ಬುಡಕಟ್ಟು ಮೀಮಾಂಸೆ-4: ಆದಿವಾಸಿಗಳ ಅನನ್ಯತೆಯ ಗಾಯಗಳೂ

-ಡಾ. ಎ. ಎಸ್. ಪ್ರಭಾಕರ್

asp1ಆದಿವಾಸಿ ಸಮುದಾಯಗಳ ಬದುಕನ್ನು ಕುರಿತ ಅಧ್ಯಯನ ಮತ್ತು ಬರಹಗಳಲ್ಲಿ ಸಂಭ್ರಮಗಳು ಹೆಚ್ಚು. ಅವರ ಜೀವನ ವಿಧಾನ, ಸರಳತೆ, ಉಡುಗೆ, ಧರಿಸುವ ಆಭರಣಗಳು, ಜೀವಿಸುವ ಪರಿಸರಗಳು ‘ಹೊರಗಿನ’ ಜನರನ್ನು ಮತ್ತು ಆಸಕ್ತರನ್ನು ಮೈದುಂಬಿಸುತ್ತವೆ. ಜಾನಪದವನ್ನು ಅಧ್ಯಯನ ಮಾಡಿದ ಬಹುತೇಕ ವಿದ್ವಾಂಸರು ಬುಡಕಟ್ಟುಗಳನ್ನು ನೋಡಿ ರೋಮಾಂಚನಗೊಂಡಿರುವುದು ಹೆಚ್ಚು.

ನೆಹರು ಮತ್ತು ಎಲ್ವಿನ್‍ರ ಶೈಕ್ಷಣಿಕ ವಿಧಾನಗಳಿಂದ ಪ್ರಭಾವಿತರಾದ ಅನೇಕ ಅಧ್ಯಯನಕಾರರಲ್ಲಿ ಆದಿವಾಸಿಗಳ ಜೀವನ ವಿಧಾನವನ್ನು ತುಸು ವೈಭವೀಕರಿಸುವ ಕಾತರ ಹೆಚ್ಚಾಗಿಯೇ ಕಾಣುತ್ತದೆ. ಬುಡಕಟ್ಟುಗಳು ಸಹ ತಮ್ಮ ಸುತ್ತಲ ಬದುಕನ್ನು ನಿಸರ್ಗದಂತೆ ಹಸನಾಗಿಟ್ಟುಕೊಂಡಿರುವುದೂ ಸಹ ನೋಡುಗ ಮೈಮರೆಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಎಲ್ವಿನ್ ‘ಬುಡಕಟ್ಟುಗಳು ಕಾಡಲಿದ್ದರೆ ಚೆಂದ’ ಎಂದು ಭಾವಿಸಿದರು. ಎಲ್ವಿನ್‍ರ ಈ ಅಭಿಪ್ರಾಯವನ್ನು ಸದಾ ಅನುಮೋದಿಸುತ್ತಿದ್ದ ನೆಹರು ಬುಡಕಟ್ಟುಗಳು ‘ಪ್ರತ್ಯೇಕ’ವಾಗಿ ವಾಸಿಸುವ ವಾದದ ಪರವಾಗಿದ್ದರು. ಲೋಹಿಯಾ, ಎಲ್ವಿನ್ ಮತ್ತು ನೆಹರುರವರ ಈ ವಾದವನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಆದರೆ ಬುಡಕಟ್ಟುಗಳನ್ನು ಅಧ್ಯಯನ ಮಾಡುವವರಲ್ಲಿ ಎಲ್ವಿನ್ ಮತ್ತು ನೆಹರು ಪಂಥೀಯರೇ ಹೆಚ್ಚು.

ಈ ಕಾರಣಕ್ಕಾಗಿ ಆದಿವಾಸಿಗಳ ಬಾಹ್ಯ ಚೆಲುವನ್ನು ನೋಡಿ ಸಂಭ್ರಮಿಸುವ ಪ್ರವೃತ್ತಿ ಇನ್ನೂ ನಮ್ಮ ವಿದ್ವಾಂಸರಲ್ಲಿ ಢಾಳಾಗಿ ಕಾಣಿಸುತ್ತಲೇ ಇದೆ. ಸಮುದಾಯಗಳ ‘ಸಾಂಸ್ಕøತಿಕ ಅನನ್ಯತೆ’ ಎಂದು ಭಾವಿಸುವ ಸಂಗತಿಗಳು ಹಲವಿವೆ. ಸಮುದಾಯಗಳ ಮೌಖಿಕ ಸಾಹಿತ್ಯ, ಆಡುವ ಭಾಷೆ, ಉಡುಗೆ ತೊಡುಗೆ, ಆಚರಣೆಗಳು, ದೈವಾರಾಧನೆ, ಕಲೆ, ಹಾಡು ಕುಣಿತಗಳು, ಆಚರಣಾ ಪದ್ಧತಿ, ದೈಹಿಕ ರಚನೆಗಳೆಲ್ಲವನ್ನು ಪರಿಗಣಿಸಿ ಇವು ಒಂದು ಸಮುದಾಯದ ಅನನ್ಯತೆಯನ್ನು ನಿರ್ಧರಿಸುವ ಲೋಕೋತ್ತರ ಸಂಗತಿಗಳೆಂದು ನಿರ್ದಿಷ್ಟ ಪಡಿಸಲಾಗಿದೆ.

halakki (4)‘ಒಂದು ಸಮುದಾಯದ ಸಾಂಸ್ಕøತಿಕ ಅಧ್ಯಯನ’ ಎಂಬ ಶೀರ್ಷಿಕೆಯ ಅಧ್ಯಯನಗಳಲ್ಲೆಲ್ಲ ಮೇಲ್ಕಾಣಿಸಿದ ಲೋಕೋತ್ತರ ಸಂಗತಿಗಳ ಕುರಿತ ಮಾಹಿತಿಗಳ ಮಹಾಪೂರವೇ ಹರಿದು ನಿಂತಿರುತ್ತದೆ. ಎಷ್ಟೋ ಸಲ ಈ ಮಾಹಿತಿಗಳು ಅನುಭವಾತ್ಮಕ ನೆಲೆಯಿಂದ ಸಂಗ್ರಹಿಸಲ್ಪಡದೆ, ಎರಡು ಮೂರನೇ ಹಂತದ ಆಕರಗಳಿಂದ ಯಥಾವತ್ತು ‘ಎತ್ತಿಕೊಂಡು’ ಅಧ್ಯಯನಗಳಲ್ಲಿ ಬಳಸಿಕೊಳ್ಳಾಲಾಗಿರುತ್ತದೆ.

ಈ ಬಗೆಯ ಸಾಂಸ್ಕøತಿಕ ಅನನ್ಯತೆಯ ಕುರಿತ ಚರ್ಚೆಗಳಲ್ಲಿ ಸಮುದಾಯಗಳ ಚಹರೆಗಳ ಬಗ್ಗೆ ರೋಮಾಂಚಕ ವಿವರಗಳು ಬರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಸಮುದಾಯಗಳ ಈ ಅನನ್ಯತೆಯ ಸಂಕೇತಗಳಲ್ಲಿ ತಿಳುವಳಿಕೆ ಮತ್ತು ತಿಳುವಳಿಕೆಗೆ ಕಾರಣವಾದ ಚಾರಿತ್ರಿಕ ಸಂಘರ್ಷಗಳೂ ಇರುವುದನ್ನು ಅಧ್ಯಯನಕಾರರು ಗಮನಿಸುವ ಪರಿಪಾಠ ನಮ್ಮಲ್ಲಿ ಬೆಳೆದುಬಂದಿಲ್ಲ. ಸಮುದಾಯಗಳನ್ನು ಗ್ರಹಿಸುವ ಮತ್ತು ಅರ್ಥೈಸುವ ಪಾಶ್ಚಿಮಾತ್ಯ ಅಧ್ಯಯನ ಕ್ರಮವೂ ಇದಕ್ಕೆ ಕಾರಣವಾಗಿರಬಹುದು. ಯಾವುದನ್ನು ಒಂದು ಸಮುದಾಯದ ಅನನ್ಯತೆ ಎಂದು ಭಾವಿಸುತ್ತೆವೋ ಆ ಅನನ್ಯತೆ ಸಮುದಾಯದ ಆಳದ ನೋವಿನ ಫಲವೂ ಆಗಿರುತ್ತದೆ. ಸಾವಿರಾರು ವರ್ಷಗಳ ಕಾಲ ಇಲ್ಲಿ ಕೆಳಜಾತಿ ವರ್ಗಗಳ ಮೇಲೆ ನಡೆದ ದಮನದ ನಡುವೆಯೂ ದುಡಿವ ಸಮುದಾಯಗಳಲ್ಲಿ ನಗುವಿನ ಹಬ್ಬಗಳು ಮಾತ್ರವಿರುತ್ತವೆ ಎಂದು ಭಾವಿಸುವುದು ಚಾರಿತ್ರಿಕ ವ್ಯಂಗ್ಯವೇ ಸರಿ.

ಬುಡಕಟ್ಟು ಸಮುದಾಯಗಳ ಹಲವು ಆಚರಣೆಗಳಲ್ಲಿ ಅವುಗಳ ಸಂಭ್ರಮಗಳ ಜೊತೆ ನೋವಿನ ಸೆಲೆಗಳು ಸದ್ದಿಲ್ಲದೆ ಹರಿಯುತ್ತಿರುತ್ತವೆ. ಆದರೆ ಬದುಕಿನ ಹೊರ ಮೈಯಲ್ಲಿನ ಮೋಹಕತೆ ಅಂತಸ್ಥ ಜಗತ್ತಿನ ಗಾಯಗಳನ್ನು ಮರೆಮಾಚುತ್ತದೆ. ಹಾಲಕ್ಕಿಗಳಲ್ಲಿ ಸುಗ್ಗಿ ಹಬ್ಬ ಮತ್ತು ವರ್ತಮಾನವನ್ನು ವ್ಯಂಗ್ಯ ಮಾಡುವ ‘ಹಗರಣದ’ ವಿವಿಧ ವೇಷಧಾರಿಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಸುಗ್ಗಿ ಹಬ್ಬದ ಉನ್ಮಾದದ ಮೆರವಣಿಗೆ, ಭಕ್ತಿಯ ಆವೇಶದಲ್ಲಿ ತಲ್ಲಿನರಾದ ಆದಿವಾಸಿ ಹಾಲಕ್ಕಿಗರು ತಮ್ಮ ಬಾಹ್ಯ ಚಹರೆಗಳಿಂದಲೇ ನಮ್ಮಲ್ಲಿ ಬೆರಗು ಹುಟ್ಟಿಸುತ್ತಾರೆ. ಬೆಳ್ಳಂಬರದಲ್ಲಿ ಮಾಸ್ತಿ ಗುಡಿಯ ಹಿಂದೆ ನಿಗಿ ನಿಗಿ ಉರಿವ ಕೊಂಡದ ವರೆಗೆ ಹೋಗಿ ಸುಗ್ಗಿ ಮೆರವಣಿಗೆ ಸಂಪನ್ನವಾಗುತ್ತದೆ.

ಮೆರವಣಿಗೆಯ ಉದ್ದಕ್ಕೂ ಹೆಣ್ಣು ವೇಷಧಾರಿಯೊಬ್ಬನನ್ನು ಮುಚ್ಚಿದ ಪರದೆಗಳ ನಡುವೆ ಕರೆದೊಯ್ಯಲಾಗುತ್ತದೆ. ಹೆಣ್ಣು ವೇಷಧಾರಿ ಉರಿಯುವ ಕೊಂಡದ ಬಳಿ ಬರುತ್ತಿದ್ದಂತೆ ಆಚರಣೆ ಸ್ತಬ್ಧವಾಗುತ್ತದೆ. ಮುಖಕ್ಕೆ ಕುಂಕುಮ ಬಳಿದುಕೊಂಡು, ಕೈಯಲ್ಲಿ ನಿಂಬೆಹಣ್ಣು ಹಿಡಿದು ಸುಗ್ಗಿ ಆಚರಣೆಯ ಮೆರವಣಿಗೆಯ ಉದ್ದಕ್ಕೂ ಹೆಣ್ಣು ವೇಷಧಾರಿ ನಡೆದು ಬರುತ್ತಾನೆ. ಹೆಣ್ಣು ವೇಷಧಾರಿ ಕೊಂಡವನ್ನು ಸಮೀಪಿಸುತ್ತಿದ್ದಂತೆ ಬೆಂಕಿ ಕೆನ್ನಾಲೆಗಳು ಹೆಚ್ಚುತ್ತವೆ. ಸುಗ್ಗಿ ಹಬ್ಬ ಎಂದು ಆಚರಿಸುವ ಈ ಹಬ್ಬವು ಹಿಂದೆ ‘ಸತಿ ಹೋಗುತ್ತಿದ್ದ’ ಸಂದರ್ಭದ ಪುನರಭಿನಯವೇ?

ಈ ಸತಿ ಆಚರಣೆಗೂ ಕರಾವಳಿ ಮತ್ತು ಮಲೆನಾಡಲ್ಲೆಲ್ಲ ಹೆಜ್ಜೆಗೊಂದು ಸಿಗುವ ಮಾಸ್ತಿ ಗುಡಿಗಳಿಗೂ ಸಂಬಂಧವಿದೆಯೇ? ಹಗರಣದ ವೇಷಧಾರಿಗಳು ಯಾಕಾಗಿ ವರ್ತಮಾನದ ರಾಜಕಾರಣವನ್ನು ಸುಗ್ಗಿಹಬ್ಬದಂದು ಗೇಲಿ ಮಾಡುತ್ತಾರೆ? ಪ್ರಸ್ತುತ ಆಚರಣೆಯಲ್ಲಿ ಹಾಲಕ್ಕಿಗಳ ಯಾವ ಬಗೆಯ ತಿಳುವಳಿಕೆ ಅಭಿನಯಗೊಳ್ಳುತ್ತದೆ? ಎಂಬ ಪ್ರಶ್ನೆಗಳು ನಮ್ಮ ‘ಒಂದು ಸಾಂಸ್ಕøತಿಕ ಅಧ್ಯಯನ’ ಎಂದು ಕೈಗೊಳ್ಳಲಾಗುವ ಅಧ್ಯಯನಗಳ ಉದ್ದಕ್ಕೂ ಗೈರು ಹಾಜರಾಗಿರುತ್ತವೆ.

ಬೆಟ್ಟದ ಕುರುಬ ಕುಂಡೆ ಹಬ್ಬ

ಬೆಟ್ಟದ ಕುರುಬ ಕುಂಡೆ ಹಬ್ಬ

ಕೊಡಗಲ್ಲಿ ನಡೆಯುವ ‘ಕುಂಡೆ ಹಬ್ಬದ’ ಸಂದರ್ಭದಲ್ಲಿ ಜೇನುಕುರುಬ, ಯರವ, ಬೆಟ್ಟಕುರುಬ ಮತ್ತು ಸ್ಥಳೀಯ ದುಡಿವ ಸಮುದಾಯದವರು ವಿಚಿತ್ರ ವೇಷ ಹಾಕಿಕೊಂಡು ಬೀದಿಗಳಲ್ಲಿ ನರ್ತನ ಮಾಡುತ್ತಾ ತಿರುಗುತ್ತಾರೆ. ತಮ್ಮ ದೈವವಾದ ಭದ್ರಕಾಳಿ ಹೊರಗಿನವನಾದ ಅಯ್ಯಪ್ಪನಿಗೆ ಮನಸೋತು ಅವನ ಹಿಂದೆ ಓಡಿ ಹೋದಳೆಂದು ಇವರಿಗೆ ಕೋಪ. ತಮ್ಮನ್ನು ಬಿಟ್ಟು ಹೋದ ಭದ್ರಕಾಳಿಯ ಮೇಲೆ ಈ ಸಮುದಾಯಗಳು ಅಂದು ಮಾತ್ರ ಸಾಂಕೇತಿಕವಾಗಿ ತಮ್ಮ ಸಿಟ್ಟನ್ನು ಪ್ರದರ್ಶಿಸುತ್ತವೆ.

‘ಕುಂಡೆ ಹಬ್ಬದ’ ದಿನ ಈ ಸಮುದಾಯಗಳು ತಮ್ಮ ದೈವವನ್ನು ಒಳಗೊಂಡಂತೆ ಸ್ಥಳೀಯ ಭೂಮಾಲಿಕರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾರೆ, ಕುಂಡೆ ಹಬ್ಬ ನಡೆಯುವ ಪ್ರದೇಶದ ಉಸಿರು ಕಟ್ಟಿಸುವ ಸಾಮಾಜಿಕ ಸನ್ನಿವೇಶದಲ್ಲಿ ನಿರ್ಗತಿಕ ಸಮುದಾಯಗಳಿಗೆ ಅಂದು ಮಾತ್ರ ಗಟ್ಟಿ ದನಿ ಪ್ರಾಪ್ತವಾಗುತ್ತದೆ. ಇವರ ದೈವವಾದ ಭದ್ರಕಾಳಿ ತನ್ನ ಕುಲಗಳನ್ನು ಬಿಟ್ಟು ಪಿತೃಪ್ರಧಾನ ಸಮಾಜದ ಅಯ್ಯಪ್ಪನನ್ನು ಮೋಹಿಸಿ ಓಡಿಹೋದ ಕಾರಣಕ್ಕಾಗಿ ಈ ಸಮುದಾಯಗಳಿಗೆ ಕೋಪ ಬಂದಿದೆಯೇ? ಕೊಡಗಿನ ಮೂಲ ನಿವಾಸಿಗಳಾದ ಈ ದುಡಿವ ಜನ ತಮ್ಮೆಲ್ಲ ಕೃಷಿ ಭೂಮಿಯನ್ನು ಸ್ಥಳೀಯ ಭೂಮಾಲಿಕ ವರ್ಗಕ್ಕೆ ಬಿಟ್ಟುಕೊಟ್ಟ ಅಸಹಾಯಕತೆಯು ಅಂದು ಬೈಯ್ಗುಳವಾಗಿ ಹೊರ ಹೊಮ್ಮುವುದೇ?

ಅಯ್ಯಪ್ಪನ ಹಿಂದೆ ಹೋಡಿ ಹೋದ ಭದ್ರಕಾಳಿಗೂ, ಓಡಿಸಿಕೊಂಡು ಹೋದ ಅಯ್ಯಪ್ಪನಿಗೂ, ಭೂಮಿ ಕಳೆದುಕೊಂಡು ನಿರ್ಗತಿಕರಾದ ಮೂಲ ನಿವಾಸಿ ಬುಡಕಟ್ಟುಗಳಿಗೂ ಮತ್ತು ಇವರ ವಾರ್ಷಿಕ ಆಚರಣೆಯಾದ ‘ಕುಂಡೆ ಹಬ್ಬದ’ ಬೈಯ್ಗುಳಿಗೂ ಯಾವ ಬಗೆಯ ಸಂಬಂಧವಿದೆ? ಈ ನಿರ್ಗತಿಕ ಸಮುದಾಯಗಳು ಕಳೆದುಕೊಂಡ ಭೂಮಿಯಿಂದಾಗಿ ಅವರಿಗೆ ಪ್ರಾಪ್ತವಾದ ಅಧೀನತೆಯೇ ‘ಕುಂಡೆ ಹಬ್ಬ’ವಾಗಿ ಆಚರಣೆಗೆ ಬಂದಿದೆಯೇ? ಮೇಲ್ವರ್ಗಗಳ ದಮನದ ಕಾರಣಕ್ಕಾಗಿ ದುಡಿವ ವರ್ಗಗಳ ಹರಿದ ನೆತ್ತರು ಕಲೆಗಳು ಹೀಗೆ ಸಂಕೇತ ಮತ್ತು ಪ್ರತಿಮೆಗಳಾಗಿ ಆಚರಣೆಗಳಲ್ಲಿ ಹುದುಗಿವೆಯೇ?

ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ಮದುವೆಯಾದ ಮಾದಿಗರ ಹುಡುಗ ಕೆಳಜಾತಿಯವನೆಂದು ಗೊತ್ತಾದ ನಂತರ ಗಂಡನಿಗೆ ‘ನಿನ್ನನ್ನು ಕೋಣವನ್ನಾಗಿ ಕಡಿಯುತ್ತೇನೆ’ ಎಂಬ ಶಾಪ ಕೊಟ್ಟು, ಮಕ್ಕಳನ್ನೂ ಬಿಟ್ಟು ಹೋಗುವ ಬ್ರಾಹ್ಮಣ ಹೆಣ್ಣು ಮಗಳ ಆಶಯಗಳೇನು? ಮಾರಿ ಹಬ್ಬದಲ್ಲಿ ಇಂದಿಗೂ ಬಲಿ ಕೊಡುವ ಕೋಣದ ನೆತ್ತರು ಯಾರ ದಮನವನ್ನು ಸಂಕೇತಿಸುತ್ತದೆ? ಕಡಿದ ಕೋಣದ ತಲೆಯ ಮೇಲೆ ಉರಿಯುವ ಹಣತೆಗೆ ಸುರಿಯುವ ಕೋಣದ ‘ನೆಣ’ ದುಡಿವ ವರ್ಗದ ರಕ್ತ ಬೆವರಿನ ಸಂಕೇತವೇ?

ಊರೊಟ್ಟಿನ ಜಾತ್ರೆಗಳಲ್ಲಿ ತಮಟೆ ಬಾರಿಸಲು ನಿರಾಕರಿಸುವ ದಲಿತರಿಗೆ ಇಂದಿಗೂ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ. ತಮಟೆಯನ್ನು ತಮ್ಮ ‘ಅನನ್ಯತೆಯ ಪ್ರತೀಕ’ವೆಂದು ಪರಿಗಣಿಸಿ ತಮಟೆ ಚಳುವಳಿ ಮಾಡುವ ದಲಿತರಿಗೆ, ಅದೇ ತಮಟೆ ಊರೊಟ್ಟಿನ ಸಂಬಂಧಗಳಲ್ಲಿ ಜಾತಿಸೂಚಕ ಅವಮಾನದ ಸಂಕೇತವಾಗಿಬಿಡುತ್ತದೆ. ವರ್ತಮಾನದಲ್ಲಿ ದುಡಿವ ಕೆಳಜಾತಿ ಸಮುದಾಯಗಳಿಗೆ ತಮ್ಮ ಪರಂಪರೆಯೇ ಒಂದು ಗಾಯ. ಸಮಾಜದಲ್ಲಿ ಕೀಳೆಂದು ಪರಿಗಣಿಸಿದ ವೃತ್ತಿಗಳನ್ನು ಇಂದಿಗೂ ಅನುಸರಿಸುವುದು ಯಾತನಾದಾಯಕ. ಕೆಳಜಾತಿಗಳು ಆಡುವ ಭಾಷೆ, ಉಡುವ ಉಡುಗೆ, ಬದುಕುವ ಶೈಲಿ, ಹೊಂದುವ ಆಸ್ತಿ, ಸಾಮಾಜಿಕ ನಡುವಳಿಕೆಗಳೆಲ್ಲ ಇಂದಿಗೂ ಮೇಲ್ವರ್ಗಗಳಿಗೆ ‘ಕಿರಿಕಿರಿ’ಯಾಗದಂತೆ ಇರಬೇಕು ಎಂದು ಊಳಿಗಮಾನ್ಯ ಸಮಾಜ ಬಯಸುತ್ತದೆ.

ದಲಿತರು, ದುಡಿವ ವರ್ಗಗಳು, ಆತ್ಮ ಪ್ರತ್ಯಯವನ್ನು ಹೊಂದುವುದೇ ಅಪರಾಧವಾಗುವ ಸ್ಥಿತಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಇಂದಿಗೂ ಜೀವಂತವಾಗಿದೆ. ಹೀಗಿದ್ದಾಗ ದುಡಿವ ಕೆಳಜಾತಿ ವರ್ಗಗಳ ಯಾವ ಪರಂಪರೆ ಮತ್ತು ಸಂಸ್ಕøತಿಯ ಯಾವ ಅಂಶಗಳನ್ನು ಅವರ ‘ಅನನ್ಯತೆ’ ಎಂದು ಗುರುತಿಸುವುದು?

ಕೆಲವು ತಿಂಗಳಗಳ ಹಿಂದೆ ಕೊರಗ ಸಮುದಾಯದ ಕುಣಿತಗಳನ್ನು ನಾವು ದಾಖಲಿಸುವ ಸಂದರ್ಭದಲ್ಲಿ ಕಲಾವಿದರು ತಮ್ಮ ಕುಣಿತ ಮತ್ತು ಹಿಮ್ಮೇಳಗಳನ್ನು ವಿಂಗಡಿಸುತ್ತಾ ಹೋದರು. ಕೊರಗ ನೃತ್ಯ ಎಂದು ಕರೆವ ತಮ್ಮ ಪಾರಂಪರಿಕ ಕುಣಿತವನ್ನು ಯಾವ ಯಾವ ಸಂದರ್ಭದಲ್ಲಿ ಮಾಡಲಾಗುತ್ತದೆ. ತಮ್ಮ ನೃತ್ಯಕ್ಕೆ ಇರುವ ಬೇರೆ ಬೇರೆ ಆಯಾಮಗಳಾವವು ಎಂಬುದನ್ನು ವಿವರಿಸಿದರು. ಅಲ್ಲಿಯವರೆಗೂ ಕೊರಗರ ಕುಣಿಯವೆಂದರೆ ಒಂದೇ ಎಂದು ಭಾವಿಸಿದ್ದ ನಮಗೆ ಆಶ್ಚರ್ಯವಾಯಿತು.

ಕೊರಗರು ತಾವು ಖುಷಿಯಾದಾಗ ಮಾಡುವ ಕುಣಿತ ಬೇರೆ. ಮೇಲ್ವರ್ಗದ ಯಜಮಾನನ ಮುಂದೆ ಹಿಮ್ಮೇಳದೊಂದಿಗೆ ಮಾಡುವ ಕುಣಿತ ಬೇರೆ. ಧಣಿಗಳ ಮದುವೆ ಶುಭಕಾರ್ಯಗಳಲ್ಲಿನ ಕುಣಿತ ಬೇರೆ, ಮೇಲ್ಜಾತಿಯ ವ್ಯಕ್ತಿ ಸತ್ತಾಗ ನುಡಿಸುವ ಹಿಮ್ಮೇಳ ಮತ್ತು ಕುಣಿತದ ಹೆಜ್ಜೆಗಳು ಬೇರೆ. ಹೀಗೆ ಕೊರಗ ಕಲಾವಿದರು ತಮ್ಮ ಕುಣಿತವನ್ನು ಅನೇಕ ಪ್ರಕಾರಗಳಾಗಿ ವಿಂಗಡಿಸಿದರು. ಕುಣಿತಗಾರರು, ಹಿಮ್ಮೇಳದವರು ಅವರೇ ಆಗಿದ್ದರೂ ಬದಲಾದ ಸನ್ನಿವೇಶದಲ್ಲಿ ಕುಣಿತ ಮತ್ತು ಹಿಮ್ಮೇಳಗಳಲ್ಲಿ ಗಣನೀಯ ಬದಲಾವಣೆಗಳಾಗುತ್ತವೆ.

halakki (3)ಕೊರಗರು ತಮ್ಮಷ್ಟಕ್ಕೆ ತಾವು ಕುಣಿವ ಸಂದರ್ಭ ಬಿಟ್ಟರೆ, ಉಳಿದ ಎಲ್ಲಾ ಕುಣಿತಗಳು ಅವರ ಯಜಮಾನರ ಜಗಲಿಯ ಹೊರಗೆ ನಡೆಯುತ್ತವೆ. ಯಜಮಾನರ ಮುಂದೆ ಕುಣಿಯುವಾಗ ಕೊರಗರ ದೇಹ ಭಾಷೆ ಬದಲಾಗುತ್ತದೆ. ದೈನ್ಯದ ಭಾವ ಅವರ ಅಭಿನಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೊರಗರು ಅಂದು ಇಡೀ ದಿನ ತಮ್ಮ ನೃತ್ಯದ ಮೂಲಕ ತಮ್ಮ ಅಧೀನತೆಯನ್ನು ಅನಾವರಣ ಮಾಡಿದರು. ‘ಕೊರಗತಿಯ ಹಾಲು ಕುಡಿದರೆ ಮಗು ಆರೋಗ್ಯವಾಗಿರುತ್ತದೆ’ ಎಂದು ಅಲ್ಲಿನ ಮೇಲ್ವರ್ಗದ ಜನ ನಂಬುತ್ತಾರೆ.

ಕೊರಗ ಮಹಿಳೆಯ ಹಾಲು ಕುಡಿದು ಆರೋಗ್ಯವಂತವಾಗುವ ಮಗು ಬೆಳೆಯುತ್ತ ಊಳಿಗಮಾನ್ಯ ಸಮಾಜದ ಭಾಗವಾಗಿಬಿಡುತ್ತದೆ. ‘ಕೊರಗರು ಸಮಾಜದ ಎಲ್ಲಾ ಕೇಡುಗಳನ್ನು ನಿವಾರಿಸುತ್ತಾರೆ’ ಎಂಬ ಪರಂಪರೆಯ ಹೆಗ್ಗಳಿಕೆಯೊಂದು ಉಡುಪಿ ಮತ್ತು ದಕ್ಷಿಣ ಕನ್ನಡಗಳಲ್ಲಿ ಪ್ರಚಲಿತದಲ್ಲಿದೆ. ಪರಂಪರೆಯ ಈ ಹೆಗ್ಗಳಿಕೆ ಆಚರಣೆಯಲ್ಲಿರುವುದು ‘ಅಜಲು’ ಪದ್ಧತಿಯಲ್ಲಿ. ಕೇಡುಗಳನ್ನು ನಿವಾರಿಸಲು ಕೊರಗರು ‘ಅಜಲಿನ’ ಅನ್ನದಲ್ಲಿ ಮೇಲ್ಜಾತಿಗಳ ಉಗುರು ಕೂದಲನ್ನು ತಿನ್ನಬೇಕು. ಕೊರಗರ ಕುಣಿತಗಳು, ಅವರ ಕೊಳಲ ನಾದ, ಕೊರಗ ಮಹಿಳೆಯ ಮೊಲೆ ಹಾಲಿನ ಶ್ರೇಷ್ಟತೆ, ‘ಅಜಲು’ ಆಚರಣೆಗಳೆಲ್ಲವನ್ನೂ ಕೊರಗರ ಅನನ್ಯತೆ ಎಂದು ಭಾವಿಸುವಾಗ ಈ ‘ಅನನ್ಯತೆ’ಯ ಹಿಂದಿನ ಚಾರಿತ್ರಿಕ ಕ್ರೌರ್ಯವನ್ನು ಎಲ್ಲಿ ಮುಚ್ಚಿಡುವುದು? ಯಾವ ಪರಂಪರೆ ಮತ್ತು ಯಾವ ಪುರಾಣಾದಿ ಚರಿತ್ರೆಗಳು, ಯಾವ ಸಂಗತಿಗಳನ್ನು ‘ಮಹೋನ್ನತವಾದವು’ ಎಂದು ಪರಿಭಾವಿಸುತ್ತವೋ ಅವು ದುಡಿವ ಕೆಳಜಾತಿಗಳ ಎದೆಗಳಲ್ಲಿ ಆಳದ ಗಾಯಗಳೂ ಆಗಿರುತ್ತವೆ.
ಇನ್ನೂ ಆದಿವಾಸಿ, ಅಲೆಮಾರಿ ಮತ್ತು ಕೆಳಜಾತಿಗಳ ಸೃಷ್ಠಿಪುರಾಣಗಳನ್ನು ಗಮನಿಸಿದರೆ ಈ ಸಮುದಾಯಗಳ ಹುಟ್ಟಿನ ಕುರಿತು ಪುರಾಣದ ಕಲ್ಪನೆಯ ವೈಕಲ್ಯ ನಮ್ಮ ಅರಿವಿಗೆ ಬರುತ್ತದೆ. ಬಹುತೇಕ ಅಲೆಮಾರಿಗಳು, ಅವರ ಸೃಷ್ಠಿ ಪುರಾಣಗಳಲ್ಲಿ ಶಾಪಗ್ರಸ್ತರಾಗಿ ಭೂಮಿಗೆ ಬಂದವರು. ಈ ಸೃಷ್ಠಿಪುರಾಣಗಳಲ್ಲಿ ಆಯಾ ಸಮುದಾಯಗಳ ಮೂಲ ಪುರುಷ ಒಂದೋ ಶಾಪಗ್ರಸ್ತನಾಗಿ ಜೀವಿಸುತ್ತಾನೆ. ಇಲ್ಲವೆ ಶಾಶ್ವತವಾಗಿ ಅಂಗವೈಕಲ್ಯದಿಂದ ಹುಟ್ಟುತ್ತಾನೆ. ಇನ್ನು ಕೆಲವು ಅಲೆಮಾರಿ ಬುಡಕಟ್ಟುಗಳ ಮೂಲ ಪುರುಷರು ತಮ್ಮ ಆಸ್ತಿಪಾಸ್ತಿಗಳನ್ನು ಇನ್ನೊಬ್ಬರಿಗಾಗಿ ಕಳೆದುಕೊಂಡು ನಿರ್ಗತಿಕರಾಗಿರುತ್ತಾರೆ. ಇಲ್ಲವೇ ಕೆಲವು ಸಮುದಾಯಗಳ ಮೂಲ ಪುರುಷರು ತಮ್ಮ ದೈವದಿಂದಲೇ ‘ಸಮಾಜದಲ್ಲಿ ಬೇಡಿಕೊಂಡು ತಿಂದು ಬದುಕು’ ಎಂಬ ಶಾಪದಿಂದಲೇ ಅವತರಿಸುತ್ತಾರೆ. ಯಾಕೆ ಈ ಶಾಪಗ್ರಸ್ತ ಅಂಗವೈಕಲ್ಯದ ಹುಟ್ಟು? ಯಾಕೆ ಸಮುದಾಯಗಳು ತಮ್ಮ ಸೃಷ್ಠಿಪುರಾಣಗಳನ್ನು ಹೀಗೆ ಆತ್ಮನಿಂದನೆಯ ರೂಪದಲ್ಲಿ ಕಟ್ಟಿಕೊಳ್ಳುತ್ತಿವೆ?

ಆದಿವಾಸಿಯಾದಿಯಾಗಿ ಅಲೆಮಾರಿ ಕೆಳಜಾತಿ ವರ್ಗಗಳ ವರ್ತಮಾನದ ಸ್ಥಿತಿಗತಿಗಳಿಗೂ ಮತ್ತು ಈ ಸಮುದಾಯಗಳು ಕಟ್ಟಿಕೊಂಡು ಬಂದ ಸೃಷ್ಠಿಪುರಾಣಗಳಿಗೂ ಇರುವ ಸಂಬಂಧದ ಸ್ವರೂಪವೇನು? ಛಿದ್ರಗೊಂಡ ಅಲೆಮಾರಿ ಸಮುದಾಯವೊಂದು ತನ್ನ ವರ್ತಮಾನವನ್ನು ಹೀಗೆ ಸೃಷ್ಟಿಪುರಾಣದ ಮೂಲಕ ಸಂಕೇತಿಸುತ್ತಿದೆಯೇ? ಅಲೆಮಾರಿಗಳ ಈ ಸೃಷ್ಟಿಪುರಾಣಗಳನ್ನು ಅವುಗಳ ಸಾಂಸ್ಕøತಿಕ ಅನನ್ಯತೆ ಎಂದು ಹೇಗೆ ಕರೆಯುವುದು?
ಊರಗೌಡ ಕೆರೆಗೆ ಬಲಿಕೊಟ್ಟ ಕೆರೆ ಹೊನ್ನಮ್ಮ, ಗೌರಸಂದ್ರದ ಮಾರಮ್ಮ ಮತ್ತು ಭಾಗೀರಥಿಯರು ನಮ್ಮಲ್ಲಿ ರಾತ್ರಿ ಇಡೀ ಹಾಡುವ ಕಾವ್ಯಗಳಾಗಿ ಇನ್ನೂ ಉಳಿದುಕೊಂಡಿದ್ದಾರೆ. ಕೆರೆಕಟ್ಟಲು ಬಲಿಯಾದ ಹೊನ್ನಮ್ಮ, ಮಾರಮ್ಮ, ಭಾಗೀರಥಿಯರು ನಮ್ಮ ಸಮುದಾಯಗಳಿಗೆ ಯಾವ ಬಗೆಯ ಚಹರೆಗಳು?

‘ಗಂಡನ ಮನೆಯಲ್ಲಿನ ನಿರಂತರ ಹಿಂಸೆಯನ್ನು ಸಹಿಸಿಕೊಂಡು ಹೋಗು’ ಎಂದು ಗರತಿಯರು ರೂಢಿಸಿಕೊಳ್ಳಲೇಬೇಕಾದ ಅಧೀನತೆಯ ನಡುವಳಿಕೆಗಳನ್ನು ಬೋಧಿಸುವ ಜನಪದ ಹಾಡುಗಳನ್ನು ಯಾರ ಸಾಂಸ್ಕøತಿಕ ಕುರುಹುಗಳು ಎಂದು ಪರಿಗಣಿಸುವುದು? ಇಂದು ನಾವು ನೋಡುವ ಮತ್ತು ಕೇಳುವ ಆದಿವಾಸಿ ಮತ್ತು ದುಡಿವ ಕೆಳಜಾತಿ ವರ್ಗಗಳ ಕಲೆ, ಪದ್ಯ, ಆಚರಣೆ ಮತ್ತು ನುಡಿರೂಪಗಳನ್ನು ಅವುಗಳ ಸಂಸ್ಕøತಿಯ ‘ಚಹರೆಗಳು’ ಎಂದು ಭಾವಿಸುವದಾದರೆ, ಆ ಚಹರೆಗಳಲ್ಲಿ ಸಮುದಾಯಗಳ ಆತ್ಮಪ್ರತ್ಯಯ ಮತ್ತು ಸಂಭ್ರಮಗಳಿಗೆ ಕಾರಣವಾಗಬಲ್ಲ ಸಂಗತಿಗಳೆಷ್ಟಿವೆ? ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಆದಿವಾಸಿ ಅಲೆಮಾರಿ ಸಮುದಾಯಗಳ ನೃತ್ಯಾದಿ ಕಲೆಗಳಲ್ಲಿ ಚೆಲುವಿದೆ, ಸಂಭ್ರಮವೂ ಇದೆ ನಿಜ. ಆದರೆ ಈ ಚೆಲವು ಮತ್ತು ಸಂಭ್ರಮಗಳ ಆಳದಲ್ಲಿ ಮಾಯದ ಗಾಯಗಳೂ ಇವೆ. ಈ ಕಾರಣಕ್ಕಾಗಿ ದುಡಿವ ಕೆಳ ಜಾತಿಗಳಿಗೆ ಅವುಗಳ ಸಾಂಸ್ಕøತಿಕ ಚಹರೆಗಳಿಂದರೆ ಗಾಯಗಳೂ ಹೌದು.

Leave a Reply

Your email address will not be published.