ಮಹಿಷಪುರದ ರಾಜ ದಿವಾನರಿಗೆ

ಬಿ.ಪೀರ್‍ಬಾಷ

ಮಹಾರಾಜರೆ
ನಿಧಾನಕ್ಕೆ ಊಟಮಾಡಿ
ಹಾಕಿಕೊಳ್ಳಿ ಇನ್ನೊಂದಿಷ್ಟು ತುಪ್ಪ
ಪಾಯಸ ಚೆನ್ನಾಗಿದೆಯೇ ತಗೊಳ್ಳಿ ಕೋಸಂಬರಿ
ಇನ್ನೇನು ನಿರುಮ್ಮಳ ನಿಶ್ಚಿಂತೆಯಿಂದಿರಿ
ಆಡಳಿತದ ತಾಪತ್ರಯ ಶತೃಭಯ ಎಲ್ಲಾ ದೂರ
ಇದ್ದಾನಲ್ಲ ವೈಸರಾಯ
ನೋಡಿಕೊಳ್ಳುತ್ತಾನೆ ಪುಟ್ಟ ಪೂರ
ಕೊಟ್ಟರಾಯಿತು ಒಂದಿಷ್ಟು ಕೋಟಿ ಕಪ್ಪ
ದೂರದ ದೊರೆಗೆ ತಾನು ದಾಸಿಯಾದರೇನು
ಇದ್ದಾಳಲ್ಲ ಪ್ರಜೆಗಳ ರಾಣಿ ಅಮ್ಮಣ್ಣಿ
ವಿಕ್ಟೋರಿಯಾಳ ಕೃಪೆ
ಇನ್ನುಮೇಲೆ ಮಹಿಷಪುರ ಸುಖೀರಾಜ್ಯ

ನಿಧಾನ ನಿಧಾನಕ್ಕೆ ಊಟ ಮಾಡಿ
ಮಹಾರಾಜರೇ!
ಸತ್ತವನು ಸತ್ತ
ದಾಸನಾಗಿದ್ದು ಸುಖವ ಸವಿಯಲಾರದ
ದಡ್ಡಶಿಖಾಮಣಿ ಸುಲ್ತಾನ
ಏನು ಬಂತು ನಿಷ್ಠುರ ಕಟ್ಟಿಕೊಂಡು
ಉಣ್ಣಲು ಬರುತ್ತದೆಯೇ ಸ್ವಾತಂತ್ರ್ಯ ಸ್ವಾಭಿಮಾನ
ಸಾವಕಾಶ ತೆಗೆದುಕೊಳ್ಳಿ ಇನ್ನಾವ ಅವಸರವೂ ಇಲ್ಲ
ನಿಧಾನಕ್ಕೆ ನಡೆಸಿದರಾಯಿತು ಮೋಜವಾನಿ
ಎಲ್ಲ ಸಿದ್ಧರಿದ್ದಾರೆ ವೈಣಿಕರು
ನರ್ತಕರು ವಾದ್ಯಮಂಡಳಿ ಪೂರ

ಯಾಕೆ ದಿವಾನರೇ ನಿದ್ದೆ ಬರುತ್ತಿಲ್ಲವೇ?
ಆ ಹಳೆಯ ಮಂಚ ಹಾಸಿಗೆ ಹೊದಿಕೆ
ಎಲ್ಲ ಬದಲಿಸಿ ಹೊಸತು ಹಾಕಿದೆಯಲ್ಲ
ಮತ್ತೇನು ಕೊರತೆ?
ರಾಜ್ಯ ಯಾರದಾದರೇನು ನಿಮಗಂತೂ
ಇದ್ದೇ ಇದೆಯಲ್ಲ ವಿಲಾಸ
ಏನು ಬೇಕು ಹೇಳಿ
ದಾಸ್ಯದ ರಾಜ್ಯದಲ್ಲಿ ದಾಸಿಯರಿಗೇನು ಕೊರತೆ!
ಬೇಕೇ ಕಾಲೊತ್ತಲಿಕ್ಕೆ ಎಡಬಲಕ್ಕೆ

ಹೇಳಿ ದಿವಾನ ಅಯ್ಯನವರೇ
ನಿಮ್ಮ ಮಿತ್ರನ ತಲೆ ಕತ್ತರಿಸಿದ ರಾತ್ರಿ
ನಿಮ್ಮ ನಿಷ್ಠೆ ಕೊಂದವನ ಪಾದಕ್ಕೆ ಬಿತ್ತಲ್ಲ
ಛೇ! ಮಿತ್ರದ್ರೋಹ ಎನ್ನಲಾದೀತೇ
ರಾಜಕಾರ್ಯ ಪೂರೈಸಿದಿರಿ
ಆ ರಾತ್ರಿ ಹೇಗೆ ಕಳೆದಿರಿ ಹೃದಯವಂತರೇ
ಕಣ್ಣತುಂಬ ನೀರುಬಂತೇ ಅಥವಾ
ನಿದ್ದೆ ಹಾರಿಹೋಯಿತೇ
ಹೊಸ ಕನಸನ್ನೇನಾದರೂ ಕಂಡಿರಾ ಅಥವಾ
ಕಂಡದ್ದು ನನಸಾಗಿ ಬಿಟ್ಟಿತೇ

ಕೊಲೆಯಾದವನ ದರ್ಬಾರಿನಲ್ಲೂ ನೀವು ದಿವಾನರು
ಕೊಂದವರ ಸಂಸ್ಥಾನದಲ್ಲೂ ನೀವೇ ಪ್ರಧಾನರು

ಹೌದು ರಾಜಸೇವಾಸಕ್ತರೇ
ನೀವು ರಣತಂತ್ರವ ಕಲಿಸಿ
ಸಾವಿನ ಬಾಯನ್ನು ಕಾಣಿಸಬಲ್ಲಿರಿ
ಶೂರರ ಸಮಾಧಿಯ ಮೇಲೆ ನಿಂತು
ದಾಸರ ಪಾದವನ್ನೂ ಬಣ್ಣಿಸಬಲ್ಲಿರಿ

ದಿವಾನರೇ
ರಾಜ್ಯ ಸುಭಿಕ್ಷವೇ
ಪ್ರಾಣವನ್ನೇ ಭಿಕ್ಷೆಯನ್ನಾಗಿಸಿದ ಬಳಿಕ
ರಾಜ್ಯ ಸುಭಿಕ್ಷವಾಗಿರಲೇಬೇಕಲ್ಲ
ಚಾಮುಂಡಿಯ ಪೂಜೆಗೆ ರೇಷ್ಮೆ ತೊಟ್ಟಿರಿ ತಾನೆ
ಬೆಳೆದವರು ಯಾರಾದರೇನು ಬಳಸಿಕೊಂಡರಾಯಿತಲ್ಲ
ಅಮೃತಮಹಲ್ ಹೋರಿಗಳು ವೃದ್ಧಿಗೊಂಡವೇ
ಬೀಜ ಯಾವ ಹೋರಿಯದಾದರೇನು
ಆಕಳು ಹಾಲು ಹಿಂಡಿದರಾಯಿತಲ್ಲ

ಶಸ್ತ್ರಾಗಾರವೇ ಬೇಕಿಲ್ಲ ಬಿಡಿ ಶಾಂತಿಯ ಬೀಡಿಗೆ
ಅರಮನೆಗೆ ಫಿರಂಗಿಗಳ ನೆರಳಿದೆಯಲ್ಲ
ಆ ಕ್ಷಿಪಣಿ ಸಂಶೋಧನಾ ಸೂತ್ರಗಳು ವ್ಯಥ್ರ್ಯ ಚಿಹ್ನೆಗಳು
ಇದಕ್ಕಿಂತ ಸಂಗೀತದ ಸ್ವರ ಪ್ರಸ್ತಾರವೇ ಚೆಂದ

ಅಯ್ಯನವರೇ
ಅಮ್ಮನವರು ಹೇಳಿಕಳಿಸಿದ್ದಾರೆ
ಬರಬೇಕಂತೆ
ಆಂಗ್ಲಪ್ರಭುವಿಗೆ ಪತ್ರ ಬರೆಯಬೇಕಂತೆ
ಇಲ್ಲಿಂದಲೇ ಒಕ್ಕಣೆ ರಚನೆ ಮಾಡುತ್ತಿರಿ
“ದೈವಾಂಶ ಸಂಭೂತ ಲಾರ್ಡ್ ಸಾಮ್ರಾಟರಿಗೆ
ನಿಮ್ಮ ಪಾದ ಪದ್ಮೋಪಜೀವಿಯ ಅನಂತ ಪ್ರಣಾಮಗಳು…”

ನನಗೆ
ನಿಮ್ಮೊಂದಿಗೆ ಜಗಳವಿಲ್ಲ ಅಯ್ಯನವರೇ
ನಿಮ್ಮ ಮನಸ್ಸಾಕ್ಷಿಯೊಂದಿಗೆ ನಾನು ಮಾತಾಡಬೇಕಿದೆ
ರಾಜತಂತ್ರದ ಬಾಯಿಬಿದ್ದು
ಎದೆಗೆ ನಾಲಗೆ ಮೂಡಬೇಕಿದೆ
ಈ ಲೋಕದ ಎಲ್ಲ ಅರಮನೆಗಳಲ್ಲಿ
ಪಾರಿವಾಳಗಳ ಗುಟುಕು ಕೇಳಬೇಕಿದೆ

 

Leave a Reply

Your email address will not be published.