ಬುಡಕಟ್ಟು ಮೀಮಾಂಸೆ-1 : ನಮ್ಮ ನೆಲ ನಮ್ಮ ಹಕ್ಕು

-ಡಾ. ಎ. ಎಸ್. ಪ್ರಭಾಕರ್

asp1 ರಾಜಕಾರಣ ಸೌಂದರ್ಯ ಕಲ್ಪನೆಯನ್ನು ರೂಪಿಸಬಲ್ಲದು, ಅಧಿಕಾರ ಕೂಡ  ಚಂದವಾಗಿಯೇ ಕಾಣಿಸುತ್ತದೆ. ಅದರಲ್ಲೂ ಎಣಿಯೇ ಇಲ್ಲದ ಅಧಿಕಾರ. ಡಾ. ರಾಮಮನೋಹರ ಲೋಹಿಯಾ

                                     ಹಿರಿಯರ ಆತ್ಮಗಳು ನಮ್ಜೊತೇಲಿವೆ 

ಕೆಲವೇ ತಿಂಗಳುಗಳ ಹಿಂದೆ ಹುಣಸೂರಿನಲ್ಲಿ ಏರ್ಪಡಿಸಿದ್ದ ಬುಡಕಟ್ಟು ಜ್ಞಾನ ಪರಂಪರೆ ಕುರಿತ ಕಮ್ಮಟದಲ್ಲಿ ಸ್ಥಳೀಯ ಅರಣ್ಯಾಧಿಕಾರಿಯನ್ನು ತನ್ನ ತೀಕ್ಷ್ಣ ಪ್ರತಿಭಟನೆಯಿಂದಲೇ ಬಾಯಿ ಮುಚ್ಚಿಸಿದ್ದ. ಖ್ಯಾತ ಅರಣ್ಯ ತಜ್ಞ, ಪರಿಸರವಾದಿ, ನ. ಯಲ್ಲಪ್ಪರೆಡ್ಡಿಯವರನ್ನ ತನ್ನ ಅಪಾರ ತಿಳುವಳಿಕೆಯಿಂದ ದಿಗ್ಬ್ರಮೆಗೀಡುಮಾಡಿದ್ದ. ಈತ ಚಿಕ್ಳಯ್ಯ, ಜೇನುಕುರುಬ ಸಮುದಾಯದ ಹಿರಿಯ

ಚಿಕ್ಳಯ್ಯ, ಜೇನುಕುರುಬ ಸಮುದಾಯದ ಹಿರಿಯ

ಆದಿವಾಸಿಗಳ ಅಖಂಡ ಪ್ರಜ್ಞೆ, ಹರಿತ ಮುನ್ನೋಟ, ಜಟಿಲ ಮನಸ್ಥಿತಿ ಮತ್ತು ತಪ್ತ ಅಂತರಾಳಗಳನ್ನು ಏಕೀಭವಿಸಿದ ಚಿಕ್ಕಯ್ಯ ತನ್ನ ಹಾಡಿಯ ಮುಂದಿನ ಏರಿಯ ಮೇಲೆ ಕುಳಿತು ಮೌನವಹಿಸಿದ್ದ. ಚಿಕ್ಕಯ್ಯ ತನ್ನ ತಂಡದ ಆದಿವಾಸಿ ಹಿರಿಯರೊಂದಿಗೆ ಸೇರಿ ಇಡೀ ಐದು ದಿನಗಳ ಕಮ್ಮಟವನ್ನು ಆವರಿಸಿಕೊಂಡಿದ್ದ. ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವನಂತೆ ಹಲವರನ್ನು ದಿಕ್ಕಾಪಾಲಾಗಿಸಿವೆ. ಸ್ಥಳೀಯ ಅಧಿಕಾರಸ್ಥ ಸಮುದಾಯಗಳು, ಯಾವ ಒಳನೋಟಗಳು ಇಲ್ಲದ ಮೂಢ ಸರಕಾರಗಳು, ಲಾಭಕೋರ ಎನ್‍ಜಿಓಗಳು ಯಾವೂ ಚಿಕ್ಕಯ್ಯನ ತಾಯ್ನೆಲವನ್ನು ಆತನಿಗೆ ಉಳಿಸಿಕೊಟ್ಟಿಲ್ಲ.

ಎಲ್ಲೆಂದರಲ್ಲಿ ಒಕ್ಕಲೆದ್ದು ಈಗ ಹೆದ್ದಾರಿಯೊಂದರ ಪಕ್ಕ ಕಣಿವೆಯಲ್ಲಿ ಚಿಕ್ಕಯ್ಯನ ಹಾಡಿ ಇದೆ. ತೊಳೆದಿಟ್ಟಂತಹ ಸ್ಫಟಿಕದ ಆವರಣ, ಪುಟ್ಟ ಪುಟ್ಟ ಚೊಕ್ಕಟ ಗುಡಿಸಲುಗಳು, ಎತ್ತರೆತ್ತರ ಮರಗಳ ಮಡಿಲು, ಎಲ್ಲವೂ ನೀರವ ಚಿಕ್ಕಯ್ಯನಂತೆ. ಚಿಕ್ಕಯ್ಯನ ತೀಕ್ಷ್ಣ ಕಣ್ಣುಗಳಲ್ಲಿ ಮಾತ್ರ ತನ್ನ ತಾಯ್ನೆಲದ ನೆನಪುಗಳ ಮೆರವಣಿಗೆಯೇ ಇದೆ. ನೆನಪುಗಳು ಹುಟ್ಟುಹಾಕಿರುವ ತಪ್ತತೆ ಮತ್ತು ಆದಿವಾಸಿಗಳ ಸಹಜ ತಾಯ್ತನ ಚಿಕ್ಕಯ್ಯನನ್ನು ಜ್ಞಾನಿಯನ್ನಾಗಿಸಿವೆ. ಸರಿಸುಮಾರು ಅರ್ಧ ಶತಮಾನ ಕಣ್ಣೆದುರು ನಡೆದ ಮತ್ತು ನಡೆಯುತ್ತಲೇ ಇರುವ ಕ್ರೌರ್ಯವನ್ನು ಚಿಕ್ಕಯ್ಯ ಕೇವಲ ತನ್ನ ಮುಗುಳ್ನಗೆಯಿಂದಲೇ ಮುಖಾಮುಖಿ ಮಾಡುತ್ತಾನೆ.

ಅರಣ್ಯಾಧಿಕಾರಿಗಳ ಮೇಲಿನ ಅವನ ಕ್ರೋಧ, ಮಾತು ಬೆಳೆಯ ಬೆಳೆಯುತ್ತಲೇ ಅವನ ತಾಯ್ತನದ ಒರತೆಯಲ್ಲಿ ಅಮೃತವಾಗಿ ಹರಿದು ಬಿಡುತ್ತದೆ. ತನ್ನ ಮೂಲ ನೆಲೆ, ದೈವ, ತನ್ನ ಹೀರಿಕರ ಆತ್ಮಗಳು, ಒಡನಾಡಿದ್ದ ಮರ ಗಿಡ ಹೂವುಗಳು, ಸಹ ಜೀವನ ನಡೆಸಿದ್ದ ಕಾಡು ಪ್ರಾಣಿಗಳು ಇವ್ಯಾವು ಈಗ ಚಿಕ್ಕಯ್ಯನ ಜೊತೆಗಿಲ್ಲ. ಪ್ರಭುತ್ವ ಈತನನ್ನು ವಂಚಿಸಿದೆ, ಎದುರಾಎದುರೇ ಮೋಸಮಾಡಿ ಆತನ ಮೂಲ ನೆಲೆಯಿಂದ ಎತ್ತಿ ಬಿಸಾಡಿದೆ.

ಬೆಟ್ಟದ ಕುರುಬ ಮಹಿಳೆಯರು

ಬೆಟ್ಟದ ಕುರುಬ ಮಹಿಳೆಯರು

ದಿಕ್ಕಾಪಾಲಾದ ಆದಿವಾಸಿಗಳು ಕಾಡಂಚಿನ ಪುಟ್ಟ ಜಾಗಗಳಲ್ಲಿ, ನಗರಗಳ ಕೊಳೆಗೇರಿಗಳಲ್ಲಿ ಬದುಕುತ್ತಿದ್ದಾರೆ. ಒಕ್ಕಲೇಳುವಾಗ ಪ್ರಭುತ್ವ ಕೊಟ್ಟ ಭರವಸೆಗಳು ಭ್ರಮೆಗಳಾಗಿ ಹೋಗಿವೆ. ಪ್ರಾಣಿಗಳೂ ವಾಸಿಸಲು ಯ್ಯೋಗ್ಯವಾಗಿಲ್ಲದ ಸ್ಥಳಗಳಲ್ಲಿ ಆದಿವಾಸಿಗಳು ಬದುಕುತ್ತಿದ್ದಾರೆ. ಆದರೂ ಚಿಕ್ಕಯ್ಯ ತನ್ನ ಅಖಂಡ ಕೋಪದಲ್ಲಿ ಎದುರಿನ ಶತ್ರುವನ್ನು ಸುಟ್ಟುಬಿಡಲಾರ. ಆಕ್ರೋಶದ ಮಾತುಗಳಿಂದ ತಿವಿಯಲಾರ, ಸೇಡಿನ ಈಟಿಯಿಂದ ಚುಚ್ಚಲಾರ. ಆದರೆ ಈತನ ಅಪಾರ ತಿಳುವಳಿಕೆಯಿಂದ ಬರುವ ಮಾತುಗಳು ಮಾತ್ರ ಎದುರು ನಿಂತ ಎಲ್ಲವನ್ನೂ ಸೋಲಿಸಿ ಬಿಡುತ್ತವೆ.
ಆದರೆ ಚಿಕ್ಕಯ್ಯನಿಂದ ಸೋತವನು ಇಲ್ಲಿ ಸೋತ ಕಾರಣಕ್ಕೆ ದ್ವೇಷ ಬೆಳೆಸಿಕೊಳ್ಳಲಾರ. ಎದುರಿಗೆ ಸೋತು ನಿಂತ ಶತ್ರುವೂ ಚಿಕ್ಕಯ್ಯನ ಆತ್ಮಸಂಗಾತಿ. ಚಿಕ್ಕಯ್ಯನ ಅಖಂಡ ಆಕ್ರೋಶ ಯಾವುದನ್ನೂ ಸುಡುವುದಿಲ್ಲ, ಎಲ್ಲವನ್ನೂ ‘ಒಳಗೊಂಡು’ ಝುಳುಝುಳು ಹರಿಯುತ್ತಾ, ಹರಿದೆಡೆಯಲ್ಲ ಹಸಿರು ಚಿಮ್ಮಿಸುತ್ತಲೇ ಇರುತ್ತದೆ. ತನ್ನ ಈಗಿನ ಪುಟ್ಟ ಹಾಡಿಯನ್ನು ನೋಡುತ್ತಲೇ ತಾನು ಬಿಟ್ಟುಬಂದ ಮೂಲ ಹಾಡಿಯ ಅನೇಕ ಸಂಗತಿಗಳನ್ನು ಚಿಕ್ಕಯ್ಯ ಗಾಢ ವಿಷಾದ ಮತ್ತು ಅಪಾರ ನೋವಿನಿಂದಲೇ ನೆನಪಿಸಿಕೊಂಡ. ‘ಏನ್ಮಾಡೋದು ಎಲ್ಲ ನ್ಯಡ್ದು ಹೋತು, ಆ ನಮ್ಮ ದೇವರುಗಳು. ಹಿರಿಯರ ಆತ್ಮಗಳು ಎಲ್ಲವೂ ನಮ್ಜೊತೇಲಿವೆ, ಅವು ನಮ್ಮನ್ ಬಿಟ್ ಹೋಗಲ್ಲ’ ಎನ್ನುತ್ತಾ ನಕ್ಕ. ಆ ನಗುವಿನಲ್ಲಿ ವಿಷಾದ, ಆತ್ಮದ್ವೇಷ, ಅಸಹಾಯಕತೆ ತಾಯ್ತನಗಳೆಲ್ಲವೂ ಒಂದೇ ಸಲ ಪ್ರತ್ಯಕ್ಷವಾಗಿ ಮರೆಯಾದವು.

ಕಾಕನಕೋಟೆ ಮತ್ತು ಬಂಡಿಪುರ ಅರಣ್ಯ ಪ್ರದೇಶಗಳಿಂದ ಒಕ್ಕಲೆದ್ದು ದಿಕ್ಕಾಪಾಲಾದ ಅನೇಕ ಆದಿವಾಸಿ ಹಿರಿಯರು ಹೀಗೇ ಬದುಕುತ್ತಿದ್ದಾರೆ. ಇವರ ಅಂತರಂಗದ ತಾಯ್ತನ ಮತ್ತು ಚೆಲುವುಗಳನ್ನು ನೋಡಿ ನಾನು ಬೆರಗಾಗಿದ್ದೇನೆ. ಹೀಗೂ ಪ್ರತಿಭಟಿಸಬಹುದೇ? ಎಂದು ಹಲವು ಬಾರಿ ನನ್ನನ್ನು ಪ್ರಶ್ನಿಸಿಕೊಂಡಿದ್ದೇನೆ. ನೋವುಗಳನ್ನು ಅವುಡುಗಚ್ಚಿ, ಕಹಿ ದ್ವೇಷಕ್ಕೆ ಅವಕಾಶವಿಲ್ಲದೆ ನಗುತ್ತಲೇ ಎದುರಾಳಿಯನ್ನು ಮುಖಾಮುಖಿ ಮಾಡುವ ಈ ಪ್ರತಿರೋಧಕ್ಕೆ ಏನು ಹೆಸರಿಡುವುದು?

ಆದಿವಾಸಿಗಳ ಈ ಪ್ರತಿರೋಧವನ್ನು ಪ್ರಭುತ್ವ ಹೇಗೆ ಅರ್ಥೈಸಿಕೊಂಡಿದೆ? ಚಿಕ್ಕಯ್ಯನಂತಹ ಶಾಂತ ಪರ್ವತದ ಆಳದಲ್ಲಿ ಅಮೃತ ಮಾತ್ರ ಇದೆ, ಜ್ವಾಲೆ ಇರಲಾರದು ಎಂದು ಆಳುವವರು ಭಾವಿಸಿದ್ದಾರೆಯೇ? ಗೊತ್ತಿಲ್ಲ. ಆದರೆ ಆದಿವಾಸಿಗಳ ಅಂತಸ್ಥ ಜಗತ್ತಿನಲ್ಲಿ ಮರ್ಯಾದಸ್ಥ ಸಮಾಜದ ಔನ್ನತ್ಯವಿದೆ. ಮೊಗೆದಷ್ಟೂ ವಿಕಾಸವಾಗುವ ತಿಳುವಳಿಕೆ ಇದೆ. ಆದಿವಾಸಿಗಳ ಸೃಜನಶೀಲ ಅಂತರಂಗಕ್ಕೆ ನೆನಪುಗಳೇ ಸ್ಥಾಯಿ. ನೆನಪುಗಳಿಲ್ಲದ ಸಮಾಜಕ್ಕೆ ಚೆಲುವು ಪ್ರಾಪ್ತವಾಗಲಾರದೇನೋ! ಕರ್ನಾಟಕದ ಬಹುಪಾಲು ಆದಿವಾಸಿ ಸಮುದಾಯಗಳು ಈ ಬಗೆಯ ಅಂತರಂಗದ ಚೆಲುವನ್ನು ಜತನದಿಂದ ಕಾಪಾಡಿಕೊಂಡು ಬಂದಿವೆ. ಆದಿವಾಸಿಗಳ ಈ ಸಾಮಾಜಿಕ ವಾಸ್ತಗಳು ಆ ಸಮುದಾಯಗಳ ಮೌಲ್ಯಗಳನ್ನು ರೂಪಿಸುತ್ತಾ ಬಂದಿವೆ. ಮೌಲ್ಯಗಳೆನಿಸಿಕೊಳ್ಳವ ಎಲ್ಲವೂ ಆಯಾ ಕಾಲದ ಸಾಮಾಜಿಕ ವಾಸ್ತವಗಳನ್ನು ಆಧರಿಸಿಯೇ ರೂಪುಗೊಂಡು ಬಿಡುತ್ತವೆ ಎಂದೇನೂ ಇಲ್ಲ. ದ್ವಂದ್ವಗಳು ನಿರೂಪಿಸುವ ಸಮಾಜದ ಮೌಲ್ಯಗಳನ್ನು ಸಹಜ ವೈರುಧ್ಯಗಳನ್ನಾಧರಿಸಿ ಅರ್ಥ ಮಾಡಿಕೊಳ್ಳುವುದೊಳಿತು.

ಬುಡಕಟ್ಟು, ಆದಿವಾಸಿ, ಅರಣ್ಯವಾಸಿ, ಗಿರಿಜನ, ವನವಾಸಿ, ಪರಿಶಿಷ್ಠ ಪಂಗಡ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುವ ಆದಿಮ ಸಮಾಜಗಳು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇವೆ. ಕರ್ನಾಟಕದಲ್ಲಿ ಕೇಂದ್ರ ಸರಕಾರ 50 ಬುಡಕಟ್ಟುಗಳನ್ನು ‘ಅಧಿಕೃತವಾಗಿ’ ಪಟ್ಟಿ ಮಾಡಿದೆ.
ಹೀಗೆ ಪಟ್ಟಿ ಮಾಡಿದ ಬುಡಕಟ್ಟು ಸಮುದಾಯಗಳಿಗೆ ಸಂವಿಧಾನಬದ್ಧ ಸವಲತ್ತುಗಳನ್ನೂ ಪರಿಕಲ್ಪಿಸಲಾಗಿದೆ. ಘೋಷಣೆಗಳಲ್ಲಿ ಮತ್ತು ಆಶಯಗಳಲ್ಲಿಯೇ ಇರುವ ಸವಲತ್ತುಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ಈ ಸಮುದಾಯಗಳು ಕಾಯುತ್ತಲೇ ಇವೆ. ಆದಿವಾಸಿಗಳ ಕುರಿತು ಅಪಾರ ಪ್ರೇಮವನ್ನು ಹೊಂದಿರುವಂತೆ ನಡೆದುಕೊಳ್ಳುವ ಪ್ರಭುತ್ವ ಮಾತ್ರ ಈ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸುತ್ತಿರುವಂತೆ ನಟಿಸುತ್ತಿದೆ. ವಸಾಹತು ಕಾಲದಿಂದ ನಿರಂತರ ತಲ್ಲಣಗಳಿಗೆ ಈ ಸಮುದಾಯಗಳು ಒಳಗಾಗುತ್ತಲೇ ಬಂದಿವೆ. ಯಾಕೆ ಈ ಸಮುದಾಯಗಳು ನಿರಂತರ ಸಂಕಷ್ಟದಲ್ಲಿವೆ? ಈ ಸಮುದಾಯಗಳ ಸ್ವರೂಪವೇನು? ಎಂಬುದನ್ನು ನೋಡೋಣ.

‘ಬುಡಕಟ್ಟು’ ಮತ್ತು ‘Tribe’ ಎಂಬ ಪದಗಳ ನಿಷ್ಪತ್ತಿ ಹುಡುಕುತ್ತಾ ಅನೇಕ ಚರ್ಚೆಗಳು ನಡೆದಿವೆ. ಆದರೆ ಭಾರತದ ಆದಿಮ ಮತ್ತು ದುಡಿವ ಸಮಾಜಗಳನ್ನು ಹೆಸರಿಸುವ ಪ್ರತಿ ಪ್ರಯತ್ನದ ಹಿಂದೆ ಇಂಡಿಯಾದ ಸಾಂಸ್ಕøತಿಕ ರಾಜಕಾರಣ ಪ್ರಧಾನ ಪಾತ್ರವಹಿಸುತ್ತ ಬಂದಿದೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ನಾಲ್ಕು ವರ್ಣಗಳಿಗೂ ಲಗತ್ತಾಗದ ಸಮುದಾಯಗಳನ್ನು ನಿಷಾದರು, ದಶ್ಯುಗಳು, ವ್ಯಾದರು, ದಾಸರು, ಕಿರಾತರು, ಮತ್ಸ್ಯರು ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ. ಇಂಡಿಯಾದ ಸಮಾಜದ ನಾಲ್ಕು ವರ್ಣಗಳಿಗೆ ಸೇರದ ಪ್ರತ್ಯೇಕ ಗುಂಪಿನ ಸಮುದಾಯಗಳಿವು. ಪಾರಂಪರಿಕ ಇಂಡಿಯಾದ ಸಾಮಾಜಿಕ ಶ್ರೇಣೀಕರಣದಲ್ಲಿ ಉಲ್ಲೇಖಿಸಲೂ ಆಗದ ಜನವರ್ಗಗಳಿವು. ಇಂತಹ ಸಮುದಾಯಗಳನ್ನು ಈ ದೇಶದ ಪುರಾಣಗಳಲ್ಲಿ ರಾಕ್ಷಸರನ್ನಾಗಿ, ಕುರೂಪಿಗಳನ್ನಾಗಿ, ಕೋತಿಗಳನ್ನಾಗಿ, ಪ್ರಾಣಿಗಳನ್ನಾಗಿ ಮತ್ತು ಸಮಾಜದ ನಿಕೃಷ್ಟ ಕೆಲಸಗಳನ್ನು ನಿರ್ವಹಿಸಲೆಂದೇ ಹುಟ್ಟಿದ ಗುಲಾಮರನ್ನಾಗಿ ಚಿತ್ರಿಸತ್ತಾ ಬರಲಾಗಿದೆ.

ಇನ್ನು ಆಧುನಿಕ ಕಾಲಘಟ್ಟದಲ್ಲಿ ಜಗತ್ತಿನ ಒಡೆಯರಾಗಲು ಹೊರಟ ಯುರೋಪಿನ ಬಂಡವಾಳಿಗರು ಮತ್ತು ಬಂಡವಾಳಿಗರಿಗೆ ಬೌದ್ಧಿಕ ನೆರವು ನೀಡಲು ಬಂದ ವಿದ್ವಾಂಸರು ಮೂರನೇ ಜಗತ್ತಿನ ಈ ಸಮುದಾಯಗಳನ್ನು ಈ ದೇಶದ ಪುರಾಣಗಳಿಗಿಂತ ಭಿನ್ನವಾಗೇನು ಅರ್ಥೈಸಲಿಲ್ಲ. ಪುನರುಜ್ಜೀವನದ ನಂತರ ಯುರೋಪಿನ ದೇಶಗಳು ತಮ್ಮ ವಸಾಹತುಗಳನ್ನು ವಿಸ್ತರಿಸುವ ಸಲುವಾಗಿ ಆಕ್ರಮಿತ ಭೂಪ್ರದೇಶಗಳಲ್ಲಿನ ಜನರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಯುರೋಪಿನ ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿದ ಜನ ತಮ್ಮ ವಸಾಹತುಗಳಲ್ಲಿ ಜನಾಂಗಿಕ ಅಧ್ಯಯನಗಳನ್ನು ಪ್ರಾರಂಭಿಸಿದರು.

ಈ ಅಧ್ಯಯನಗಳಿಗೆ ‘ಎತ್ನೋಲಾಜಿಕಲ್’ ಅಧ್ಯಯನಗಳೆಂದು ಕರೆದರು. ಜನಾಂಗಿಕ ಶಾಸ್ತ್ರ, ಮಾನವ ಕುಲಶಾಸ್ತ್ರ ಎಂದು ಕನ್ನಡದಲ್ಲಿ ಕರೆಯಲ್ಪಡುವ ಈ ಶೈಕ್ಷಣಿಕ ಶಿಸ್ತು ಬಡುಕಟ್ಟುಗಳನ್ನು ಮತ್ತು ಆದಿಮ ಸಮಾಜಗಳನ್ನು ಅಧ್ಯಯನ ಮಾಡಲೆಂದೇ ಹುಟ್ಟಿದ ಶಾಸ್ತ್ರಶಿಸ್ತಾಗಿ ಇಂಡಿಯಾದಲ್ಲಿ ರೂಪಾಂತರಗೊಂಡಿತು. ಇದನ್ನು ಮೊದಲು Ethnology, Ethnography ಎಂಬ ಹೆಸರಿನಲ್ಲಿ ಅಧ್ಯಯನಕಾರರು ಬಳಸುತ್ತಿದ್ದರು. ಯುರೋಪಿನ ಜನ ಇಲ್ಲಿಗೆ ಬರುವ ಮೊದಲು ಇಂಡಿಯಾದಲ್ಲಿ ಈ Tribe ಅಥವಾ ಕನ್ನಡದಲ್ಲಿ ‘ಬುಡಕಟ್ಟು’ ಎಂಬ ಪದ ಬಳಕೆ ಇತ್ತು ಎಂದು ಕಂಡು ಬರುವುದಿಲ್ಲ.

ಬೆಟ್ಟದ ಕುರುಬ ಕುಂಡೆ ಹಬ್ಬ

ಬೆಟ್ಟದ ಕುರುಬ ಕುಂಡೆ ಹಬ್ಬ

ಈ ಕಾರಣದಿಂದ Tribe ಎಂಬ ಪದವನ್ನು ಯುರೋಪಿನವರು ತಮ್ಮ ಅಧ್ಯಯನದ ಸಂದರ್ಭದಲ್ಲಿ ಬಳಸಿದರು. (ಟ್ರೈಬಸ್ ಎಂಬ ಪದ ಗ್ರೀಕ್ ಮೂಲದ್ದು ಎಂಬ ವಾದವೂ ಇದೆ) ಇದಕ್ಕೂ ಮುನ್ನ Ethnic ಎಂಬ ಪದವನ್ನು ಯುರೋಪಿನ ಜನ ಈ ಸಮುದಾಯಗಳನ್ನು ಸಂಬೋಧಿಸುವಾಗ ಬಳಸುತ್ತಿದ್ದರು. ‘Ethnic’  ಎಂಬ ಪದವನ್ನು Race ಎಂಬ ಪದಕ್ಕೆ, ಇಲ್ಲವೆ Uncivilized ಎಂಬ ಪದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿತ್ತು. Ethnic ಅಂದರೆ ‘ಜನಾಂಗಿಕ’, ನಾಗರಿಕವಲ್ಲದ, ಮುಖ್ಯವಾಹಿನಿಯಿಂದ ಹೊರತಾದ ಅಥವಾ ಮಾನವ ವಿಕಾಸದ ಚರಿತ್ರೆಯಲ್ಲಿ ಸ್ಥಗಿತಗೊಂಡ ಹಂತದ ಜನಸಮುದಾಯಗಳನ್ನು ಸೂಚಿಸಲು ಈ ಪದವನ್ನು ಬಳಸಲಾಗಿದೆ. ಯುರೋಪಿನಿಂದ ಆಚೆಗಿರುವ ಮತ್ತು ವಸಾಹತು ರಾಷ್ಟ್ರಗಳಲ್ಲಿನ ಜನರು ಇನ್ನೂ Ethnic ಅಥವಾ ಜನಾಂಗಿಕ ಹಂತದಲ್ಲಿದ್ದಾರೆಂದು ಭಾವಿಸಿದ ಯುರೋಪಿನ ವಿದ್ವಾಂಸರು ಈ ಜನರನ್ನು ಸಂಭೋದಿಸುವಾಗ Ethnic ಎಂಬ ಪದವನ್ನು ಬಳಸಿದರು. ಹಾಗೆ ನೋಡಿದರೆ Ethnic ಎಂಬ ಪದವು ಯುರೋಪಿನ ‘ನಾಗರಿಕ’ ಗಣ್ಯತೆಯಿಂದ ಹುಟ್ಟಿದ ಪದವಾಗಿದೆ ಎಂದು ಬರ್ನಾರ್ಡ್ ಕ್ಹೋನ್ ಹೇಳುತ್ತಾರೆ.

ಅದಕ್ಕೇ ಇದನ್ನು ಮುಂದೆ Ethnography , ಮತ್ತು Ethnology, ಎಂಬ ಹೆಸರಿನ ಮೂಲಕ ಒಂದು ಶಿಸ್ತನ್ನಾಗಿ ರೂಪಿಸಲು ಯತ್ನಿಸಲಾಯಿತು. ಇದು ಮುಂದೆ Anthropology ಎಂಬ ಶೈಕ್ಷಣಿಕ ಶಿಸ್ತಿನಲ್ಲಿ ಹೆಚ್ಚೂ ಕಡಿಮೆ ಸೇರಿ ಹೋಯಿತು. ಆದರೆ ಇಂದಿಗೂ ಈ ಪದ ಬಳಕೆ ಮತ್ತು ಅಧ್ಯಯನಗಳು ನಡೆಯುತ್ತಲೇ ಇವೆ. ಆದರೆ ಅಲ್ಲಿಯವರೆಗೂ Ethnic ಮತ್ತು ‘Tribe’ ಎಂಬ ಪದಗಳು ಯುರೋಪ್ ಮತ್ತು ಯುರೋಪೇತರ ಜನಗಳನ್ನು ವಿಂಗಡಿಸುವ ಪದಗಳಾಗಿಯೇ ಬಳಕೆಯಲ್ಲಿದ್ದವು. ಮುಂದೆ ‘Tribe’ ಎಂಬ ಪದವು ಸ್ವತಂತ್ರ ಭಾರತದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಪರಿಭಾಷೆಯಾಗಿ ರೂಪಾಂತರಗೊಂಡಿತು. ಆಳಿತಾತಾತ್ಮಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ಕರೆಯಲ್ಪಟ್ಟ ಸಮುದಾಯಗಳು ಸ್ವಾತಂತ್ರ್ಯಪೂರ್ವ ಭಾರತವನ್ನು ಆಳಿದ ಯಜಮಾನರ ಕಲ್ಪನೆಗಳಿಗೆ ಅನುಗುಣವಾಗಿ ಪರಿಭಾವಿಸಲ್ಪಟ್ಟಿದ್ದವು. Scheduled Castes ಮತ್ತು Scheduled Tribes ಎಂಬ ವರ್ಗೀಕರಣವು ಈ ಗುಂಪಿಗೆ ಸೇರಿದ ಸಮುದಾಯಗಳನ್ನು ವಸಾಹತು ಆಡಳಿತ ನೋಡುವ ಕ್ರಮವನ್ನು ತೋರಿಸುತ್ತದೆ.

ಸ್ವಾತಂತ್ರ್ಯ ಬಂದ ಮೇಲೆ Scheduled Castes ಮತ್ತು Scheduled Tribes  ಎಂಬ ಪದಗಳು ವಸಾಹತು ಆಡಳಿತದ ಕೊಡುಗೆಗಳಾಗಿ ನಮ್ಮ ದೇಶದ ಆಡಳಿತದ ಒಳಗೂ ಸೇರಿ ಹೋದವು. ಆಡಳಿತದ ಈ ಎರಡೂ ಪರಿಭಾಷಿಕಗಳಿಗೂ, ಹೀಗೆ ಕರೆಯಲ್ಪಡುವ ಸಮುದಾಯಗಳಿಗೂ ಜನಾಂಗಿಕವಾಗಿ, ಚಾರಿತ್ರಿಕವಾಗಿ, ಸಾಂಸ್ಕøತಿಕವಾಗಿ ಮತ್ತು ತಾತ್ವಿಕವಾಗಿ ಯಾವ ಸಂಬಂಧವೂ ಇಲ್ಲ. ಕೆಲ ಸಮುದಾಯಗಳನ್ನು ಕೂಡು ಸಮಾಜದಿಂದ ಹೊರಗಿಟ್ಟು ಸಂಬೋಧಿಸುವ ಕಾರಣಕ್ಕೆ ಈ ‘ಪರಿಶಿಷ್ಟ’ ಎಂಬ ಪರಿಭಾಷೆಯನ್ನು ಬಳಸುತ್ತಾ ಬರಲಾಗಿದೆ. ಮುಂದೆ ಇದು ‘ಶಿಷ್ಟ-ಪರಿಶಿಷ್ಟ, ಮುಖ್ಯವಾಹಿನಿ-ಅಂಚಿನ ಸಮುದಾಯಗಳು, ಶಿಷ್ಟ-ಜಾನಪದ’ ಎಂಬ ಅತಿರೇಕದ ವಿಂಗಡಣೆಗಳಿಗೂ ಕಾರಣವಾಯಿತು. (ಮುಂದುವರೆಯುತ್ತದೆ)                                                                                                         ಚಿತ್ರಗಳು: ಲೇಖಕರವು

One Response to "ಬುಡಕಟ್ಟು ಮೀಮಾಂಸೆ-1 : ನಮ್ಮ ನೆಲ ನಮ್ಮ ಹಕ್ಕು"

  1. Prof Thumakuru Chandrakantha  November 14, 2015 at 12:00 pm

    Very informative and touching article with piercing language. Special thanks to the author Dr A S Prabhakar special compliments to Anikethana

    Reply

Leave a Reply

Your email address will not be published.