ಮಲ್ಲಿಗಿ ಬನದ ಕರಡಿ

- ಡಾ. ಎಚ್. ಎಸ್. ಅನುಪಮಾ

ಗುಡ್ಡಬೆಟ್ಟಗಳೇ ತುಂಬಿರುವ ಬಾಳೆಬರೆಯ ಊರುಕೇರಿಗಳಿಗೆ ಮಳೆಗಾಲ ಬಂತೆಂದರೆ ಬೆಟ್ಟದ ನಡುವಿನ ಕೊರಕಲಿನಲ್ಲೆಲ್ಲ ಒಂದೊಂದು ಹೊಳೆ ಸೃಷ್ಟಿಯಾಗಿ ಮೈದುಂಬಿ ಹರಿಯುತ್ತದೆ. ಎರಡೂ ದಂಡೆಗಳ ಸಮೃದ್ಧವಾದ ತೋಟ, ಸಾಲುಸಾಲು ಕೇರಿ ಮನೆಗಳ ನಡುವೆ ಬೆಟ್ಟದ ಕೆಮ್ಮಣ್ಣು ಕರಗಿಸಿಕೊಂಡ ಕೆನ್ನೀರ ಹೊಳೆ ಹರಿಯುತ್ತದೆ. ಗುಡ್ಡೇಕಾನು ಹೊಳೆ ಇನ್ನೇನು ಶರಾವತಿ ನದಿಯನ್ನು ಕೂಡಲಿದೆ ಎಂಬಲ್ಲಿ ದೇವಿ, ಸುಬ್ಬಿಯರ ಮನೆಯಿದೆ. ತಮ್ಮ ಪೈಕಿಯವರ ಕೇರಿಯಿಂದ ಅಕಾ ಮತ್ತೂ ಹತ್ತು ಮಾರು ಕೆಳಗೆ, ಅಲ್ಲೆ ನದಿಯೊಳಗೇ ಇದೆಯೇನೋ ಎಂಬ ಹಾಗೆ ಅವರ ಮನೆ.

ಬೇಸಿಗೆಯಲ್ಲಿ ಗುಂಡಗಿನ ಬೆಣಚು ಕಲ್ಲು ತುಂಬಿದ ಹೊಳೆಅಂಗಳದಲ್ಲಿ ಆಚೀಚಿನ ಮನೆಯವರು ಕೊಬ್ಬರಿ ಅಡಿಕೆ ಹಪ್ಪಳ ಒಣಹಾಕಿರುವಾಗ, ಶಾಲೆಗೆ ರಜೆಯೆಂದು ಹುಡುಗರು ಆಟ ಆಡುವಾಗ ಅದು ಮಳೆಗಾಲದಲ್ಲಿ ಮೈದುಂಬಿ ಹರಿಯುವ ಗುಡ್ಡೇಕಾನು ಹೊಳೆಯ ಪಾತ್ರವೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ನಾಕು ಮಳೆ ಬಂದರೆ ಸಾಕು, ಹೊಳೆ ಅಂಗಳ ಹಸಿಯಾಗತೊಡಗುತ್ತದೆ. ಅಷ್ಟೇ ಸಾಕು, ಹೊಳೆಗಿಂತ ಚೂರು ಮೇಲಿರುವ ದೇವಿಯ ಬಿಡಾರದ ನೆಲ ತಾನೂ ಒದ್ದೆಯಾಗಿ ತೀಡತೊಡಗುತ್ತದೆ. ಆಗ ದೇವಿ ದೊಡ್ಡ ವಡೆಯರ ಬಳಿ ಬೇಡಿ ಹತ್ತಾರು ಅಡಕೆ ದಬ್ಬೆ ತಂದು ಸಿಗಿದು ನೆಲಕ್ಕೆ ಹಾಕುತ್ತಾಳೆ. ನೀರು ಜಿನುಗುವ ದಬ್ಬೆ ಮೇಲೆ ಕೂತು ಕಷ್ಟಪಟ್ಟು ಬೇಯಿಸಿಕೊಂಡ ಗಂಜಿ ಉಣ್ಣುವಾಗ ತಮ್ಮನ್ನು ಹೊಳೆಪಾಲಾಗದಂತೆ ತಡೆದು ಇಷ್ಟಾದರೂ ನೆಲೆ ಒದಗಿಸಿಕೊಟ್ಟ ಕರುಣಾಳು ಜಟಗನ ಮೇಲೆ ಅವರ ಮನದಲ್ಲಿ ಕೃತಜ್ಞತೆ ಮೂಡುವುದು. ದಾಗೀನವಲ್ಲ, ದುಡ್ಡಲ್ಲ, ಎಂಟು ಕೆಜಿ ಅಕ್ಕಿ ಹಾಗೂ ತಿಂಗಳಾ ನಾನೂರು ರುಪಾಯ್ ಬರುವಂತೆ ಪಂಚಾಯ್ತಿಯಲ್ಲಿ ಕೊಟ್ಟ ಕಾರ್ಡೇ ಅವಳ ಆಸ್ತಿ. ಅದು ವಡೆಯರ ಮನೆ ಕೊಟಿಗೆ ಜಂತಿಯ ಸಂದಿ ಇರುವುದರಿಂದ ಅದರ ಭಯವಿಲ್ಲ. ಉಳಿದಂತೆ ಒಂದೆರೆಡು ಸೀರೆ, ನಾಕು ಸಾಮಾನನ್ನು ದೇವಿ ತನ್ನ ಹಳೇಸೀರೆಯಲ್ಲಿ ತುಂಬಿ ಗಂಟು ಕಟ್ಟಿ ಗಳಕ್ಕೆ ನೇತು ಹಾಕಿರುತ್ತಾಳೆ. ಮಳೆ ಏರಿ ನೆಗಸು ಬಂದರೆ ರಾತ್ರಿಯೇ ಮೇಲೆ ಹೋಗಲು ಕಂಬಳಿಕುಪ್ಪೆಯೊಂದಿಗೆ ತಯಾರಾಗಿ ತಮ್ಮ ಜೊತೆಗೆ ಮನೆಯ ನಾಯಿಕುನ್ನಿಗಿಷ್ಟು ಜಾಗ ಮಾಡಿಕೊಟ್ಟು ಮಲಗುತ್ತಾರೆ.

ಪ್ರತಿ ಸಲವೂ ಮಳೆ ಶುರುವಾಗಿ ಹೊಳೆ ಏರತೊಡಗಿದರೆ ಅಬ್ಬೆ ಮಗಳು ಸರದಿ ಮೇಲೆ ನಿದ್ದೆ ಮಾಡುತ್ತಾರೆ. ರಾತ್ರಿಯೆಲ್ಲ ಚಿಮಣಿ ಬುಡ್ಡಿ ಉರಿಸುತ್ತ ಬಾಗಿಲ ಕಡೆ ನೋಡುತ್ತ ಕೂರುತ್ತಾರೆ. ಮನೆಯೊಳಗೆ ನೆರೆ ಈಗ ನುಗ್ಗಿತೋ ಇನ್ನೊಂದು ಗಳಿಗೆಗೆ ನುಗ್ಗಿತೋ ಎಂದು ಕಾಯುತ್ತ ಹೊಗೆ ತುಂಬಿದ ಮಬ್ಬು ಬೆಳಕಲ್ಲಿ ಬಾಗಿಲ ಕೆಳ ಸಂದಿಯಿಂದಾಚೆ ಕಾಣುವುದು ಹೊಳೆಯೋ ಮಳೆನೀರೋ ಎಂದು ನಿರುಕಿಸುತ್ತ ರಾತ್ರಿ ಕಳೆಯುತ್ತಾರೆ. ಮೇಗಳಕೇರಿ ಮುದಿಯ ಮೀನುಚಟ್ನಿ, ಗಂಜಿತೆಳಿ ಉಂಡು ಹೊದಿಸಿಕೊಟ್ಟ ಮಾಡು ಕೊಡ ಮಗುಚಿಟ್ಟ ಹಾಗೆ ಹುಯ್ಯುವ ಮಳೆಗೆ ಹಾರಿಯೇ ಹೋಗುವುದೇನೋ ಎಂದು ನಡುಗುತ್ತ ಕೂರುತ್ತಾರೆ.

ಪಾಪದ ಅಬ್ಬೆ ಮಗಳಿಗೆ ಈ ಪರುಸ್ತಿತಿ ಬಂದದ್ದಾದರೂ ಯಾಕಾಗಿತ್ತೊ?

ಯಾಕೆಂದರೆ ದೇವಿಯ ಗಂಡ ಹೊಸಬ ದಮ್ಮು ಸೀಕಿನಿಂದ ಸತ್ತು ಎರಡು ವರ್ಷದ ಮೇಲೆ ಸುಬ್ಬಿ ಹುಟ್ಟಿದ್ದಳು. ಅದರ ಅಪ್ಪ ಯಾರು ಎಂದು ಕೇರಿ ಜನ ಎಷ್ಟು ಕೇಳಿದರೂ ದೇವಿ ಮಗಳ ಜನ್ಮರಹಸ್ಯ ಅಪೂಟು ಬಾಯಿ ಬಿಡದೆ ಇದ್ದಾಗ ಹಿರೇರ ಪಂಚಾಯ್ತಿ ಇಡಲಾಗಿತ್ತು. ಏನು ಮಾಡಿದರೂ, ಹೇಗೇ ಕೇಳಿದರೂ ಹೇಳದ ಅವಳ ಮೇಲೆ ಹಿರೀಕರೆಲ್ಲ ಬಯಂಕರ ಸಿಟ್ಟಾಗಿ ಕೇರಿಯಿಂದ ಹೊರಹಾಕಿದ್ದರು. ಅಪ್ಪ ಅಬ್ಬೆಯಿಲ್ಲದ, ಎಳತರಲ್ಲೇ ಮುದಿ ಗಂಡನನ್ನು ಕಳಕೊಂಡ ದೇಯಿಯ ಪರವಾಗಿ ನಿಂತು ವಾದಿಸಲು ಅವತ್ತು ಯಾರೂ ಇರಲಿಲ್ಲ. ಅರುವತ್ತೊಂದು ರೂಪಾಯ್ ತಪ್ಪುದಂಡ ಕಟ್ಟಿ ಕೇರಿಯೊಳ ಬರುವಂತೆ ಪಂಚಾತಿಯಲ್ಲಿ ಹೇಳಲಾಗಿದ್ದರೂ ಅಷ್ಟು ದುಡ್ಡು ಅವಳಿಗೆ ಯಾವತ್ತೂ ಒಟ್ಟಾಗಲಿಲ್ಲ. ಹೀಗಾಗಿ ಎಳೆ ಕೂಸಿನೊಂದಿಗೆ ಕೇರಿಮನೆ ಬಿಟ್ಟು ಅಕಾ ಅಲ್ಲೇ ಹೊಳೆಯ ಒಳಗೇ ಎಂಬಂತೆ ದೂರದ ತಗ್ಗಿನಲ್ಲಿ ಬಿಡಾರ ಕಟ್ಟಿಕೊಂಡು ಬದುಕಿದ್ದಳು.

r1ಜಾತಿಯಿಂದ ಹೊರಹಾಕುವ ಮೊದಲು ಕೇರಿಯೊಳಗೆ ಅವಳಿದ್ದ ಬಿಡಾರ ಈಗಲೂ ಅಲ್ಲಿದೆ. ಮುರುಕು ಗೋಡೆ, ಹರಿದ ಮಾಡಿನ ಅದು ಖುಲ್ಲಾ ನಿಂತಿದೆ. ನೆರೆ ನುಸುಳದ ಆ ಬೆಚ್ಚಗಿನ ಗೂಡನ್ನು ಒಂದಲ್ಲ ಒಂದು ದಿನ ಸೇರುವ, ತನ್ನ ಮಗಳಿಗೊಂದು ಗಟ್ಟುಳ್ಳ ಅಳಿಯನ್ನ ತಂದು ಸಂಸಾರ ಹೂಡುವ ಕನಸು ಕಂಡಿದ್ದಳು ದೇವಿ. ಹಾಗಾಗಿಯೇ ಅಪ್ಪ ಯಾರೆಂದು ತಿಳಿಯದ ಕೂಸಿನ ಬಗ್ಗೆ ಕೇರಿಯವರು ಕಟಕಿಯಾಡಿದರೂ ಹೊಳೆಯ ಜೊತೆ ಗುದ್ದಾಡುತ್ತ ಎಲ್ಲ ಸಹಿಸಿಕೊಂಡಿದ್ದಳು. ಆದರೆ ಪಾಪದ ದೇವಿಯ ಸಹನೆ ತೀರಿಹೋಗುವಂತ ಗಳಿಗೆ ಅವತ್ತು ಮತ್ತೆ ಜಾತಿ ಪಂಚಾಯ್ತಿ ಸೇರಿದ ದಿನ ಬಂದುಹೋಯ್ತು. ಅವತ್ತಿನ ನಂತರದ ದೇವಿ ಇದುತನಕದ ದೇವಿಯೇ ಅಲ್ಲ ಎನ್ನುವಂತೆ ಬದಲಾಗಿಹೋದಳು.

ಆದದ್ದು ಇಷ್ಟು:

ಅವಳು ಕೆಲಸಕ್ಕೆ ಹೋಗುವ ವಡೇರ ಮನೆ ತೋಟಕ್ಕೆ ದಿನಗೆಲಸಕ್ಕೆಂದು ಬರುತ್ತಿದ್ದ ಬೆಳಿಯನ ಮಗ ಮಾಸ್ತಿ ಕಟ್ಟುಮಸ್ತು ಮೈಯಿನ ಒಳ್ಳೇ ದುಡಿಮೆಗಾರ. ಬಣ್ಣ ಕಪ್ಪು, ಉಗ್ಗು ಮಾತು. ಆದರೆ ಏನಂತೆ, ಯಾವ ಚಟಗಳಿರದ ಅವನೇ ತನ್ನ ಕೂಸಿಗೆ ಒಳ್ಳೇ ಜೋಡಿ ಅಂತ ದೇವಿಗೆ ಅನಿಸಿ ಅದನ್ನು ವಡೇರ ಬಳಿ ಆಡಿದ್ದಳು. ಕಿವಿ ಮೇಲೆ ಹಾಕ್ಕಳದಂಗೆ ಇದ್ದ ವಡೇರು ಒಂದು ದಿನ ಬೆಳಿಯನ್ನ ಕರೆದು ಈ ವಿಷಯ ಕೇಳೇಬಿಟ್ಟರು. ಅವ, `ನಂ ಕೇರಿಯಿಂದ್ಲೇ ಅಬ್ಬೆಮಗಳ್ನ ಹೊರಹಾಕಿದಾರೆ ವಡೆಯಾ. ಹಂಗಾಗಿ ಈಗ ಹಿರೇರ ಪಂಚಾತಿ ಸೇರ್ಸಿ ಅದ್ರ ಮಗ್ಳ ಜಾತಿ ಯಾವ್ದಂತ ತೀರ್ಮಾನ ಆಗ್ಬೇಕು ಅತ್ವ ತಪ್ಪುದಂಡ ಕಟ್ಸಿ ಅವ್ರನ್ನ ಜಾತಿ ವಳ್ಗೆ ತಗಬೇಕು ಶಿವಾಯಿ ತಾನೊಬ್ನೇ ಏನೂ ಹೇಳೂಕಾಗ’ ಎಂದು ಜಾರಿಕೊಂಡಿದ್ದ. ಮತ್ತೆಮತ್ತೆ ವಡೆಯರು ಕೇಳಿದ ಫಲವಾಗಿ ಇಂದು ಅವನೇ ನಾಕು ಊರಿನ ಕುಲದ ಹಿರೀಕರನ್ನ ತನ್ನ ಮನೆಗೇ ಕರೆಸಿ ಊಟ ಹಾಕಿಸಿ ಪಂಚಾಯ್ತಿ ಇಡಿಸಿದ್ದ.

ಆ ಅಳ್ಳಿಮರಕ್ಕೆ ಎಷ್ಟೋ ತಲೆಮಾರುಗಳ ಹಿಂದೆ ಯಾವ ಪುಣ್ಯಾತ್ಮರೋ ಕಟ್ಟಿದ ಕಟ್ಟೆ ಈಗ ಕೇರಿಯ ಪಂಚಾತಿ ಕಟ್ಟೆಯಾಗಿ ಬದಲಾಗಿತ್ತು. ಕಟ್ಟೆಯ ಕಲ್ಲುಗಳ ಮೇಲೆಲ್ಲ ಪಾಚಿ ಬೆಳೆದು ಒಣಗಿ ಅದು ಕಲ್ಲು ಕಟ್ಟೆಯೋ, ದರಕು ರಾಶಿಯೋ ಗೊತ್ತಾಗದಂತೆ ಕಾಣುತ್ತಿತ್ತು. ಅಲ್ಲಿ ಕೂತ ಎಲ್ಲರಿಗೂ ದೊಡ್ಡ ಮರದ ಗೆಲ್ಲುಗಳು ನೆರಳ ಚಾದರ ಹೊದಿಸಿದ್ದರೂ ದೇವಿ ಮಾತ್ರ ಕಿರುಬೆವರು ಸುರಿಸುತ್ತ ಉರಿಯುತ್ತ ನಿಂತಿದ್ದಳು.

ಅಂದು ಬೆಳಿಗ್ಗೆ ವಡೇರ ಬಳಿ ಕಾಡಿ ತಂದ ಐವತ್ತು ರೂಪಾಯಿ, ಮನೇಲಿದ್ದ ಹತ್ತು ರೂಪಾಯಿ ನೋಟು, ಒಂದು ರೂಪಾಯ್ ಪಾವಲಿ – ಎಲ್ಲ ಸೇರಿಸಿ ದೇವಿ ಕವಳದ ಚಂಚಿಯಲ್ಲಿಟ್ಟು ಅರವತ್ತೊಂದ್ರುಪಾಯಿ ತಂದಿದ್ದಳು. ವರ್ಷಗಟ್ಟಲೆ ಕೆಳಗೆ ತನಗೆ ವಿಧಿಸಿದ್ದ ಅರವತ್ತೊಂದು ರೂಪಾಯಿ ದಂಡ ಕಟ್ಟಿ ಅಷ್ಟೆತ್ತರ ಬೆಳೆದು ನಿಂತ ಸುಬ್ಬಿಯ ಮದುವೆಗೆ ದಾರಿ ಸುಸೂತ್ರ ಮಾಡಬೇಕೆಂದು ಪಂಚಾಯ್ತಿ ಶುರುವಾಗುವ ಮೊದಲು ಅಮ್ಮನೋರ ಮನೆಗೆ ಹೋಗಿ ಬಂದಿದ್ದಳು. ಭಟ್ಟರ ಮಾಣಿ ಕಂಡೂ ಕಾಣದಂತೆ ದೂರದಲ್ಲಿ ಮಣಮಣ ಮಂತ್ರ ಹೇಳುತ್ತ ಕುಳಿತಿದ್ದವ ಅವಳು ಎಷ್ಟು ಹೊತ್ತಾದರೂ ಹೋಗದೇ ಇದ್ದಿದ್ದು ನೋಡಿ `ಇಕಾ’ ಎಂದು ದೂರದಿಂದಲೇ ದಾಸಾಳ ಹೂವಿನ ಎಸಳೊಂದನ್ನು ಅವಳ ಕಡೆ ಹೊತ್ತಾಕಿದ್ದ. ಕಣ್ಣಿಗೊತ್ತಿಕೊಂಡ ಹೂವಿನೆಸಳು ಸೂಸುತ್ತಿದ್ದ ದೇವಳದ ಪರಿಮಳವನ್ನೆಲ್ಲ ಒಳಗೆಳೆದುಕೊಂಡು, ನಿಂತಲ್ಲೇ ಕೈಮುಗಿದು ಕಣ್ಮುಚ್ಚಿ ಅಮ್ಮನವರನ್ನು ಬೇಡಿಕೊಂಡಿದ್ದಳು. ಎಂದೆಂದೂ ಸಿಗದ ಹೂಂಗಿನ ಪ್ರಸಾದ ಇವತ್ತು ಸಿಕ್ಕಿದ್ದು ಆ ಅಮ್ಮನಿಗೂ ತನ್ನ ಕಷ್ಟ ಅರುವಾಗಿ ಆಶೀರ್ವಾದ ಮಾಡಿದ ಕಾರಣವಾಗಿ; ಎಂದೇ ಪಂಚಾಯ್ತಿ ಸೇರಿದ ಹಿರೇರು ಮಾತಾಡುವಾಗ ಯಾರೊಬ್ರ ಮೈಮೇಲಾದರೂ ಅಮ್ಮನೋರ ಭಾರ ಬಂದು ತನ್ನ ಪರವಾಗಿ ಮಾತಾಡಬಹುದು ಅಂತ ಕಾದಿದ್ದಳು.

ಆದರೆ ಈಗ ನೋಡಿದರೆ ಈ ಹಿರೇರು ಧರ್ಮಸ್ಥಳದ ಹೆಸರಲ್ಲಿ ಸಾವಿರದೊಂದು ರೂಪಾಯಿ ದಂಡ ಜಾತಿಸಂಘಕೆ ಕೊಟ್ಟು, ಕೇರಿ ಜಟಗನಿಗೆ ಕೋಳಿ ಕಡಿದು, ಸುತ್ತಲ ಆರು ಊರಿನ ಕುಲದ ಮುಖ್ಯರಿಗೆ ಊಟ ಹಾಕಿಸಿದರಷ್ಟೇ ಕೇರಿ ಒಳಗೆ, ಜಾತಿ ಒಳಗೆ ಸೇರ್ಸೂದು ಅಂತಿದ್ದಾರೆ! ಇಲ್ದಿದ್ರೆ ಎಲ್ಲ ಹಿಂಗಿದ್ದ ಭಾನಗಡಿ ಮಾಡ್ಕಂಡು ಜಾತಿ ಮರ್ವಾದಿ ತೆಗೀತರೆ ಅಂತ ಬೇರೆ ಹೇಳ್ತಿದಾರೆ. ಎಲ್ಲಿಯ ಅರವತ್ತೊಂದ್ರುಪಾಯಿ, ಎಲ್ಲಿಯ ಸಾವಿರದೊಂದ್ರುಪಾಯಿ?

ತಾ ಕಂಡುಕೇಳರಿಯದ ಮೊತ್ತದ ಮಾತು ಬಂದದ್ದೇ ದೇವಿಗೆ ಏಕಸಾನ ಸಿಟ್ಟು, ದುಃಖ, ಅಸಹಾಯಕತೆಗಳೆಲ್ಲ ಒಟ್ಟೊಟ್ಟು ಹೊಟ್ಟೆಯಲ್ಲಿ ನುಲಿಯತೊಡಗಿದವು. ಸುತ್ತಮುತ್ತಲೊಮ್ಮೆ ನೋಡಿದಳು. ಅಲ್ಲಿ ನೋಡಿದರೆ ಪಂಚಾಯ್ತಿ ನೆಪಕ್ಕೆ ಇಡಿ ಕೇರಿಯೇ ಅಳ್ಳಿಕಟ್ಟೆ ಸುತ್ತ ಬಾಳೆಬರೆ ಗದ್ದೆಬೈಲಲ್ಲಿ ಒಟ್ಟಾಗಿತ್ತು. ಇವತ್ತು ಪಂಚಾತಿ ಇದೆಯೆಂದು ತನ್ನ ಮಕನೇ ನೋಡದೇ ಅಡ್ಡಾಡಿಕೊಂಡಿದ್ದವರೂ ಕಟ್ಟೆಸುತ್ತ ನೆರೆದಿರುವುದು ನೋಡಿ ದೇವಿ ಸಿಟ್ಟಿನಿಂದ ಕುದಿಯತೊಡಗಿದಳು. ಮನುಷ್ಯರದಷ್ಟೇ ಅಲ್ಲ, ದೇವರ ಕಣ್ಣೂ ಸೈತ ಹೊಟ್ಟಿ ಹೋಗಿ ಕುರುಡಾಗಿರಬೇಕು ಅನಿಸಿತು. ಹಿರೇರು ಮಾತಾಡಿಕೊಳುವಾಗ ಸುತ್ತಮುತ್ತ ನೋಡಿದರೆ ಒಬ್ಬರಾದರೂ ತನ್ನವರೆನ್ನುವವರು ಕಾಣಲಿಲ್ಲ. ಪುಕಟ್ ಸಿಗಬಹುದಾದ ಹೆಂಗಸಿನ ಮೈಯ ಆಸೆಗೆ ಹತ್ತಿರ ಬಂದು ಉಗಿಸಿಕೊಂಡು ಹೋದವರೇ ಎಲ್ಲ. ಅಕಾ ಅಲ್ಲಿ ಹನುಮಂತನೂ ಇದ್ದ. ಗಂಡುಮಕ್ಕಳಿಲ್ಲದೆ ಸತ್ತ ತನ್ನ ಗಂಡ ಹೊಸಬನ ಚಿತೆಗೆ ದಾಯಾದಿ ಹನುಮಂತ ಬೆಂಕಿ ಕೊಡಲಿ ಎಂದು ಎಲ್ಲರು ತೀರ್ಮಾನ ಮಾಡಿ ಕರೆತರಹೋದರೆ ತಪ್ಪಿಸಿಕೊಂಡು ಯಾವುದೋ ಊರಿಗೆ ಹೋಗಿ ಕೂತಿದ್ದ. ಅವನನ್ನು ಹುಡುಕಿ ತಂದು ಹೆಣ ಸುಡುವುದರಲ್ಲಿ ಒಂದು ದಿನವೇ ಕಳೆದುಹೋಗಿತ್ತು. ಅಂಥವ ಇವತ್ತು ಯಾವ ಬಣ್ಣಕ್ಕೆ ಅಂತ ಇಲ್ಲಿ ಬಂದು ಕೂತಿದ್ದಾನೆ? ವರ್ಷಗಟ್ಲೆಯಿಂದ ಅವ್ರ ತೋಟಕ್ಕೆ ಗೇಯ್ದೆವಲ್ಲ, ವಡೇರಾದರೂ ಪಂಚಾಯ್ತಿ ಹತ್ತಿರ ಬರುತ್ತೇನಂದವರು ಬರದೆ ಯಾಕೆ ಮನೆಯಲ್ಲೆ ಉಳಿದಿದ್ದಾರೆ?

odaluವಿಚಾರಣೆಯ ವೇಳೆ ಅವರ ಆರೋಪಗಳನ್ನೆಲ್ಲ ಹಲ್ಲುಕಚ್ಚಿ ಸಹಿಸಿಕೊಂಡಿದ್ದ ದೇವಿ ದೊಡ್ಡ ಮೊತ್ತದ ದಂಡ ನಿಕ್ಕಿಯಾದಾಗ ಉರಿದುಬಿದ್ದಳು. ಅಷ್ಟು ದುಡ್ಡು ಒಟ್ಟು ಮಾಡುವುದರಲ್ಲಿ ಮದುವೆಗಿರುವ ಕೂಸು ಮುದುಕಿಯಾಗ್ತದೆ ಅಷ್ಟೇ ಎನಿಸಿ, ಬೆಳಿಯನ ಮಗನಲ್ಲದಿದ್ದರೆ ಮತ್ತೊಬ್ಬ ಅಳಿಯನನ್ನು ಹುಡುಕಿ ತಂದು ಬದುಕಿ ತೋರಿಸಬೇಕೆಂಬ ಛಲ ಎದೆಯಲ್ಲಿ ಎದ್ದು ಹೊರಳಾಡಿತು. ಈ ಕೇರಿ, ನೆಲ, ಕಾಡು, ಹೊಳೆ ಎಲ್ಲ ಯಾರಪ್ಪಂದು? ಇವರ ಕೇಳಿ ಗಿಡ ಬೆಳಿಯುತ್ತಾ? ಇವರ ಕೇಳಿ ಹೊಳೆ ಹರಿಯುತ್ತಾ? ಅದರಲ್ಲಿ ತನ್ನ ಪಾಲೂ ಇದೆ ಎಂಬ ದಿಟ್ಟ ಪ್ರತಿರೋಧವೊಂದು ಅದೆಲ್ಲಿತ್ತೋ, ಬುಸುಗುಡುತ್ತ ಒಳಗಿನಿಂದ ಎದ್ದುಬಂತು. ಇಲ್ಲಿರುವ ಇವರೆಲ್ಲರಿಂದ ತನ್ನ ಮಗಳ ಕಾದುಕೊಳುವ ಚಿಂತೆ ಮತ್ತೂ ಗನವಾಗಿ ಬೆಳೆದು ಒಳಗೊಳಗೇ ಹಲ್ಲು ಕಡಿಯುತ್ತ ಕೆಲೆದೇ ಬಿಟ್ಟಳು.

`ಮನುಷ್ಯರು ಮಾಡದಂತ ಗನಂದಾರಿ ತಪ್ಪನ್ನು ನಾಯೇನು ಮಾಡಿದ್ದೆ? ಒಂದು ಗಂಡ್ಸಿಗೆ ಬಸುರಾಗಿ ಮಗು ಹೆತ್ತು ಬೆಳೆಸಿದೆ, ಅಷ್ಟೆಯ. ಅದಕ್ಕೆ ನನ್ನ ಕೇರಿಯಿಂದ ಹೊರಹಾಕಿದ್ರಿ, ಅಷ್ಟೆ ಅಲ್ಲ, ಈಗ ಮಗಳ ಅಪ್ಪ ಯಾರಂತ ತಿಳಿಸ್ಲಿಲ್ಲಂದೆಳಿ ಭಾರೀ ಶಿಕ್ಷೆ ಕೊಡಕ್ ಇಷ್ಟ್ ಜನ ಬಂದಿದ್ರಿ. ಇಷ್ಟು ದಿವ್ಸ ಆ ನೆಗಸು ಬರೋ ನದೀ ಅಂಗಳದಾಗೆ ಬದುಕಿದ್ನಲ್ಲ, ಹಿರೇರು ಒಬ್ಬರಾದ್ರು ಬಂದು ಹೆಣ್ಣೆಂಗ್ಸು ಮತ್ತೊಂದ್ ಕೂಸು, ನೆರೆಗಿರೆ ಮಧ್ಯ ಹೆಂಗ್ ಬದುಕಿದಿರ ಅಂತ ಕೇಳಿದ್ರ? ಆ ಮುದಿಯಜ್ಜನ್ನ ಬಿಟ್ಟು ಬಿಡಾರದ ಸೂರು ಹೊಚ್ಚಿಕೊಡಕ್ಕೂ ಒಬ್ರೂ ಒಂದಿನ ಬರನಿಲ್ಲ. ಒಂದ್ ಶಿದ್ದೆ ನೆಲ್ಲು ತಗ ಅಂತ ಸುಗ್ಗಿ ದಿವ್ಸನು ಹೇಳ್ನಿಲ್ಲ. ನಾನೂ ಕೂಸೂ ನೆರೆ ವಳಗೆ ನಡುಗ್ತ ರಾತ್ರಿ ನಿದ್ರಿ ಬಿಟ್ ಹೆದರಿ ಸಾಯ್ತಾ ಇದ್ರೆ ನಿಂನಿಮ್ಮನೀಗೆ ಬೆಚ್ಚಗೆ ಮಲಗಿದ್ರಿ ಕುಲಸ್ಥರು ನೀವು. ನಿಮ್ಗೆ ಈ ಬಡವ್ರ ಜೀವ್ನಕ್ಕಿಂತ ತಪ್ಪುದಂಡನೇ ಹೆಚ್ಚು ಅಂತಾದ್ರೆ ಇಕಳಿ, ಈ ಕುಲ, ಹಿರೇರ್ನ ಕಟಕಂಡು ನಂಗೆ ಏನಾಗಬೇಕಿಲ್ಲ. ಕಣ್ಣಲ್ಲಿ ರಕ್ತಿಲ್ಲದ ಜಾತಿಜನ ನೀವು ಕಟ್ಟಕಾಗದಷ್ಟು ತಪ್ಪುದಂಡ ಹಾಕಿದ್ರೆ ನಾ ಯಾಕ್ ಕಟ್ಟಬೇಕು? ಹಂಗಾರೆ, ತಪ್ಪುದಂಡಕ್ಕೆ ದುಡ್ಡಿಲ್ದ ಬಡುವ್ರಿಗೆ ಜಾತಿನೂ ಬೇಡ, ಮದುವೆ ಮಕ್ಳ ಆಸೆನೂ ಇರಬಾರ್ದು ಅಂತ್ಲಾ? ದುಡ್ಡಿರುವಂತೋರು ಯಂತ ಮಾಡಿರೂ ದಂಡ ಕಟ್ಟಿ ಸರಿ ಮಾಡ್ಕಬೋದು ಅಂತ್ಲಾ?’ ಹೇಳೇಳುತ್ತ ಉತ್ತರಕ್ಕಾಗಿ ಅಲ್ಲಿದ್ದವರೆಲ್ಲ ತಡಕಾಡುತ್ತಿರುವಾಗಲೇ ತನಗಿನ್ನು ಅಲ್ಲಿ ಕೆಲಸವಿಲ್ಲವೆಂಬಂತೆ ಎದ್ದು ಸೀರೆ ಕೊಡವಿಕೊಳ್ಳತೊಡಗಿದಳು. `ನಂಗೇನ್ ಗೊತ್ತಿಲ್ಲಂತ ತಿಳ್ಕಂಡಿದಿರ ನಿಂನಿಮ್ ಮನಿ ಬಣ್ಣ? ನಾ ಹರ್ಗಿಸೆ ದಂಡ ಕಟ್ಟುವಳಲ್ಲ. ಈ ಕೇರಿನೂ ಮುದ್ದಾಂ ಬಿಡುವಳಲ್ಲ. ಅವ್ವಿಮಗಳು ರಟ್ಟೆ ಕಸುವಿರೋ ತಂಕ ದುಡಿತಿವಿ. ಆಗಲಿಲ್ಲಂದ್ರೆ ಹೊಳೀಗ್ ಹಾರ್ಕತಿವಿ. ನೀವ್ ನಂ ಹೆಣನೂ ಕಿಟ್ಬೇಕಾಗಿಲ್ಲ. ತಿಳ್ಕಳಿ ಹ್ಞಂ..’ ಎಂದವಳೇ ಎದ್ದು ನಿಂತಳು. ಅಲ್ಲಿರುವವರ ಬದುಕಿನ, ಹುಟ್ಟುಸಾವಿನ ಕುರಿತಾದ ಎಷ್ಟೋ ಗುಟ್ಟುಗಳು ಆ ದನಿಯ ರಭಸಕ್ಕೆ ಗರಿಗೆದರಿ ಹಾರತೊಡಗಿದವು.

ಅವಳ ಮಾತಿಗೆ, ಸೀರೆ ಕೊಡವಿಕೊಂಡ ಜೋರಿಗೆ ಬೆಟ್ಕುಳಿ ಕನ್ಯಜ್ಜನ ಜೀವ ಒಮ್ಮೆ ಅಲುಗಾಡಿತು. ಅವನ ಮಗಳ ಮದುವೆ ಆಗಿ ಐದೇ ತಿಂಗಳಿಗೆ ದಷ್ಟಪುಷ್ಟ ಮಗುವನ್ನು ಹಡೆದು ಅವನ ಬೀಗರು ಗಲಾಟೆ ತೆಗೆದಾಗ ಹತ್ತು ಸಮಸ್ತರನ್ನು ಕೂಡಿಸಿ ಅವರಿಗೆ ಭರ್ಜರಿ `ಔತ್ಣ’ ಮಾಡಿಸಿ `ಆರು ತಿಂಗ್ಳಿಗೇ ಹುಟ್ಟಿದ ಶಿಶೂ ಸೈತ ಈಗಿನ ಕಾಲ್ದಾಗೆ ಬದುಕ್ತಾವೆ’ ಎಂದು ಅವರ ಬಾಯಿಂದ ಹೇಳಿಸಿದ್ದ. ಪಂಚಾಯ್ತಿಗೆ ದಂಡ ಕಟ್ಟುವ ಕಸುವಿದ್ದು ತಮ್ಮ ತಪ್ಪುಗಳನ್ನು ಸರಿ ಮಾಡಿಕೊಂಡು ಮಕ್ಕಳು ಮರಿಯೊಂದಿಗೆ ಗನಸ್ಥರೆಂಬಂತೆ ಸಂಸಾರ ನಡೆಸುತ್ತಿರುವ ಕನ್ಯಜ್ಜನಂತ ಎಷ್ಟೋ ಜನ ದೇವಿಯ ಕಣ್ಣೆದುರು ಕಂಡರು. ಒಂದು ಮೆಟ್ಟೂ ಜಾಗವಿಲ್ಲದ ಬಡವರೆಂದು ತಾನೇ ತಮಗಿಂಥ ಅನ್ಯಾಯವಾಗುತ್ತಿರುವುದು ಎಂಬ ಅವಮಾನ ದೇಹದ ಮೂಲೆಮೂಲೆಯನ್ನೂ ಸುಡತೊಡಗಿತು.

ಅವಳ ಉರಿಮಾತು ಕೇಳಿದ ಪಂಚಾಯ್ತಿ ಸಮಸ್ತರು ಇನ್ನು ಏನೇನು ಮಾತು ಹೊರಬಂದಾವೋ, ಪರುಸ್ತಿತಿ ಕೈಮೀರುವ ಮೊದಲು, ತಂತಮ್ಮ ಮನೆ ಬಣ್ಣಗಳ ಅವಳು ಹೊರಗೆ ಎರಚಾಡೋ ಮೊದಲು ಬೇಗ ಪಂಚಾಯಿತಿ ಬರಖಾಸ್ತು ಮಾಡತಕ್ಕದ್ದು ಎಂದು ಒಳಗೊಳಗೇ ಅಂದುಕೊಂಡರು.

ಅಕಾ, ಆಗಲೇ ಆ ಚಿಗುರುಮೀಸೆಯ ಪೋರನ ದನಿ ಬಂದಿದ್ದು.

`ಇದೇನ್ ಮಾತಾಡ್ತಾ ಇದೀರಿ ನೀವೆಲ್ಲ? ನಂ ದೇಶದಲ್ಲಿ ಎಲ್ಲರಿಗೂ ಬದುಕೋ ಸಮಾನ ಹಕ್ಕಿದೆ. ಸಂವಿಧಾನ, ಕೋರ್ಟು ಹೇಳ್ದಂಗೆ ನಾವೆಲ್ಲ ಕೇಳ್ಬೇಕೇ ಹೊರ್ತು ಜಾತಿ ಪಂಚಾಯ್ತಿ ಸೇರ್ಸೋ ಹಂಗೇ ಇಲ್ಲ. ಇಲ್ಲಿ ದೇವಿ ಅವ್ರದೇನೂ ಅಪರಾಧ ನಡೆದಿಲ್ಲ. ಹಿಂಗೆ ಜಾತಿ ಪಂಚಾಯ್ತಿ, ಬಹಿಷ್ಕಾರ ಹಾಕೋದೆಲ್ಲ ಕಾನೂನು ಪ್ರಕಾರ ಅಪರಾಧ. ದೇವಿ ಮತ್ತವರ ಮಗಳೇನಾದ್ರೂ ನೀವಿಲ್ಲಿ ಕೂತಿರೋ ಇಂತಿಂಥೋರು ಹೀಗಂದ್ರು ಅಂತ ಪೋಲೀಸ್ ಕಂಪ್ಲೇಂಟು ಕೊಟ್ಟರೆ, ಮಹಿಳಾ ಸಂಘಟನೆಯೋರೇನಾರ ಬಂದ್ರೆ ನೀವೆಲ್ಲ ಒಳಗೋಗ್ತಿರ, ನೆನಪಿಟ್ಕಳಿ’ ಎಂದು ಕೀರಲು ದನಿಯಲ್ಲಿ ಹೇಳಿದಾಗ ಪಂಚಾಯ್ತಿ ಹಿರಿಯರೆಲ್ಲ ಬೆಚ್ಚಿಬಿದ್ದರು. ಕೋರ್ಟು, ಪೊಲೀಸು ಎಂಬ ಎರಡೇ ಪದ ಅವರಿಗೆ ಅರ್ಥವಾಗಿದ್ದು. ಕಾಲ ಬದಲಾಗಿ ಕೆಟ್ಟೋಗಿದೆ ಅಂತ ಮೊದಲೇ ಅರ್ಥಮಾಡಿಕೊಂಡಿದ್ದವರು, ಇವನ್ಯಾವ ಪೋರ ಇವ, ಎಲ್ಲೋ ಓದಕ್ಕೋಗಿ ನಾಕಕ್ಷರ ಕಲ್ತು ಬಂದು ಈಗ ತಮಗೇ ಬುದ್ಧಿಮಾತು ಹೇಳ್ತಾ ಇದಾನೆ ಎಂದು ಅರ್ಧ ಸಿಟ್ಟಿನಲ್ಲಿ, ಅರ್ಧ ಗಾಬರಿಯಲ್ಲಿ ಹೊರಡಲು ಎದ್ದರು.

ಅವನು ಹೇಳಿದ ಮಾತುಗಳಲ್ಲಿ ಕೆಲ ಪದಗಳು ಅರ್ಥ ಆಗದೇ ಹೊಸಾ ಬೈಗುಳ ಕಲಿತು ಬಂದಿದಾನೆ ಅಂತಲೆ ತಿಳಿದ ತಿಮಪ್ಪಜ್ಜ, `ತಮಾ, ನಿನಪ್ಪನೇ ಅಲ್ಲಿ ಸುಮ್ನೆ ಕೂತಿದಾನೆ, ನಿಂದೆಂಥದ? ಸುಮ್ನುಳಿ. ತಪ್ಪು ಕಾಣ್ಕೆ ಅಂತ ನಾಕಾಣೆ ಹಾಕಿ ಕೈಮುಗುದ್ರೆ ಆಗೋಗ್ಲಿಲ್ಲ. ಅಷ್ಟು ಸುಲಭಾದ್ರೆ ನಾಳಿಂದ ಎಲ್ಲಾರೂ ಯಾರ್ಯಾರಿಗೋ ಬಸುರಾಗಿ ಮಕ್ಳ ಹೆತ್ತು ಐದತ್ತು ರೂಪಾಯ್ ತಪ್ಪುಗಾಣ್ಕೆ ಕಟ್ಟಿ ಇದ್ದು ಬಿಟ್ಟಾರು. ಹಂಗಾದ್ರೆ ಕೇರಿ ಮರ್ವಾದೆ ಎಲ್ಲಿ ಉಳಿತು? ಕುಲದ ಮಾನ ಏನಾತು? ಮಾರಿ ಮ್ಯಾಲೆ ಈಗಷ್ಟೆ ನಾಕ್ ಕೂದ್ಲು ಮೂಡಿರೋ ನಿಮಗದೆಲ್ಲ ತಿಳೆಂಗಿಲ್ಲ, ಆ ಕಡೆ ಹೋಗಿ ಸುಮ್ ಕೂಡ್..’ ಎಂದು ಗದರಿದ. ಅಜ್ಜನ ದೊಡ್ಡ ಗಡಸು ಸ್ವರಕ್ಕೆ ಆ ತರುಣ ಮಹೇಶ ಒಮ್ಮೆ ಸುಮ್ಮನಾಗಿ ಕಾಲು ಕುಣಿಸುತ್ತ ಆಚೆ ನಿಂತುಕೊಂಡರೂ ಪತ್ರಿಕೆ, ಪೊಲೀಸು, ಮಹಿಳಾ ಸಂಘಟನೆ ಅಂತ ಅಪಾಯಕಾರಿ ಪದಗಳನ್ನೆಲ್ಲ ಹೇಳಿದ್ದು ಕೇಳಿ ಇನ್ನು ಇಲ್ಲೇ ಕೂತರೆ ತಾವೂ ಸ್ಟೇಷನ್ನಿಗೆ ಹೋಗಬೇಕಾದ ಪರಿಸ್ಥಿತಿ ಬರುವುದು ಎಂದುಕೊಂಡು ಜನ ಗುಸುಗುಸು ಮಾತಾಡಿಕೊಳ್ಳುತ್ತ ಎದ್ದರು. ಬಡವಾತಿ ಬಡವಳೂ, ದುಡಿಮೆಯ ದಾರಿಗಳೆಲ್ಲ ಮುಚ್ಚಿ ಹೋಗಿರುವವಳೂ ಆದ ಜಾತಿಭ್ರಷ್ಟ ದೇವಿ ಕಣ್ಣೀರು ಸುರಿಸಿ ಬೇಡಿಕೊಂಡಾಳು ಎಂದು ಜನ ನಿರೀಕ್ಷಿಸಿದ್ದರೆ, ಅವಳೋ ಮೈಮೇಲೆ ಚೌಡಿ ಬಂದವಳಂಗೆ ಮಾತನಾಡಿದಾಗಲೇ ಅರ್ಧ ಜನರ ಬಾಯಿ ಕಟ್ಟಿಹೋಗಿತ್ತು. ಈಗ ನೋಡಿದರೆ ಪೋಲೀಸು ಗೀಲೀಸು ಎಂದು ಮಾತನಾಡುವ ಪೋರನ ಮಾತಿಗೆ ಮತ್ತಷ್ಟು ಜನ ಬಾಯಿ ಮುಚ್ಚಿಕೊಂಡರು. ಹೀಗೆ ಪಂಚಾಯ್ತಿಗಾಗಿ ಸೇರಿದ್ದ ಜನವೆಲ್ಲ ಕಟ್ಟೆ ಬಿಟ್ಟು ಪೇಟೆ, ಸಾರಾಯಿ ಅಂಗಡಿ, ಕೇರಿಮಕನಾಗಿ ಒಬ್ಬೊಬ್ಬರು ಒಂದೊಂದು ದಿಕ್ಕಾಗಿ ನಿಧಾನ ಚದುರತೊಡಗಿದರು.

ಅಮ್ಮನೋರೇ ಈ ಪೋರನ ವೇಷ ಹಾಕ್ಕಂಡು ಬಂದರಾ ಹೆಂಗೆ ಎಂದು ದೇವಿಗೆ ಅನಿಸಿಹೋಯಿತು. ಆದರೆ ಕೇರಿಯ ಗಂಡುತಲೆಗಳಿಗೆ ಅವನ ಮಾತು ಅರ್ಥವಾಗುವುದಿಲ್ಲವೆಂದೂ ಕೂಡಲೇ ಹೊಳೆಯಿತು. ತನ್ನ ಹಳೇ ಕೊಡೆಯನ್ನು ಜತನವಾಗಿ ಕಂಕುಳಲ್ಲಿರಿಸಿಕೊಂಡವಳೇ ಎದ್ದು ದೇವಿ ಹೊರಟಳು. ಕಾಲೆಳೆಯುತ್ತ ಹೊರಟ ಅವ್ವಿಯನ್ನು ನಡುದಾರಿಯಲ್ಲಿ ಬಂದು ಕೂಡಿಕೊಂಡ ಸುಬ್ಬಿ ಒಮ್ಮೆ ಕೆಮ್ಮಿ ತಾನು ಬಂದೆನೆಂದು ಸಾರಿದಳು. ಇನ್ನೇನು ಈಗ ಮಳೆ ಸುರಿದು ಹೋಗುವುದೇನೋ ಎಂಬ ಹಾಗೆ ಆಕಾಶವಿಡೀ ಕಪ್ಪಾಗಿ ದೂರದಲ್ಲೆಲ್ಲೋ ಗುಡುಗುವ ಶಬ್ದ ಕೇಳತೊಡಗಿತ್ತು. ಕಟ್ಟೆಯಿಳಿದು, ಗುಡ್ಡೆಯಿಳಿದು ನಿಧಾನ ಗದ್ದೆ ಬಯಲಿಗೆ ತೆರೆದುಕೊಂಡವರಿಗೆ ಖಾಲಿ ಗದ್ದೆಹಾಳೆಗಳ ನಡುವೆ ಹಸಿರು ಮುಕ್ಕಿಸುತ್ತ ಇದ್ದ ಅಗೆ ಸಸಿಗಳು ಹೊಸ ಆಸೆ ಹುಟ್ಟಿಸುವಂತೆ ಕಂಡವು. ಇನ್ನೇನು ಎರಡು ದೊಡ್ಡ ಮಳೆ ಬಿದ್ದರೆ ಸಸಿನೆಟ್ಟಿ ಶುರು. ನೆಟ್ಟಿಗೆ ಕಾದು ನಿಂತ ತಿಮ್ಮಪ್ಪ ನಾಯ್ಕರ ಗದ್ದೆ ಹಾದು ಸಂಜೆಯ ತಂಪನ್ನೆಲ್ಲ ಕಣ್ಣು ಕಿವಿ ಹೊಟ್ಟೆಯಲ್ಲಿ ತುಂಬಿಕೊಳ್ಳುವವರಂತೆ ನಿಧಾನ ನಡೆದರು. ಈ ಬಾರಿ ಕೊಯ್ಲಿಗೆ ಮಶೀನು ಬಂದು ಕೊಚ್ಚು ಭತ್ತಕ್ಕೆ ಕಲ್ಲುಹಾಕಿ ರೇಶನ್ನಿನ ಅಕ್ಕಿಯನ್ನೇ ನೆಚ್ಚಿಕೊಳ್ಳುವಂತಾಗಿತ್ತು. ಹಾಗಿರುವಾಗ ಬರಲಿರುವ ದಿನಗಳ ಕೈತುಂಬ ಕೆಲಸ, ಚೀಲ ತುಂಬುವ ಭತ್ತದ ಕಲ್ಪನೆಗೆ ಅಬ್ಬೆಮಗಳ ನರನಾಡಿಗಳು ಹುರಿಗೊಂಡವು.

ಆದರೆ ಯಾರ ನೆಲದಲ್ಲಿ ಎಷ್ಟು ಗೇಯ್ದರೇನು? ಒಂದು ಮೆಟ್ಟು ನೆಲ ನನ್ನದೆನ್ನಲು ಬರುವುದೇ ಎಂಬ ಹತಾಶೆಯ ಜೊತೆಗೇ ಒಂದು ನಿರ್ಧಾರ ದೇವಿಯ ಮನದಲ್ಲಿ ಹಣಕಿಕ್ಕಿತು. `ಈ ಗದ್ದೆತೋಟ ಗೇಯು ಚಾಕ್ತಿ ಏನುಪಯೋಗಿಲ್ಲ. ಎಷ್ಟ್ ಗೇದ್ರು ನಾಕ್ ಕಾಸು ಉಳೆಂಗಿಲ್ಲ. ಇನ್ನು ನೆಟ್ಟಿಗು ಮಿಶಿನು ಬತ್ತದಂತೆ. ಬೇರೆ ಏನಾದ್ರೂ, ದುಡಿಮಿ ಆಗಂಥದು ಮಾಡ್ಲೇಬೇಕು. ಎಲ್ರ ಕಣ್ಣು ಹೊಟ್ ಹೋಗುಹಂಗೆ ಬದುಕ್ಬೇಕು’ ಎಂಬ ಹಂಬಲ ಗಟ್ಟಿಯಾಗತೊಡಗಿತು.

`ಅಕ್ಕಾ’ ಎಂದಂತಾಯಿತು. ಮಹೇಶ ಹಿಂದೆ ಬರುತ್ತಿದ್ದ.

`ನೀವು ಅವ್ರಿಗೆ ಸರ್ರಿ ಹೇಳಿದ್ರಿ. ಪಂಚಾತಿ ಗಿಂಚಾತಿ ಅಂತ ಅವರ ಒಪ್ಗೆ ಯಾಕೆ ಕೇಳಕ್ ಹೋದ್ರಿ? ಒಂದು ಹೆಣ್ಣಿಗೆ ಒಂದು ಗಂಡು ಕೂಡ್ಸಕ್ಕೆ ಯಾರ್ಯಾರದೋ ಒಪ್ಗೆನ? ಅವಳಿಗೆ ಮತ್ತು ಗಂಡಿಗೆ ಇಷ್ಟ ಇದ್ರೆ ಹೇಳಿ, ನಾವು ರಿಜಿಸ್ಟ್ರ ಮದುವೆ ಮಾಡ್ಸಿಕೊಡ್ತೇವೆ. ಇವರು ಇಲ್ಲೇ ಪಂಚಾಯಿತಿ ಮಾಡ್ತಾ ಕೂತಿರ್ಲಿ’ ಎಂದ.

ದೇವಿಗೆ ಏನು ಮಾತಾಡುವುದೂ ಕಷ್ಟವಾಯಿತು. `ಹೆಣ್ಣುಗಂಡು ಒಪ್ಗೆ ಏನಿಲ್ಲ. ನಾ ದಿನಾ ನೋಡೋ ಹುಡ್ಗ ಒಬ್ನಿದ್ದ, ಅಂವಂಗೇ ಕೊಡಬೌದು ಅಂತ ನಂಗೇ ಅನಸಿತ್ತು ಅಷ್ಟೆ ತಮಾ. ಅನು ಆಪತ್ತು ಅಂದ್ರೆ ಬೇಕಾದೀತು ಕೇರಿಜನ ಅಂತ ಪಂಚಾತಿಗೆ ಹೋದ್ದು. ಸಾಯ್ಲಿ ಅವುನ್ ತಕ ಏನ್ಮಾಡ್ತಿ? ಅವನಲ್ಲದಿದ್ರೆ ಬೇರೆ ಗಂಡಿಲ್ವ? ಅತ್ವ ಗಂಡು ದಿಕ್ಕಿಲ್ದೆ ಕೂಳು ಬೇಸಿರೆ ಏನ್ ತಿಂಬುಕಾಗಲ್ವ? ಅದಿರಲಿ ತಮಾ, ನೀ ಯಾರ..’ ಎಂದಳು.

`ನಾನು ಮಕ್ಕಿಕೇರಿ ಸುಬ್ರಾಯನ ಮಗ ಮಹೇಶ. ಶಾಲೆ ಕಲಿಲಿಕ್ಕೆ ಅಂತ ಆರನೆತ್ತೆ ಆದ ಕೂಡ್ಲೇ ಊರು ಬಿಟ್ಟು ನವೋದಯ ಸೇರ್ದೆ. ನಿಮಗೆ ಮರ್ತು ಹೋಗಿರಬೌದು. ಈಗ ಮಳಗಿಲ್ಲಿ ಮಾಸ್ತರ ನೌಕ್ರಿಲಿದಿನಿ. ಸುಬ್ಬಿ ನಂಗಿಂತ ಎರಡು ಕ್ಲಾಸು ಕಡಿಮೆ ಇದ್ಲು..’

ಅವರ ಮಾತು ಬೆಳೆಯುತ್ತ ಹೋದಹಾಗೆ ಈ ಅವ್ವಿಮಗಳು ಅಂಬೊ ಎರಡು ಹೆಣ್ಣಾಳುಗಳು ಎಷ್ಟು ಕೆಲಸ ಗೇಯ್ದರೂ ಬರುವ ಪುಟಗೋಸಿ ಹಣ ಕೂಳಿಗೂ ಕಡಿಮೆ ಅಂತ ಮಹೇಶನಿಗೆ ತಿಳಿಯಿತು. ಹೊರಗಿನ ಕೆಲಸಕ್ಕೆ ಹೋದ್ರೆ ಇಬ್ರೂ ಹೋಗ್ಬೇಕು, ಮಗಳೊಬ್ಬಳನ್ನೇ ಕಳಿಸೋದು ಅಷ್ಟು ಚಲೋ ಅಲ್ಲ ಎಂಬ ಭಾವನೆ ದೇವಿಯದ್ದು. ಮಗಳ ಕಾದುಕೊಳ್ಳೋ ಸಲುವಾಗಿ ಅರ್ಧಕ್ಕರ್ಧ ಕೆಲಸ ಬಿಟ್ಟು ಕೂತಿದ್ದಳು. ಕೊನೆಗೆ ಮದುವೆ, ಬಹಿಷ್ಕಾರದ ವಿಷಯಕ್ಕೆ ತಲೆಬಿಸಿ ಮಾಡದೇ ದುಡಿಮೆ ಸುಧಾರಿಸಿಕೊಳ್ಳುವಂತಹ ಏನಾದರೂ ಮಾಡುವಂತೆ ಹೇಳಿದ. ಗೇರು ಫ್ಯಾಕ್ಟರಿ ಕೆಲಸ, ಕಾಯಿಸುಳಿ ಫ್ಯಾಕ್ಟರಿ ಕೆಲಸ, ಒಂದೆರೆಡು ದನ ಸಾಕಿ ಹಾಲು ಮಾರುವುದು, ಮಲ್ಲಿಗೆ ಗಿಡ ಬೆಳೆಸುವುದು ಹೀಗೆ ಹತ್ತು ಹಲವು ದಾರಿಗಳ ಕಣ್ಣೆದುರು ಬಿಡಿಸಿ, ದುಡ್ಡು ಒಟ್ಟಾದ್ರೆ ಜಾತಿ ಜನ ತಾವೇ ಹತ್ರ ಬರ್ತಾರೆ ಎಂದೂ ಹೇಳಿದ.

ಅವತ್ತಿನ ಪಂಚಾಯ್ತಿ ಮಾತುಗಳು ಹಾಗೂ ಆ ಹುಡುಗನ ಸಲಹೆ ಎರಡೂ ದೇವಿ ತಲೆಹೊಕ್ಕು ಕುಳಿತವು. `ಈ ಪೋರ ಹೇಳಿದಂಗೆ ವಡೇರ ಮನೆ ಗೇಯುದ್ ನಿಲಸಿ ನಾಕು ಕಾಸು ಗಳಿಸೋ ಹಂಗೆ ಏನು ಮಾಡಬೋದು? ವರ್ಷಗಟ್ಲೆ ಅವ್ರ ಮನೇಲಿ ದುಡಿದ್ರು ಬರೀ ಅರವತ್ತೊಂದ್ರುಪಾಯಿ ಉಳಿಸಕ್ಕೆ ಆಗಿದ್ದು ಅಂದ್ರೆ ಜೀವಮಾನ ಇಡೀ ದುಡದ್ರು ನೂರ್ರುಪಾಯಿ ಮಕ ಕಂಡೇವಾ ನಾವು? ರಕ್ತ ನೀರಾಗಂಗೆ ಬೆವರು ಹರಿಸಿದ್ರು ತಂಗಳು ದ್ವಾಸೆ, ಮೀನು ಗಸಿ ತಿನ್ನುದು ಬಿಟ್ಟು ಯಾವ ಐಬೋಗ ಅನುಬೈಸಿದ್ವಿ? ಬೇರೆ ಏನಾದ್ರೂ ಮಾಡ್ಲೇಬೇಕು’ ಎಂಬ ಗುಂಗಿಹುಳ ಕೊರೆಯತೊಡಗಿತು. ಈ ಯೋಚನೆ ಅವಳ ಮನದಲ್ಲಿ ಗಟ್ಟಿಯಾಗಿ ಹೊಕ್ಕಿದ್ದೇ ನಂತರ ಯಾವುದೂ ಕೇಳಿಸದೇ, ಕಾಣಿಸದೇ ಹೋಯ್ತು..

***

ಇದೆಲ್ಲ ನಾಕು ವರ್ಷದ ಕೆಳಗಿನ ಕತೆ..

ಜಾತಿ ಪಂಚಾಯ್ತಿಯಾದ ಮೇಲೆ ದೇವಿಯ ಮೈಯಲ್ಲಿ ದೆಯ್ಯವೋ ಅತವ ಎಂಥದೋ ಒಂದು ಕೀಳೋ ಹೊಕ್ಕಿಬಿಟ್ಟಿದೆ ಎಂದೇ ಜನ ಮಾತಾಡುತ್ತಿದ್ದರು. ಅತವ ಆವಾಗೀವಾಗ ಊರಿಗೆ ಬಂದಾಗೆಲ್ಲ ಅವಳ ಮನೆಗೆ ಬಂದುಹೋಗುವ ಮಹೇಶನ ಕಿತಾಪತಿಯೂ ಇರಬಹುದೆಂದೂ ಆಡಿಕೊಳ್ಳುತ್ತಿದ್ದರು. ಅವಳೀಗ ವಡೇರ ಮನೆ ಕೆಲಸಕ್ಕೆ ಹೋಗುವುದಿಲ್ಲ. ಯಾರ ಮನೆಯ ತಂಗಳನ್ನೂ ತಿನ್ನುವುದಿಲ್ಲ. ತನ್ನ ಬಿಡಾರದಿಂದ ಮಾರುದೂರ ಮೇಲೆ ಗುಡ್ಡೆಯಲ್ಲಿ ನಾಕೈದು ಗುಂಟೆ ಜಾಗದಲ್ಲಿ ಎಂಭತ್ತು ಭಟಕಳ ಮಲ್ಲಿಗೆ ಹೂವಿನ ಗಿಡ ನೆಟ್ಟು ಕಣ್ಗಾವಲಲ್ಲಿ ಬೆಳೆಸುತ್ತಿದ್ದಾಳೆ. ಅವಳಿಗೂ, ಅವಳ ಮಗಳು ಸುಬ್ಬಿಗೂ ಮಲ್ಲಿಗೆ ಬನದಲ್ಲಿ ಕೈತುಂಬ ಕೆಲಸ. ಮೊದಲೆರೆಡು ವರ್ಷ ಗಿಡದಲ್ಲಿ ಅಷ್ಟೇನೂ ಹೂವು, ಮೊಗ್ಗು ಕಾಣದೇ ದೇವಿಯ ಹೂಬನವನ್ನು ಎಲ್ಲ ಹಿಂದಿಂದ ಆಡಿಕೊಂಡಿದ್ದರು. ಆದರೆ ಈಗೆರೆಡು ವರ್ಷದಿಂದ ಸಗಣಿ ಗೊಬ್ರ, ಬಳಚು, ಕರಡ, ಅಡ್ಕೆ ಸಿಪ್ಪೆ ಇತ್ಯಾದಿ ಗೊಬ್ಬರ ಎನಿಸಿದ್ದನ್ನೆಲ್ಲ ತಂದು ಗಿಡದ ಬುಡದಲ್ಲಿ ದೇವಿ ಹರಡಿದ ಮೇಲೆ ಚಳಿ, ಬೇಸಿಗೆ ಕಾಲದಲ್ಲಿ ಗಿಡದಲ್ಲಿ ಎಲೆ ಕಾಣದಂಗೆ ಮೊಗ್ಗು ಸುರಿಯುತ್ತಿದೆ. ಬಾಳೆಬರೆ ಊರಿನ ಕಾರ್ಯಕಟ್ಲೆಗೆ, ಮದುವೆ ಪೂಜೆಗೆ ಈಗ ದೇವಿಯ ಹೂವೇ. ಅಮ್ಮನೋರ ಮನೆ ಭಟ್ಟರು ದಿನಾ ಬೆಳಿಗ್ಗೆ ದೇವಳಕ್ಕೆ ಹೋಗುವಾಗ ಎರಡು ಚಂಡೆ ಹೂವನ್ನು ಅವಳ ಮನೆಯಿಂದಲೇ ಒಯ್ಯುತ್ತಾರೆ. ಕಡಿಮೆ ಕ್ರಯದ್ದೂ, ಒಳ್ಳೆಯ ಮಾಲೂ, ಸುಲಭಕ್ಕೆ ಸಿಗುವಂಥದೂ ಆಗಿರುವುದರಿಂದ ಜಾತಿಗೀತಿ ಮಕ ನೋಡದೇ ಬಸುರು, ಬಾಣಂತನ, ಮದುವೆ, ದೇವಕಾರ್ಯ ಅಂತ ಎಲ್ಲಕ್ಕೂ ದೇವಿಯ ಹೂವಿಗೆ ಜನ ಜೋತುಬಿದ್ದಿದ್ದಾರೆ.

ಹೀಗಿರುತ್ತ ಯಾವುದೋ ವಾಸನೆ ಹಿಡಿದು ಒಂದು ದಿನ ಫಾರೆಸ್ಟ್ ಗಾರ್ಡ್ ಸುರೇಶ ಬಂದು, `ಇದು ನಿಂದಾ ಜಾಗ? ಯಾರ್ ಕೇಳಿ ಗಿಡ ಹಾಕ್ದೆ? ಯಾರ್ ಕೇಳಿ ಬೇಲಿ ಹಾಕ್ದೆ? ಜಾಗದ ಆರ್ಟಿಸಿ ತೋರ್ಸು’ ಎಂದು ಜಬರಿಸಿ ಗಿಡ ಕೀಳಲು ಮುಂದಾದ. ಆಗ ದೇವಿ ಸಾಲ್ಕಣಿ ಚೌಡಮ್ನೇ ಮೈಮೇಲೆ ಬಂದಂಗೆ ಕೂಗಾಡಿದಳು. `ಅದು ಯಾರಪ್ಪಂದೂ ಅಲ್ಲದ ಬೇಣ. ನೀವ್ ಬೆಳೆಸುದ್ ಗಿಡನೇ, ನಾನ್ ಬೆಳೆಸಿದ್ದೂ ಅದ್ನೇ. ನಾಯೇನ್ ಇದು ನನ್ನ ಆಸ್ತಿ ಅಂತ ಹೇಳ್ತಿದಿನ? ಅದನ ನನ್ನ ಕಬ್ಜಾ ಮಾಡ್ಕೊಡಿ ಅಂತ ಕೇಳತಿದಿನ? ನಿನ ಹೇಂತಿಗೆ ಬೇಕಾರೆ ಇಕಾ ಇದೊಂದು ದಂಡೆ ಹ್ಞೂಂಗು ಕೊಡು, ಸೂಡ್ಕಳ್ಳಿ. ಅದು ಬಿಟ್ಟು ಮಲಿಗೆ ಗಿಡಗೋಳ ಕಿತ್ತೆ ಅಂದ್ರೆ ಸುಮ್ನಿರಲ್ಲ, ಇವತ್ತೇ ಧರ್ಮಸ್ತಳಕೆ ಹುಯ್ಲು ಕೊಟ್ ಬತ್ತೆ. ಒಡೆದಿಕ್ಳು ಎಕ್ರೆಗಟ್ಲೆ ಕಾಡು ಸವರಿ ತೋಟ ಮಾಡ್ಕಂಡಿದ್ದು ಕಂಡ್ರೂ ಅವ್ರು ಕೊಟ್ ಉಪ್ಪುನಕಾಯ್ ನೆಕ್ಕಂಡು ಸುಮ್ನಿರ್ತಿಯ, ಈಗ ನಾನೂ ನನ್‍ಮಗಳೂ ನಾಕು ಮಲಿಗಿ ಗಿಡ ನೆಟ್ರೆ ಯಾರಪ್ನ ಗಂಟು ಹೋತು? ಒಂದು ವರಸ, ಒಂದೇ ವರಸ ನೋಡ್ತಿರು. ಅಷ್ಟ್ರಾಗೆ ಮಾಲ್ಕಿ ಜಾಗ ತಗಂಡ್ ಅಲ್ಲೇ ಮಲ್ಗೆ ತ್ವಾಟ ಮಾಡ್ತೆ. ಅಲ್ಲೀತಂಕ ನೀಯೇನಾರ ಗಿಡಕೆ ಕೈ ಹಚ್ಚಿ ಕಿತ್ತಾಕಿದ್ರೆ, ಅಬ್ಬೆಮಗಳು ನಿನ್ ಹೆಸ್ರೇಳಿ ಅಳ್ಳಿಮರಕೆ ನೇಣಾಕ್ಕಂಡು ಜೈಲಿಗ್ ಕಳಸ್ತೀವಿ ನೋಡು..’ ಎಂದು ಅಬ್ಬರಿಸಿದ್ದಳು. ಅವಳ ಬಾಯಿಗೆ ಹೆದರಿ ನಾಕು ಗುಂಟೆ ಜಾಗ ತಾನೇ, ತಕರಾರು ಅರ್ಜಿಗಿರ್ಜಿ ಬಂದರೆ ನೋಡಿದರಾಯ್ತು ಎಂದುಕೊಂಡ ಸುರೇಶ ಬಾಳೆಲೆಯಲ್ಲಿ ಅವಳು ಸುತ್ತಿಕೊಟ್ಟ ಮಲ್ಲಿಗೆ ದಂಡೆ ಹಿಡಿದು ಹೋದವನು ಮತ್ತೆ ಆ ಕಡೆ ಬಂದಿರಲಿಲ್ಲ.

ಹೀಗೆ ಮಲ್ಲಿಗೆ ಗಿಡದಿಂದ ಕಾಸು ಕೈಸೇರತೊಡಗಿ ಅದರ ದೇಖರೇಖೆಯೇ ದೇವಿಯ ಫುಲ್ ಟೈಂ ಕೆಲಸವಾಯಿತು. ಬೆಳಗಾಗುವುದರಲ್ಲಿ ಕೇರಿಯ ಇತರ ಹೆಣ್ಣುಮಕ್ಕಳು ದರಕು, ಸೊಪ್ಪು ಎಂದು ಕತ್ತಿ, ಹಗ್ಗ, ಕಲ್ಲಿಯೊಂದಿಗೆ ಹೊರಬೀಳುವಾಗ ದೇವಿ ಮಲ್ಲಿಗೆ ಬನದಲ್ಲಿ ಮೊಗ್ಗು ಕೊಯ್ಯುವುದನ್ನು ಅವರು ನೋಡುತ್ತಾರೆ. ಅವಳ ಮೇಲೆ ಮೆಚ್ಚುಗೆಯೋ, ಹೊಟ್ಟೆಯುರಿಯೋ ಎಂಥದೂ ಗೊತ್ತಾಗದ ಭಾವ ಅವರನ್ನು ಮುತ್ತುತ್ತದೆ. ಗೇಯಲು ಬಿಸಿಲಿಗೆ ಹೋಗದೇ ಅಬ್ಬೆ ಮಗಳು ಇಬ್ಬರಿಗೂ ಚಲೋ ಬಣ್ಣ ಬಂದಿದೆಯೆಂದು ಮಾತಾಡಿಕೊಳ್ಳುತ್ತ ಬೆಳಬೆಳಿಗ್ಗೆಯೇ ಕಾಲಿನ ಹೆಬ್ಬೆರಳಿಗೆ ಬಾಳೆನಾರು ಸಿಗಿಸಿ ದಂಡೆ ನೇಯುವ ಅವರನ್ನು ನೋಡಿ ಮುಂದೆ ಸಾಗುತ್ತಾರೆ. ಹಣ್ಣಡಕೆಯ ಕೊಳೆತ ವಾಸನೆ, ಕೊಟ್ಟಿಗೆ ಸಗಣಿ ಗಮಲಿನ ತಮ್ಮ ಕೆಲಸಕ್ಕಿಂತ ಗಮಗಮಿಸುವ ದೇವಿಯ ಕೆಲಸ ಮೇಲಲ್ಲವೆ ಎಂದು ಕೆಲವರಿಗಾದರೂ ಅನಿಸಿದೆ. ಜೊತೆಗೆ ಈಗ ಗದ್ದೆ ಕೆಲಸಕ್ಕೆ ಮಶೀನು ಬಂದು ನೆಟ್ಟಿ-ಕಳೆ-ಕೊಯ್ಲಿನ ಕೆಲಸವಿಲ್ಲದೆ ದುಡಿಮೆಯ ಹೊಸದಾರಿ ಹುಡುಕಿಕೊಳ್ಳಬೇಕಾದವರಿಗೆ ದೇವಿಯ ಮಲ್ಲಿಗಿ ಬನದ ಕನಸು ಬೀಳತೊಡಗಿದೆ.

ಬೆಳಿಗ್ಗೆ ಹತ್ತು ಗಂಟೆಯ ತನಕ ಅವ್ವಿಮಗಳ ಹೆಣಿಗೆ ಸಾಗುತ್ತದೆ. ಹತ್ತು ಗಂಟೆಗೆ ಹೂವಿನಂಗಡಿ ಕಮ್ತೀರೇ ಜನ ಕಳಿಸಿ ಹೂ ತರಿಸಿಕೊಳ್ಳುತ್ತಾರೆ. ಅವಳ ಮನೆ ಗೋಡೆಯ ಮೇಲೆ ಗೀಟಿನ ಲಿಪಿಯಲ್ಲಿ ಯಾವ ದಿನ ಎಷ್ಟು ಪೂಟು ಹೂವಿನ ಚಂಡು ಕೊಟ್ಟೆ ಎಂಬ ಲೆಕ್ಕ ಜಮೆಯಾಗಿರುತ್ತದೆ. ವಾರ, ತಿಂಗಳಿಗೊಮ್ಮೆ ಹಣ ಬಟವಾಡೆಯಾಗಿ ಸುಬ್ಬಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಮಲ್ಲಿಗೆ ಕಳಿಸಿದ ಮೇಲೆ ಮನೆಗೆಲಸ, ಉಳಿದ ಕೆಲಸ ಶುರು. ನಂತರ ಇಡೀ ದಿನ ಒಬ್ಬರಲ್ಲ ಒಬ್ಬರು ಮಲ್ಲಿಗೆ ಗಿಡಗಳ ನಡುವೆ ಕೈತೂರಿಸಿ ಕಳೆಯೋ, ಗೊಬ್ಬರವೋ, ಅಂತೂ ಎಂಥದೋ ಒಂದನ್ನು ಮಾಡುತ್ತಿರುತ್ತಾರೆ. ಗುಡ್ಡೆಗೆ ಹೋಗಿ ಮೇಯುವ ದನಗಳ ಸಗಣಿ ಹೆಕ್ಕುತ್ತಲೋ, ಕಳೆ ಕೀಳುತ್ತಲೋ, ಗಿಡ ಕತ್ತರಿಸಿ ಪಾತಿ ಮಾಡುತ್ತಲೋ, ನೀರು ಹೊತ್ತು ಹಾಕುತ್ತಲೋ ಅಂತೂ ಇಡೀ ದಿನ ದೇವಿ ಮಲ್ಲಿಗೆ ಗಿಡಗಳ ನಡುವೆ ಕಳೆಯುತ್ತಾಳೆ.

10bygನೂರಾರು ರೂಪಾಯಿಗಟ್ಟಲೆ ದುಡ್ಡು ಎಣಿಸೇ ಗೊತ್ತಿರದ ದೇವಿ ಈಗ ಸಾವಿರದ ಮುಖ ಕಾಣತೊಡಗಿದ್ದಾಳೆ. ಒಂದು ತಿಂಗಳು ಕಮ್ತೀರು `ದೇವೀ, ಮಹಾಪ್ರಾಣ ಮಾರುತಿ ನಂಗೆ ಕಣ್ಬಿಟ್ಟ. ಈ ತಿಂಗಳು ಮಲ್ಲಿಗೆ ಹೂಂಗಗೆ ಭಾರೀ ರೇಟ್ ಬಂದದೆ, ಯಾವ ಸೀಜನ್ಗು ಇಷ್ಟ್ ದರ ಬಂದಿರ್ಲಿಲ್ಲ. ಇಕಾ’ ಎಂದು ತಾವೇ ಬಂದರು. `ಮತ್ಯಾರ್ಗೂ ಹಾಕ್ಬೇಡ, ಮತ್ತೆ ಎಷ್ಟಿದ್ರೂ ನಂಗೇ ಬೇಕು ಏನು? ಬೇಕರೆ ಎಡ್ವಾನ್ಸ್ ಕೊಡ್ತೆ’ ಎಂದು ಕೊಟ್ಟೆ ಇಟ್ಟು ಹೋದರು. ಆ ತಿಂಗಳ ಹೂವಿನ ಲೆಕ್ಕ ಎಂದು ಅವರಿತ್ತ ಕೊಟ್ಟೆಯ ದುಡ್ಡನ್ನು ಸುಬ್ಬಿ ಎಣಿಸಿ ನೋಡುತ್ತಾಳೆ, ಇಪ್ಪತ್ತೊಂದು ಸಾವಿರ! ದೇವಿಗೆ ನಂಬಲಿಕ್ಕೇ ಆಗಲಿಲ್ಲ. ಇಷ್ಟು ಮಲ್ಲಿಗೆ ಗಿಡ ನೆಟ್ಟು ಇಷ್ಟು ಸಂಪಾದಿಸಬಹುದೆಂದು ಅವಳು ಕನಸು ಮನಸಲ್ಲೂ ಎಣಿಸಿರಲಿಲ್ಲ. ಅವಳ ಕಾಳಜಿಯ, ನಿಯತ್ತಿನ ಕೆಲಸ ನೋಡಿ ಕಮ್ತೀರಿಗೂ ಹೊನ್ನಾವರ ಪೇಟೆಗೋಗಿ ಹೂವಿನ ವ್ಯಾಪಾರ ಶುರುಮಾಡುವ ಹುಕಿ ಬಂದುಬಿಟ್ಟಿದೆ. `ಆಚಿಕೇರಿ ಕೆಲ ಹೆಣ್ಮಕ್ಕೊ ಹೂವು ತಗಂಡು ಹೋದವು ಪರತ್ ಬಂದು ಕೇಳ್ಕಂಡ್ ಹೋದ್ವು. ನಿನ ಕೈಗೆ ಮಣ್ಣಿನ ಸಾಲಾವಳಿ ಚಲೋ ಇದೆ. ಹೆಂಗಿದ್ರೂ ಚಲೋ ಗಿಡ ಎಬಿಸಿದೀ. ಮಲಿಗಿ ಗಿಡದ ಕಸಿ ಮಾಡುದ್ ಕಲ್ತು ಗಿಡದ ಮಾರಾಟ ಶುರು ಮಾಡು. ಕೇರಿ ಮ್ಯಾಲೆ ಗದ್ದೆ ಕೆಲ್ಸಿಲ್ಲದೆ ಕೂತಿರೊ ಹೆಣ್ಣಾಳ್ಗೆಲ್ಲ ಗಿಡ ಕೊಟ್ ಹೂವು ಬೆಳದ್ರೆ ನಾಕು ಜನ್ರಿಗೆ ಉಪ್ಕಾರ ಮಾಡ್ದಂಗೂ ಆಯ್ತದೆ, ನಿಂಗೂ ಫಾಯ್ದೆ. ವಿಚಾರ್ ಮಾಡು’ ಎಂದು ಮತ್ತೊಂದು ಆಸೆ ಹಚ್ಚಿ ಹೋದರು. ವ್ಯಾಪಾರಿ ಬುದ್ಧಿಯೇ ಆದರೂ ನಿಯತ್ತಿನ ಹಿರಿಯರೆಂದು ಹೆಸರಾಗಿದ್ದ ಕಮ್ತಿಯವರ ಬಳಿ ತನಗಾಗಿ ಮಾಲ್ಕಿ ಜಾಗ ನೋಡಿ ಕ್ರಯಕ್ಕೆ ಕೊಡಿಸಬೇಕೆಂದು ಕೇಳಿದಾಗ, ಬಿಟ್ಟುಬಂದ ಕೇರಿಯ ಅವಳ ಮೂಲಮನೆಗೆ ಹೋದರೆ ಅದರ ಸುತ್ತಲ ಜಾಗ ಬಳಸಿಕೊಳ್ಳಬಹುದು ಎಂದವರು ಸೂಚಿಸಿದರು. ದೇವಿಗೂ ಹೌದಲ್ಲ, ಹತ್ತು ಗುಂಟೆ ಜಾಗ ಏಕೆ ಬಿಡಬೇಕೆನಿಸಿತು.

ಇದೇ ಹೊತ್ತಿಗೆ ಮಳಿಗಿಯಿಂದ ಬಂದ ಮಹೇಶ ಒಮ್ಮೆ ತನ್ನ ಜೊತೆ ಯಾರನ್ನೋ ಕರೆತಂದ. ಬಂದವರು ದೇವಿ ಮತ್ತು ಸುಬ್ಬಿ ಮಲ್ಲಿಗೆ ತೋಟದಲ್ಲಿ ಕೆಲಸ ಮಾಡುವ, ಹೂವು ಕೀಳುವ, ದಂಡೆ ನೇಯುವ ಫೋಟೋಗಳ ಪಟಪಟ ಕ್ಲಿಕ್ಕಿಸಿದರು. ಅವರಿಬ್ಬರ ಬಳಿ ಎಂತೆಂಥದೋ ಪ್ರಶ್ನೆಗಳ ಕೇಳಿದರು. ಸ್ವಲ್ಪ ದಿನದಲ್ಲೇ ಅದು ಯಾವುದೋ ಪೇಪರಲ್ಲಿ ಬಂದು ಓದಿದವರು ತಂದು ತೋರಿಸಿದಾಗ ಅಕ್ಷರ ತಿಳಿಯದ ದೇವಿ, ಸುಬ್ಬಿ ಖುಷಿಯಾದರು.

ಕೈಲಿ ಸೇರತೊಡಗಿದ ದುಡ್ಡು ದೇವಿಗೆ ಒಮ್ಮೆ ಕೇರಿಗೆ ಹೋಗಬೇಕೆಂಬ ಹುಕಿ ಕೊಟ್ಟಿತು. ತಾನು ಇಪ್ಪತ್ತೈದು ವರ್ಷ ಕೆಳಗೆ ಬಿಟ್ಟುಬಂದಿದ್ದ ಬಿಡಾರವನ್ನು ಚೊಕ್ಕ ಮಾಡಿಸಿ, ಅಲ್ಲೇ ಯಾಕೆ ಇರಬಾರದು ಎನಿಸಿತು. ಅವತ್ತು ಸುಬ್ಬಿ, ದೇವಿ ಕೇರಿಯೊಳಗೆ ಕಾಲಿಟ್ಟಿದ್ದೇ ಒಂದೆರೆಡು ಮುಖಗಳು ಇಣುಕಿನೋಡಿದವು. ಯಾರ ಮನೆಯೆದುರೂ ನಿಲ್ಲದೇ, ಅಕ್ಕಪಕ್ಕ ನೋಡದೇ ಅವ್ವಿಮಗಳು ಸರಸರ ನಡೆದರು. `ದೇಯಿ’ ಎಂಬ ಧ್ವನಿ ಬಂದದ್ದೇ ತಿರುಗಿ ನೋಡಿದರೆ ಮುಲ್ಲೆಮನೆಯ ಕಮಲಕ್ಕ. ದೇವಿಯ ಗಂಡ ಬದುಕಿದ ಕಾಲಕ್ಕೇ ಜಗಳವಾಗಿ ಮಾತು ಬಿಟ್ಟವಳು ಈಗ್ಯಾಕೆ ಕರೆಯುತ್ತಿದ್ದಾಳೋ! ಅವಳೇನಾದರೂ ಅನ್ನಲಿ, ಸರೀ ಉತ್ತರ ಹೇಳಿ ಬಾಯಿ ಮುಚ್ಚಿಸುತ್ತೇನೆಂದು ದೇವಿ ಉಗುಳು ನುಂಗಿ ಗಂಟಲು ಸರಿಮಾಡಿಕೊಳ್ಳುತ್ತಿರುವಾಗಲೇ, ಮೆಲ್ಲ ಹತ್ತಿರ ಬಂದ ಕಮಲಿ, `ಮಲಿಗಿ ಹೂಂಗಿನ ಯಾಪಾರದಾಗೆ ಭಾರೀ ಫಾಯ್ದೆ ಮಾಡಿದೀ ಅಂತ ಹೇಳ್ತ್ರಲೆ, ನಂಗೂ ಈಗ ಮನೇಲಿ ಚಾಕ್ರಿ ಗೇಯುದು ಕಷ್ಟಾಗದೆ. ಒಂದೇ ಸಮ ಕೂತ್ ಕೂತು ಅಡಿಕೆ ಸುಲಿಯದೂ ಕಟೀಣ. ಅಲ್ದೆಯ ಸಂದುವಾತ. ಒನ್ನಾಕು ಮಲ್ಗಿ ಅಂಟು ಕೊಟ್ರೆ ಹಚಕತಿದ್ದೆ, ಕೊಡ್ತಿದ್ಯೇ? ಮನಿಗ್ ಬಾರ, ಚಾ ಕುಡದು ಹೋಗುವಂತಿ’ ಎಂದಳು.

ದೇವಿಗೆ ಇದ್ದಕ್ಕಿದ್ದಂತೆ ತಾನು ಬೆಳೆದು ಏ..ತ್ತರವಾದ ಹಾಗೆ ಅನಿಸತೊಡಗಿತು. ಕಮ್ತೀರು ಹೇಳಿದಂತೆ ಗಿಡಕಸಿ ಶುರುಮಾಡಿ ಕೇರಿಯವರಿಗೆಲ್ಲ ಹೂವಿನ ದಂಧೆ ಹಚ್ಚಬೇಕು ಅನಿಸಿ ಕಮಲಕ್ಕನ ಬಳಿ ಎರಡು ಒಳ್ಳೆ ಮಾತಾಡಿದಳು.

ಅವರು ಬಿಟ್ಟುಹೋದ ಕೇರಿ ಮನೆ ಪಾಳು ಸುರಿಯುತ್ತಿತ್ತು. ಆ ಗುಡ್ಲಿನ ತಳ ನೋಡುವಾಗ ಗಂಡ ದಮ್ಮೆಳೆಯುತ್ತ, ನಿದ್ರೆಯಿರದೆ ರಾತ್ರಿ ಕಳೆಯುತ್ತಿದ್ದದ್ದು ನೆನಪಾಯಿತು. ಆದರೆ ಈಗ ನೋಡಿದರೆ ಅಲ್ಲಿರುವುದು ಸಾಧ್ಯವೇ ಇಲ್ಲ ಎನಿಸಿಹೋಯಿತು. ಅದಷ್ಟನ್ನೂ ಅಳಿದು ಹೊಸತನ್ನೇ ಕಟ್ಟಬೇಕು. ಕಮ್ತೀರನ್ನು ಕೇಳಿ ಯಾರಾದರೂ ಚಲೋ ಗಾವಡಿ ಹತ್ತಿರ ಎಂಥ ಗಾಳಿಮಳೆಗೂ ಹಂದಾಡದ ಸಿಮೆಂಟಿನ ಮನೆ ಕಟ್ಟಬೇಕು, ತಮ್ಮ ಜಾಗದ ಸುತ್ತೂ ಕಂಪೌಂಡು ಹಾಕಬೇಕು ಎಂಬ ನಿರ್ಧಾರ ಗಟ್ಟಿಯಾಯಿತು.

***

ಮಹೇಶ ಬಂದುಹೋಗತೊಡಗಿ ದೇವಮ್ಮನ ಮಗಳು ಸುಬ್ಬಿ ಯಾನೆ ಸವಿತ ಅಕ್ಷರ ಕಲಿತು ಓದುವಂತಾಗಿದ್ದಾಳೆ. ಈ ಮಳೆಗಾಲದ ನೆರೆಗೆ ತಮ್ಮ ಬಿಡಾರದ ನೆಲ ತೀಡಲು ಶುರುಮಾಡುವುದರೊಳಗೆ ಹೊಸ ಮನೆ ಕಟ್ಟಿ ಮುಗಿಸುವ ಇರಾದೆ ದೇವಿಗೆ. `ಮಲ್ಲಿಗೆ ಬೆಳೆಗಾರರ ಸ್ತ್ರೀ ಶಕ್ತಿ ಸಂಘ’ದವರಿಗೆಲ್ಲ ಅವಳು ಕಸಿ ಮಾಡಿಕೊಟ್ಟ ಗಿಡದ ಹೂಂಗಿನಿಂದ ಎಷ್ಟು ಫಾಯ್ದೆ ಬಂದಿದೆ ಎಂದರೆ ಅವರೆಲ್ಲ ಮಲ್ಲಿಗೆ ಯಾಪಾರ ಹಿಡಿಸಿದ ದೇವಿಯನ್ನು ಪಂಚಾಯ್ತಿ ಎಲೆಕ್ಷನ್ನಿಗೆ ನಿಲಿಸುವ ಮಾತಾಡುತ್ತಿದ್ದಾರೆ. ಎಲ್ಲ ಹೆಂಗಸರೂ ದೇವಮ್ಮನ ಹಂಗೇ ಕಾಸು ಗಳಿಸಿ ಗನಸ್ಥ ಕುಳಗಳೇ ಆಗಿಬಿಟ್ಟರೆ ಕಡೆಗೆ ತಂತಮ್ಮ ಹೆಂಡಿರ ಕಾಲು ಕಟ್ಟುವುದು ಹೇಗೆಂದು ಕೊಟ್ಟೆಸಾರಾಯಿ ಅಂಗಡಿಯಲ್ಲಿ ಕೇರಿ ಗಂಡಸರ ಚರ್ಚೆ ಕಾವೇರುತ್ತಿದೆ.

ದೇವಿ ಬೆಳೆಯುತ್ತಲೇ ಇದ್ದಾಳೆ, ದೇವಮ್ಮನಾಗಿ; ಸುಬ್ಬಿ ಬೆಳೆಯುತ್ತಿದ್ದಾಳೆ, ಸವಿತಳಾಗಿ; ಬೆಳೆಯುತ್ತಿದ್ದಾರೆ ಇಬ್ಬರೂ, ಅಂಗಳದ ಮಲ್ಲಿಗೆ ಗಿಡಗಳ ಸಾಕ್ಷಿಯಾಗಿ..
ಪದಾರ್ಥ:
ತೀಡತೊಡಗು = ಅಳು, ಒದ್ದೆಯಾಗು; ನೆಗಸು = ಪ್ರವಾಹ; ಶಿವಾಯಿ = ಹೊರತಾಗಿ;ಏಕಸಾನ = ಒಮ್ಮೆಗೇ; ಹರ್ಗಿಸೆ = ಖಂಡಿತಾ; ಕಿಟ್ಟುವುದು = ಮುಟ್ಟುವುದು

 

Leave a Reply

Your email address will not be published.