ಮಲೆನಾಡ ಒಡಲುರಿ-1: ಸಾರಾಯಿ ಮಾರಾಟ ಮಾಡಲು ಪರವಾನಿಗಿ ನೀಡುತ್ತಾರೆ

-ಲತಾ ಕಂಚೇನಹಳ್ಳಿ.

Latha Kanchenahalliಮಲೆನಾಡಿನ ಒಡಲೊಳಗೆ ಹುಟ್ಟಿ ಬೆಳೆದ ಲತಾ ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯವರು. ಲತಾ ಕಡುಕಷ್ಟಗಳನ್ನು ಮೆಟ್ಟಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆ ಕೈಗೊಂಡಿದ್ದಾರೆ. ಇದೀಗ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲಿ `ಕನ್ನಡ ಮಹಿಳಾ ವಿಚಾರ ಸಾಹಿತ್ಯ: ಮಹಿಳಾ ಪ್ರಶ್ನೆಗಳು’ ಎಂಬ ವಿಷಯವಾಗಿ ್ಲ ಸಂಶೋಧನೆ ಮಾಡುತ್ತಿದ್ದಾರೆ. ಲತಾ ಅವರು ಮಲೆನಾಡಿನ ದುಡಿಯುವ ವರ್ಗದ ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದು ಅವರ ಅನುಭವಕ್ಕೆ ದಕ್ಕಿದ ಮಲೆನಾಡು ರಮಣೀಯವಾದದ್ದಲ್ಲ. ಅಲ್ಲಿನ ಕಡುವಾಸ್ತವಗಳನ್ನು ಒಡಲುರಿಯಿಂದ ಕಂಡವರು. ಹಾಗಾಗಿ ತನಗೆ ದಕ್ಕಿದ ಮಲೆನಾಡಿನ ಚಿತ್ರಗಳನ್ನು ಅನಿಕೇತನಕ್ಕೆ ಬರೆಯುತ್ತಾರೆ.

ಒಡಲುರಿ-1
ಮಲೆನಾಡು ಎಂದರೆ ಸುಂದರವಾದ ಮತ್ತು ಪ್ರಶಾಂತವಾದ ಪ್ರವಾಸಿತಾಣ. ಇಲ್ಲಿ ಸುರಿಯುವ ಮಳೆ, ಮಂಜುಕವಿದ ವಾತಾವರಣ, ಮೈಮನ ತಣಿಸುವ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಮನಸೂರೆಗೊಳಿಸುತ್ತದೆ. ಇಲ್ಲಿನ ಬೆಟ್ಟ-ಗುಡ್ಡಗಳು, ಜಲಾಶಯ, ವನ್ಯಜೀವಿಗಳು, ದಟ್ಟಡವಿ ಹೀಗೆ ಹಲವು ಬಗೆಯ ಸೌಂದರ್ಯದ ಖಣಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವುದೇ ಒಂದು ವಿಸ್ಮಯ. ಇಂತಹ ಮಲೆನಾಡನ್ನು ಕವಿಗಳು, ಲೇಖಕರು, ಸಾಹಿತಿಗಳು, ಅತ್ಯಂತ ವರ್ಣರಂಜಿತವಾಗಿ ಚಿತ್ರಿಸಿ ಅದಕ್ಕೆ ಮತ್ತಷ್ಟು ಮೆರಗನ್ನು ಹೆಚ್ಚಿಸುತ್ತಾರೆ/ಹೆಚ್ಚಿಸುತ್ತಿದ್ದಾರೆ. ಸುಂದರವಾದ ಹೆಣ್ಣಿಗೆ ಅಲಂಕಾರ ಮಾಡಿದರೆ ಹೇಗೆ ಮತ್ತಷ್ಟು ಆಕರ್ಷಣೆ ಹೆಚ್ಚಿಸಿಕೊಂಡು ಅಂದವಾಗಿ ಕಾಣುತ್ತಾಳೆಯೋ ಹಾಗೆಯೇ ಸಾಹಿತಿಗಳು ಮಲೆನಾಡನ್ನು ಅಲಂಕರಿಸಿ, ಜೀವನದಲ್ಲಿ ಒಮ್ಮೆಯಾದರು ಮಲೆನಾಡನ್ನು ನೋಡಬೇಕೆಂಬ ಹಂಬಲವನ್ನು ಹುಟ್ಟಿಸುತ್ತಾರೆ.

odaluಈ ಮಲೆನಾಡ ಸೌಂದರ್ಯವನ್ನು ಜೀವನದಲ್ಲಿ ಒಂದೊಮ್ಮೆಯಾದರೂ ಕಣ್ತುಂಬಿಕೊಳ್ಳಬೇಕೆಂಬ ಆಸೆ ಬರದೆ ಇರದು. ಆ ಸೌಂದರ್ಯದ ಸವಿಯನ್ನು ಮನಪೂರ್ವಕವಾಗಿ ಆನಂದಿಸಿ ತೃಪ್ತಿ ಪಡಬೇಕೆಂಬ ತುಡಿತ ಒಂದು ಕ್ಷಣಕ್ಕಾದರೂ ಹೊಳೆಯದೆ ಇರಲಾರದು. ಇಲ್ಲಿನ ಸೌಂದರ್ಯವನ್ನು ನೋಡಬೆಕೆನ್ನುವವರಲ್ಲಿ ಅಲ್ಲಿನ ಜನ ಸಾಮಾನ್ಯರ ಜೀವನ ಚಿತ್ರಣ ಕಾಣಿಸುವುದು ಕೆಲವರಿಗಷ್ಟೆ. ಮಲೆನಾಡನ್ನು ಎಗ್ಗಿಲ್ಲದೆ ಹೊಗಳುವ ಇವರಿಗೆ ಇದರೊಳಗೆ ಅಡಗಿ ಉರಿಯುತ್ತಿರುವ ಬೆಂಕಿಜ್ವಾಲೆ, ನೋವು, ಅಸಮಾನತೆ, ಹಸಿವು, ಬಡತನ ಯಾವುದೊಂದೂ ಕಾಣಿಸದು. ಮೇಲ್ನೋಟಕ್ಕೆ ತಂಪಾಗಿಯೇ ಕಂಡರೂ ತನ್ನ ಒಡಲೊಳಗಿನ ಕಿಚ್ಚನ್ನು ಇಟ್ಟುಕೊಂಡೇ ತಮ್ಮ ಬದುಕನ್ನು ಸಾಗಿಸುತ್ತಿರುವುದು ಇಲ್ಲಿನ ಜನರ ದುರಂತ ಕಥೆಯಾಗಿದೆ.

ಇಲ್ಲಿನ ಭೂಮಾಲಿಕರ ದರ್ಪ, ದೌರ್ಜನ್ಯ, ಶೋಷಣೆಗಳು ಯಾರಿಗೂ ಕಾಣದಂತೆಯೇ ನಡೆದು ಹೋಗುತ್ತಿದೆ. ಒಂದು ವೇಳೆ ಅದು ಕಂಡರೂ ಸಹ ಪ್ರತಿಭಟಿಸದ ಸ್ಥಿತಿ ಇಲ್ಲಿನ ಕೆಳವರ್ಗದ ಅಥವಾ ದುಡಿಯುವ ವರ್ಗದ ಜನರದ್ದು. ಇವರ ಕರಾಳ ಜೀವನ ಹೇಳಿದರೆ ತೀರದಂತಿದೆ. ಕೆಳಸ್ಥರದ ಮಹಿಳೆಯರ ಜೀವನವಂತೂ ಅಬ್ಬಾ……! ಹೇಳಲು ಅಸಾಧ್ಯ. ಇಲ್ಲಿ ದುಡಿಯುವ ವರ್ಗದ ಮಹಿಳೆಯರು ಇರುವುದೇ ಶೋಷಕರ ಬೋಗದ ವಸ್ತುವಾಗಿ. ಅವಳ ಆಸೆ-ಆಕಾಂಕ್ಷೆ, ಅವಳ ಇಷ್ಟ-ಕಷ್ಟಗಳಿಗೆ ಇಲ್ಲಿ ಅವಕಾಶವಿಲ್ಲ. `ಚೋಮನ ಬೆಳ್ಳಿ’ ಗಿಂತಲೂ ಇಲ್ಲಿನ ಮಹಿಳೆಯರ ಸ್ಥಿತಿ ನಿಕೃಷ್ಟ ಎಂದು ಹೇಳಿದರೂ ಬಹುಶಃ ತಪ್ಪಾಗಲಾರದು.
ಎಣ್ಣೆಯನ್ನೇ ಕಾಣದ ತಲೆ, ಹೊಟ್ಟೆ ತುಂಬ ಊಟವಿಲ್ಲದೆ ಟೊಳ್ಳಾಗಿರುವ ಬಡಕಲು ದೇಹ, ಕಾಲಿಗೆ ಚಪ್ಪಲಿಯ ಸ್ಪರ್ಶವೇ ಇಲ್ಲದ ಒರಟು ಪಾದಗಳು, ಗುಂಡಿಯಲ್ಲಿಯ ಕಲ್ಮಷ ನೀರನ್ನೇ ಕುಡಿದು ಇನ್ನಷ್ಟು ಆರೋಗ್ಯ ಹದಗೆಟ್ಟವರೂ, ಹೀಗಿದ್ದೂ ತಮ್ಮ ಮಕ್ಕಳ ಭವಿಷ್ಯದ ಮುಂದೆ ಇದ್ಯಾವುದು ಇವರಿಗೆ ಲೆಕ್ಕವೇ ಇಲ್ಲ.

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಬಡತನದಿಂದ ಮುಕ್ತಿ ಹೊಂದಿಸಬೇಕೆನ್ನುವ ಆಸೆ ಮತ್ತು ಕನಸು ಹೊತ್ತವರು ಇವರು. ಅದರಲ್ಲಿಯೇ ತಮ್ಮ ಸುಖವನ್ನು ನಿರೀಕ್ಷಿಸುತ್ತ ತಮ್ಮೆಲ್ಲ ನೋವನ್ನ ಮರೆಮಾಚಿಕೊಳ್ಳುವರು. ಬಡತನವನ್ನೇ ಹಾಸಿ ಹೊದ್ದಿರುವ ಇವರ ಮಕ್ಕಳು ಶಾಲೆಗೆ ಹೋಗುವುದಾದರು ಹೇಗೆ?!. ಶಾಲೆಗೆ ಹೋಗಬೇಕಾದರೆ ಸುಮಾರು ಎರಡರಿಂದ ಮೂರು ಮೈಲಿದೂರ ನಡೆದು ಸಾಗಿ ಶಾಲೆಯನ್ನು ತಲುಪಬೇಕು. ಇವರು ಹೋಗುವ ಸಂದರ್ಭದಲ್ಲಿ ಯಾವುದೇ ಅನಾಹುತಕ್ಕೆ ತುತ್ತಾದರೂ ಅದು ಯಾರಿಗೂ ತಿಳಿಯಲಾರದು. ಇಂಥ ಪರಿಸ್ಥಿತಿಯಲ್ಲಿ ಓದು ಮುಗಿಸುವ ಮಕ್ಕಳು ಕೆಲವೇ ಕೆಲವು ಮಂದಿ. (ಈಗೀಗ ಈ ಎಲ್ಲಾ ಸ್ಥಿತಿಯನ್ನು ಅರಿತ ಪೋಷಕರು ನಗರಗಳಲ್ಲಿ ತಮ್ಮ ಮಕ್ಕಳನ್ನು ವಸತಿ ನಿಲಯಕ್ಕೆ ಕಳಿಹಿಸುತ್ತಾರೆ).

ಎಷ್ಟೋ ಪ್ರತಿಭಾವಂತ ಮಕ್ಕಳು ಇಲ್ಲಿ ಮನೆಯ ಪಾಲಾಗಿದ್ದಾರೆ. ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದು, ಇವರ ಪಾಲಿಗೆ ಭೂಮಾಲಿಕರ ಎಸ್ಟೇಟುಗಳೇ ಶಾಲೆಗಳಾಗಿವೆ. ಅಲ್ಲಿನ ಭೂಮಾಲಿಕರೇ ಇವರ ಶಿಕ್ಷಕರಾಗಿದ್ದಾರೆ. ಹೀಗಾಗಿ ಇಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಭೂಮಾಲಿಕರ ಬಂಗಲೆಯಲ್ಲಿ ಚಿಕ್ಕ ವಯಸ್ಸಿನ ಹುಡುಗಿಯರನ್ನು ದುಡಿಸಿಕೊಳ್ಳುತ್ತಿರುವುದನ್ನು ನಾವು ಕಾಣಬಹುದು.

ಇನ್ನು ಇಲ್ಲಿನ ಹಳ್ಳಿಗಳಿಗೆ ಹೋಗಬೇಕಂದ್ರೆ ರಸ್ತೆಯ ಸ್ಥಿತಿ ನೋಡಿದರೆ ಸಾಕು ಸಾಕಾಗಿ ಹೋಗುತ್ತದೆ. ಬೇಸಿಗೆಯಲ್ಲಿ ಹೇಗೋ ನಡೆದು ಹೋಗಬಹುದು ಬಿಡಿ, ಆದ್ರೆ ಮಳೆಗಾಲದಲ್ಲಂತೂ ಆ ರಸ್ತೆಯ ಸ್ಥಿತಿಯನ್ನು ನೋಡಲಾಗದು. ಗುಂಡಿ ಬಿದ್ದು ಆ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಗಳು ತಮ್ಮ ಗುರುತನ್ನೇ ಕಳೆದುಕೊಂಡಿರುತ್ತವೆ. ಇನ್ನೂ ಕೆಲವು ಊರುಗಳಿಗೆ ರಸ್ತೆಯ ಸಂಪರ್ಕವೇ ಇಲ್ಲ. ಕಾಡು ಮೇಡಿನ ಕಾಲುದಾರಿಯಲ್ಲೇ ಕಿಲೋಮೀಟರ್‍ಗಟ್ಟಲೆ ದೂರ ನಡೆದೇ ಸಾಗಬೇಕು. ವಾಸ್ತವ ಹೀಗಿರುವಾಗ ಈ ಭ್ರಷ್ಟ ರಾಜಕಾರಣಿಗಳು ಸರ್ಕಾರ ಅಷ್ಟು ಯೋಜನೆಗಳನ್ನು ಕೈಗೊಂಡಿದೆ, ಇಷ್ಟು ಪ್ಯಾಕೇಜ್ ನೀಡಿ ಸುಧಾರಣೆಗೆ ಮುಂದಾಗಿದೆ ಎಂದು ಘಂಟೆ ಗಟ್ಟಲೆ ಭಾಷಣ ಬಿಗಿಯುತ್ತಾರೆ. ಇವರ ಸುಧಾರಣೆಗಳನ್ನು ಕಣ್ಣಾರೆ ಕಂಡರೆ ಬೆಚ್ಚಿ ಬೆರಗಾಗಬೇಕು. ಕುಡಿಯುವುದಕ್ಕೆ ಶುದ್ಧ ನೀರಿಲ್ಲದೆ ಜನರು ಪರದಾಡ್ತಾ ಇದ್ರೆ ಇವರು(ಸರ್ಕಾರ) ಕಲರ್ ಸಾರಾಯಿ ಮಾರಾಟ ಮಾಡಲು ಪರವಾನಿಗಿ ನೀಡುತ್ತಾರೆ.

ಇಲ್ಲಿನ ಭೂಮಾಲಿಕರಿಗೆ ಅನುಕೂಲವಾಗುವಂತೆ ಅವರ ಮನೆಯ ಬಾಗಿಲಿಗೆ ಡಾಂಬರು ರಸ್ತೆ, ಬಡವರಿಗೆ ಬರಬೇಕಾದ ವಿದ್ಯುತ್ ಶ್ರೀಮಂತರ ಮನೆಗಳಲ್ಲಿ ಅನಾವಶ್ಯಕವಾಗಿ ಪೋಲಾಗಿ ಹೋಗುತ್ತಿದೆ. ಹುಲಿಯೋಜನೆಯ ಹೆಸರಿನಲ್ಲಿ ಅಲ್ಲಿನ ದಲಿತರು, ಬುಡಕಟ್ಟು ಜನರು, ರೈತರು, ಕೂಲಿಕಾರ್ಮಿಕರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇವೆಲ್ಲವೂ ಕೂಡ ಮಲೆನಾಡಿಗರಿಗೆ ಸರ್ಕಾರ ಅತ್ಯಂತ (ಅ)ಗೌರವವಾಗಿ ಕೊಡುತ್ತಿರುವ ಸವಲತ್ತಾಗಿವೆ. ಇಂದಿಗೂ ಸಹ ಅಲ್ಲಿನ ಎಷ್ಟೋ ಕುಟುಂಬಗಳು ದೀಪದ ಬೆಳಕಲ್ಲೇ ಜೀವನ ಸಾಗಿಸುತ್ತಿರುವುದು ಅತ್ಯಂತ ಶೋಚನೀಯ.

ಈ ರೀತಿಯಲ್ಲಿ ದುಡಿಯುವ ಜನರಿಗೆ ಸೇರಬೇಕಾದ ಎಲ್ಲಾ ಸವಲತ್ತುಗಳನ್ನು ತಮ್ಮ ಮನೆಯಬಾಗಿಲಿಗೆ ತರಿಸಿಕೊಂಡು ನುಂಗಿ ನೀರುಕುಡಿಯುವ ಅಲ್ಲಿನ ಶ್ರೀಮಂತವರ್ಗ, ಪ್ರಭುತ್ವದೊಂದಿಗೆ ಕೈಜೋಡಿಸಿ ಕೂಲಿ-ಕಾರ್ಮಿಕರನ್ನು ಮತ್ತಷ್ಟು ಶೋಷಿಸುತ್ತಾ ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಕೂಲಿಗೆ ತಕ್ಕ ವೇತನ ನೀಡದೆ ವಂಚಿಸುತ್ತಾ ನಿರ್ಧಿಷ್ಟ ಅವಧಿಗಿಂತಲೂ ಹೆಚ್ಚು ದುಡಿಸಿಕೊಳ್ಳುತ್ತಾ, ಕೊನೆಗೆ ಅವರಲ್ಲಿದ್ದಂತಹ ಒಂದೊಂದು ರಕ್ತದ(ಶ್ರಮದ)ಹನಿಯನ್ನೂ ಬಿಡದೆ ಇಂಚಿಂಚಾಗಿ ಹೀರಿ ಹಿಪ್ಪೆ ಮಾಡುತ್ತದ್ದಾರೆ. ಇಂತಹ ಸಂಕಷ್ಟದಲ್ಲಿ ಜೀವನ ಸಾಗಿಸಿದರೂ ಕೂಡ ಅಲ್ಲಿನ ದುಡಿಯುವ ವರ್ಗದ ಜನರು ತಮ್ಮ ಯಜಮಾನನೇ ದೇವರು, ಅವರೇ ನಮಗೆ ಜೀವನ(ಆರ್ಥಿಕವಾಗಿ) ಕೊಡುವವರು ಎಂದು ಪೂಜ್ಯನೀಯ ಸ್ಥಾನದಲ್ಲಿಯೇ ನೋಡುತ್ತಾರೆ. ಶ್ರೀಮಂತರು ಭೂಮಾಲಿಕರು ಒಂದಕ್ಕೆ ಹತ್ತು ಪಟ್ಟು ಬಡ್ಡಿ ಸೇರಿಸಿ ಹಣವನ್ನು ಕೊಟ್ಟಿಲ್ದೆ ಇದ್ದರೂ ಕೊಟ್ಟಿದ್ದೇವೆ ಎಂದು ವಾದಿಸಿ ಇವರ ಜೀವಮಾನವಿಡೀ ತಮ್ಮ ಜೀತದಾಳಾಗಿಯೆ ಉಳಿಸಿಕಳ್ಳುವ ಹುನ್ನಾರ ನಡೆಸುತ್ತಾರೆ. ಪಾಪ! ಇದು ಆ ಮುಗ್ದ ಜನರಿಗೆ ಹೇಗೆ ಅರ್ಥವಾಗಬೇಕು ಹೇಳಿ? ಬಡವರ ಜಮೀನುಗಳೆಲ್ಲವನ್ನ ಕಬಳಿಸಿಕೊಂಡು ತಮ್ಮ ಸ್ವತ್ತನ್ನಾಗಿ ಮಾಡಿಕೊಳ್ಳುವುದರ ಜೊತೆಗೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಐದರಿಂದ ಹತ್ತು ಸಾವಿರ! ಎಕರೆವರೆಗೂ ತಮ್ಮ ಭೂಮಿಯನ್ನು ವಿಸ್ತರಿಸಿಕೊಂಡು ಬಂಡವಾಳಿಗರಾಗಿದ್ದಾರೆ/ಆಗುತ್ತಿದ್ದಾರೆ.

unnಹಗಲೆಲ್ಲ ದುಡಿದು ಬಂದರೂ ಸಹ ಒಪ್ಪತ್ತಿನ ಕುಳಿಗಾಗಿ ನರಳುತ್ತಾ ಜೀವನದ ಬಂಡಿಯನ್ನು ಮುನ್ನಡೆಸುತ್ತಾ ಬದುಕುತ್ತಿದ್ದಾರೆ. ಇವರ ಜೀವನ ಒಂದು ರೀತಿಯಲ್ಲಿ ನೀರಮೇಲಿನ ಗುಳ್ಳೆಯಂತೆ. ಇವರು ದುಡಿಯುವ/ ಕೂಲಿ ಮಾಡುವ ಸಂದರ್ಭದಲ್ಲಿ ಪ್ರಾಣಿಗಳಿಂದ ಪ್ರಾಣ ಹಾನಿಯಾದರೂ ಯಾವುದೇ ರಕ್ಷಣೆಯಾಗಲಿ, ಪರಿಹಾರಗಳಾಗಲಿ ಇಲ್ಲ. ಅಯ್ಯೋ..ಮೂಲಭೂತ ಸೌಲಭ್ಯವೆ ಇಲ್ಲವೆಂದಾಗ ರಕ್ಷಣೆಯ ಮಾತೆಲ್ಲಿ ಬಿಡಿ. ಜನಸಾಮಾನ್ಯರನ್ನು ಯೋಜನೆಯ ಹೆಸರಿನಲ್ಲಿ ಒಕ್ಕಲೆಬ್ಬಿಸುವ ದಾರಿಗಳು ಆಳುವ ವರ್ಗಕ್ಕಿರುವಾಗ ಇಲ್ಲಿನ ಜನರಿಗೆ ಸೌಲಭ್ಯವಾದರು ಹೇಗೆ ಸಿಗಬೇಕು? ಹೀಗಿರುವಾಗ ಜನರ ರಕ್ಷಣೆಯು ಕನಸಿನ ಮಾತೇ ಸರಿ. ಬರೀ ಹೆಣ್ಣು ಮಕ್ಕಳಿದ್ದ ಕುಟುಂಬಗಳಂತೂ ಕಣ್ಣೀರು ಹಾಕುವ ಸ್ಥಿತಿ ಈಗಲೂ ತಪ್ಪಿಲ್ಲ. ದುಡಿಯುವ ವರ್ಗದವರಿಗೆ ಹೆಣ್ಣು ಹುಟ್ಟಿದರೆ ಮತ್ತೊಂದು ಆತಂಕ.
’ಹೆಣ್ಣು ಮನೆಯ ಕಣ್ಣು’ ಎಂಬ ಸಾಮಾನ್ಯ ವಾಡಿಕೆ ಇದೆ. ಆದರೆ ಇಲ್ಲಿನ ಜನರಿಗೆ ಹೆಣ್ಣು ಮಗು ಯಾಕಾದ್ರು ಹುಟ್ಟಿತೋ ಎಂಬ ಆತಂಕ. ಆಕೆ ಯಾರ ಬಲಿಪಶುವಾಗಿಬಿಡುವಳೋ ಎಂಬ ಭಯ. ಒಂದು ವೇಳೆ ಅದೇ ಹೆಣ್ಣು ಮಗು ವಿದ್ಯೆ ಕಲಿತು ಸಮಾಜದಲ್ಲಿನ ಸ್ಥಿತಿಗತಿಗಳನ್ನ ಒಂದಷ್ಟು ತಿಳಿದುಕೊಂಡು ದಿಟ್ಟೆಯಾದರೆ ಆ ಹೆಣ್ಣು ಮಗಳನ್ನ ನೋಡುವ ದೃಷ್ಟಿಕೋನವೇ ಬೇರೆ. ಆಕೆಗೆ ಇನ್ನಿಲ್ಲದ ಸಂಬಂಧದ ಸರಮಾಲೆ ಸೃಷ್ಟಿಸಿ, ಸಮಸ್ಯೆಗಳ ಸರಪಳಿಯೊಳಗಿನಿಂದ ಹೊರಗೆ ಬರಲಾರದಂತೆ ಬಂಧಿಸುತ್ತಾರೆ.

ಪ್ರಸ್ತತ ಸಂದರ್ಭದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಳುವ ಸರ್ಕಾರಗಳು ಎಷ್ಟು ಯೋಜನೆಗಳನ್ನು ಹಾಕಿಕೊಂಡರು ಹಾಗು ಜಾರಿಮಾಡಿದರೂ ಅದು ಲೆಕ್ಕಕ್ಕೆ ಸಿಗದೆ ಬಂಡವಾಳಿಗರ ಬತ್ತಳಿಕೆಯನ್ನು ಸೇರುತ್ತಿವೆಯೆ ವಿನಃ ಬಡವರಿಗೆ ಯಾವುದೇ ಪ್ರಯೋಜನ ವಿಲ್ಲ. ಸಂಕ್ರಾಂತಿ ನಾಟಕದಲ್ಲಿ ‘ಉಜ್ಜ ಹೇಳುವಂತೆ; ರಾಮ ಬಂದರೂ ರಾಗಿ ಬೀಸೋದು ತಪ್ಪೋಲ್ಲ’ ಎಂಬ ಸ್ಥಿತಿ ಈ ಮಲೆನಾಡಿನಲ್ಲಿ ಮುಂದುವರೆದುಕೊಂಡೇ ಬಂದಿದೆ ಮತ್ತು ಬರುತ್ತಿದೆ. ಈಗ ಹೇಳಿ ಮಲೆನಾಡೆಂದರೆ ಕೇವಲ ಕಣ್ಣಿನ ತಂಪೆ…? ಅದನ್ನು ಹೀಗೆ ಹೇಳಬಹುದೇನೋ ಮಲೆನಾಡು ಉಳ್ಳವರಿಗೆ ತಂಪು…? ಇಲ್ಲದವರ ಒಡಲುರಿ!!!

6 Responses to "ಮಲೆನಾಡ ಒಡಲುರಿ-1: ಸಾರಾಯಿ ಮಾರಾಟ ಮಾಡಲು ಪರವಾನಿಗಿ ನೀಡುತ್ತಾರೆ"

 1. Hanumesh kavital  June 5, 2016 at 4:33 pm

  ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಮಲೆನಾಡಿನ ಇನ್ನೊಂದು ಮಗ್ಗಲನ್ನು ಪ್ರವಾಸಿಗರಿಗೆ ಪರಿಚಯಿಸಿದ್ದೀರಿ. ನಿಮ್ಮ ಲೇಖನಗಳು ಹೀಗೆ ಮುಂದುವರೆಯಲಿ.
  ಧನ್ಯವಾದಗಳು.

  Reply
 2. ಕುಮಾರಸ್ವಾಮಿ ಬೆಜ್ಜಿಹಳ್ಳಿ  June 10, 2016 at 3:21 pm

  ತಂಗಿ ಲತಾ, ಲೇಖನವೇನೋ ತುಂಬಾ ಚೆನ್ನಾಗಿದೆ. ಬರೆಯುವ ಮನಸ್ಸು ಮಾಡಿರುವ ನಿನಗೆ ಅಭಿನಂದನೆಗಳು. ಈ ಲೇಖನಕ್ಕೆ ಒಂದು ನಿರ್ದಿಷ್ಟವಾದ ಚೌಕಟ್ಟು ಇರಬೇಕಿತ್ತು. ಒಂದೇ ಲೇಖನದಲ್ಲಿ ಎಷ್ಟೊಂದು ಎಳೆಗಳಿವೆ. ಅವನ್ನು ಒಂದೊಂದಾಗಿ ಬಿಡಿಸಿ, ನಿರ್ದಿಷ್ಟ ಚೌಕಟ್ಟಿಗೆ ತಂದುಕೊಂಡ ಅದನ್ನು ನಿನ್ನ ಅನುಭವದ ಮೂಸೆಯಲ್ಲಿ ಅಭಿವ್ಯಕ್ತಿಸಿದರೆ ಅತ್ಯುತ್ತಮ ಲೇಖನಗಳು ನಿನ್ನಿಂದ ಹೊರಬರುತ್ತವೆ. ಬರೆಯುತ್ತಾ ಬರೆಯುತ್ತಾ ತಾನಾಗೇ ಗಟ್ಟಿಗೊಳ್ಳುತ್ತೀಯ.
  ನಿನ್ನ ಅಣ್ಣ
  ಕುಮಾರಸ್ವಾಮಿ ಬೆಜ್ಜಿಹಳ್ಳಿ.

  Reply
 3. lift shoes  June 30, 2016 at 7:43 pm

  I blog quite often and I seriously thank you for your information. This great
  article has truly peaked my interest. I will book mark your website and keep checking for new information about once per week.

  I subscribed to your Feed as well.

  Reply
 4. VictorZChech  July 24, 2016 at 1:34 am

  We’re a team of volunteers and starting a brand new scheme in our community.
  Your web site offered us with valuable info to function on. You’ve done a formidable job and our entire community will
  be grateful for your needs.

  Reply
 5. JacintoIFenk  July 26, 2016 at 1:32 am

  I am just genuinely grateful for the owner with this website that
  has shared this wonderful post at at this particular place.

  Reply
 6. CheriePManon  August 9, 2016 at 10:33 pm

  Wow, superb blog format! How long have you ever been running
  a blog for? you made running a blog look easy.
  The entire glance of your site is wonderful,
  as smartly as the content!

  Reply

Leave a Reply

Your email address will not be published.