ಬುಡಕಟ್ಟು ಮೀಮಾಂಸೆ-2: ಒಡೆದ ಕನ್ನಡಿಯಲ್ಲೂ ಕಾಣುವ ಬಿಂಬ

-ಡಾ. ಎ. ಎಸ್. ಪ್ರಭಾಕರ್

asp1ಬುಡಕಟ್ಟು ಸಮುದಾಯಗಳನ್ನು ‘ಅವರು’ ಮತ್ತು ‘ನಾವು’ ಲಾಗಾಯ್ತಿಯಿಂದ ತಪ್ಪಾಗಿ ಅರ್ಥೈಸುತ್ತಲೇ ಬಂದಿದ್ದೇವೆ. ‘ಅವರು’ ಮತ್ತು ‘ನಾವು’ ಎಂಬ ವಿಂಗಡನೆ ಯುರೋಪಿನವರದ್ದು. ವಸಾಹತುಗಳಲ್ಲಿನ ಜನರನ್ನು ಯುರೋಪಿನವರು ‘ಅವರು’   (Others) ಎಂದು ಪರಿಗಣಿಸಿದರು. ಯುರೋಪಿನ ಗಣ್ಯ ಜನ ತಮ್ಮನ್ನು ತಾವು ‘ನಾವು’ (Self) ಎಂದು ಕರೆದುಕೊಂಡರು. ಇದನ್ನು ಸ್ವಲ್ಪ ತಿರುಮುರುಗಾಗಿಸಿ ‘ಅವರು’ ಎಂದರೆ ಯುರೋಪಿನವರು ಮತ್ತು ‘ನಾವು’ ಎಂದರೆ ಯುರೋಪಿನ ಜನಗಳಿಗೆ ಅಧೀನರಾಗಿದ್ದ ನಾವು ಎಂದು ಇಲ್ಲಿ ಸಂಬೋಧಿಸಲಾಗಿದೆ. ‘ಅವರು’ ಮತ್ತು ಅವರಿಂದ ವಿಪರೀತ ಪ್ರಭಾವಕ್ಕೆ ಒಳಗಾದ ‘ನಾವು’ ನಮ್ಮವರನ್ನು ತಪ್ಪಾಗಿಯೇ ಅರ್ಥೈಸುತ್ತ ಬಂದಿದ್ದೇವೆ.

ಅರಣ್ಯವಾಸಿಗಳು, ಆದಿವಾಸಿಗಳು, ವನವಾಸಿಗಳೆಂದೆಲ್ಲಾ ಕರೆಯುವ ಈ ಸಮುದಾಯಗಳು ‘ನಾಗರಿಕ ಜಗತ್ತು’ ‘ಮುಖ್ಯವಾಹಿನಿ’ ಎಂಬ ಲೋಕದಿಂದ ಹೊರಗೆ ಬದುಕುತ್ತಿವೆ ಎಂದು ಭಾವಿಸಲಾಗಿದೆ. ‘ನಾಗರಿಕ ಜಗತ್ತಿನಾಚೆಗೆ ಬದುಕುತ್ತಿರುವ ಕಾರಣಕ್ಕಾಗಿ ಅವು ವಿಶಿಷ್ಠವಾಗಿವೆ. ಅರಣ್ಯದಲ್ಲಿ ಬದುಕುತ್ತಿರುವ ಕಾರಣಕ್ಕಾಗಿ ಈ ಸಮುದಾಯಗಳು ನಾಗರಿಕತೆಯನ್ನು ಕಾಣಲಾಗಿಲ್ಲ ಮತ್ತು ಅಭಿವೃದ್ಧಿ ಹೊಂದಲಾಗಿಲ್ಲ. ಇವು ತೀರಾ ಹಿಂದುಳಿದಿವೆ. ಪ್ರಾಚೀನ ಸಮಾಜದಲ್ಲಿದ್ದ ಹಿಂದಿನ ಅನೇಕ ಮೌಲ್ಯಗಳನ್ನು ಈ ಸಮುದಾಯಗಳು ಇನ್ನೂ ಉಳಿಸಿಕೊಂಡಿವೆ. ಬುಡಕಟ್ಟುಗಳಲ್ಲಿ ಇನ್ನೂ ಮಾತೃಮೂಲೀಯ ಮೌಲ್ಯವ್ಯವಸ್ಥೆ ಇದ್ದು, ಅದು ಆ ಸಮಾಜಗಳಲ್ಲಿ ಆದಿಮ ಕುರುಹುಗಳನ್ನು ಜೀವಂತವಾಗಿಟ್ಟಿದೆ. ಕಾಡನ್ನು ಬಿಟ್ಟು ಮುಖ್ಯವಾಹಿನಿಗೆ ಬಂದಾಗ ಈ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ’ ಎಂಬ ಪ್ರಚಲಿತ ನಂಬಿಕೆಗಳೇ ತಿಳುವಳಿಕೆಯಾಗಿ ನಮ್ಮ ಬೌದ್ಧಿಕ ಸಂಕಥನಗಳಲ್ಲಿ ಹಾಸುಹೊಕ್ಕಾಗಿವೆ.

with tribal women, chattisgadಮೇಲಿನ ನಂಬಿಕೆಗಳನ್ನು ಒಂದೊಂದಾಗಿ ಪರಿಶೀಲಿಸುತ್ತಾ ಹೋಗಬಹುದು. ಆದಿವಾಸಿಗಳು ಅರಣ್ಯದಲ್ಲಿಯೇ ಇರುವ ಕಾರಣ ಆ ಸಮುದಾಯಗಳ ಮೌಲ್ಯವ್ಯವಸ್ಥೆಯು ಆದಿಮ ಗಣ ಸ್ವರೂಪದಲ್ಲಿದೆ ಎಂಬುದು ಒಂದು ಗಾಢ ನಂಬಿಕೆ. ಆದರೆ ಪುರಾಣ ಕಾಲದಿಂದ ದುಡಿವ ವರ್ಗಗಳಾದಿಯಾಗಿ ಆದಿವಾಸಿಗಳ್ಯಾರು ನಾವು ಕರೆಯುವ ‘ಮುಖ್ಯವಾಹಿನಿ’ಯ ಸಮುದಾಯಗಳಿಂದ ದೂರ ಉಳಿದಿರಲಿಲ್ಲ. ವಿದ್ಯೆ ಕಲಿತ ಕಾಡಿನ ಹುಡಗನೊಬ್ಬ ರಾಜನ ಮಗನನ್ನೇ ಮೀರಿಸಿ ಬಿಡುವನೆಂದು ಬ್ರಾಹ್ಮಣ ಗುರುವೊಬ್ಬ ಅವನ ಹೆಬ್ಬರೆಳನ್ನೇ ಕತ್ತರಿಸಿ ಗುರುದಕ್ಷಿಣೆ ಪಡೆದ ಕಥೆ ಜನಪ್ರಿಯವಾಗಿದೆ. ತನ್ನ ತಪ್ಪಸ್ಸಿನಿಂದ ಬ್ರಹ್ಮ ವಿದ್ಯೆ ಪಡೆದು ನಮ್ಮನೆಲ್ಲ ಮೀರಿಸಿ ಬಿಡಬಹುದು ಎಂದು ವಿದ್ಯೆ ಕಲಿಯಲೆಂದು ತಪಸ್ಸಿಗೆ ಕುಳಿತ ಶಂಭೂಕನನ್ನು ತಮ್ಮ ರಾಜಕುಮಾರನಿಂದ ಕೊಲ್ಲಿಸಿದ ವೈದಿಕರ ಕಥೆ ರಾಮಾಯಣದಲ್ಲಿದೆ. ತಾಯಿ ಕೇಳಿದಳೆಂದು ಕೈಲಾಸದ ಆತ್ಮಲಿಂಗವನ್ನು ಭೂಲೋಕಕ್ಕೆ ತಂದ ಲಂಕಾದ ರಾಜನನ್ನು ಕೊಲ್ಲಿಸಿದ್ದು, ಕೇವಲ ಆಸ್ತಿಗಾಗಿ ತನ್ನ ನೂರೊಂದು ಜನ ಅಣ್ಣ ತಮ್ಮಂದಿರನ್ನು ವಧೆ ಮಾಡಿದ ರಾಜನನ್ನು ಹಸ್ತಿನಾವತಿಯ ಹೆಬ್ಬಾಗಿಲಲ್ಲಿ ಪ್ರಶ್ನಿಸಿದ ವೇದಾಂತಿಯನ್ನು ಕೊಂದದ್ದು, ಕೆಳ ಜಾತಿಯ ಸೂತನ ಮನೆಯಲ್ಲಿ ಆಶ್ರಯ ಪಡೆದು ಬೆಳೆದನೆಂಬ ಕಾರಣಕ್ಕೆ ಅಂಗರಾಜನಾಗಿಯೇ ಬದುಕಿ ಇಲ್ಲವಾದ ಕರ್ಣನ ಕಥೆಗಳು ನಮ್ಮ ಪುರಾಣಗಳಲ್ಲಿ ದಂಡಿಯಾಗಿವೆ.

ಈ ಸಂಘರ್ಷಮಯ ಪುರಾಣ ಸನ್ನಿವೇಶಗಳು ನಮ್ಮ ಸಮಾಜದ ಚಾರಿತ್ರಿಕ ಬೆಳವಣಿಗೆಯನ್ನು ಕಟ್ಟಿಕೊಡುತ್ತವೆ. ಪುರಾಣಗಳ ಈ ಎಲ್ಲಾ ಪ್ರಸಂಗಗಳಲ್ಲೂ ಕಾಡು, ಕಾಡಿನ ಅಂಚು ಮತ್ತು ಕೇರಿಗಳಲ್ಲಿಯ ‘ಸೂತಕದ ಜನ’, ಆಳುವ ವರ್ಗಗಳ ಹುನ್ನಾರಗಳಿಗೆ ಬಲಿಯಾಗಿದ್ದಾರೆ. ಅಂದರೆ ಕಾಡಿನ, ಕಾಡಂಚಿನ ಮತ್ತು ಸಮಾಜದ ಅಂಚಿನ ಸಮುದಾಯಗಳು ಮುಖ್ಯವಾಹಿನಿಯೆಂದು ಕರೆಯಲ್ಪಡುವ ಸಮಾಜಗಳಿಂದ ದೂರವಿರಲಿಲ್ಲ. ಈ ಎಲ್ಲಾ ಸಮುದಾಯಗಳ ನಡುವೆ ಸಾಮಾಜಿಕ ಕೊಡುಕೊಳುವಿಕೆಗಳು ನಡೆದಿದ್ದವು ಎಂಬುದನ್ನು ಮೇಲಿನ ಉದಾಹರಣೆಗಳು ನಿರೂಪಿಸುತ್ತವೆ. ಕಾಡು, ಕಾಡಿನ ಅಂಚು ಮತ್ತು ಕೇರಿಗಳಲ್ಲಿನ ಜನವಾಸ ಎಂಬುದು ‘ಜನ್ಮಾಂತರದ ಪ್ರಾರಬ್ಧಕ್ಕೆ ಸಂದ ಶಿಕ್ಷೆ’ ಎಂಬುದು ಪುರಾಣದ ನಂಬಿಕೆ. ವನವಾಸ ಎಂಬುದು ಶಿಕ್ಷೆಯ ಇನ್ನೊಂದು ರೂಪ ಎಂಬಂತೆ ಪುರಾಣಗಳಲ್ಲಿ ವ್ಯಕ್ತವಾಗಿದೆ. ‘ರಾಷ್ಟ್ರೀಯ ಕಾವ್ಯಗಳು’ ಎಂದು ಪರಿಗಣಿಸಲ್ಪಡುವ ಈ ದೇಶದ ಎರಡು ಮಹಾಕಥೆಗಳ ನಾಯಕರು ಶಿಕ್ಷೆ ಅನುಭವಿಸಲೆಂದೆ ಕಾಡಿಗೆ ಹೋಗುತ್ತಾರೆ. ಈ ಘಟನೆಗಳು ಕೇವಲ ಪೌರಾಣಿಕ ವಿಪರ್ಯಾಸಗಳು ಮಾತ್ರವಲ್ಲ, ಅಂದಿನ ಸಾಮಾಜಿಕ ವಾಸ್ತವಗಳೂ ಹೌದು.

ಋಗ್ವೇದದಲ್ಲಿ ದೇಹದ ಬಣ್ಣಗಳನ್ನು ಆಧರಿಸಿ ವರ್ಣ ಮತ್ತು ವರ್ಣೇತರ ಜನವರ್ಗಗಳನ್ನು ಪ್ರತ್ಯೇಕಿಸಲಾಗುತ್ತದೆ. ‘ಆರ್ಯವರ್ಣ ಮತ್ತು ದಾಸವರ್ಣ’ ಎಂಬ ವಿಂಗಡಣೆಗಳು ಸಾಮಾಜಿಕ ಶ್ರೇಣೀಕರಣಕ್ಕೆ ಅನುಗುಣವಾಗಿ ಮಾಡಲ್ಪಟ್ಟವು. ಐತರೇಯ ಬ್ರಾಹ್ಮಣ, ಬೃಹತ್ ಸಂಹಿತಾ, ಮನುಸ್ಮøತಿ, ನಾಟ್ಯಶಾಸ್ತ್ರ ಇತ್ಯಾದಿ ಸಂಸ್ಕøತ ಪಠ್ಯಗಳಲ್ಲಿ ನಾಲ್ಕು ವರ್ಣಗಳಿಗೂ ಸೇರದ ಜನರನ್ನು ಪಟ್ಟಿ ಮಾಡಲಾಗಿದೆ. ಇವರು ಅರಣ್ಯಗಳಲ್ಲಿ, ಪರ್ವತಗಳಲ್ಲಿ, ನದಿಗಳ ಬದಿಗಳಲ್ಲಿ, ಸರೋವರಗಳ ಬಳಿ, ಕಣಿವೆಗಳಲ್ಲಿ, ನಿರ್ಮಾನುಷ ಬಯಲು ಮತ್ತು ಕರಾವಳಿಗಳಲ್ಲಿ ‘ಮುಖ್ಯವಾಹಿನಿ’ಯ ಊಳಿಗಮಾನ್ಯ ಸಮಾಜದ ಚೌಕಟ್ಟುಗಳಾಚೆ ಬದುಕುತ್ತಿದ್ದಾರೆ ಎಂಬ ಚಿತ್ರಣ ವೇದಗಳನ್ನೂ ಒಳಗೊಂಡತೆ ಎಲ್ಲ ಸಂಸ್ಕøತ ಪಠ್ಯಗಳಲ್ಲಿ ಸಿಗುತ್ತದೆ. ರಾಮಾಯಣ ಮಹಾಭಾರತಗಳ ನಾಯಕರು ತಮ್ಮ ವೈದಿಕ ಗುರುಗಳ ಆಣತಿಯ ಮೇರೆಗೆ ಅರಣ್ಯವಾಸಿಗಳನ್ನು ಸಂಹರಿಸಿ ತಮ್ಮ ಧೀರೋದತ್ತ ಪರಾಕ್ರಮಗಳನ್ನು ಮೇರೆದ ಪ್ರಸಂಗಗಳು ನೂರೆಂಟು ಇವೆ.

kudiya__1_ಅಂದು ಕಾಡಲ್ಲಿದ್ದ ಸ್ವಚ್ಚಂದ ಗಣಗಳಿಗೂ, ಕಾಡ ಹೊರಗೆ ಬದುಕುತ್ತಿದ್ದ ಊಳಿಗಮಾನ್ಯ ಸಮಾಜಕ್ಕೂ ಸಂಘರ್ಷಗಳು ಇದ್ದವು. ಸ್ಥಳಿಯ ಮೂಲನಿವಾಸಿ ದ್ರಾವಿಡ ಸಮುದಾಯಗಳ ಮೇಲೆ ಪಶುಪಾಲಕ ಆರ್ಯರ ಆಕ್ರಮಣವೆಂದು ಈ ಸಂಘರ್ಷವನ್ನು ಪರಿಭಾವಿಸಲಾಗಿದೆ. ಹೀಗೆ ಗಣ ಸಮಾಜಗಳಲ್ಲಿ ಬದುಕುತ್ತಿದ್ದ ಅರಣ್ಯವಾಸಿಗಳನ್ನು ಹೊರಗಿನಿಂದ ಬಂದ ಆರ್ಯರು ನಿರಂತರವಾಗಿ ಹಿಂಸಿಸಿದರು. ಮಧ್ಯಪ್ರಾಚ್ಯದ ಮುಂದುವರಿದ ಉತ್ಪಾದನಾ ಸಾಧನಗಳೊಂದಿಗೆ ಬಂದಿದ್ದ ಆರ್ಯರು ತಮ್ಮ ಪಶುಪಾಲನೆಯನ್ನು ಇಲ್ಲಿ ವಿಸ್ತರಿಸಲು ನೋಡಿದರು. ಕಬ್ಬಿಣದ ಉತ್ಪಾದನೆ ಮತ್ತು ಅದರ ಬಳಕೆಗಳನ್ನು ಕಂಡುಕೊಂಡಿದ್ದ ಮತ್ತು ಮಧ್ಯಪ್ರಾಚ್ಯದ ಊಳಿಗಮಾನ್ಯ ಸಮಾಜದಿಂದ ಸಿಡಿದು ಬಂದಿದ್ದ ಈ ಪಶುಪಾಲಕರಲ್ಲಿ ಸಹಜವಾಗಿಯೇ ಆಕ್ರಮಣಕಾರಿ ಮನೋಭಾವ ಮೈಗೂಡಿತ್ತು. ಸಿಂಧೂ ನದಿ ಮತ್ತು ಉತ್ತರದ ಅನೇಕ ನದಿ ಬಯಲುಗಳಲ್ಲಿ ಲಘು ಕೃಷಿಯಲ್ಲಿ ತೊಡಗಿದ್ದ ಸ್ಥಳೀಯ ಗಣಗಳನ್ನು ಇವರು ಮುಖಾಮುಖಿಯಾದರು. ಕುದುರೆ ಮತ್ತು ರಥಗಳನ್ನು ಬಳಸುತ್ತಿದ್ದ ಈ ಪಶುಪಾಲಕರ ಮುಂದೆ ಸ್ಥಳೀಯ ಗಣ ಸಮಾಜಗಳು ಸೋತವು. ಕೆಲವು ಗಣಗಳು ದಟ್ಟಾರಣ್ಯಗಳಲ್ಲಿ ಕಣ್ಮರೆಯಾದವು. ಸೋತ ಸಮುದಾಯಗಳು ಇವರಿಗೆ ಅಧೀನಗೊಂಡವು. ಉತ್ಪಾದನಾ ಸಂಬಂಧಗಳು ವಿವಿಧ ಸ್ತರಗಳಲ್ಲಿ ನಿರ್ದಿಷ್ಟಗೊಳಿಸಲ್ಪಟ್ಟವು. ಗಣ ಸಮಾಜಗಳ ನಡುವೆ ಊಳಿಗಮಾನ್ಯ ಅಸಮಾನ ಸಮಾಜ ಅಸ್ತಿತ್ವಕ್ಕೆ ಬಂದಿತು.

ಬುಡಕಟ್ಟು ಸಮುದಾಯಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ಇತರೆಡೆ ಚಲಿಸಿದವು. ಬುಡಕಟ್ಟುಗಳ ಆದಿಮ ಗಣ ವ್ಯವಸ್ಥೆಯನ್ನು ಊಳಿಗಮಾನ್ಯ ಸಮಾಜ ಪೂರ್ಣ ನಾಶಮಾಡಲಿಲ್ಲ. ಕೃಷಿಕರಾಗಿದ್ದ, ಪಶುಪಾಲನೆಯಲ್ಲಿ ಪಳಗಿದ್ದ, ಕಾಡಿನ ಕುರಿತು ಅಗಾಧ ಜ್ಞಾನವಿದ್ದ ಈ ಸಮುದಾಯಗಳನ್ನು ಅಂದಿನ ಆಳುವ ವರ್ಗ ಕ್ರೂರ ದಮನದ ಮೂಲಕ ಅಧೀನಗೊಳಿಸಿಕೊಂಡಿತು. ‘ಋಷಿಗಳ ತಪಸ್ಸಿಗೆ ಅಡ್ಡಿಯುಂಟು ಮಾಡುತ್ತಿದ್ದ ಕಾಡಲ್ಲಿಯ ರಾಕ್ಷಸರು’ ಎಂದು ಕರೆಯಲ್ಪಡುತ್ತಿದ್ದ ಈ ಸಮುದಾಯಗಳೇ ಅಂದಿನ ಬುಡಕಟ್ಟುಗಳು. ಋಷಿಗಳನ್ನು ಪೋಷಿಸುತ್ತಿದ್ದ, ಯಜ್ಞಗಳನ್ನು ಮಾಡಿ ಕಾಡು ಸುಡುತ್ತಿದ್ದ, ಸಾಮ್ರಜ್ಯ ವಿಸ್ತರಣೆಗೆ ಕುದುರೆಗಳನ್ನು ಬಳಸಿ ದಂಡೆತ್ತಿ ಬರುತ್ತಿದ್ದ ರಾಜರು ಕಾಡಿನ ಈ ಗಣ ಸಮಾಜಗಳನ್ನು ಸೋಲಿಸಿದರು. ಕೆಲವು ಸಂದರ್ಭಗಳಲ್ಲಿ ವಾಲಿಯಂತಹ ಬಲಿಷ್ಟರನ್ನು ಕೊಂದರು. ಶರಣಾದ ಸುಗ್ರೀವ ಅಂಗ ರಾಜನಾಗಿ ತನ್ನ ಯಜಮಾನನ ಸೇವೆಗೆ ನಿಂತ. ಬೆಟ್ಟಗಳನ್ನು ಕಿತ್ತು ಅಲ್ಲಾಡಿಸಿ ಎತ್ತಿ ಹಿಡಿಯುತ್ತಿದ್ದ, ಆಟದ ಚೆಂಡಾಗಿ ಬಳಸಲು ಹಾತೊರೆದು, ಸೂರ್ಯನನ್ನು ಹಿಡಿತರಲು ಆಕಾಶಕ್ಕೆ ನೆಗೆದ ಹನುಮಂತನಂತಹ ಬಲಿಷ್ಟನನ್ನು ಶಾಶ್ವತ ಭಕ್ತನೆಂದು ಅಧೀನಗೊಳಿಸಿಕೊಳ್ಳಲಾಯಿತು.

ಮಹಾಭಾರತದ ಅರಣ್ಯಪರ್ವದಲ್ಲಿ ಹಿಡಂಬನನ್ನು ಕೊಂದು ಅವನ ತಂಗಿ ಹಿಡಂಬಿಯನ್ನು ಮದುವೆಯಾಗುವುದರ ಮೂಲಕ ಅವರ ಬಲಿಷ್ಟ ಗಣವನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಂಡರು. ಭೀಮನಂತಹ ರಾಜಕುಮಾರ ಹಿಡಂಬಿಯಂತಹ ‘ಕಾಡಿನ ವಿಕಾರಿ ರಾಕ್ಷಸಿಯನ್ನು’ ಹೇಗೆ ಮದುವೆಯಾದ? ಎಂಬುದು ಕೇವಲ ತರ್ಕದ ಪ್ರಶ್ನೆಯಲ್ಲ. ತಿರುಗಿಬಿದ್ದವರನ್ನು ಕೊಂದು, ಶರಣಾದವರನ್ನು ‘ಒಳಗೊಂಡು’ ಅವರನ್ನು ತಮ್ಮ ಸೇವೆಗೆ ನೇಮಿಸಿಕೊಂಡರು. ಹೀಗೆ ಸೋತು, ಯಜಮಾನರ ‘ಒಳಗೊಳ್ಳುವಿಕೆ’ಯಿಂದಾಗಿ ಗಣಗಳ ಸಮ ಸಮಾಜಗಳು ಛಿದ್ರಗೊಂಡವು. ಗಣಗಳನ್ನು ಸೋಲಿಸಿದವರು ಅವುಗಳನ್ನು ಅಸಮಾನ ನೆಲೆಯಲ್ಲಿಯೇ ಒಳಗೊಂಡರು.

ಈ ನೆಲದ ಪಾರಂಪರಿಕ ಗಣ ಸಮಾಜಗಳು ತಮ್ಮ ಸಮತಾವಾದಿ ಸಾಮಾಜಿಕ ಸಂರಚನೆಯಲ್ಲಿ ಬದುಕಲು ಪ್ರಯತ್ನಿಸಿದರೂ ಸಹ ಊಳಿಗಮಾನ್ಯ ವರ್ಣವ್ಯವಸ್ಥೆ ಅವರನ್ನು ಮುಕ್ತವಾಗಿ ಬಿಡಲಿಲ್ಲ. ಊಳಿಗಮಾನ್ಯ ದೊರೆಗಳಿಗೆ ಸೋತು ಶರಣಾದ ಸಮುದಾಯಗಳು ಕಾಡಂಚು, ಕೇರಿ ಮತ್ತು ಬಯಲುಗಳಲ್ಲಿ ಬದುಕುತ್ತ ಬಂದವು. ಇನ್ನು ಕಾಡಲ್ಲಿಯೇ ಉಳಿದ ಸಮುದಾಯಗಳು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ವ್ಯಾಪಕ ಪ್ರಭಾವಳಿಯ ಊಳಿಗಮಾನ್ಯ ಸಮಾಜದ ಹಿಡಿತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಜಾತಿಯ ವಿವಿಧ ಸ್ತರಗಳೊಳಗೆ ಇಲ್ಲಿ ಬದುಕುವ ಸಮುದಾಯಗಳನ್ನು ನಿಯುಕ್ತಿಗೊಳಿಸಲಾಯಿತು. ವಿರೋಚಿತ ಸೋಲು, ಆತ್ಮದ್ವೇಷ, ತಬ್ಬಲಿತನ ಅಸಹಾಯಕತೆಗಳಲ್ಲಿ ಈ ದುಡಿಯುವ ಸಮುದಾಯಗಳು ಸಿಲುಕಿಕೊಂಡವು. ಒಂದೆಡೆ ತಮ್ಮ ಆದಿಮ ಗಣ ಸಮಾಜದ ಜೀವನ ವಿಧಾನಗಳನ್ನು ಉಳಿಸಿಕೊಳ್ಳಲಾಗದೆ, ಹೇರಲ್ಪಟ್ಟ ಊಳಿಗಮಾನ್ಯ ಆಚರಣೆಗಳನ್ನು ಒಪ್ಪಿಕೊಳ್ಳಲೂ ಆಗದೆ ಅತಂತ್ರ ಸ್ಥಿತಿಯಲ್ಲಿಯೇ ಈ ಸಮುದಾಯಗಳು ಬದುಕಿಬಂದವು. ಅರಣ್ಯ, ಅರಣ್ಯದ ಅಂಚು, ಬಯಲು, ಪರ್ವತ ಕಣಿವೆಗಳಲ್ಲಿ ಬದುಕುವ ಯಾವ ಸಮುದಾಯಗಳೂ ಈ ಊಳಿಗಮಾನ್ಯ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಜಾತಿಯ ಅಸಮಾನತೆಯನ್ನು ಒಪ್ಪಿಕೊಂಡೇ ಬದುಕುವ ಅನಿವಾರ್ಯತೆ ಈ ಸಮುದಾಯಗಳಿಗೆ ತಲೆದೋರಿತು.

ಇಂಡಿಯಾದ ಸಮಾಜದ ಇಂತಹುದ್ದೇ ಕಾಲಘಟ್ಟದಲ್ಲಿ ಈ ಅಸಮಾನ ಸಮಾಜ ಸೃಷ್ಟಿಯಾಯಿತು ಎಂದು ಹೇಳಲಾಗುವುದಿಲ್ಲ. ಈ ದೇಶದ ವಿಷಮ ಆರ್ಥಿಕ ಸಮಾಜದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಈ ದುಡಿವ ವರ್ಗಗಳನ್ನು ಒಂದೊಂದು ಸ್ತರಗಳಲ್ಲಿ ನಿಯುಕ್ತಗೊಳಿಸಲಾಗಿದೆ. ಭಾರತದ ಸಾಮಾಜಿಕ ವ್ಯವಸ್ಥೆ ಎಷ್ಟು ಸಂಕೀರ್ಣವೋ, ಆ ವ್ಯವಸ್ಥೆಯ ಅಂತರ್ಗತ ಭಾಗವಾಗಿರುವ ದುಡಿವ ಕೆಳಜಾತಿ ವರ್ಗಗಳು ರೂಪುಗೊಳ್ಳುವುದಕ್ಕೆ ಕಾರಣವಾಗಿರುವ ಸಾಮಾಜಿಕ ಆರ್ಥಿಕ ಸಂಗತಿಗಳೂ ಸಹ ಅಷ್ಟೇ ಸಂಕೀರ್ಣವಾಗಿವೆ. ಶ್ರೇಣೀಕರಣದ ಕಾರಣಕ್ಕಾಗಿ ಇಂಡಿಯಾದಲ್ಲಿ ಬದುಕುತ್ತಿರುವ ದುಡಿವ ಕೆಳಜಾತಿ ಸಮುದಾಯಗಳು ಯಾವ ಯಾವ ಹಂತಗಳನ್ನು ದಾಟಿ ಬಂದಿರುವರೋ ಆ ಎಲ್ಲ ಹಂತಗಳನ್ನು ಆದಿವಾಸಿಗಳು ಮತ್ತು ಅಲೆಮಾರಿಗಳೂ ಹಾದು ಬಂದಿದ್ದಾರೆ. ಭಾರತದ ಊಳಿಗಮಾನ್ಯತೆ ಇಲ್ಲಿನ ಉತ್ಪಾದನಾ ಸಂಬಂಧಗಳನ್ನು ಸ್ಪಷ್ಟವಾಗಿ ನಿಯಂತ್ರಿಸಿದೆ.

ಈ ಕಾರಣದಿಂದಾಗಿ ಭಾರತದ ಸಮಾಜವು ಹಲವು ಸ್ತರಗಳಲ್ಲಿ ದ್ರಗೊಂಡಿದೆ. ಹೀಗಾಗಿ ಭಾರತದ ಸಮಾಜದ ಪ್ರಧಾನ ಲಕ್ಷಣವೆಂದರೆ ಜಾತಿ ಪದ್ಧತಿ. ಜಾತಿ ಪದ್ಧತಿಯ ಮುಖ್ಯ ಉದ್ದೇಶ ಈ ದೇಶದ ಸಮಾಜದ ಒಟ್ಟಾರೆಯ ರಾಜಕೀಯಾರ್ಥಿಕ ಸ್ಥಿತಿಯನ್ನು ಸಾಮಾಜಿಕ ಶ್ರೇಣೀಕರಣದ ಮೂಲಕ ಸಮರ್ಥಿಸುವುದು. ಈ ಶ್ರೇಣೀಕರಣ ಮತ್ತು ಜಾತಿ ಪದ್ಧತಿ ದುಡಿವವರ ಮತ್ತು ದುಡಿಸಿಕೊಳ್ಳುವವರ ಮಧ್ಯೆ ಬಂದು ಅಸಹಜ ಸಾಮಾಜಿಕ ಸಂಬಂಧವಾಗಿ ಏರ್ಪಟ್ಟಿದೆ. ಈ ಕಾರಣದಿಂದಾಗಿ ಭಾರತದ ಶ್ರೇಣೀಕರಣವು ಜಗತ್ತಿನ ಎಲ್ಲ ತಾರತಮ ವ್ಯವಸ್ಥೆಗಳಿಗಿಂತ ಹೆಚ್ಚು ಸಂಕೀರ್ಣ ಮತ್ತು ಅಷ್ಟೇ ಕ್ರೂರ ವ್ಯವಸ್ಥೆಯಾಗಿದೆ. ಸಾವಿರಾರು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿರುವ ಈ ವಿಷಮ ಸಾಮಾಜಿಕ ವ್ಯವಸ್ಥೆಯಲ್ಲಿ ವಿಕ್ಷಿಪ್ತ ಆಳ್ವಿಕೆ ಮತ್ತು ಅಸಹಾಯಕ ಶರಣಾಗತಿಗಳು ಅನೂಚಾನವಾಗಿ ನಡೆದು ಬಂದಿವೆ.

ಆರ್ಥಿಕ ಮತ್ತು ಉತ್ಪಾದನಾ ಕ್ಷೇತ್ರದ ಮೇಲೆ ಆಳುವ ವರ್ಗಗಳು ಸಾದಿಸಿದ ಹಿಡಿತವು ಜಾತಿ ಪದ್ಧತಿಯನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡು ಬಂದಿದೆ. ಜಾತಿ ಪದ್ಧತಿಯ ಸಂರಕ್ಷಣೆಯೆಂದರೆ, ಅತ್ಯಂತಿಕವಾಗಿ ಆಳುವ ವರ್ಗಗಳು ಉತ್ಪಾದನಾ ಕ್ಷೇತ್ರದ ಮೇಲೆ ಸಾದಿsಸುವ ನಿರ್ಣಾಯಕ ಹಿಡಿತವೆಂದೇ ಅರ್ಥ. ಹುಟ್ಟಿನಿಂದಾಗಿಯೇ ತನ್ನ ಬದುಕಿನ ಕಾಲಾವದಿಯ ಉದ್ದಕ್ಕೂ ಸಾಮಾಜಿಕ ಮತ್ತು ಆರ್ಥಿಕ ಅದಿಕಾರಗಳಿಲ್ಲದೆ ತುಟಿ ಕಚ್ಚಿ ಬದುಕುತ್ತಿರುವ ಅನೇಕ ಜಾತಿ ಸಮುದಾಯಗಳು ಇಂದೂ ಭಾರತದಲ್ಲಿ ಜೀವಂತವಾಗಿವೆ. ಸಾವಿರಾರು ವರ್ಷಗಳ ಕಾಲ ಸಾಮಾಜಿಕ ಮತ್ತು ರಾಜಕೀಯಾರ್ಥಿಕ ರಂಗದ ಯಜಮಾನರಾಗಿ ಈ ದೇಶದ ವಿಷಮತೆಯನ್ನು ಸಾಂಗೋಪಾಂಗವಾಗಿ ರಕ್ಷಿಸಿಕೊಂಡು ಬಂದವರು ಇನ್ನೂ ಆಳುವ ವರ್ಗವಾಗಿದ್ದುಕೊಂಡೇ ಭ್ರಮೆಗಳನ್ನು ಹಂಚುತ್ತಿದ್ದಾರೆ. ಇಲ್ಲಿನ ಸಮುದಾಯಗಳಿಗೆ ವರ್ತಮಾನದಲ್ಲಿ ವೃತ್ತಿಗಳನ್ನು ಬದಲಿಸಿಕೊಳ್ಳುವಷ್ಟು ಆತ್ಮ ವಿಶ್ವಾಸವಿಲ್ಲ. ‘ಜಾತಿ ಪದ್ಧತಿಯಿಂದಾದ ಈ ವೃತ್ತಿ ವಿಭಾಗ ಅಥವಾ ಕೆಲಸಗಳ ನೇಮಕವು ಖಂಡಿತವಾಗಿ ವಿನಾಶಕಾರಿಯಾಗಿದೆ. ಉದ್ಯಮ ಎಂದೂ ನಿಂತ ನೀರಲ್ಲ. ಅದರಲ್ಲಿ ತೀವ್ರವಾದ ಹಾಗೂ ಆಕಸ್ಮಿಕವಾದ ಬದಲಾವಣೆಗಳಾಗುತ್ತಲೇ ಇರುತ್ತವೆ.

ಹೀಗೆ ಬದಲಾವಣೆಗಳಾಗುತ್ತಿರುವಾಗ ವ್ಯಕ್ತಿಗೆ ತನ್ನ ವೃತ್ತಿಯನ್ನು ಬದಲಾಯಿಸುವ ಸ್ವಾತಂತ್ರ್ಯ ಅವಶ್ಯಕವಾಗುತ್ತದೆ. ಬದಲಾಗುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಾತಂತ್ರ್ಯವಿಲ್ಲದಿದ್ದರೆ ಅವನಿಗೆ ಜೀವನೋಪಾಯವೇ ಅಸಾಧ್ಯವಾಗುವುದು. ಜಾತಿ ಪದ್ಧತಿಯಲ್ಲಿ ಇಂತಹ ಸ್ವಾತಂತ್ರ್ಯವಿಲ್ಲ. ತನ್ನ ಜಾತಿಗೆ ಹೊಸದಾದ ವೃತ್ತಿಯನ್ನು ಕೈಗೊಳ್ಳುವ ಬದಲಾಗಿ, ಉಪವಾಸ ಬೀಳುವುದೇ ಹಿಂದೂವಿನ ಗತಿಯಾಗಿದ್ದರೆ, ಅದಕ್ಕೆ ಮೂಲಕಾರಣ ಜಾತಿಯೇ ಆಗಿದೆ’ ಎನ್ನುತ್ತಾರೆ ಅಂಬೇಡ್ಕರ್. ಅಂದರೆ ಜಾತಿ ಅಸಮಾನತೆಯ ಆಚರಣೆಯು ಅಂತಿಮವಾಗಿ ಒಂದು ವ್ಯವಸ್ಥಿತ ಆರ್ಥಿಕ ವಂಚನೆಯೇ ಆಗಿದೆ. ಈ ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕøತಿಕ ರಂಗದ ಆತ್ಮಪ್ರತ್ಯಯವನ್ನು ನಾಶ ಮಾಡಲು ಆ ಸಮುದಾಯಗಳ ಆರ್ಥಿಕ ಸ್ವಾವಲಂಬನೆಯನ್ನು ನಾಶ ಮಾಡುತ್ತ ಬರಲಾಗಿದೆ. ಭಾರತದ ಜಾತಿ ಶ್ರೇಣೀಕರಣ ಶತಮಾನಗಳಿಂದ ಈ ಕೆಲಸವನ್ನು ಜತನದಿಂದ ಮಾಡಿಕೊಂಡು ಬಂದಿದೆ. ಈ ಕಾರಣಕ್ಕಾಗಿ ಜಗತ್ತಿನ ಎಲ್ಲ ಬಗೆಯ ಅಸಮಾನತೆಗಳಿಗಿಂತ ಮತ್ತು ಶೋಷಣೆಗಳಿಗಿಂತ ಭಾರತದ ಸಾಮಾಜಿಕಾರ್ಥಿಕ ರಂಗದ ವಿಷಮತೆ ಮತ್ತು ಶೋಷಣೆಯ ಆಯಾಮಗಳು ಅತ್ಯಂತ ಕ್ರೂರವಾದವುಗಳು.

ಭಾರತದಲ್ಲಿ ಒಂದು ಜಾತಿಯೆಂದರೆ, ಶ್ರಮ ವಿಭಜನೆಯ ಆಧಾರದಲ್ಲಿ ರೂಪುಗೊಂಡ ಒಂದು ಉತ್ಪಾದನಾ ಘಟಕ. ಪ್ರತಿಯೊಂದು ಜಾತಿ ಒಂದು ಸ್ವಯಂಪೂರ್ಣ ಉತ್ಪಾದನಾ ಘಟಕವಾಗಿ ತನ್ನ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳುತ್ತಲೇ ಬರುವಂತೆ ಮಾಡಲಾಗಿದೆ. ಜಾತಿಯೊಂದು ತನ್ನ ಆಚರಣೆ, ಲಾಂbsÀನ, ಭಾಷೆ ಇವುಗಳ ಮೂಲಕ ಭಾವನಾತ್ಮಕವಾಗಿ ತನ್ನ ಅಸ್ತಿತ್ವವನ್ನು ನಿಖರಗೊಳಿಸಿಕೊಳ್ಳುತ್ತಲೇ ಬಂದಿದೆ. ತಾನು ಅನುಸರಿಸುವ ಕಸುಬಿನಿಂದಾಗಿ ಒಂದು ಸಾಮಾಜಿಕ ಗುಂಪು ಸ್ವಯಂಪೂರ್ಣವಾಗಿ ಇನ್ನೊಂದು ಜಾತಿ ಸಮುದಾಯದಿಂದ ಅನೇಕ ಬಗೆಗಳಲ್ಲಿ ಬಿsನ್ನವಾಗಿ ನಿಲ್ಲಲು ಯತ್ನಿಸುತ್ತದೆ. ಈ ಬಗೆಯ ಸ್ವಯಂಪೂರ್ಣತೆಯ ಮತ್ತು ಅನನ್ಯತೆಯ ಕಾಳಜಿಗಳು ಸಮುದಾಯದ ಬದುಕಿನ ಒಟ್ಟಾರೆ ಚಲನಶೀ¯ತೆಯ ಭಾಗವಾಗಿರದೆ, ಈ ಶ್ರೇಣೀಕರಣದ ರಾಜಕೀಯ ಒತ್ತಡಗಳಿಂದಲೂ ರೂಪಿಸಲ್ಪಟ್ಟಿವೆ. ಎಷ್ಟೋ ಸಲ ಅನನ್ಯತೆಯ ಕುರಿತ ಬಿಕ್ಕಟ್ಟು ಬಾಹ್ಯ ಜಗತ್ತಿನ ಒತ್ತಡಗಳ ಕಾರಣಕ್ಕೆ ಸಮುದಾಯಗಳನ್ನು ಕಾಡುತ್ತಲೇ ಇರುತ್ತದೆ. ಈ ಬಿಕ್ಕಟ್ಟಿನ ಕಾರಣಕ್ಕಾಗಿಯೇ ಭಾರತದ ಉತ್ಪಾದಕ ಶಕ್ತಿಗಳ ಸಾಮಾಜಿಕಾರ್ಥಿಕ ಸ್ಥಿತಿಗತಿಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಸಂಭವಿಸಲಿಲ್ಲ. ಕಾಲದಿಂದ ಕಾಲಕ್ಕೆ ಈ ದೇಶವನ್ನು ನಿಯಂತ್ರಿಸಿದ ಆಳುವ ವರ್ಗ ರೂಪಾಂತರಗೊಂಡಂತೆ ಇಲ್ಲಿನ ದುಡಿವ ವರ್ಗಗಳ ಜೀವನ ವಿಧಾನಗಳು ಬದಲಾಗುತ್ತ ಬಂದರೂ ಅಧೀನತೆ ಮಾತ್ರ ವೇಷ ಬದಲಿಸುತ್ತಲೇ ಜೀವಂತವಾಗಿದೆ. ಈ ಕಾರಣದಿಂದ ಭಾರತದ ಕೆಳಜಾತಿಗಳು ತಮ್ಮ ಸಾಮಾಜಿಕ ಸ್ಥಿತಿಗತಿಗಳನ್ನು ಪರಂಪರೆಯ ಅವಶೇಷವೋ ಎಂಬಂತೆ ಅನಿವಾರ್ಯವಾಗಿ ಒಪ್ಪಿಕೊಂಡು ಬಂದಿವೆ. ಅದರಲ್ಲಿ ಆದಿವಾಸಿಗಳು ಮತ್ತು ಅಲೆಮಾರಿಗಳು ಈ ದೇಶದ ಒಟ್ಟಾರೆ ಚರಿತ್ರೆಯ ಅನೂಹ್ಯ ಕಾಲಘಟ್ಟದಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತಿದೆ.

ಈ ಹಿಂದೆ ಪ್ರಸ್ತಾಪಿಸಿದಂತೆ ಊಳಿಗಮಾನ್ಯ ಸಮಾಜದ ಹೇರಲ್ಪಟ್ಟ ಆಚರಣೆಗಳು ಬುಡಕಟ್ಟು ಸಮುದಾಯಗಳನ್ನು ಬಾಧಿಸಿದರೂ ಸಹ ಅವುಗಳ ಆಳದ ಗಣ ಸಮಾಜದ ಮೌಲ್ಯಗಳು ಸಂಪೂರ್ಣವಾಗಿ ಖಿಲಗೊಳ್ಳಲಿಲ್ಲ. ಸಂಕೇತಗಳಲ್ಲಿಯಾದರೂ ಈ ದುಡಿವ ಸಮುದಾಯಗಳು ತಮ್ಮ ಆದಿಮ ಚಹರೆಗಳನ್ನು ಉಳಿಸಿಕೊಂಡು ಬಂದಿವೆ. ನಿಸರ್ಗದ ಜೊತೆಗಿನ ಒಡನಾಟ, ಮಾತೃಮೂಲ ಕುಟುಂಬದ ಮೌಲ್ಯ, ಮಾನವೀಯ ನಡವಳಿಕೆ, ಬೆಲೆಕಟ್ಟಲಾಗದ ಪಾರಂಪರಿಕ ತಿಳುವಳಿಕೆಯ ಕ್ರಮಗಳು ಇನ್ನೂ ಆದಿವಾಸಿ ಸಮುದಾಯಗಳಲ್ಲಿ ಉಳಿದುಬಂದಿವೆ. ಆದರೆ ಈ ಯಾವ ಸಮುದಾಯಗಳೂ ಊಳಿಗಮಾನ್ಯ ಸಾಮಾಜಿಕ ಆಚರಣೆಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮಾತೃ ಪ್ರಧಾನತೆ ಆದಿಮ ಗಣ ಸಮಾಜದ ಮೌಲ್ಯವಾಗಿದ್ದರೂ ಸಹ ಇಂದು ಬುಡಕಟ್ಟುಗಳಲ್ಲಿ ಅದು ಸಂಕೇತದ ಮಟ್ಟದಲ್ಲಿ ಮಾತ್ರ ಆಚರಣೆಯಲ್ಲಿದೆ. ಹೆಣ್ಣಿಗೆ ಆದಿವಾಸಿ ಸಮುದಾಯಗಳಲ್ಲಿ ಸಮಾನ ಗೌರವಗಳು ಲಭ್ಯವಾದರೂ ಸಹ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಪ್ರಚಲಿತದಲ್ಲಿದೆ.

ಸೋಲಿಗ, ಎರವ, ಬೆಟ್ಟಕುರುಬ ಮತ್ತು ಜೇನುಕುರುಬ ಸಮುದಾಯಗಳಲ್ಲಿ ಮದುವೆ ಮತ್ತು ಹೆಣ್ಣಿನ ಸಾಮಾಜಿಕ ಸ್ಥಾನಮಾನಗಳ ಕುರಿತು ಕ್ರಾಂತಿಕಾರಿ ಪದ್ಧತಿಗಳು ಇಂದೂ ಜೀವಂತವಾಗಿವೆ. ಆದರೆ ‘ಮುಖ್ಯವಾಹಿನಿ’ಯೆಂದು ಕರೆಯಲ್ಪಡುವ ಊಳಿಗಮಾನ್ಯ ಸಮಾಜದ ಮೌಲ್ಯಗಳ ಮುಂದೆ ಅವು ಮಂಕಾದಂತೆ ಕಂಡುಬರುತ್ತವೆ. ಹಾಲಕ್ಕಿ, ಕುಣಬಿ, ಮುಕ್ರಿ, ಹಸಲ, ಕುಡಿಯ ಮುಂತಾದ ಆದಿವಾಸಿ ಸಮುದಾಯಗಳ ಮೌಖಿಕ ಸಾಹಿತ್ಯ ಮತ್ತು ನೃತ್ಯಾದಿ ಕಲಾ ಪ್ರಕಾರಗಳಲ್ಲಿ ಹೆಣ್ಣಿನ ಪ್ರಧಾನ್ಯತೆ ಕುರಿತು ಅನೇಕ ಕುರುಹುಗಳು ಸಿಗುತ್ತವೆ. ಆದರೆ ಕರಾವಳಿಯ ಈ ಬುಡಕಟ್ಟುಗಳು ಬದುಕುವ ಎಲ್ಲೆಡೆ ಮಾಸ್ತಿಗಲ್ಲುಗಳು ಗುಂಪುಗುಂಪಾಗಿ ಸಿಗುತ್ತವೆ. ಕೊರಗ ಬುಡಕಟ್ಟು ಅನಾದಿ ಕಾಲದಿಂದ ಅಸ್ಪøಶ್ಯತೆಯ ಕರಾಳ ಆಚರಣೆಗಳಿಗೆ ಒಳಗಾಗುತ್ತಲೇ ಬಂದಿದೆ. ಬಯಲು ಸೀಮೆಯ ನಾಯಕರು ಮತ್ತು ಕಾಡುಗೊಲ್ಲರು ಈ ಭಾಗದ ರಾಜರ ಸೈನ್ಯಗಳಲ್ಲಿ ಹೋರಾಡಿದವರು. ಇಲ್ಲಯ ಪಾಳೇಪಟ್ಟುಗಳಿಗೆ ಬುನಾದಿಗಳಾಗಿದ್ದವರು. ಆದರೆ ಅವರ ಅಸ್ತಿತ್ವಗಳನ್ನು ಇಂದು ವೀರಗಲ್ಲು ಮತ್ತು ಮಾಸ್ತಿಗಲ್ಲುಗಳಲ್ಲಿ ಗುರುತಿಸುವಂತಾಗಿದೆ. ದಕ್ಷಿಣ ಪ್ರಸ್ಥಭೂಮಿಯ ಈ ಬಹುಸಂಖ್ಯಾತ ಬುಡಕಟ್ಟುಗಳು ಬಡತನದಲ್ಲಿಯೇ ಬದುಕುತ್ತಿವೆ.

ಜಾಗತೀಕರಣದ ಈ ಹೊತ್ತು ಜಗತ್ತಿನ ಎಲ್ಲ ಅಧಿಕಾರಸ್ಥ ಸಮುದಾಯಗಳು ಬಲಾಢ್ಯ ಆರ್ಥಿಕತೆಯಲ್ಲಿ ತಮ್ಮ ಪಾಲನ್ನು ಹಕ್ಕಿನಿಂದಲೇ ಪಡೆಯುತ್ತಿವೆ. ಔದ್ಯೋಗಿಕ ರಂಗದಲ್ಲಿ ರೂಪುಗೊಂಡ ಉದ್ಯೋಗಾವಕಾಶಗಳನ್ನು ಪಡೆಯುವತ್ತ ಸಮುದಾಯಗಳು ವೇಗವಾಗಿ ಹೆಜ್ಜೆ ಇರಿಸುತ್ತಿವೆ. ದಿನ ಬೆಳಗಾದರೆ ಈ ಭೂಮಿಯ ಮೇಲೆ ಮನುಷ್ಯ ಅದ್ಭುತಗಳನ್ನು ಎತ್ತಿ ನಿಲ್ಲಿಸುತ್ತಿದ್ದಾನೆ. ಸುಖದ ಆಯಾಮಗಳು ಮನುಷ್ಯನ ಬದುಕನ್ನು ಆವರಿಸಿಕೊಳ್ಳುತ್ತಿವೆ. ಆದರೆ ಭಾರತದಲ್ಲಿ ಸಾವಿರ ವರ್ಷಗಳ ಹಿಂದಿನ ಸಮಾಜ ಇನ್ನೂ ಜೀವಂತವಾಗಿರುವ ವೈರುಧ್ಯ ಕಣ್ಣಿಗೆ ಎದ್ದು ಕಾಣುತ್ತಿದೆ. ಒಂದೆಡೆ ಜಗತ್ತಿನ ಅನಂತ ಸುಖಗಳನ್ನು ಅನುಭವಿಸುವ ಕಾಪೆರ್Çೀರೇಟ್ ಜಗತ್ತು ಬದುಕುತ್ತಿದ್ದರೆ, ಅದರ ಕೂಗಳತೆಯ ದೂರದಲ್ಲಿ ಪುಟ್ಟ ಹುಲ್ಲು ಗುಡಿಸಲುಗಳಲ್ಲಿ, ಗವಿಗಳಲ್ಲಿ, ಹಾಡಿ ಪಾಡಿಗಳಲ್ಲಿ ವಾಸಿಸುತ್ತಾ ಗಡ್ಡೆಗೆಣಸುಗಳನ್ನು ತಿನ್ನುತ್ತಾ ಬದುಕುತ್ತಿರುವ ಆದಿವಾಸಿ ಸಮುದಾಯಗಳೂ ಅಸ್ತಿತ್ವದಲ್ಲಿವೆ. ಇದು ದೇಶವೊಂದರ ಸಮಾಜದ ಅಮಾನವೀಯ ಮತ್ತು ಅನೈಸರ್ಗಿಕ ಬೆಳವಣಿಗೆ.

ಇದು ಭಾರತದಂತಹ ಪಾರಂಪರಿಕ ಸಮಾಜದಲ್ಲಿ ಸಹಜವಾಗಿಯೇ ಮೈದಾಳಿಬಿಡುವ ಕೃತಕ ವೈರುಧ್ಯವೂ ಹೌದು. ಜಾಗತೀಕರಣದ ಈ ಹೊತ್ತಿನಲ್ಲಿ ಬುಡಕಟ್ಟು, ಅಲೆಮಾರಿ ಮತ್ತು ಕುಶಲಕರ್ಮಿ ಸಮುದಾಯಗಳು ತೀವ್ರ ಶೋಷಣೆಗೆ ಒಳಗಾಗುತ್ತಿವೆ. ಸಾಮ್ರಾಜ್ಯಶಾಹಿ ಮಾರುಕಟ್ಟೆ ಆರ್ಥಿಕತೆಯು ಈ ದೇಶವನ್ನು ಅಸಹಜವಾಗಿ ಆಕ್ರಮಿಸಿಕೊಂಡಿದೆ. ಅದರಲ್ಲೂ ಇಂಡಿಯಾದ ನೈಸರ್ಗಿಕ ಸಂಪತ್ತನ್ನು ಬಳಸಿ ‘ಇಲ್ಲಿಯೇ ಉತ್ಪಾದಿಸಲು ಬಂಡವಾಳ ಹೂಡಿ’ ಎಂದು ಇಲ್ಲಿಯ ಜನರ ಮತ ಪಡೆದು ಆಯ್ಕೆಯಾದ ಸರಕಾರಗಳು ಹೊರಗಿನ ಬಂಡವಾಳಶಾಹಿಗಳನ್ನು ಆಹ್ವಾನಿಸುತ್ತಿವೆ. ಕಬ್ಬಿಣದ ಅದಿರು, ಮ್ಯಾಂಗನೀಸ್, ಬಾಕ್ಸೈಟ್, ತಾಮ್ರ, ಕಲ್ಲಿದ್ದಲು, ಬೆಲೆಬಾಳುವ ನೈಸರ್ಗಿಕ ತೈಲ ಮತ್ತು ಅನಿಲಗಳು ಇಲ್ಲಿನ ದಟ್ಟ ಕಾಡಿನ ಒಡಲಲ್ಲಿ ಹುದುಗಿವೆ. ಹೀಗೆ ನೈಸರ್ಗಿಕ ಸಂಪನ್ಮೂಲಗಳಿರುವ ಕಡೆಯಲ್ಲೆಲ್ಲ ಆದಿವಾಸಿ ಸಮುದಾಯಗಳು ಸಾವಿರಾರು ವರ್ಷಗಳಿಂದ ಬದುಕಿ ಬಂದಿವೆ. ಇಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಬರುವ ಮಾರುಕಟ್ಟೆ ಶಕ್ತಿಗಳಿಗೆ ಪ್ರಜಾಪ್ರಭುತ್ವದ ಸರಕಾರಗಳು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸುತ್ತಿವೆ. ಕಳೆದ ಒಂದು ದಶಕದಿಂದ ಓರಿಸ್ಸಾ, ಅಸ್ಸಾಂ ಮತ್ತು ದಂಡಕಾರಣ್ಯದ ಭಾಗವಾಗಿರುವ ರಾಜ್ಯಗಳಲ್ಲಿ ಮಾರುಕಟ್ಟೆ ಆರ್ಥಿಕತೆಯು ತಾನೆ ಪರ್ಯಾಯ ಆಡಳಿತವನ್ನು ನಡೆಸುವಷ್ಟು ನಮ್ಮ ಸರಕಾರಗಳನ್ನು ಮಂಡಿಯೂರಿಸಿದೆ. ಓರಿಸ್ಸಾದ ನಿಯಾಮಗಿರಿಯಲ್ಲಿ ನಡೆದ ಕೋಲಾಹಲ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ಇಲ್ಲಿನ ಷೆಡೂಲ್ಡ್ ಪ್ರದೇಶದಲ್ಲಿ ಆದಿವಾಸಿಗಳಿಗೆ ಸಂವಿಧಾನ ಸ್ವಯಂ ಆಡಳಿತದ ಹಕ್ಕುಗಳನ್ನು ನೀಡಿದೆ. ಆದರೆ ವೇದಾಂತ್, ಪೋಸ್ಕೋ, ರಿಲಯನ್ಸ್‍ನಂತಹ ಮಾರುಕಟ್ಟೆ ಶಕ್ತಿಗಳಿಗಾಗಿ ಸಂವಿಧಾನದ ಆಶಯಗಳನ್ನೇ ಇಲ್ಲಿ ಗಾಳಿಗೆ ತೂರಲಾಗಿದೆ. ಸ್ವಯಂ ನಿರ್ಣಯದ ಹಕ್ಕು ಇಲ್ಲಿನ ಆದಿವಾಸಿಗಳಿಗೆ ಸಂವಿಧಾನಬದ್ಧವಾಗಿಯೇ ಲಭಿಸಿದೆ. ಇಲ್ಲಿ ಕಾರ್ಖಾನೆಗಳನ್ನು ಆರಂಭಿಸಲು, ಗಣಿಗಾರಿಕೆ ಮಾಡಲು, ಡ್ಯಾಮ್ ನಿರ್ಮಾಣ ಮಾಡಲು ಬುಡಕಟ್ಟುಗಳ ಸ್ಥಳೀಯ ಆಡಳಿತದ ಅನುಮತಿ ಕಡ್ಡಾಯ. ಆದರೆ ನಿಯಾಮ್‍ಗಿರಿ ಮುಂತಾದ ಕಡೆ ನಡೆಯುತ್ತಿರುವ ಘಟನೆಗಳು ಅಮಾನವೀಯವಾಗಿವೆ. ವೇದಾಂತ್ ಮತ್ತು ಪೋಸ್ಕೋದಂತಹ ವಿದೇಶಿ ಕಂಪನಿಗಳಿಗೆ ಇಲ್ಲಿ ಗಣಿಗಾರಿಕೆ ಮಾಡಲು ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ತಾನೇ ಮುಂದೆ ನಿಂತು ಅನುಮತಿ ನೀಡಿದೆ.

jenukuruba (5)ಬುಡಕಟ್ಟು ಸ್ಥಳೀಯ ಆಡಳಿತದ ಪ್ರತಿರೋಧನವನ್ನು ಮಣಿಸಲು ಅಲ್ಲಿನ ಬುಡಕಟ್ಟುಗಳನ್ನು ಕಾಡುಗಳಿಂದ ಹೊರಹಾಕುಲಾಗಿತ್ತಿದೆ. ಷೆಡ್ಯೂಲ್ಡ್ ಏರಿಯಾದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ದೊಡ್ಡ ಯಂತ್ರಗಳು ಕೆಲವೇ ದಿನಗಳಲ್ಲಿ ಭೂಮಿಯ ಎದೆ ಸೀಳಿ ಹಾಕಬಲ್ಲವು. ಈ ಲೂಟಿಯನ್ನು ವಿರೋಧಿಸಿದ ಆದಿವಾಸಿಗಳನ್ನು ಸರಕಾರವೇ ನಿರ್ದಯವಾಗಿ ಕೊಂದುಹಾಕಿದೆ. ಆದಿವಾಸಿಗಳ ಚಳುವಳಿಗಳನ್ನು ಕಾರ್ಪೋರೇಟ್ ಮಾಧ್ಯಮಗಳು ನಕ್ಸಲ್ ಹೋರಾಟಗಳೆಂದು ಬಿಂಬಿಸುತ್ತಿವೆ. ಸರಕಾರ ಪೋಲೀಸು, ಸೈನ್ಯ ಇತ್ಯಾದಿಗಳನ್ನು ತಂದು ಈ ಆದಿವಾಸಿಗಳನ್ನು ಗುಲಾಮರಂತೆ ಲಾರಿಗಳಲ್ಲಿ ತುಂಬಿಕೊಂಡು ಬಂದು ಕಾಡಿನ ಹೊರಗಟ್ಟುತ್ತಿದೆ. ಹೊರಗಿನ ಜನರೂ ಪ್ರತಿಭಟಿಸಿದಾಗ ಒಕ್ಕಲೆದ್ದ ಬುಡಕಟ್ಟುಗಳಿಗೆ ಜಿಂಕ್‍ಷೆಡ್‍ಗಳೆಂಬ ಕಾನ್ಸ್‍ಂಟ್ರೇಷನ್ ಕ್ಯಾಂಪ್‍ಗಳನ್ನು ನಿರ್ಮಿಸಿ ಕೂಡಿಹಾಕಲಾಗುತ್ತಿದೆ. ಈ ದೇಶದ ರಕ್ಷಣಾ ಮಂತ್ರಿಯಗಿದ್ದಾತ ‘ಆಪರೇಷನ್ ಗ್ರೀನ್ ಹಂಟ್’ ಎಂಬ ಕಾರ್ಯಾಚರಣೆಯನ್ನು ಘೋಷಿಸಿ ಕಾಡಲ್ಲಿ ಪ್ರತಿಭಟಿಸುತ್ತಿದ್ದ ಆದಿವಾಸಿಗಳ ಮೇಲೆ ಸೈನ್ಯವನ್ನೇ ನುಗ್ಗಿಸಿದ.

‘ನಕ್ಸಲರು ಆದಿವಾಸಿಗಳನ್ನು ದಿಕ್ಕುತಪ್ಪಿಸುತ್ತಿದ್ದಾರೆ’ ಎಂಬ ಸುಳ್ಳು ಹೇಳುತ್ತಲೇ ಈ ರಕ್ಷಣಾ ಮಂತ್ರಿ ಕಾಡಲ್ಲಿಯ ಆದಿವಾಸಿಗಳ ನಿರ್ಮೂಲನೆಗೆ ಮುಂದಾದ. ಮಾನವ ಹಕ್ಕುಗಳ ಹೋರಾಟಗಾರರು ಇದನ್ನು ಪ್ರತಿಭಟಿಸಿ ನ್ಯಾಯಾಲಯಕ್ಕೆ ಹೋದರೆ, ಅವರನ್ನೂ ನಕ್ಸಲ್‍ವಾದಿಗಳೆಂದು ಜೈಲಿಗೆ ಹಾಕಲಾಯಿತು. ಹಣ ಹೂಡಿ ಇಲ್ಲಿನ ನೈಸರ್ಗಿಕ ಸಂಪತ್ತನ್ನು ದರೋಡೆ ಮಾಡಲು ಬಂದ ವಿದೇಶಿ ಕಂಪನಿಗಳ ಪರ ಈ ರಕ್ಷಣಾ ಸಚಿವನ ಹೆಂಡತಿಯೇ ಕೋರ್ಟ್‍ನಲ್ಲಿ ವಾದ ಮಂಡಿಸಿದಳು. ತಮ್ಮ ಮೂಲನೆಲೆಗಳನ್ನು ಸಂವಿಧಾನಾತ್ಮಕ ಹಕ್ಕುಗಳ ಮೂಲಕ ಉಳಿಸಿಕೊಳ್ಳಲು ಹೋರಾಡಿದ ಆದಿವಾಸಿಗಳನ್ನು ಈ ದೇಶದ ಕಾರ್ಪೋರೇಟ್ ಮಾಧ್ಯಮಗಳು ‘ಕೆಂಪು ಉಗ್ರರೆಂದು’ ಕರೆದುಬಿಟ್ಟಿತು.

ಈ ದೇಶದ ಸಂಪತ್ತನ್ನು ಮುಂದಿನ ತಲೆಮಾರಿಗೆ ಉಳಿಸಲು ಪ್ರತಿಭಟಿಸಿದ ಆದಿವಾಸಿಗಳನ್ನು ‘ಆಪರೇಷನ್ ಗ್ರೀನ್ ಹಂಟ್’ ಎಂಬ ಕಾರ್ಯಾಚರಣೆಯಲ್ಲಿ ಕೊಂದುಹಾಕಲಾಯಿತು. ಬಂಡವಾಳ ಹೂಡಿ ಇಲ್ಲಿನ ನೈಸರ್ಗಿಕ ಸಂಪತ್ತನ್ನು ದೋಚಲು ಬಂದ ಮಾರುಕಟ್ಟೆ ಶಕ್ತಿಗಳಿಗೆ ರಕ್ಷಣಾ ಸಚಿವರು ತಮ್ಮ ಸಕುಟುಂಬ ಸಮೇತರಾಗಿ ಬೆಂಬಲಕ್ಕೆ ನಿಂತರು. ಒಕ್ಕಲೆದ್ದ ಬುಡಕಟ್ಟುಗಳು ಇಂದಿಗೂ ಜಿಂಕ್‍ಷೆಡ್‍ಗಳೆಂಬ ಕಾನ್ಸ್‍ಂಟ್ರೇಷನ್ ಕ್ಯಾಂಪ್‍ಗಳಲ್ಲಿ ಗಂಜಿ ಕುಡಿಯುತ್ತ ಬದುಕುತ್ತಿವೆ. ಆದಿವಾಸಿಗಳನ್ನು ಪಾಪ ಅವರ ದೈವಗಳು ಕಾಯಲಿಲ್ಲ. ಅವರ ಹಿರಿಯರ ಆತ್ಮಗಳೂ ರಕ್ಷಿಸಲಿಲ್ಲ. ಹೋಗಲಿ, ಈ ದೇಶದ ಆಡಳಿತವೂ ಆದಿವಾಸಿಗಳ ಪರ ನಿಲ್ಲಲಿಲ್ಲ. ಆದಿವಾಸಿಗಳ ಬದುಕು ಈ ಎಲ್ಲ ಕ್ರೂರ ವೈರುಧ್ಯಗಳ ನಡುವೆ ಛಿದ್ರವಾಗುತ್ತಲೇ ಇದೆ.

(ಮುಂದುವರೆಯುತ್ತದೆ)

 

One Response to "ಬುಡಕಟ್ಟು ಮೀಮಾಂಸೆ-2: ಒಡೆದ ಕನ್ನಡಿಯಲ್ಲೂ ಕಾಣುವ ಬಿಂಬ"

  1. kalamarahalli  November 28, 2015 at 10:19 pm

    prabhudda chintane

    Reply

Leave a Reply

Your email address will not be published.