ಮಸಿಯ ದಾಳಿ ಮತ್ತು ಬಂಡವಾಳದ ರಾಜಕಾರಣ

ದೊಡ್ಡಿಪಾಳ್ಯ ನರಸಿಂಹಮೂರ್ತಿ

neither a hawk nor a dove  ಮೊನ್ನೆ ಫೇಸ್‍ಬುಕ್‍ನಲ್ಲಿ ಕಾಣಿಸಿಕೊಂಡ ಪೋಸ್ಟ್ ಒಂದು ಗಮನ ಸೆಳೆಯಿತು.
“ಮುಂಬೈನಲ್ಲಿ ಸುಧೀಂದ್ರ ಕುಲಕರ್ಣಿಗೆ ಕರಿಶಾಯಿ ಬಳಿದ ಆರು ಮಂದಿಯನ್ನು ಶಿವಸೇನಾ ಪ್ರಮುಖ ಉದ್ಭವ ಠಾಕ್ರೆ ಸಮ್ಮಾನಿಸಿ ‘ಒಳ್ಳೆಯ ಕೆಲಸ ಮಾಡಿದಿರಿ’ ಎಂದು ಬೆನ್ನು ತಟ್ಟಿದರಂತೆ. ಮಂಗಳೂರಿನಲ್ಲಿ ಮೋರಲ್ ಪೊಲೀಸಿಂಗ್ ಮಾಡಿ ಜೈಲಿಗೆ ಹೋಗಿ ಬಂದವರನ್ನು ರಾಮಸೇನೆ, ಭಜರಂಗದಳ ಹೀಗೆಯೇ ಹೂಹಾರ ಹಾಕಿ ಸನ್ಮಾನಿಸುತ್ತದೆ.

ಭಾರತಕ್ಕೆ ಹೋಗಿ ಕೊಂದು ಬಂದವರನ್ನು ಹಫೀಸ್ ಸಯೀದ್ ಭರ್ಜರಿ ಸನ್ಮಾನದೊಂದಿಗೆ ಪಾಕಿಸ್ತಾನಕ್ಕೆ ಬರಮಾಡಿಕೊಳ್ಳುತ್ತಾನಂತೆ. ತಾಲಿಬಾನ್ ತನ್ನ ವೀರರಿಗೆ ಸ್ವರ್ಗದಲ್ಲಿಯೂ ಸೀಟು ಕಾದಿರಿಸುತ್ತದಂತೆ. ಯಾಕೋ ಇವರಾರ ನಡುವೆಯೂ ವ್ಯತ್ಯಾಸ ಕಾಣುತ್ತಿಲ್ಲ. ಸಂಘಟನೆಯ ಹೆಸರುಗಳಷ್ಟೇ ಬೇರೆ.”

ಹೌದು ನಿಜ, ಭಾರತ ಇಂದು ತಾಲಿಬಾನೀಕರಣದತ್ತ ದಾಪುಗಾಲು ಹಾಕುತ್ತಿರುವಂತೆ ಕಂಡು ಬರುತ್ತಿದೆ. ದನದ ಮಾಂಸ ಮನೆಯಲ್ಲಿಟ್ಟಿದ್ದರೆಂಬ ಕಾರಣಕ್ಕೆ ವ್ಯಕ್ತಿಯನ್ನು ಜೀವಂತ ಕೊಲ್ಲಲಾಗುತ್ತಿದೆ. ದೇವಸ್ಥಾನದತ್ತ ಹೆಜ್ಜೆಯಿಟ್ಟ ಕಾರಣಕ್ಕೆ ದಲಿತರನ್ನು ಸಜೀವ ದಹನ ಮಾಡಲಾಗುತ್ತದೆ. ಸತ್ಯವನ್ನು ಹೇಳಿದ ಕಾರಣಕ್ಕೆ, ಮೌಡ್ಯವನ್ನು ವಿರೋಧಿಸಿದ ಕಾರಣಕ್ಕೆ ‘ಅಪರಿಚಿತರ’ ಗುಂಡಿಗೆ ಬಲಿಯಾಗಬೇಕಾಗುತ್ತದೆ. ಇಂಥ ಸಂದರ್ಭದಲ್ಲೇ ಮುಂಬೈನಲ್ಲಿ ಸುಧೀಂದ್ರ ಕುಲಕರ್ಣಿ ಎಂಬುವವರ ಮುಖಕ್ಕೆ ಮಸಿ ಸುರಿದು ಹಿಂಸೆ ನೀಡಲಾಗಿದೆ.

ಮೇಲುನೋಟಕ್ಕೆ ಈ ಎಲ್ಲ ಘಟನೆಗಳು ಇಂದಿನ ಕರಾಳ ಸನ್ನಿವೇಶದಲ್ಲಿ ಒಂದೇ ತೆರನಾಗಿ ಕಂಡು ಬರುತ್ತಿವೆ ಎಂಬುದು ನಿಜ; ಆದರೆ ಮುಂಬೈ ಮಸಿ ರಾಜಕಾರಣದ ತೆರೆಮರೆಯಲ್ಲಿ ಬಲಾಡ್ಯ ರಾಜಕೀಯ – ಆರ್ಥಿಕ ಶಕ್ತಿಗಳ ಕೈವಾಡವಿದ್ದು ಕುತೂಹಲಕಾರಿಯಾಗಿದೆ.
ಮೊದಲಿಗೆ ಘಟನೆಯ ವಿವರಗಳನ್ನು ನೋಡೋಣ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮುಂಬೈನ ಮಾತುಂಗಾ ಪ್ರದೇಶದ ತಮ್ಮ ಮನೆಯಿಂದ ಹೊರಟಿದ್ದ ಸುಧೀಂದ್ರ ಕುಲಕರ್ಣಿಯನ್ನು ಸುತ್ತುವರಿದ ಶಿವಸೇನೆಯ ಹತ್ತು ಹದಿನೈದು ಮಂದಿ ಪುಂಡರು ಅವರ ಮುಖಕ್ಕೆ ಮಸಿ ಸುರಿದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಬೆದರಿಕೆ ಒಡ್ಡಿದರು. ಆ ಪುಸ್ತಕವಾದರೂ ಎಂಥದ್ದು? ಆ ಪುಸ್ತಕದಿಂದ ಶಿವಸೇನೆಗೆ ಆಗುತ್ತಿದ್ದ ನಷ್ಟವಾದರೂ ಏನು? ಪುಸ್ತಕದಿಂದ ಶಿವಸೇನೆಗೆ ಯಾವುದೇ ನಷ್ಟವಿರಲಿಲ್ಲ; ಆದರೆ ಅದನ್ನು ವಿರೋಧಿಸುವ ಮೂಲಕ ರಾಜಕೀಯ ದುರ್ಲಾಭ ಪಡೆಯುವ ಮಾಮೂಲಿ ಲೆಕ್ಕಾಚಾರ ಶಿವಸೇನೆಯ ಧುರೀಣರದಾಗಿತ್ತು.

ಯಾಕೆಂದರೆ ಅದು ಮಾಮೂಲಿ ಪುಸ್ತಕವಾಗಿರಲಿಲ್ಲ. ಪಾಕಿಸ್ತಾನದ ಮಾಜಿ ವಿದೇಶಾಂಗ ಮಂತ್ರಿ ಖುರ್ಷಿದ್ ಮಹಮದ್ ಕಸೂರಿ ಬರೆದಿರುವ “ನೈದರ್ ಎ ಹಾಕ್, ನಾರ್ ಎ ಡೋವ್” (ಡೇಗೆಯೂ ಅಲ್ಲ ಪಾರಿವಾಳವೂ ಅಲ್ಲ) ಎಂಬ ಪುಸ್ತಕ ಅದು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಖ್ಯಾತ ಚಿಂತಕ ಎಜಿ ನೂರಾನಿ, ಸಿನಿಮಾ ನಟ ನಾಸಿರುದ್ದೀನ್ ಶಾ, ವಿದೇಶಾಂಗ ವ್ಯವಹಾರಗಳಲ್ಲಿ ಪಳಗಿರುವ ದಿಲೀಪ್ ಪಡಗಾಂವ್ಕರ್ ಮುಂತಾದವರು ಮಾತನಾಡಲಿದ್ದರು. ಸುಧೀಂದ್ರ ಕುಲಕರ್ಣಿ ಈ ಕಾರ್ಯಕ್ರಮದ ಸಂಘಟಕರಾಗಿದ್ದರು. ಅಬ್ಸರ್ವರ್ ರಿಸರ್ಚ್ ಫೌಂಡೇಷನ್ ಎಂಬ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ದಿನೇದಿನೇ ಮಹಾರಾಷ್ಟ್ರ ರಾಜಕಾರಣದಲ್ಲಿ ಮಸುಕಾಗಿ ಹೋಗುತ್ತಿರುವ ಶಿವಸೇನೆಯ ನಾಯಕರು ಈ ಸಂದರ್ಭದ ದುರ್ಲಾಭ ಪಡೆಯಲು ಸ್ಕೆಚ್ ಹಾಕಿಬಿಟ್ಟರು. ಅದರ ಪರಿಣಾಮವೇ ಮಸಿ ಕಾರ್ಯಕ್ರಮ.

ಕಳೆದ 15 ವರ್ಷಗಳಲ್ಲಿ ಶಿವಸೇನೆ ಮಹಾರಾಷ್ಟ್ರದಲ್ಲಿ ಕಳೆಗುಂದುತ್ತಾ ಸಾಗಿದೆ. ಬಾಳಾ ಠಾಕ್ರೆ ಅನಾರೋಗ್ಯಕ್ಕೆ ತುತ್ತಾಗಿನಿಂದ ಆರಂಭವಾದ ಈ ಕುಸಿತ ಠಾಕ್ರೆ ಸಾವಿನೊಂದಿಗೆ ಮತ್ತೊಂದು ಹಂತ ತಲುಪಿತ್ತು. ಉದ್ಭವ್ ತಂದೆಯ ಸ್ಥಾನವನ್ನು ಭರ್ತಿ ಮಾಡಲಾಗಲಿಲ್ಲ. ಹತ್ತಿರದ ಬಂಧು ರಾಜ್ ಠಾಕ್ರೆ ಹೆಚ್ಚು ಜನಪ್ರಿಯರಾಗಿದ್ದರು. ಪಕ್ಷದಲ್ಲಿ ಪರ್ಯಾಯ ನಾಯಕತ್ವ ಬೆಳೆಸುವ ಗೋಜಿಗೆ ಹಿರಿಯ ಠಾಕ್ರೆ ಎಂದೂ ಹೋಗಲಿಲ್ಲ. ಅದೇ ಸಂದರ್ಭದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದು ಮಹಾರಾಷ್ಟ್ರದಲ್ಲಿ ನೆಲೆ ಕಂಡುಕೊಳ್ಳುತ್ತಿತ್ತು. ಶಿವಸೇನೆ ಬೆಳೆದು ಬಂದಿದ್ದೇ ಮಿಲ್ ಮಾಲೀಕರ ಮತ್ತು ಬಿಲ್ಡರ್‍ಗಳ ಮರ್ಜಿಯಲ್ಲಿ. ಕಾಂಗ್ರೆಸ್ ಪಕ್ಷ ಇದನ್ನು ಒಂದು ಗೂಂಡಾ ಪಡೆಯಂತೆ ಬಳಸಿಕೊಂಡಿತ್ತು ಎಂಬುದು ಈಗ ಇತಿಹಾಸ. ಸ್ಥಳೀಯ ಸಮಾಜವಾದಿ ಸಂಘಟನೆಗಳನ್ನು, ಎಡ ಪಕ್ಷಗಳ ಕಾರ್ಮಿಕ ಸಂಘಟನೆಗಳನ್ನು ಮುರಿದು ಹಾಕಿದ್ದು, ಮರಾಠಿ ದುರಭಿಮಾನವನ್ನು ಬೆಳೆಸಿ ಹೊರರಾಜ್ಯದ ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಿದ್ದು ಅದರ ಸಾಧನೆ.

1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಿಂದ ಶಿವಸೇನೆ ಹೆಚ್ಚಾಗಿ ಹಿಂದೂ ಧರ್ಮ ರಕ್ಷಣೆಯ ಸೋಗು ಹಾಕತೊಡಗಿದೆ. ಒಂದೇ ರೀತಿಯ ರಾಜಕೀಯದಿಂದ ಲಾಭ ಪಡೆಯಲು ಬಿಜೆಪಿ ಮತ್ತು ಶಿವಸೇನೆಗಳ ನಡುವೆ ಹೀಗೆ ಆರಂಭವಾದ ಪೈಪೋಟಿ ಇಂದಿಗೂ ಮುನ್ನಡೆಯುತ್ತಿದೆ.
ಹಿಂದೂ ಕೋಮುವಾದದ ಚಾಂಪಿಯನ್ ಆಗಿ ಮೋದಿ ಮುಂದೆ ಬಂದ ನಂತರ ಶಿವಸೇನೆಯ ಮತಬ್ಯಾಂಕ್ ಮತ್ತಷ್ಟು ಕುಸಿತ ಕಂಡು ಬಿಜೆಪಿಯ ಬಾಲ ಹಿಡಿದು ಹೋಗಬೇಕಾದ ಸ್ಥಿತಿಗೆ ತಲುಪಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೃಹತ್ ಬಾಂಬೆ ಮಹಾನಗರ ಪಾಲಿಕೆ ಒಳ್ಳೇ ಹಾಲು ಕೊಡೋ ಹಸು ಇದ್ದಂಗೆ. ಇಡೀ ದೇಶದ ಆರ್ಥಿಕ ವ್ಯವಹಾರಗಳ ಕೇಂದ್ರಬಿಂದು ಇದೇ ಮುಂಬೈ. ಬಹಳಷ್ಟು ಉದ್ದಿಮೆಪತಿಗಳ ಹೆಡ್‍ಕ್ವಾರ್ಟರ್ ಇರುವುದೂ ಇದೇ ನಗರಿಯಲ್ಲಿ. ಹಾಗೆಯೇ ಅಂಡರ್‍ವಲ್ಡ್ ಡಾನ್‍ಗಳಿಂದ ಹಿಡಿದು ರಾಜಕೀಯ ಡಾನ್‍ಗಳವರೆಗೆ ಎಲ್ಲರಿಗೂ ಇಲ್ಲಿಂದ ಯಥೇಚ್ಚ ಹಣ ಹರಿದುಹೋಗುತ್ತದೆ. ಒಂದೊಮ್ಮೆ ಇಂಥಾ ಮುಂಬೈ ನಗರದ ಮೇಲೆ ಶೀವಸೇನೆ ಸಂಪೂರ್ಣ ಹಿಡಿತ ಸಾಧಿಸಿತ್ತು. ರಾಜಕೀಯವಾಗಿ ಮಾತ್ರವಲ್ಲ; ಭೂಗತ ಲೋಕದಲ್ಲೂ ಕೂಡ.

ಹೀಗೆ ಕಳೆದು ಹೋಗುತ್ತಿರುವ ತನ್ನ ಹಿಡಿತವನ್ನು ಮರುಸ್ಥಾಪಿಸಲು ಶಿವಸೇನೆ ಇದೇ ಹಿಂದೂ ಕೋಮುವಾದಿ ರಾಜಕೀಯವನ್ನು ಮತ್ತಷ್ಟು ಉಗ್ರವಾಗಿ ಪ್ರತಿಪಾದಿಸುವ ದಾರಿಯನ್ನು ಆಯ್ದುಕೊಂಡಿದೆ. ಕಳೆದ ವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಪಾಕಿಸ್ತಾನದ ಪ್ರಖ್ಯಾತ ಸಂಗೀತಗಾರ ಗುಲಾಂ ಅಲಿಯ ಸಂಗೀತ ಕಾರ್ಯಕ್ರಮಕ್ಕೆ ತಡೆಯೊಡ್ಡಿ ಅದನ್ನು ರದ್ದು ಮಾಡಿಸುವಲ್ಲಿ ಈ ಪಾಖಂಡಿಗಳು ಯಶಸ್ವಿಯಾಗಿದ್ದರು.
ಕುಲಕರ್ಣಿ ಒಂದೆರಡು ದಿನಗಳ ಮೊದಲೇ ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆಯನ್ನು ಭೇಟಿಯಾಗಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದರೆಂದೂ, ಅದಕ್ಕೆ ಆತ ಒಪ್ಪಲಿಲ್ಲವೆಂದೂ ವರದಿಗಳು ಬಂದಿದ್ದವು. ಕುಲಕರ್ಣಿಯವರು ನಿಗದಿತ ಕಾರ್ಯಕ್ರಮ ನಡೆದೇ ತೀರುತ್ತದೆಂದೂ ಘೋಷಿಸಿದರು. ಇತ್ತ ಸಂಗೀತ ಕಾರ್ಯಕ್ರಮ ರದ್ದತಿಯಿಂದ ಉತ್ತೇಜಿತರಾಗಿದ್ದ ಠಾಕ್ರೆ ಶಿಷ್ಯರು ಕುಲಕರ್ಣಿಯವರಿಗೆ ಮಸಿಬಳಿವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.

ಜೆಂಡಾ ಮತ್ತು ಅಜೆಂಡಾ
ಇದು ಶಿವಸೇನೆಯ ರಾಜಕೀಯ ಲೆಕ್ಕಾಚಾರವಾದರೆ ಈ ಕುಲಕರ್ಣಿಯವರ ಕತೆಯೇನು? ಶಾಂತಿ – ಸೌಹಾರ್ದತೆ ಕಾಪಾಡಲು ಇವರೇಕೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತಿದ್ದಾರೆ?
ಮಸಿ ಹಾಕಿಸಿಕೊಂಡ ಸಂದರ್ಭದಲ್ಲಿ ಕುಲಕರ್ಣಿ ತೊಟ್ಟಿದ್ದ ತ್ರಿವರ್ಣ ದ್ವಜವನ್ನು ಹೋಲುವ ದಿರಿಸು ಮಸಿಯಾಗಿದ್ದನ್ನು “ಇದು ತ್ರಿವರ್ಣ ದ್ವಜದ ಮೇಲೆ ನಡೆದ ದಾಳಿ, ಪ್ರಜಾತಂತ್ರದ ಮೇಲೆ ನಡೆದ ದಾಳಿ”ಯೆಂದು ಬಣ್ಣಿಸಿದ್ದಾರೆ. ಈ ಕಾರ್ಯಕ್ರಮವನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಘೋಷಿಸಿ, ಮಸಿಯನ್ನು ಒರೆಸದೆಯೇ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ. “ನಾನು ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಶಾಂತಿಯ ಪ್ರತಿಪಾದಕನೇ ಹೊರತು ಪಾಕಿಸ್ತಾನದ ಏಜೆಂಟ್ ಅಲ್ಲ” ಎಂದು ವಿವರಣೆ ನೀಡಿದ್ದಾರೆ. ಇದರ ಬೆನ್ನ ಹಿಂದೆಯೇ ಅಡ್ವಾಣಿ ಹೇಳಿಕೆ ನೀಡಿ ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ದನಿಯೆತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುತ್ತಿರುವ ವಿದ್ಯಮಾನದ ಬಗ್ಗೆ ಕೆಂಡÀ ಕಾರಿದ್ದಾರೆ.

ಅಡ್ವಾಣಿ ಮತ್ತು ಅವರ ಶಿಷ್ಯರ ಬಾಯಲ್ಲಿ ಎಂಥ ಮಾತುಗಳು? ಏನಿದು, ಇವೆಲ್ಲ ಒಂದು ರೀತಿಯಲ್ಲಿ ರಂಗಮಂದಿರದ ದೃಶ್ಯಗಳಂತೆ ಕಾಣುತ್ತಿವೆ ಎಂದು ಯಾರಿಗಾದರೂ ಅನಿಸದೆ ಇರದು. ಇಲ್ಲೇ ಇರುವುದು ಮಸಲತ್ತು. ಶಿವಸೇನೆ ಮತ್ತು ಮೋದಿ ನಾಯಕತ್ವದ ಬಿಜೆಪಿ ನಡುವಿನ ಪೈಪೋಟಿಗೆ ಸ್ಪಷ್ಟ ಕಾರಣ ಇರುವಂತೆಯೇ ಈಗ ಮೂಲೆಗುಂಪಾಗಿರುವ ಅಡ್ವಾಣಿ ಬಣಕ್ಕೆ ಭಿನ್ನವಾದ ಅಜೆಂಡಾದ ಅಗತ್ಯವಿದೆ. ಮೋದಿಯ ಅಧಿಕಾರ ಕೇಂದ್ರೀಕರಣದ ವಿರುದ್ಧ ಒಳಗೊಳಗೆ ರೂಪುಗೊಳ್ಳುತ್ತಿರುವ ಬಣದ ರಾಜಕೀಯ ಹಕೀಕತ್ತು ಇದರ ಹಿಂದೆ ಕೆಲಸ ಮಾಡುತ್ತಿದೆ.
ಪಾಪದ ಹಣ ಹರಿದಾಗ….

ಮೊದಲನೆಯದಾಗಿ, ಈ ಕಾರ್ಯಕ್ರಮದ ಆಯೋಜಕರು ಯಾರು ಎಂಬುದನ್ನು ಸ್ವಲ್ಪ ಕೆದಕಿದರೆ ‘ಅಬ್ಸರ್ವರ್ ರಿಸರ್ಚ್ ಫೌಂಡೇಷನ್ (ಒಆರ್‍ಎಫ್)’ ಎಂಬ ಸಂಸ್ಥೆ ಬೆಳಕಿಗೆ ಬರುತ್ತದೆ. ಕಳೆದ ಎರಡು ದಶಕಗಳ ಹಿಂದೆ ಇಂಥದೊಂದು ಸಂಸ್ಥೆಯನ್ನು ಹುಟ್ಟುಹಾಕಿದ್ದೇ ರಿಲಯನ್ಸ್ ಕಂಪನಿ ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ವಿಶಾಲ ಭಾರತದ ಸಾರ್ವಜನಿಕ ಸಂಪತ್ತನ್ನು ಕಬಳಿಸುತ್ತಾ ರಾಕೆಟ್ ವೇಗದಲ್ಲಿ ಬೆಳೆಯುತ್ತಿದ್ದ ಅಂಬಾನಿ ಕಂಪನಿಗೆ ಇದರ ಅಗತ್ಯವಿತ್ತು. ಅಂತೆಯೇ ದೆಹಲಿಯ ಭಾರೀ ಹೈಟೆಕ್ ಹೆಡ್‍ಆಫೀಸಿನೊಂದಿಗೆ ಈ ಓಆರ್‍ಎಫ್ ಸ್ಥಾಪನೆಗೊಂಡಿತು. ದಶಕಗಳ ಕಾಲ ಈ ಸಂಸ್ಥೆ ವಿವಿಧ ಸರ್ಕಾರಗಳು ಮತ್ತು ಕಂಪನಿಯ ನಡುವೆ ಕೊಂಡಿಯಂತೆ ಕೆಲಸ ಮಾಡಿದೆ. ಸರ್ಕಾರದ ನೀತಿ ನಿರೂಪಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಿಲಯನ್ಸ್ ದೈತ್ಯ ಕಂಪನಿಯ ಲಾಭ ಹೆಚ್ಚಿಸುವ ಯೋಜನೆಗಳ ಪರವಾಗಿಯೂ ಈ ಪ್ರತಿಷ್ಠಾನದ ಪಂಡಿತರು “ಸಂಶೋಧನಾ” ಪ್ರಬಂಧಗಳನ್ನು, ಗ್ರಂಥಗಳನ್ನು ಹೊರತಂದಿದ್ದಾರೆ. ಅಷ್ಟು ಮಾತ್ರವಲ್ಲ; ಕಾಲಕಾಲಕ್ಕೆ ಪತ್ರಿಕೆಗಳಲ್ಲಿ, ಸುದ್ದಿ ಚಾನೆಲ್‍ಗಳಲ್ಲಿ ರಿಲಯನ್ಸ್ ಕಂಪನಿಗೆ ಅನುಕೂಲಕರವಾದ ಸ್ಟೋರಿಗಳು ಪ್ರಕಟವಾಗುವಂತೆ ನೋಡಿಕೊಂಡಿದ್ದಾರೆ. ಸಾರ್ವಜನಿಕ “ಜಾಗೃತಿ” ಮೂಡಿಸಲು ಆಗಾಗ್ಗೆ ಸೆಮಿನಾರ್‍ಗಳನ್ನು, ಉಪನ್ಯಾಸಗಳನ್ನೂ ಏರ್ಪಡಿಸುತ್ತಾರೆ. ಅಂಥ ಒಂದು ಕಾರ್ಯಕ್ರಮವೇ ಈ ಕಸೂರಿ ಪುಸ್ತಕ ಬಿಡುಗಡೆ.

ಈ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವವರು ಯಾರು ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ. ಇಲ್ಲಿ ವಿಷಯ ತಜ್ಞರು, ಸಂಶೋಧಕರಿಗಿಂತ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಮಾಜಿ ಬ್ಯೂರೋಕ್ರಟ್‍ಗಳೇ ತುಂಬಿ ತುಳುಕುತ್ತಿದ್ದಾರೆ. ಇಂದಿನ ಓಆರ್‍ಎಫ್ ನಿರ್ದೇಶಕ ಸಂಜಯ್ ಜೋಷಿ. ಈ ಹಿಂದೆ ಪೆಟ್ರೋಲಿಯಂ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿದ್ದರು. ವಾಜಪೇಯಿ ಕ್ಯಾಬಿನೆಟ್‍ನಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾರಿಗೆ ಸಲಹೆಗಾರರಾಗಿದ್ದ ಮೋಹನ್ ಗುರುಸ್ವಾಮಿ ಈ ಸಂಸ್ಥೆಯಲ್ಲಿ ಪ್ರಮುಖ ಪಾತ್ರಧಾರಿ.

ಇಂದಿನ ಉಪಾಧ್ಯಕ್ಷ ಸಮೀರ್ ಸರನ್ ಈ ಹಿಂದೆ ರಿಲಯನ್ಸ್‍ನ ಕಾರ್ಪೊರೇಟ್ ಕಮ್ಯುನಿಕೇಷನ್ ಡಿಪಾರ್ಟ್‍ಮೆಂಟ್‍ನ ಇನ್‍ಚಾರ್ಜ್ ಆಗಿದ್ದ. ಆತನ ಕೆಲಸ ಕಂಪನಿ ಪರವಾಗಿ ಮಾಧ್ಯಮಗಳಲ್ಲಿ ಸ್ಟೋರಿಗಳನ್ನು ಪ್ರಕಟಿಸುವುದು, ಕಂಪನಿ ವಿರುದ್ಧವಾದ ಸುದ್ದಿಗಳನ್ನು ಬ್ಲಾಕ್ ಮಾಡುವುದಾಗಿತ್ತು. ಅಷ್ಟೇ ಏಕೆ? ಇಂದಿನ ದೆಹಲಿಯ ಗವರ್ನರ್ ಜನರಲ್ ಆಗಿರುವ ನಜೀಬ್ ಜಂಗ್ ಕೂಡ ರಿಲಯನ್ಸ್ ಕಂಪನಿಯ ಏಜೆಂಟನೇ. ಈತ ಹಿಂದೆ ತೈಲ ಮತ್ತು ನೈಸರ್ಗಿಕ ಅನಿಲ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾಗಲೇ ಪನ್ನಾ-ಮುಕ್ತಾ ತೈಲ ಕ್ಷೇತ್ರಗಳನ್ನು ರಿಲಯನ್ಸ್ ಬಾಯಿಗೆ ಹಾಕಿ ಪ್ರಸಾದ ಸ್ವೀಕರಿಸಿದ್ದ. ನಂತರ ಸರ್ಕಾರಿ ಹುದ್ದೆಗೆ ರಾಜಿನಾಮೆ ಗೀಚಿ ಇದೇ ಓಆರ್‍ಎಫ್ ಸಂಸ್ಥೆ ಸೇರಿಕೊಂಡಿದ್ದ. ಹೀಗೆ ಇದು ಮುಗಿಯದ ಕತೆ.

ಈ ಸಂಸ್ಥೆಯ ಹಣಕಾಸು ಮೂಲವನ್ನು ನೋಡಿ. ಅಧಿಕೃತ ಲೆಕ್ಕಾಚಾರದ ಪ್ರಕಾರ ಓಆರ್‍ಎಫ್‍ನ ವಾರ್ಷಿಕ ವೆಚ್ಚ 25 ಕೋಟಿ. ತೆರೆಮರೆಯ ಕೈ ಬದಲಾವಣೆಗಳು ಹೇಗೂ ಲೆಕ್ಕಕ್ಕಿಲ್ಲ. ಈ ಸಂಸ್ಥೆ ತಾನು ಸ್ವತಂತ್ರ ಎಂದು ಹೇಳಿಕೊಂಡರೂ ಸುದೀರ್ಘ ಕಾಲ ಇದಕ್ಕೆ ಹಣಕಾಸು ಒದಗಿಸುತ್ತಿದ್ದುದು ನೇರವಾಗಿ ರಿಲಯನ್ಸ್ ಕಂಪನಿಯೇ. ಉದಾಹರಣೆಗೆ 2009ರಲ್ಲಿ ಶೇಕಡ 95ರಷ್ಟು ಬಜೆಟ್‍ಅನ್ನು ಕಂಪನಿ ಪೂರೈಸಿದೆ. ಬರಬರುತ್ತಾ ಒಂದಷ್ಟು ಅಂತರ ಕಾಯ್ದುಕೊಳ್ಳುವ ಲೆಕ್ಕಾಚಾರದಿಂದ ವಿವಿಧ ಮೂಲಗಳ ಮೂಲಕ ಹಣ ಹರಿಯುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಅಷ್ಟೆ.
ಹೀಗೆ ರಿಲಯನ್ಸ್ ಹಣದಲ್ಲಿ ಭಾರತ – ಪಾಕ್ ಶಾಂತಿ ಸ್ಥಾಪನೆಯ ಮಾತುಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಮೋದಿ ಸರ್ಕಾರ ಭಾರತ ಪಾಕ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುತ್ತಾ ಸಾಗಿರುವುದು ರಿಲಯನ್ಸ್ ಕಂಪನಿಯ ಎದೆ ಬಡಿತವನ್ನು ಹೆಚ್ಚಿಸಿರಲಿಕ್ಕೂ ಸಾಕು. ಯಾಕೆಂದರೆ ಪಾಕಿಸ್ತಾನದ ಮೂಲಕ ಹಾದು ಬರಲಿರುವ ಗ್ಯಾಸ್ ಪೈಪ್‍ಲೈನ್ ಪ್ರಾಜೆಕ್ಟ್‍ನಲ್ಲಿ ರಿಲಯನ್ಸ್ ಕಂಪನಿ ಈಗಾಗಲೇ ತೊಡಗಿಸಿಕೊಂಡಿದೆ. ಮಾತ್ರವಲ್ಲ, ಪಾಕಿಸ್ತಾನ ಆಫ್ಘಾನಿಸ್ತಾನ ಮುಂತಾದ ದೇಶಗಳೊಂದಿಗೆ ಹಲವಾರು ಬ್ಯುಸಿನೆಸ್ ಡೀಲ್‍ಗಳೂ ಇವೆ. ಪಾಕಿಸ್ತಾನದೊಂದಿಗಿನ ಸಂಬಂಧ ಕಲುಷಿತಗೊಂಡು ಯುದ್ಧದ ವಾತಾವರಣ ಉಂಟಾದರೆ ರಿಲಯನ್ಸ್ ಕಂಪನಿಗೆ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ. ಈ ಕಾರಣಕ್ಕಾಗಿಯೇ ಈ ಹಿಂದೆ ವಾಜಪೇಯಿ ಕಾಲದಲ್ಲಿ ಶಾಂತಿ ಮಂತ್ರ ಜಪಿಸುವಂತಾಗಿದ್ದು. ಈಗಲೂ ತನ್ನ ಫೌಂಡೇಷನ್ ಮೂಲಕ ಕುಲಕರ್ಣಿಯಂತವರ ಮುಂದಾಳತ್ವದಲ್ಲಿ ಶಾಂತಿ ಮಂತ್ರ ಪಠಿಸಲು ಮುಂದಾಗಿರುವುದು.

ಮತ್ತೊಂದು ಕಡೆ ಈ ಘಟನೆಯನ್ನು ಭಾರತದ ಕಾರ್ಪೊರೇಟ್ ಮಾಧ್ಯಮಗಳು ಫೋಕಸ್ ಮಾಡುತ್ತಿರುವ ರೀತಿ ಕಂಡು ಯಾರಾದರೂ ತಲೆ ತೂಗಲೇಬೇಕು. ದಿನೇದಿನೇ ಫ್ಯಾಸಿಸಂನತ್ತ ಹೊರಳುತ್ತಿರುವ ದೇಶದ ರಾಜಕೀಯವನ್ನು ಆತಂಕದಿಂದ ವೀಕ್ಷಿಸುತ್ತಿರುವ ಜನತೆ ಸಹಜವಾಗಿಯೇ ಮಸಿ ಬಳಿದವರ ವಿರುದ್ಧ ಸಿಟ್ಟುಗೊಂಡಿದ್ದಾರೆ. ದೇಶದ ಉದ್ದಗಲಕ್ಕೂ ಖಂಡನೆಯ ಮಹಾಪೂರವೇ ಹರಿದು ಬಂದಿದೆ.
ಅದೇ ಸಂದರ್ಭದಲ್ಲಿ ಒಂದುಕಡೆ ಶಿವಸೇನೆ , ಮತ್ತೊಂದು ಕಡೆ ಅಡ್ವಾಣಿ-ಕುಲಕರ್ಣಿಗಳ ಗುಂಪು, ಮಗದೊಂದು ಕಡೆ ಓಆರ್‍ಎಫ್-ರಿಲಯನ್ಸ್‍ಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿವೆ. ಇದು ಎಂಥಾ ವಿಪರ್ಯಾಸ ಅಲ್ಲವೆ?

ಕುಲಕರ್ಣಿ ವೃತ್ತಾಂತ
ಈತ ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು. ಪ್ರಾಥಮಿಕ ವ್ಯಾಸಂಗ ಅಥಣಿಯಲ್ಲಿ ಮುಗಿಸಿ, ಉನ್ನತ ವ್ಯಾಸಂಗಕ್ಕಾಗಿ ಮುಂಬೈ ತೆರಳಿದರು. ಮುಂಬೈನ ಪ್ರತಿಷ್ಟಿತ ಐಐಟಿಯಲ್ಲಿ ತಂತ್ರಜ್ಞಾನದ ಪದವಿದರ. ಓದಿನಿಂದ ತಂತ್ರಜ್ಞನಾದರೂ ಕುಲಕರ್ಣಿ ಪ್ರವೃತ್ತಿಯಿಂದ ರಾಜಕಾರಣಿ. ಮೊದಲಿಗೆ ಒಂದಷ್ಟು ಕಾಲ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ಯಲ್ಲಿ ಸಕ್ರಿಯರಾಗಿದ್ದರು. ಕಮ್ಯುನಿಸ್ಟರ ಜೊತೆಗಿದ್ದರೆ ಅಧಿಕಾರದ ಮೆಟ್ಟಲೇರುವುದು ಸಾಧ್ಯವಿಲ್ಲವೆನಿಸಿದ್ದೇ ತಡ ತಮ್ಮ ನಿಷ್ಟೆಯನ್ನು ಏಕ್‍ದಂ ಬಿಜೆಪಿಗೆ ವರ್ಗಾವಣೆ ಮಾಡಿಬಿಟ್ಟರು. ಮುಂಬೈನ ಪ್ರಖ್ಯಾತ ಬ್ಲಿಜ್ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರ ಸ್ಥಾನವನ್ನು ಆಕ್ರಮಿಸಿದರು. ತನ್ಮೂಲಕ ಬ್ಲಿಟ್ಜ್ ಪತ್ರಿಕೆಯನ್ನು ಎಡ ಚಿಂತನೆಯಿಂದ ಬಲದಿಕ್ಕಿಗೆ ಹೊರಳಿಸಿದ್ದರಲ್ಲಿ ಪ್ರಮುಖ ಪಾತ್ರಧಾರಿಯಾದರು.

ಬಿಜೆಪಿ ಪಕ್ಷದಲ್ಲಿ ಉದ್ದಕ್ಕೂ ಅಡ್ವಾಣಿಯ ಬಲಗೈ ಬಂಟರಂತೆ ಕೆಲಸ ಮಾಡಿದರು. ಎನ್‍ಡಿಎ ಅಧಿಕಾರದ ಕಾಲದಲ್ಲಿ ಸೀದಾ ವಾಜಪೇಯಿ ಅಂತಃಪುರ ಸೇರಿಕೊಂಡರು. ವಾಜಪೇಯಿಯವರ ಜನಪ್ರಿಯ ಭಾಷಣಗಳನ್ನು ಬರೆದುಕೊಡುತ್ತಿದ್ದುದು ಇವರೇ. ದೆಹಲಿಯಿಂದ ಲಾಹೋರ್‍ಗೆ ಬಸ್ ಪ್ರಯಾಣ ಮಾಡಿದ ತಂಡದಲ್ಲೂ ಇವರಿದ್ದರು. ಇಂಡಿಯಾ ಶೈನಿಂಗ್ ಕ್ಯಾಂಪೇನ್‍ನ ಸೃಷ್ಟಿಯಲ್ಲೂ ಇವರ ಪಾತ್ರವಿತ್ತು.
ಬಿಜೆಪಿ ಸೋತು ಮೂಲೆಗುಂಪಾದ ನಂತರ 2009ರಲ್ಲಿ ಬಿಜೆಪಿಗೆ ರಾಜಿನಾಮೆ ನೀಡಿ ಹೊರಬಂದರು. ಆಗಾಗ್ಗೆ ತನ್ನ ಗುರು ಎಲ್‍ಕೆ ಅಡ್ವಾಣಿಯ ಪರವಾಗಿ ಬ್ಯಾಟಿಂಗ್ ಆಡಲು ರಂಗಕ್ಕಿಳಿದು ಸುದ್ದಿ ಮಾಡುತ್ತಿದ್ದುದನ್ನು ಹೊರತುಪಡಿಸಿದರೆ ಬೇರೆ ಕೆಲಸ ಮಾಡಲಿಲ್ಲ.
ನೈತಿಕತೆ ಬಗ್ಗೆ ಓತಪ್ರೋತವಾಗಿ ಭಾಷಣ ಮಾಡುವ ಇವರು ಓಟಿಗಾಗಿ ನೋಟು ಹಗರಣದಲ್ಲಿ ಸಿಕ್ಕಿಬಿದ್ದು 2011ರಲ್ಲಿ ಜೈಲಿಗೆ ಹೋಗಿ ಬಂದಿದ್ದೂ ಆಯ್ತು. ನಂತರದ ದಿನಗಳಲ್ಲಿ ನಿತಿನ್ ಗಡ್ಕರಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದ ಮೇಲೆ 2012ರಲ್ಲಿ ಮತ್ತೆ ಅಧ್ಯಕ್ಷರ ಸಲಹೆಗಾರನಾಗಿ ಪ್ರತ್ಯಕ್ಷವಾದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಸ್ಥಾನಕ್ಕೆ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದಾಗ ಅದನ್ನು ಬಹಿರಂಗವಾಗಿ ವಿರೋಧಿಸಿದ್ದವರಲ್ಲಿ ಕುಲಕರ್ಣಿ ಪ್ರಮುಖರು. ಅಡ್ವಾಣಿ ಬಗ್ಗೆ ಅವರ ನಿಷ್ಟೆಯೇ ಅಂಥದ್ದು. ಇದೀಗ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನವಿಲ್ಲದೆ ಸದ್ಯ ಓಆರ್‍ಎಫ್ ನಂಥ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ.
ಇಂತಹ ಕುಲಕರ್ಣಿಯವರು ತಮ್ಮ ಮುಖಕ್ಕೆ ಬಿದ್ದ ಮಸಿಯನ್ನು ತಮ್ಮ ಕಿರೀಟದ ಗರಿಯಾಗಿಸಿಕೊಳ್ಳಲು ಹೊರಟಿದ್ದಾರೆ. ಆದರೂ ಈ ಘಟನೆ ನಡೆಯಬಾರದಿತ್ತು. ಇದು ಖಂಡನಾರ್ಹ.

Leave a Reply

Your email address will not be published.