ಮತ್ಸೋದ್ಯಮ ಎಂಬ ಮಾರುವೇಷ

ಶಿವಣ್ಣ ಕೆಂಸಿ

ಕಸುಬುಗಳು ಅಂದಿನ ಕಾಲದ ಜನರ ಬದುಕಿನ ಒಂದು ಭಾಗವಾಗಿತ್ತು. ಅದು ಆ ಕಸುಬನ್ನು ನಂಬಿಕೊಂಡಿದ್ದ ಜನರ ಜೀವನಾಡಿಯಾಗಿ ಆ ಸಮುದಾಯದ ಜನರ ಬದುಕಿನ ಆಧಾರಸ್ತಂಭವಾಗಿತ್ತು. ಭಾರತ ದೇಶವು ಅನೇಕ ಸಮುದಾಯಗಳ, ಕಸುಬುಗಳ, ಸಂಸ್ಕøತಿಯ ವೈವಿಧ್ಯ ದೇಶ. ಆದರೆ ಪಾರಂಪರಿಕ ಕಸುಬುಗಳಾವುವು ಇಂದು ತಮ್ಮ ಮೂಲ ರೂಪವನ್ನು ಉಳಿಸಿಕೊಂಡಿಲ್ಲ. ಅವು ಬಂಡವಾಳಗಾರನ ಕೈಮುಷ್ಟಿಗೆ ಸಿಲುಕಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಇಂದು ಬದಲಿ ರೂಪದಲ್ಲಿ ಇರುವುದನ್ನು ಕಾಣಬಹುದು. ಆ ಕಸುಬುಗಳನ್ನು ಅವಲಂಭಿಸಿಕೊಂಡು ಬದುಕುತ್ತಿದ್ದ ಜನರ ಬದುಕು ಬೀದಿಪಾಲಾಗಿರುವುದು ದುರಂತ. ಮೂಲ ಕಸುಬುಗಳು ಆ ಜನಾಂಗದವರ ಹಿಡಿತ ತಪ್ಪಿ ಬಂಡವಾಳಗಾರರ ಕೈಗೆ ಸಿಲುಕಿ ಅದು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ.

ಇತ್ತ ಕಸುಬೆ ತನ್ನ ಜೀವನವೆಂದು ಬದುಕುತ್ತಿದ ಒಂದಷ್ಟು ಜನಾಂಗ ಮೂಲ ಕಸುಬುಗಳಿಂದ ದೂರ ಉಳಿದು, ಇನ್ನೊಂದಷ್ಟು ಜನರು ಬಂಡವಾಳಗಾರರ ಹಿಡಿತಕ್ಕೆ ಸಿಲುಕಿ ಅವರ ಸೂತ್ರದ ಬೊಂಬೆಗಳಂತೆ ನಟಿಸುತ್ತಿರುವುದು ವಿಪರ್ಯಾಸ. ಇನ್ನೊಂದಷ್ಟು ಸಮುದಾಯ ಪರ್ಯಾಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕನ್ನು ನೂಕುತ್ತಿರುವುದು ವಾಸ್ತವದ ಸಂಗತಿಯಾಗಿದೆ.

ಅನೇಕ ಕಸುಬುಗಳಲ್ಲಿ ಮೀನುಹಿಡಿಯುವುದು ಒಂದು ಕಸುಬು. ಅದು ಒಂದು ಜನಾಂಗದ ಬದುಕಿನ ಭಾಗವಾಗಿ ಬಂದಿರುವುದು ನಮಗೆಲ್ಲ ತಿಳಿದ ಸಂಗತಿ. ಬೇಟೆ ಆದಿ ಮಾನವನ ಸ್ಥಿತಿಯಲ್ಲಿ ಆಹಾರ ಪ್ರಧಾನವಾದ ಕಸುಬಾಗಿತ್ತು. ಇದು ಅನಂತರದಲ್ಲಿ ನೀರಿನಲ್ಲಿ ಮೀನನ್ನು ಬೇಟೆಯಾಡುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇನ್ನೂ ಮುಂದೆ ಹೋದಂತೆ ಅದು ಆದಾಯದ ಹಾಗೂ ವ್ಯವಹಾರದ ಉದ್ಯಮವಾಗಿ ಬದಲಾಗಿರುವುದನ್ನು ಕಾಣಬಹುದು. ಈ ಕಸುಬು ಅಷ್ಟೇ ಪ್ರಾಚೀನವಾದ ಕಸುಬು ಎಂಬುವುದರ ಬಗ್ಗೆ ಯಾವುದೇ ಸಂಶಯವಿಲ್ಲ. ಈ ಕಸುಬೆ ಮುಂದೆ ಇವರ ಜೀವನದ ಆಹಾರ, ಆದಾಯ ಎಲ್ಲವೂ ಆದ್ದರಿಂದ ಅದು ಆ ಸಮುದಾಯದ ಜೀವನಾಡಿಯಾಯಿತು.

ಮೀನನ್ನು ಹಿಡಿದು ಬದುಕು ನಡೆಸುವ ಸಮುದಾಯಕ್ಕೆ ಬೆಸ್ತರು ಎಂದು, ಇನ್ನು ಅನೇಕ ಪರ್ಯಾಯ ಹೆಸರುಗಳಿಂದಲೂ ಕರೆಯುತ್ತಾರೆ. ಈ ಸಮುದಾಯಕ್ಕೆ ಇನ್ನೂ ಅನೇಕ ಹೆಸರುಗಳಿಂದ ಆಯಾಯ ಪ್ರಾಂತ್ಯಗಳಿಗೆ ಅನುಗುಣವಾಗಿ ಬದಲಿ ಹೆಸರುಗಳಿಂದು ಕರೆಯುವುದು ರೂಢಿಯಲ್ಲಿದೆ. ಬೆಸ್ತರು ಎಂದ ತಕ್ಷಣ ನೆನಪಿಗೆ ಬರುವುದು ಅವರು ಮಾಡುವ ವೃತ್ತಿ. ಆ ವೃತ್ತಿಯಿಂದಾಗಿಯೆ ಆ ಸಮುದಾಯದ ಜನಾಂಗವನ್ನು ಗುರ್ತಿಸಲಾಗುತ್ತದೆ. ಈ ಸಮುದಾಯದ ಜನಾಂಗವು ತನ್ನ ಮೂಲ ನೆಲೆಯನ್ನು ರಾಮಾಯಣ, ಮಹಾಭಾರತ ಮುಂತಾದ ಪುರಾಣಗಳ ಚರಿತ್ರೆಯಾಚೆಗೆ ತಮ್ಮ ಸಮುದಾಯದ ಚರಿತ್ರೆಯನ್ನು, ಅದರ ಪ್ರಾಚೀನತೆಯನ್ನು ಗುರುತಿಸಿಕೊಳ್ಳತ್ತಾರೆ.

ಈ ಸಮುದಾಯದ ಜನರು ಪ್ರಾರಂಭದ ಹಂತದಲ್ಲಿ ಒಂದಿ ರೀತಿಯ ಅಲೆಮಾರಿ ಸಮುದಾಯ ಎಂದರೆ ತಪ್ಪಾಗಲಾರದು. ಯಾಕೆಂದರೆ ನದಿ, ಸಮುದ್ರ, ಹೊಳೆ, ಕೆರೆಗಳು ಇವರ ವೃತ್ತಿಯ ಮೂಲಗಳಾಗಿತು.್ತ ಆದ್ದರಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದು ಅನಿವಾರ್ಯವಾಗಿತ್ತು. ಈ ಪ್ರದೇಶಗಳಲ್ಲಿ ಬೆಸ್ತ ಸಮುದಾಯದ ಜನರ ನೆಲೆಗಳನ್ನು ಕಾಣಬಹುದು. ಇಂದು ಈ ಸಮುದಾಯದ ಜನರು ವಾಸಿಸುತ್ತಿರುವ ಭೌಗೋಳಿಕ ಸಮೀಕ್ಷೆಯನ್ನು ನೋಡಿದಾಗ ಅದು ತಿಳಿಯುತ್ತದೆ. ನದಿ ಹಂಚಿನಲ್ಲಿ ಇಂದು ಈ ಸುಮುದಾಯದ ಜನಾಂಗ ನೆಲೆಸಿರುವುದನ್ನು ಕಾಣಬಹುದು.
ಆಧುನಿಕತೆಯ ಪ್ರಭಾವದಿಂದಾಗಿ ಈ ಸಮುದಾಯದ ಜನರ ಕಸುಬು ಇಂದು ಆ ಜನಾಂಗದ ಕಸುಬಾಗಿ ಉಳಿದಿಲ್ಲ. ಬಂಡವಾಳಗಾರರ ಹಿಡಿತದಿಂದಾಗಿ ಆ ಸುಮುದಾಯದ ಜನರೆ ತಮ್ಮ ಕಸುಬಿನ ಬಗೆಗೆ ಗೌರವ ಕಳೆದುಕೊಳ್ಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಆಧುನಿಕತೆ ಮತ್ತು ಬಂಡವಾಳಶಾಹಿ ಧೋರಣೆ ಮೀನು ಹಿಡಿಯುವ ಕಸುಬು ಇಂದು ಕಸುಬಾಗಿ ಉಳಿಯದೆ ಅದು ಒಂದು ಉದ್ಯಮವಾಗಿ ಬೆಳೆದು ನಿಂತಿರುವುದು ಆ ಜನಾಂಗದ ಬದುಕನ್ನೆ ನಾಶಮಾಡುವ ಸ್ಥಿತಿಗೆ ತಲುಪಿದೆ. ತನ್ನ ಮನೆಯೊಳಗೆ ತನ್ನ ನೆಲೆಯನ್ನು ಕಳೆದುಕೊಳ್ಳುವ, ತನ್ನ ಅಸ್ಥಿತ್ವಕ್ಕಾಗಿ ಹುಡುಕಾಟ ನೆಡೆಸುವ ಸ್ಥಿತಿಗೆ ತಂದು ನಿಲ್ಲಿಸಿರುವುದು ಈ ಕಾಲದ ದುರಂತ.

ಯಾವ ದೊಣ್ಣೆ ನಾಕಯನ ಅಪ್ಪಣೆಯೂ ಇಲ್ಲದೆ ಸ್ವತಂತ್ರರಾಗಿ ತಮ್ಮ ವೃತ್ತಿಯನ್ನು ತಾವು ಮಾಡುತ್ತಿದ್ದರು. ತಮ್ಮ ವೃತ್ತಿಯಲ್ಲಿ ಒಂದು ಗೌರವನ್ನು ಕಂಡುಕೊಂಡಿದ್ದರು. ಆದರೆ ಇಂದು ಮೂಲ ಕಸುಬುಗಳಾವುವು ಆ ಆತ್ಮ ಗೌರವವನ್ನಾಗಲಿ, ಸ್ವತಂತ್ರವನ್ನಾಗಲಿ ಇಂದು ಉಳಿಸಿಲ್ಲ. ಅದರ ಬದಲು ಆ ಜನಾಂಗವನ್ನು, ಅವರ ಕಸುಬುಗಳನ್ನು ಅಣಕಿಸುವ ಹಾಗೆ ಇಂದಿನ ಪರಿಸ್ಥಿತಿ ಆ ಸಮುದಾಯದ ಜನರನ್ನು ತಂದು ನಿಲ್ಲಿಸಿರುವುದು ನಾಚಿಕೆಗೇಡಿನ ಹಾಗೂ ಗುಲಾಮಗಿರಿ ಪ್ರತೀಕ.
ನದಿ, ಹೊಳೆ, ಕೆರೆ, ಕಟ್ಟೆಗಳಲ್ಲಿ ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಮೀನು ಹಿಡಿಯುವ ಹಕ್ಕನ್ನು ಬೆಸ್ತ ಸಮುದಾಯದ ಜನರು ಹೊಂದಿದ್ದರು. ಯಾರೂ ಅದಕ್ಕೆ ಅಡ್ಡಿಯನ್ನಾಗಲಿ, ಪರವಾನಗಿಯನ್ನಾಗಲಿ, ಶುಲ್ಕವನ್ನಾಗಲಿ ತೆರುವ ಅಗತ್ಯವಿರಲಿಲ್ಲ. ಆದರೆ ಇಂದು ಮೀನು ಹಿಡಿಯುವ ಕಸುಬು ಆ ರೀತಿಯಾಗಿ ಉಳಿದಿಲ್ಲ. ಎಲ್ಲದಕ್ಕೂ ಹಣ ತೆರುವ, ಪರವಾನಗಿ ಪಡೆಯುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಇದಿಲ್ಲದೆ ಯಾರು ತಮ್ಮ ಕಸುಬುಗಳನ್ನು ಮಾಡುವಂತಿಲ್ಲದ ಸ್ಥಿತಿಯನ್ನು ತಂದೊಡ್ಡಿದ್ದಾರೆ. ಇದು ಆ ಸುಮುದಾಯಗಳನ್ನು, ಅವರ ಕಸುಬುಗಳನ್ನು ಸಮಾಜದಿಂದ ದೂರವಿರಿಸುವ ಒಂದು ಹುನ್ನಾರ.

ಕೇವಲ ಮೀನು ಹಿಡಿದು ಅದನ್ನು ಒಂದು ವೃತ್ತಿಯಾಗಿ ಅಷ್ಟೆ ಬದುಕುತ್ತಿದ್ದ ಜನಾಂಗಕ್ಕೆ ಅದು ಮುಂದೊಂದು ದಿನ ಉದ್ಯಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಭವನ್ನುಂಟುಮಾಡುವ ವೃತ್ತಿಯಾಗುತ್ತದೆ ಎಂದು ಯಾವತ್ತು ಕನಸು ಕಂಡಿರಲಿಲ್ಲ. ಆದರೆ ಇಂದು ಮತ್ಸೋದ್ಯಮ ತಂದು ಕೊಡುತ್ತಿರುವ ಬಂಡವಾಳ ದೇಶದ ಆದಾಯದ ಮೂಲಗಳಲ್ಲಿ ಪ್ರಮುಖವಾದುದು. ರಾಷ್ಟ್ರದ ಒಟ್ಟು ಉತ್ಪಾದನೆಯಲ್ಲಿ ಶೇಕಡ 5.8 ರಷ್ಟು ಮತ್ಸೋದ್ಯಮದ ಆದಾಯವಾಗಿದೆ. ಯಾವಾಗ ಮೀನುಗಾರಿಕೆಯನ್ನೆ ತಮ್ಮ ವೃತ್ತಿಯಾಗಿ ನಂಬಿಕೊಂಡು ಬದುಕಿದ್ದ ಜನಾಂಗ ಅದರಿಂದ ವಂಚಿಸಲ್ಪಟ್ಟರೂ ಕ್ರಮೇಣ ಅನೇಕ ಜನರು ಆ ವೃತ್ತಿಯಿಂದ ದೂರ ಸರಿಯಲಾರಂಭಿಸಿದರು. ಆದರೆ ಇಂದಿಗೂ ಎಷ್ಟೋ ಜನ ಆ ವೃತ್ತಿಯನ್ನು ನಂಬಿಕೊಂಡು ಬದುಕುವುದನ್ನು ಕಾಣಬಹುದು.

ಹಣ ಇರುವ ಬಂಡವಾಳಗಾರರು ಲಕ್ಷಾಂತರ ರಾಪಾಯಿಗಳಿಗೆ ಕೆರೆ, ನದಿಗಳನ್ನು ಗುತ್ತಿಗೆ ತೆಗೆದುಕೊಂಡು ಮೀನು ಸಾಕಾಣಿಕೆ ಮಾಡುತ್ತಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯದ ಯಾವ ವ್ಯಕ್ತಿಯಿಂದಲೂ ಗುತ್ತಿಗೆ ಪಡೆಯುವ ಸಾಹಸಕ್ಕೆ ಪ್ರಯತ್ನಿಸಿಲ್ಲ. ಅಷ್ಟು ಹಣವನ್ನು ತೊಡಗಿಸುವ ಸಾಮಥ್ರ್ಯ ಈ ಸಮುದಾಯಕ್ಕೆ ಎಲ್ಲಿ ಸಿಗಬೇಕು. ಲಕ್ಷಾಂತ ರೂಪಾಯಿ ಹೂಡಿಕೆ ಮಾಡಿದ ಮಾಲೀಕನ ಬಳಿ ಈ ಸಮುದಾಯದ ಜನ ಜೀತದಾಳುಗಳಾಗಿ ದುಡಿಯಬೇಕು. ಮಾಲೀಕರು ಕೊಡುವ ಸಂಬಳಕ್ಕೆ ತಾವು ಪರಂಪರೆಯಿಂದ ಕಲಿತ ಕಸುಬನ್ನು ಮಾರಿಕೊಂಡು ಬದುಕುವ ಸ್ಥಿತಿಗೆ ತಂದು ನಿಲ್ಲಿಸಿರುವ ಈ ಆಧುನಿಕತೆಗೆ ನಾವೆಲ್ಲರೂ ದಿಕ್ಕಾರ ಕೂಗಲೇ ಬೇಕು. ಲಕ್ಷಾಂತರ ರೂಪಾಯಿಗಳನ್ನು ನೀಡಿ ಗುತ್ತಿಗೆ ತೆಗೆದುಕೊಳ್ಳವ ಸಾಮಥ್ರ್ಯ ಆ ಸಮುದಾಯದ ಜನಾಂಗದಲ್ಲಿ ಸಾಧ್ಯವಾಗದ ಮಾತು. ಇದರಿಂದ ಬೇಸತ್ತು ಎಷ್ಟೂ ಜನರು ಈ ಕಸುಬಿನಿಂದ ಹೊರಗುಳಿದಿರುವುದನ್ನು ಕಾಣಬಹುದು. ಜೀತದಾಳುಗಳಾಗಿ, ಕೂಲಿಕಾರರಾಗಿ, ವ್ಯಾಪಾರ, ಕೃಷಿ ಇತ್ಯಾದಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಸಾಗಿಸುತ್ತಿರುವುದನ್ನು ಇಂದಿಗೂ ಕಾಣಬಹುದು.

ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಬಲೆಗಳ ಮೂಲಕ, ಇಲ್ಲವೆ ಗಾಣ ಹಾಕುವುದರ ಮೂಲಕ ಮೀನು ಹಿಡಿಯುವ ಪದ್ಧತಿ ಇತ್ತು. ಆದರೆ ಇಂದು ಈ ಕ್ಷೇತ್ರಕ್ಕೂ ಯಂತ್ರಗಳು ಬಂದು ಮನುಷ್ಯ ಮಾಡುವ ಕೆಲಸವನ್ನು ಯಂತ್ರಗಳು ನುಂಗಿ ನೀರುಕುಡಿದಿರುವುದನ್ನು ಕಾಣಬಹುದು. ಅದಷ್ಟೆ ಅಲ್ಲದೆ ಈ ರೀತಿಯ ಪಾರಂಪರಿಕ ಕಸುಬುಗಳನ್ನು ಕೇವಲ ಆ ಸಮುದಾಯದ ವ್ಯಕ್ತಿಯೇ ಮಾಡಬೇಕೆಂದಿಲ್ಲ. ಆ ಕಸುಬನ್ನು ತರಬೇತಿಯ ಮೂಲಕ ಯಾರು ಬೇಕಾದರು ಪಡೆದು ಆ ಕೆಲಸವನ್ನು ನಿರ್ವಹಿಸಬಹುದು ಎನ್ನುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಇದು ಮೀನು ಹಿಡಿಯುವ ಕಸುಬಿಗೆ ಉಂಟುಮಾಡಿದ ಬಹು ದೊಡ್ಡ ನಷ್ಟವೇ ಸರಿ. ಇವತ್ತು ಎಲ್ಲಾ ಕಸುಬುಗಳೂ ಆಯಾಯ ಸಮುದಾಯದ ಸ್ವತ್ತಾಗಿ ಉಳಿಯದೆ ಅದು ಆದಾಯದ ಮೂಲವಾಗಿ ಬದಲಾದ್ದರಿಂದ ಬಂಡವಾಳದಾರನ ಅದೀನಕ್ಕೆ ಒಳಗಾಗಿದೆ.

ಪಾರಂಪರಿಕ ಕಸುಬನ್ನು ಬಿಟ್ಟು ಬೇರೆ ಕಸುಬನ್ನು ಕಲಿಯದ ಕಾರಣ ಅದೆಷ್ಟೋ ಮೀನುಗಾರರು ಇಂದು ಅನಿವಾರ್ಯವಾಗಿ ಮೀನು ಹಿಡಿಯುವ ಕೂಲಿಗಳಾಗಿ, ಯಜಮಾನ ಕೊಡುವ ಕನಿಷ್ಟ ಹಣಕ್ಕೆ ದುಡಿಯುವುದನ್ನು ಕಾಣಬಹುದು. ತಮ್ಮ ಜೀವವನ್ನು ಲೆಕ್ಕಿಸದೆ ಎಷ್ಟೂ ಜನರು ನದಿಗಳಲ್ಲಿ, ಸಮುದ್ರಗಳಲ್ಲಿ ಮೀನು ಹಿಡಿಯಲು ಹೋಗಿ ಪ್ರಾಣ ನೀಗಿರುವುದನ್ನು ಕಾಣಬಹುದು. ಅವರ ಜೀವಕ್ಕೆ ಯಾವ ಸುರಕ್ಷತೆÀಯೂ ಇರುವುದಿಲ್ಲ. ಪ್ರವಾಹವೇ ಬರಲಿ, ಸುನಾಮಿಯೇ ಆದರೂ ಅದಕ್ಕೆ ಮಾಲೀಕನೆಂದು ಜವಬ್ದಾರನಾಗಿರುವುದಿಲ್ಲ. ಸರ್ಕಾರವೂ ಅದಕ್ಕೆ ಹೊಣೆಹೊರುವುದಿಲ್ಲ. ಇನ್ನೂ ಎಷ್ಟೊ ಬೆಸ್ತರು ಮೀನು ಹಿಡಿಯಲು ಹೋಗಿ ಬೇರೆ ಬೇರೆ ದೇಶಗಳಲ್ಲಿ ಸೆರೆಯಾಳುಗಳಾಗಿ ಇಂದಿಗೂ ಸೆರೆಮನೆ ವಾಸ ಅನುಭವಿಸುತ್ತಿರುವುದನ್ನು ಇಂದಿಗೂ ಕಾಣಬಹುದು. ಅವರನ್ನು ಬಿಡಿಸಿತರುವ ಗೋಜಿಗೆ ಸರ್ಕಾರ ಎಂದೂ ತಲೆಕೆಡಿಸಿಕೊಂಡಿಲ್ಲ. ಅದೆಷ್ಟೂ ಮೀನುಗಾರರು ಬೇರೆ ಬೇರೆ ದೇಶಗಳ ಸೆರೆಮನೆಯಲ್ಲಿ ಸೆರೆಮನೆವಾಸಿಗಳಾಗಿ ಬಂಧಿತವಾಗಿರುವುದನ್ನು ಕಾಣಬಹುದು. ಇದನ್ನು ಸರ್ಕಾರದ ಗಮನಕ್ಕೆ ತಂದು ಅವರನ್ನು ಬಿಡಿಸಿ ತರುವ ಜವಬ್ದಾರಿಯನ್ನು ಯಾರೂ ಹೊರಲು ಸಿದ್ಧವಿಲ್ಲ. ಇದಕ್ಕೆ ಸರ್ಕಾರವಾಗಲಿ, ಮಾಲೀಕನಾಗಲಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನೂ ಎಷ್ಟೋ ಸಾರಿ ಪ್ರವಾಹದ ಸಂದರ್ಭಗಳಲ್ಲಿ ಪ್ರವಾಹದ ಮುನ್ಸೂಚನೆಯೇ ಇಲ್ಲದೆ ಮೀನು ಹಿಡಿಯಲು ಹೋಗಿ ಸಾವಿರಾರು ಜನ ತಮ್ಮ ಪ್ರಾಣ ತೆತ್ತಿರುವುದನ್ನು ಕಾಣಬಹುದು.

ವಿಜ್ಞಾನ ತಂತ್ರಜ್ಞಾನ ಎಷ್ಟೇಲ್ಲಾ ಮುಂದುವರೆದಿದ್ದರೂ ಪ್ರವಾಹದ ಮುನ್ಸೂಚೆ, ಬಿರುಗಾಳಿ, ಚಂಡಮಾರುತ, ಸೀತಗಾಳಿ, ಕಡಲಕೊರೆತ ಇತ್ಯಾದಿಗಳ ಮಾಹಿತಯ ಮುನ್ಸೂಚನೆಯನ್ನು ಕೊಡುವ ಬಗೆಗೆ ಹೆಚ್ಚು ಸಂಶೋಧನೆಗಳನ್ನು ಕಂಡುಹಿಡಿಯುವಲ್ಲಿ ನಮ್ಮ ವಿಜ್ಞಾನಿಗಳು ಸೋತಿರುವುದ ವಿಜ್ಞಾನದ ದಿಕ್ಕು ಮತ್ತು ಧೋರಣೆಗೆ ಹಿಡಿದ ಕನ್ನಡಿ ಎಂದು ತಿಳಿಯಬೇಕು. ಒಂದು ವೇಳೆ ವಿಜ್ಞಾನ ಮೀನುಗಾರರಿಗೆ ಈ ವಿಕೋಪಗಳ ಬಗೆಗೆ ಮುನ್ನೆಚ್ಚರಿಕೆಯನ್ನು ತಿಳಿಸಿದರೆ ಮೀನುಗಾರರಿಗೆ ಎದುರಾಗಬಹುದಾದ ತೊಂದರೆಗಳಿಂದ ಪಾರುಮಾಡಬಹುದು. ಆದರೆ ಇಂದು ಅದಾಗದೆ ಇರುವುದರಿಂದ ಅದೆಷ್ಟೋ ಮೀನುಗಾರರು ಸಮುದ್ರಗಳಲ್ಲಿ ಹೇಳ ಹೆಸರಿಲ್ಲದಂತಾಗಿರುವುದನ್ನು ಕಾಣಬಹುದು.

ಇಂದಿಗೂ ಎಷ್ಟೋ ಜನರು ಗುತ್ತಿಗೆದಾರರು ನೀಡುವ ಟೆಂಟ್‍ಗಳಲ್ಲಿ, ಗುಡಿಸಲುಗಳಲ್ಲಿ ಮೀನು ಹಿಡಿದು ಗುತ್ತಿಗೆದಾರ ನೀಡುವ ಸಣ್ಣ ಜಾಗಗಳಲ್ಲಿ ವಾಸಿಸುತ್ತಿರುವುದನ್ನು ಕಾಣಬಹುದು. ಈ ಸಮುದಾಯದ ಜನರು ಹೆಚ್ಚು ನೀರಿನಲ್ಲಿ ಕೆಲಸ ಮಾಡುವುದರಿಂದ ಎದುರಾಗುವ ಆರೋಗ್ಯದ ಸಮಸ್ಯೆಗಳ ಬಗೆಗೆ ಯಾರು ಗಮನಕೊಡುವುದಿಲ್ಲ. ಹೆಚ್ಚು ಹೊತ್ತು ನೀರಿನಲ್ಲಿ ಇರುವುದರಿಂದ ಅನೇಕ ಜಲಚರ ಪ್ರಾಣಿಗಳ, ವಿಷ ಜಂತುಗಳ ಕಡಿತಕ್ಕೆ, ಅವುಗಳ ತೊಂದರೆಗೆ ಒಳಗಾಗುತ್ತಾರೆ. ಎಷ್ಟೊ ಜನರು ಅವುಗಳ ಕಡಿತದಿಂದಾಗಿ ಸಾವನ್ನಪ್ಪಿರುವುದನ್ನು ಕಾಣಬಹುದು. ಇದಕ್ಕೆ ಯಾವ ಪರಿಹಾರವಾಗಲಿ, ಮಾರ್ಗೋಪಾಯವಾಗಲಿ ಇಲ್ಲದಿರುವುದು ಈ ಜನರ ದುರಂತ.

ಈ ರೀತಿಯ ಅದೆಷ್ಟೋ ಘಟನೆಗಳನ್ನು, ತೊಂದರೆಗಳನ್ನು ಇಂದಿಗೂ ಈ ಸಮುದಾಯದ ಜನ ಎದುರಿಸುತ್ತಿರುವ ವಿಚಾರ ಎಲ್ಲಿಯೂ ಸುದ್ಧಿಯಾಗುವುದಿಲ್ಲ, ಯಾರ ಗಮನಕ್ಕೂ ಬರುವುದಿಲ್ಲ. ಈ ಜನರು ಅನೇಕ ರೋಗರುಜಿನಕ್ಕೂ ತುತ್ತಾಗುವುದನ್ನು ಕಾಣಬಹುದು. ಯಾಕೆಂದರೆ ಹೆಚ್ಚು ನೀರಿನಲ್ಲಿ ಇರುವುದರಿಂದಾಗಿ ಬರಬಹುದಾದ ಶೀತಾ, ನೆಡಗಿ, ಕೆಮ್ಮು, ಅಸ್ತಮ, ಜ್ವರ, ಕಜ್ಜಿ, ಜಾಂಡಿಸ್, ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಯಾವ ಆರೋಗ್ಯ ವಿಮೆಯಾಗಲಿ, ಜೀವ ವಿಮೆಯಾಗಲಿ ಇರದಿರುವುದು ಈ ಜನಾಂಗದ ದುರಂತ. ಈ ರೀತಿ ಎಷ್ಟೂ ಕಾಯಿಲೆಗಳಿಂದ ಈ ಸಮುದಾಯದ ಜನ ಸಾವನ್ನಪ್ಪಿರುವುದನ್ನು ಕಾಣಬಹುದು. ಈ ರೀತಿಯ ದುರಂತದಲ್ಲಿ ಸಾವನ್ನಪ್ಪಿದ ಜನಾಂಗಕ್ಕೆ ನೀಡುವ ಪರಿಹಾರವು ಕೂಡ ಅಷ್ಟೇ ಕನಿಷ್ಟ ಪ್ರಮಾಣದ್ದು. ಇಲ್ಲಿ ಜೀವಕ್ಕೆ ಬೆಲೆ ಇಲ್ಲದಿರುವುದು ಈ ಜನಾಂಗದ ಮೇಲಿನ ಅಸಡ್ಡೆಯನ್ನು ತೋರುತ್ತದೆ.

ಈ ಸಮುದಾಯ ಒಂದು ಅಸಂಘಟಿತ ಸಮುದಾಯವಾಗಿರುವುದರಿಂದ ಇಂದಿಗೂ ತಮ್ಮ ನೆಲೆಯನ್ನು ಕಂಡುಕೊಳ್ಳಲಾಗದ ಸ್ಥಿತಿಗೆ ತಲುಪಿರುವುದನ್ನು ಕಾಣಬಹುದು. ಇಂದು ಎಷ್ಟೋ ಕಸುಬುಗಳು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಕಾಣಬಹುದು. ಭಾರತದ ಒಬ್ಬ ಪ್ರಜೆಯಾಗಿ ರಾಷ್ಟ್ರದ ಯಾವುದೇ ಮೂಲೆಯಲ್ಲಿರಲಿ ಅಥವಾ ಯಾವುದೇ ಧರ್ಮ, ಜಾತಿ, ಪಂಥ ಇರಲಿ, ಯಾವುದೇ ವೃತ್ತಿ ಅವಲಂಭಿಸಿರಲಿ ಅವನಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು. ಆಗ ಸಂವಿಧಾನದ ಆಶಯಕ್ಕೆ ಒಂದು ಗೌರವ ಸಿಕ್ಕಂತಾಗುತ್ತದೆ. ಅಂಬೇಡ್ಕರ್ ಕಂಡ ಕನಸು ನನಸಾಗುತ್ತದೆ. ಆದರೆ ವಾಸ್ತವ ಪರಿಸ್ಥಿತಿ ಇಂದು ಶೋಚನೀಯವಾಗಿರುವುದು ಸಂವಿಧಾನಕ್ಕೆ ನಾವೆಲ್ಲ ಮಾಡುತ್ತಿರುವ ಅಪಚಾರ.
ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಇಂದು ಈ ಸಮುದಾಯ ಎದುರಿಸುತ್ತಿರುವ ಸವಾಲಗಳು ಮತ್ತು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸರಿಯಾದ ಕ್ರಮ ಕೈಗೊಳ್ಳುವ ಅಗತ್ಯ ಈ ಸಮುದಾಯದ ಜನರ ಮುಂದಿದೆ.

Leave a Reply

Your email address will not be published.