಿ ತನ್ನ ಅನುಭವದ ಜತೆ ಮಾಡುವ ಅನುಸಂಧಾನದ ಕೆಲವು ಗುಪ್ತಸುಪ್ತ ಎಳೆಗಳು ಮೌಖಿಕವಾಗಿ ಹೇಳಿ ಬರೆಯಿಸುವಾಗ ಕಾಣೆಯಾಗುತ್ತವೆಯೇ? ಸ್ಪಷ್ಟವಾಗಿ ಹೇಳಲಾಗದು. ಆದರೆ ಬಾಳಿನ ಕತೆಯನ್ನು ಮೌಖಿಕವಾಗಿ ಹೇಳುವಾಗ ಜನಪದೀಯ ಕಥನ ಗುಣವೊಂದು ಅಲ್ಲಿ ನೆಲೆಸುತ್ತದೆ. ಇದರ ಜತೆಗೆ ಎಷ್ಟೊ ಸಂಗತಿಗಳು ಬಿಟ್ಟುಕೂಡ ಹೋಗುತ್ತವೆ. ಇಲ್ಲಿ ಕೊರತೆ ಅನಿಸುವುದು, ಶಾಂತಾ ಕನ್ನಡದ ಚಿತ್ರಗಳಲ್ಲಿ ನಟಿಸುವಾಗಿನ ಅನುಭವವನ್ನು ಕೈಬಿಟ್ಟಿರುವುದು. ಅದರ ಸನ್ನಿವೇಶಗಳನ್ನು ಕಾಣಬೇಕಾದರೆ ಅನಕೃ ಅವರ ಆತ್ಮಚರಿತ್ರೆ ಓದಬೇಕು.

ಭಾರತದ ರಂಗಭೂಮಿ ಮತ್ತು ಸಿನಿಮಾ ದೃಷ್ಟಿಯಿಂದ ತಿರುವಿನ ಘಟ್ಟವಾದ 20ನೇ ಶತಮಾನದ ಮೊದಲ ಮೂರು ದಶಕಗಳಲ್ಲಿ ಮೂರು ಮಹತ್ವದ ವಿದ್ಯಮಾನಗಳು ಘಟಿಸಿದವು. ಆಗ ವೃತ್ತಿರಂಗಭೂಮಿಯು ಸಿನಿಮಾ ಆಗಿ ರೂಪಾಂತರ ಪಡೆಯತೊಡಗಿತು. ರಂಗಭೂಮಿ, ಮಹೆಫಿಲ್, ಗುಡಿಸಂಗೀತ ಮುಂತಾದ ಕ್ಷೇತ್ರಗಳಲ್ಲಿದ್ದ ಗಾಯಕರು ನರ್ತಕರು ಸಂಗೀತಗಾರರು ಸಿನಿಮಾಕ್ಕೆ ತೆರಳತೊಡಗಿದರು. ಕರ್ನಾಟಕದಿಂದ ಹೀಗೆ ಹೋದವರಲ್ಲಿ ವಿ. ಶಾಂತಾರಾಂ, ಅಮೀರ್‍ಬಾಯಿ, ಗೋಹರ್‍ಬಾಯಿ, ಶಾಂತಾ ಹುಬಳೀಕರ್, ಬಸವರಾಜ ಮನಸೂರ್, ಎಂ.ಆರ್.ವಿಠಲ್, ವಿ. ಕೆ. ಮೂರ್ತಿ ಮುಂತಾದವರು ಸೇರಿದ್ದಾರೆ. ಆಗ ಭಾರತದಾದ್ಯಂತ ಇರುವ ಕಲಾವಿದರು ತಂತ್ರಜ್ಞರು ಕವಿಗಳು ಸೇರಿದ ಮುಂಬೈ ಸಾಂಸ್ಕøತಿಕ ಕೊಡುಕೊಳೆಯ ಕುದಿವ ಕೊಪ್ಪರಿಗೆಯಾಯಿತು.
ಒಡೆದ ಕುಟುಂಬಗಳಿಂದ ಹೋಗಿದ್ದ ಎಷ್ಟೊ ಅನಾಥ ಮಹಿಳೆಯರ ಬಾಳಲ್ಲಿ ಹೊಸದಿಗಂತಗಳನ್ನು ಮೂಡಿಸಿತು.

ಆ ಕಾಲಘಟ್ಟದಲ್ಲಿ ಕಲಾವಿದೆಯರಾಗಿ ಪ್ರವೇಶಿಸಿದ ನೂರಾರು ಮಹಿಳೆಯರು ತಮ್ಮನ್ನು ಬಂಧಿಸಿದ ಸಾಮಾಜಿಕ ಸಂಕಲೆಗಳಿಂದ ಬಿಡುಗಡೆಯನ್ನು ಪಡೆದರು. ಆದರೆ ಬಿಡುಗಡೆಯೂ ಒಂದು ಬೇಡಿಯಾಗಿ ಹೊಸ ಕಷ್ಟಗಳನ್ನು ಎದುರಿಸಿದರು. ಅವರ ಪೈಕಿ ಶಾಂತಾ ಕೂಡ ಒಬ್ಬರು. ಕಳೆದುಹೋದ ಕಾಲವೊಂದರ ಸುಂದರ ನೋವಿನ ಚಿತ್ರಗಳಿರುವ ಕಾರಣಕ್ಕಾಗಿ ಮಾತ್ರ ಈ ಆತ್ಮಕತೆ ಮುಖ್ಯವಾಗಿಲ್ಲ. ಈಗಲೂ ಅನೇಕ ಬಗೆಯಲ್ಲಿ ಇರುವ ಪುರುಷ ಸಮಾಜದ ಹಿಂಸೆಯ ಮತ್ತು ಅದನ್ನು ದಿಟ್ಟತನದಿಂದ ಎದುರಿಸುತ್ತಿರುವ ಸ್ತ್ರೀಜೀವಗಳ ಸೆಣಸಾಟದ ಕಾರಣದಿಂದ ಮುಖ್ಯವಾಗಿದೆ. ಮುಲಾಜು ಮತ್ತು ತೋರಿಕೆಗಳಿಲ್ಲದೆ ಮಾಗಿದ ವಯಸ್ಸಿನಲ್ಲಿ ತನ್ನ ಗತಬಾಳಿನ ಕಥೆಯನ್ನು ಸರಳವಾಗಿ ಹೇಳುತ್ತ ಹೋಗಿರುವುದೇ ಈ ಆತ್ಮಕಥೆಯ ವಿಶೇಷತೆ. `ಮಾಣೂಸ್’ ಸಿನಿಮಾದಂತೆಯೇ ಇದು ಪ್ರತಿ ಸಲದ ಓದಿನಲ್ಲಿಯೂ ತನ್ನ ಸುಡುನೈಜತೆಯ ಅನುಭವದಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ.

.

One Response to "`ಮಾಣೂಸ್’ ಚಿತ್ರನಟಿಯ ಆತ್ಮಕತೆ"

  1. ಪಿ.ಮಂಜುನಾಥ, ಬೆಳಗಾವಿ  December 24, 2016 at 1:56 pm

    ಮನ ಕಲುಕಿದ ಲೇಖನ..

    Reply

Leave a Reply

Your email address will not be published.