ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

jenukuruba (2)ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 42,48,987. ಇದರಲ್ಲಿ ಆದಿಮ ಬುಡಕಟ್ಟುಗಳೆಂದು ಪರಿಗಣಿತವಾದ ಜೇನುಕುರುಬ ಮತ್ತು ಕೊರಗರ ಜನಸಂಖ್ಯೆ 50,870. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳ ಜನಸಂಖ್ಯೆ 6.95ರಷ್ಟಿದೆ. (2001ರ ಜನಸಂಖ್ಯೆಯಲ್ಲಿ ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ 6.6% ಬುಡಕಟ್ಟುಗಳ ಜನಸಂಖ್ಯೆ ದಾಖಲಾಗಿತ್ತು) ಕಳೆದ ಗಣತಿಗೆ ಹೋಲಿಸಿದರೆ ಆದಿವಾಸಿಗಳ ಜನಸಂಖ್ಯೆಯಲ್ಲಿ ಬೆಳವಣಿಗಿಯಾದೆ. ರಾಯಚೂರಿನಲ್ಲಿ ಬುಡಕಟ್ಟುಗಳ ಶೇ 19.03% ಗರಿಷ್ಟ ಜನಸಂಖ್ಯೆ ದಾಖಲಾದರೆ, ಮಂಡ್ಯದಲ್ಲಿ ಅತ್ಯಂತ ಕನಿಷ್ಠ 1.24%ರಷ್ಟು ಬುಡಕಟ್ಟು ಜನಸಂಖ್ಯೆ ದಾಖಲಾಗಿದೆ. ಬುಡಕಟ್ಟುಗಳ ಜನಸಂಖ್ಯೆಯಲ್ಲಿ 1000 ಪುರುಷರು, 990 ಮಹಿಳೆಯರ ಲಿಂಗಾನುಪಾತವಿದೆ. ದೇಶದಲ್ಲಿ ಒಟ್ಟಾರೆ 75% ಸಾಕ್ಷರತೆಯ ಪ್ರಮಾಣ ದಾಖಲಾಗಿದೆ. ಬುಡಕಟ್ಟುಗಳಲ್ಲಿ 53.9%ರಷ್ಟು ಸಾಕ್ಷರರಿರುವುದು ಕಂಡುಬರುತ್ತದೆ.

ಭಾರತದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಒಟ್ಟು ಜನ 21.9%ರಷ್ಟಿದ್ದಾರೆ. ಆದರೆ ಬುಡಕಟ್ಟು ಜನರಲ್ಲಿ ಸರಿ ಸುಮಾರು ಅರ್ಧದಷ್ಟು ಜನ ಅಂದರೆ 47.3%ರಷ್ಟು ಗ್ರಾಮೀಣ ಭಾಗದಲ್ಲಿ ಮತ್ತು 33.3% ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿರುವ ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಉತ್ತರಖಂಡ, ಓರಿಸ್ಸಾ, ಕರ್ನಾಟಕ, ಬಿಹಾರ ಮತ್ತು ಆಂಧ್ರ ಪ್ರದೇಶಗಳು ಮೊದಲ ಐದು ಸ್ಥಾನಗಳಲ್ಲಿ ವಿಜೃಂಭಿಸುತ್ತಿವೆ. ನಂತರದ ಸ್ಥಾನದಲ್ಲಿ ಜಾರ್ಖಂಡ್, ಮಧ್ಯಪ್ರದೇಶ, ಛತ್ತಿಸ್‍ಗಡ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಿವೆ.

ಕರ್ನಾಟಕದಲ್ಲಿ 50 ಬುಡಕಟ್ಟುಗಳನ್ನು ಸರಕಾರ ಪಟ್ಟಿ ಮಾಡಿದ್ದು ಈ ಬುಡಕಟ್ಟುಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುತ್ತಿವೆ. ಕರಾವಳಿ, ಮಲೆನಾಡು, ಅರೆಮಲೆನಾಡು ಮತ್ತು ವಿಶಾಲ ಬಯಲು ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ. ಬುಡಕಟ್ಟುಗಳು ಆಹಾರ ಸಂಗ್ರಹಣೆ, ಪಶುಪಾಲನೆ, ಕೃಷಿ, ಕೃಷಿಕೂಲಿಗಳಾಗಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿನ ಬುಡಕಟ್ಟುಗಳಲ್ಲಿ ನೀಗ್ರೋಯಿಡ್ ಚಹರೆಗಳು ಪ್ರಧಾನವಾಗಿವೆ. ಅದರಲ್ಲೂ ಮಲೆನಾಡಿನ ಬುಡಕಟ್ಟುಗಳಲ್ಲಿ ನೀಗ್ರೋ ಲಕ್ಷಣಗಳಿರುವುದು ಸಾಮಾನ್ಯವಾಗಿದೆ. ಸಿದ್ದಿ, ಹಾಲಕ್ಕಿ, ಮುಕ್ರಿ, ಕುಣಬಿ, ಗೊಂಡ, ಕೊರಗ, ಮಲೆಕುಡಿಯ, ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ, ಇರುಳಿಗ, ಗೌಡಲು, ಮರಾಟಿನಾಯ್ಕ, ಮರಾಠಿ, ಹಸಲ ಮತ್ತು ನಾಯಕ ಬುಡಕಟ್ಟುಗಳು ನೀಗ್ರೋ ಚಹರೆಗಳನ್ನು ಹೊಂದಿವೆ.

jenukuruba (4)ಮಲೆನಾಡು ಮತ್ತು ಕರಾವಳಿ ಬುಡಕಟ್ಟುಗಳು ಸರಕಾರದ ಹಲವು ಅಭಿವೃದ್ಧಿ ಯೋಜನೆಗಳಿಂದ ತೊಂದರೆಗಿಡಾಗಿವೆ. ಉತ್ತರ ಕನ್ನಡದಂತ ವೈವಿಧ್ಯಮಯ ನಿಸರ್ಗ ಮತ್ತು ಮಾನವ ಸಂಪನ್ಮೂಲಗಳಿರುವ ಜಿಲ್ಲೆಯಲ್ಲಿ ಸರಕಾರ ಹಲವು ಅಣೆಕಟ್ಟುಗಳನ್ನು ಕಟ್ಟಿದೆ. ಕೈಗಾ ಅಣುಸ್ಥಾವರ, ಸೀಬರ್ಡ್ ಮತ್ತು ಕೊಂಕಣ್ ರೈಲ್ವೆಯಂತಹ ಬೃಹತ್ ಯೋಜನೆಗಳು ಇಲ್ಲಿನ ಆದಿವಾಸಿಗಳನ್ನು ಒಕ್ಕಲೆಬ್ಬಿಸಿವೆ. ಕೊಂಕಣ್ ರೈಲ್ವೆಯಂತೂ ಪಶ್ಚಿಮಘಟ್ಟ ಮತ್ತು ಕರಾವಳಿಯ ಮಧ್ಯೆ ಹರಡಿಕೊಂಡಿದ್ದ ಆದಿವಾಸಿಗಳ ಜಮೀನುಗಳನ್ನು ಸೀಳಿಕೊಂಡು ಹೋಗಿದೆ. ಹಳಿ ಹಾಕಲು ನಿರ್ಮಿಸಿದ ದೊಡ್ಡ ಏರಿಯು ಆದಿವಾಸಿಗಳ ಜಮೀನುಗಳನ್ನು ಶಾಶ್ವತವಾಗಿ ನಾಶಮಾಡಿದೆ. ಈ ಏರಿಯ ಎರಡೂ ಬದಿಗಳಲ್ಲಿ ನೀರು ನಿಂತು ಆದಿವಾಸಿಗಳ ಜಮೀನುಗಳು ಹಾಳಾಗಿವೆ. ಒಂದೆಡೆ ಘಟ್ಟದಿಂದ ಹರಿದು ಬರುವ ನೀರು ಸಮುದ್ರ ಸೇರದೆ ಜಮೀನುಗಳಲ್ಲೇ ನಿಲ್ಲುತ್ತದೆ. ಇನ್ನೊಂದೆಡೆ ಸಮುದ್ರದ ಉಪ್ಪು ನೀರು ಚಲಿಸದೆ ಈ ಏರಿಯನ್ನು ಆಶ್ರಯಿಸಿಯೇ ನಿಲ್ಲುತ್ತದೆ. ಈ ಜಮೀನುಗಳಲ್ಲಿ ಸ್ಥಳೀಯ ಬುಡಕಟ್ಟುಗಳು ಏನನ್ನೂ ಬೆಳೆಯಲು ಸಾಧ್ಯವಿಲ್ಲದೆ ಬಂಜರಾಗಿವೆ. ಇಲ್ಲಿ ಜಮೀನು ಕಳೆದುಕೊಂಡ ಆದಿವಾಸಿಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಕೈಗಾ ಅಣುಸ್ಥಾವರ ಮತ್ತು ಸೀಬರ್ಡ್ ನೌಕಾ ನೆಲೆಗಳೂ ಸಹ ಉತ್ತರ ಕನ್ನಡದ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಿವೆ.

ಮೈಸೂರು, ಚಾಮರಾಜನಗರ, ಮತ್ತು ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿ ಸಂರಕ್ಷಣಾ ಯೋಜನೆಗಳಿಂದಾಗಿ ಒಕ್ಕಲೆಬ್ಬಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದ ಸ್ಥಳಾಂತರ ಅತ್ಯಂತ ಅಮಾನವೀಯವಾದದ್ದು. ಹುಲಿ ಯೋಜನೆ, ಕಬಿನಿ ಮತ್ತು ತಾರಕ ಅಣೆಕಟ್ಟುಗಳಿಂದ ಒಕ್ಕಲೆದ್ದ ಆದಿವಾಸಿಗಳನ್ನು ಕಾಡಂಚಿನಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಹಠಕ್ಕೆ ಬಿದ್ದು ಕಾಡಲ್ಲಿಯೇ ಉಳಿದ ಆದಿವಾಸಿಗಳನ್ನು ವನ್ಯಜೀವಿ ಸಂರಕ್ಷಕರು ಎಂದು ಹೇಳಿಕೊಳ್ಳುವ ಸರಕಾರಿ ಏಜೆಂಟರು ಹಣದ ಆಮಿಷ ಒಡ್ಡಿ ಕಾಡಿನಿಂದ ಹೊರಹಾಕುತ್ತಿದ್ದಾರೆ.

ಹೀಗೆ ಕಾಡಿನಿಂದ ಹೊರಗೆಸೆಯಲ್ಪಟ್ಟ ಆದಿವಾಸಿಗಳು ಆತಂತ್ರರಾಗುತ್ತಾರೆ. ತಮ್ಮ ಮೂಲ ನೆಲೆಗಳ ಶತಮಾನಗಳ ಅವಿನಾಭಾವ ಸಂಬಂಧಗಳು ಇಲ್ಲವಾದ ಕೊರಗಿನಲ್ಲಿ ಇವರು ನರಳುತ್ತಾರೆ. ಅವರ ಭಾವಕೋಶದ ಒಳಗಿದ್ದ ಪರಂಪರೆಯ ತಂತುಗಳು ಒಂದೊಂದೇ ತುಂಡರಿಸಲ್ಪಡುತ್ತವೆ. ಕಾಡಿನ ಜೊತೆಗಿನ ತಮ್ಮ ಸಹಜ ಸಂಬಂಧವನ್ನು ಕಡಿದುಕೊಂಡ ಆದಿವಾಸಿಗಳು ತಮ್ಮ ಸ್ಮøತಿಗಳನ್ನೇ ಕಳೆದುಕೊಳ್ಳುತ್ತಾರೆ.

ಹಾಗೆಂದು ಇವರು ಕಾಡಿನಲ್ಲೇ ಇರಬೇಕು ಎಂದಲ್ಲ. ಕಾಡಿನ ನಿಜ ವಾರಸುದಾರರಾದ ಅವರು ತಾವು ಬದುಕುವ ಪರಿಸರವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಅವರಿಗೆ ಕಲ್ಪಿಸಬೇಕಿದೆ. ಜೊತೆಗೆ ಕಾಡಿನಿಂದ ಹೊರತಂದ ಮೇಲೆ ಆದಿವಾಸಿಗಳನ್ನು ನಡೆಸಿಕೊಳ್ಳುವ ರೀತಿ ಮತ್ತು ಅನುಕೂಲಗಳನ್ನು ಕಲ್ಪಿಸುವ ವಿಧಾನಗಳು ಬದಲಾಗಬೇಕಿದೆ. ಆದರೆ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಕ್ಕಲೆದ್ದು ಪುನರ್ವಸತಿ ಪಡೆದು ಬದುಕುತ್ತಿರುವ ಆದಿವಾಸಿಗಳು ನೆಮ್ಮದಿಯಿಂದಿಲ್ಲ. ಕೊಡಗಿನ ಬುಡಕಟ್ಟುಗಳಲ್ಲಿ ಅದರಲ್ಲೂ ಫಣಿಎರವ, ಜೇನುಕುರುಬ ಮತ್ತು ಬೆಟ್ಟಕುರುಬ ಸಮುದಾಯಗಳು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ಬದುಕುತ್ತಿವೆ. ಕೊಡಗಿನ ಕಾಫಿತೋಟಗಳ ಲೈನ್ ಮನೆಗಳಲ್ಲಿ ಈ ಬುಡಕಟ್ಟುಗಳು ಬಂಧಿಗಳಂತೆ ಬದುಕುತ್ತಿದ್ದಾರೆ. ಹೊರ ಜಗತ್ತಿಗೆ ಈ ಸಮುದಾಯಗಳು ಮುಕ್ತವಾಗಿಲ್ಲ. ಅವರನ್ನು ಸಾಕುವ ಧಣಿಗಳ ಅನುಮತಿ ಇಲ್ಲದೆ ಈ ಬುಡಕಟ್ಟುಗಳ ದರ್ಶನವೂ ನಮಗಾಗುವುದಿಲ್ಲ. ಕರ್ನಾಟಕದ ಯಾವ ಜಿಲ್ಲೆಗಳಲ್ಲೂ ಈ ಬಗೆಯ ಉಸಿರು ಕಟ್ಟುವ ಸನ್ನಿವೇಶ ಸೃಷ್ಟಿಯಾಗಿಲ್ಲ. ಕುಡಿಯರು ಬೆಟ್ಟಗಳ ತುದಿ ಮತ್ತು ಅಪಾಯಕಾರಿ ಕಣಿವೆಗಳಲ್ಲಿ ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಬದುಕುತ್ತಿದ್ದಾರೆ.

ಇನ್ನು ಅರೆಮಲೆನಾಡು ಮತ್ತು ಬಯಲು ಸೀಮೆಗಳ ಬುಡಕಟ್ಟುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಸಲರು, ಇರುಳರು ಮತ್ತು ನಾಯಕ ಸಮುದಾಯದವರು ಹೆಚ್ಚಾಗಿ ಕೃಷಿಕೂಲಿಗಳಾಗಿಯೇ ಬದುಕುತ್ತಿದ್ದಾರೆ. ಮೇದ ಬುಡಕಟ್ಟಿನವರಿಗೆ ತಮ್ಮ ಪಾರಂಪರಿಕ ವೃತ್ತಿಯನ್ನು ಮುಂದುವರೆಸಲಾಗುತ್ತಿಲ್ಲ. ಅವರಿಗೆ ಬೇಕಾಗುವ ಬಿದಿರು ಮತ್ತು ಬೆತ್ತಗಳನ್ನು ಅವರು ಅರಣ್ಯದಿಂದ ಪಡೆಯಲಾಗುತ್ತಿಲ್ಲ. ಅರಣ್ಯದ ಬಿದಿರನ್ನು ಅಲ್ಲಿರುವ ಕಾಗದದ ಕಾರ್ಖನೆಗಳಿಗೆ ಬಿಡಿಗಾಸಿಗೆ ಕೊಡುವ ಸರಕಾರ ಮೇದರಿಗೆ ಮಾತ್ರ ಬಿದಿರನ್ನು ಬಳಸಬಾರದೆಂದು ನಿರ್ಬಂಧ ಹಾಕುತ್ತದೆ.

gonda (2)2006ರ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಅರಣ್ಯವಾಸಿ ಬುಡಕಟ್ಟುಗಳ ಪಾರಂಪರಿಕ ಹಕ್ಕುಗಳನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವಾಗಿದೆ. 2010ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಿದರೂ ಸಹ ಕರ್ನಾಟಕದಲ್ಲಿ ಈ ಕಾಯ್ದೆಯ ಜಾರಿಯಲ್ಲಿ ವಿಳಂಬವಾಗುತ್ತಲೇ ಇದೆ. ಇನ್ನು ಕೃಷಿಕೂಲಿಗಳಾಗಿ ದುಡಿಯುವ ಮತ್ತು ನಿಶ್ಚಿತ ಆದಾಯದ ಮೂಲಗಳೇ ಇಲ್ಲದ ಬುಡಕಟ್ಟು ಜನರ ಸಂಖ್ಯೆ ಕನಾಟಕದಲ್ಲಿ ಹೆಚ್ಚು. ಈ ಗುಂಪಿಗೆ ಸೇರಿದ ಜನ ಇನ್ನೂ ಅಂತಂತ್ರರಾಗಿಯೇ ಬದುಕುತ್ತಿದ್ದಾರೆ. ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ 47.3% ಭಾಗದ ಜನ ಇವರೇ ಆಗಿದ್ದಾರೆ. ಪ್ರಭುತ್ವ ಈ ಜನರ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ. ನಿಶ್ಚಿತ ಆದಾಯದ ಮೂಲಗಳನ್ನು ಸೃಷ್ಠಿಸಿಕೊಳ್ಳುವ ಸಾಮರ್ಥವ್ಯವನ್ನು ಈ ಜನರಲ್ಲಿ ಉದ್ದೀಪಿಸುವಂತಾಗಬೇಕಿದೆ. ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ‘ಕೊಡುಗೆಗಳನ್ನು’ ನೀಡುವ ಬದಲು ಬುಡಕಟ್ಟುಗಳನ್ನು ಅಮುಲಾಗ್ರವಾಗಿ ಸಬಲೀಕರಿಸುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ.

ಇನ್ನು ಕರ್ನಾಟಕದ ಹಲವು ಕಡೆ ಸರಕಾರದ ಘೋಷಿತ ಪರಿಶಿಷ್ಟ ಬುಡಕಟ್ಟುಗಳ ಪಟ್ಟಿಗೆ (Scheduled Tribes list) ಸೇರಲೇಬೇಕಾದ ಕೆಲವು ಸಮುದಾಯಗಳು ಕರ್ನಾಟಕದ ಹಲವು ಜಿಲ್ಲೆಗಳಲ್ಲಿವೆ. ಉತ್ತರ ಕರ್ನಾಟಕದ ಹಾಲಕ್ಕಿ ಒಕ್ಕಲಿಗ, ಮುಕ್ರಿ ಕುಣಬಿ, ಕುಮರಿ ಮರಾಠಿ, ದಕ್ಷಿಣ ಕರ್ನಾಟಕದ ಕುಡುಬಿ, ಚಿತ್ರದುರ್ಗ ಪ್ರದೇಶದ ಕಾಡುಗೊಲ್ಲ ಸಮುದಾಯಗಳನ್ನು Scheduled Tribe ಪಟ್ಟಿಗೆ ಸೇರಿಸಬೇಕಾಗಿದೆ. ಜೊತೆಗೆ ಸಂವಿಧಾನ ಬದ್ಧ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಸಮುದಾಯಗಳು ತಮ್ಮ ಅಭಿವೃದ್ಧಿಯನ್ನು ತಾವೇ ರೂಪಿಸಿಕೊಳ್ಳುಲು ಅನುವು ಮಾಡಿಕೊಡುವ ‘ಬುಡಕಟ್ಟುಗಳ ರಾಷ್ಟ್ರೀಯ ಸಮಗ್ರ ಅಭಿವೃದ್ಧಿ ನೀತಿ’ಯನ್ನು ರೂಪಿಸುವ ಅಗತ್ಯವಿದೆ.

ಕೊನೆಯದಲ್ಲದ ಮಾತು
ಬುಡಕಟ್ಟುಗಳು ನಮ್ಮದೇ ಸಮಾಜದ ಬೇರುಗಳು. ‘ನಮ್ಮ ದೇಶ’ ಎಂದು ಕರೆಯಲಾಗುವ ಈ ನೆಲದ ತುಂಬ ಇರುವ ಗಾಳಿ ಗಂಧಗಳು ಈ ಬೇರುಗಳ ಶ್ರಮದ ಫಲಗಳು. ಈ ನೆಲದ ಕಸವನ್ನು ಹೀರಿ, ರೆಂಬೆ ಕೊಂಬೆಗಳನ್ನು ಚಾಚಿ ಚಿಗುರು ಹೂ ಹಣ್ಣುಗಳ ಫಲ ನೀಡುವ ಬೇರುಗಳು ಖಿಲಗೊಳ್ಳಬಾರದು. ಸ್ಥಳೀಯ ಜೀವನಾನುಭವದ ಮೂಲಕ ಸಮಷ್ಠಿ ದರ್ಶನದ ಸಂಚಯಕ್ಕೆ ಕಾರಣವಾದ ನಮ್ಮ ಆದಿಮ ಸಮಾಜಗಳು ಆತ್ಮಪ್ರತ್ಯಯದ ಮೂಲಕ ಬದುಕುವಂತಾಗಬೇಕು. ದಟ್ಟ ಕಾಡುಗಳ ನಡುವೆ ಸರಳವಾಗಿ ಸಮತಾವಾದಿಗಳಾಗಿ ಬದುಕಿದ್ದ ಈ ಸಮುದಾಯಗಳು ತಮ್ಮ ಸುತ್ತಲಿರುವ ಸಂಪತ್ತನ್ನು ಸಾವಿರಾರು ವರ್ಷಗಳಿಂದ ಮುಂದಿನ ತಲೆಮಾರಿಗೆ ಉಳಿಸಿಕೊಂಡೇ ಬಂದಿವೆ.

gonda (4)‘ನವನಾಗರೀಕತೆಗೆ’ ಈ ಆದಿಮ ಸಮುದಾಯಗಳ ಕೊಡುಗೆಗಳನ್ನು ಬೆಲೆಕಟ್ಟಲಾಗದು. ತನ್ನ ಸುತ್ತಲ ಪರಿಸರಕ್ಕೆ ನಿಸ್ವಾರ್ಥವನ್ನು ಹಂಚಿ ಬದುಕಿ ಬಂದಿರುವ ಈ ಸಮುದಾಯಗಳು ಇಂದು ಗೌರವಾನ್ವಿತವಾಗಿ ಬದುಕುವಂತಾಗಬೇಕು. ‘ಮುಖ್ಯವಾಹಿನಿ’ಯ ಸಂಪತ್ತಿನಲ್ಲಿ ಇವರಿಗೆ ಸಮಾನ ಹಕ್ಕಿದೆ. ಈ ನಾಡಿನ ಸಂಪತ್ತಿನಲ್ಲಿ ಆದಿವಾಸಿಗಳಿಗೆ ಸಮಾನ ಪಾಲಿದೆ ಎಂಬ ಅರಿವನ್ನು ‘ಮುಖ್ಯವಾಹಿನಿ’ಯೂ ತಂದು ಕೊಳ್ಳಬೇಕಿದೆ.

ವರ್ತಮಾನದಲ್ಲಿ ಆದಿವಾಸಿಗಳ ಮತ್ತು ಆದಿವಾಸಿಗಳ ಸಬಲೀಕರಣದ ಕುರಿತ ನಮ್ಮ ಆಶಯಗಳನ್ನು ಪುನಾರಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಬುಡಕಟ್ಟುಗಳು ಇಂದು ಪ್ರಭುತ್ವ ಹುಟ್ಟು ಹಾಕಿರುವ ಅನೇಕ ಸಮಸ್ಯೆಗಳಿಂದ ನರಳುತ್ತಿವೆ. ಆದಿವಾಸಿಗಳು ಸಾವಿರಾರು ವರ್ಷಗಳಿಂದ ಅನುಭವಿಸುತ್ತಿರುವ ಕಷ್ಟಗಳಿಗೆ ಅನೇಕರು ಅನೇಕ ದುಮ್ಮಾನಗಳನ್ನು ಸೇರಿಸುತ್ತಿದ್ದಾರೆ. ಜನತಂತ್ರದಲ್ಲಿ ಜನರ ಮತಗಳ ಮೂಲಕ ಆಯ್ಕೆಯಾಗುವ ಸರಕಾರಗಳು ಸ್ಥಳೀಯ ಜನ ಸಮುದಾಯಗಳ ಹಿತಗಳನ್ನು ಕಾಯದೆ ಮಾರುಕಟ್ಟೆ ಶಕ್ತಿಗಳ ಪರವಾಗಿ ನಿಂತಿವೆ. ಇಂದು ಆದಿವಾಸಿಯಾದಿಯಾಗಿ ದುಡಿವ ಸಮುದಾಯಗಳು ತಮ್ಮ ವರ್ತಮಾನದ ಸ್ಥಿತಿಗತಿಗಳ ಉತ್ತಮಿಕೆಗೆ ತಮ್ಮ ಭೂತಕಾಲವನ್ನು ಹಿಂದಿರುಗಿ ನೋಡುವಂತೆ ಮಾಡಲಾಗಿದೆ. ವರ್ತಮಾನದಲ್ಲಿ ತಮ್ಮನ್ನು ಸಬಲೀಕರಿಸಲು ಪುರಾಣ ಮತ್ತು ಚರಿತ್ರೆಗಳನ್ನು ಸಮುದಾಯಗಳು ಆಶ್ರಯಿಸುತ್ತಿವೆ. ಪುರಾಣ ಮತ್ತು ಚರಿತ್ರೆಯಲ್ಲಿ ಬದುಕಿದ್ದಿರಬಹುದಾದ ವ್ಯಕ್ತಿಗಳನ್ನು ಸಮುದಾಯಗಳು ವರ್ತಮಾನದಲ್ಲಿ ಆರಾಧಿಸುವ ಪರಂಪರೆ ಶುರುವಾಗಿದೆ. ಆಯಾ ಜಾತಿ ಸಂಘಟನೆಗಳು ಹೀಗೆ ತಮ್ಮ ತಮ್ಮ ಸಮುದಾಯಗಳ ಪರಂಪರೆಗಳನ್ನು ಹುಡುಕಾಡಿ ಅಲ್ಲಿರುವ ಪುರಾಣದ ಪ್ರತಿಮೆಯೊಂದನ್ನು ತಂದು ಲಾಂಛನಗಳಾಗಿಸುತ್ತಿವೆ. ವರ್ತಮಾನದಲ್ಲಿ ಸಮುದಾಯಗಳು ತಮ್ಮ ಆತ್ಮಪ್ರತ್ಯಯಗಳನ್ನು ಬಿಂಬಿಸಲು ಈ ಬಗೆಯ ಪ್ರಯತ್ನ ಒಂದು ಹಂತದವರೆಗೆ ಸಮುದಾಯಗಳ ಕೈಹಿಡಿಯಬಹುದು. ಆದರೆ ಯಾವತ್ತೂ ಗಾಯ ಮಾಡುತ್ತಲೇ ಬಂದ ಪರಂಪರೆಯಲ್ಲಿಯೇ ತಮ್ಮ ಅನನ್ಯತೆಯ ಲಾಂಛನಗಳನ್ನು ಹುಡುಕಾಡುವ ಈ ಪ್ರಯತ್ನ ವರ್ತಮಾನದಲ್ಲಿ ಸಮುದಾಯಗಳನ್ನು ಹೇಗೆ ಸಬಲೀಕರಿಸಬಲ್ಲದು?

ಚರಿತ್ರೆ, ಪರಂಪರೆ ಮತ್ತು ಪುರಾಣಗಳ ಹೆಸರಲ್ಲಿ ಈಗಾಗಲೆ ಒಂದು ಧಾರ್ಮಿಕ ಆವೇಶ ದೇಶದಲ್ಲಿ ಒಂದು ಬಗೆಯ ಫ್ಯಾಸಿಸ್ಟ್ ರಾಜಕಾರಣವನ್ನು ಹುಟ್ಟು ಹಾಕಿದೆ. ಸಾಂಸ್ಕøತಿಕ ಅನನ್ಯತೆ, ಪಾರಂಪರಿಕ ಜ್ಞಾನ ಎಂದೆಲ್ಲ ಮಾತಾಡುವ ಜನ ದುಡಿವ ಸಮುದಾಯಗಳ ವರ್ತಮಾನದ ಸ್ಥಿತಿಗತಿಗಳನ್ನೇ ಮರೆವಿಗೆ ತಳ್ಳುತ್ತಿದ್ದಾರೆ. ಪುರಾಣದ ವ್ಯಕ್ತಿತ್ವವೊಂದು ಒಂದು ಸಮುದಾಯದ ವರ್ತಮಾನದ ಲೌಕಿಕದ ಬದುಕನ್ನು ಹಸನು ಮಾಡಿಬಿಡುತ್ತದೆ ಎಂದು ನಂಬಿಸಲಾಗುತ್ತಿದೆ. ಸಮುದಾಯಗಳು ಈ ಬಗೆಯ ನಂಬಿಕೆಗಳೇ ವರ್ತಮಾನದಲ್ಲಿ ತಮ್ಮನ್ನು ಸಬಲೀಕರಿಸಿಬಿಡುತ್ತವೆ ಎಂದು ಭಾವಿಸಿವೆ. ಸಮುದಾಯಗಳು ಆರಾಧಿಸುವ ಅವರ ಪುರಾಣದ ರೂಪಕಗಳ ಹೆಸರಿನಲ್ಲಿ ಸಮುದಾಯ ಭವನಗಳು, ನಗರಗಳ ಸರ್ಕಲ್ಲುಗಳು ನಿರ್ಮಾಣಗೊಳ್ಳುತ್ತಿವೆ. ಮಾರುಕಟ್ಟೆ ಶಕ್ತಿಗಳು ಮತ್ತು ಸ್ಥಳೀಯ ಪ್ರಭುತ್ವ ನಿಜ ವರ್ತಮಾನವನ್ನು ಮರೆಸಲು ಸಮುದಾಯಗಳ ಮುಂದೆ ಹೀಗೆ ಪುರಾಣದ ಪ್ರತಿಮೆಗಳನ್ನು ತಂದು ನಿಲ್ಲಿಸುತ್ತಿವೆ.

jenukuruba (7)ಬಹುತೇಕ ಎಲ್ಲ ಸಮುದಾಯಗಳು ವರ್ತಮಾನದ ತಮ್ಮ ಹಿಂಜರಿಕೆ ಮತ್ತು ಬಡತನಗಳನ್ನು ಮೀರಿ ನಿಲ್ಲಲು ಪುರಾಣಗಳ ಕಡೆ ಮುಖ ಮಾಡಿ ನಿಂತಿವೆ. ಮಾರುಕಟ್ಟೆ ಶಕ್ತಿಗಳು ಈ ನಂಬಿಕೆಗಳನ್ನು ಧಾರ್ಮಿಕ ಉನ್ಮಾದವನ್ನಾಗಿ ರೂಪಾಂತರಿಸುತ್ತಿವೆ. ಈ ಬಗೆಯ ಉನ್ಮಾದ ಸಮುದಾಯಗಳ ಅಂತಸ್ಥ ಜಗತ್ತಿ ನೈಜ ಸ್ಮøತಿಗಳನ್ನು ನಾಶ ಮಾಡುತ್ತಿದೆ. ಸರಕಾರ, ಸರಕಾರದ ಬುದ್ಧಿಜೀವಿಗಳು ಮತ್ತು ಸಾಮ್ರಾಜ್ಯಶಾಹಿ ಫಂಡಿನ ಮೂಲಕ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಪರಂಪರೆಯನ್ನು ವಿನಾಕಾರಣ ಆರಾಧಿಸುವ ಈ ಪ್ರವೃತ್ತಿಯನ್ನು ವಿಪರೀತವಾಗಿ ಬೆಂಬಲಿಸುತ್ತಿವೆ. ಯಾವ ಪರಂಪರೆ ಅಸಮಾನತೆಯ ಹೆಸರಲ್ಲಿ ಈ ಸಮುದಾಯಗಳನ್ನು ವಂಚಿಸುತ್ತಾ ಬಂದಿತ್ತೊ, ಯಾವ ಪುರಾಣಗಳು ಈ ಸಮುದಾಯಗಳನ್ನು ಕತ್ತಲಲ್ಲಿಟ್ಟಿದ್ದವೊ, ಆ ಪುರಾಣ ಮತ್ತು ಪರಂಪರೆಯ ಪ್ರತಿಮೆಗಳೇ ಸಮುದಾಯಗಳ ಗೊತ್ತು ಗುರಿಗಳನ್ನಾಗಿಸಲಾಗಿದೆ. ವರ್ತಮಾನದ ಸುಡು ವಾಸ್ತವಗಳನ್ನು ಅನುಸಂಧಾನ ಮಾಡುವಾಗ ಸಮುದಾಯಗಳು ತಮ್ಮ ಹತಾರುಗಳನ್ನು ಪರಂಪರೆಯಲ್ಲಿ ಹುಡುಕುವುದೇ ಒಂದು ವ್ಯಂಗ್ಯ. ವರ್ತಮಾನದಲ್ಲಿ ಜಾಗತಿಕ ಮಾರುಕಟ್ಟೆ ಶಕ್ತಿಗಳು ನಿಜ ಶತ್ರುಗಳಾಗಿ ನಿಂತಿವೆ. ಜೊತೆಗೆ ಈ ಜಾಗತಿಕ ಶಕ್ತಿಗಳು ಇಲ್ಲಿ ಬೇರು ಬಿಡಲು ಸ್ಥಳೀಯ ಮಧ್ಯವರ್ತಿಗಳು ನೆರವಿಗೆ ನಿಂತಿದ್ದಾರೆ.

ಈ ಇಬ್ಬರ ಜೋಡಿ ಸ್ಥಳೀಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದೆ. ಈ ದರೋಡೆಯನ್ನು ಮುಚ್ಚಿಡಲು ಪರಂಪರೆಯ ಆವೇಶಗಳನ್ನು ಸಮುದಾಯಗಳಲ್ಲಿ ಹುಟ್ಟುಹಾಕುತ್ತಿವೆ. ಆದಿವಾಸಿ ಮತ್ತು ದುಡಿವ ಸಮುದಾಯಗಳು ಈ ಪಾಶವೀ ಶಕ್ತಿಗಳಿಗೆ ಸೈನಿಕರಂತೆ ದುಡಿಯುತ್ತಿವೆ. ಪುರಾಣದ ಪ್ರತಿಮೆಗಳು ನಮ್ಮ ಸಮುದಾಯಗಳ ಆತ್ಮಪ್ರತ್ಯಯ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂದು ಅವುಗಳ ನಿತ್ಯ ಆರಾಧನೆಯು ವರ್ತಮಾನದಲ್ಲಿ ಸಮುದಾಯಗಳನ್ನು ಸಬಲೀಕರಿಸುವುದಿಲ್ಲ. ನಮ್ಮನ್ನು ದೋಚುತ್ತಿರುವ ಶಕ್ತಿಗಳನ್ನು ಸಮುದಾಯಗಳು ಅರ್ಥ ಮಾಡಿಕೊಂಡು ಅವುಗಳನ್ನು ಮುಖಾಮುಖಿ ಮಾಡಬೇಕಿದೆ.

ಫ್ರಾಂಜ್ ಫ್ಯಾನನ್ ಅವರ ಮಾತುಗಳಿಂದ ಈ ಬರಹವನ್ನು ಮುಗಿಸುತ್ತಿದ್ದೇನೆ. ‘The discovery of that a  black civilization existed in the fifteenth century does not earn me a certificate of humanity. Whether you like it or not, the past can in no way be my guide in the actual state of things’

Leave a Reply

Your email address will not be published.