ಭಾಗ -2 : ಕಲಾಪೋಷಕ ಹಡಪದ್ ಮಾಸ್ತರ್

-ಎಚ್. ಎಸ್. ವೇಣುಗೋಪಾಲ್

hsಹಡಪದ್ ಮಾಸ್ತರಿಗೆ ರಾಜ್ಯದ ಕಲಾ ಶಿಕ್ಷಣದ ಪಠ್ಯಕ್ರಮ ಬದಲಾವಣೆ ಆಗುವುದು ಹೆಚ್ಚು ಅಗತ್ಯವಾಗಿತ್ತು. ಏಕೆಂದರೆ ಬೋಧಿಸುತ್ತಿದ್ದ ಪಠ್ಯ ವಿಷಯವು ತುಂಬಾ ಹಳೆಯದಾಗಿದ್ದು, ಅದು ಬದಲಾವಣೆಯಾಗಿ ಸಮಕಾಲೀನ ಕಲಿಕೆಗೆ ಪೂರಕವಾಗಿರಬೇಕೆಂಬ ದೃಷ್ಟಿಯನ್ನು ಅವರು ಹೊಂದಿದ್ದರು. ಪರೀಕ್ಷೆಗಳನ್ನು ಎಸ್.ಎಸ್.ಎಲ್.ಸಿ ಮಂಡಳಿಯಿಂದ ನಡೆಸುವುದನ್ನು ಬಿಟ್ಟು ತಾಂತ್ರಿಕ ಮಂಡಳಿಯ ಅಧೀನಕ್ಕೆ ಒಳಪಡಬೇಕೆಂಬ, ಅದಕ್ಕೂ ಮಿಗಿಲಾಗಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಬೇಕೆಂಬ ಕನಸನ್ನು ಹೊಂದಿದ್ದರು.

ಅದಕ್ಕಾಗಿ ರಾಜ್ಯದ ಇನ್ನಿತರ ಕಲಾ ಶಾಲೆಗಳನ್ನು ಒಗ್ಗೂಡಿಸಿ ಹೋರಾಡಬೇಕೆಂದು ಬಯಸುತ್ತಿದ್ದರು. ಇಂತಹ ಹೋರಾಟಕ್ಕೆ ಸ್ಕೂಲ್ ಆಫ್ ಆರ್ಟ್ಸ್ ಫೇಡರೇಷನ್‍ಗೆ ಸದಾ ಮಾರ್ಗದರ್ಶನವನ್ನು ನೀಡುತ್ತಿದ್ದರು. ಇದಕ್ಕಾಗಿ ಆಡಳಿತಾಧಿಕಾರಿಗಳೊಂದಿಗೆ, ಶಿಕ್ಷಣ ತಜ್ಞರೊಂದಿಗೆ ಸದಾ ಚರ್ಚೆ, ಆಗ್ರಹ ಇತ್ಯಾದಿಗಳನ್ನು ನಡೆಸಿಕೊಂಡು ಬಂದವರು. ಆ ಸಮಯದಲ್ಲಿ ಕೆನ್ ಕಲಾ ಶಾಲೆಯು ರಾಜ್ಯದ ವಿವಿಧೆಡೆಯಿಂದ ಬರುತ್ತಿದ್ದ ಕಲಾ ಶಾಲೆಗಳ ಶಿಕ್ಷಕರ ಚಿಂತನ ಮಂಥನಗಳ ನೆಲೆವೀಡಾಗಿತ್ತು.

hadapadworks3ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಕೆನ್ ಕಲಾಶಾಲೆಗೆ ಮಾಸ್ತರುಗಳಾದ ವಿ. ಜಿ. ಅಂದಾನಿ, ಕಾಳೇ, ಸುಗೂರ್, ಹೂಗಾರ್ ಶಂಕರ ಪಾಟೀಲ್, ಬಾಳೇಕಾಯ್ ಮುಂತಾದವರೆಲ್ಲರೂ ಬೆಂಗಳೂರಿಗೆ ಬಂದಾಗ ತಪ್ಪದೆ ಮಾಸ್ತರನ್ನು ನೋಡಲು ಬರುತ್ತಿದ್ದರು. ಆಗೆಲ್ಲಾ ಕಲಾ ಶಿಕ್ಷಣದ ಪಠ್ಯಕ್ರಮದ ಬದಲಾವಣೆಯ ಬಗ್ಗೆ, ರಾಜ್ಯದ ಕಲಾಶಾಲೆಗಳ ಸ್ಥಿತಿಗತಿಗಳ ಬಗ್ಗೆ ನಿರಂತರ ಚರ್ಚೆಗಳಾಗುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆಗಿನ ವರ್ಷಗಳಲ್ಲಿ ಕೆನ್ ಕಲಾಶಾಲೆಯು ಜೇನುಗೂಡಿನಂತೆ, ಸದಾ ಕಲಾ ಚಟುವಟಿಕೆಗಳ ಆಗರವಾಗಿತ್ತು.

ಮಾಸ್ತರು ಶಾಲೆಯಲ್ಲಿ, ತಮ್ಮ ಬೋಧನಾ ಕ್ರಮದಲ್ಲಿಯೇ ವಿದ್ಯಾರ್ಥಿಗಳನ್ನು ಪ್ರಯೊಗ ಮಾಡಲು ಉತ್ತೇಜಿಸುತ್ತಿದ್ದರು. (ಆ ಸಮಯದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಆಯಿಲ್ ಪೇಪರ್ ಮೇಲೆ ತಮ್ಮ ತೈಲವರ್ಣ ಚಿತ್ರಗಳನ್ನು ರಚಿಸುತ್ತಿದ್ದರು. ಮಾಸ್ತರು ಕ್ಯಾನ್ವಾಸ್‍ಗಳ ಮೇಲೆ ಚಿತ್ರ ರಚಿಸಲು ಮತ್ತು ವಿದ್ಯಾರ್ಥಿಗಳು ಮುಕ್ತವಾಗಿ ವಸ್ತು ವಿಷಯಗಳನ್ನು ಆರಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು) ಉದಾಹರಣೆಗೆ, ಶ್ರೀಯತ ರಾಮದಾಸ್ ಆದ್ಯಂತಾಯವರು ಕೆನ್ ಕಲಾಶಾಲೆಯಲ್ಲಿ ಕಲಿಯುತ್ತಿದ್ದಾಗ, ಬಹುಶಃ ಅಂತಿಮ ತರಗತಿಯಲ್ಲಿದ್ದಿರಬಹುದು. ಅವರು ಬೀದಿನಾಯಿಗಳನ್ನು ಕುರಿತು ಚಿತ್ರಸಿದ ಚಿತ್ರಸರಣಿಯನ್ನು ಉಲ್ಲೇಖಿಸಬಹುದು. ರಾಮ್ ದಾಸ್ ರವರ ತೈಲವರ್ಣದ ಈ ಸರಣಿಯಲ್ಲಿ ಎರಡು ಅಂಶಗಳನ್ನು ಗಮನಿಸಬಹುದು.

ಒಂದು ಚಿತ್ರದ ವಸ್ತು ಬೀದಿ ನಾಯಿಗಳ ಬದುಕನ್ನು ಸಮಕಾಲೀನ ಸಮಾಜಕ್ಕೆ ಹೋಲಿಸಿ ವಿಡಂಬನೆ ಮಾಡಿರುವುದು. ಎರಡು, ಅವರು ಆಗ್ಗೆ, ಚಿತ್ರಸಿರುವ ತಾಂತ್ರಿಕ ವಿಧಾನದಲ್ಲಿ ಮಾಡಿದ ಪ್ರಯೋಗವನ್ನು ಗಮಸಿಸಬಹುದು. ( ಈ ಸರಣಿ, ರಾಮ್‍ದಾಸ್ ಅವರನ್ನು ನಾವು ವಿಭಿನ್ನ ನೆಲೆಯಲ್ಲಿ ನೋಡುವಂತೆ ಮಾಡಿತು). ಈ ರೀತಿ ಮಾಸ್ತರು ತಮ್ಮ ಬೋಧನಾ ಕ್ರಮದಲ್ಲಿ ಕಲಾಶಿಕ್ಷಣದ ಶಿಷ್ಠ ರಿವಾಜುಗಳನ್ನು ಮೀರಿ ಸಮಯ ಸ್ಪೂರ್ತಿ (instant inspiration) ಯಿಂದ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು. ಹಾಗೆಯೇ ತಾವು ಗುರುಗಳು ಎಂಬ ಅಂತರವಿಲ್ಲದೆ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಂಡು ಶಾಲೆಯ ಗೋಡೆಯ ಮೇಲೆ ಚಿತ್ರಸಿರುವ ಭಿತ್ತಿ ಚಿತ್ರಗಳಲ್ಲಿಯೂ ಈ ಅಂಶವನ್ನು ಗಮನಿಸಬಹುದಾಗಿತ್ತು.

hadapdportraitಹಡಪದ್ ಮಾಸ್ತರು ವಿದ್ಯಾರ್ಥಿಗಳ ಶಕ್ತಿಯನ್ನು ಗಮನಿಸಿ ಅವರನ್ನು ಚಟುವಟಿಕೆಗಳಲ್ಲಿ ತೊಡಗುವಂತೆ ಉತ್ತೇಜಿಸಿ, ಸದಾ ಅವರ ಬೆಂಗಾವಲಾಗಿರುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ 80 ರ ದಶಕದಲ್ಲಿ ಕೆನ್ ಶಾಲಾ ವಿದ್ಯಾರ್ಥಿಗಳಿಂದ ಪ್ರಕಟನೆಯಾಗುತ್ತಿದ್ದ ‘ಕಲಾವಿಕಾಸ’ ಎಂಬ ವಿಶೇಷ ಪತ್ರಿಕೆ. ಈ ಪತ್ರಿಕೆಯಲ್ಲಿ ನಮ್ಮ ಬೇರೆ ಬೇರೆ ಲೇಖಕರು ಬರೆದ ಕಲಾ ಪರಂಪರೆಗಳನ್ನು ಕುರಿತು ವಿವಿಧ ಲೇಖನಗಳು ಪಿಕಾಸೋ, ಜ್ಯಾಕೋಮಿತಿ ಅಂತಹ ಪ್ರಖ್ಯಾತ ವ್ಯಕ್ತಿಗಳ ಕುರಿತ ಲೇಖನಗಳ ಅನುವಾದ ಬರಹಗಳು, ಸಮಕಾಲೀನ ಕಲಾ ವಿಷಯಗಳನ್ನೊಳಗೊಂಡ ಚರ್ಚೆಗಳು. ಅದಕ್ಕೆ ಅನುಗುಣವಾಗಿ ಸುಂದರವಾದ ಮತ್ತು ವಿಭಿನ್ನ ಮುಖಪುಟಗಳು ಇತ್ಯಾದಿ ಉತ್ತಮ ಅಂಶಗಳಿಂದ ಕೂಡಿದ ಪತ್ರಿಕೆಯೆಂಬ ಅಗ್ಗಳಿಕೆ ಪಡೆದುಕೊಂಡಿತ್ತು. ಇದಕ್ಕೆ ಮೂಲ ಪ್ರೇರಣೆ ಹಡ ಪದ್ ಮಾಸ್ತರು. 

ಹಡಪದ್ ಮಾಸ್ತರು ಆಯೋಜಿಸಿದ್ದ ಪಿಕಾಸೋ ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಹೆಸರಾಂತ ಹಿರಿಯ ಶಿಲ್ಪಿ ವೆಂಕಟಾಚಲಪತಿಯವರು ನೆನಪಿಸಿಕೊಳುತ್ತಾ ಈ ರೀತಿ ಹೇಳಿದ್ದಾರೆ. “ನಾನು ಕಲಾ ಮಂದಿರದ ವಿದ್ಯಾರ್ಥಿ, ಆದರೂ ಹಡಪದ್ ಮಾಸ್ತರ ಬಳಿ ಕೆಲವು ದಿನಗಳು ಅನೌಪಚಾರಿಕವಾಗಿ ಅಭ್ಯಾಸಮಾಡಿದ್ದೇನೆ. ಅದು ಕೆನ್ ಕಲಾಶಾಲೆಯ ಪ್ರಾರಂಭಿಕ ದಿನಗಳು. ಶಾಲೆಯು ಗಾಂಧಿ ನಗರದ ಹಿಂದಿ ಶಾಲೆಯ ಮಹಡಿಯ ಮೇಲೆ ಇತ್ತು. (ಕುರುಬರ ವಿದ್ಯಾರ್ಥಿ ನಿಲಯದ ಹತ್ತಿರ)

ನಾನು ಮಧಾಹ್ನದ ವೇಳೆ ಕಲಿಯಲು ಅಲ್ಲಿಗೆ ಹೋಗುತ್ತಿದ್ದೆ. ಆ ವೇಳೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳ. ಮಾಸ್ತರು ತುಂಬಾ ಆಸ್ಥೆಯಿಂದ ಕಲಿಸುತ್ತಿದ್ದರು. ಅವರು ನೀಡಿದ ಪ್ರಾತ್ಯಕ್ಷತೆ (ಪೋಸ್ಟಾರ್ ಬಣ್ಣ ಮತ್ತು ವಾಟರ್ ಪ್ರೂಫ್ ಇಂಕ್ ಬಳಸಿ ಮಾಡುತ್ತಿದ್ದ ವಾಷ್ ತಂತ್ರದ್ದು) ನನಗೆ ತುಂಬಾ ಹಿಡಿಸಿತ್ತು. ನಾನೂ ಆ ತಂತ್ರದಲ್ಲಿ ಕೆಲವು ಕೃತಿಗಳನ್ನು ರಚಿಸಿದ್ದೆ. ಹಡಪದ್ ಮಾಸ್ತರಿಗೂ ನನ್ನ ಶೈಲಿ ಮೆಚ್ಚುಗೆಯಾಗಿತ್ತು. ಮುಂದೆ ನನಗೆ ಮ್ಯೂಸಿಯಂನ ಕೆಲಸದ ಒತ್ತಡದಿಂದ ಅವರ ಬಳಿ ಕಲಿಯಲು ಆಗಲಿಲ್ಲ.

ಕೆಲವು ದಿನಗಳ ನಂತರ ಮಾಸ್ತರಿಗೆ ಗಾಂಧಿನಗರದಲ್ಲಿ ನಾನು ಭೇಟಿಯಾದಾಗ, ಅವರು ನನ್ನ ಕೆಲಸದ ಬಗ್ಗೆ ಆತ್ಮೀಯವಾಗಿ ವಿಚಾರಿಸಿದರು. ನಾನು ಮಾಡುತ್ತಿದ್ದ ಕ್ಲೇ ಮಾಡಲಿಂಗ್ ಬಗ್ಗೆಯೂ ಕೇಳಿ ತಿಳಿದುಕೊಂಡರು ಮತ್ತು ಪಿಕಾಸೋನ ಜನ್ಮ ಶತಮಾನೋತ್ಸವದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದರು. ನಾನು ಅವರು ಹೇಳಿದಂತೆ ಪಿಕಾಸೋನ ಸ್ಮರಣಾರ್ಥ ಆಯೋಜಿಸಿದ್ದ ಆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡೆ ವರ್ಷ ನೆನಪಿಲ್ಲ. ಆದರೆ ಅದೊಂದು ಮಹತ್ವದ ಕಾರ್ಯಕ್ರಮ. ಪ್ರದರ್ಶನ ನಡೆದಿದ್ದು ‘ಅಲೈಯನ್ ಪ್ರಾಂಕೈನ್’ ನಲ್ಲಿ ಹಡಪದ್ ಮಾಸ್ತರು ಮತ್ತು ಅವರ ಶಿಷ್ಯರಾದ ಚಂದ್ರ ಶೇಖರ್, ಚಂದ್ರನಾಥ್, ಕುಮಾರ್ ಚಂದ್ರಕಲಾ, ಶಾಮ್ ಸುಂದರ್ ಮುಂತಾದವರು ಅದರಲ್ಲಿ ಪಾಲ್ಗೊಂಡಿದ್ದರು.

ಪಿಕಾಸೋನ ಕ್ಯೂಬಿಸಂ, ಬ್ಲೂಪಿರಿಯಡ್ ಇತ್ಯಾದಿ ಶೈಲಿಯ ಸುಮಾರು 35 ವರ್ಣ ಕೃತಿಗಳು ಹಾಗು ಹಲವಾರು ಶಿಲ್ಪಗಳಿದ್ದವು. ನಾನು ಪಿಕಾಸೋನ ಕಂಚಿನ ಶಿಲ್ಪ ಹುಂಜದ ಪ್ರತಿಕೃತಿಯನ್ನು ಪಿ.ಒ.ಪಿ (ಪ್ಲಾಸ್ರ್ಟ ಆಫ್ ಪ್ಯಾರಿಸ್) ಯಲ್ಲಿ ರಚಿಸಿದ್ದೆ. ಪ್ರದರ್ಶನದಲ್ಲಿ ವೀಕ್ಷಕರು ಅದನ್ನು ಮೆಚ್ಚಿಕೊಂಡರು. ಮಾಸ್ತರೂ ಸಹ ನನ್ನ ಕೃತಿಯನ್ನು ಪ್ರಶಂಸಿಸಿ ಹುರಿದುಂಬಿಸಿದರು. ಶಿಲ್ಪದ ಕೃತಿಗಳನ್ನು ರಚಿಸಲು ನನಗೆ ಸಿಕ್ಕ ಪ್ರಥಮ ಪ್ರೇರಣೆ ಅದು. ಅದೇ ಸಮಯದಲ್ಲಿ ನನಗೆ ಕಲಾಚಿಂತಕರಾದ ಎಂ. ಎಚ್. ಕೃಷ್ಣಯ್ಯ ನವರ ಪರಿಚಯವಾಯಿತು. ಆ ನಂತರ ಅವರ ಒಡನಾಟ ಬೆಳೆದದ್ದೂ ಸಹ ಹಡಪದ್ ಮಾಸ್ತರ ಇಂತಹ ಕಾರ್ಯಕ್ರಮಗಳಿಂದ ಎಂದು ಸ್ಮರಿಸಿದ್ದಾರೆ.

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಕೆ. ಕೆ. ಹೆಬ್ಬಾರರು ಅಧ್ಯಕ್ಷರಾಗಿದ್ದ ಸಮಯ ರಾಜ್ಯ ದೃಶ್ಯಕಲಾ ಪ್ರಗತಿಯ ಪರ್ವಕಾಲ. ಅವರು ಅನೇಕ ಯುವಕರಿಗೆ ಶಿಷ್ಯ ವೇತನ ನೀಡಿ ಬೇರೆ ಬೇರೆ ರಾಜ್ಯಗಳಲ್ಲಿನ ಪ್ರತಿಷ್ಟಿತ ಕಲಾ ವಿದ್ಯಾಲಯಗಳಲ್ಲಿ ಕಲಿಯಲು ಅನುವು ಮಾಡಿಕೊಟ್ಟಿದ್ದು ಇತಿಹಾಸ. ಅದಕ್ಕೆ ಪೂರಕವಾಗಿ ಮಾಸ್ತರ ಚಿಂತನೆಗಳೂ ಒಂದು ಕಾರಣವೆಂದರೆ ಅತಿಶಯೋಕ್ತಿಯಲ್ಲ. ಆ ದಿನಗಳಲ್ಲಿ ಅವರು ತಮ್ಮ ವಿದ್ಯಾರ್ಥಿಗಳನ್ನು ಹೊರರಾಜ್ಯದ ಕಲಾ ವಿದ್ಯಾಲಯಗಳಿಗೆ ಐತಿಹಾಸಿಕ ಕಲಾ ಪಾರಂಪರಿಕ ಸ್ಥಳಗಳಿಗೆ ಮತ್ತು ದೆಹಲಿಯಲ್ಲಿ ಆಗುತ್ತಿದ್ದ ‘ಟ್ರಿನಾಲೆ’ಯಂತಹ ಅಂತರ ರಾಷ್ಟ್ರೀಯ ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ಕರೆದೊಯ್ದೆ.

ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾಪ್ರಜ್ಞೆ ಬೆಳೆಯಲು, ಆಧುನಿಕ ಸಮಕಾಲೀನ ಕಲೆಯ ಬಗ್ಗೆ ಜಾಗೃತಿ ಮೂಡಿಸಿ ಅರಿವನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಸುತ್ತಿದ್ದರು.
ಈ ಎಲ್ಲಾ ಸಂದರ್ಭಗಳಲ್ಲಿಯೂ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಸದಾ, ವಿದ್ಯಾರ್ಥಿಗಳಿಗೆ ತಮ್ಮ ಸುತ್ತಮುತ್ತಲು ಜರಗುವ ವಿದ್ಯಮಾನಗಳಿಗೆ ಸ್ಪಂದಿಸಲು ಉತ್ತೇಜಿಸುತ್ತಿದ್ದರು. ಅವರ ಈ ವ್ಯಕ್ತಿತ್ವವನ್ನು ಅದರ ಶಿಷ್ಯರಾದ ಬಿ. ವಿ. ಸುರೇಶ್ (ಪ್ರಸ್ತುತ ಇವರು ಬರೋಡಾದ ಎಂ.ಎಸ್.ಒ.ನಲ್ಲಿ ಕಲಾ ಪ್ರಾಧ್ಯಾಪಕರಾಗಿದ್ದಾರೆ.) ಮುಂತಾದವರಲ್ಲಿ ಆದರ್ಶವಾಗಿ ಬಂದಿರುವುದನ್ನು ಕಾಣಬಹುದು.

ಮಾಸ್ತರು ತಮ್ಮ ಅನುಭವ ಮತ್ತು ಪ್ರೇರಣೆಯನ್ನು ಕೇವಲ ಶಾಲಾ ವಿದ್ಯಾರ್ಥಿಗಳಿಗಷ್ಟೇ ಸೀಮಿತಗೊಳಿಸಿದವರಲ್ಲ. ಶಾಲಾ ಸಮಯದ ನಂತರ ಶಾಲಾ ಆವರಣದಲ್ಲಿ ಹವ್ಯಾಸಿ ರಂಗಕಲಾವಿದರು ರಂಗಚಟುವಟಿಕೆಯನ್ನು ಮಾಡಲು ಅವರು ಅನುವುಮಾಡಿಕೊಡುತ್ತಿದ್ದರು. ಅವರ ರಂಗ ತಾಲೀಮಿಗೆ ಇತರ ಸೌಲಭ್ಯಗಳನ್ನು ತಮ್ಮ ಕೈಲಾದಷ್ಟು ಒದಗಿಸುತ್ತಿದ್ದರು. ದಿ|| ಸಿ.ಜೆ.ಕೆ. ಯವರ ತಂಡದ ಬೀದಿ ನಾಟಕಗಳನ್ನು (ಮೆಟಪ್ಯಾಂಪ್ ಕ್ಯಾಪ್ ಕಾರ್ಖಾನೆಯ ಕಾರ್ಮಿಕರ ಸಮಸ್ಯೆಯ ಕುರಿತ ನಾಟಕ) ಶಾಲೆಯ ಚಿಕ್ಕ ಬಯಲಿನಲ್ಲಿ ನಾವು ವೀಕ್ಷಿಸಿದ್ದೇನೆ. ಸಮುದಾಯ ತಂಡದವರ ಚಟುವಟಿಕೆಗಳು ನಡೆಯುತ್ತಿದ್ದವು. ಅವರ ಶುಭಾಶಯ ಪತ್ರ (greeting cards)ಗಳನ್ನು ನಾವು ಕೊಂಡುಕೊಳ್ಳಲು ಮಾಸ್ತರು ಹೇಳುತ್ತಿದರು. ನಾವು ಪತ್ರಗಳನ್ನು ಕೊಂಡು ಸ್ನೇಹಿತರಿಗೆ ಕಳುಹಿಸುತಿದ್ದದ್ದು ನೆನೆಪಿದೆ. ಪ್ರಸನ್ನ ಅವರ ಸ್ನೇಹ ಮಾಸ್ತರ ಮೇಲೆ ಬಹಳವಾಗಿತ್ತು. ಅವರ ಒಂದು ಭಾವ ಚಿತ್ರವನ್ನು ಹಡಪದ್ ಮಾಸ್ತರು ರಚಿಸಿದ್ದಾರೆ. ಎನ್. ಎಸ್. ಡಿ. ಶಿಕ್ಷಣ ಮುಗಿಸಿ ಬಂದ ಪ್ರಾರಂಭದಲ್ಲಿ ಗೋಪಾಲಕೃಷ್ಣ ನಾಯರಿಯವರು. ಅವರ ತಂಡದ ರಂಗ ತಾಲೀಮುಗಳನ್ನು ಕೆನ್ ಶಾಲೆಯಲ್ಲಿ ನಡೆಸುತ್ತಿದ್ದರು.

ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಬದುಕನ್ನು ರೂಪಿಸಿಕೊಟ್ಟದ್ದು ನಮ್ಮ ಮಾಸ್ತರ ಕೆನ್ ಕಲಾಶಾಲೆ. ಅದು ನಮ್ಮ ಗುರುಕುಲ, ನನಗೆ ಸ್ವಾತಂತ್ರ ಯೋಧ, ಕಲಾವಿದ ರುಮಾಲೆ ಚೆನ್ನಬಸಪ್ಪನವರ, ಪ್ರೊ|| ರೋಹಿಡೇಕರ್, ಪ್ರೊ. ಎಂ. ಎಚ್. ಕೃಷ್ಣಯ್ಯ ಮುಂದೆ ಪ್ರೊ. ರಾಧಾಕೃಷ್ಣ ಇವರುಗಳ ಮಾತುಕತೆ, ಭಾಷಣಗಳನ್ನು ಕೇಳಿ ತಿಳಿಯುವ ಮತ್ತು ಜಾನಪದ ತಜ್ಞ ಡಾ. ಎಚ್. ಎಲ್. ನಾಗೇಗೌಡರ ಹತ್ತಿರ ಕೆಲಸ ಮಾಡುವ ಅವಕಾಶ ದೊರಕಿದೆ. ಚಿಂತಕ ವಿಮರ್ಶಕ ಕೆ. ಎಸ್. ಶ್ರೀನಿವಾಸ ಮೂರ್ತಿ ಹಾಗು ಕೆ. ವಿ. ಸುಭ್ರಮಣ್ಯಂ ಮುಂತಾದವರ ಸ್ನೇಹ ದೊರೆತಿದ್ದು ಮಾಸ್ತರ ಜೊತೆಯಲ್ಲಿಯೇ ಎಂಬುದು ಹೆಮ್ಮೆಯ ವಿಷಯ.

ಪ್ರೌಢಶಾಲೆಗಳ ಚಿತ್ರಕಲಾ ಶಿಕ್ಷಕರು ರಾಜ್ಯಮಟ್ಟದ ಸಂಘ ಕಟ್ಟಲು ಪ್ರೇರಕ ಶಕ್ತಿಯಾಗಿದ್ದವರು ಹಡಪದ್ ಮಾಸ್ತರ್. ಬೆಂಗಳೂರು ವಿಭಾಗದ ಚಿತ್ರಕಲಾ ಶಿಕ್ಷಕ ಸಂಘವು ಪ್ರಾರಂಭದಲ್ಲಿ ರೂಪಿಸಿದ್ದ ಹಲವಾರು ಯಶಸ್ವಿ ಯೋಜನೆಗಳ ಹಿಂದೆ (ಶಿಕ್ಷಕರ ಕಾರ್ಯಗಾರಗಳು, ಸಮ್ಮೇಳನ, ಚಿತ್ರಕಲಾ ಸ್ಪರ್ಧೆ ಇತ್ಯಾದಿ) ಮಾಸ್ತರ ಪ್ರೋತ್ಸಾಹ ಹಾಗು ಮಾರ್ಗದರ್ಶನದ ಸಿಂಹಪಾಲು ಇರುತ್ತಿತು. ಈ ರೀತಿ ಮಾಸ್ತರು ಕಲಾವಿದರಿಗೆ, ಕಲಾಶಾಲೆಗಳ ಯೋಜನೆಗಳಿಗೆ, ಇತರ ಸಂಘಟನೆಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಅನಿವಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ಕಲಾಕ್ಷೇತ್ರದ ನಿರಂತರ ಬೆಳವಣಿಗೆಯ ಹರಿಕಾರರಾಗಿದ್ದರು. ತಮ್ಮ ಅಮೂಲ್ಯ ಕೊಡುಗೆ ಮತ್ತು ಚಿಂತನೆಗಳ ಮೂಲಕ ಎಲ್ಲರ ಮನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಒಬ್ಬ ಪ್ರಾತಃಸ್ಮರಣೀಯ ಮಹನೀಯರಾಗಿ ಹಡಪದ್ ಮಾಸ್ತರ್ ನಮ್ಮ ಜೊತೆಗೆ ಇದ್ದಾರೆ. (ಮುಂದುವರೆಯುವುದು.)

Leave a Reply

Your email address will not be published.