ಭಾಗ -ನಾಲ್ಕು: ಹಡಪದ್ ಮಾಸ್ತರ ಸರಳವಾದ ಗಾಂಧೀಜಿ ಚಿತ್ರ

-ಎಚ್. ಎಸ್. ವೇಣುಗೋಪಾಲ್

hadapadmasterಒಬ್ಬ ಅಪರಿಚಿತ ನಡುವಯಸ್ಸಿನ ವ್ಯಕ್ತಿ ಪೋಸ್ಟ್ ಆಫೀಸಿನ ಕಡೆಯಿಂದ ಕೆನ್‍ಶಾಲೆಯ ಆವರಣದೊಳಗೆ ಬಂದರು. (ಎಂಬತ್ತರ ದಶಕದಲ್ಲಿ ಕೆನ್ ಶಾಲೆಗೆ ಮಾರ್ಕೆಟ್ ಮತ್ತು ಪೋಸ್ಟ್ ಆಫೀಸ್ ಎರಡೂ ಕಡೆಯಿಂದ ಪ್ರವೇಶವಿತ್ತು) ಆಗತಾನೆ ಮಾಸ್ತರು ಚಹಾ ಮುಗಿಸಿ ಸುದ್ಧಿಪತ್ರಿಕೆಯನ್ನು ಓದುತ್ತಿದ್ದರು. ಬಂದ ವ್ಯಕ್ತಿಯು ಒಂದು ಸರ್ಕಾರೇತರ ಸಂಸ್ಥೆಯ (ಎನ್.ಜಿ.ಒ) ಕಾರ್ಯದರ್ಶಿಯಾಗಿರುವುದಾಗಿಯೂ ಸಂಘದ ಒಂದು ಕಾರ್ಯಕ್ರಮಕ್ಕಾಗಿ ಗಾಂಧೀಜಿಯವರ ಆಳೆತ್ತರದ ಚಿತ್ರ ಬೇಕಾದರೆ ಅದರ ಸಲುವಾಗಿ ಶಾಲೆಗೆ ಬಂದಿರುವುದಾಗಿಯೂ ಹೇಳಿದರು. ಅವರಿಗೆ ಸಾಧಾರಣ ಬ್ಯಾನರ್ ಮಾದರಿಯ ಚಿತ್ರವಾದರೆ ಸಾಕು. ಮತ್ತು ಅದಕ್ಕಾಗಿ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲದಿರುವುದನ್ನು ಸಹ ತಮ್ಮ ಮಾತುಕತೆಯಲ್ಲಿ ಮಾಸ್ತರಿಗೆ ತಿಳಿಸಿದರು.

ಮಾಸ್ತರು ಅದಕ್ಕೆ ತಾವು ತೈಲವರ್ಣದಲ್ಲಿ ಕ್ಯಾನ್‍ವಾಸ್ ಮೇಲೆ ಚಿತ್ರ ರಚಿಸುವುದಾಗಿ ಅದಕ್ಕೆ ಹೆಚ್ಚಿನ ವೆಚ್ಚ ತಗುಲುವುದಾಗಿ ಆ ವ್ಯಕ್ತಿಗೆ ತಿಳಿಸಿದರು. ಅಲ್ಲದೆ ಬೇರೆ ಕಡೆ ಪ್ರಯತ್ನಿಸಲು ಹೇಳಿದರು. ಆದರೆ ಆ ವ್ಯಕ್ತಿಯು ತಾನು ಪೋಸ್ಟ್ ಆಫೀಸ್‍ಗೆ ಬಂದಾಗ ಮಾಸ್ತರನ್ನು ಗಮನಿಸಿರುವುದಾಗಿ ಹೇಳಿಕೊಂಡರು. ಅಷ್ಟೇ ಅಲ್ಲದೆ ಮಾಸ್ತರ ಒಪ್ಪಿಗೆಯ್ನು ನಿರೀಕ್ಷೆ ಮಾಡಹತ್ತಿದರು. ಸಾಮಾನ್ಯವಾಗಿ ಮಾಸ್ತರು ಇಂತಹ ಕೆಲಸಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಂದು ಬಂದ ವ್ಯಕ್ತಿಯನ್ನು ಒಮ್ಮೆ ನೋಡಿದರು. ಅವರ ಬೇಡಿಕೆಯ ಇಂಗಿತವನ್ನು ಅರಿತವರಂತೆ “ಆಯಿತು ನೀವು ಇಚ್ಚಿಸುವುದಾದರೆ ವಿಭಿನ್ನವಾಗಿ, ಸರಳವಾದ ಗಾಂಧೀಜಿಯವರ ಚಿತ್ರವನ್ನು ರಚಿಸಿ ಕೊಡುವುದಾಗಿ ಹೇಳಿದರು. ಮಾಸ್ತರು ಚಿತ್ರ ರಚಿಸುವ ಭರವಸೆ ನೀಡಿದರೆ ಆಯಿತೆಂದು ಒಪ್ಪಿ, ಸಂತಸ ವ್ಯಕ್ತ ಪಡಿಸಿದ ಆ ವ್ಯಕ್ತಿ 150 ರೂಗಳ ಮುಂಗಡ ಹಣವನ್ನು ಕೊಟ್ಟರು. ಚಿತ್ರವನ್ನು ಪಡೆಯಲು ಯಾವಾಗ ಬರಬೇಕು? ಹಾಗೇ ಚಿತ್ರವನ್ನು ತೆಗೆದುಕೊಳ್ಳುವಾಗ 100 ರೂಗಳನ್ನು ಕೊಡುವುದಾಗಿಯೂ, ಅದಕ್ಕಿಂತ ಹೆಚ್ಚು ಕೊಡಲು ಆಗುವುದಿಲ್ಲವೆಂದು ಮಾಸ್ತರ ಬಳಿ ಕೇಳಿಕೊಂಡರು. ಮಾಸ್ತರು ಅದಕ್ಕೆ ಒಪ್ಪಿ ಅವರಿಗೆ ಮೂರು-ನಾಲ್ಕು ದಿನಗಳ ನಂತರ ಬಂದು ಚಿತ್ರವನ್ನು ಪಡೆಯುವಂತೆ ತಿಳಿಸಿದರು.

ಇದಾದ ಮರುದಿನ ಶಾಲೆಯ ಸಮಯದ ನಂತರ ಮಾಸ್ತರು ನನ್ನನ್ನು ಮತ್ತು ಭೀಮ್ಸಿಯವರನ್ನು ಕಡೆದರು. ಚಿಕ್ಕಪೇಟೆಗೆ ಹೋಗಿ ಸ್ವಲ್ಪ ದಪ್ಪ ಇರುವ ಮೂರು ಮೀಗಳ ಕೋರಾ ಬಟ್ಟೆ ಒಂದು ಬಟ್ಟೆ ನೀಲಿಯ ಪೊಟ್ಟಣ, ಸಣ್ಣ ಪೆವಿಕಾಲ್ ಡಬ್ಬಿ ಮತ್ತು ಸಿಲ್ವರ್ ಪೈಂಟಿನ (200 ಎಂ.ಎಲ್) ಡಬ್ಬಿಯನ್ನು ತರಲು ಹೇಳಿದರು. ನಾವಿಬ್ಬರೂ ಚಿಕ್ಕಪೇಟೆಗೆ ಹೋಗಿ ಅವರು ಹೇಳಿದ ವಸ್ತುಗಳನ್ನು ತರುವ ವೇಳೆಗೆ ಒಬ್ಬ ಬಡಗಿಯನ್ನು 6*4 ಅಡಿ ಅಳತೆಯ ಮರದ ಚೌಕಟ್ಟನ್ನು ಮಾಡಿಸಿದ್ದರು. ನಾವು ತಂದ ಕೋರಾ ಬಟ್ಟೆಯನ್ನು ಆ ಮರದ ಚೌಕಟ್ಟಿಗೆ ಬಿಗಿಯಾಗಿ ಹೊಡೆದು ಸಿದ್ಧಪಡಿಸಲು ಬಡಗಿಗೆ ಹೇಳಿದರು. ಆತ ಅಪರೂಪಕ್ಕೆ ಒಮ್ಮೊಮ್ಮೆ ಶಾಲೆಯ ಕಡೆ ಬಂದು ಈ ರೀತಿಯ ಕೆಲಸಗಳನ್ನು ಮಾಡಿಕೊಡುತ್ತಿದ್ದ. ಆತನ ಹೆಸರು ನೆನಪಿಲ್ಲ. ಆ ನಂತರದ ದಿನಗಳಲ್ಲಿ ಅವನು ಶಾಲೆಯ ಕಡೆ ಬರಲೇ ಇಲ್ಲ.

ನಂತರ ಕೆನ್ ಶಾಲೆಯ ವಿದ್ಯಾರ್ಥಿಗಳು ಅವಿನ್ಯೂ ರಸ್ತೆಯ ಒಂದು ಗಲ್ಲಿಯಲ್ಲಿ ಇದ್ದ ‘ರಾಜಣ್ಣ’ ಎಂಬುವರ ಬಳಿ ಕ್ಯಾನ್‍ವಾಸ್‍ಗೆ ಬೇಕಾದ ಮರದ ಚೌಕಟ್ಟನ್ನು ಮಾಡಿಸಿಕೊಳ್ಳ ತೊಡಗಿದರು. ಮುಂದೆ ಈ ರಾಜಣ್ಣ ನಾಡಿನ ಬಹುತೇಕ ಕಲಾವಿದರಿಗೆ ಮರದ ಚೌಕಟ್ಟನ್ನು ತಯಾರು ಮಾಡುವುದರ ಮೂಲಕ ಎಲ್ಲಾ ಕಲಾವಿದರಿಗೂ ಸುಪರಿಚಿತರಾಗಿದ್ದರು. ಹಾಗೆಯೇ ಕೆನ್ ಶಾಲೆಯ ಹಲವು ವಿದ್ಯಾರ್ಥಿಗಳು ಚೌಕಟ್ಟುಗಳನ್ನು ಸ್ವತಃ ಮಾಡಿಕೊಳ್ಳುವುದರಲ್ಲಿ ಪಳಗಿಕೊಂಡರು. ಅದರಲ್ಲೂ ಹಿರಿಯ ವಿದ್ಯಾರ್ಥಿ ಜೆ.ಎಂ.ಎಸ್ ಮಣಿ ಬಹುಮುಖ ಪ್ರತಿಭೆಯುಳ್ಳವರಾಗಿದ್ದು ಇಂತಹ ಬಡಗಿ ಕೆಲಸಗಳನ್ನು ನಿರ್ವಹಿಸುವುದರಲ್ಲಿ ನಿಪುಣರಾದರು. ಮುಂದೆ ಇವರು ಕೆನ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಮಾಸ್ತರ ನಂತರ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.

ಮತ್ತೊಂದು ದಿನ ಮುಂಜಾನೆ ಮಾಸ್ತರು ಕೋರಾಬಟ್ಟೆಯನ್ನು ಬಿಗಿಸಿ ಸಿದ್ಧಪಡಿಸಿದ ಕ್ಯಾನ್‍ವಾಸನ್ನು ಮತ್ತಾವುದೇ ಮೂಲ ಲೇಪನವಿಲ್ಲದೆ (ಮರವಜ್ರ, ಜಿಂಕ್‍ಪುಡಿ, ನೀರನ್ನು ಒಂದು ಪ್ರಮಾನದಲ್ಲಿ ಬೆರೆಸಿ ಕುದಿಸಿದ ಮಿಶ್ರಣ. ಇದು ತೈಲ ವರ್ಣದ ಚಿತ್ರವನ್ನು ರಚಿಸುವಾಗ ಬಟ್ಟೆಯ ಮೇಲೆ (ಅಚಿಟಿvಚಿs) ಸವರುವ ಲೇಪನದ ಸರಿ) ಬಳಸಿಕೊಂಡು ಗಾಂಧೀಜಿಯವರ ಒಂದು ಛಾಯಾ ಚಿತ್ರವನ್ನು ಆಧರಿಸಿ ಚಾರ್‍ಕೋಲ್ (ಕಲಾವಿದರು ಕ್ಯಾನ್‍ವಾಸ್ ಮೇಲೆ ಚಿತ್ರ ಬಿಡಿಸಲು ಬಳಸುವ ಒಂದು ವಿಧದ ಇದ್ದಿಲಿನ ಕಡ್ಡಿ) ನಿಂದ ರೇಖಾ ಚಿತ್ರವನ್ನು ರಚಿಸಿ ನಂತರ ಪೆವಿಕಾಲ್‍ನ ಅಂಟು ನೀರಿನಲ್ಲಿ ಕಲೆಸಿದ ನೀಲಿ ಬಣ್ಣ ಮತ್ತು ಸಿಲ್ವರ್ ಬಣ್ಣಗಳನ್ನು ಬಳಸಿ ಮಾಸ್ತರು ಕೋಲು ಹಿಡಿದು ನಿಂತ ಗಾಂಧೀಜಿಯವರ ಚಿತ್ರವನ್ನು ಸಮಾರು ಎರಡು ಗಂಟೆಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದರು. ಆ ಚಿತ್ರದಲ್ಲಿ ಅವರು ಮೂಡಿಸಿದ್ದ ಕುಂಚದ ಬೀಸುಗಳು ಆಕರ್ಷಕವಾಗಿ ಮೂಡಿದ್ದವು. ಸಿಲ್ವರ್ ಮತ್ತು ನೀಲಿ ಬಣ್ಣಗಳನ್ನು ಮುಕ್ತಾವಗಿ ಲೇಪಿಸಿದ್ದರೂ ಗಾಂಧೀಜಿಯವರ ರೂಪ ಸಾದೃಶ್ಯಕ್ಕೆ ಚ್ಯುತಿಯಾಗಿರಲಿಲ್ಲ. ಗಾಂಧೀಜಿಯವರ ಚಿತ್ರ ರಚಿಸಲು ಕಾರಣರಾದ ವ್ಯಕ್ತಿಯು ಅದನ್ನು ತೆಗೆದುಕೊಂಡು ಹೋಗಲು ಹಣದೊಂದಿಗೆ ಶಾಲೆಗೆ ಬಂದರು. ಚಿತ್ರವನ್ನು ನೋಡಿ ಅಚ್ಚರಿ ಹಾಗೂ ಸಂತಸವನ್ನು ವ್ಯಕ್ತಪಡಿಸಿದರು. ಮಾಸ್ತರೂ ಚಿತ್ರರಚನೆಯಲ್ಲಿ ಮಾಡಿದ್ದ ಪ್ರಯೋಗ ಅವರಿಗೆ ಒಪ್ಪಿಗೆಯಾಗಿ ಖುಷಿ ನೀಡಿತ್ತು. ಹೀಗೆ ಹಡಪದ್ ಮಾಸ್ತರು ಅಗತ್ಯ ಬಿದ್ದಲ್ಲಿ ದೃಶ್ಯಕಲೆಯ ಕುರಿತು ಜನರ ಅಭಿರುಚಿಯನ್ನು ಪರಿವರ್ತಿಸಲು ಪ್ರಯತ್ನಿಸುತ್ತಿದ್ದರು.

ಹಡಪದ್ ಮಾಸ್ತರ ಒಡನಾಟದಲ್ಲಿದ್ದ ಶ್ರೀಮಂತ ಶಶಿಧರ್ ಎನ್ ಅವರೂ ಸಹಾ ಇದೇ ರೀತಿಯ ಅನುಭವವನ್ನು ಹೊಂದಿದ್ದರು. ಶ್ರೀಯುತರು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಸುಚಿತ್ರ ಫಿಲಂ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ.)

ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ಅವರ ಮನೆಗೆ ಹೋಗಿದ್ದ ನಮ್ಮ ಕಾರ್ಯದ ನಡುವೆ ಮಾತು ಮಾಸ್ತರ ಬಗ್ಗೆ ಹೊರಳಿತು. ಹಡಪದ್ ಮಾಸ್ತರನ್ನು ಕುರಿತು ಶಶಿಧರ್ ಅವರು “ಗಾಂಧಿ ನಗರದಲ್ಲಿ ಹಡಪದರ ಕಲಾಶಾಲೆ ಇತ್ತು. ನಾನು ಅದನ್ನು ಗಮನಿಸಿದ್ದೆ. ಆಗಾಗ ಅವರನ್ನು ಭೇಟಿಯಾಗುತ್ತಿದ್ದೆ. ನಾನು ಅವರನ್ನು ಮೊದಲು ಕಂಡಾಗ, “ನೀವು ಎಲ್ಲಿ ನೌಕರಿ ಮಾಡುತ್ತೀರಾ?” ಎಂದು ಕೇಳಿದರು. ನಾನು ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಎಂದೆನು. ಆಗ ಮಾಸ್ತರು ನಮ್ಮ ಶಾಲೆಗೆ ಬನ್ನಿ ಎಂದು ಆಹ್ವಾನಿಸಿದರು. ಯಾವಾಗಲಾದರೂ ದಾರಿಯಲ್ಲಿ ಸಿಕ್ಕಾಗ “ಚಾ ಕುಡಿಯೋಣ ಬನ್ನಿ” ಎಂದು ಕರೆಯುತ್ತಿದ್ದರು. ಮ್ಯೂಸಿಯಂ ಕೆಲಸದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಹಡಪದ್ ಅವರಿಗೆ ಹೊಸತು ಎನಿಸಿದ್ದನ್ನು ತಿಳಿಯುವ ಕುತೂಹಲ ನಾವು ಅವರೊಂದಿಗೆ ಮಾತಾಡಿದ ವಿಷಯವನ್ನು ಕುರಿತು, “ರೀ ನಮ್ಮ ಶಾಲೆಗೆ ಬನ್ನಿ, ವಿದ್ಯಾರ್ಥಿಗಳಿಗೆ ನಿಮ್ಮ ಅನುಭವವನ್ನು ಹೇಳಿ. ನಮ್ಮ ಹುಡುಗರು ವಿಜ್ಞಾನದ ವಿಷಯದಲ್ಲಿ ಅವರಿಗೆ ಆಸಕ್ತವಾದ ಹೊಸತು ಇದ್ದರೆ ಕಲಿಯುತ್ತಾರೆ. ಅಲ್ಲದಿದ್ದರೆ ಅವರ ಅಭಿಪ್ರಾಯವನ್ನು ತಿಳಿಸುತ್ತಾರೆ. ಪರಸ್ಪರ ವಿಚಾರ ವಿನಿಮಯ ಆಗುತ್ತದೆ. ಕಲಾವಿದ್ಯಾರ್ಥಿಗಳು ಎಲ್ಲೋ ಒಂದು ಕಡೆ ಕುಳಿತು ಪೇಯಿಂಟಿಂಗ್  ಇಲ್ಲಾ ಸ್ಟಿಲ್ಲೈಪ್  ಅಂತ ಬರಿ ಚಿತ್ರ ಬರಿತಿರುತ್ತಾರೆ.

ಅದು ಹಾಹಾಗಬಾರದು. ಅದಕ್ಕೂ ಮೀರಿದ್ದೂ ಇದೆ ಅನ್ನುವುದು ಅವರಿಗೆ ತಿಳಿಯಬೇಕು. ಹುಡುಗರಿಗೆ ಮ್ಯೂಸಿಯಂಗೆ ಹೋಗಿ ತಿಳಿದುಕೊಳ್ಳಲು ಹೇಳ್ತೀನಿ. ನಾನೂ ಸಹಾ ಬರುತ್ತೇನೆ. ವಿಜ್ಞಾನವನ್ನು ತಿಳಿಯುವ ಸಾಮರ್ಥ ಅವರಲ್ಲಿ ಇದೆಯಾ? ಇಲ್ಲಾಂದ್ರೆ ಬೆಳೆಸೋದು ಹೇಗೆ? ಇದು ಎಲ್ಲರೂ ಒಟ್ಟಿಗೆ ಸೇರಿ ಮಾಡೋ ಕೆಲಸ ಕಲಾವಿದನನ್ನು ಬೆಳೆಸಬೇಕು. ಅವನೆಲ್ಲೋ ಮೂಲೆಯಲ್ಲಿ ಕುಳಿತುಕೊಳ್ಳೋದು ಅಲ್ಲ. ಅವನೂ ಕೂಡಾ ಸಮಾಜದ ಒಂದು ಭಾಗ. ಕಲಾವಿದನಾಗೋನು ವಿಜ್ಞಾನ ಮತ್ತು ಸಮಾಜ ಶಾಸ್ತ್ರದ ಬಗ್ಗೆ ತಿಳಿಯಬೇಕು. ಅದರ ಸಲುವಾಗಿ ಪರಸ್ಪರ ವಿಚಾರ ವಿನಿಮಯವಾಗಬೇಕು. ಯಾರೇ ಆದರೂ ಚರ್ಚೆಮಾಡಬೇಕು ಇದರಿಂದ ಎಲ್ಲರಿಗೂ ಒಳಿತು” ಎಂದು ಹಡಪದ್ ಅವರು ಸದಾ ಹೇಳುತ್ತಿದ್ದರು ಎಂದರು. ಆಗ ನಾನು ‘ಸಾರ್ ಮಾಸ್ತರು ನಿಮ್ಮೊಂದಿಗೆ ಈ ವಿಷಯವಾಗಿ ಜೊತೆಗೂಡಿ ಕೆಲಸ ಮಾಡಿದ ಅನುಭವ ಇದೆಯಾ? ಎಂದು ಕೇಳಿದೆ. ಅದಕ್ಕೆ ಶಶಿಧರ್ ಅವರು “ಖಂಡಿತವಾಗಿ ಇದೆ. ನಾವು ಮ್ಯೂಸಿಯಂನಲ್ಲಿ ಟಿಂಬರ್ ಮತ್ತು ಮೆಟಲ್ ಗ್ಯಾಲರಿಯನ್ನು ಸಿದ್ಧ ಮಾಡ್ತಾ ಇದ್ವಿ.

hadapadworks3ನಮ್ಮ ಈ ವಿಷಯವನ್ನು ಕುರಿತು ಹಡಪದ್ ಅವರ ಬಳಿ ವಿವರಿಸಿದಾಗ, ಅವರು ಆಸಕ್ತಿಯಿಂದ ಕೇಳಿದರು. ಮತ್ತೆ “ಇದನ್ನು ಹೊಸರೀತಿಯಲ್ಲಿ ಏಕೆ ಪರಿಚಯಿಸಬಾರದು? ಮರವನ್ನು ಹಾಗೇ ಇರಿಸುವ ಬದಲು ಅದನ್ನು ಬಳಸಿ ಕಲಾತ್ಮಕವಾಗಿ ತಿಳಿಸಬಹುದು.” ಎಂದರು. ನಾವು, “ನೀವು ಮಾಡಿಕೊಡ್ತಿರಾ?” ಎಂದು ಕೇಳಿದೆವು. ಹಡಪದ್ ಅವರು “ಹೂಂ ಕೊಡಿ ಮಾಡಿಕೊಡುತ್ತೇನೆ” ಎಂದರು. ಅವರು ಹಾಗೆ ಹೇಳಿದ ಮೇಲೆ ಅದನ್ನು ಮಾಡಲು ಎಷ್ಟು ದಿನಗಳಾಗ ಬಹುದು ಎಂಬುದನ್ನು ತಿಳಿದುಕೊಂಡು ನಮ್ಮ ಮೇಲಧಿಕಾರಿಗಳಿಗೆ ಕಲಾವಿದರು ಹೊಸರೀತಿಯಲ್ಲಿ ಕೆಲಸ ಮಾಡುವ ವಿಚಾರ ತಿಳಿಸಿ ಅವರಿಂದ ಅನುಮತಿಯನ್ನು ಪಡೆದವು. ಹಡಪದ್ ಅವರು ಹಲಗೆಗಳನ್ನು ತೆಗೆದುಕೊಂಡು ಅದನ್ನು ಅಲ್ಲಲ್ಲಿ ಸುಟ್ಟು ಕಲಾಕೃತಿಗಳನ್ನು ನಮಗೆ ರಚಿಸಿಕೊಟ್ಟರು. ಒಂದು ಕಲೆಯ ಮಾಧ್ಯಮವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟರು. ನಾವು ಆವರೆಗೂ ಕಲಾಮಾಧ್ಯಮವನ್ನು ಈ ರೀತಿಯಾಗಿ ಬಳಸಬಹುದು ಎಂಬುದರ ಬಗ್ಗೆ ಚಿಂತಿಸಿರಲಿಲ್ಲ. ಹಡಪದರು ಕೃತಿ ರಚಿಸುವಾಗ ಅಗತ್ಯಕ್ಕೆ ಅನುಗುಣವಾಗಿ ವಿಭಿನ್ನವಾಗಿ ವಿಚಾರ ಮಾಡುತ್ತಿದ್ದರು. ಅವರಿಗೆ ಯಾವುದೇ ವಿಚಾರವಾಗಲಿ ತಿಳಿಯಬೇಕು ಎಂಬ ಕುತೂಹಲ ಹಾಗೇ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬ ಆಶಯವಿತ್ತು. ಉದಾಹರಣೆಗೆ ಸಿನೀಮಾ (ಚಲನಚಿತ್ರ) ವಿಚಾರ ಬಂದಾಗ ನಮ್ಮ ಮಯೂರ ಆರ್ಟ್ ಫಿಲಂ ಸೊಸೈಟಿಯ ಬಗ್ಗೆ ಹಡಪದ್ ಅವರು “ನಿಮ್ಮ ಸಿನೀಮಾಗಳನ್ನು ನಮ್ಮ ಹುಡುಗರಿಗೆ ತೋರಿಸಿ ನಿಮ್ಮ ಅನುಭವ, ವಿಚಾರಗಳನ್ನು ಅವರಿಗೆ ಹೇಳಿ ಅವರೂ (ವಿದ್ಯಾರ್ಥಿಗಳು) ತಮ್ಮ ಅಭಿಪ್ರಾಯವನ್ನು ತಿಳಿಸಲಿ. ಅದರ ಬಗ್ಗೆ ಚರ್ಚೆ ಮಾಡಲಿ” ಎನ್ನುತ್ತಿದ್ದರು.

ನಾವು ಸುಮಾರು ಐವತ್ತು ಜನ ಗೆಳೆಯರೆಲ್ಲಾ ಸೇರಿ ‘ಮಯೂರ ಫಿಲಂ’ ವತಿಯಿಂದ ಒಂದು ಸಿನಿಮಾ ಮಾಡುವ ಯೋಜನೆ ಮಾಡಿದ್ದವು. ನಮ್ಮ ಬಳಿ ಹೆಚ್ಚು ಹಣವಿರಲಿಲ್ಲ ತಲಾ 2000/- ರೂಗಳನ್ನು ಹಾಕಿ ಸಹಕಾರಿ ಮನೋಭಾವದಲ್ಲಿ “ಕಂಕಣ” ಎಂಬ ಚಿತ್ರವನ್ನು ನಿರ್ಮಿಸಿದ್ದೆವು. ಅದರಲ್ಲಿ ಕುಲಕರ್ಣಿ, ರಾಂಮೂರ್ತಿ, ಎಸ್.ಬಿ.ಎಸ್ ಪ್ರಸಾದ್ ಅವರ ನಿರ್ದೇಶನ, ಛಾಯಗ್ರಹಣ ಎಸ್ ರಾಮಚಂದ್ರ, ಹಂಜು ಇಂಜುಮಾಸ್ ಅವರ ಸಂಗೀತ, ಆ ತಂಡಲದಲಿ ನಾನೂ ಸಹ ಇದ್ದೆ. ನಾವೆಲ್ಲಾ ಹಡಪದ್ ಅವರನ್ನು “ಕಂಕಣ” ಚಿತ್ರಕ್ಕೆ ಕಲಾನಿರ್ದೇಶಕರಾಗಬೇಕು ಎಂದು ಕೇಳಿಕೊಂಡವು. ಮೊದಲು ‘ಒಲ್ಲೆ’ ಎಂದರು ಆ ನಂತರ ನಮ್ಮ ಒತ್ತಾಯದ ಮೇಲೆ ಒಪ್ಪಿದರು. ಚಿತ್ರೀಕರಣ ಸಂಬಂಧ ಮೈಸೂರಿಗೆ ನಮ್ಮ ಜೊತೆ ಬಂದರು. ಆಗೆಲ್ಲಾ ನಮ್ಮ ತಂಡದೊಡನೆ ಬೆರೆತು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಅನವಶ್ಯಕವಾಗಿ ಖರ್ಚು ಮಾಡಿಸದೆ ಚಿತ್ರದ ಅಗತ್ಯಗಳನ್ನು ಅವರು ಪರಿಣಾಮಕಾರಿಯಾಗಿ ಪೂರೈಸಿಕೊಟ್ಟಿದ್ದಾರೆ. ಮುಖ್ಯವಾಗಿ ಅವರ ಒಡನಾಟ ನಮಗೆ ಆಪ್ಯಾಯಮಾನವಾಗಿತ್ತು. ಇವತ್ತಿಗೂ ಮಾಸ್ತರುಗಳಲ್ಲಿ ‘ಬೆಸ್ಟ್’ ಎಂದು ಯಾರನ್ನು ಹೆಸರಿಸಬೇಕು ಅಂದ್ರೆ ನಾನು ಹಡಪದ್ ಮಾಸ್ತರನ್ನು ಹೆಸರಿಸುತ್ತೇನೆ. “He is the greatest teacher” ಹಡಪದ್ ಮಾಸ್ತರನ್ನು ಮರೆಯಲು ಸಾಧ್ಯವಿಲ್ಲ ಎಂದು ಶ್ರೀಯುತರು ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

Leave a Reply

Your email address will not be published.