ಬೀಜ ನೆಟ್ಟವರಿಗೆ ಫಸಲಿನ ಅರಿವಿಲ್ಲವೇ ?

-ನಾ ದಿವಾಕರ

ಮಾತು ಮತ್ತು ಮೌನ ಎರಡೂ ವಿಭಿನ್ನ ವರ್ತನೆಗಳಾದರೂ ಕೆಲವು ಸಂದರ್ಭಗಳಲ್ಲಿ ಒಂದೇ ಅರ್ಥವನ್ನು ನೀಡುವ ವಿದ್ಯಮಾನಗಳಾಗುತ್ತವೆ.  ಪ್ರಾಚೀನ ಗಾದೆ ಮಾತಿನಂತೆ ಮೌನ ಸಮ್ಮತಿಯ ಲಕ್ಷಣವಾಗಬಹುದು. ಹಾಗೆಯೇ ಅಸಮ್ಮತಿಯ ಸೂಚನೆಯೂ ಆಗಿರಬಹುದು. “ ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ ಅಲ್ಲಿನ ಅನ್ಯಾಯ, ಅಸಮಾನತೆ ಮತ್ತು ದೌರ್ಜನ್ಯವನ್ನು ಪ್ರಶ್ನಿಸಿದರೆ ನೀವು ನನ್ನ ಸಂಗಾತಿ ” ಎಂದು ಕ್ಯೂಬಾ ಕ್ರಾಂತಿಯ ನಾಯಕ ಚೆಗುವಾರ ಹೇಳುತ್ತಾನೆ. ಇದೇ ಮಾತನ್ನ ಸೃಜನಾತ್ಮಕವಾಗಿ ವಿಸ್ತರಿಸಿದರೆ ಈ ಪ್ರಶ್ನಿಸುವ ಧೋರಣೆಯಿಂದ ಸಹಮಾನವರು ಮನುಕುಲದ ಸಂಗಾತಿಯಾಗಲೂ ಸಾಧ್ಯ. ಸಮಸ್ಯೆ ಇರುವುದು ಈ ಸಾಮಾಜಿಕ ವಿಲಕ್ಷಣಗಳಲ್ಲಿ ಅಲ್ಲ. ಸಮಕಾಲೀನ ಸಮಾಜದ ಗ್ರಹಿಕೆಯಲ್ಲಿ. ಅನ್ಯಾಯ, ದೌರ್ಜನ್ಯ, ಅಸಮಾನತೆ ಮತ್ತು ಶೋಷಣೆ ಈ ಎಲ್ಲ ವಿಲಕ್ಷಣಗಳು ಮನುಕುಲದ ಸರ್ವನಾಶಕ್ಕಾಗಿಯೇ ಸೃಷ್ಟಿಸಲಾಗಿರುವ ಅಸ್ತ್ರಗಳು.

malviyaಈ ಅಸ್ತ್ರಗಳನ್ನು ಮಾನವ ಸಹಜ ಗುಣ ಎಂದು ನೋಡುವವರೂ ಇದ್ದಾರೆ, ಸ್ವಾರ್ಥ ಸಮಾಜದ ಹಿತಾಸಕ್ತಿಗಳ ಅವಿಷ್ಕಾರ ಎಂದು ವಾದಿಸುವವರೂ ಇದ್ದಾರೆ.  ಕಪ್ಪು-ಬಿಳುಪು ತತ್ವದಡಿ ಯಾವುದೇ ಒಂದು ಸಾಮಾಜಿಕ, ಸಾಂಸ್ಕøತಿಕ ವಿದ್ಯಮಾನಕ್ಕೆ ಎರಡೇ ಆಯಾಮಗಳಿರುತ್ತವೆ ಎಂದು ಭಾವಿಸುವ ಸಾಂಪ್ರದಾಯಿಕ ಸಮಾಜದಲ್ಲಿ ಇಂತಹ ಅವಲಕ್ಷಣಗಳು, ವಿಲಕ್ಷಣಗಳು ಚಾರಿತ್ರಿಕ ಅನಿವಾರ್ಯತೆಗಳೋ, ಸಾಂದರ್ಭಿಕ ಅಪಭ್ರಂಶಗಳೋ ಆಗಿಬಿಡುತ್ತವೆ. ಈ ಗೊಂದಲಗಳ ನಡುವೆಯೇ ನಮ್ಮ ಸುತ್ತ ನಡೆಯುವ ದೌರ್ಜನ್ಯಗಳಿಗೆ ವ್ಯಕ್ತವಾಗುವ ಪ್ರತಿಸ್ಪಂದನೆಯನ್ನು ಗ್ರಹಿಸುವುದು ಅಗತ್ಯ. ಮಾತು ಮತ್ತು ಮೌನ ಇಲ್ಲಿ ಸಾಪೇಕ್ಷವಾಗುವುದಿಲ್ಲ.

ಭಾರತದ ಪ್ರಸ್ತುತ ಸಂದರ್ಭದಲ್ಲಿ ಈ ಗೊಂದಲಗಳು ಇನ್ನೂ ಕ್ಲಿಷ್ಟವಾಗುತ್ತಿರುವುದು ದುರಂತವಾದರೂ ಸತ್ಯ. ಯಾವುದೇ ಒಂದು ದೇಶದ ರಾಜಕಾರಣದಲ್ಲಿ ಸಂಸ್ಕøತಿ ಆ ದೇಶದ ಜನಸಂಸ್ಕøತಿ ಸಮ್ಮಿಳಿತಗೊಂಡರೆ ಅದು ಸಮಾಜದ ಪ್ರಜ್ಞಾವಸ್ಥೆಯನ್ನು ಜಾಗೃತಗೊಳಿಸುವ ಅಸ್ತ್ರವಾಗಬೇಕು. ಸಾಂಸ್ಕøತಿಕ ನೆಲೆಯ ರಾಜಕಾರಣದಲ್ಲಿ ಸಂಸ್ಕøತಿಯನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸುವ ಪ್ರಯತ್ನಗಳು ಸಮಾಜವನ್ನು ದಿಕ್ಕು ತಪ್ಪಿಸುತ್ತವೆ. ಸಂಕುಚಿತ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲ್ಪಡುವ ಸಂಸ್ಕøತಿಗೂ ಸಮಗ್ರ ದೃಷ್ಟಿಕೋನದ ವ್ಯಾಪಕ ಭೂಮಿಕೆಯಲ್ಲಿ ವ್ಯಾಖ್ಯಾನಿಸಲ್ಪಡುವ ಜನ ಸಂಸ್ಕøತಿಗೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸದೆ ಹೋದರೆ ಅಪಾಯ ಸನ್ನಿಹಿತ. ಇದು ಪ್ರಸ್ತುತ ಭಾರತದ ರಾಜಕಾರಣದಲ್ಲಿ ನಾವು ಕಾಣುತ್ತಿರುವ ದುರಂತವೂ ಹೌದು.  ಇಂದು ಭಾರತದಲ್ಲಿ ನಾವು ಕಾಣುತ್ತಿರುವ ಅಯೋಧ್ಯಾ ಪ್ರಣೀತ ಸಾಂಸ್ಕøತಿಕ ರಾಜಕಾರಣಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಮತ್ತು ಸಿದ್ದಾಂತ ಇದೆ. ಸಂಸ್ಕøತಿಯನ್ನು ಜನಸಾಮಾನ್ಯರ ನಿತ್ಯ ಜೀವನ, ಉಡುಪು, ಆಹಾರ ಪದ್ಧತಿ, ಪೂಜಾ ವಿಧಾನಗಳು ಹೀಗೆ ಪ್ರತಿಯೊಂದು ವರ್ತನೆಯಲ್ಲೂ ತಡಕಾಡುತ್ತಾ ಹೋದಾಗ ಧರ್ಮ-ಜಾತಿ ಮತ್ತು ಸಂಸ್ಕøತಿಗಳು ತಮ್ಮ ನಡುವಿನ ವ್ಯತ್ಯಾಸಗಳನ್ನು ಕಳೆದುಕೊಂಡು ಒಂದಾಗಿಬಿಡುತ್ತವೆ. ಆಗ ಬಹುಮುಖೀ ಸಂಸ್ಕøತಿಯ ಸ್ಥಾನವನ್ನು ಬಹುಸಂಖ್ಯಾತ ಸಂಸ್ಕøತಿ ಆಕ್ರಮಿಸಿ ತನ್ನ ಅಧಿಪತ್ಯ ಸಾಧಿಸಿಬಿಡುತ್ತದೆ. ಸಂಘಪರಿವಾರದ ಸಾಂಸ್ಕøತಿಕ ರಾಜಕಾರಣದಲ್ಲಿ ಇದರ ಛಾಯೆಯನ್ನು ಕಾಣಬಹುದು.

ಈ ಸಾಂಸ್ಕøತಿಕ ರಾಜಕಾರಣದ ಫಲವತ್ತಾದ ಭೂಮಿಯಲ್ಲಿ ಸೋಮನಾಥ ರಥದ ಮುಖೇನ ಅಯೋಧ್ಯೆಯ ಪಯಣದ ಸಂದರ್ಭದಲ್ಲಿ ಬಿತ್ತಲಾದ ಬೀಜಗಳು ಈಗ ಫಲ ನೀಡುತ್ತಿರುವುದನ್ನು ಗಮನಿಸಬೇಕು. ಈ ಬೀಜಗಳನ್ನು ಬಿತ್ತಿದ ಪ್ರಭೃತಿಗಳು ಈಗ ತೆರೆಮರೆಯಲ್ಲಿದ್ದಾರೆ. ರಥಯಾತ್ರೆ ಅಂತ್ಯಗೊಂಡು ಸಾರಥಿಗಳು ಬದಲಾಗಿದ್ದಾರೆ. ಆದರೆ ರಥದ ಹಾದಿ ಬದಲಾಗಿಲ್ಲ. ಸಾರಥಿಯ ಧ್ಯೇಯ ಬದಲಾಗಿಲ್ಲ. ಅಶ್ವಮೇಧ ಯಾಗದ ಉದ್ದಿಶ್ಯ ಬದಲಾಗಿಲ್ಲ. ಕಳೆದ 25 ವರ್ಷಗಳಲ್ಲಿ ಭಾರತದ ರಾಜಕೀಯ ಚಿತ್ರಣ ಬದಲಾಗಿದೆ, ಸಾಂಸ್ಕøತಿಕ ಚಿತ್ರಣ ಬದಲಾಗಿದೆ, ಸಾಮಾಜಿಕ ಚಿತ್ರಣವೂ ಬದಲಾಗಿದೆ. ಆದರೆ ಶೋಷಿತ ಸಮುದಾಯಗಳಿಗೆ, ಅವಕಾಶವಂಚಿತರಿಗೆ, ಸಾಮಾಜಿಕ ತುಳಿತಕ್ಕೊಳಗಾದ ಸಮುದಾಯಗಳಿಗೆ ಯಾವುದೂ ಬದಲಾಗಿಲ್ಲ. ಕಾರಣ ಸಾಂಸ್ಕøತಿಕ ರಾಜಕಾರಣ ತನ್ನ ವಿರಾಟ್ ಬಾಹುಗಳಲ್ಲಿ ಭರತಖಂಡದ ಸಾಮಾಜಿಕ ವಲಯವನ್ನು ಬಂಧಿಸಿಬಿಟ್ಟಿದೆ. ಈ ಸಾಂಸ್ಕøತಿಕ ರಾಜಕಾರಣದ ರಕ್ಷಣೆಗಾಗಿ 1998ರಿಂದಲೇ ವಿದ್ಯುಕ್ತವಾಗಿ ತರಬೇತಿ ಪಡೆದ ಕಾಲಾಳುಗಳು, ಯೋಧರು ಆಡಳಿತ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದ್ದಾರೆ. ಸೌಮ್ಯವಾದಿ ವಾಜಪೇಯಿ ಆಳ್ವಿಕೆಯಲ್ಲಿ ಆರಂಭವಾದ ತರಬೇತಿ ಶಿಬಿರಗಳು ಮೌನ ತಪಸ್ವಿ ಮೋದಿಯ ಆಳ್ವಿಕೆಯಲ್ಲಿ ಫಲಪ್ರದವಾಗುತ್ತಿದೆ.

raಹಾಗಾಗಿಯೇ ಈ ದೇಶದ ಸಂಸ್ಕøತಿಗೆ ಮಾನವೀಯತೆ,  ಮಾನವೀಯ ಮೌಲ್ಯ, ಮಾನವ ಪ್ರಜ್ಞೆ ಮತ್ತು ಸಾಮುದಾಯಿಕ ಪ್ರಜ್ಞೆ ರೂಪಕವೂ ಆಗಲಿಲ್ಲ, ಸಂಕೇತವೂ ಆಗಲಿಲ್ಲ. ಬದಲಾಗಿ ಅಮಾಯಕ ಪ್ರಾಣಿಯೊಂದು ಗೋವಿನ ರೂಪದಲ್ಲಿ ಸಂಕೇತವಾಗಿಬಿಟ್ಟಿದೆ. ಅಯೋಧ್ಯೆಯ ಭೂಮಿಕೆ ನಿರ್ಮಾಣವಾದ ಸಂದರ್ಭದಲ್ಲಿ ಗೋವನ್ನು ಗೌರವಿಸದೆ ಇರುವವರು ದೇಶದ್ರೋಹಿಗಳಾಗಿದ್ದರು. ಬಾಬ್ರಿಯ ನಂತರ ಗೋವನ್ನು ಪೂಜಿಸದೆ ಇರುವವರು ದೇಶಭ್ರಷ್ಟರಾದರು.  ವಾಜಪೇಯಿ ಆಳ್ವಿಕೆಯಲ್ಲಿ ಗೋರಕ್ಷಕರ ವಿದ್ಯುಕ್ತ ತರಬೇತಿ ಶಿಬಿರಗಳು ನೇಪಥ್ಯದಲ್ಲೇ ಯಶಸ್ವಿಯಾದ ನಂತರ ಈ ದೇಶಭ್ರಷ್ಟರನ್ನು ಹೆಕ್ಕಿ ತೆಗೆಯುವ ಕಾರ್ಯಪಡೆಗಳು ತಯಾರಾದವು. ಗೋದ್ರಾ ನಂತರದಲ್ಲಿ ಗೋಮಾಂಸ ಸೇವಿಸುವವರು ದೇಶ ಕಂಟಕರಾಗಿ ಪರಿಗಣಿಸಲ್ಪಟ್ಟರು. ನಮೋದ್ವೇಗ ಭರಿತ ಆಧುನಿಕ ಭಾರತದಲ್ಲಿ ಗೋಮಾಂಸವನ್ನು ಇಟ್ಟುಕೊಳ್ಳುವವರೂ ದೇಶ ಭಂಜಕರಾಗಿದ್ದಾರೆ. ಬಹುಶಃ ಇನ್ನು ಮುಂದಿನ ದಿನಗಳಲ್ಲಿ ಗೋವನ್ನು ಎದುರು ಕಂಡವರು ನಮಸ್ಕರಿಸದೆ ಹೋದರೆ ಶಿಕ್ಷೆಗೀಡಾಗಬಹುದು !  ಅರಾಜಕತೆಯಲ್ಲಿ ಎಲ್ಲವೂ ಸಾಧ್ಯ. ರಚ್ಚೆ ತಿಂದರೂ ಪರಿಶುದ್ಧ ಹಾಲು ನೀಡುವ ಗೋವು ಮಾತನಾಡುವಂತಿದ್ದರೆ- “ ನನಗೆ ಬೇಕಾದ್ದನ್ನು, ಬೇಡವಾದ್ದನ್ನು ಎಲ್ಲವನ್ನೂ ಆತ್ಮತೃಪ್ತಿಯಿಂದ ತಿನ್ನುತ್ತೇನೆ, ನನ್ನೊಳಗಿನ ಸಂಪನ್ಮೂಲವನ್ನು ಹಾಲಿನ ರೂಪದಲ್ಲಿ ನೀಡುತ್ತೇನೆ. ನನ್ನೊಳಗೆ ಇರುವ ಈ ಅಮೃತ ಹುಲು ಮಾನವರಿಗೆ ವಿಷ ಏಕಾಗುತ್ತದೆ ಹಾಲು ಕುಡಿದು ನನ್ನನ್ನು ಪೂಜಿಸುವವರು ವಿಷ ಕಕ್ಕುವುದು ಏಕೆ ?” ಎಂದು ಕೇಳಬಹುದೇನೋ.

ತಾವು ತಮ್ಮದೇ ಆದ ಸ್ವಾರ್ಥ ರಾಜಕಾರಣಕ್ಕಾಗಿ ಬಿತ್ತ ವಿಷ ಬೀಜಗಳು ಹೆಮ್ಮರವಾಗಿ ಬೆಳೆದು ವಿಕೃತ ಫಲ ನೀಡುತ್ತಿರುವುದನ್ನು ಕಂಡು ನಿಬ್ಬೆರಗಾಗಿರುವ ನಾಯಕರುಗಳು ಇತ್ತ ಫಸಲನ್ನು ಕಿತ್ತೊಗೆಯಲೂ ಆಗದೆ, ಬಿತ್ತ ನೆಲದೊಳಗಿನ ವಿಷಜಂತುಗಳನ್ನು ತೊಡೆದುಹಾಕಲೂ ಆಗದೆ , ಪ್ರೌಢಾವಸ್ಥೆಗೆ ಬಂದಿರುವ ಬೀಜಾಣುಗಳನ್ನು ನಾಶಪಡಿಸಲೂ ಆಗದೆ ತೊಳಲಾಡುತ್ತಿರುವಂತಿದೆ. ಹಾಗಾಗಿಯೇ ಗೋರಕ್ಷಕರು ಸಮಾಜಘಾತುಕರು ಎಂಬ ಘೋಷವಾಕ್ಯ ಮೊಳಗಿದೆ.  ಆದರೆ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಗೋರಕ್ಷಕ ಪಡೆಗಳು ರಾತ್ರಿಯೆಲ್ಲಾ ಸಮಾಜಘಾತುಕ ಕೃತ್ಯದಲ್ಲಿ ತೊಡಗಿ ಬೆಳಗಿನ ಹೊತ್ತಿನಲ್ಲಿ ಗೋರಕ್ಷಣೆ ಮಾಡುವವರಲ್ಲ. ಈ ಸಾಂಸ್ಕøತಿಕ ಆರಕ್ಷಕರ ಒಂದು ಸಂತತಿಯನ್ನೇ ಈ ದೇಶದಲ್ಲಿ ವ್ಯವಸ್ಥಿತವಾಗಿ ಬೆಳೆಸಲಾಗಿದೆ. ಬೆಳೆಸಲಾಗುತ್ತಿದೆ. ಯಾವುದೋ ಒಂದು ಧ್ಯೇಯ ಸಾಧನೆಗೆ ತಮ್ಮ ಸ್ವಪ್ರಜ್ಞೆ ಮತ್ತು ಸುಪ್ರಜ್ಞೆಯನ್ನು ಒತ್ತೆ ಇಟ್ಟಿರುವ ಈ ಯುವಕರು ಹರಕೆಯ ಕುರಿಗಳೇ ಆಗುತ್ತಾರೋ ಧರ್ಮ ಸಂರಕ್ಷಕರೇ ಆಗುತ್ತಾರೋ ಎನ್ನುವುದನ್ನು ಇತಿಹಾಸ ನಿರೂಪಿಸುತ್ತದೆ. ಆದರೆ ಇಲ್ಲಿ ಪ್ರಶ್ನೆ ಉದ್ಭವಿಸುವುದು ಬಿತ್ತದ ಬೀಜವನ್ನು ಕುರಿತು. ಈ ವಿಷಬೀಜಗಳನ್ನು ನಿವಾರಿಸುವುದು ಹೇಗೆ ? ನಮೋದ್ವೇಗದ ಭಾರತದಲ್ಲಿ ಇದಕ್ಕೆ ಉತ್ತರ ಇದೆಯೇ ?

Leave a Reply

Your email address will not be published.