ಭೂಮಿ

-ಅನಿಲ್ ಗುನ್ನಾಪುರ.

anilgಈ ದಿನ ಆಫೀಸಿನಲ್ಲಿ ನನ್ನ ಹೊರತು ಯಾರೊಬ್ಬರು ಇಲ್ಲ.

ರಜಾದಿನಗಳು ಹೊರತು ಈ ಸಮಯದಲ್ಲಿ ಸಾರ್ವಜನಿಕರು ಮತ್ತು ನಮ್ಮ ಆಫೀಸ್ ಸಿಬ್ಬಂದಿ ತುಂಬಿಕೊಂಡು ಮದುವೆ ಮನೆಯಂತೆ ಸದಾ ಗದ್ದಲ ಇರುವುದು ನಮ್ಮ ಸರ್ವೇ ಆಫೀಸಿನಲ್ಲಿ ಸರ್ವೇ ಸಾಮನ್ಯದ ಸಂಗತಿಯೇ ಸರಿ.

ಆದರೆ ನಮ್ಮ ಸಿಬ್ಬಂದಿಯೆಲ್ಲಾ ಮದುವೆಗೆ ಹೋಗಿದ್ದರಿಂದಲೇ ಏನೋ ಕುರ್ಚಿ ,ಟೇಬಲ್ ,ಕಂಪ್ಯೂಟರ್ ಮತ್ತು ಅಭಿಲೇಖಾಯದಲ್ಲಿನ ಎಲ್ಲ ದಪ್ತರಗಳು ಮೌನವಾಗಿ ನಿರಶನ ಕೂತಂತೆ ಇದ್ದ ಜಾಗದಲ್ಲಿಯೇ ಚೂರು ಕದಲದೆ ಕುಂತಿವೆ. ಇಡೀ ಆಫೀಸಿನಲ್ಲಿ ಸೂಜಿ ಬಿದ್ದರು ಸಪ್ಪಳಾಗುವಷ್ಟು ಶಾಂತತೆ ಆವರಿಸಿಕೊಂಡಿದೆ. ಆದರೆ ನನ್ನದೆಯಯಲ್ಲಿ  ಉಕ್ಕಿ ಬರುತ್ತಿರುವ ಉದ್ವೇಗದಲೆಗಳು ಯಾವಾಗ ದಡಕ್ಕೆ ಅಪ್ಪಳಿಸಬಹುದೋ ? ಗೊತ್ತಿಲ್ಲ.

ಅಷ್ಟಕ್ಕು ಆಫೀಸಿನಲ್ಲಿ ಒಂದು ನರಪಿಳ್ಳೆಯೂ ಇರದಂತೆ ಮದುವೆಗೆ ಹೊಗಿದ್ದಾರೆಂದರೆ ಯಾರೋ ಹಿರಿಯ ಅಧಿಕಾರಿಗೆ ಸಂಬಂಧಿಸಿದ ಮದುವೆ ಇರಬಹುದೆಂದು ಊಹಿಸಿದರೆ ನಿಮ್ಮ ಊಹೆ ತಪ್ಪಾದೀತು.

ಈ ಮೊದಲು, ಅಂದರೆ ಇದೇ ಆರು ತಿಂಗಳ ಹಿಂದೆ ನಮ್ಮದೇ ಆಫೀಸಿನಲ್ಲಿ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಆತ್ಮೀಯ ಗೆಳತಿ ಭೂಮಿಕಾಳ ಮದುವೆ ಎಂದರೆ ನೀವು ನಂಬಲೇಬೇಕು.  ನೀವು ಪ್ರಶ್ನಿಸಬಹುದು ಹೌದು ಆತ್ಮೀಯ ಗೆಳತಿ ಅಂತೀಯಾ ನೀನ್ಯಾಕೆ ಮದುವೆಗೆ ಹೋಗಿಲ್ಲ ಅಂತಾ..!
ಅದೊಂದು ದೊಡ್ಡ ಕಥೆ, ಬಿಡಿಸಲಾಗದ ಒಗಟು, ವರ್ಣಿಸಲಾಗದ ಅನುಪಮ ಸೌಂದರ್ಯದೊಳಗಿನ ಕಪ್ಪು ಚುಕ್ಕೆ.. ನಾನು ಭೂಮಿ ಒಂದೇ ಭೂಮಾಪನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಭೂಮಾಪಕರಾಗಿದ್ದೆವು. ಆದರೆ ಇಷ್ಟೊಂದು ಆತ್ಮೀಯತೆಯ ಒಡನಾಟ ಶುರುವಾಗಿದ್ದು ನಮ್ಮ ಈ ಆಫೀಸಿಗೆ ಬಂದ ಬಳಿಕವೇ ಅನ್ನಬಹುದು.

ನಾನು ಭೂಮಿ ಒಬ್ಬರಿಗೊಬ್ಬರು  ಅದೇಷ್ಟು ಹಚ್ಚಿಕೊಂಡಿದ್ದೆವೆಂದರೆ ನಮ್ಮಿಬ್ಬರ ನಡುವೆ ಮುಚ್ಚುಮರೆ ಅಂತ ಯಾವುದು ಇಲ್ಲ. ತನ್ನೆಲ್ಲಾ ನೋವು ನಲಿವುಗಳು ಮುಕ್ತವಾಗಿ ನನ್ನೊಂದಿಗೆ ಹಂಚಿಕೊಂಡಿದ್ದಳು. ನಾವಿಬ್ಬರು ಮಾತಾಡುವಾಗ ಏಕವಚನ ಮತ್ತು ಬಹುವಚನ ಅನಾಯಾಸವಾಗಿ ನುಸುಳುತ್ತವೆ. ಆಫೀಸಿನಲ್ಲಿ ಬಹುತೇಕರು ನಮ್ಮಿಬ್ಬರನ್ನು ಬೇರೆಯದೇ ದೃಷ್ಟಿಯಲ್ಲಿ ನೋಡುತ್ತಿದ್ದರು. ಆದರೆ ಅವಳು  ಎಲ್ಲರೊಂದಿಗೆ ಮುಕ್ತವಾಗಿ ಸ್ನೇಹ ಹಂಚಿಕೊಳ್ಳುತ್ತಿದ್ದರಿಂದ ಅವಳು ಇರುವುದೆ ಹೀಗೆ ಅಂತಾ ಅನಿವಾರ್ಯವಾಗಿ ಅವಳ ಗುಣಕ್ಕೆ ಎಲ್ಲರೂ ಮೆಚ್ಚಿದ್ದರು.

ಆದರೆ, ನಾನೇ ಹುಚ್ಚನಿರಬೇಕು ತುಂಬ ಹಚ್ಚಿಕೊಂಡಿದ್ದೆ ಅಂತನಿಸುತ್ತದೆ. ತಿಂಗಳಿಂದ ಹೇಳುತ್ತಿದ್ದಳು.. ಪ್ಲೀಸ್ ಕಣೋ.. ಮದುವೆಗೆ ಮಿಸ್ ಮಾಡದೆ ಬಾರೊ…ಎಂದು ಹತ್ತಾರು ಬಾರಿ ಗೋಗರೆದಿದ್ದಳು. ನನ್ನ ಮೊಬೈಲ್ ಇನ್ ಬಾಕ್ಸ ತುಂಬೆಲ್ಲಾ ಅವಳದೆ  ಮೆಸ್ಸೆಜುಗಳು ತುಂಬಿದ್ದವು.  ಮಿಸ್ ಕಾಲಗಳು ಮುಗಿಬಿದ್ದಂತೆ ಕಂಡಿದ್ದವು. ನನ್ನಳೊಗೆ ಏನೋ ಹೇಳತೀರದ ನೋವು ಮಡುಗಟ್ಟಿ ನಿಂತಿಂದ್ದರಿಂದ ತಡೆಯಲಾಗದೆ ಸ್ವಿಚ್ ಆಪ್ ಮಾಡಿ ಕುಳಿತರೂ ಸಹ ಕಣ್ಣ ಮುಂದೆ ಅವಳದೇ ನೆನಪು. ಭೂಮಿ ಅಭಿಲೇಖಾಲಯದ ರೆಕಾರ್ಡ ಕೀಪರ್ ಆಗಿ ಕೆಲಸ ನಿರ್ವಹಿಸುವಳು. ನೋಡಲು ಸಹ ಅಷ್ಟೆ ಚೆಲುವು. ನೀವು ಖಂಡಿತ ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿಯೆ ನೋಡಿಯೆ ನೋಡುತ್ತಿರಿ. ಯಾಕಂದ್ರೆ ಅವಳ ತುಂಬು ಗಲ್ಲದ ಮೇಲೆ ಸದಾ ನಗುವಿನ ಬಿಂಬ ತುಂಬಿ ತುಳುಕುತ್ತದೆ. ಅಷ್ಟೊಂದು ಆಕರ್ಷಕ ವ್ಯಕ್ತಿತ್ವ ಅವಳದು. ನಾನು ಇದೇ ಆಫೀಸಿನಲ್ಲಿ ಭೂಮಾಪಕನಾಗಿ ಕಾರ್ಯ ನಿರ್ವಹಿಸುತ್ತೇನೆ. ಎಂತಹ ಬಿಡುವಿಲ್ಲದ ಒತ್ತಡದ ಕೆಲಸದ ನಡುವೆಯೂ ನನಗೆ ಸಹಾಯ ಮಾಡುತ್ತಲೇ ಇರುತ್ತಾಳೆ. ಆದರೆ ಅವತ್ತು ಮಾತ್ರ ಮುಖ ಸಪ್ಪಗೆ ಮಾಡಿ ಕುಳಿತು ಡ್ರಾಯಿಂಗ್ ಶೀಟ್ ಮೇಲೆ ಟಾಚನಿಯಿಂದ ಮನಸೊ ಇಚ್ಛೆ ಚುಚ್ಚುತ್ತಾ ತನ್ನ ಕೋಪ ಶಮನ ಮಾಡಿಕೊಳ್ಳಲು ಪ್ರಯತ್ನಿಸಿದಂತಿತ್ತು.

kdl01ನನ್ನ ಕಂಡ ಕ್ಷಣವೇ ಏನೇನು ಆಗಿಲ್ಲವೆನ್ನುವಂತೆ ಒತ್ತಾಯಪೂರ್ವಕವಾಗಿ ಮುಗುಳ್ನಗೆ ತರಲು ಪ್ರಯತ್ನಿಸಿ ಸೋತಳು. ಅವಳ ಹುಸಿನಗೆಯಲ್ಲಿ ನೂರಾರು ಅರ್ಥಗಳು ಇಣುಕುತ್ತಿದ್ದವು. ನಾನು ಎಂದಿನಂತೆ ಅಭಿಲೇಖಾಯದಲ್ಲಿ ಕೂತು ದಪ್ತರ ಬಿಚ್ಚಿ ನನಗೆ ಸಂಬಂಧಿಸಿದ ಸರ್ವೇ ನಂಬರಗಳ ಮಾಹಿತಿಗಾಗಿ ಟಿಪ್ಪಣಿ ಪುಸ್ತಕ ಹುಡುಕಿದ್ದೆ ಹುಡುಕಿದ್ದು ಸಿಗುತ್ತಿಲ್ಲ; ಭೂಮಿಗೆ ಕೇಳಬೇಕೆಂದರೆ  ಯಾಕೋ ದುಃಖಿತಳಾಗಿದ್ದಾಳೆ ಕೇಳಿದರೆ ಎಲ್ಲಿ ಮತ್ತಷ್ಟು ಬೇಜಾರಾಗುತ್ತಾಳೊ ಎಂದೆನಿಸಿ ಸುಮ್ಮನೆ ಮೊಬೈಲನಲ್ಲಿ ಕೈಯಾಡಿಸುತ್ತಾ ಕುಳಿತೆ. ” ಚೆನ್ನಾಗಿದೆ ಸರ್.. ಅಷ್ಟೊಂದು ಅರ್ಜೆಂಟ್ ಅಂತಾ ಓಡಿ ಬಂದು ಮೊಬೈಲ್ ಗೇಮ್ ಆಡ್ತಾ ಇದೀರಾ..? ಎಂದಳು. ನನಗೂ ಮಾತಿಗೆಳೆಯಲು ಅಷ್ಟೇ ಬೇಕಾಗಿತ್ತು. ಅಲ್ಲಾರೀ ಮೇಡಮ್ ಊಟಕ್ಕೆ ಹೋಗೋ ಟೈಮ್ ಆಗ್ತಿದೆ,  ಯಾರದೋ ಸಿಟ್ಟು ಖಾಲಿ ಪೇಪರ ಮೇಲೆ ಹಾಕಿದ್ರೆ ಬಗೆ ಹರಿಯುತ್ತಾ ಎಂದು ನಗು ಬೀರಿದೆ. ಭೂಮಿ ಕಣ್ಣಿಂದ ಪಟ್ಟಂತೆ ಹನಿ ಜಾರಿ ಬಿದ್ದಿದ್ದು ಈಗಲು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವಳೆದುರಿಗಿನ ಕುರ್ಚಿಯ ಮೇಲೆ ಕೂತು ಅವಳ ಮಾತುಗಳಿಗೆ ಕಿವಿಕೊಟ್ಟೆ…..

“ಅಲ್ಲ… ಸರ್ ನೀವೆ  ಹೇಳಿ ನಾನು ಎಲ್ಲರ ಜೊತೆ ಕ್ಲೋಸ್ ಆಗಿ ಇರೋದೆ ತಪ್ಪಾ..? ನಗುನಗುತ್ತಾ ಮಾತಾಡ್ಲೇಬಾರ್ದಾ? ನಾನೀರೊದೆ ಹೀಗೆ.. ಎಂದು ಭೂಮಿ ನನ್ನೆಡೆಗೆ ದೃಷ್ಟಿ ನೆಟ್ಟಳು.  ಅಬ್ಬಾ..! ಅದೆಂಥ ನೋಟ ಗೊತ್ತಾ..! ಎಂಥಹ ಗಂಡೆದೆಯ ಗುಂಡಿಗೆ ಕ್ಷಣಕಾಲ ಬಿಗಿ ಹಿಡಿಯಬೇಕು. ಹೆಣ್ಣು ಎಂದರೆ ಈ ಏನೇನೊ ಉಪಮೆ , ಅಲಂಕಾರ ಬಳಸಿ.. ಮಾಯೆ, ಕ್ಷಮಯಾ ಧರಿತ್ರಿ ಹೀಗೇ ಏನೇನೋ ವರ್ಣಿಸಿ ವೇದಾಂತಿಗಳು, ಕವಿಗಳು ಸೋತಿರುವ ಹಿಂದೆ ಎಷ್ಟೆಲ್ಲಾ ಸತ್ಯ ಅಡಗಿದೆ ಎಂಬುದು ಆಗಲೇ ನನಗೆ ಗೊತ್ತಾಗಿದ್ದು.
ಏನಾಯ್ತೀಗ..? ಎಂದೆ..

ಕೇಳಿಲ್ಲಿ.. ಹ್ಞಾಂ ಮೊನ್ನೆ ಊರಿಗೆ ಹೋಗಿದ್ದಾಗ ನಮ್ಮ ಆಂಟಿ ಮನೆಯಲ್ಲಿ ಎರಡು ದಿನ ಉಳಿದು ಕೊಂಡಿದ್ವಿ… ಅಲ್ಲಿ ನಮ್ಮ ಸಂಬಂಧಿಕರಲ್ಲಿಯ ಒಂದು ಹುಡುಗ ನನ್ನ ತುಂಬಾ ಹಚ್ಚಿಕೊಂಡಿದ್ದ. ನಾನು ಹೊದಲೆಲ್ಲ ಬರುವುದು… ನನ್ನ ಮೆಚ್ಚಿಸಲು ಏನೇನೊ ಹರಸಹಾಸ ಪಡುತಿದ್ದ. ಕೊನೆಗೆ ಇವನ ಕಾಟ ತಾಳದೆ ನಾನು ಯಾವಾಗ ಇಲ್ಲಿಂದ ಪಾರಾಗಿ ಊರಿಗೆ ಹೊಗ್ತಿನೋ ಅನಿಸಿತ್ತು. ನಾನು ರೂಮಲ್ಲಿ ಒಬ್ಬಳೇ ಇರುವುದನ್ನು ಕಂಡು ಬಂದು ನಾನು ನಿನ್ನೊಂದಿಗೆ ಪರ್ಸನಲ್ ಆಗಿ ಮಾತಾಡಬೇಕು… ನಿನ್ನೇಯಿಂದ ಕಾಯ್ತಾ ಇದೀನಿ… ಪ್ಲೀಸ್ ಮಾತಾಡಬಹುದಾ ಎಂದು ಒಂದೇ ಉಸಿರಿನಲ್ಲಿ ಏನೇನೊ ಹೇಳುತ್ತಾ ಜೊತೆಗೆ ಸಣ್ಣಗೆ ನಡುಗುತ್ತಿದ್ದ. ಇವನ ಸ್ಥಿತಿ ನೋಡಿ ನನಗೆ ನಗಬೇಕೊ ಅಳಬೇಕೊ ತಿಳಿಯಲಿಲ್ಲ. ಸರಿ ಬನ್ನಿ ಎಂದು ವರಾಂಡದಲ್ಲಿ ಬಂದು ಕುಳಿತೆವು. ಹೇಳಿ ಅದಕ್ಕೇನು ಪರ್ಸನಲ್ ಎಂದರೆ  ಇಬ್ಬರೇ ಏಕಾಂತದಲ್ಲಿ ಮಾತಾಡಬೇಕಂತೆನಿಲ್ಲ ನಮ್ಮಿಬ್ಬರಿಗೆ ಕೇಳಿಸಿದಷ್ಟು ಮಾತಾಡಿದರೆ ಸಾಕಲ್ವಾ…! ಎಂದಾಗ ಹುಡುಗನ ಕೈಕಾಲು ಸಹಜವಾಗಿ ಈಗ ತಹಬಂದಿಗೆ ಬಂದಿದ್ದವು. ನೀವು ನನಗೆ ತುಂಬಾ ಇಷ್ಟವಾಗಿದ್ದಿರಿ… ನನ್ನ ಮದುವೆ ಆಗ್ತಿರಾ..? ಎಂದ . ಕ್ಷಣಕಾಲ ವಿದ್ಯುತ್  ಶಾಕ್ ಕೊಟ್ಟಂಗಾಯ್ತು… ಅಲ್ಲಾ… ಮದುವೆ ಅಂದ್ರೆ ಮಕ್ಕಳ ಆಟ ಅಂದಕೊಂಡಿದನಾ ಏನು ?

ಈ ಹುಡುಗನಿಗೆ ಎರಡೇ ಎರಡು ದಿನದಲ್ಲಿ ನಾನು ಇಷ್ಟವಾಗಿದೀನಿ ಅಂತಿದ್ದಾನೆ.  ನಾನು ಓಕೆ ಅಂದರೆ ಸಾಕು ಎರಡೇ ಎರಡು ತಿಂಗಳಲ್ಲಿ ಧಾಂ ಧೂಂ.. ಅಂತಾ ಮದುವೆ ಆಗಿ ಬುಡ್ತಾನೆ.. ಮತ್ತೇ ಎರಡೇ ಎರಡು ವರ್ಷದಲ್ಲಿ ಎರಡು ಮಕ್ಕಳು ತಂದೆಯಾಗಿ.. ನನಗೆ ತಾಯಿ ಪಟ್ಟ ಕಟ್ಟಿ ಎಡಬಿಡಂಗಿ ನಿರ್ಧಾರ ತಗೊಂದು ಡೈವರ್ಸ ಹಂತಕ್ಕೆ ಬಂದ್ರು ಬರಬಹುದು ಈ ಆಸಾಮಿ.. ಇವೆಲ್ಲ ಪ್ರಶ್ನೆಗಳು ಅವನೆದುರು ಇಡಬೇಕು ಎನಿಸಿದರೂ ಮಾತು ಹೊರಡಲಿಲ್ಲ. ಒಳಗೊಳಗೆ ನನ್ನ ವ್ಯಕ್ತಿತ್ವದ ಬಗ್ಗೆ , ನನ್ನ ಸೌಂದರ್ಯದ ಬಗ್ಗೆ ಹೆಮ್ಮೆಯೆನಿದರೂ ತೊರಗೊಡಲಿಲ್ಲ. ಆದರೂ ಅವನ ಮಾತಲ್ಲಿ ಸ್ಪಷ್ಟತೆ ಇತ್ತು. ನಾವಿಬ್ಬರೂ ಚಿಕ್ಕವರಿದ್ದಾಗ ಕೂಡಿ ಆಡಿದ್ದು ನೆನಪಿಸಿ ನಗು ಬೇರೆ  ತರಿಸಿದ. “ತಪ್ಪಾಗಿ ತಿಳಿಬೇಡಿ ನಾನು ಎಲ್ಲರೊಂದಿಗೆ ಕ್ಲೋಸ್ ಆಗಿ ಮೂವ್ ಆಗ್ತೀನಿ ಅದನ್ನೇ ಲವ್ ಅಂದಕೊಬೇಡಿ ಪ್ಲೀಸ್… ನಿಜ ಹೇಳಬೇಕಂದ್ರೆ … ಇಷ್ಟು ಬೇಗ ಮದುವೆ ಆಗೋದು ನನಗೆ ಇಷ್ಟ ಇಲ್ಲ.  ಸಂಸಾರ ಮಕ್ಕಳು ಮರಿಯ ಭಾರ ಹೊರುವಷ್ಟು ಮನಸ್ಸು ಇನ್ನು ಪಕ್ವಗೊಂಡಿಲ್ಲ ಸ್ವಾರಿ… ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಅನಾಮತ್ತಾಗಿ ತಪ್ಪಿಸಿಕೊಂಡು ಊರಿಗೆ ಬಂದಿದ್ದೆ.

ಆದರೆ ಈ ಬೆನ್ನಿಗಂಟಿದ ಬೇತಾಳ ಬಿಡ್ತಾನಾ…? ವರ್ಷವಾಗುತ್ತಾ ಬಂತು ಇನ್ನು ನನ್ನದೇ ಹೆಸರಲ್ಲಿ ತಪಸ್ಸು ಕುಂತಿದ್ದಾನೆ. ಪಾಪಿ ಚಿರಾಯು ಅಂತಾರಲ್ಲ ಹಾಗಾಯ್ತು.. ಅವನಿಗೆ ಯಾವಾಗ ಜ್ಞಾನೋಧಯವಾಗುತ್ತೊ ಗೊತ್ತಿಲ್ಲ. ನನಗಂತೂ ಸಾಕು ಸಾಕಾಗಿದೆ ಮೊನ್ನೆ ಅವರ ಪೇರೆಂಟ್ಸ ನಮ್ಮ ಮನೆಗೆ ಕಳಿಸಿ ಮಾತಾಡಿಸಿದ್ದಾನೆ. ಯಾವೊದೋ ಕಂಪನಿಯಲ್ಲಿ ಇಂಜಿನೀಯರ್ ಅದಾನಂತೆ.. ನಾನು ಏನು ಮಾಡ್ಬೇಕೊ ತಿಳಿತಿಲ್ಲ.. ಅಪ್ಪ ಅಮ್ಮ ನಿರ್ಧಾರ ನನ್ನ ಕಡೆ ಬಿಟ್ಟಿದ್ದಾರೆ. ಏನ ಮಾಡೋದು ನೀನೇ… ಹೇಳು ಮಾರಾಯಾ ? ಎಂದು ಎಲ್ಲ ತೋಡಿಕೊಂಡು ಮನಸ್ಸು ಹಗುರವಾದ ಖುಷಿಯಲ್ಲಿ ಕುಳಿತಿದ್ದಳು. ಅವಳ ಮಾತಲ್ಲಿ ಮದುವೆಯ ಬಗ್ಗೆ ಸಮ್ಮತಿ ಇಣುಕುತ್ತಿತ್ತು. ಭೂಮಿಯ ಪ್ಲಾಶ್ ಬ್ಯಾಕ ಸ್ಟೋರಿ ಕೇಳಿ ಆಗಲೇ ನನ್ನ ಹಸಿವು ನೆಪ ಹೇಳದೆ ಕಾಲ್ಕಿತ್ತೀತ್ತು. ಛೇ… ನಾನು ಕಟ್ಟಿದ್ದ ಕನಸಿನ ಮಹಲು ನನಗೆ ಅರಿವಿಲ್ಲದಂತೆ ಒಂದೊಂದಾಗಿ ಕಣ್ಣೆದುರಿಗೆ ಒಡೆದು ಚೂರು ಚೂರಾಗುತ್ತಿದ್ದರು ಮುಖದಲ್ಲಿ ನಗು ಇದೆ. ಆದರೆ,  ಎದೆಯಲ್ಲಿ…? ನಾನು ಈಗ ಅವಳೆದರು ಹೇಳಿಕೊಳ್ಳಲು ಯಾವ ದಾರಿಯೂ ಉಳಿದಿಲ್ಲ … ಅದೇಷ್ಟೊ ಬಾರಿ ಅವಕಾಶ ಒದಗಿದರು ಸಹ ಒಂದು ಮಾತು ಹೊರಬಂದಿಲ್ಲ. ಅದೇಷ್ಟೊ ರಾತ್ರಿಗಳು ಏನೇನೊ ಯೋಜನೆ ಹಾಕಿ ಮರುದಿನ ಅವಳೆದುರು ಹೇಳಬೇಕು ಎಂದಾಗಲೊಮ್ಮೆ ಭಾವನೆಗಳು ಬಹುಮತ ಕಳೆದುಕೊಂಡು ಮನದ ಸದನದಲ್ಲಿ ಜಾರಿಗೆ ಬರದ ಈ ನಿರ್ಣಯಗಳು ಕಂಡು ರೋಸಿ ಹೋಗಿದ್ದಿದೆ.

” ಸರ್… ಆಫೀಸ್ ನಲ್ಲಿ ಒಬ್ರೆ ಏನ್ ಮಾಡ್ತಾ ಇದ್ದೀರಾ? ಯಾಕೆ ಮದುವೆ ಮುಗ್ಸಕೊಂಡು ಇಷ್ಟು ಬೇಗ ಬಂದ್ರಾ…? ಎಂದು ನಮ್ಮ ಆಫೀಸಿನ ಪ್ಯೂನ್ ಮುಜಾವರ ಹೇಳಿದಾಗಲೇ ನನಗೆ ಗೊತ್ತಾಗಿದ್ದು ಅವಳ ಮದುವೆ ಇದೆ ಎಂದು; ಮದುವೆಗೆ ಹೋಗಲು ತಯಾರಾಗಿ ಬಂದವನು ನಾನು ಆದರೆ ನನ್ನ ಕಾಲ್ಗುಳು ನನಗೆ ಅರಿವಿಲ್ಲದಂತೆ ಈ ಕಡೆ ಬಂದಿದ್ದವು ..! ಸರ್… ಗಿಪ್ಟ್ ಕೊಡುವುದು ಬಿಟ್ಟು ನೀವೇ ತಂದ್ರಾ ಎಂದು ಮತ್ತೊಮ್ಮೆ ಕೇಳಿದಾಗಲೇ ನಾನು ಸಂಪೂರ್ಣವಾಗಿ ವಾಸ್ತವಕ್ಕೆ ಬಂದಿದ್ದು. ಅಯ್ಯೋ… ! ಮದುವೆಗೆ ಹೋಗಲು ಇಷ್ಟೇಲ್ಲ ತಯಾರಾಗಿ ಗಿಪ್ಟ್ ತಂದು ಭೂಮಿಯ ಯೋಚನೆಯಲ್ಲಿ ಮುಳುಗಿ ಇಲ್ಲಿ ಕುಳಿತಿದ್ದೇನೆ. ನನ್ನ ಈ ಮುಟ್ಟಾಳ ನಿರ್ಧಾರಕ್ಕೆ ಹೇಗೆ ಪ್ರತಿಕ್ರಿಯಸಬೇಕೋ ತಿಳಿಯದೆ ಪಾಪಪ್ರಜ್ಞೆ ಕಾಡಲಾರಂಬಿಸಿತು.

ಭೂಮಿಯ ಎದುರಲ್ಲಿ ಅವತ್ತೊಂದಿನ ಪರೋಕ್ಷವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದೆ . ಅವಳು ಕೇಳಿಯು ಕೇಳಿಸದಂತೆ ಬೇರೆ ವಿಚಾರ ಚರ್ಚಿಸಿ ಮಾತು ಮರೆಸಿದ್ದಳು. ಆದರೆ ಪದೇ ಪದೇ ಹೇಳುತ್ತಿದ್ದಳು ನಾನು ನಿನಗೊಂದು ಸರ್ ಪ್ರೈಜ್ ಕೊಡ್ತೀನಿ ಅಂತಾ… ಕೊನೆಗು ಗೊತ್ತೆ ಆಗಲಿಲ್ಲ.
ಭೂಮಿ ನಮ್ಮ ಆಫೀಸಿನಿಂದ ವರ್ಗಾವಣೆಯಾಗಿ ಬೇರೆ ಊರಿಗೆ ಹೋಗುವಾಗ ನನಗೊಂದು ಗಿಪ್ಟ್ ಕೊಟ್ಟಿದ್ದಳು. ಹೌದು ಎಲ್ಲಿಟ್ಟಿದ್ದೇನೆ ಎಂಬುವುದು ನೆನಪೇ ಆಗುತ್ತಿಲ್ಲವಲ್ಲ…. ಬಿಚ್ಚಿಯು ನೋಡಿಲ್ಲ. ಅಯ್ಯೋ ಇಲ್ಲೆ ಆಫೀಸಿನಲ್ಲಿ ಆ ದಪ್ತರ ಪಕ್ಕ ಇರಿಸಿದ್ದ ಮಂದ ನೆನಪು. ಅವತ್ತು ಗಡಿಬಿಡಿಯಲ್ಲಿ ಭೂಮಿಯ ಲಗೇಜ್ ಎತ್ತಿಕೊಂಡು ಅವಳನ್ನು ಬೀಳ್ಕೊಡುವ ಆತೂರದಲ್ಲಿದ್ದ ನನಗೆ ಛೇ.. ಮರೆತೆ ಹೋಗಿದೆ. ಅಭೀಲೇಖಾಯ ಇರಿಸಿದ ಸಾಮಾನುಗಳು ಆಗಾಗ ಜಾಗ ಬದಲಾಗುವುದು ಮಾಮೂಲಿ  ನಾಲ್ಕು ತಿಂಗಳ ನಂತರವಾದರೂ ನೆನಪಾಯಿತಲ್ಲ. ಸರಿ ಇನ್ನೂ ಸಮಯವಿದೆ ಬೈಕ್ ನಲ್ಲಿ ಮದುವೆಗೆ ಹೋದರಾಯಿತು. ಇಲ್ಲಿಂದ ಸುಮಾರು ಮುವತ್ತು ನಿಮಿಷದ ದಾರಿ… ಕಪಾಟಿನಲ್ಲಿ… ನಕ್ಷೆಗಳು ಇರಿಸಿದ ಅಲಮಾರದ ಮೇಲೆ , ಟೇಬಲ್ ಡ್ರಾದಲ್ಲಿ ಎಲ್ಲಿಯೂ ಕಾಣುತ್ತಿಲ್ಲ ಯಾಕೋ ಎದೆ ಡವಗುಟ್ಟುತ್ತಿದೆ.

ಆ ದಿನ ಊರಿಗೆ ಹೋಗುವಾಗ ಮುರ್ಕಾಲ್ಕು ಬಾರಿ ನನ್ನ ಭುಜಕ್ಕೆ ತಾಕಿಸಿ ತನ್ನ ಭುಜ ತಾಕಿಸುತ್ತಾ…. ಬಿಟ್ಟು ಹೋಗೊಕೆ ಬೇಜಾರಾಗ್ತಾ ಇದೆ ಕಣೋ… ಎಂದು ನನ್ನನ್ನೇ ಪಿಳಿಪಿಳಿ ಕಣ್ಣು ಬಿಡುತ್ತಾ  ನೋಡುತ್ತಿದ್ದಳು. ಗಂಡನ ಮನೆಗೆ ಹೋಗ್ತಾ ಇರೋ ತರಾ ಆಡ್ತಿತಿದಿಯಲ್ಲಾ… ಎಂದು ರೇಗಿಸಿದ್ದೆ.
ನನ್ನನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಗಿಪ್ಟ್ ಸೆಂಟರ್ ಹೋಗಿ ಬಂದು ಬ್ಯಾಗೊಂದನ್ನು ನನ್ನ ಕೈಯಲ್ಲಿರಿಸಿ ನಾನು ಹೋದ ಮೇಲೆ ಓಪನ್ ಮಾಡು… ಎಂದು ಹೇಳಿ ಬಸ್ ಕಿಟಿಕಿಯ ಪಕ್ಕ ಕುಳಿತು ಸಿನಿಮಿಯ ದೃಶ್ಯದಂತೆ ಕೈ ಬೀಸಿ ಹೋಗಿದ್ದಳು. ಬಟ್ ಈಗ ಯಾರದೋ ಕೈಯಿಂದ ತಾಳಿ ಕಟ್ಟಿಸಿ ಕೊಳ್ಳುತ್ತಿದ್ದಾಳಲ್ಲ ಎಂದು ಮನ ಮರುಗಿತು. ತೆಲೆ ತುಂಬಾ ಹೀಗೆ ಏನೇನೊ ಯೋಚನೆಗಳು ಸುಳಿದಾಡುತ್ತಿದ್ದವು. ಆ ಮೂಲೆಯಲ್ಲಿ ರಾಶಿ ಪೇಪರ ನಡುವೆ ಏನೋ ಡೆಬ್ಬಿ ಕಾಣುತ್ತಿದೆ. ಅದೇ ಇರಲಿ.. ಅದೇ ಇರಲಿ.. ಎಂದು ಮನಸ್ಸು ಹಲುಬುತ್ತಿದೆ. ನೋಡಿದರೆ ಅಬ್ಬಾ…ಅದೇ ಅವಳೆ ಸಿಕ್ಕಷ್ಟು ಖುಷಿ ತೆಗೆದು ಈಗಲೇ ನೋಡಲೇ ಆಮೇಲೆ ನೋಡಲೇ ಎಂಬ ಪ್ರಶ್ನೆ ಕಾಡೀತು. ಥತ್ತೇರಿ… ಎಲ್ಲುವು ಹೀಗೆ ತಡಮಾಡಿಯೇ ಕಳಕೊಂಡಿದ್ದು ಮುರ್ನಾಲ್ಕು ಕವರ್ ಒಳಗೊಂದು ಮಂದಸ್ಮಿತ ಬುದ್ಧನ ಪುಟ್ಟ ವಿಗ್ರಹ ಇದೆ  ಮತ್ತು ಮಡಚಿ ಇಟ್ಟ ಚೀಟಿ…

ಓದಲಾರಂಬಿಸಿದೆ…..
” ಹಾಯ್…ಹಲೋ ಪೆದ್ದು ಕಣೋ ನೀನು… ನಂಗೊತ್ತಿಲ್ಲ ಅಂದಕೊಂಡಿದಿಯಾ… ನಾನು ತಂದ ಚಾಕ್ಲೇಟ್ ನೀನು ದಿನಾಲು ಕದ್ದು ತಿನ್ನುತ್ತಾ ಇದ್ದುದ್ದು ನಂಗೆ ಗೊತ್ತಿಲ್ಲ.. ಅಂದ್ಕೊಂಡಿದಿಯಾ..? ಕಳ್ಳ ನೀನು  ನಾನು ಬೇಡಿದರೆ ಕೊಡ್ತಾ ಇರ್ತಾ ಇರಲಿಲ್ವೆನೋ ಬೇಕೊಪಾ.., ಅದ್ಕೆ ನಾನು ದಿನಾ ನಿಂಗೊಸ್ಕರ ಅಂತಾನೆ ಜಾಸ್ತಿ ತರ್ತಿದ್ದೆ ಗೊತ್ತಾ..? ಹೌದು ಯಾವಾಗ್ಲೂ ನನ್ನನ್ನೇ ವಾರೆಗಣ್ಣಿಂದ ನೋಡ್ತಾ ಇರ್ತಾ ಇದ್ದಿಯಲ್ಲಾ…ಯಾವತ್ತು ಹುಡ್ಗಿರಿಗೆ ನೋಡೆ ಇಲ್ವಾ…ಮುಟ್ಟಳಾ,  ನಾನು ತಿಂತಿರೋ ಐಸ್ ಕ್ರೀಮ್ ನಲ್ಲಿ ಪಾಲು ಕೇಳೊ ತರಾ ಕವಿತೆ ಬರೆತಿಯಾ…? ಅವತ್ತು ನೀನು ನಾನು ಐಸ್ ಕ್ರೀಮ್ ತಿನ್ನುವಾಗ ಅದೇನೊ ಯೋಚನೆ ಮಾಡಿ ಪೆನ್ನು ತಗೊಂಡು ಗರಗರ ಗೀಚಿದ್ದು ನೀ ಹೋದ ಮೇಲೆ ನೋಡದೆ.. ಅಲ್ಲಾ ಅಷ್ಟೊಂದು ಚೆನ್ನಾಗಿ ಕವಿತೆಯ ಸಾಲುಗಳು ನಿನಗೆ ಹೊಳೀತಾವೊ ಕವಿ… ಸ್ವಾರಿ ಕಣೋ ನಿನ್ನ ಹೀಗೆ ತುಂಬಾ ದಿನದಿಂದಲೂ ಬೈಬೇಕು ಅನ್ನೊದು ನನ್ನಾಸೆ ಇದೊಂದು ಬಾರಿ ಬೈಸ್ಕೊ ತಪ್ಪಾಗಿ ತೀಳಿಬೆಡ ಪ್ಲೀಸ್.. ನಿಜ ನೀನು  ಅಷ್ಟೊಂದು ಇಷ್ಟ ಪಡ್ತಾ ಇದ್ದೀಯಾ ಒಂದು ಮಾತು ಹೇಳಬಾರೆದೆನೊ.. ನೀನಾಗೆ ಹೇಳ್ತಿಯಾ ಅಂತಾ ಕಾದೆ ಬಟ್ ನಿನ್ನದು ಜಾಸ್ತಿ ದಿಮಾಕು… ಹೋಗ್ಲಿ ಬಿಡಪ್ಪಾ…ನಾವಿಬ್ರು ಆಫೀಸ್ ನಲ್ಲಿ ಅಷ್ಟೊಂದು ಕ್ಲೋಸ್ ಆಗಿ ಇದ್ರೆ ನಮ್ಮನ್ನ ತಪ್ಪಾಗಿ ತಿಳ್ಕೊತಾರೆ ಅಂತ ಸ್ವಲ್ಪ ಅವೈಡ್ ಮಾಡದೆ ಸ್ವಾರಿ ಕಣೋ ಕೋತಿ… ಇರ್ಲಿ ನಾನೆ ಹೇಳ್ತಿನಿ ಕೇಳು ನಿನಂದ್ರೆ ನನಗಿಷ್ಟ…

ಜಾಸ್ತಿ ಖುಷಿಪಡಬೇಡ… ಒಬ್ಬ ಒಳ್ಳೆಯ ಸ್ನೇಹಿತನಾಗಿ… ಹಿತೈಷಿಯಾಗಿ…. ನನಗೆ ನೀನು ತುಂಬಾ ತುಂಬಾ ಇಷ್ಟ. ನಿನ್ನ ಹೃದಯ ಹೂದೋಟದಲ್ಲಿ ಅರಳಿರುವ ನನ್ನ ನೆನಪುಗಳು ಜತನದಿಂದ ಕಾಪಾಡಿಕೊ… ಪ್ಲೀಸ್ ನನ್ನ ಮರೀಬೇಡ ಕಣೋ… ಈ ಜಗದಲ್ಲಿಯ ಎಲ್ಲ ಸಮಸ್ಯೆಗಳಿಗೆ ಬುದ್ಧನ ಸನ್ನಿಧಿಯಲ್ಲಿ ಉತ್ತರಗಳಿವೆ. ಅದಕ್ಕೆ ನಾನು ಬುದ್ಧನನ್ನು ತುಂಬಾ ಇಷ್ಟ ಪಡ್ತೀನಿ. ಸದಾ ಖುಷಿಯಿಂದ ಶಾಂತನಾಗಿರು. Take care.. love you…ಆಕಾಶ.
ಯಾಕೋ ಹೆಜ್ಜೆಗಳು ಭಾರವಾಗಿವೆ… ಕಣ್ಣಂಚಲ್ಲಿ ಮೋಡ ಹನಿಕಟ್ಟಿದೆ. ಸುರಿಯತ್ತಲೂ ಇಲ್ಲ. ಸುಮ್ಮನೆ ಎದೆ ಭಾರಮಾಡುತ್ತಿದೆ.
ಮದುವೆಗೆ ಹೋಗಲೊ ಬೇಡವೋ ಎಂಬ ಯೋಚನೆಯಲ್ಲಿ ಕುಳಿತಿದ್ದೇನೆ.

*** *** ***

ಅನಿಲ್ ಗುನ್ನಾಪುರ,  ಊರು ಇಂಡಿ ತಾಲೂಕಿನ ಹಿರೇಮಸಳಿ. ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದ ಇವರು  ಸದ್ಯ  ವೃತ್ತಿಯಿಂದ ಭೂಮಾಪಕರಾಗಿ ಬಾಗಲಕೊಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ವೇ ಸಾಹಿತ್ಯ ಬೆಳೆಸುವ ಪ್ರಯತ್ನದಲ್ಲಿ ಇದ್ದಾರೆ. ಕನ್ನಡ ಸಾಹಿತ್ಯಕ್ಕೆ ಭೂಮಾಪನ ಇಲಾಖೆಯಲ್ಲಿಯ ವಿಶೇಷವಾದ ಶಬ್ದಗಳು ಮತ್ತು ರೈತ ಸಮೂದಾಯದ ನೋವು ನಲಿವುಗಳು ಕನ್ನಡ ಸಾಹಿತ್ಯದಲ್ಲಿ ಬೆರೆಯಬೇಕು ಎಂಬುವುದು ಇವರ ಹಂಬಲ. ಇವರ ಕವಿತೆ, ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದು ಇವರ ಪ್ರಕಟಿತ ಮೊದಲ ಕಥೆ.

Leave a Reply

Your email address will not be published.