ಬುರ್ಖಾ, ಕುಂಕುಮ, ಮಾಂಗಲ್ಯ ಮತ್ತು ಸ್ತ್ರೀ ಸಂವೇದನೆ

ನಾದಿವಾಕರ

 

bhurk

ಭಾರತದ ಸಾಮಾಜಿಕ ಸಂಕಥನದಲ್ಲಿ ಧರ್ಮ ಮತ್ತು ಸಂಸ್ಕøತಿ ಎರಡೂ ವಿದ್ಯಮಾನಗಳು ಪರಸ್ಪರ ಪೂರಕವಾಗಿಯೇ ಬೆಳೆದುಬಂದಿದೆ. ಭಾರತೀಯ ಸಂಸ್ಕøತಿ ಎಂದ ಕೂಡಲೇ ಸನಾತನ ಹಿಂದೂ ಧರ್ಮದ ನೆರಳು ಆವರಿಸುತ್ತದೆ. ಜನಪದ ಸಂಸ್ಕøತಿ ಎಂದ ಕೂಡಲೇ ಪ್ರಾಚೀನ ಭಾರತದ ಸಾಂಸ್ಕøತಿಕ ಮತ್ತು ಧಾರ್ಮಿಕ ಪರಂಪರೆ ಮುಖಾಮುಖಿಯಾಗುತ್ತದೆ. ಹಾಗಾಗಿ ಸಂಸ್ಕøತಿಯ ಸಂಕಥನಗಳೆಲ್ಲವೂ ಬಹುಪಾಲು ಧರ್ಮದ ಚೌಕಟ್ಟಿನಲ್ಲೇ ನಡೆಯುತ್ತಿರುವುದನ್ನು ಕಾಣಬಹುದು. ಒಂದು ಜನಸಮುದಾಯದ ಅಥವಾ ಒಂದು ಭೂಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರ ಜೀವನ ಶೈಲಿಯನ್ನು ಬಿಂಬಿಸುವ ಸಾಂಸ್ಕøತಿಕ ನೆಲೆಗಳಿಗೂ, ಈ ಜನಸಮುದಾಯಗಳನ್ನು ಹಲವು ನಿರ್ಬಂಧಗಳಿಗೊಳಪಡಿಸಿ ಅಧಿಪತ್ಯ ಸಾಧಿಸಲು ರೂಪುಗೊಳ್ಳುವ ಧರ್ಮದ ನೆಲೆಗೂ ಇರುವ ಅಂತರವನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಭಾರತದ ದುರಂತವೆಂದರೆ ಇಲ್ಲಿ ಧರ್ಮದ ವ್ಯಾಖ್ಯಾನ ನಡೆಯುವುದೇ ಸಾಂಸ್ಕøತಿಕ ಭೂಮಿಕೆಯ ಮೇಲೆ, ಸಂಸ್ಕøತಿಯ ನೆಲೆಗಳಲ್ಲಿ. ಹಾಗಾಗಿಯೇ ಜನಪದ ಸಂಸ್ಕøತಿಯೂ ಸಹ ಒಮ್ಮೊಮ್ಮೆ ಯಾವುದೊ ಒಂದು ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿಬಿಡುತ್ತದೆ. ಈ ಬೌದ್ಧಿಕ ದಾರಿದ್ರ್ಯತೆ ಅಥವಾ ದೌರ್ಬಲ್ಯವನ್ನೇ ಇಂದು ಹಿಂದೂ ಹಾಗು ಮುಸ್ಲಿಂ ಮತಾಂಧರು ತಮ್ಮ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಮುಸ್ಲಿಂ ಮಹಿಳೆಯರ ಬುರ್ಖಾ ಮತ್ತು ಹಿಂದೂ ಮಹಿಳೆಯರ ತಾಳಿ ಕುಂಕುಮ ಸ್ತ್ರೀ ಸಂವೇದನೆಯ ಗೆರೆಗಳನ್ನು ದಾಟಿ ಸಾಂಸ್ಕøತಿಕ ಆಯಾಮ ಪಡೆದುಕೊಳ್ಳುತ್ತವೆ.

ಒಂದು ನಿರ್ದಿಷ್ಟ ಧರ್ಮವನ್ನು ಪಾಲಿಸುವ ಜನರು ಇಂತಹುದೇ ಸಂಸ್ಕøತಿಯನ್ನು ಪಾಲಿಸುವಂತಿರಬೇಕು ಎಂಬ ಅಪಾಯಕಾರಿ ಸಂದೇಶ ಇಂದು ಬಲವಾಗುತ್ತಿದೆ. ಸಂಸ್ಕøತಿಯನ್ನು ಮತೀಯ ಸಂಪ್ರದಾಯಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಕಾಣುವ ಪುರೋಹಿತಶಾಹಿಯ ಬೌದ್ಧಿಕ ಕಸರತ್ತು ಈ ಪ್ರತಿಪಾದನೆಗಳಲ್ಲಿ ಎದ್ದು ಕಾಣುತ್ತದೆ. ಧರ್ಮದ ಚೌಕಟ್ಟಿನಿಂದ ಹೊರಬಂದು, ಧಾರ್ಮಿಕ ನೆಲೆಗಳನ್ನು ಧಿಕ್ಕರಿಸಿದ ನಂತರವೂ ಸಂಸ್ಕøತಿಯ ಪ್ರತಿಪಾದಕರಾಗಿರಲು ಸಾಧ್ಯ ಎಂಬ ವೈಚಾರಿಕ ನಿಲುವು ಈ ಸಂಕಥನಗಳಲ್ಲಿ ಮಾಯವಾಗುತ್ತಿದೆ. ಭಾರತದ ಸಂಪರ್ಕವನ್ನೇ ತೊರೆದು ತಮ್ಮ ಐಷಾರಾಮಿ ಜೀವನಕ್ಕಾಗಿ ವಿದೇಶಿ ಪೌರತ್ವ ಪಡೆದವರು ಧಾರ್ಮಿಕ ನೆಲೆಯ ಹಬ್ಬ ಹರಿದಿನಗಳನ್ನು ಆಚರಿಸುವುದನ್ನು ಕಂಡಾಗ “ ವಿದೇಶದಲ್ಲೇ ನೆಲೆಸಿದರೂ ನಮ್ಮ ಸಂಸ್ಕøತಿಯನ್ನು ಕೈಬಿಟ್ಟಿಲ್ಲ ” ಎಂದು ಹೇಳುವುದನ್ನು ಇಲ್ಲಿ ಗಮನಿಸಬೇಕು. ಇಲ್ಲಿ ಧಾರ್ಮಿಕ ಸಾಂಪ್ರದಾಯಿಕತೆ ಮತ್ತು ಆಚರಣೆಗಳನ್ನು ಸಂಸ್ಕøತಿಯೊಡನೆ ಸಮೀಕರಿಸುವ ಪ್ರಯತ್ನ ಎದ್ದು ಕಾಣುತ್ತದೆ. ಇದು ವಾಸ್ತವಕ್ಕೆ ಎಷ್ಟು ಹತ್ತಿರ ಎಂದು ಆಲೋಚಿಸಬೇಕಿದೆ.

ಧರ್ಮದ ಭೂಮಿಕೆಯ ಮೇಲೆ ನಿರ್ಮಿತವಾಗಿರುವ ಆಚರಣಾ ವಿಧಿವಿಧಾನಗಳು ಮತ್ತು ಪದ್ಧತಿಗಳು ಸಂಸ್ಕøತಿಯ ವ್ಯಾಪ್ತಿಯಿಂದ ಹೊರತಾಗಿರುವುದು ಅಗತ್ಯ. ಇಲ್ಲವಾದಲ್ಲಿ ಧರ್ಮ-ಸಂಸ್ಕøತಿಕ ಮೇಳೈಕೆಯಲ್ಲಿ ಮಾನವೀಯ ಮೌಲ್ಯಗಳು ಸೊರಗಿಹೋಗುತ್ತವೆ. ಭಾರತೀಯ ಸಮಾಜ ಈ ಅಪಾಯವನ್ನು ಎದುರಿಸುತ್ತಿರುವುದು ಸ್ಪಷ್ಟ.

ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದರ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ವಿವಾದಗಳನ್ನು ಈ ಹಿನ್ನೆಲೆಯಲ್ಲೇ ವ್ಯಾಖ್ಯಾನಿಸಬೇಕಿದೆ. ಭಾರತದ ಸಾಮಾಜಿಕ ಸಂದರ್ಭದಲ್ಲಿ ಉಡುಪು ಸಂಸ್ಕøತಿ ಮತ್ತು ಧರ್ಮದ ಚೌಕಟ್ಟಿಗೆ ಸಿಲುಕಿರುವುದೇ ಒಂದು ದುರಂತ. ನನ್ನ ಎಡಪಂಥೀಯ ಗೆಳೆಯರೊಬ್ಬರು ಪಂಚೆ ಧರಿಸಿ ಎದುರಿಸಿದ ಟೀಕಾಸ್ತ್ರಗಳು ಇಲ್ಲಿ ನೆನಪಾಗುತ್ತವೆ. ಪಂಚೆ ಧರಿಸುವುದೂ ಯಾವುದೋ ಒಂದು ಸಾಂಸ್ಕøತಿಕ ಅಥವಾ ಮತೀಯ ನೆಲೆಯ ಸೂಚಕ ಎಂದು ಭಾವಿಸುವಷ್ಟು ಬೌದ್ಧಿಕ ದಾರಿದ್ರ್ಯತೆ ನಮ್ಮೊಳಗೆ ಮನೆ ಮಾಡಿದೆ. ಮಹಿಳೆಯರು ಧರಿಸುವ ಸೀರೆ, ಸೆಲ್ವಾರ್ ಕಮೀಜ್, ಚೂಡಿದಾರ್, ಪುರುಷರು ಧರಿಸುವ ಕಚ್ಚೆ ಪಂಚೆ, ಜೀನ್ಸ್ , ಮುಸ್ಲಿಂ ಮಹಿಳೆಯರ ಬುರ್ಖಾ, ಹಿಜಬ್, ಸಿಖ್ಖರ ಪೇಟ ಹೀಗೆ ಯಾವುದೋ ಒಂದು ಸಾಮಾಜಿಕ ಸಂದರ್ಭದಲ್ಲಿ ಜನಸಮುದಾಯಗಳ ಜೀವನಶೈಲಿಯ ಒಂದು ಭಾಗವಾಗಿ ರೂಪುಗೊಂಡ ವಸ್ತ್ರಧಾರಣೆಯ ವಿನ್ಯಾಸಗಳು ಇಂದು ಧರ್ಮ ಸಂಸ್ಕøತಿಯ ವ್ಯಾಖ್ಯಾನಕ್ಕೆ ಸಿಲುಕಿರುವುದು ಈ ಬೌದ್ಧಿಕ ದಾರಿದ್ರ್ಯತೆಗೆ ಕನ್ನಡಿ ಹಿಡಿದಂತಿದೆ.

ಈ ದಾರಿದ್ರ್ಯತೆಯ ಕೂಪದಲ್ಲೇ ತಮ್ಮ ಧಾರ್ಮಿಕ ನೆಲೆಯನ್ನು ಕಂಡುಕೊಳ್ಳಲು ಹವಣಿಸುವ ಹಿಂದೂ, ಮುಸ್ಲಿಂ ಮತೀಯವಾದಿಗಳಿಗೆ ಬುರ್ಖಾ, ನಾರುಮಡಿ, ಪಂಚೆ ಇವೆಲ್ಲವೂ ಜನಸಮುದಾಯಗಳ ಮೇಲೆ ಅಧಿಪತ್ಯ ಸಾಧಿಸುವ ಚಿಮ್ಮುಹಲಗೆಗಳಾಗಿಬಿಡುತ್ತವೆ. ಹಾಗಾಗಿಯೇ ಬುರ್ಖಾ ಧರಿಸುವುದು ಇಸ್ಲಾಂ ಧರ್ಮದ ಮೂಲ ತತ್ವಗಳಲ್ಲೊಂದು ಎಂಬ ಅತಾರ್ಕಿಕ ವಾದಕ್ಕೆ ಬುರ್ಖಾ ಶೋಷಣೆಯ ಸಂಕೇತ ಎಂಬ ಅವೈಚಾರಿಕ ಪ್ರತಿವಾದ ಕೇಳಿಬರುತ್ತದೆ. ಇಲ್ಲವಾದರೆ ಬುರ್ಖಾಗೆ ಪ್ರತಿಯಾಗಿ ತಾಳಿ, ಕುಂಕುಮ, ಬಳೆ ಇತ್ಯಾದಿ ಸಾಂಕೇತಿಕ ಪರಿಕರಗಳು ಮಾನ್ಯತೆ ಪಡೆಯುತ್ತವೆ. ಮಾನವನ ಅಸ್ಮಿತೆಯನ್ನು ಸಾಂಸ್ಕøತಿಕ ಮತ್ತು ಧಾರ್ಮಿಕ ನೆಲೆಗಳಲ್ಲೇ ಕಂಡುಕೊಳ್ಳುವ ಅಪಾಯಕಾರಿ ತತ್ವವನ್ನು ಈ ವಾದ ಪ್ರತಿವಾದಗಳಲ್ಲಿ ಕಾಣಬಹುದು. ಉದಾಹರಣೆಗೆ ಭಾರತದ ಮಹಿಳೆಯರ ಕುಂಕುಮ ಧಾರಣೆ, ಮಾಂಗಲ್ಯ ಧಾರಣೆ ಇತ್ಯಾದಿ ಪದ್ಧತಿಗಳು ಪ್ರಾಚೀನ ಕಾಲದಿಂದಲೂ ನಡೆದುಬಂದಿದ್ದು ಮಹಿಳೆಯರನ್ನು ಆವರಿಸಿದೆ. ಈ ಸಂಕೇತಗಳನ್ನು ರೂಪಕಗಳನ್ನಾಗಿ ಪರಿವರ್ತಿಸಿ ತಮ್ಮದೇ ಆದ ನಿರ್ದಿಷ್ಟ ಧರ್ಮ ಮತ್ತು ಸಂಸ್ಕøತಿಯ ವ್ಯಾಪ್ತಿಯೊಳಗೆ ಸೇರಿಸಿರುವುದು ಈ ದೇಶದ ವೈದಿಕ ಪರಂಪರೆ ಮತ್ತು ಬ್ರಾಹ್ಮಣಶಾಹಿ ಧೋರಣೆ. ಕುಂಕುಮ ಹಿಂದೂ ಧರ್ಮದ ಅಥವಾ ಸಂಸ್ಕøತಿಯ ದ್ಯೋತಕ ಎಂದು ವಾದಿಸುವುದು ಈ ವೈದಿಕ ಪರಂಪರೆಯ ಸಮರ್ಥನೆಯೇ ಹೊರತು ಮತ್ತೇನಿಲ್ಲ.

ವಾಸ್ತವ ಎಂದರೆ ಕುಂಕುಮ ಅಥವಾ ಮಾಂಗಲ್ಯ ಮುಂತಾದುವನ್ನು ಧರ್ಮ, ಸಂಸ್ಕøತಿಯ ನೆಲೆಯಲ್ಲಿ ವ್ಯಾಖ್ಯಾನಿಸುವುದರ ಮೂಲಕ ಮತೀವಾದಿಗಳು, ಪುರೋಹಿತಶಾಹಿಗಳು ಮಹಿಳಾ ಸಮುದಾಯದ ಸಂವೇದನೆ ಮತ್ತು ಸೂಕ್ಷ್ಮತೆಗಳನ್ನು ಆವರಿಸಲು ಯತ್ನಿಸಿರುವುದನ್ನು ಗಮನಿಸಬೇಕು. ಮುಸ್ಲಿಂ ಧರ್ಮದಲ್ಲೂ ಇದೇ ಪೀಡೆ ಆವರಿಸಿದ್ದು ಬುರ್ಖಾ ಧರಿಸುವುದನ್ನು ಇಸ್ಲಾಂ ಧರ್ಮದ ಸಂಕೇತ ಎಂದು ಬಿಂಬಿಸಲಾಗುತ್ತಿದೆ. ಅಥವಾ ಬುರ್ಖಾ ಧರಿಸದ ಮುಸ್ಲಿಂ ಮಹಿಳೆಯರು, ಕುಂಕುಮ ಧರಿಸದ ಹಿಂದೂ ಮಹಿಳೆಯರು ಧರ್ಮಭ್ರಷ್ಟರಾಗುತ್ತಿದ್ದಾರೆ. ಈ ಸಾಂಕೇತಿಕ ಧಾರಣೆಗಳು ಯಾವುದೋ ಒಂದು ಕಾಲಘಟ್ಟದ ಜೀವನ ಕ್ರಮದ ಅನಿವಾರ್ಯತೆಗಳಿಂದ ಹುಟ್ಟಿರಬಹುದು ಅಥವಾ ಜನಸಮುದಾಯಗಳ ಅಸ್ಮಿತೆಗಳ ದ್ಯೋತಕವಾಗಿ ಸೃಷ್ಟಿಯಾಗಿರಬಹುದು. ಆಧುನಿಕ ಜಗತ್ತಿನಲ್ಲಿ ಈ ವಿದ್ಯಮಾನಗಳನ್ನು ಧರ್ಮ ಮತ್ತು ಸಂಸ್ಕøತಿಯ ನೆಲೆಯಲ್ಲಿ ವ್ಯಾಖ್ಯಾನಿಸಿದಾಗ ಸ್ತ್ರೀಸಂವೇದನೆ ಮೂಲೆಗುಂಪಾಗುತ್ತದೆ, ಮಹಿಳೆಯರ ಅಸ್ಮಿತೆ ಮತ್ತು ವ್ಯಕ್ತಿಗತ ಹಕ್ಕುಗಳು ನಿರ್ಲಕ್ಷಿಸಲ್ಪಡುತ್ತವೆ. ಪುರುಷ ಪ್ರಧಾನ ಸಮಾಜ ಮತ್ತು ಈ ಸಮಾಜವನ್ನು ನಿಯಂತ್ರಿಸುವ ಪುರೋಹಿತಶಾಹಿ ವರ್ಗಗಳು ಪ್ರಾಬಲ್ಯ ಸಾಧಿಸುತ್ತವೆ.

ಬುರ್ಖಾ ಧರಿಸುವುದು ಮುಸ್ಲಿಂ ಮಹಿಳೆಯರ ವ್ಯಕ್ತಿಗತ ಆದ್ಯತೆ.
ಧರಿಸದೆ ಇರುವುದು ಅವರ ಹಕ್ಕಿನ ಪ್ರಶ್ನೆಯಾಗಬೇಕು. ಇಲ್ಲವಾದಲ್ಲಿ ಸ್ತ್ರೀ ಸಂವೇದನೆಯ ಪ್ರತಿಪಾದನೆಗಳಿಗೆ ಆದ್ಯತೆಯೇ ಇಲ್ಲವಾಗುತ್ತದೆ. ಬುರ್ಖಾ ಧರಿಸದೆ ಇರುವವರು ಇಸ್ಲಾಂ ಧರ್ಮದ ವಿರೋಧಿಗಳು ಎಂದು ಪ್ರತಿಪಾದಿಸುವ ಮತೀಯವಾದಿಗಳು, ಚೂಡಿದಾರ್ , ಜೀನ್ಸ್ ಧರಿಸುವ ಮತ್ತು ಕುಂಕುಮ ಧಾರಣೆಯನ್ನು ವಿರೋಧಿಸುವ ಹಿಂದೂ ಮಹಿಳೆಯರು ಧರ್ಮಭ್ರಷ್ಟರೆಂದು ಪ್ರತಿಪಾದಿಸುವ ಹಿಂದುತ್ವವಾದಿಗಳು ಒಂದೇ ತಕ್ಕಡಿಯಲ್ಲಿ ತೂಗುವ ಸ್ತ್ರೀ ಸಂವೇದನೆಯ ವಿರೋಧಿಗಳು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇಲ್ಲಿ ಮಹಿಳೆಯರ ಆತ್ಮರಕ್ಷಣೆ, ಸಾಮಾಜಿಕ ಸ್ಥಾನಮಾನಗಳಿಗಿಂತಲೂ ಮಹಿಳೆಯರ ಮೇಲೆ ತಮ್ಮ ಅಧಿಪತ್ಯ ಸಾಧಿಸುವ ಪುರುಷ ಪ್ರಧಾನ ವ್ಯವಸ್ಥೆಯ ಧಾರ್ಮಿಕ ನೆಲೆಗಳನ್ನು ಗುರುತಿಸುವುದು ಮುಖ್ಯವಾಗುತ್ತದೆ. ಕುಂಕುಮ, ಮಾಂಗಲ್ಯ ಧರಿಸಿದ ಹಿಂದೂ ಮಹಿಳೆಯರಾಗಲೀ, ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರಾಗಲೀ ಪುರುಷ ಸಮಾಜದ ದೌರ್ಜನ್ಯದಿಂದ ಎಂದೂ ಮುಕ್ತವಾಗಿಲ್ಲ ಎನ್ನುವುದು ಚಾರಿತ್ರಿತ ಸತ್ಯ.

Leave a Reply

Your email address will not be published.