ಮತಾಂಧರ ಶವ ಜಾತ್ರೆ

ನಾ ದಿವಾಕರ

ಒಬ್ಬ ಅಪರಿಚಿತ, ಅಮಾಯಕ ವ್ಯಕ್ತಿಯ ನಿಗೂಢ, ಅಸಹಜ ಸಾವು ಪ್ರಜ್ಞಾವಂತ ಸಮಾಜದಲ್ಲಿ ಸಾಂತ್ವನ ಮೂಡಿಸಬೇಕು. ಆತಂಕ ಸೃಷ್ಟಿಸಬೇಕು. ನೆನ್ನೆಯವರೆಗೂ ಇದ್ದವ ಇಂದೇಕಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬೇಕು. ಸಾವಿಗೆ ಕಾರಣಗಳು ಬೇಕಿಲ್ಲ ಅಲ್ಲವೇ ? ಅಪಘಾತ, ಆತ್ಮಹತ್ಯೆ, ಕೊಲೆ, ಅನಾರೋಗ್ಯ ಹೀಗೆ. ದಾದ್ರಿಯಲ್ಲಿ ಅಖ್ಲಾಕ್, ಆಳ್ವಾರ್‍ನ ಪೆಹ್ಲೂ ಖಾನ್, ಉಮ್ಮರ್ ಖಾನ್ , ಇತ್ತೀಚೆಗೆ ರಾಜಸ್ಥಾನದ ಮೊಹಮ್ಮದ್ ಅಫ್ರಾಜಲ್, ಜುನೈದ್ ಇವರೆಲ್ಲರೂ ವ್ಯವಸ್ಥಿತ ಪಿತೂರಿಗೆ ಬಲಿಯಾದ ಅಮಾಯಕರು. ಬಹುಶಃ ಹೊನ್ನಾವರದ ಪರೇಶ್ ಮೇಸ್ತ ಸಹ ಇಂತಹ ಮತ್ತೊಂದು ಹುನ್ನಾರದ ಬಲಿಪಶುವಾಗಿರಬೇಕು. ಈ ಸಾವುಗಳು ಒಂದು ಸ್ವಾಸ್ಥ್ಯ ಸಮಾಜದ ಅಂತರ್ ಪ್ರಜ್ಞೆಯನ್ನು ಕದಡಬೇಕೇ ಹೊರತು ಮತ್ತಷ್ಟು ಪ್ರಕ್ಷುಬ್ಧಗೊಳಿಸಬಾರದು. ದುರಂತ ಎಂದರೆ ಭಾರತೀಯ ಸಮಾಜದಲ್ಲಿ ಶವಗಳಿಗೂ ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳಿವೆ. ಮೃತ ವ್ಯಕ್ತಿ ತನ್ನೆಲ್ಲಾ ಗುರುತುಗಳನ್ನೂ ಕಳೆದುಕೊಂಡು ಅನಂತದಲ್ಲಿ ಲೀನವಾಗುತ್ತಾನೆ. ಈ ಅನಂತದಲ್ಲಿ ಅವಾಂತರ ಸೃಷ್ಟಿಸುವ ವಿಕೃತ ಮನೋಭಾವ ನಮ್ಮ ಸಮಾಜದಲ್ಲಿ ನೆಲೆ ಮಾಡಿದೆ. ಹಾಗಾಗಿಯೇ ಕುಂದಾಪುರ, ಹೊನ್ನಾವರ, ಕುಮಟ, ಶಿರಸಿ ಹೊತ್ತಿ ಉರಿಯುತ್ತದೆ.

ಸ್ವಚ್ಚ ಭಾರತಕ್ಕೂ ಸ್ವಾಸ್ಥ್ಯ ಸಮಾಜಕ್ಕೂ ಇರುವ ಸೂಕ್ಷ್ಮ ಸಂಬಂಧವನ್ನು ಅರಿಯದೆ ಭಾರತವನ್ನು ಸ್ವಚ್ಚಗೊಳಿಸಲು ಮುಂದಾಗಿರುವ ದೇಶಭಕ್ತರಿಗೆ ಸ್ವಚ್ಚತೆ ಕೇವಲ ಶೌಚಾಲಯದಲ್ಲಿ ಮಾತ್ರವೇ ಕಾಣುತ್ತಿರುವುದು ಘೋರ ದುರಂತ. ತಾತ್ವಿಕ ನೆಲೆಯಲ್ಲಾಗಲೀ, ವಾಸ್ತವದ ನೆಲೆಯಲ್ಲಾಗಲೀ ಒಂದು ಸ್ವಸ್ಥ ಸಮಾಜ ಮಾತ್ರವೇ ಸ್ವಚ್ಚ ಸಮಾಜವಾಗಲು ಸಾಧ್ಯ ಎಂಬ ಪರಿಜ್ಞಾನ ಎಲ್ಲ ಪ್ರಜ್ಞಾವಂತರಿಗೂ ಇರಬೇಕಲ್ಲವೇ ? ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕøತಿಕ ಮೌಲ್ಯಗಳು ಪರಸ್ಪರ ಪೂರಕವಾಗಿರಬೇಕಲ್ಲವೇ ? ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಬೇಕಿರುವುದು ಸಹಜೀವನದ ಬಯಕೆ, ಸೌಹಾರ್ದತೆ, ಭ್ರಾತೃತ್ವ, ಪರಸ್ಪರ ವಿಶ್ವಾಸ ಮತ್ತು ನಂಬಿಕೆ ಇಷ್ಟೆ. ಈ ಬೌದ್ಧಿಕ ಸ್ವಚ್ಚತೆಯನ್ನು ನಿರ್ಲಕ್ಷಿಸಿ ಭೌತಿಕ ನೆಲೆಯಲ್ಲಿ ಸ್ವಚ್ಚ ಭಾರತವನ್ನು ನಿರ್ಮಿಸಲು ಮುಂದಾದವರಿಗೆ ತಾವೇ ಉರುಳಿಸುವ ಶವಗಳು, ತಾವೇ ಧ್ವಂಸ ಮಾಡುವ ಸ್ಥಾವರಗಳು, ತಮ್ಮಿಂದಲೇ ಮಲಿನವಾಗುವ ಸಮಾಜದ ಪರಿವೆಯೇ ಇರುವುದಿಲ್ಲ. ಹೊನ್ನಾವರ, ಶಿರಸಿ, ಕುಮಟಾ ಈ ನಿಟ್ಟಿನಲ್ಲಿ ಒಂದು ಪ್ರಾತ್ಯಕ್ಷಿಕೆಯಂತೆ ಕಾಣುತ್ತಿದೆ.

1989ರ ಸೋಮನಾಥ ರಥಯಾತ್ರೆ ಇಂತಹ ಪ್ರಾತ್ಯಕ್ಷಿಕೆಗಳ ಜನಕ ಎಂದರೆ ತಪ್ಪೇನಿಲ್ಲ. ಸಮೂಹ ಸನ್ನಿ ಸೃಷ್ಟಿಯಾದಾಗ ಸಾವು ಬದುಕಿರುವವರ ಕಣ್ತೆರೆಸುವುದಿಲ್ಲ ಬದಲಾಗಿ ವಿಜೃಂಭಣೆಗೆ ಎಡೆ ಮಾಡಿಕೊಡುತ್ತದೆ. ಸಾವನ್ನು ಸಂಭ್ರಮಿಸುವ ವಿಕೃತ ಪರಂಪರೆಯನ್ನು ಅಯೋಧ್ಯೆ, ರಥಯಾತ್ರೆ, ಮುಂಬೈ ಗಲಭೆಗಳು, ಗುಜರಾತ್, ಗೋದ್ರಾ, ಸಂಜೋತಾ ದುರಂತಗಳು ಸೃಷ್ಟಿಸಿವೆ. ಇದು ಕೇವಲ ಹೊಣೆಗಾರಿಕೆಯ ಪ್ರಶ್ನೆಯಲ್ಲ. ಈ ದುರಂತಗಳು ಇನ್ನೂ ಮುಂದುವರೆಯುತ್ತಲೇ ಇವೆ. ಬಾಂಬ್ ದಾಳಿ ನಡೆಸಿದವರನ್ನು ಭಯೋತ್ಪಾದಕರು ಎಂದು ಏಕೆ ಕರೆಯುತ್ತೇವೆ ? ದಾಳಿಕೋರರು ಬಾಂಬ್ ಸ್ಫೋಟಿಸುವ ಮೂಲಕ ಸ್ವಸ್ಥ ಸಮಾಜವನ್ನು ಮಲಿನಗೊಳಿಸುತ್ತಾರೆ. ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸುತ್ತಾರೆ. ಹಿಂಸೆಯನ್ನು ಪ್ರಚೋದಿಸುವ ಮೂಲಕ ಪ್ರಕ್ಷುಬ್ಧ ವಾತಾವರಣ ನಿರ್ಮಿಸುತ್ತಾರೆ. ಭ್ರಾತ್ವತ್ವ, ಸೌಹಾರ್ದತೆ ಮತ್ತು ಸಹಿಷ್ಣುತೆಯ ಬದಲು ದ್ವೇಷ,ಅಸೂಯೆ, ಮತ್ಸರ ಮತ್ತು ಹಿಂಸಾತ್ಮಕ ಧೋರಣೆಯನ್ನು ಮೂಡಿಸುತ್ತಾರೆ. ಇಲ್ಲಿ ಬಾಂಬ್ ಸ್ಫೋಟ ನಿಮಿತ್ತ ಮಾತ್ರ. ಈ ಪ್ರಮೇಯವನ್ನು ಒಪ್ಪಿಕೊಳ್ಳುವುದಾದರೆ ಗೋದ್ರಾ ನಂತರದಲ್ಲಿ ನಡೆದದ್ದೇನು ? ರಥಯಾತ್ರೆಯ ಸಂದರ್ಭದಲ್ಲಿ ನಡೆದದ್ದೇನು ?

ಈಗ ಹೊನ್ನಾವರ, ಶಿರಸಿಯಲ್ಲಿ ನಡೆಯುತ್ತಿರುವುದೇನು ? ಇಲ್ಲಿ ಪರೇಶ್ ಮೇಸ್ತಾ ಸಾವು ನಿಮಿತ್ತ ಮಾತ್ರ ! ಹೌದಲ್ಲವೇ ?
ಶವಗಳಿಗೂ ಒಂದು ನಿರ್ದಿಷ್ಟ ಅಸ್ಮಿತೆ ದೊರೆಯುವುದೇ ಆದರೆ ಅದು ಭಾರತದಲ್ಲಿ ಮಾತ್ರವೇ ಸಾಧ್ಯ. ಮಾನವ ಸಹಜ ಸಂವೇದನೆಯನ್ನು ಸೃಷ್ಟಿಸಬೇಕಾದ ಸಾವು ಸಂವೇದನೆಯನ್ನೇ ಅಂತ್ಯಗೊಳಿಸುವುದು ಸಹ ಭಾರತದಲ್ಲಿ ಮಾತ್ರ ಸಾಧ್ಯ. ಹಾಗಾಗಿ ಪರೇಶ್ ಮೇಸ್ತಾ, ಶರತ್ ಮಡಿವಾಳ ಮುಂತಾದ ಅಮಾಯಕರ ಶವ ಒಂದು ರಾಜಕೀಯ ಪಕ್ಷದ ಪೀಠಾರೋಹಣಕ್ಕೆ ಮೆಟ್ಟಿಲಾಗುತ್ತದೆ. ಇಂತಹ ಸಾವಿರಾರು ಮೆಟ್ಟಿಲುಗಳನ್ನು ಏರುತ್ತಲೇ ಇಂದು ಮತಾಂಧತೆಯ ರಾಜಕಾರಣ ಅಧಿಕಾರಗ್ರಹಣ ಮಾಡಿದೆ. ಒಂದು ಹತ್ಯೆ ನಡೆದ ಕೂಡಲೇ ಸಾಮಾಜಿಕ ತಲ್ಲಣಗಳನ್ನು ಗ್ರಹಿಸಿ, ಸಮಾಜದಲ್ಲಿ ಅಪರಾಧಿ ಪ್ರಜ್ಞೆ ಕ್ಷೀಣಿಸುತ್ತಿರುವುದನ್ನು ಗುರುತಿಸುವ ಗುರುತರ ಹೊಣೆಗಾರಿಕೆ ಹೊತ್ತಿರುವ ಮಾಧ್ಯಮಗಳು ಹತ್ಯೆಯ ಸುತ್ತಲಿನ ಜಾತಿ, ಧರ್ಮ, ಮತೀಯ ಅಸ್ಮಿತೆಗಳನ್ನು ಹುಡುಕಲಾರಂಭಿಸುವುದು ಈ ದುರಂತಕ್ಕೆ ಮತ್ತೊಂದು ಕಾರಣ. ಹೊನ್ನಾವರ, ಶಿರಸಿ, ಕುಮಟಾದಲ್ಲಿ ನಡೆದಿರುವ ಗಲಭೆಗಳು ಮತ್ತು ವಿಧ್ವಂಸಕ ಕೃತ್ಯಗಳು ಪೂರ್ವ ನಿಯೋಜಿತ ಮತ್ತು ನಿರ್ದಿಷ್ಟ ರಾಜಕೀಯ ತತ್ವ ಪ್ರೇರಿತ ಎನ್ನುವುದಕ್ಕೆ ಈ ಹುಡುಕಾಟವೇ ಸಾಕ್ಷಿ ಒದಗಿಸುತ್ತದೆ.

ಈ ವಿಕೃತ ಸಂಸ್ಕøತಿಯನ್ನು ಬೆಳೆಸಿದವರಾರು ಎಂಬ ಪ್ರಶ್ನೆ ಮೂಡಿದಾಗ ಪ್ರಜ್ಞೆ ಅಯೋಧ್ಯೆಗೆ ಮರಳುತ್ತದೆ. ಅನ್ಯರನ್ನು ಗುರುತಿಸುವ ಪ್ರವೃತ್ತಿಗೆ ಅಧಿಕೃತವಾದ ಭೂಮಿಕೆಯನ್ನು ನಿರ್ಮಿಸಿದ ಹೊಣೆಗಾರಿಕೆಯನ್ನು ಅಯೋಧ್ಯಾ ಕಾಂಡದ ನಿರ್ಮಾತೃಗಳು ಮತ್ತು ಅಯೋಧ್ಯೆಯ ಕೂಸುಗಳು ಹೊರಬೇಕಾಗುತ್ತದೆ. ಈ ಅನ್ಯರ ಗುರುತಿಸುವಿಕೆಯೇ , ಗುರುತಿಸಲ್ಪಟ್ಟ ಅನ್ಯರಲ್ಲಿಯೂ ಪ್ರತ್ಯೇಕತಾ ಭಾವನೆಯನ್ನು ಹುಟ್ಟುಹಾಕಿ ಪರಸ್ಪರ ವಿರೋಧಿ ನೆಲೆಗಳು ಸೃಷ್ಟಿಯಾದದ್ದನ್ನು ಸೋಮನಾಥ ರಥಯಾತ್ರೆಯಿಂದ ಹೊನ್ನಾವರದವರೆಗಿನ ಪಯಣದಲ್ಲಿ ಕಾಣಬಹುದು. ಸಾಂಸ್ಕøತಿಕ ಅಧಃಪತನದ ಈ ಮಾರ್ಗದಲ್ಲೇ ಪರೇಶ್ ಮೇಸ್ತ, ಶರತ್ ಮಡಿವಾಳ, ಪೆಹ್ಲು ಖಾನ್, ಮೊಹಮ್ಮದ್ ಅಫ್ರಾಜುಲ್ ಹುತಾತ್ಮರಾಗುತ್ತಾ ಬಂದಿದ್ದಾರೆ. ಪರೇಶ್ ಮೇಸ್ತಾ ಸಾವಿನ ಹಿನ್ನೆಲೆಯಲ್ಲಿ ರಾಜ್ಯಕ್ಕೇ ಕೊಳ್ಳಿ ಇಡುವ ಮತಾಂಧರಿಗೆ, ಮತ್ತೊಬ್ಬ ಮತಾಂಧ ಒಬ್ಬ ಅಮಾಯಕ ವ್ಯಕ್ತಿಯ ಸಜೀವ ದಹನ ಮಾಡಿರುವುದು ಅಪರಾಧ ಎನಿಸುವುದೇ ಇಲ್ಲ ! ಇದು ಸಾಂಸ್ಕøತಿಕ ಅಧಃಪತನದ ಪರಾಕಾಷ್ಠೆ ಅಲ್ಲದೆ ಮತ್ತೇನು ?

ಕರಸೇವೆಯಲ್ಲಿ ತೊಡಗಿ ತಮ್ಮ ಭವಿಷ್ಯವನ್ನೇ ಪಣಕ್ಕಿಟ್ಟ ಸಾವಿರಾರು ಯುವಕರು, ರಥಯಾತ್ರೆಯ ಚಕ್ರದಡಿಗೆ ಸಿಲುಕಿ ನಲುಗಿದ ಸಾವಿರಾರು ಅಮಾಯಕ ಜನರು, ಭಯೋತ್ಪಾದಕರ ಬಾಂಬ್ ದಾಳಿಗೆ ತುತ್ತಾದ ನೂರಾರು ಪ್ರಜೆಗಳು, ಗೋದ್ರಾ ದುರಂತದಲ್ಲಿ ಮಡಿದ ಕರಸೇವಕರು, ಗುಜರಾತ್ ಹತ್ಯಾಕಾಂಡದಲ್ಲಿ ಮಡಿದ ಜನಸಾಮಾನ್ಯರು, ಕೋಮು ಗಲಭೆಗಳಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಬಡ ಜನರು ಈ ಸಾಂಸ್ಕøತಿಕ ಅಧಃಪತನದ ಫಲಾನುಭವಿಗಳೇ ಆಗಿರುವುದನ್ನು ಪ್ರಜ್ಞಾವಂತ ಸಮಾಜ ಇನ್ನಾದರೂ ಗಮನಿಸಬೇಕಿದೆ. ರಾಮಮಂದಿರ, ಸ್ವತಂತ್ರ ಕಾಶ್ಮೀರ, ಹಿಂದೂ ಸಾಮ್ರಾಜ್ಯ, ಧರ್ಮ ಯುದ್ಧ ಇವೆಲ್ಲವೂ ಶವಯಾತ್ರೆಗಳನ್ನು ವಿಜೃಂಭಿಸುವ, ಸಂಭ್ರಮಿಸುವ ಮನಸ್ಥಿತಿಯನ್ನು ಸೃಷ್ಟಿಸಿವೆಯೇ ಹೊರತು, ಜನಸಾಮಾನ್ಯರ ನಿತ್ಯ ಜೀವನದ ಬವಣೆಯನ್ನು ನೀಗಿಸಿಲ್ಲ. ರಾಮಮಂದಿರಕ್ಕೆ ಇಟ್ಟಿಗೆ ಸಂಗ್ರಹಿಸುವ ಮೂಲಕ ತಮ್ಮ ವ್ಯಕ್ತಿಗತ ಜೀವನದ ಬುನಾದಿಯನ್ನೇ ಅಸ್ಥಿರವಾದುದನ್ನು ಗಮನಿಸದೆ ಹೋದ ಲಕ್ಷಾಂತರ ಯುವ ಜನರು ಈ ಶವಯಾತ್ರೆಯ ಮೂಕ ಪ್ರೇಕ್ಷಕರಾಗಿರುವುದನ್ನು ಗಮನಿಸಬೇಕಿದೆ.

ಇಲ್ಲಿ ಕಾಡುವ ಮೂರ್ತ ಪ್ರಶ್ನೆ ಎಂದರೆ, ಒಬ್ಬ ಪರೇಶ್ ಮೇಸ್ತಾ, ಒಬ್ಬ ಮೊಹಮ್ಮದ್ ಅಫ್ರಾಜುಲ್. ಒಬ್ಬ ಪೆಹ್ಲೂ ಖಾನ್, ಒಬ್ಬ ಶರತ್ ಮಡಿವಾಳ ಸೃಷ್ಟಿಸುವ ಸಂಚಲನ ಲಕ್ಷಾಂತರ ರೈತರು ಏಕೆ ಸೃಷ್ಟಿಸುವುದಿಲ್ಲ. ಕಳೆದ ಮೂರು ದಶಕಗಳಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳ ವಿಕೃತಿಗಳಿಗೆ ಬಲಿಯಾಗಿರುವ ಲಕ್ಷಾಂತರ ರೈತರ ಶವಗಳು ಏಕೆ ಶವವಾಗಿ ಕಾಣಿಸುತ್ತಿಲ್ಲ ? ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಅಭಿವೃದ್ಧಿಯ ರಥಬೀದಿಯಲ್ಲಿ ಹತರಾಗುತ್ತಿರುವ ಸಾವಿರಾರು ಶ್ರಮಿಕರು, ತಮ್ಮ ಮೂಲ ನೆಲೆಯಿಂದ ಉಚ್ಚಾಟಿತರಾಗಿ ವಲಸೆಗಾರರಂತೆ ಬದುಕು ಸವೆಸುತ್ತಲೇ ಕೋಮು ದ್ವೇಷ, ಪ್ರಾದೇಶಿಕ ಅಸ್ಮಿತೆ ಜಾತಿ ದೌರ್ಜನ್ಯಗಳಿಗೆ ಬಲಿಯಾಗುತ್ತಿರುವ ಶ್ರಮಜೀವಿಗಳು ಏಕೆ ಕಾಣಿಸುತ್ತಿಲ್ಲ ? ಈ ದುಡಿಯುವ ವರ್ಗಗಳ ಶವಗಳಿಗೆ ಸೋಂಕದ ಅಸ್ಮಿತೆ ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಹತರಾಗುವ ವ್ಯಕ್ತಿಗಳಿಗೆ ಹೇಗೆ ಸೋಂಕಲು ಸಾಧ್ಯ ?

ಸಾರ್ವಜನಿಕ ವಲಯದಲ್ಲಿ ಕತ್ತಿ ಝಳಪಿಸುವ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತಿದ್ದೇವೆ. ಸಹಜವಾಗಿಯೇ ಶವಗಳು ರಾಜಕೀಯ ಅಧಿಪತ್ಯದ ಭೂಮಿಕೆಯಾಗುತ್ತವೆ. ಶವ ಯಾರದ್ದಾದರೇನು ?

Leave a Reply

Your email address will not be published.