ಭಾಗ-3 : ಅನುಭಾವಿ ಹಡಪದ್ ಮಾಸ್ತರ್

-ಎಚ್. ಎಸ್. ವೇಣುಗೋಪಾಲ್

hsಕಳೆದ ಶತಮಾನದ  77-78 ರ ಒಂದು ದಿನ ಎಂದಿನಂತೆ ವಿದ್ಯಾರ್ಥಿಗಳು ತರಗತಿಯಲ್ಲಿ ತಮ್ಮ ಅಭ್ಯಾಸದಲ್ಲಿ ತೊಡಗಿರುವಾಗ, ಆಫೀಸ್ ರೂಮಿನ ಕಡೆಯಿಂದ ಒಳಗೆ ಬಂದ ಮಾಸ್ತರು ತರಗತಿಯಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಎಲ್ಲಾದರೂ ಒಂದು ಒಳ್ಳೆಯ ಸ್ಥಳಕ್ಕೆ ಶೈಕ್ಷಣಿಕ ಪ್ರವಾಸ ಹೋಗಬೇಕು” ಎಂದರು. ಒಬ್ಬ ಹಿರಿಯ ವಿದ್ಯಾರ್ಥಿ “ಹೌದು ಸಾರ್ ಮೂರು-ನಾಲ್ಕು ದಿನಗಳ ಪ್ರವಾಸಕ್ಕೆ ಹೋದರೆ ಚೆನ್ನ. ಎಲ್ಲರೂ ಬರ್ತಾರೆ ಎಂದು ನಮ್ಮಗಳ ಕಡೆ ತಿರುಗಿ ನೋಡಿದ. ನಾನು ತಟಕ್ಕನೆ ಪ್ರತಿಯಾಗಿ ಮಾಸ್ತರ ಕಡೆ ನೋಡುತ್ತಾ “ನೀವು ಹತ್ತಿರದಲ್ಲಿಯೇ ಯಾವುದಾದರೂ ಒಂದು ಜಾಗಕ್ಕೆ ಒಂದು ದಿನದ ಪ್ರವಾಸ ಏರ್ಪಡಿಸಿದರೆ ಒಳ್ಳೆಯದು. ಶಾಲೆಯ ವಿದ್ಯಾರ್ಥಿನಿಯರೂ ಬರಲು ಅನುಕೂಲವಾಗುತ್ತದೆ. ಅವರ ಪೋಷಕರೂ ಒಪ್ಪಿಗೆ ಕೊಡ ಬಹುದು. ಜಾಸ್ತಿ ದಿನಗಳಾದರೆ ವಿದ್ಯಾರ್ಥಿನಿಯರಿಗೆ ಪೋಷಕರ ಒಪ್ಪಿಗೆ ಪಡೆಯಲು ಕಷ್ಟವಾಗಬಹುದು” ಎಂದೆ.

ಅದಕ್ಕೆ ಮಾಸ್ತರು, “ದಂಡನಾಯಕರೇ…. ಎಂದು ಸಂಬೋಧಿಸಿ (ಮಾಸ್ತರು ಅನುಪಸ್ಥಿತಿಯಲ್ಲಿ ಹಲವು ಬಾರಿ ಶಾಲೆಯ ನಿರ್ವಹಣೆಯ ಹಿರೇಮಣಿ ಕೆಲಸ ನನಗೆ ಒದಗಿಬರುತ್ತಿದ್ದ ಸಂದರ್ಭದಲ್ಲಿ ನನ್ನ ನಡವಳಿಕೆಯನ್ನು ಆಕ್ಷೇಪಿಸಿ ಒಬ್ಬ ಕಿರಿಯ ವಿದ್ಯಾರ್ಥಿ ಮಾಸ್ತರ ಹತ್ತಿರ ಹೇಳುವಾಗ- ನಾನು ತುಂಬಾ ಕಟ್ಟುನಿಟ್ಟು. ಶಿಸ್ತಿನ ದಂಡನಾಯಕನಂತೆ ದಬ್ಬಾಳಿಕೆ ಮಾಡುತ್ತೇನೆಂದು ಬಿರುದಾವಳಿಯನ್ನು ದಯಪಾಲಿಸಿದ್ದನು. ಅಂದಿನಿಂದ ಕೆಲವು ವರ್ಷ ಮಾಸ್ತರು ನನಗೆ ದಂಡನಾಯಕನೆಂದು ಕಿಚಾಯಿಸುತ್ತಿದ್ದರು) “ನಾನು ಏಕೆ ಪ್ರವಾಸ ಏರ್ಪಡಿಸಬೇಕು? ನೀನು ಏಕೆ ಇದರ ಬಗ್ಗೆ ಕಾಳಜಿ ವಹಿಸಬಾರದು? ನೀನು ಬರೀ ಸಲಹೆ ಕೊಡುವುದಕ್ಕೇ ಏನು ಇರುವುದು? ಎಂದು ತೀಕ್ಷವಾಗಿ ಪ್ರಶ್ನೆಗಳನ್ನು ಹಾಕಿದ್ದರು. ಜೊತೆಗಾರರಿಗೆ ಋಷಿಯೇ ಖುಷಿ. ಆ ಕ್ಷಣಕ್ಕೆ ನಾನು ಬೆಪ್ಪಾದೆ. ಆದರೆ ಮಾಸ್ತರು ವಿಷಯವನ್ನು ಅಷ್ಟಕ್ಕೇ ಬಿಡದೆ ಪ್ರವಾಸದ ಬಗ್ಗೆ ಸ್ಥಳವನ್ನು ವಿಚಾರಿಸಲು, ಪ್ರವಾಸವನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊರಲು ನನಗೆ ಅಪ್ಪಣೆ ಇತ್ತರು. ಈ ಜವಾಬ್ದಾರಿಯ ಉಸ್ತುವಾರಿಯನ್ನು ಗಮನಿಸಲು ಹಿರಿಯ ವಿದ್ಯಾರ್ಥಿಯಾದ ದಯಾನಂದ ತಪಸೆಟ್ಟಿಯವರಿಗೆ ತಿಳಿಸಿದರು. ಹೀಗಾಗಿ ನಾನು ಅನಿವಾರ್ಯವಾಗಿ ಹೊಣೆಯನ್ನು ನಿಭಾಯಿಸಬೇಕಾಯಿತು.

ದಯಾನಂದ್ ತಪಸೆಟ್ಟಿ, ಬಿ. ರಾಜ್‍ಕುಮಾರ್, ರಾಮಯ್ಯ ಇವರುಗಳ ಸಹಕಾರದಿಂದ ಹಿಂದೂಪುರದ ಬಳಿಯ ಲೇಪಾಕ್ಷಿಗೆ ಒಂದು ದಿನದ ಶೈಕ್ಷಣಿಕ ಪ್ರವಾಸ ಏರ್ಪಡಿಸಲು ಮೂಲ ಪ್ರೇರಕರಾದರು (ಪ್ರವಾಸದ ಖರ್ಚು/ವೆಚ್ಚಗಳನ್ನು ಅಂದಾಜಿಸಲು, ಆದಷ್ಟು ಮಿತವಾದ ವೆಚ್ಚಮಾಡುವ ರೀತಿಯನ್ನು ಮಾಸ್ತರು ನಮಗೆ ಕಲಿಸಿಕೊಟ್ಟರು) ಲೇಪಾಕ್ಷಿಯು ವಿಜಯನಗರ ಅರಸರ ಆಡಳಿತಕ್ಕೆ ಒಳಪಟ್ಟಿದ್ದ ಒಂದು ಐತಿಹಾಸಿಕ ಸ್ಥಳವಾಗಿದೆ. ಅಲ್ಲಿನ ಶಿಲ್ಪಕಲೆ ಮತ್ತು ಬಿತ್ತಿ ಚಿತ್ರಗಳು ಕಲಾವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಯೋಗ್ಯವಾಗಿದೆ. ಲೇಪಾಕ್ಷಿ ಪ್ರವಾಸವು ಕೆನ್‍ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆಲ್ಲರಿಗೂ ಒಪ್ಪಿಗೆಯಾಗಿ ಎಲ್ಲರೂ ಸಂತಸದಿಂದ ಪಾಲ್ಗೊಂಡು ಪ್ರವಾಸವನ್ನು ಯಶಸ್ವಿಗೊಳಿಸಿದ್ದರು. ನನಗಂತೂ ಅದು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಅಲ್ಲದೇ ಮುಂದೆ ನಾನು ಪ್ರೌಢಶಾಲೆಯಲ್ಲಿ ಚಿತ್ರಕಲಾ ಉಪಾಧ್ಯಾಯನಾಗಿ ಸೇವಾ ವೃತ್ತಿಯನ್ನು ಆರಂಭಿಸಿದಾಗ, ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಹೊಣೆಯನ್ನು ಹೊಂದಲು ಮೂಲ ಸೆಲೆಯಾಯಿತು ಎಂದರೆ ತಪ್ಪಲ್ಲ.

ಆ ಮುಂದಿನ ವರ್ಷ ಅಜೀಜ್ ಎಂಬ ವಿದ್ಯಾರ್ಥಿಯ ಮುಂದಾಳುತನದಲ್ಲಿ ವಿದ್ಯಾರ್ಥಿಗಳು ಬೇಲೂರು-ಹಳೇಬೀಡಿಗೆ ಪ್ರವಾಸವನ್ನು ಯಶಸ್ವಿಯಾಗಿ ಏರ್ಪಡಿಸಿದ್ದರು. ಮುಂದೆ ಈ ಸಂಪ್ರದಾಯವು ಮುಂದುವರೆದು ಕೆನ್‍ಶಾಲೆಯ ವಿದ್ಯಾರ್ಥಿಗಳ ವೃಂದವು ದೆಹಲಿ, ಮುಂಬೈ ಮತ್ತು ಬರೋಡ ಮುಂತಾದ ಸ್ಥಳಗಳಿಗೆ ಬಹುದಿನಗಳ ಯಶಸ್ವಿ ಶೈಕ್ಷಣಿಕ ಪ್ರವಾಸವನ್ನು ಹೋಗಿ ಬಂದದ್ದುಂಟು. ಕೆನ್‍ಶಾಲೆಯ ಈ ಪ್ರವಾಸಗಳು ಶಾಲೆಯ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹೊಸ ಪ್ರಯೋಗಗಳಿಗೆ ಪ್ರೇರಕವಾಯಿತು. ವಿದ್ಯಾರ್ಥಿಗಳ ಈ ಎಲ್ಲಾ ಯಶಸ್ಸಿನ ಹಿಂದೆ ಹಡಪದ್ ಮಾಸ್ತರು ಸದಾ ಬೆನ್ನೆಲುಬಾಗಿರುತ್ತಿದ್ದರು.

hadapadworks31980 ನೇ ಇಸವಿಯಲ್ಲಿ ಎರಡು-ಮೂರುದಿನಗಳ ಅಖಿಲ ಕರ್ನಾಟಕ ಚಿತ್ರಕಲಾವಿದರ ಒಂದು ದೊಡ್ಡ ಸಮ್ಮೇಳನವು ಈಗಿನ ಕೆ.ಪಿ.ಸಿ ಸಂಸ್ಥೆಯ ಸ್ಥಳದಲ್ಲಿ ಆಯೋಜನೆಗೊಂಡಿತ್ತು. ಅದರಲ್ಲಿ ರಾಜ್ಯದ ಹೆಸರಾಂತ ಕಲಾವಿದರು, ಕಲಾಶಾಲೆಯ ಅದ್ಯಾಪಕರಿಂದ ಹಿಡಿದು ನಾಡಿನ ಬಹುತೇಕ ಕಲಾವಿದ್ಯಾರ್ಥಿಗಳೂ ಸಹ ಪಾಲ್ಗೊಂಡಿದ್ದರು. ಸಮ್ಮೇಳನದ ಅಂಗವಾಗಿ ಒಂದು ದೊಡ್ಡ ಪ್ರಮಾಣದ ಕಲಾಪ್ರದರ್ಶನವೂ ಸಂಘಟಿತವಾಗಿತ್ತು. ವಿದ್ಯಾರ್ಥಿಗಳಾದ ನಾವೂ ಭಾಗವಹಿಸಿದ್ದೇವು. ಈಗೆ ಕೆ.ಪಿ.ಸಿ ಯಲ್ಲಿ ಕಲಾ ಪ್ರದರ್ಶನಗಳು ನಡೆಯುವ ಗ್ಯಾಲರಿಗಳು ಇರುವ ಕಟ್ಟಡ ಇರುವ ಜಾಗ ಆಗ ಖಾಲಿ ಇತ್ತು. ಆ ಜಾಗದಲ್ಲಿ ಸಮ್ಮೇಳನದ ಸಲುವಾಗಿ ಒಂದು ದೊಡ್ಡ ಸಭಾಂಗಣ ಮತ್ತು ವೇದಿಕೆಯನ್ನು ನಿರ್ಮಿಸಲಾಗಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ಹೆಸರಾಂತ ಹಿರಿಯ ಕಲಾವಿದ ಸ್ವಾತಂತ್ರ್ಯ ಹೋರಾಟಗಾರ ಶ್ರೀಮಾನ್ ರುಮಾಲೆ ಚೆನ್ನಬಸವಯ್ಯನವರು ವಹಿಸಿದ್ದ ನೆನಪು. ಸಮ್ಮೇಳನಕ್ಕೆ ಬರೋಡಾದ ಪ್ಯಾಕಲ್ಟಿ ಆಫ್ ಪೈನ್ ಆಟ್ರ್ಸ್ ಆಗಿನ ಡೀನ್ ಶ್ರೀ ರತನ್ ಪರಿಮಾವೋ ಆಗಮಿಸಿದ್ದರು.

ಮುಂಬೈನಿಂದ ಬಲವಾಡ್ ಎಂಬ ಕಲಾವಿದ ಕ್ಯಾಮ್ಲಿನ್ ಕಂಪನಿ ವತಿಯಿಂದ ಬಂದಿದ್ದು ಕಂಪನಿಯಿಂದ ಹೊಸದಾಗಿ ಪರಿಚಯಿಸಿದ್ದ ಅಕ್ರಲಿಕ್ ಬಣ್ಣಗಳನ್ನು ಬಳಸಿ ಪ್ರಾತ್ಯಕ್ಷಿಕೆಯನ್ನು ನೀಡಿದ್ದರು. ಸಮ್ಮೇಳನದ ಬೆಳಗ್ಗಿನ ಸಮಯ ಸಂವಾದ ಮತ್ತು ಭಾಷಣಗಳಿಂದ ಕಳೆ ಕಟ್ಟಿದ್ದರೆ ಆ ನಂತರದ ವೇಳೆಯು ಕಲಾವಿದರಾದ ಜಿ.ಎಸ್ ಶೆಣೈ, ಪುನಜಿತ್ತಾಯ ಸುಭ್ರಹ್ಮಣ್ಯ ರಾಜು, ಎಂ,ಎಸ್ ಚಂದ್ರಶೇಖರ್ ಖ್ಯಾತ ವ್ಯಂಗ್ಯ ಚಿತ್ರಕಾರ ರಾಮಮೂರ್ತಿ ಮುಂತಾದವರ ಪ್ರಾತ್ಯಕ್ಷಿಕೆಯಿಂದ ಸಮ್ಮೇಳನದ ಸೊಗಸು ಹೆಚ್ಚಿತ್ತು. ಸಮ್ಮೇಳನದ ಒಂದು ಮದ್ಯಾಹ್ನ ಹಡಪದ್ ಮಾಸ್ತರಿಗೆ ಭಾವಚಿತ್ರದ ಪ್ರಾತ್ಯಕ್ಷಿಕೆ ನೀಡಲು ವೇದಿಕೆಗೆ ಆಹ್ವಾನಿಸಿದರು. ಮಾಸ್ತರು ಸಾಕಷ್ಟು ಕಡೆ ಪ್ರಾತ್ಯಕ್ಷಿಕೆ ನೀಡಿದ್ದರೂ, ಅಂದು ಮಾತ್ರ ಬೇಡ ಎಂದು ಹೇಳಿದರು. ವೇದಿಕೆಯಿಂದ ಮತ್ತೆ ಒತ್ತಾಯ ಬಂದಾಗ ಮಾಸ್ತರು “ಇಂದು ನಾನು ಬೇಡ ನನ್ನ ವಿದ್ಯಾರ್ಥಿ ಪ್ರಾತ್ಯಕ್ಷಕೆ ನೀಡುತ್ತಾನೆ” ಎಂದು ಹೇಳಿದರು. ತಮ್ಮ ಶಾಲೆಯ ವಿದ್ಯಾರ್ಥಿ ಬಿ.ವಿ ಸುರೇಶ್‍ಗೆ ಭಾವಚಿತ್ರ ರಚಿಸಲು ಹುರಿದುಂಬಿಸಿದರು. (ಬಿ.ವಿ ಸುರೇಶ್ ಪ್ರಸ್ತುತ ಬರೋಡಾದ ಪ್ರಾಕಲ್ಟಿ ಆಫ್ ಫೈನ್ ಆಟ್ರ್ಸ್‍ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ) ಕಿರಿಯ ವಯಸ್ಸಿನ ಸುರೇಶ್ ಮೊದಲು ಅಳುಕಿದರೂ ಆ ನಂತರ ಮಾಸ್ತರ ಒತ್ತಾಸೆಯ ಮೇರೆಗೆ ವೇದಿಕೆ ಹತ್ತಿದರು.

ಸುಮಾರು ಅರ್ಧಗಂಟೆಯಲ್ಲಿ ಸುಂದರ ಭಾವಚಿತ್ರವನ್ನು ರಚಿಸಿ ಸಭಿಕರ ಪ್ರಶಂಷೆಯನ್ನು ಗಳಿಸಿದರು. ಅಂದು ಅವರಿಗೆ ಮಾಡೆಲ್ ಆಗಿ ಕುಳಿತಿದ್ದವರು ದಾವಣೆಗೆರೆ ಕಲಾ ಶಾಲೆಯ ವಿದ್ಯಾರ್ಥಿ. (ಇಂದು ಅವರು ಕಲಾವಿದರಾಗಿ, ಸಂಘಟಕರಾಗಿ, ವಿಮರ್ಶಕರಾಗಿ ಹೆಸರಾಗಿರುವ ಚಿ.ಸು ಕೃಷ್ಣಸೆಟ್ಟಿಯವರು) ಅನೇಕ ಹಿರಿಯ ಕಲಾವಿದರು ಸಣ್ಣವಯಸ್ಸಿನ ವಿದ್ಯಾರ್ಥಿಯಾದ ಸುರೇಶ್ ಅವರ ಕೌಶಲ್ಯವನ್ನು ಕಂಡು ಅಚ್ಚರಿ ವ್ಯಕ್ತ ಪಡಿಸಿದರು. ಹೀಗೆ ಮಾಸ್ತರು ವಿದ್ಯಾರ್ಥಿಗಳಿಗೆ ಸದಾ ಶ್ರೇಯಸ್ಸನ್ನು ಬಯಸುತ್ತಿದ್ದರು.

ವಿದ್ಯಾರ್ಥಿಗಳನ್ನು ಸದಾ ಗಮನಿಸುತ್ತಿದ್ದರು. ಅವರಿಗೆ ಬದುಕಿನ ಕೌಶಲ್ಯ ಮತ್ತು ಮೌಲ್ಯಗಳನ್ನು (life skill and value) ತಿಳಿಸಲು ತರಗತಿಯ ಹೊರತಾಗಿಯೂ ಸಂದರ್ಭ ಒದಗಿದಾಗ ತಮ್ಮದೇ ಆದ ರೀತಿಯಲ್ಲಿ ಮನದಟ್ಟು ಮಾಡಿಸುತ್ತಿದ್ದರು. ಇಂಥಹ ಅನೇಕ ಸಂದರ್ಭಗಳನ್ನು ನಾನು ಅವರಿಂದ ಪಡೆದಿದ್ದೇನೆ. ನಾನು ಇತರ ವಿದ್ಯಾರ್ಥಿಗಳು ಹಿರೇಮಠ, ಬಸವರಾಜ, ಭೀಮ್ಸಿ ಪತ್ತಾರ ಮುಂತಾದ ಏಳೆಂಟು ಜನರಿಗೆ ಕೆನ್ ಶಾಲೆಯಲ್ಲಿಯೇ ವಸತಿ (ನಮಗೆಲ್ಲ ಹಡಪದ್ ಮಾಸ್ತರು ಔದಾರ್ಯದಿಂದ ಉಚಿತ ವಸತಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದರು) ಆದರೆ ಅಭ್ಯಾಸಕ್ಕೆ ಮತ್ತು ಊಟದ ಖರ್ಚಿಗೆ ನಮ್ಮಲ್ಲಿ ಕೆಲವರಿಗೆ ಹಣದ ಕೊರತೆ ಯಾವಾಗಲೂ ಕಾಡುತ್ತಿತ್ತು.

hadapdworks2ಹೀಗಾಗಿ ನಾವು ಬಿಡುವಿನ ವೇಳೆಯಲ್ಲಿ ಶಿಕ್ಷಕ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾದ ಸಾಂಧರ್ಭಿಕ ಚಿತ್ರಗಳನ್ನು ರಚಿಸಿಕೊಡುತ್ತಿದ್ದೆವು. ಇಲ್ಲವೇ ಬ್ಯಾನರ್/ಪೋಸ್ಟರ್‍ಗಳನ್ನು ಬರೆಯಲು ಹೋಗುತ್ತಿದ್ದೆವು. ನಾನು ಒಮ್ಮೆ B.ed ವಿದ್ಯಾರ್ಥಿಗಾಗಿ teaching aid ನ್ನು ರಚಿಸುತ್ತಿದ್ದುದನ್ನು ಮಾಸ್ತರು ಗಮನಿಸುತ್ತಿದ್ದರು ಎಂದು ಕಾಣುತ್ತದೆ. ನನಗೆ ಅದರ ಅರಿವಿರಲಿಲ್ಲ ಚಿತ್ರವನ್ನು ಪೂರ್ಣಗೊಳಿಸುವ ಹೊತ್ತಿಗೆ ಅದರ ಅಗತ್ಯವಿದ್ದ ವಿದ್ಯಾರ್ಥಿಗಳು ಬಂದರು. ನಾನು ಚಿತ್ರವನ್ನು ನ್ಯೂಸ್ ಪೇಪರ್‍ನಲ್ಲಿ ಸುತ್ತಿ ಕೊಟ್ಟೆ. ಆ ವಿದ್ಯಾರ್ಥಿ ಹಣನೀಡಿ ಚಿತ್ರವನ್ನು ಪಡೆದುಕೊಂಡು ಹೊರಟು ಹೋದರು. ಅವರು ಹೋದ ನಂತರ ಮಾಸ್ತರು ನನ್ನನ್ನು ಕುರಿತು “ಚಿತ್ರ ರಚಿಸುವುದು ಅಷ್ಟೇ ಅಲ್ಲ ಅದನ್ನು ಕೊಡುವಾಗಲು ಉತ್ತಮರೀತಿಯಲ್ಲಿಯೇ ಅಣಿಗೊಳಿಸಬೇಕು” ಎಂದು ಹೇಳಿದರು. ನಾನು ಅದಕ್ಕೆ “ಎಲ್ಲರೂ ಇದೇ ರೀತಿಯಲ್ಲಿ ತಯಾರಿಸಿಕೊಡುತ್ತಾರೆ. ಅವರೂ ಹಾಗೆಯೇ ತೆಗೆದುಕೊಂಡು ಹೋಗುತ್ತಾರೆ” ಎಂದೆನು. “ಏ ಹುಂಬ ಅವರಿವರ ವಿಷಯ ಹೇಳುತ್ತೀ ನೀನು. ಚೆಂದವಾಗಿ ಕೆಲಸನಿರ್ವಹಿಸಿ ಬೇರೆಯವರಿಗೆ ಹೀಗೆ ಮಾಡಬಹುದು ಎಂಬುದನ್ನು ತೋರಿಸು” ಎಂದು ಗದರಿಸಿದರು. “ಮತ್ತೆ ಯಾರಾದರು B.ed ವಿದ್ಯಾರ್ಥಿಗಳು ಬಂದಾಗ ನನಗೆ ತಿಳಿಸು” ಎಂದು ಹೇಳಿ ಹೊರಗೆ ಹೋದರು. (ಸಂಜೆ ವಿಶ್ವವಿದ್ಯಾಲಯದ ಹವ್ಯಾಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದರು) ಅಂದಿನ ಸಂಜೆಯೇ ಮಾಸ್ತರು ಹೊರಹೋದ ಬಳಿಕ ಒಬ್ಬ ವಿದ್ಯಾರ್ಥಿ ಚಿತ್ರಗಳನ್ನು ಬರೆಸಿಕೊಳ್ಳಲು ನನ್ನನ್ನು ಸಂಪರ್ಕಿಸಿದರು. ನಾನು ಅವರಿಗೆ ಮಾಸ್ತರ ಅನುಮತಿ ಪಡೆಯಬೇಕು. ಅವರು ಈಗ ಶಾಲೆಯಲ್ಲಿಲ್ಲ. ರಾತ್ರಿ ಬನ್ನಿ. ರಾತ್ರಿ ಬರಲು ಸಾಧ್ಯವಾಗದ್ದಿದ್ದರೆ ನಾಳೆ ಬೆಳಗ್ಗೆ 8:30 ಕ್ಕೆ ಬನ್ನಿ ಎಂದು ಹೇಳಿದೆ. ಅವರು ಒಪ್ಪಿ ಮತ್ತೆ ಬರುವುದಾಗಿ ಹೇಳಿ ಹೋದರು.

ರಾತ್ರಿ ಮಾಸ್ತರು ಬಂದ ಸ್ವಲ್ಪ ಹೊತ್ತಿನಲ್ಲೇ ಆ ವ್ಯಕ್ತಿ ಬಂದರು. ನಾನು ಅವರನ್ನು ಮಾಸ್ತರ ಬಳಿಗೆ ಕರೆದೋಯ್ದೆ. ಮಾಸ್ತರು ಬಂದ ವ್ಯಕ್ತಿಯ ಹತ್ತಿರ ಚಿತ್ರದ ವಿಷಯ ಮಾತಾಡಿ ಮೂರು ದಿನಗಳ ನಂತರ ಬರಲು ತಿಳಿಸಿದರು. ಅವರು ಒಪ್ಪಿ ಮುಂಗಡ ಹಣ ನೀಡಿ ಹೊರಟು ಹೋದರು. ಮರುದಿನ ಬೆಳಗ್ಗೆ ಮಾಸ್ತರು ನನ್ನನ್ನು ಕರೆದು ಹಣ ನೀಡಿ ಕೇಜಿ ಬೋರ್ಡನ್ನು ತರಲು ಹೇಳಿದರು. ನಾನು ಬಿಳಿ ಹಾಳೆಗಳು ಸಿಗದಿದ್ದುದರಿಂದ ತಿಳಿ ನೀಲಿ ಬಣ್ಣದ ನಾಲ್ಕು ಹಾಳೆಗಳನ್ನು ತಂದಿರುವುದಾಗಿ ಹೇಳಿ ಅದನ್ನು ಮಾಸ್ತರಿಗೆ ತೋರಿಸಿದೆ. ಅವರು ಒಳ್ಳೆಯದೇ ಆಯ್ತು ಬಿಡು ಎಂದರು. ಅಂದು ರಾತ್ರಿ ಹೋಟೆಲ್‍ನಲ್ಲಿ ಊಟ ಮಾಡಿಕೊಂಡು ಬಂದ ಮೇಲೆ “ಕಲಾವಿದರೆ teaching aid ಮಾಡೋಣ ನನ್ನ ಜೊತೆ ಇರ್ತಿರೇನು?” ಎಂದು ಕೇಳಿದರು (ಮಾಸ್ತರು ಆಗಾಗ ಕಲಾವಿದರೇ ಎಂದು ತಮ್ಮ ಎದುರಿರುವ ವಿದ್ಯಾರ್ಥಿಗಳಿಗೆ ಹೇಳುವ ಪರಿಪಾಠವಿತ್ತು) ನಾನು ಸಮ್ಮತಿಸಿದೆ.

ಮಾಸ್ತರು ತಂದ ಹಾಳೆಗಳಲ್ಲಿ ಎರಡನ್ನು ಅರ್ಧಕ್ಕೆ ಸಮವಾಗಿ ಮಡಿಸಿ ಪೆನ್ಸಿಲ್‍ನಿಂದ ಬಾರ್ಡರ್ ಹಾಕಿಕೊಡಲು ಹೇಳಿದರು. ನಾನು ಹೇಳಿದಂತೆ ಮಾಡಿದೆ. ಮಾಸ್ತರು ಬುದ್ದನ ಜೀವನ ಚರಿತ್ರೆಗೆ ಸಂಬಂಧಿಸಿದ ನಾಲ್ಕು ಸಾಂದರ್ಭಿಕ ಚಿತ್ರಗಳನ್ನು ಇಂಡಿಯನ್ ಇಂಕ್ ನಿಂದ ರಚಿಸಿದರು. ನಂತರ ಅದಕ್ಕೆ ಅಗತ್ಯವಾದ ಬಣ್ಣಗಳಿಂದ ಪೂರ್ಣ ಮಾಡಿದರು. ನನಗೆ ನಾನು ಹಾಕಿದ ಪೆನ್ಸಿಲ್ ಬಾರ್ಡರ್‍ಗಳನ್ನು ಮಾರ್ಕರ್ ಪೆನ್ನಿನಿಂದ ಎಳೆಯಲು ತಿಳಿಸಿದರು. ಬಾರ್ಡರ್‍ಗಳನ್ನು ನಾನು ಹಾಕಿದ ಮೇಲೆ ನಾಲ್ಕು ಚಿತ್ರಗಳನ್ನು ಕ್ರಮವಾಗಿ ಹೊಂದಿಸಿ ಮತ್ತೊಂದು ಕೆಜಿ ಬೋರ್ಡನ್ನು ಅದರ ಮೇಲೆ ಹೊರ ಹೊದಿಕೆಯಂತೆ ಹೊದಿಸಿ ಪಿನ್ ಮಾಡಲು ಹೇಳಿದರು. ನಾನು ನೀಟಾಗಿ ಅವರು ಹೇಳಿದಂತೆ ಮಾಡಿದೆ. ನಂತರ ಮಾಸ್ತರು ಪುಸ್ತಕದಂತೆ ಆದ ಆ ಚಿತ್ರದ ಹೊದಿಕೆಗೆ “ನೀನು ನಾಳೆ ಆ ವಿದ್ಯಾರ್ಥಿಯ ಕಾಲೇಜಿನ ಹೆಸರು ಅವನ ಹೆಸರು, ವಿಳಾಸ ಇವುಗಳನ್ನು ಚೆನ್ನಾಗಿ ಬರೆದು ಅದಕ್ಕೂ ಬಾರ್ಡರ್ ಹಾಕಿಡು” ಎಂದು ಹೇಳಿ ವಿಳಾಸವಿದ್ದ ಚೀಟಿಯನ್ನು ನನಗೆ ಕೊಟ್ಟು ಅವರು ಮಲಗಲು ಸಿದ್ಧರಾದರು. ಆಗ ಸಮಯ ಸುಮಾರು 12:30 ರ ರಾತ್ರಿ ಇರಬಹುದು.

ಮರುದಿನ ಸಂಜೆ ಮಾಸ್ತರು ನೀಡಿದ ವಿಳಾಸದ ವಿವರವನ್ನು ಅವರು ಹೇಳಿದಂತೆ ಕಾಳಜಿಯಿಂದ ಬರೆದು ಮುಗಿಸಿದೆ. ಮೂರು ದಿನಕ್ಕೆ ಸರಿಯಾಗಿ ಆ ವಿದ್ಯಾರ್ಥಿಯು ಮಾಸ್ತರ ಬಳಿಗೆ ಬಂದನು. ಮಾಸ್ತರು ನನ್ನನ್ನು ಕರೆದು ಚಿತ್ರಗಳನ್ನು ನೀಡಲು ಹೇಳಿದರು. ನಾನು ಅದನ್ನು ತಂದು ಕೊಟ್ಟೆ. ಒಪ್ಪವಾಗಿ ಸಿದ್ದವಾಗಿದ್ದ ಚಿತ್ರಗಳನ್ನು ನೋಡಿ ಸಂತೋಷ ಪಟ್ಟ ವಿದ್ಯಾರ್ಥಿಯು ಹಣವನ್ನು ಮಾಸ್ತರಿಗೆ ಕೊಡಲು ಹೋದಾಗ ಅದನ್ನು ನನ್ನ ಕೈಗೆ ನೀಡಲು ತಿಳಿಸಿದರು. ಅವರು ಹಣವನ್ನು ನನಗೆ ಕೊಟ್ಟು ಮಾಸ್ತರಿಗೆ ಹೇಳಿದರು. ನನ್ನ ಸ್ನೇಹಿತರಿಗೂ ಇಲ್ಲಿಗೆ ಬರಲು ತಿಳಿಸುವುದಾಗಿ ಹೇಳಿ ಹೋದರು. ಆ ವ್ಯಕ್ತಿ ಹೋದ ನಂತರ ಹಣವನ್ನು ಮಾಸ್ತರಿಗೆ ಕೊಡಲು ಹೋದಾಗ ಅವರು ಹಣವನ್ನು ತೆಗೆದುಕೊಳ್ಳದೆ “ನಿಮ್ಮಲ್ಲೇ ಇರಲಿ ಕಲಾವಿದರರೇ work ಮಾಡೋದರಲ್ಲಿಯೂ ಒಂದು discipline ಇರಬೇಕು” ಎಂದರು. ಈ ರೀತಿ ಮಾಸ್ತರು ತಮ್ಮ ಸ್ಪರ್ಶಮಣಿಯಂತಹ ವ್ಯಕ್ತಿತ್ವದಿಂದ ಬದುಕಿನ ಕೌಶಲ್ಯದ ಪ್ರಾತ್ಯಕ್ಷತೆಯನ್ನು ನೀಡಿದ್ದರು.

ನಾನು ಈ ಮೊದಲೇ ಹೇಳಿದಂತೆ ಹಡಪದ್ ಮಾಸ್ತರು ವಾರದ ಕೆಲವು ದಿನ ಸಂಜೆ ವೇಳೆ ವಿಶ್ವವಿದ್ಯಾಲಯದ ಆಸಕ್ತ ವಿದ್ಯಾರ್ಥಿಗಳಿಗೆ ಹವ್ಯಾಸಿ ಚಿತ್ರಕಲೆಯ ತರಗತಿಗಳನ್ನು ನಡೆಸುತ್ತಿದ್ದರು. ಅದಕ್ಕಾಗಿ ವಿಶ್ವವಿದ್ಯಾಲಯದ ಒಂದು ವಿಭಾಗವನ್ನು ನೀಡಲಾಗಿತ್ತು. ಅಲ್ಲಿ ನಾಟಕ, ಚಿತ್ರಕಲೆ ಕ್ಲೇ ಮಾಡಲಿಂಗ್ ಗಳ ತರಗತಿಗಳನ್ನು ನಡೆಯುತ್ತಿದ್ದವು. ನಾಟಕ ವಿಭಾಗದ ಹೊಣೆಯನ್ನು ಎಚ್.ಕೆ ರಂಗನಾಥ್ ಅವರು ನಿರ್ವಹಿಸುತ್ತಿದ್ದರು. (ರಂಗತಜ್ಞ ರಂಗನಾಥ್ ಮತ್ತು ಮಾಸ್ತರ ನಡುವೆ ಆಪ್ತತೆ ಇತ್ತು. ಮಾಸ್ತರು ರಂಗನಾಥ್ ಅವರ ಒಂದು ಭಾವ ಚಿತ್ರವನ್ನು ರಚಿಸಿದ್ದರೂ ಸಹ)

hadapdportraitಮಾಸ್ತರು ಆ ತರಗತಿಗೆ ಹೋಗುವಾಗ ಕೆಲವು ಸಲ ಅಲ್ಲಿ ನರಸಿಂಹನ್, ಧನಲಕ್ಷ್ಮಿ, ದಯಾನಂದ್ ತಪಶೆಟ್ಟಿ, ಪ್ರದೀಪ್ ಹೀಗೆ ಕೆಲ ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಆಗಾಗ ನನಗೂ ಅವರ ಜೊತೆಯಲ್ಲಿ ಹೋಗುವ ಅವಕಾಶ ದೊರೆಯುತ್ತಿತ್ತು. ಸಾಮಾನ್ಯವಾಗಿ ಮಾಸ್ತರು ಶೇಷಾದ್ರಿಪುರಂನಿಂದ ನಡದೇ ಸೆಂಟ್ರಲ್ ಕಾಲೇಜ್‍ನ ಬಳಿಯ ವಿಶ್ವವಿದ್ಯಾಲಯದ ಕ್ಯಾಂಪಸ್ ತಲುಪುತ್ತಿದ್ದರು. (ಮುಖ್ಯವಾಗಿ ಕೆನ್‍ಶಾಲೆಗೆ ಅಥಿತಿಗಳ ಆಗಮನದಿಂದ ಹೊರಡುವುದು ತಡವಾದರೆ ಮಾತ್ರ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದರು) ಆಗೆಲ್ಲಾ ದಾರಿಯಲ್ಲಿ ಹುರಿದ ಕಡಲೆ ಬೀಜವನ್ನು ಕೊಂಡು ತಿನ್ನುತ್ತಾ, ಆ ಮಾತು ಈ ಮಾತು ಎಂದು ನಮ್ಮನ್ನು ಕೀಟಲೆ ಮಾಡುತ್ತಾ ತಾವು ಮುಕ್ತವಾಗಿ ನಗುತ್ತಾ ದಾರಿ ಸವೆದದ್ದೇ ತಿಳಿಯದಂತೆ ಕ್ಯಾಂಪಸ್ ತಲುಪುತ್ತಿದ್ದುದೇ ಒಂದು ತೆರೆನಾದ ಅನುಭವ. ತರಗತಿಯು ಆರಂಭವಾದರೆ ಮಾಸ್ತರು ಗಂಭೀರರಾಗುತ್ತಿದ್ದರು. ಅವರೊಬ್ಬ ಅನುಭಾವಿಯಂತೆ ನನಗೆ ಕಾಣುತ್ತಿದ್ದರು. ತರಗತಿಯು ಮುಗಿದ ಮೇಲೆ ನಮ್ಮ ಗುರುಗಳ ಪಾದಯಾಥ್ರೆ ಕೆಂಪೇಗೌಡ ರಸ್ತೆಯ ಮೂಲಕ ಗಾಂಧೀನಗರ ತಲುಪುತ್ತಿತ್ತು. ಅಲ್ಲಿನ ಸವಿತ ಹೋಟೆಲ್‍ನ ಖಾಲಿ ದೋಸೆ ಮಾಸ್ತರಿಗೆ ತುಂಬಾ ಇಷ್ಟ. ನಮಗೂ ದೋಸೆ ತಿನ್ನಿಸಿದ್ದಾರೆ. ಹೀಗೆ ಆ ಹೋಟೆಲ್‍ನಲ್ಲಿ ದೋಸೆ ತಿನ್ನುತ್ತಿರುವಾಗ ಮಾಸ್ತರು ದೋಸೆ ಹಾಕುತ್ತಿದ್ದ ಜಾಗದ ಬಳಿಯ ಗೋಡೆಯನ್ನು ತೋರಿಸಿ ‘wonder full’ ಎಂದರು. ನಾನು ಗೋಡೆ ಕಡೆ ನೋಡಿದೆ ಎಣ್ಣೆಜಿಡ್ಡು ಮತ್ತು ಮಸಿಯಿಂದ ಕಪ್ಪಿಡಿದ ಗೋಡೆ ಮತ್ತೇನು ವಿಶೇಷ ಕಾಣಲಿಲ್ಲ. ಅದಕ್ಕೆ ಬೇರೆಯವರು ಹೇಗೆ ಪ್ರತಿಕ್ರಿಯಿಸಿದರೋ ನನಗೆ ಅಷ್ಟಾಗಿ ತಿಳಿಯಲಿಲ್ಲ.

ರಾತ್ರಿ ಭೀಮ್ಸಿ ನನ್ನ ಬಳಿ ಬಂದು ‘3*3’ ಅಳತೆಯ ಕ್ಯಾನ್‍ವಾಸ್‍ನ್ನು ತರುವಂತೆ ಮಾಸ್ತರು ಹೇಳಿದರು ಎಂದು ತಿಳಿಸಿದರು. ನಾನು ಭೀಮ್ಸಿಯ ಕೈಗೆ ಕ್ಯಾನ್‍ವಾಸ್ ಮತ್ತು ಪ್ಯಾಲೇಟ್ ಕೊಟ್ಟು ಈಜಿಲ್ ಒಂದನ್ನು ತೆಗೆದುಕೊಂಡು ಇಬ್ಬರೂ ಮಾಸ್ತರ ರೂಮಿಗೆ ಹೋದೆವು. ಅಲ್ಲಿ ಕ್ಯಾನ್‍ವಾಸನ್ನು ಈಜಿಲ್ ಮೇಲಿರಿಸಿ ಸ್ಟೂಲ್ ಮೇಲೆ ಪ್ಯಾಟೇಟನ್ನು ಸಿದ್ಧ ಮಾಡಿದೆವು. ಆಗಲೇ ರಾತ್ರಿ ಸುಮಾರು 10 ರ ಸಮಯ ಮಾಸ್ತರು. ನಮಗೆ ಮಲಗಲು ತಿಳಿಸಿದರು. ನಾವು ಮಲಗಲು ಅಣಿಯಾದೆವು. ಮರುದಿನ ಬೆಳಗ್ಗೆ ನಾವು ಎಂದಿನಂತೆ ಎದ್ದು ಶಾಲಾ ಆವರಣ ಸ್ವಚ್ಛ ಮಾಡಿದೆವು. ಹೋಟೆಲ್‍ನಿಂದ ಟೀಯನ್ನು ತಂದು ನಾನು ಮಾಸ್ತರ ಕೊಠಡಿ ಒಳಗೆ ಹೋದಾಗ ಈಜಿಲ್ ಮೇಲೆ ಒಂದು ಸೊಗಸಾದ ಕಲಾಕೃತಿ ಮೂಡಿತ್ತು. ಎಣ್ಣೆಗಟ್ಟಿದ ಕಪ್ಪುಗೋಡೆಯ ಪ್ರಭಾವದಿಂದ ಮೂಡಿಬಂದ ಕಲಾಕೃತಿ ಅದು. ಮಾಸ್ತರು ನಾನು ಕೊಟ್ಟ ಟೀ ಲೋಟವನ್ನು ತೆಗೆದುಕೊಂಡು “ಪೇಯಿಂಟಿಂಗ್ ಹೇಗಿದೆ ಕಲಾವಿದರೆ?” ಎಂದು ಪ್ರಶ್ನಿಸಿದರು. ನಾನು ಮಾಸ್ತರಿಗೆ ‘ನೆನ್ನೆ ನೀವು ಗೋಡೆಯನ್ನು ತೋರಿಸಿದಾಗ ನನಗೆ ಏನೂ ಅನಿಸಲಿಲ್ಲ. ನಿಮಗೆ ಹೇಗೆಲ್ಲಾ ಕಂಡಿದೆ’! ಎಂದೆ. ಮಾಸ್ತರು “ಕಣ್ಣು, ಬುದ್ದಿ ಇರುವುದು ಪ್ರಪಂಚವನ್ನು ಸೂಕ್ಷ್ಮವಾಗಿ ಗಮನಿಸಲು” ಎಂದು ನಕ್ಕರು. ಹೀಗೆ ಮಾಸ್ತರು ತರಗತಿಯ ಹೊರಗೂ ನಮ್ಮನ್ನು ತಿದ್ದಿದವರು.

One Response to "ಭಾಗ-3 : ಅನುಭಾವಿ ಹಡಪದ್ ಮಾಸ್ತರ್"

  1. ಕೆ.ಎಸ್‌. ಶ್ರೀನಿವಾಸ ಮೂರ್ತಿ  April 3, 2016 at 6:42 am

    ಹಡಪದ ಮಾಸ್ತರ ಬಗ್ಗೆ ವೇಣುಗೋಪಾಲ್ ಅವರು ಬರೆಯುತ್ತಿರುವ ಅಂಕಣವು ಅಪೂರ್ವವಾಗಿದೆ. ಮಾಸ್ತರ ವ್ಯಕ್ತಿತ್ವ, ನಡೆನುಡಿಗಳನ್ನು ನೇರವಾಗಿ ಕಂಡಿರುವ ಅವರ ವಿದ್ಯಾರ್ಥಿಗಳ, ಆತ್ಮೀಯರ ಸಂಖ್ಯೆ ದೊಡ್ಡದು. ಇವರಲ್ಲಿ ಕೆಲವರು ಮಾಸ್ತರನ್ನು ಕುರಿತು ಈಗಾಲೇ ಒಂದೆರಡು ಪುಸ್ತಕಗಳನ್ನೂ ಬರೆದಿದ್ದಾರೆ. ಆದರೆ ಇಲ್ಲೆಲ್ಲೂ ಕಾಣದ ಆತ್ಮೀಯತೆ, ಆಳ ಹರವು ವೇಣುಗೋಪಾಲ್‌ ಅವರ ಅಂಕಣಗಳಲ್ಲಿ ಎದ್ದುಕಾಣುತ್ತದೆ.

    ನಮ್ಮ ಕಲೆಯ ಚರಿತ್ರೆಯಲ್ಲಿ ಮಾಸ್ತರ ಪಾತ್ರವು ದೊಡ್ಡದು. ವೇಣುಗೋಪಾಲ್‌ ಅವರ ನಿರೂಪಣೆಯು ಮೇಲುನೋಟಕ್ಕೆ ಅತಿಸಾಧಾರಣ ಸಂಗತಿ, ಘಟನೆಗಳಿಂದ ಕೂಡಿದೆ. ಆದರೆ, ಸೂಕ್ಷ್ಮವಾಗಿ ನೋಡಿದರೆ ಇಲ್ಲಿನ ವಿವರಗಳು ಮಾಸ್ತರ ವಿಚಾರ ಭಾವನೆಗಳಿಗೆ ಹಿಡಿದ ಕನ್ನಡಿಯೇ ಆಗಿವೆ. ಹೀಗಾಗಿ ವೇಣುಗೋಪಾಲರ ಈ ನೆನಪಿನ ಬರೆಹಗಳು ನಮ್ಮ ಕಲಾಸಾಹಿತ್ಯದ ಅಮೂಲ್ಯ ಆಸ್ತಿಯಾಗಲಿವೆಯೆಂಬುದು ನನ್ನ ತಿಳುವಳಿಕೆ.

    ಕೆ.ಎಸ್‌. ಶ್ರೀನಿವಾಸ ಮೂತಿರ್

    Reply

Leave a Reply

Your email address will not be published.