ಬುಡಕಟ್ಟು ಮೀಮಾಂಸೆ-3: ಆದಿವಾಸಿಗಳ ಆರ್ಥಿಕತೆ ಮತ್ತು ಮುಖ್ಯವಾಹಿನಿ

-ಡಾ. ಎ. ಎಸ್. ಪ್ರಭಾಕರ್

asp1ಹಾಲಕ್ಕಿ ಒಕ್ಕಲಿಗರು ಸುಗ್ಗಿ ಸಂದರ್ಭದಲ್ಲಿ ‘ಹಗರಣ’ ಎಂಬ ಆಚರಣೆ ಮಾಡುತ್ತಾರೆ. ಹಾಲಕ್ಕಿಗಳು ವಿವಿಧ ವೇಷಧಾರಿಗಳಾಗಿ ಅಂದು ಬೀದಿಗಳಲ್ಲಿ ವರ್ತಮಾನದ ರಾಜಕಾರಣ, ಸಮಾಜ ಮತ್ತು ಆರ್ಥಿಕತೆಗಳನ್ನು ಗೇಲಿ ಮಾಡುವ ಮತ್ತು ವ್ಯಂಗ್ಯವಾಗಿ ಅನುಕರಣೆ ಮಾಡುವ ಅಭಿನಯವನ್ನು ಮಾಡುತ್ತಾರೆ. ರಸ್ತೆ ಅಗಲೀಕರಣ, ರೆಸಾರ್ಟ್ ರಾಜಕಾರಣ, ಗಣಿಗಾರಿಕೆ, ರಾಜಕಾರಣಿಗಳ ಅಧಿಕಾರ ದಾಹ, ಜಾತೀಯತೆ, ಮಾರುಕಟ್ಟೆ ರಾಜಕಾರಣದ ಥಳುಕುಗಳು ಮುಂತಾದ ರಾಜಕೀಯಾರ್ಥಿಕ ಸಂಗತಿಗಳನ್ನು ಹಾಲಕ್ಕಿಗಳು ಅಂದು ನವಿರಾದ ರೀತಿಯಲ್ಲಿ ಗೇಲಿ ಮಾಡುತ್ತಾರೆ. ಇದೇ ತರಹದ ಆಚರಣೆ ಕೊಡಗಿನಲ್ಲಿ ‘ಕುಂಡೆ ಹಬ್ಬದ’ ರೂಪದಲ್ಲಿ ಪ್ರಚಲಿತದಲ್ಲಿದೆ. ಅಲ್ಲಿನ ಜೇನುಕುರುಬರು, ಬೆಟ್ಟ ಕುರುಬರು ಮತ್ತು ಎರವ ಸಮುದಾಯದ ಜನ ದೇವರನ್ನೂ ಒಳಗೊಂಡಂತೆ ಅಲ್ಲಿನ ಭೂಮಾಲಿಕರನ್ನು ಉಗ್ರ ಬೈಗುಳ ಬಳಸಿ ಬೈಯುತ್ತಾರೆ. ವರ್ಷಕ್ಕೊಂದಾವರ್ತಿ ಈ ಸಮುದಾಯಗಳು ಚಿಪ್ಪೊಳಗಿಂದ ಹೊರಬಂದು ತಮ್ಮ ವರ್ತಮಾನದ ಸ್ಥಿತಿಗೆ ಕಾರಣವಾದ ಸಂಗತಿಗಳನ್ನು ಮನಸಾರೆ ಶಪಿಸುತ್ತಾರೆ.

halakki -hagarana(5)ಕರ್ನಾಟಕದ ಬುಡಕಟ್ಟುಗಳಲ್ಲಿ ಇಂತಹ ಆಚರಣೆಗಳಿರುವುದು ಮತ್ತು ಅವುಗಳ ವರ್ತಮಾನದ ಸಾಮಾಜಿಕಾರ್ಥಿಕ ಸ್ಥಿತಿಗತಿಗಳಿಗೂ ನೇರ ಸಂಬಂಧವಿದೆ. ಕರ್ನಾಟಕದ ಬಹುಪಾಲು ಬುಡಕಟ್ಟು ಸಮುದಾಯಗಳು ಪಾರಂಪರಿಕ ಆರ್ಥಿಕ ಚಟುವಟಿಕೆಗಳನ್ನು ನಂಬಿಯೇ ಬದುಕುತ್ತಿವೆ. ಇಲ್ಲಿನ ಹಲವು ಬುಡಕಟ್ಟು ಸಮುದಾಯಗಳು ಮೂಲತಃ ಕೃಷಿಕ ಸಮುದಾಯಗಳು. ಸೊಲಿಗ, ಎರವ, ಬೆಟ್ಟಕುರುಬ, ಹಾಲಕ್ಕಿಒಕ್ಕಲಿಗ, ಕುಣಬಿ, ಕೊರಗ, ಕುಡಿಯ, ಗೌಡಲು, ಮರಾಠಿ ನಾಯಕ, ಕುಮ್ರಿ ಮರಾಠಿ, ಹಸಲ, ಸಿದ್ದಿ, ಇರುಳ, ಗೊಂಡ, ಮುಕ್ರಿ ಮುಂತಾದ ಬುಡಕಟ್ಟುಗಳು ಪಾರಂಪರಿಕವಾಗಿ ಲಘು ಕೃಷಿಯನ್ನು ರೂಢಿಸಿಕೊಂಡಿದ್ದವು ಎಂಬುದು ಅವರ ಸೃಷ್ಠಿಪುರಾಣ ಮತ್ತು ಮೌಖಿಕ ಸಾಹಿತ್ಯದ ಮೂಲಕ ರುಜುವಾತಾಗುತ್ತದೆ. ವಸಾಹತು ಕಾಲದವರೆಗೂ ಈ ಸಮುದಾಯಗಳು ಕುಮ್ರಿ ಬೇಸಾಯವನ್ನು ಅನುಸರಿಸಿಕೊಂಡು ಬಂದಿದ್ದವು. ಜೇನುಕುರುಬ, ಹಕ್ಕಿಪಿಕ್ಕಿ, ಇರುಳ, ಚೆಂಚು, ಪಾರ್ಧಿ, ಡುಂಗ್ರಿಗಾರಾಸಿಯ, ರಾಜಗೊಂಡ ಮುಂತಾದ ಬುಡಕಟ್ಟುಗಳ ಜನ ಇನ್ನೂ ಆಹಾರ ಸಂಗ್ರಹಕಾರಾಗಿಯೇ ಉಳಿದಿದ್ದಾರೆ.

ಗೌಳಿ, ಅಲೆಮಾರಿ ಕುರುಬ, ನಾಯಕ, ಕಾಡುಗೊಲ್ಲ ಮುಂತಾದ ಸಮುದಾಯಗಳು ಪಶುಪಾಲನೆಯಲ್ಲಿ ನಿರತರಾಗಿವೆ. ಸುಡುಗಾಡು ಸಿದ್ದರು, ಡೊಂಬರು, ಸಿಂಧೋಳ, ಬುಡ್ಗ ಜಂಗಮ, ಕಿನ್ನರಿ ಜೋಗಿ ಸಮುದಾಯಗಳು ಇನ್ನೂ ತಮ್ಮ ಪ್ರದರ್ಶನ ಕಲೆಗಳನ್ನೇ ನಂಬಿ ಅಲೆಮಾರಿಗಳಾಗಿಯೇ ಉಳಿದಿವೆ. ಮೇದ, ಬೆಟ್ಟಕುರುಬ, ಕೊರಗ, ಸಿದ್ದಿ ಮುಂತಾದ ಸಮುದಾಯಗಳು ಕರಕುಶಲ ವೃತ್ತಿಗಳನ್ನು ಅವಲಂಬಿಸಿ ಬದುಕುತ್ತಿವೆ.

ಕರ್ನಾಟಕದ ಕರಾವಳಿ, ಮಲೆನಾಡಿನ ಬೆಟ್ಟ ಮತ್ತು ಕಣಿವೆ ಪ್ರದೇಶ, ಅರೆಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಈ ಬುಡಕಟ್ಟುಗಳು ವಿವಿಧ ವೃತ್ತಿಗಳನ್ನು ಅವಲಂಬಿಸಿ ಬದುಕುತ್ತಿವೆ. ಮೇಲ್ಕಾಣಿಸಿದ ಯಾವ ಸಮುದಾಯಗಳಿಗೂ ನಿಶ್ಚಿತ ಆರ್ಥಿಕ ಮೂಲಗಳಿಲ್ಲ. ಮಲೆನಾಡು, ಕರಾವಳಿ ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿನ ಬುಡಕಟ್ಟುಗಳಿಗೆ ಇರುವ ಕೃಷಿ ಭೂಮಿ ತುಂಬಾ ಕಡಿಮೆ. ಶತಮಾನಗಳಿಂದ ಬುಡಕಟ್ಟುಗಳು ಸಾಗುವಳಿ ಮಾಡಿ ಕೃಷಿ ಮಾಡುತ್ತಿರುವ ಭೂಮಿ ಸರ್ಕಾರದ ಪ್ರಕಾರ ಒತ್ತುವರಿ (Encroachment). ಅದಕ್ಕೆ ಪಾಣಿ ಪಟ್ಟಗಳಿಲ್ಲ. ‘ಒತ್ತುವರಿ’ ಎಂದು ಹೇಳಲಾಗುವ ಜಮೀನಾದರೂ ಕೇವಲ ಒಂದೆರಡು ಎಕರೆ ಮಾತ್ರ. ಯಾವ ಬುಡಕಟ್ಟುಗಳಿಗೂ ಹತ್ತಾರು ಎಕರೆ ಕಾಫಿ, ಟೀ ತೋಟಗಳಿಲ್ಲ. ಕೃಷಿ ಕೂಲಿಯೇ ಈ ಬೇಸಾಯಗಾರ ಸಮುದಾಯಗಳ ಮುಖ್ಯ ಆರ್ಥಿಕ ಅವಲಂಬನೆ. ಜೇನುಕುರುಬರಂತಹ ಆಹಾರ ಸಂಗ್ರಹಣೆಯ ಹಂತದ ಬುಡಕಟ್ಟುಗಳ ಸ್ಥಿತಿ ಇನ್ನೂ ಚಿಂತಾಜನಕ. ಗೌಳಿಗರಂತಹ ಪಶುಪಾಲಕರು, ಕಾಡಿನ ಉಪಉತ್ನನ್ನಗಳನ್ನೇ ಆಧರಿಸಿ ಬದುಕುತ್ತಿರುವ ಮೇದ, ಸಿದ್ದಿ, ಬೆಟ್ಟಕುರುಬ, ಕೊರಗ ಮುಂತಾದ ಕರಕುಶಲ ವೃತ್ತಿಗಳನ್ನು ಅವಲಂಬಿಸಿರುವ ಸಮುದಾಯಗಳಿಗೆ ಅರಣ್ಯ ಕಾಯ್ದೆಯ ಕಠೋರ ನಿಯಮಗಳು ತಮ್ಮ ವೃತ್ತಿಗಳನ್ನು ಮುಂದುವರಿಸಲು ಅನುವು ಮಾಡಿಕೊಡುತ್ತಿಲ್ಲ. ಅರಣ್ಯವನ್ನೇ ನಂಬಿಕೊಂಡು ಈ ಸಮುದಾಯಗಳು ಶತಮಾನಗಳಿಂದ ಬದುಕಿ ಬಂದಿವೆ.

ಭಾರತದ ಸಾಮಾಜಿಕ ಸಂದರ್ಭದಲ್ಲಿ ಅರಣ್ಯ ಮತ್ತು ಸಮುದಾಯಗಳ ಸಂಬಂಧ ಅವಿಚ್ಫಿನ್ನವಾದದ್ದು. ಅರಣ್ಯಗಳು ಸ್ಥಳೀಯ ಸಮುದಾಯಗಳ ಬದುಕಿನ ಭಾಗವಾಗಿಯೇ ಪರಿಭಾವಿಸಲ್ಪಟ್ಟಿವೆ. ಈ ಸಮುದಾಯಗಳು, ಅರಣ್ಯಗಳನ್ನು ಕೇವಲ ಮಳೆ ಸುರಿಸುವ ಮತ್ತು ಹಸಿರಿನಿಂದ ಕಂಗೊಳಿಸಿ ಮನಸ್ಸಿಗೆ ಮುದ ನೀಡುವ ಭೂಭಾಗಗಳನ್ನಾಗಿ ಮಾತ್ರ ಪರಿಗಣಿಸಿರಲಿಲ್ಲ. ಸಮುದಾಯಗಳ ಸಂಸ್ಕøತಿ ಮತ್ತು ಆಧ್ಯಾತ್ಮಿಕ ಜಗತ್ತನ್ನು ಅರಣ್ಯಗಳು ರೂಪಿಸುತ್ತಲೇ ಬಂದಿವೆ. ಈ ಕಾರಣದಿಂದಾಗಿ ಸಮುದಾಯಗಳು ಯಾವತ್ತೂ ಅರಣ್ಯವನ್ನು ಉಪಯೋಗವಾದಿ ದೃಷ್ಟಿಕೋನದಿಂದ ನೋಡುವ ಪರಿಪಾಠವನ್ನು ಬೆಳೆಸಿಕೊಂಡಿರಲಿಲ್ಲ. ಅರಣ್ಯಗಳು ಸಮುದಾಯಗಳ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ಜೊತೆಗೆ ಅರಣ್ಯವು ಒಂದು ‘ಆಸ್ತಿ’ಯಾಗಿ ಪರಿಗಣಿಸಲ್ಪಟ್ಟಿರಲಿಲ್ಲ. ಅರಣ್ಯವು ಆಧ್ಯಾತ್ಮವಾಗಿ, ತಿಳಿವಿನ ಮೂಲವಾಗಿ, ಮನುಷ್ಯನ ಯಾವತ್ತೂ ಸಂಗಾತಿಯಾಗಿ ಸಮುದಾಯಗಳ ಬದುಕಲ್ಲಿ ಹಾಸುಹೊಕ್ಕಾಗಿತ್ತು.

ಈ ಹಂತದಲ್ಲಿ ಅರಣ್ಯ ಉಪಭೋಗಕ್ಕೆ ಒಳಗಾಗಿರಲಿಲ್ಲ. ಹಾಗಿದ್ದೂ ಸಹ ಸಮುದಾಯದ ಆರ್ಥಿಕತೆಯನ್ನು ರೂಪಿಸುವಲ್ಲಿ ಅರಣ್ಯ ಉಪಯುಕ್ತ ಪಾತ್ರ ವಹಿಸುತ್ತಲೇ ಇತ್ತು. ಮನುಷ್ಯನ ಸಾಮಾಜಿಕ ಸಂಸ್ಥೆಗಳಾದ ಬೇಟೆ, ಪಶುಪಾಲನೆ ಮತ್ತು ಆದಿಮ ಕೃಷಿ ಹಂತಗಳಲ್ಲಿ ಅರಣ್ಯ ಬಳಕೆಯಾಗುತ್ತಿತ್ತು. ಆದರೆ ಇಂದಿನಂತೆ ಖಿಲಗೊಳ್ಳುವ ಸ್ವರೂಪದಲ್ಲಿ ಬಳಕೆಯಾಗುತ್ತಿರಲಿಲ್ಲ. ಆದಿಮಾನವ ಅಥವಾ ಇಂದಿನ ಆದಿವಾಸಿಗಳು ರೂಡಿಸಿಕೊಂಡಿದ್ದ ಕುಮ್ರಿ ಬೇಸಾಯ ಪದ್ಧತಿಯು ಅರಣ್ಯದ ಸಾವಯವತೆಯನ್ನು ನಾಶ ಮಾಡುವಂತದ್ದಲ್ಲ. ಬದಲಿಗೆ ಅರಣ್ಯವನ್ನು ಮತ್ತು ಅದರ ಸಾವಯವತೆಯನ್ನು ಈ ಕುಮ್ರಿ ಕೃಷಿ ಪದ್ಧತಿಯು ಪೆÇೀಷಿಸುತ್ತಿತ್ತು.

ಈ ಕಾರಣದಿಂದ ಭಾರತದ ಸ್ಥಳೀಯ ಸಮುದಾಯಗಳಿಗೆ ಅರಣ್ಯವು ಭೋಗಿಸಲ್ಪಡುವ ಆಸ್ತಿಯಲ್ಲ. ಅರಣ್ಯದ ಮೇಲೆ ಖಾಸಗಿ ಒಡೆತನವೂ ಈ ಸಮುದಾಯಗಳಿಗೆ ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ಸೋಲಿಗ, ಬೆಟ್ಟಕುರುಬ, ನಾಯಕ, ಎರವ, ಕುಣಬಿ, ಕುಮ್ರಿ ಮರಾಟಿ, ಮರಾಟಿ ನಾಯಕ, ಕೊರಗ, ಕುಡಿಯ, ಗೌಡಲು, ಹಸಲ ಮತ್ತು ಹಾಲಕ್ಕಿ ಒಕ್ಕಲಿಗರು ಈ ಕುಮ್ರಿ ಬೇಸಾಯ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿವೆ. ಆಧುನಿಕಪೂರ್ವ ಕಾಲಘಟ್ಟದವರೆಗೆ ಭಾರತದಲ್ಲಿ ಈ ಸ್ಥಿತಿ ಮುಂದುವರಿದುಕೊಂಡು ಬಂದಿತು. ಆದರೆ ವಸಾಹತು ಆಡಳಿತ ಯಾವತ್ತು ಭಾರತವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತೋ ಅಂದಿನಿಂದ ಅರಣ್ಯವು ಆಸ್ತಿಯಾಗಿ ರೂಪಾಂತರಗೊಂಡಿತು. ಬುಡಕಟ್ಟುಗಳ ಕುಮ್ರಿ ಬೇಸಾಯ ಪದ್ಧತಿಯನ್ನು ನಿಷೇಧಿಸಲಾಯಿತು.

ಬುಡಕಟ್ಟುಗಳು ಕುಮ್ರಿ ಬೇಸಾಯ ಮಾಡುತ್ತಿದ್ದ ಕಣಿವೆಗಳನ್ನು ವಸಾಹತು ಆಡಳಿತ ವಶಪಡಿಸಿಕೊಂಡಿತು. ಮಾರುಕಟ್ಟೆಯಲ್ಲಿ ಬಿಕರಿಯಾಗುವ ‘ವಸ್ತು’ವಾಗಿ ಅರಣ್ಯ ಪರಿಭಾವಿಸಲ್ಪಟ್ಟಿತು. ವಸಾಹತುಶಾಹಿ ಆಳ್ವಿಕೆಯಲ್ಲಿ ಸಮುದಾಯಗಳ ಬದುಕಿನ ಭಾಗವಾಗಿದ್ದ ಅರಣ್ಯವು ಸರಕಾರದ, ಬಂಡವಾಳಶಾಹಿಗಳ ಖಾಸಗಿ ಆಸ್ತಿಯಾಗಿ ಬದಲಾಯಿತು. ಇದರ ಜೊತೆಗೆ ಸಮುದಾಯ ಮತ್ತು ಅರಣ್ಯಗಳ ನಡುವೆ ಇದ್ದ ಪಾರಂಪರಿಕ ಸಂಬಂಧಗಳಿಗೂ ಈ ಹಂತದಲ್ಲಿ ಸಂಚಕಾರ ಬಂದೊದಗಿತು. ಅರಣ್ಯವು ಕಂಪನಿ ಆಡಳಿತದ ಸಂದರ್ಭದಲ್ಲಿ ಉಪಭೋಗಕ್ಕೆ ಒಳಗಾಗತೊಡಗಿತು. ಅರಣ್ಯವು ವಸಾಹತು ಆಡಳಿತದ ವಿಸ್ತರಣೆಗೆ ಬಳಕೆಯಾಗತೊಡಗಿದ ಮೇಲೆ ಸಮುದಾಯ ಮತ್ತು ಅರಣ್ಯಗಳ ನಡುವಿನ ಪಾರಂಪರಿಕ ಸಂಬಂಧವು ಕ್ರಮೇಣ ನಶಿಸತೊಡಗಿತು. ಅದರಲ್ಲೂ ಅರಣ್ಯಗಳಲ್ಲಿ ಬದುಕುತ್ತಿದ್ದ ಆದಿವಾಸಿಗಳು ವಸಾಹತು ಆಡಳಿತದ ಅರಣ್ಯ ನೀತಿಗಳಿಂದ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟರು. ಅರಣ್ಯವನ್ನು ಸರ್ವಸ್ವವೆಂದು ಬದುಕುತ್ತಿದ್ದ ಆದಿವಾಸಿಗಳು ವಸಾಹತು ಆಡಳಿತದ ಅರಣ್ಯನೀತಿಯಿಂದಾಗಿ ತಮ್ಮ ವಾಸದ ನೆಲೆಗಳಲ್ಲಿಯೇ ಅನ್ಯರಾಗುವ ಬಿಕ್ಕಟ್ಟನ್ನು ಎದುರಿಸಿತ್ತಿದ್ದಾರೆ.

ಈ ಹಂತದಲ್ಲಿ ಅರಣ್ಯದಲ್ಲಿನ ಬುಡಕಟ್ಟುಗಳು ವಸಾಹತು ಆಡಳಿತದ ಈ ಕ್ರಮದ ವಿರುದ್ಧ ಬಂಡೆದ್ದವು. ಅರಣ್ಯವನ್ನು ತಮ್ಮ ಬಂಡವಾಳದ ವಿಸ್ತರಣೆಯ ಭಾಗವಾಗಿ ಬಳಸುತ್ತಿದ್ದ ವಸಾಹತುಶಾಹಿ ಆಡಳಿತ ಸ್ಥಳೀಯ ಬುಡಕಟ್ಟುಗಳ ಪ್ರತಿರೋಧಗಳನ್ನು ಸೈನ್ಯದ ಮೂಲಕ ಹತ್ತಿಕ್ಕಿತು. ಸೈನ್ಯದ ಕಾರ್ಯಾಚರಣೆಗಳನ್ನು ನ್ಯಾಯಬದ್ಧಗೊಳಿಸಲು ಅರಣ್ಯ ಕಾಯ್ದೆಗಳು ಮತ್ತು ಕ್ರಿಮಿನಲ್ ಪ್ರೊಸಿಜರ್ ಕೋಡ್‍ಗಳು ರೂಪುಗೊಂಡವು. ಅಂದಿನಿಂದ ಸಮುದಾಯ ಮತ್ತು ಅರಣ್ಯಗಳ ನಡುವೆ ಶತಮಾನಗಳ ಕಾಲ ರೂಡಿsಯಲ್ಲಿದ್ದ ಅವಿನಾಭಾವ ಸಂಬಂಧಗಳೂ ಕೊನೆಗೊಂಡವು. ಅರಣ್ಯ, ವಸಾಹತು ಆಡಳಿತದ ಖಾಸಗಿ ಆಸ್ತಿಯಾಯಿತು. ಈ ಆಸ್ತಿಯನ್ನು ‘ರಕ್ಷಿಸಬೇಕೆಂದು’ ಸದರಿ ಆಡಳಿತ ನಿಶ್ಚಯಿಸಿತು. ಆದರೆ ಯಾರಿಂದ ಅರಣ್ಯವನ್ನು ‘ರಕ್ಷಿಸಲಾಗುತ್ತದೆ’ ಎಂಬುದು ಅಗೋಚರ ಸಂಗತಿಯೇ ಆಗಿತ್ತು. ಅರಣ್ಯವನ್ನು ‘ಸಂರಕ್ಷಿಸಲೆಂದೇ’ ಅರಣ್ಯ ಕಾಯ್ದೆಗಳನ್ನು ವಸಾಹತು ಆಡಳಿತ ರೂಪಿಸಿತು.

halakki -hagarana(6)ಈ ಕಾಯ್ದೆಗಳಲ್ಲಿ ಅರಣ್ಯ ಮತ್ತು ಅವುಗಳ ಭಾಗವಾಗಿಯೇ ಬದುಕುತ್ತಿದ್ದ ಆದಿವಾಸಿಗಳ ಹಿತ ಕಾಯುವ ಅಂಶಗಳು ಅಂತರ್ಗತವಾಗಿರಲಿಲ್ಲ. ಅರಣ್ಯ ಯಾರದು? ಯಾರು ಅದನ್ನು ಬಳಸಬೇಕು? ಅರಣ್ಯದಲ್ಲಿ ಯಾರಿರಬೇಕು? ಯಾರಿರಬಾರದು? ಎಂಬೆಲ್ಲ ಸಂಗತಿಗಳು ಈ ಅರಣ್ಯ ನೀತಿಯಿಂದ ಸ್ಪಷ್ಟಗೊಂಡವು. ಈವತ್ತಿನ ಸಂರಕ್ಷಿತ ಅರಣ್ಯ, ಅಭಯಾರಣ್ಯ, ವನ್ಯ ಮೃಗ ಸಂರಕ್ಷಣೆ, ರಾಷ್ಟ್ರೀಯ ಉದ್ಯಾನ ಎಂಬ ‘ಕಾಡುಳಿಸುವ’ ಆಧುನಿಕ ಭ್ರಮೆಗಳೆಲ್ಲ ಈ ಪುರಾತನ ಕಾಯ್ದೆಯಲ್ಲಿಯೇ ತಮ್ಮ ಬೇರುಗಳನ್ನು ಬಿಟ್ಟುಕೊಂಡಿವೆ. ಭಾರತಕ್ಕೆ ಸ್ವಾತಂತ್ರ್ಯಬಂದು ಏಳು ದಶಕಗಳು ಕಳೆಯುತ್ತಿದ್ದರೂ ಇಲ್ಲಿನ ಅರಣ್ಯನೀತಿಯು, ಬ್ರಿಟಿಷ್ ಸರ್ಕಾರದ ಅರಣ್ಯನೀತಿಯ ಯಥಾವತ್ತು ನಕಲಾಗಿಯೇ ಉಳಿದುಕೊಂಡಿದೆ. ವಸಾಹತು ಆಡಳಿತದ ಸಂದರ್ಭದಲ್ಲಿ ಕಂಪನಿ ಸರ್ಕಾರ ಮೊದಲ ಬಾರಿಗೆ The Madras Forest Act 1865 ಎಂಬ ಕಾಯ್ದೆಯನ್ನು ಜಾರಿಗೆ ತಂದಿತು. ಆನಂತರ ಕಾಲಕಾಲಕ್ಕೆ ಬ್ರಿಟಿಷರು ಅರಣ್ಯ ನೀತಿಯನ್ನು ಪುನರೂಪಿಸುತ್ತಲೇ ಬಂದಿದ್ದಾರೆ. ವಸಾಹತು ಆಳ್ವಿಕೆಯ ಪ್ರಮುಖ ಹಂತಗಳಲ್ಲಿ ಅರಣ್ಯ ಕಾಯ್ದೆಗೆ ಹಲವು ಗುರುತರ ತಿದ್ದುಪಡಿಗಳನ್ನು ಮಾಡಲಾಗಿದೆ.

ರಾಷ್ಟ್ರೀಯ ಉದ್ಯಾನಗಳು ಭಾರತದಲ್ಲಿ ವಸಾಹತು ಕಾಲಘಟ್ಟದಲ್ಲಿಯೇ ಹೆಸರಿಸಲ್ಪಟ್ಟವು. ಆದರೆ 1972 Wild life Profection Act ರಾಷ್ಟ್ರೀಯ ಉದ್ಯಾನಗಳಿಗೆ ಆಧುನಿಕವೆನ್ನಿಸುವ ಸ್ವರೂಪವನ್ನು ಕಲ್ಪಿಸಿತು. ಈ ಕಾಯ್ದೆಯು ಅರಣ್ಯವನ್ನು ಒಂದು ಸ್ವಯಂಪೂರ್ಣ ಮತ್ತು ಸಾಪೇಕ್ಷ ಸಂಗತಿಯನ್ನಾಗಿ ಪರಿಗಣಿಸಿತು. ಅಲ್ಲದೆ ಭಾರತದ ಬಹುಮುಖ್ಯ ಅರಣ್ಯಗಳ ಉಸ್ತುವಾರಿಯನ್ನು ವಿಶ್ವಬ್ಯಾಂಕ್‍ನಂತಹ ಜಾಗತಿಕ ಸಂಸ್ಥೆಗಳು ವಹಿಸಿಕೊಂಡವು. ಜೊತೆಗೆ ಅರಣ್ಯ ಕಾಯ್ದೆಗಳೂ ಸಹ ಹೆಚ್ಚು ಬಿಗಿಯಾದವು. ಅದರಲ್ಲೂ ರಾಷ್ಟ್ರೀಯ ಉದ್ಯಾನಗಳ ಕುರಿತ ಕಾಯ್ದೆಯು ಅರಣ್ಯವನ್ನು ಅದರೊಳಗೆ ಜೀವಿಸುವ ಆದಿವಾಸಿಗಳಿಂದ ರಕ್ಷಿಸಬೇಕು, ರಾಷ್ಟ್ರೀಯ ಉದ್ಯಾನದೊಳಗೆ ಜನವಸತಿಗಳಿರಕೂಡದು ಎಂಬ ನಿಲುವನ್ನು ಉಗ್ರವಾಗಿ ಪ್ರತಿಪಾದಿಸಿತು. ಇದರಿಂದಾಗಿ ಆದಿವಾಸಿಗಳ ಬದುಕೇ ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿತು. ಶತಮಾನಗಳ ಕಾಲ ತಾವು ಬದುಕಿ ಬಂದಿದ್ದ ಪರಿಸರವನ್ನು ಆದಿವಾಸಿಗಳು ಕಳೆದುಕೊಳ್ಳತೊಡಗಿದರು. ರಾಷ್ಟ್ರೀಯ ಉದ್ಯಾನಗಳ ಸೃಷ್ಟಿಯ ತತ್‍ಕ್ಷಣದ ಪರಿಣಾಮವೆಂದರೆ, ‘ರಕ್ಷಿತ ಅರಣ್ಯಗಳಿಂದ’ ಆದಿವಾಸಿಗಳ ಎತ್ತಂಗಡಿ.

ಒಂದೆಡೆ ಸರಕಾರದ ಉದ್ದೇಶಿತ ಅರಣ್ಯ ಸಂರಕ್ಷಣೆ, ಇನ್ನೊಂದೆಡೆ ಅರಣ್ಯದಲ್ಲಿನ ಆದಿವಾಸಿಗಳ ಅಸ್ತಿತ್ವದ ಪ್ರಶ್ನೆ. ಅರಣ್ಯವನ್ನು ರಕ್ಷಿಸುವ ಮತ್ತು ಅಬಿsವೃದ್ದಿಪಡಿಸುವ ಸರಕಾರದ ಉದ್ದೇಶಗಳಿಗೆ ಮತ್ತು ಆದಿವಾಸಿಗಳ ಸಾಮಾಜಿಕಾರ್ಥಿಕ ಬದುಕಿನ ಅಸ್ತಿತ್ವದ ಕುರಿತ ಬಿಕ್ಕಟ್ಟುಗಳಿಗೆ ಯಾವತ್ತೂ ಸಂಘರ್ಷತ್ಮಾಕ ಮುಖಾಮುಖಿ ನಡೆಯುತ್ತಲೇ ಬಂದಿದೆ. ಅರಣ್ಯವನ್ನು ತಮ್ಮ ಜೀವನ ನಿರ್ವಹಣೆಗಾಗಿ ಯಾವತ್ತೂ ಅವಲಂಬಿಸಿಕೊಂಡು ಬಂದ ಆದಿವಾಸಿಗಳು ರಾಷ್ಟ್ರೀಯ ಉದ್ಯಾನ ಕಾಯ್ದೆಯ ಪ್ರಕಾರ ಅರಣ್ಯವನ್ನು ಯಾವ ಕಾರಣಗಳಿಗೂ ಬಳಸುವಂತಿಲ್ಲ. ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸುವ, ಅದನ್ನು ಮಾರಾಟ ಮಾಡುವ ಆದಿವಾಸಿಗಳ ಪಾರಂಪರಿಕ ಹಕ್ಕುಗಳನ್ನು ರಾಷ್ಟ್ರೀಯ ಉದ್ಯಾನ ನೀತಿ ಕಿತ್ತುಕೊಂಡಿತು. ಅಷ್ಟೇ ಅಲ್ಲದೆ ಅರಣ್ಯದಲ್ಲಿ ಜನವಸತಿಗಳಿರಕೂಡದು ಎಂದು ಆದಿವಾಸಿಗಳನ್ನು ರಾಷ್ಟ್ರೀಯ ಉದ್ಯಾನಗಳಿಂದ ಒಕ್ಕಲೆಬ್ಬಿಸುವುದು ಸರ್ವೇಸಾಮಾನ್ಯ ಸಂಗತಿಯಾಯಿತು.

‘ನಾಗರಿಕ ಜಗತ್ತಿನಿಂದ’ ದೂರವಿದ್ದ, ಕಾಡನ್ನೇ ಆಶ್ರಯಿಸಿದ್ದ ಆದಿವಾಸಿಗಳು ಈ ಒಕ್ಕಲೆಬ್ಬಿಸುವಿಕೆಯಿಂದ ದಿಕ್ಕೆಟ್ಟು ಹೋದರು. ದೇಶದ ಕೆಲವೆಡೆ ಆದಿವಾಸಿಗಳು ಈ ಅರಣ್ಯ ನೀತಿಯ ವಿರುದ್ಧ ಹೋರಾಟಗಳನ್ನೂ ಕೈಗೊಂಡರು. ಸರಕಾರಗಳು ಒಕ್ಕಲೆದ್ದ ಆದಿವಾಸಿಗಳಿಗೆ ಸರಿಯಾಗಿ ಪುನರ್ವಸತಿ ಕಲ್ಪಿಸಲಿಲ್ಲ. ಹೀಗೆ ಸ್ವಾತಂತ್ರ್ಯಾನಂತರ ವಿವಿಧ ಅಬಿsವೃದ್ಧಿ ಯೋಜನೆಗಳಿಂದ ಒಕ್ಕಲೆದ್ದ ಸುಮಾರು 21.3 ಮಿಲಿಯನ್ ಜನರಲ್ಲಿ 8.54 ಮಿಲಿಯನ್ ಜನ ಆದಿವಾಸಿಗಳಿದ್ದಾರೆ. ಇವರು ತಮ್ಮ ಪಾರಂಪರಿಕ ವಾಸದ ನೆಲೆಗಳ್ನು ಮಾತ್ರವಲ್ಲದೆ ಜೀವಿಸುವ ಹಕ್ಕನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಏಕೆಂದರೆ ಆದಿವಾಸಿಗಳ ಬಳಿ ನಾಗರಿಕ ಆಡಳಿತ ವ್ಯವಸ್ಥೆ ಕೇಳುವ ಹಕ್ಕು ಪತ್ರಗಳಾಗಲಿ, ಕಾನೂನು ಬದ್ಧ ಒಡೆತನದ ಸಾಕ್ಷಿಗಳಾಗಲಿ ಇರುವುದಿಲ್ಲ. ಈ ಕಾರಣಕ್ಕಾಗಿ ಆದಿವಾಸಿಗಳು ‘ಮುಖ್ಯವಾಹಿನಿ’ಯ ಜನರಿಂದ ಅನೇಕ ಬಗೆಯ ಶೋಷಣೆಗಳಿಗೆ ಒಳಗಾಗುವ ಸಂದರ್ಭಗಳು ತಲೆದೋರುತ್ತಾ ಬಂದಿವೆ. ಇದನ್ನು ಮನಗಂಡು ಸ್ವಾತಂತ್ರ್ಯನಂತರ, ಅರಣ್ಯ ಮತ್ತು ಆದಿವಾಸಿಗಳನ್ನು ಜೊತೆಯಲ್ಲೇ ಅಬಿsವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲು ಅನೇಕ ಆಯೋಗಗಳನ್ನು ಭಾರತ ಸರ್ಕಾರ ನೇಮಿಸಿದೆ. ಸ್ವತಃ ನೆಹರು ಆದಿವಾಸಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಬುಡಕಟ್ಟುಗಳ ಜೊತೆಗೇ ಬದುಕಿದ ವೆರಿಯರ್ ಎಲ್ವಿನ್ ಆದಿವಾಸಿಗಳ ಸಹಜ ಬದುಕನ್ನು ಅವರ ಪರಿಸರದಲ್ಲಿಯೇ ಉಳಿಸಿ ಬೆಳೆಸುವ ಮೂಲಕ ಅವರ ಅಬಿsವೃದ್ಧಿಯನ್ನು ಹೇಗೆ ಸಾದಿsಸಬಹುದು ಎಂಬುದನ್ನು ನೆಹರುರವರಿಗೆ ಮನವರಿಕೆ ಮಾಡಿಕೊಟ್ಟರು.

ಈ ಹಿನ್ನೆಲೆಯಲ್ಲಿ ಆದಿವಾಸಿಗಳ ಅಬಿsವೃದ್ಧಿಗಾಗಿ ಪಂಚಶೀಲ ತತ್ವಗಳನ್ನ ನೆಹರು ರೂಪಿಸಿದರು. ಅಲ್ಲದೆ ಆದಿವಾಸಿಗಳ ಕಾಡಿನ ಮುಗ್ಧ ಪರಿಸರವನ್ನು ಹೊರಗಿನ ಜನ ಯಾವ ಕಾರಣಕ್ಕೂ ಕದಡಬಾರದೆಂದು ನೆಹರು ಪದೇ ಪದೇ ತಮ್ಮ ಭಾಷಣಗಳ ಮೂಲಕ ಕರೆ ನೀಡುತ್ತಿದ್ದರು. ಆದಿವಾಸಿಗಳು ಕಾಡಲ್ಲಿಯೇ ಇದ್ದು, ಅವರಷ್ಟಕ್ಕೆ ಅವರು ಅಬಿsವೃದ್ಧಿಯ ಕಡೆಗೆ ನಡೆದು ಹೋಗಬೇಕೆಂದು ನೆಹರು ಬಯಸುತ್ತಿದ್ದರು. ಅವರ ಕಾಲದಲ್ಲಿಯೇ ಮೊದಲ ಬಾರಿಗೆ ಅರಣ್ಯ ಮತ್ತು ಆದಿವಾಸಿಗಳ ಪಾರಂಪರಿಕ ಸಂಬಂಧದ ಕುರಿತು ವೈe್ಞÁನಿಕ ವರದಿಯನ್ನು ಸಿದ್ಧಪಡಿಸಲು ಧೇಬರ್ ಆಯೋಗವನ್ನು ನೇಮಿಸಲಾಯಿತು. ಆನಂತರ ಅನೇಕ ಆಯೋಗಗಳು ಸ್ವಾತಂತ್ರ್ಯಾನಂತರ ನೇಮಿಸಲ್ಪಟ್ಟಿವೆ. ಆದಿವಾಸಿಗಳು ಅರಣ್ಯದ ಜೊತೆ ಹೊಂದಬಹುದಾದ ಸಂಬಂಧ ಮತ್ತು ಈ ಸಂಬಂಧದ ಕುರಿತು ಸರ್ಕಾರ ಈಗಾಗಲೇ ಅಂಗೀಕರಿಸಿರುವ ಅರಣ್ಯ ನೀತಿಯಲ್ಲಿ ಇರಬಹುದಾದ ಅಡೆತಡೆಗಳನ್ನು ಸರಿಪಡಿಸುವ ಕುರಿತು ಅನೇಕ ಸಲಹೆ ಸೂಚನೆಗಳನ್ನು ಸರಕಾರ ರಚಿಸಿದ ಎಲ್ಲ ಆಯೋಗಗಳು ನೀಡಿವೆ. ಅರಣ್ಯ ಮತ್ತು ಆದಿವಾಸಿಗಳ ನಿತ್ಯದ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ರಚಿಸಿದ ಎಲ್ಲ ಆಯೋಗಗಳು ಮಹತ್ವದ ಶಿಫಾರಸ್ಸುಗಳನ್ನು ಮಾಡಿವೆ.

ಅರಣ್ಯ ಮತ್ತು ಆದಿವಾಸಿಗಳ ನಡುವಿನ ಪಾರಂಪರಿಕ ಸಂಬಂಧಗಳನ್ನು ಕಾಪಾಡುವುದು, ಅರಣ್ಯದ ಉಪಉತ್ಪನ್ನಗಳ ಮೇಲೆ ಆದಿವಾಸಿಗಳಿಗೆ ಸಂಪೂರ್ಣ ಅದಿsಕಾರ ಹೊಂದಲು ಅವಕಾಶ ಮಾಡಿಕೊಡುವುದು, ಸಂಗ್ರಹಿಸಲ್ಪಟ್ಟ ಅರಣ್ಯದ ಉಪ ಉತ್ಪನ್ನಗಳಿಂದ ಬಂದ ಆದಾಯವನ್ನು ಆದಿವಾಸಿಗಳ ಮತ್ತು ಅರಣ್ಯಗಳ ಅಬಿsವೃದ್ಧಿಗೆ ಉಪಯೋಗಿಸುವುದು ಮತ್ತು ಆದಿವಾಸಿಗಳನ್ನು ಅರಣ್ಯದ ಉಳುವಿನ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಪೆÇ್ರೀತ್ಸಾಹಿಸುವುದೇ ಈ ಎಲ್ಲ ಆಯೋಗಗಳ ಶಿಫಾರಸ್ಸುಗಳ ಮುಖ್ಯ ಆಶಯಗಳಾಗಿವೆ. ಅಲ್ಲದೆ ಸರ್ಕಾರ ಯಾವ ಅರಣ್ಯನೀತಿಯನ್ನು ಯಥಾವತ್ತು ಅನುಷ್ಠಾನಕ್ಕೆ ತರಲು ಯತ್ನಿಸುತ್ತಿದೆಯೋ, ಆ ಉಪಯೋಗವಾದಿ, ಅಮಾನವೀಯ ನೀತಿಗೆ ಮಾನವೀಯ ಸ್ಪರ್ಶ ನೀಡುವ ಮೂಲ ಆಶಯಗಳನ್ನಿಟ್ಟುಕೊಂಡೇ ಈ ಆಯೋಗಗಳು ತಮ್ಮ ವರದಿಗಳನ್ನು ಸಿದ್ಧಪಡಿಸಿವೆ.

ಆದರೆ ಈ ಆಯೋಗಗಳ ಶಿಫಾರಸ್ಸುಗಳು ಕಾನೂನು ಬದ್ಧವಾಗಿ ಜಾರಿಯಾಗಲಿಲ್ಲ. ರಾಷ್ಟ್ರೀಯ ಉದ್ಯಾನ ಕಾಯ್ದೆ ಮತ್ತು ಆದಿವಾಸಿಗಳ ಸಹಜ ಹಕ್ಕುಗಳ ನಡುವಿನ ಸಂಘರ್ಷಗಳು ಇಂದಿಗೂ ಜೀವಂತವಾಗಿವೆ. ಅನ್ನ ಮತ್ತು ಅಸ್ತಿತ್ವದ ಪ್ರಶ್ನೆಯೇ ಮುಖ್ಯವಾದಾಗ ಸಹಜವಾಗಿ ಅವರ ಸಾಂಸ್ಕøತಿಕ ಸಂಪತ್ತು ನಶಿಸುತ್ತದೆ. ಅರ್ಥಾತ್ ಆದಿವಾಸಿಗಳ ಜಾನಪದ ಸಾಯುತ್ತದೆ. ಪ್ರವಾಹದೋಪಾದಿಯಲ್ಲಿ ಬಂದ ಆಧುನಿಕತೆ ಮತ್ತು ಆತ್ಮವೇ ಇಲ್ಲದ ದಿಕ್ಕೆಡಿಸುವ ಅರಣ್ಯಕ್ಕೆ ಸಂಬಂದಿsಸಿದ ಕಾನೂನುಗಳು ಆದಿವಾಸಿಗಳನ್ನು ನಿರಂತರವಾಗಿ ಹಿಂಸಿಸುತ್ತ ಬಂದಿವೆ. ಈ ಸಂಘರ್ಷದಲ್ಲಿ ಎದೆಯುಬ್ಬಿಸಿ ಆತ್ಮಪ್ರತ್ಯಯಕ್ಕಾಗಿ ಹೋರಾಡಿದ ಕೆಲ ಆದಿವಾಸಿ ಸಮುದಾಯಗಳು ನಿರ್ದಯವಾಗಿ ಹತ್ತಿಕ್ಕಲ್ಪಟ್ಟಿವೆ. ಹೀಗೆ ಹತ್ತಿಕ್ಕಲ್ಪಟ್ಟ ಸಮುದಾಯಗಳು ನಗರಗಳ ಸ್ಲಂಗಳಲ್ಲಿ ಜೀವಿಸುತ್ತಾ ಆತ್ಮನಿಂದನೆ ಮಾಡಿಕೊಳ್ಳುತ್ತಿವೆ. ಕೆಲ ಸಮುದಾಯಗಳು ಹೋರಾಟಗಳನ್ನು ಬಿಟ್ಟುಕೊಡದೆ ಪ್ರಭುತ್ವದ ರಾಜಕೀಯ ಸಮಂಜಸತೆಯ (Political correctness) ಪ್ರಶ್ನೆಗಳನ್ನು ಉಗ್ರವಾಗಿ ಮುಖಾಮುಖಿ ಮಾಡುತ್ತಿವೆ. ಒಟ್ಟಾರೆ ಆದಿವಾಸಿಗಳ ಬದುಕು ಇಡೀ ಭಾರತ ಉಪಖಂಡದಲ್ಲಿ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿದೆ. ಆದಿವಾಸಿಗಳ ಅಸ್ತಿತ್ವದ ನಿರಾಕರಣೆ ಎಂಬುದು ಕಾನೂನುಬದ್ಧ ಸಂಸ್ಥೆಗಳಿಂದಲೇ ನಡೆಯುತ್ತಿದೆ.

ಬುಡಕಟ್ಟುಗಳ ನಡುವೆಯೇ ತಮ್ಮ ಬದುಕು ಕಂಡುಕೊಂಡ ಪ್ರಖ್ಯಾತ ಬರಹಗಾರ್ತಿ ಮಹಾಶ್ವೇತಾದೇವಿ, ಸರ್ಕಾರವನ್ನು ‘ಯಾರದೀ ಕಾಡು’ ಎಂದು ಪ್ರಶ್ನಿಸುತ್ತಾರೆ. ಅರಣ್ಯದ ಮೇಲೆ ಏಕಸ್ವಾಮ್ಯ ಹೊಂದುವ ಮತ್ತು ಅದರ ಮೇಲೆ ಕಾನೂನುಬದ್ಧ ಒಡೆತನವನ್ನು ಸಾದಿsಸುವ ಪ್ರಭುತ್ವದ ನಿರ್ಧಾರಗಳನ್ನು ಹೀಗೆ ಪ್ರಶ್ನಿಸುವ ಮಹಾಶ್ವೇತಾದೇವಿಯವರು ಅರಣ್ಯದ ಸಹಜ ಒಡನಾಡಿಗಳೆಂದರೆ ಆದಿವಾಸಿಗಳು ಎಂಬುದನ್ನು, ಆದಿವಾಸಿಗಳ ಪಾರಂಪರಿಕ ವಿಚಾರಧಾರೆಗಳ ಮೂಲಕ ನಿರೂಪಿಸುತ್ತಾರೆ. ನಿಸರ್ಗ ಮತ್ತು ಮನುಷ್ಯನ ನಿರಂತರ ಅನುಸಂಧಾನದ ಫಲವಾಗಿ ನಮ್ಮ ಆದಿಮ ತಿಳುವಳಿಕೆಯ ಕ್ರಮಗಳು ರೂಪುಗೊಳ್ಳುತ್ತ ಬಂದಿವೆ. ಚಾರ್ವಾಕರಾದಿಯಾಗಿ, ಭಾರತದ ಭೌತವಾದಿ ವಿಚಾರಧಾರೆಗಳಲ್ಲಿ ಹಾದು ಹೋದ ಮೀಮಾಂಸಕರೆಲ್ಲ ನಿಸರ್ಗ ಮತ್ತು ಸಮಾಜಗಳ ನಿರಂತರ ಅನುಸಂಧಾನದ ಬೆಳವಣಿಗೆಯನ್ನು ಚರ್ಚಿಸಲೆತ್ನಿಸಿದ್ದಾರೆ. ಮನುಷ್ಯನ ಅಸ್ತಿತ್ವ ಮತ್ತು ಅರಿವು  ಉತ್ಪನ್ನದ ಮೂಲ ಧಾತುಗಳ ಕುರಿತ ಈ ಚರ್ಚೆ ಭಾರತೀಯ ದರ್ಶನಗಳಲ್ಲಿ ಅತ್ಯಂತ ತೀವ್ರವಾಗಿ ನಡೆದು ಬಂದಿದೆ. ನಿಸರ್ಗ ಮತ್ತು ಮಾನವನ ನಿರಂತರ ಅನುಸಂಧಾನದ ಫಲವಾಗಿ ಉತ್ಪನ್ನವಾಗುವ ತಿಳುವಳಿಕೆ, ಸೃಷ್ಟಿಯಾಗುವ ಭೌತಿಕ ಪರಿಕರಗಳು ಮತ್ತು ಅವನ ಆಚರಣಾ ವಿಧಾನಗಳ ವಿಕಾಸದ ಕುರಿತು ನಮ್ಮ ದರ್ಶನಗಳಲ್ಲಿ ಆಯಾ ಕಾಲಘಟ್ಟಗಳಲ್ಲಿ ವೈಚಾರಿಕ ಚರ್ಚೆಗಳೇರ್ಪಟ್ಟಿವೆ. ಮನುಷ್ಯ ಮತ್ತು ನಿಸರ್ಗದ ಸಂಬಂಧ ಅದ್ವೈತದ ಸ್ವರೂಪದ್ದು, ದ್ವಂದ್ವಪೂರ್ಣವಾದದ್ದು. ಆದಿವಾಸಿಗಳ ಮತ್ತು ಅರಣ್ಯದ ಸಂಬಂಧವೂ ಇದೇ ಬಗೆಯದು.

ಬುಡಕಟ್ಟುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಮುಖ್ಯವಾಹಿನಿಯ’ ಕುರಿತ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕಾಡಲ್ಲಿ, ಕಾಡಂಚಲ್ಲಿ ಮತ್ತು ಎಲ್ಲೆಂದರಲ್ಲಿ ಬದುಕುತ್ತಿರುವ ಬುಡಕಟ್ಟು ಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ‘ಮುಖ್ಯವಾಹಿನಿ’ಗೆ ಬರಬೇಕೆಂದು ವಿದ್ವಾಂಸರು ಭಾಷಣ ಮಾಡುತ್ತಿದ್ದಾರೆ. ಮೊದಲನೆಯದಾಗಿ ಬುಡಕಟ್ಟುಗಳು ‘ಮುಖ್ಯವಾಹಿನಿ’ಯ ಜೊತೆಜೊತೆಗೆ ಬದುಕಿ ಬಂದಿರುವುದು ನಮ್ಮ ಪುರಾಣಗಳ ಉಲ್ಲೇಖ ಮತ್ತು ಚಾರಿತ್ರಿಕ ದಾಖಲೆಗಳಿಂದ ಗೊತ್ತಾಗುತ್ತದೆ. ಕದಂಬಾದಿಯಾಗಿ ಮೊಗಲ್ ದೊರೆಗಳವರೆಗೆ ಎಲ್ಲರ ದಂಡುಗಳಲ್ಲಿ ಸೈನಿಕರಾಗಿ ಈ ಕಾಡಿನ ಜನ ಹೋರಾಡಿ ಮಡಿದಿದ್ದಾರೆ. ಎಲ್ಲಾ ರಾಜರಿಗೆ ತೆರಿಗೆ, ಕಂದಾಯದ ರೂಪದಲ್ಲಿ ತಮ್ಮ ವಾರ್ಷಿಕ ದುಡಿಮೆಯ ಒಂದು ಪಾಲನ್ನು ಆದಿವಾಸಿಗಳು ನೀಡುತ್ತಾ ಬಂದಿದ್ದಾರೆ. (ಪ್ರಾಚೀನ ಮತ್ತು ಮಧ್ಯಕಾಲೀನ ವ್ಯವಸಾಯಿ ಸಂರಚನೆಯ ಕುರಿತು ಆಳವಾದ ಅಧ್ಯಯನ ಮಾಡಿರುವ ಇರ್ಫಾನ್ ಹಬೀಬ್ ಊಳಿಗಮಾನ್ಯ ಪ್ರಭುತ್ವಗಳಿಗೆ ಬುಡಕಟ್ಟುಗಳು, ಅಲೆಮಾರಿಗಳು ಮತ್ತು ಪಶುಪಾಲಕರು ಪಾವತಿಸುತ್ತಿದ್ದ ತೆರಿಗೆಗಳನ್ನು ವಿವರಿಸುತ್ತಾರೆ)

halakki-hagaranaತಮ್ಮ ಆಸ್ತಿಪಾಸ್ತಿಗಳನ್ನು ಬಲಾಡ್ಯರಿಗೆ ಕೊಟ್ಟು, ತಮ್ಮ ದೈವಗಳನ್ನು ಪುರೋಹಿತರಿಗೆ ನೀಡಿ, ತಮ್ಮ ದೇಹಗಳನ್ನು ವೇಳವಾಳಿ, ಲೆಂಕವಾಳಿಗಳಿಗೆ ಬಲಿಕೊಟ್ಟ ಸಮುದಾಯಗಳು ಯಾವ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದಬೇಕು? ಮುಖ್ಯವಾಹಿನಿ ಎಂದರೆ ಯಾವುದು? ಪುರೋಹಿತಶಾಹಿ ಪ್ರಣೀತ ಊಳಿಗಮಾನ್ಯ ಸಮಾಜವೇ? ಜಾತಿ ಶ್ರೇಣೀಕರಣದ ಅಸಮಾನ ಸಮಾಜವೇ? ಮನುಷ್ಯನೊಬ್ಬ ವಸ್ತುವಾಗಿ ಬಿಡುವ ಮತ್ತು ಮಾರುಕಟ್ಟೆಯ ವಸ್ತುಗಳನ್ನು ಕೊಳ್ಳುವ ಗ್ರಾಹಕನಾಗಿ ರೂಪಾಂತರವಾಗಿಬಿಡುವ ಸಾಮ್ರಾಜ್ಯಶಾಹಿ ಮೌಲ್ಯಗಳನ್ನು ಒಪ್ಪಿಕೊಂಡ ಬಂಡವಾಳಶಾಹಿ ಸಮಾಜವೇ? ಯಾವುದು ಮುಖ್ಯವಾಹಿನಿ? ಮುಖ್ಯವಾಹಿನಿ ಎಂದು ಕರೆಯಲಾಗುವ ಸಮಾಜದ ಆಚರಣೆಗಳಿಂದಲೇ ದಿಕ್ಕೆಟ್ಟು ಹೋದ ಈ ಅಂಚಿನ ಸಮುದಾಯಗಳಿಗೆ ಮುಕ್ತಿ ಸಿಗಲು ಮತ್ತೆ ಆದೇ ಸಾಮಾಜಿಕ ಸಂದರ್ಭಕ್ಕೆ ಹಿಂತಿರುಗಲು ಕರೆಕೊಡುವ ಈ ವಿಪರ್ಯಾಸ ಯಾಕೆ ಸೃಷ್ಟಿಯಾಗಿದೆ?

ಸಂವಿಧಾನಬದ್ಧ ಸವಲತ್ತುಗಳು, ರಾಷ್ಟ್ರ ನಿರ್ದೇಶಕ ತತ್ವಗಳಲ್ಲಿನ ಆಶಯಗಳು, ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳು, ಬಜೆಟ್‍ಗಳಲ್ಲಿ ಈ ಸಮುದಾಯಗಳಿಗೆ ಮೀಸಲಾಗಿಡುವ ದೊಡ್ಡ ದೊಡ್ಡ ಮೊತ್ತಗಳು ಇವೆಲ್ಲವುಗಳಿದ್ದರೂ ಬುಡಕಟ್ಟುಗಳು ದಿಕ್ಕೆಟ್ಟ ಸ್ಥಿತಿಯಲ್ಲಿಯೇ ಇವೆ. ಸ್ವಾತಂತ್ರ್ಯ ಬಂದ ಏಳು ದಶಕಗಳೇ ಕಳೆದು ಬಿಟ್ಟಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೆಲವು ಬುಡಕಟ್ಟು ಸಮುದಾಯಗಳು ಬಂಧಿಗಳಂತೆ ಗೋಡೆಗಳ ನಡುವೆಯೇ ಬದುಕುತ್ತಿವೆ. ಬಂಡವಾಳಶಾಹಿ ವಾಣಿಜ್ಯ ಕೃಷಿ ಮಾಡುವ ತೋಟಗಳಲ್ಲಿ ಇವರು ಅಕ್ಷರಶಃ ಜೀತದಾಳುಗಳು. ಬಂದೂಕಿನ ನಳಿಕೆಯ ತುದಿಯಲ್ಲಿಯೇ ಇವರ ಜೀತ. ಅರಣ್ಯಗಳಿಂದ ಎತ್ತಿ ಬಿಸಾಡಿದ ಆದಿವಾಸಿಗಳು ನಗರಗಳ ಕೊಳೆಗೇರಿಗಳಲ್ಲಿ ಬದುಕುತ್ತಿದ್ದಾರೆ.

ಇನ್ನೂ ಕೆಲವು ಸಮುದಾಯಗಳು ಕಾಡಿನ ಮಧ್ಯೆ ಹಾದು ಹೋಗುವ ಹೆದ್ದಾರಿಗಳ ಬದಿ ಬದುಕುತ್ತಾ ಓಡುವ ವಾಹನಗಳನ್ನು ಆಸೆಗಣ್ಣಿನಿಂದ ನೋಡುತ್ತಾ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಹಕ್ಕುಗಳ ಕಾಯ್ದೆಯು, ಪಾರಂಪರಿಕ ಹಕ್ಕುಗಳನ್ನು ಆದಿವಾಸಿ ಸಮುದಾಯಗಳಿಗೆ ನೀಡಬೇಕೆಂಬ ಆಶಯವನ್ನಿಟ್ಟುಕೊಂಡು ಕಾನೂನಿನ ರೂಪ ಪಡೆದುಕೊಂಡಿದ್ದರೂ ಅದು ಜಾರಿಗೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ಇಂತಹ ವಿಪರ್ಯಾಸಗಳ ನಡುವೆ ಆದಿವಾಸಿಗಳು ಯಾವ ‘ಮುಖ್ಯವಾಹಿನಿಗೆ’ ಬಂದು ಅಭಿವೃದ್ಧಿಯ ಕನಸು ಕಾಣಬೇಕು? ಯಾವುದನ್ನು ವಿದ್ವಾಂಸರು ‘ಮುಖ್ಯವಾಹಿನಿ’ ಎಂದು ಕರೆಯುತ್ತಾರೋ ಅಲ್ಲಿ ಬದುಕುತ್ತಿರುವ ‘ನಾಗರಿಕ’ ಜಗತ್ತಿನ ಜನ ಸಾಮ್ರಾಜ್ಯಶಾಹಿ ಮಾರುಕಟ್ಟೆಯ ಗ್ರಾಹಕರಾಗಿದ್ದಾರೆ.

ಪ್ರಜಾಪ್ರಭುತ್ವದ ಹೆಸರಲ್ಲಿ ಅಸ್ತಿತ್ವಕ್ಕೆ ಬರುವ ಸರಕಾರಗಳು ಸ್ಥಳೀಯ ಸಂಪತ್ತನ್ನೆಲ್ಲ ವಿದೇಶಿ ಬಂಡವಾಳಿಗರ ಕೈಗೆ ಒಪ್ಪಿಸಿಯಾಗಿದೆ. ಒರಿಸ್ಸಾ, ಅಸ್ಸಾಂ ಮತ್ತು ದಂಡಕಾರಣ್ಯಗಳಲ್ಲಿನ ಬುಡಕಟ್ಟುಗಳ ಜನವಸತಿ ಪ್ರದೇಶಗಳಲ್ಲಿ ಸಿಗುವ ನೈಸರ್ಗಿಕ ಸಂಪತ್ತನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಲು ನಮ್ಮ ಜನತಂತ್ರ ಸರಕಾರ ಮುಂದಾಗಿದೆ. ಅಲ್ಲಿ ಪ್ರತಿಭಟಿಸಲು ನಿಂತ ದನಿಯಿಲ್ಲದ ಬುಡಕಟ್ಟುಗಳನ್ನು ಸಲ್ವಾಜುಡಂ ಎಂಬ ಸರಕಾರಿ ಪೋಷಿತ ಸೈನ್ಯ ಬೆನ್ನಟ್ಟಿ ಕೊಲ್ಲುತ್ತಿದೆ. ಮಾರುಕಟ್ಟೆ ಬಂಡವಾಳವನ್ನು ಎದುರಿಸಿ ನಿಲ್ಲುವ ಎಲ್ಲ ಬುಡಕಟ್ಟುಗಳಿಗೆ ‘ಕೆಂಪು ಉಗ್ರರು’ ಎಂಬ ಹಣೆಪಟ್ಟಿ ಕಟ್ಟಿ ಎನ್‍ಕೌಂಟರ್ ಮಾಡಲಾಗುತ್ತಿದೆ. ಪೋಲೀಸರ ಕೈಗೆ ಸಿಕ್ಕ ಆದಿವಾಸಿಗಳನ್ನು ತಗಡಿನಿಂದ ಮಾಡಿದ ಗಂಜಿ ಕೇಂದ್ರಗಳಲ್ಲಿ ಕೂಡಿಹಾಕಲಾಗಿದೆ.

ಸರಕಾರವೆ ಮುಂದೆ ನಿಂತು ಮಾರುಕಟ್ಟೆ ಅರ್ಥವ್ಯವಸ್ಥೆಗಾಗಿ ನಿಸರ್ಗ ಸಂಪತ್ತನ್ನು ಹರಾಜ ಹಾಕುತ್ತ ಆದಿವಾಸಿಗಳ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ. ಆದಿವಾಸಿಗಳು ಮತ್ತು ಅರಣ್ಯಗಳು ಶತಮಾನಗಳ ಕಾಲ ಕೂಡಿ ಬದುಕಿವೆ. ನಮ್ಮ ಪಾರಂಪರಿಕ ತಿಳುವಳಿಕೆಯ ಕ್ರಮಗಳು, ಅರಣ್ಯ ಮತ್ತು ಮಾನವ ಸಂಬಂಧಗಳ ಕಾರಣಕ್ಕಾಗಿ ರೂಪುಗೊಂಡಿವೆ. ಆದರೆ ನಾವು ಇಂದು ಬದುಕುತ್ತಿರುವ ರಾಜಕೀಯ ಸಂದರ್ಭ ಯಾವ ಸ್ಥಳೀಯ ಸಂಪನ್ಮೂಲಗಳನ್ನೂ ಸ್ಥಳೀಯ ಜನ ಸಮುದಾಯಗಳ ಕಲ್ಯಾಣಕ್ಕಾಗಿ ಬಳಸುವ ಮತ್ತು ಉಳಿಸುವ ಸಾಧ್ಯತೆಗಳನ್ನೇ ಇಲ್ಲವಾಗಿಸುತ್ತಿದೆ. ಹೀಗಿದ್ದಾಗ ಬುಡಕಟ್ಟುಗಳು ಯಾವ ‘ಮುಖ್ಯವಾಹಿನಿ’ಗೆ ಬಂದು ಅಭಿವೃದ್ಧಿ ಹೊಂದುವ ಕನಸು ಕಾಣಬೇಕು?

Leave a Reply

Your email address will not be published.