ಭಾರತಕ್ಕೆ ಹರಿಯುತ್ತಿದ್ದ ವಿದೇಶಿ ವಿನಿಮಯ ಹಣದಲ್ಲಿ ಇಳಿಮುಖ

  -ಅನು: ಶಿವಸುಂದರ್

ಕಳವಳಕಾರಿ ಆರ್ಥಿಕ ಸೂಚನೆಗಳು

ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಂದ  ಭಾರತಕ್ಕೆ ಹರಿಯುತ್ತಿದ್ದ ಹಣಪಾವತಿಗಳು ಇಳಿಮುಖಗೊಂಡಿರುವುದು ಹಲವಾರು ಕಾರಣಗಳಿಂದ ಕಳವಳಕಾರಿಯಾಗಿದೆ.

ಮುಂದುವರೆದ ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ಮೂಲದ ಕಾರ್ಮಿಕರ ಮೂಲಕ ಭಾರತಕ್ಕೆ ಹರಿದು ಬರುತ್ತಿದ್ದ ಪಾವತಿಗಳ ಮೊತ್ತವು ೨೦೧೫ ಮತ್ತು ೨೦೧೬ರ ಎರಡೂ ಸಾಲಿನಲ್ಲೂ ಇಳಿಮುಖಗೊಂಡಿದೆ. ೨೦೧೫ರಲ್ಲಿ ಈ ಒಳಹರಿವಿನ ಪ್ರಮಾಣ ಶೇ. ೧ ರಷ್ಟು ಕಡಿತವಾದರೆ, ೨೦೧೬ರಲ್ಲಿ ಈ ಪ್ರಮಾಣ ಶೇ.೨.೪ಕ್ಕೆ ಕುಸಿದಿದೆ. ಭಾರತದ ಮಟ್ಟಿಗಂತೂ ಈ ಕುಸಿತ ಶೇ.೯ ರಷ್ಟಾಗಿದೆ ಹಾಗೆ ನೋಡಿದರೆ ಜಗತ್ತಿನ ಅನಿವಾಸಿ ಕಾರ್ಮಿಕ ಮೂಲದಿಂದ ಪಾವತಿಯ ಒಳಹರಿವನ್ನು ಅತಿಹೆಚ್ಚು ಪಡೆಯುವ ದೇಶಗಳಲ್ಲಿ ಭಾರತವೇ ಅಗ್ರಮಾನ್ಯವಾಗಿದೆ. ಈ ಪ್ರವೃತ್ತಿ ಹೀಗೆ ಮುಂದುವರೆದಲ್ಲಿ ವಿದೇಶಿ ವಿನಿಮಯ ಸಂಗ್ರಹದ ಚಾಲ್ತಿ ಖಾತೆ (ಕರೆಂಟ್ ಅಕೌಂಟ್)ನಲ್ಲಿ ಏರುಪೇರು ಆಗುತ್ತದೆ. ಅಷ್ಟು ಮಾತ್ರವಲ್ಲ. ಪಶ್ಚಿಮ ಏಷಿಯಾ ಮತ್ತಿತರ ದೇಶಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಕಾರ್ಮಿಕರನ್ನು ಕಳಿಸುವ ಕೇರಳಂಥ ರಾಜ್ಯಗಳ ಮೇಲೆ ತೀವ್ರವಾದ ಪ್ರಭಾವವನ್ನೇ ಬೀರುತ್ತದೆ. ಈ ವಿದೇಶದಿಂದ ಹರಿದು ಬರುವ ಹಣಪಾವತಿಗಳಿಂದ ಮಿಶ್ರ ಪರಿಣಾಮಗಳುಂಟಾಗುತ್ತವೆ. ಒಂದೆಡೆ ಸರ್ಕಾರಗಳು ಖಾಸಗಿ ವಿದೇಶಿ ಬಂಡವಾಳಿಗರಿಗೆ ಕೆಂಪುಹಾಸಿನ ಸ್ವಾಗತವನ್ನು ಬಯಸುತ್ತಿದೆ. ಆದರೆ ಮತ್ತೊಂದೆಡೆ ಇಳಿಮುಖಗೊಳ್ಳುತ್ತಿರುವ ವಿದೇಶಿ ಒಳಪಾವತಿಗಳು ಮತ್ತು ಸ್ಥಗಿತಗೊಂಡಿರುವ ತಥಾಕಥಿತ ವಿದೇಶಿ ನೆರವುಗಳು ದೇಶಕ್ಕೆ ಒಳ್ಳೆಯದನ್ನೇನೂ ಮಾಡುವುದಿಲ್ಲ.

dollarsಈ ಅಂದಾಜುಗಳನ್ನು ವಿಶ್ವಬ್ಯಾಂಕ್ ಮತ್ತು ಜರ್ಮನಿ, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ನ ಸರ್ಕಾರಿ ಸಂಸ್ಥೆಗಳಂಥ ಬಹುದಾನಿಗಳುಳ್ಳ ಸಂಸ್ಥೆಯಾದ ಗ್ಲೋಬಲ್ ನಾಲೆಡ್ಜ್ ಪಾರ್ಟ್ನರ್ಶಿಪ್ ಆನ್ ಮೈಗ್ರೇಷನ್ ಅಂಡ್ ಡೆವಲಪ್‌ಮೆಂಟ್-ಕೆಎನ್‌ಒಎಂಎಡಿ- (ವಲಸೆ ಮತ್ತು ಅಭಿವೃದ್ಧಿಯ ಕುರಿತಾದ ಜಾಗತಿಕ ಜ್ನಾನ ಸಹಕಾರ) ಎಂಬ ಸಂಸ್ಥೆಯು ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ ಮೈಗ್ರೇಷನ್ ಅಂಡ್ ರೆಮಿಟೆನ್ಸ್ (ವಲಸೆ ಮತ್ತು ಹಣಪಾವತಿಯ ಒಳಹರಿವು)ಎಂಬ ವರದಿಯಿಂದ ತೆಗೆದುಕೊಳ್ಳಲಾಗಿದೆ. ಈ ವರದಿಯ ಪ್ರಕಾರ ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರದಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಈ ಪಾವತಿಯ ಒಳಹರಿವು ಕುಸಿದರೂ ಮರುವರ್ಷವೇ ಅದು ವಾಪಸ್ ಮರಳಿತ್ತು. ಆದರೆ ಕಳೆದೆರಡು ವರ್ಷಗಳಿಂದ ಮತ್ತೆ ಈ ಪಾವತಿಯಲ್ಲಿ ಇಳಿಮುಖತೆ ಕಂಡುಬಂದಿದೆ.

ಅದಕ್ಕೆ ಹಲವಾರು ಕಾರಣಗಳಿವೆ: ಕಚ್ಚಾ ತೈಲ ಬೆಲೆಯಲ್ಲಿ ಕುಸಿತ;ಗಲ್ಫ್ ಕೋ ಆಪರೇಷನ್ ಕೌನ್ಸಿಲ್ (ಕೊಲ್ಲಿ ಸಹಕಾರ ಪರಿಷತ್)ನ ದೇಶಗಳು ಮತ್ತು ರಷಿಯಾ ಎದುರಿಸುತ್ತಿರುವ ದುರ್ಬಲ ಆರ್ಥಿಕ ಅಭಿವೃದ್ಧಿ;ವಿದೇಶಿ ವಿನಿಮಯ ದರಗಳಲ್ಲಿ ಆಗುತ್ತಿರುವ ಏರುಪೇರುಗಳು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹಾಗು ಈ ಮೇಲಿನ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಬಂದಂತೆ ಅರೆ ಕುಶಲ ಕಾರ್ಮಿಕರು ವಿದೇಶಗಳಲ್ಲಿ ಕೆಲಸ ಕೊಡಿಸುವ ಏಜೆನ್ಸಿಗಳಿಗೆ ಹೆಚ್ಚೂ ಕಡಿಮೆ ತಮ್ಮ ಇಡೀ ಒಂದು ವರ್ಷದ ವೇತನವನ್ನು ಶುಲ್ಕವಾಗಿ ತೆರಬೇಕಾಗುತ್ತದೆ. ಮತ್ತೊಂದೆಡೆ ಸ್ವದೇಶಗಳಲ್ಲಿನ ತಮ್ಮ ಮನೆಗಳಿಗೆ ಪಾವತಿಯನ್ನು ವರ್ಗಾಯಿಸುವಂಥ ಸೇವೆಗಳಿಗೆ ಹೆಚ್ಚೂ ಕಡಿಮೆ ತಾವು ಕಳಿಸುವ ಹಣದ ಶೇ.೭.೫ರಷ್ಟು ಹಣವನ್ನು ಶುಲ್ಕವಾಗಿ ತೆರಬೇಕಾಗುತ್ತದೆಂದು ಈ ವರದಿ ತಿಳಿಸುತ್ತದೆ. ಇದರ ಜೊತೆಗೆ ಹಲವಾರು ಸಂಪತ್‌ಭರಿತ ಕೊಲ್ಲಿ ರಾಷ್ಟ್ರಗಳಿಗೆ ಭಾರತದಿಂದ ವಲಸೆ ಹೋಗಿರುವ ಕಟ್ಟಡ ಕಾರ್ಮಿಕರು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆಂಬ ವರದಿಗಳು ಸಹ ಲಭ್ಯವಿವೆ.

ಇಂಥಾ ಒಳಪಾವತಿಗಳು ದೇಶಗಳು ಆರ್ಥಿಕ ಹಿನ್ನೆಡೆಯನ್ನು ಅನುಭವಿಸುತ್ತಿರುವಾಗ ವಿದೇಶಿ ವಿನಿಮಯವನ್ನು ಪಡೆದುಕೊಳ್ಳಬಹುದಾದ ಸ್ಥಿರವಾದ ಮೂಲವನ್ನು ಒದಗಿಸುತ್ತವೆ. ಕುಸಿತ ಕಂಡುಬಂದಿರುವ ಕಳೆದೆರಡು ವರ್ಷಗಳಿಗೆ ಮುಂಚಿನ ೧೫ ವರ್ಷಗಳಲ್ಲಿ ಈ ವಿದೇಶಿ ಪಾವತಿಗಳ ಪ್ರಮಾಣ ಮೂರುಪಟ್ಟು ಹೆಚ್ಚಿತ್ತು. ಈ ಪಾವತಿಗಳು ೨೦೧೪ರಲ್ಲಿ ಉತ್ತುಂಗವನ್ನು ಮುಟ್ಟಿತ್ತು. ಆ ವರ್ಷ ಭಾರತವೇ ಅತಿಹೆಚ್ಚು ಪಾವತಿಯನ್ನು ಪಡೆದ ದೇಶವಾಗಿ ೭೦ ಬಿಲಿಯನ್ ಡಾಲರ್‌ನಷ್ಟು ವಿದೇಶಿ ವಿನಿಮಯವನ್ನು ಪಡೆದಿತ್ತು. ನಂತರದ ಸ್ಥಾನದಲ್ಲಿ ಚೀನಾ ಇದ್ದು ೬೪ ಬಿಲಿಯನ್ ಡಾಲರಿನಷ್ಟು ಪಾವತಿಯನ್ನು ಪಡೆದುಕೊಂಡಿತ್ತು. ಅದನ್ನು ಪಡೆದುಕೊಳ್ಳುವ ಕುಟುಂಬಗಳು ಗೃಹ ನಿರ್ಮಾಣ ಇತ್ಯಾದಿಗಳ ಮೇಲೆ ವೆಚ್ಚ ಮಾಡುವ ಮೂಲಕ ಆರ್ಥಿಕತೆಯ ಮನ್ನೆಡೆಗೆ ಸಹಾಯ ಮಾಡಬಹುದು.

ಆದರೆ ಇದರಿಂದ ಅಸಮಾನತೆಗಳು ಹೆಚ್ಚುವಂಥ, ಶ್ರಮಶಕ್ತಿಯ ಸರರಾಜಿನಲ್ಲಿ ವ್ಯತ್ಯಯವಾಗಬಹುದಾ ಮತ್ತು ಲಿಂಗ ಅಸಮತೋಲನದಂಥ  ಕೆಲವು ನಕಾರಾತ್ಮಕ ಪರಿಣಾಮಗಳೂ ಉಂಟಾಗಬಹುದು. ವಿಶ್ವಬ್ಯಾಂಕ್‌ನಂಥ ಸಂಸ್ಥೆಗಳ ಪ್ರಕಾರ ಈ ಹಣಪಾವತಿಗಳನ್ನು ಪಡೆದುಕೊಳ್ಳುವವರು ಬ್ಯಾಂಕುಗಳಲ್ಲಿ ಖಾತೆಯನ್ನು ತೆಗೆಯುವುದರಿಂದ ಹಣಕಾಸು ಸೇವೆಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ವಿದ್ವಾಂಸರು ಮತ್ತು ಸಂಶೋಧಕರು ಇಂಥಾ ವಾದಸರಣಿಯ ಬಗ್ಗೆ ಗಂಭೀರವಾದ ತಕರಾರುಗಳನ್ನೆತ್ತುತ್ತಾರೆ. ಅವರ ಪ್ರಕಾರ ಈ ವಿದೇಶಿ ಹಣ ಪಾವತಿಗಳು ಅಸಮರ್ಪಕ ಆರ್ಥಿಕ ಬೆಳವಣಿಗೆಗೆ ಕಾರಣವಾದ ಮೂಲಭೂತ ಕಾರಣಗಳನ್ನು ಬಗೆಹರಿಸುವುದಿಲ್ಲ ಮತ್ತು ತಥಾಕಥಿತ ಸ್ವಯಂ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಹಣಕಾಸಿನ ಮೇಲೆ ನೀಡುವ ವಿಶೇಷ ಒತ್ತು ಅಂತಿಮವಾಗಿ ಬಡವರ ಮೇಲೆಯೇ ಹೆಚ್ಚಿನ ಹೊರೆಯನ್ನು ಹೇರುತ್ತದೆ.

ಭಾರತದ ವಿದೇಶಿ ಬ್ಯಾಲೆನ್ಸ್ ಆಫ್ ಪೇಮೆಂಟ್ (ಒಂದು ದೇಶವು ವಿದೇಶಗಳಿಗೆ ತನ್ನ ಸರಕು ಮತ್ತು ಸೇವೆಗಳನ್ನು ರಫ್ತು ಮಾಡುವ ಮೂಲಕ ವಿದೇಶಿ ವಿನಿಮಯವನ್ನು ಪಡೆದುಕೊಳ್ಳುತ್ತದೆ. ಹಾಗು ಆ ಮೂಲಕ ವಿದೇಶಗಳಿಂದ ತಾನು ಆಮದು ಮಾಡಿಕೊಳ್ಳುವ ಸೇವೆ ಮತ್ತು ಸರಕುಗಳಿಗೆ ಸಂದಾಯ ಮಾಡಬೇಕಾದ ವಿದೇಶಿ ವಿನಿಮಯವನ್ನು ಪಡೆದುಕೊಳ್ಳುತ್ತದೆ. ಆದರೆ ರಫ್ತಿಗಿಂತ ಆಮದೇ ಜಾಸ್ತಿಯಾಗುತ್ತಾ ಹೋದಲ್ಲಿ ಅದಕ್ಕೆ ತೆರೆಬೇಕಾದ ವಿನಿಮಯದ ಕೊರತೆ ಉಂಟಾಗುತ್ತಾ ಬಿಕ್ಕಟ್ಟಿನ ಹಂತವನ್ನೇ ಮುಟ್ಟಬಹುದು. ಅಂಥಾ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಆಫ್ ಪೇಮೆಂಟ್ ಬಿಕ್ಕಟ್ಟು- ಸಂದಾಯ ಪಾವತಿ ಬಿಕ್ಕಟ್ಟು ಎಂದು ಕರೆಯುತ್ತಾರೆ.- ಅನುವಾದಕನ ಟಿಪ್ಪಣಿ) -ಸಂದಾಯ ಪಾವತಿ ಸಮತೋಲನವು  ಏಕರೂಪವಾಗಿಲ್ಲ. ಒಂದು ವರ್ಷದ ಸತತ ಇಳಿಮುಖವನ್ನು ಕಂಡ ಭಾರತದ ರಫ್ತು ಮಾರುಕಟ್ಟೆ ಕಳೆದ ಕೆಲವು ತಿಂಗಳಿಂದಷ್ಟೇ ಚೇತರಿಸಿಕೊಂಡಿದೆ. ೨೦೧೬ರ ಏಪ್ರಿಲ್-ಡಿಸೆಂಬರ್ ನಡುವಿನ ರಿಸರ್ವ್ ಬ್ಯಾಂಕಿನ ಬ್ಯಾಲೆನ್ಸ್ ಆಫ್ ಪೇಮೆಂಟ್ ಅಂಕಿಅಂಶಗಳನ್ನು ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿ ನೋಡಿದಲ್ಲಿ ಚಾಲ್ತಿ ಖಾತೆ ಕೊರತೆ ಮತ್ತು ಸರಕು ಸಾಮಗ್ರಿಗಳ ವಾಣಿಜ್ಯ ಕೊರತೆಗಳು ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ.

ಒಟ್ಟಾರೆ ವಿದೇಶಿ ಬಂಡವಾಳ ಮತ್ತು ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹಗಳು ಹೆಚ್ಚಿವೆ. ತೈಲಬೆಲೆಗಳು ಕಳೆದ ಮೂರು ವರ್ಷಗಳಿಂದ ಏರಿಕೆಯಾಗಿಲ್ಲವಾದರೂ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುತ್ತದೆಂದು ಹೇಳಲಾಗುವುದಿಲ್ಲ. ಶೇರು ಮಾರುಕಟ್ಟೆಯಲ್ಲಿ ಒಟ್ಟಾರೆ ವಿದೇಶಿ ಹೂಡಿಕೆಯು ಸಂಕುಚಿತಗೊಂಡಿದೆ. ಲಾಭ, ಬಡ್ಡಿ ಮತ್ತು ಡಿವಿಡೆಂಡ್‌ಗಳ ಹೊರ ಹರಿವು ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಮಾಹಿತಿ ತಂತ್ರಜ್ನಾನ ಬೆಂಬಲಿತ ಸೇವೆಗಳ ರಫ್ತಿನ ಬೆಳವಣಿಗೆಯಲ್ಲಿ ಕಂಡುಬಂದಿರುವ ಕುಸಿತವು ಕಳವಳವನ್ನುಂಟುಮಾಡುವಂತಿದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಹೊರಗುತ್ತಿಗೆ ವಿರೋಧಿ -ಗೃಹ ಮಾರುಕಟ್ಟೆ ರಕ್ಷಣಾ ನೀತಿಗಳಿಂದಾಗಿ (ಪ್ರೊಟೆಕ್ಷನಿಸ್ಟ್ ಪಾಲಿಸಿ) ಈ ಬಗೆಯ ರಫ್ತುಗಳ ಮಾರುಕಟ್ಟೆಯ ಮೇಲೆ ನಿಯಂತ್ರಣಗಳು ಮುಂದುವರೆಯಲಿದೆ. ಅದೇರೀತಿ ಭಾರತದ ಇತರ ರಫ್ತುಗಳಿಗೂ ಅಮೆರಿಕ, ಪಶ್ಚಿಮ ಯೂರೋಪ್ ಮತ್ತು ಜಪಾನುಗಳಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಯಾವುದೇ ಹೆಚ್ಚುವರಿ ಬೇಡಿಕೆ ಕಂಡುಬರುವ ಖಾತರಿಯೇನಿಲ್ಲ.

ಈ ವಿಶಾಲ ಸಂದರ್ಭದೊಳಗಿಟ್ಟೇ ಅನಿವಾಸಿ ಭಾರತೀಯ ಕಾರ್ಮಿಕರ ಹಣಪಾವತಿಯಲ್ಲಿ ಕಂಡುಬರುತ್ತಿರುವ ಕುಸಿತವನ್ನು ಅರ್ಥಮಾಡಿ ಕೊಳ್ಳಬೇಕಿದೆ. ಅನಿವಾಸಿ ಕಾರ್ಮಿಕರ ಪಾವತಿಗಳು ಗುತ್ತಿಗೆ ವಲಸಿಗರಿಗೆ ಮತ್ತು ಅರೆಕುಶಲ ಕಾರ್ಮಿಕರಿಗೆ ಜೀವನೋಪಾಯವನ್ನು ಕಲ್ಪಿಸುತ್ತಾ ಭಾರತವನ್ನೂ ಒಳಗೊಂಡಂತೆ ಇತರ ಹಲವಾರು ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಯಲ್ಲಿ ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತಿವೆ. ಈ ಪಾವತಿಗಳ ಮತ್ತೊಂದು ಮೂಲ ಉತ್ತರ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯ ಸಾಫ್ಟ್‌ವೇರ್ ಇಂಜನಿಯರ್‌ಗಳು. ಇವರು ಕಳಿಸುತ್ತಿದ್ದ ಪಾವತಿಗಳ ಬಹುಪಾಲು ವಸತಿಯಂಥ ಆಸ್ತಿಪಾಸ್ತಿಗಳ ಖರೀದಿಯ ಮೇಲೆ ಹೂಡಿಕೆಯಾಗುತ್ತಿತ್ತು.  ಇತ್ತೀಚೆಗೆ ಎಚ್೧ಬಿ ವೀಸಾಗಳ ಮೇಲೆ ಹೇರಿರುವ ನಿರ್ಬಂಧಗಳು ಈ ಮೂಲವನ್ನೂ ಸಹ ಬರುವ ದಿನಗಳಲ್ಲಿ ಬತ್ತಿಸಲಿದೆ.

ಒಟ್ಟಾರೆಯಾಗಿ ನೋಡುವುದಾದರೆ ಈ ಬಗೆಯ ಪಾವತಿಗಳ ಹರಿವಿನಲ್ಲಿ ಕಂಡುಬರುತ್ತಿರುವ ಕುಸಿತವನ್ನು ತಡೆಯುವುದು ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲವಾದರೂ ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆಯೆಂಬುದಂತೂ ಖಂಡಿತವಾಗಿದೆ.

ಕೃಪೆ: Economic and Political Weekly;                                                   May 20, 2017. Vol 52. No. 20

Leave a Reply

Your email address will not be published.