ಬಿಸಿಲು ಬಯಲು ನೆಳಲು

-ಅರ್. ಗೋಪಾಲ ಕೃಷ್ಣ

ಲೇಖಕ ಶ್ರೀಪಾದ ಭಟ್‍ರವರು ಬರೆದಿರುವ ಹೊಸ ಅಲೆಯ ಸಿನಿಮಾಗಳ ಕುರಿತಾದ ಪುಸ್ತಕ ಬಿಸಿಲು ಬಯಲು ನೆಳಲು. ಸಿನಿಮಾಗಳ ಕುರಿತಾಗಿ ವಿಮರ್ಶೆಗಳು ಬರುತ್ತಿರುತ್ತವೆಯಾದರೂ ಒಂದು ಸೈದ್ದಾಂತಿಕ ಗ್ರಹಿಕೆಯ ಹಿನ್ನಲೆಯಲ್ಲಿ ವಿಮರ್ಶೆಯಾಗುವುದು ಕಡಿಮೆ; ಈ ಕಾರಣದಿಂದಾಗಿ ಹೊಸ ಅಲೆಯ ಸಿನಿಮಾ ಕುರಿತಾದ ಈ ಬರವಣಿಗೆ ವಿಶಿಷ್ಟವೆನಿಸುತ್ತದೆ. ಮನರಂಜನಾತ್ಮಕವಾಗಿಯೇ ಬಹುಜನ ಸಿನಿಮಾಗಳನ್ನು ಗುರ್ತಿಸುವುದರ ಪರಿಣಾಮವಾಗಿ ಸಿನಿಮಾದ ಚಿಂತನಾ ಆಯಾಮ ಸಂಕುಚಿತಗೊಂಡಂತೆ ಭಾಸವಾದರೂ ಹೊಸ ಅಲೆಯ ಸಿನಿಮಾಗಳು ಜನರ ಮನಸ್ಸಿನಲ್ಲಿ ಉಂಟುಮಾಡಿರುವ, ಮಾಡಬಹುದಾದಂತಹ ಯೋಚನೆಗಳನ್ನು ಈ ಪುಸ್ತಕ ಓದುಗರಿಗೆತೆರೆದಿಡುತ್ತದೆ.

imageನಿಯೋ-ರಿಯಲಿಸಂನ ಕಾಲಘಟ್ಟದಲ್ಲಿ ಸಿನಿಮಾಗಳ ಕುರಿತು ಪಾಶ್ಚಾತ್ಯ ದೇಶಗಳಲ್ಲಾದ ಚಿಂತನೆ ಮತ್ತು ವಿಶಿಷ್ಟ ಪ್ರಯೋಗಳು, ಭಾರತದ ಮೇಲಾದ ಅದರ ಪರಿಣಾಮ, ಪ್ರಗತಿಗಾಮಿ ಚಳುವಳಿ ಹುಟ್ಟು, ಹೊಸ ಅಲೆಯ ಸಿನಿಮಾಗಳ ಬೆಳವಣಿಗೆ, ಜನಸಾಮಾನ್ಯರನ್ನು ಆಕರ್ಷಿಸಿದ ರೀತಿ ಮತ್ತು ನಿರ್ದೇಶಕರ ಸಾಮಾಜಿಕ ಪ್ರಜ್ಞೆ ಇವುಗಳನ್ನೆಲ್ಲಾ ವಿವರಿಸಲಾಗಿದೆ. 19ನೇ ಶತಮಾನದ ಆರಂಭದ ಕಾಲದಿಂದ ಹಿಡಿದು 21ನೇ ಶತಮಾನದ ವರೆಗೂ ಹೊಸಅಲೆಯ ಸಿನಿಮಾಗಳ ಬೆಳವಣಿಗೆ, ಪ್ರಯೋಗಗಳ ಬಗ್ಗೆ ವಿವರಣೆ ಇರುವುದು ಕಾಣಬಹುದು.

ಇಟಲಿ, ಫ್ರಾನ್ಸ್ ನಂತಹ ದೇಶಗಳಲ್ಲಿ ಉಂಟಾದ ಸಾಮಾಜಿಕ ಆಂದೋಲನ, ರಾಜಕೀಯ ಬೆಳವಣಿಗೆ, ಇವುಗಳ ಕಾರಣದಿಂದ ಉಂಟಾದ ಅವಸ್ಥೆಗಳು, ಸುಧಾರಣೆಗಳು, ಇದರ ನಡುವೆ ಬದುಕುವ ಸಾಮಾನ್ಯ ಜನರು ಇವುಗಳನ್ನೆಲ್ಲಾ ತೋರಿಸಿದ್ದು ನಿಯೋರಿಯಲಿಸಂ ಸಿನಿಮಾ ಎನಿಸಿ ಕೊಂಡಿತ್ತು ಈ ಕಾಲದಲ್ಲಿ ಬಂದಂತಹ ಸಿನಿಮಾ, ಅದರ ವಸ್ತು ಮತ್ತು ಆರಿಸಿ ಕೊಂಡಂತಹ ನಟ ನಟಿಯರು ಇವೆಲ್ಲಾ ಮುಖ್ಯಧಾರೆಯ ಸಿನಿಮಾಗಿಂತ ಹೇಗೆ ಭಿನ್ನವಾಗಿ ಜನಸಾಮಾನ್ಯರನ್ನು ಆಕರ್ಷಿಸಿತು; ಎಂಬುದು ಇಲ್ಲಿ ಕಾಣಬಹುದು.

ಪುಸ್ತಕವನ್ನು ಮುಖ್ಯವಾಗಿ ಎರಡು ಅಧ್ಯಾಯಗಳಲ್ಲಿ ಓದಬಹುದು. ಮೊದಲನೆ ಭಾಗದಲ್ಲಿ ಪಾಶ್ಚ್ಯಾತ್ಯ ಮತ್ತು ಭಾರತದ ಪ್ರಾದೇಶಿಕ ಸಿನಿಮಾಗಳ ಹೊಸ ಪ್ರಯೋಗಗಳ ಕುರಿತಾದದ್ದು. ಪ್ರಾರಂಭಕಾಲದ ನಿಯೋರಿಯಲಿಸಂ, ಅದರ ಆರಂಭದಕಾಲದ ಚಿತ್ರಗಳು, ಅಲ್ಲಿನ ನಿರ್ದೇಶಕರು, ಚಿತ್ರದಕಲ್ಪನೆ, ವಸ್ತು ಮತ್ತು ಪ್ರಾದೇಶೀಕ ಭಾಷೆಗಳಾದ ಬೆಂಗಾಲಿ, ತಮಿಳು, ಮಲಯಾಳಂ, ಮರಾಠಿ, ತೆಲುಗು, ಕನ್ನಡ ಭಾಷೆಗಳಲ್ಲಿ ಬಂದಂತಹ ಹೊಸ ಅಲೆಯ ಸಿನಿಮಾಗಳು, ನಿರ್ದೇಶಕರು ಇವುಗಳನ್ನೆಲ್ಲಾ ವಿವರಿಸಿರುವುದು ಮೊದಲಭಾಗದಲ್ಲಿ.

ಈ ಭಾಗದಲ್ಲಿ ಕಾಣಬಹುದಾದ ಒಂದು ಮುಖ್ಯ ಅಂಶವೆಂದರೆ ‘ಸಮಾಜದ ಯೋಚನೆ ಬದಲಾವಣೆಯಾಗುವುದು ಎಂದರೆ ಅಲ್ಲಿನ ಸಮಾಜದ ಎಲ್ಲಾ ಅಂಗಾಂಗಗಳೂ, ಚಟುವಟಿಕೆಗಳೂ ಮತ್ತು ಆ ಸಮಾಜದ ಸದಸ್ಯರು ಬಯಸುವ ಅಗತ್ಯತೆಗಳೂಬದಲಾಗುತ್ತವೆಎಂಬುದು’ ಇದು ಆಯಾಕಾಲದ, ಪ್ರದೇಶದ ಸಿನಿಮಾಗಳ ಮೇಲೆ ಯಾವರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಲೇಖಕರು ಗುರ್ತಿಸಿರುವುದನ್ನು ಕಾಣಬಹುದು. ಹೊಸ ಅಲೆಯ ಚಿತ್ರಗಳನ್ನು ಇಲ್ಲಿ ಗಮನಿಸಿರುವುದು ಸಮಾಜದ ಜೊತೆಗಿನ ಸ್ಪಂದನೆಗಾಗಿ, ಮುಖ್ಯಧಾರೆಯ ಸಿನಿಮಾಗಳು, ಮೆಲೋಡ್ರಾಮಾಗಳು ಜನರೊಂದಿಗೆ ಸ್ಪಂದಿಸುತ್ತವೆಯಾದರೂ ಅದು ಮನರಂಜನೆಯಲ್ಲಿ, ಹಾಸ್ಯದಲ್ಲಿ ಮಾಯವಾಗುವ ಸಂಭವವಿರುತ್ತದೆ. ಈ ರೀತಿ ಮನರಂಜನೆಯಲ್ಲಿ ಭಾವನೆ, ಸಾಮಾಜಿಕ ಕಳಕಳಿ ವiರೆಯದರೀತಿಯಲ್ಲಿ ಹೊಸ ಅಲೆಯ ಸಿನಿಮಾಗಳು ಜನರನ್ನುತಲುಪುವುದು, ತಲುಪಿಸುವುದು ಸವಾಲಿನ ಕೆಲಸ. ಇದಕ್ಕೆ ನಿದರ್ಶನಗಳನಗಳನ್ನು ಕೊಡುತ್ತಾರುತ್ವಿಕ್‍ಘಟಕ್, ಸತ್ಯಜಿತ್‍ರೇ, ಡಿ ಸಿಕಾ, ಜಾನ್‍ಅಬ್ರಾಹಂ, ನಾಗ್ರಜ ಮಂಜಲೆ ಮುಂತಾದ ನಿರ್ದೇಶಕರ ಸಿನಿಮಾಗಳು ಸಮಾಜದಯಾವಯಾವ ವರ್ಗದ, ಯಾವಯಾವ ವಿಷಯದಕುರಿತಾದ ಸಿನಿಮಾಗಳು ಎಂಬುದನ್ನು ವಿವರಿಸಿದ್ದಾರೆ.

ಒಂದು ಚಿಂತನಾಧಾರೆಯ ಮೂಲಕ ಸೃಷ್ಟಿಗೊಳ್ಳುವ ಸಿನಿಮಾ ಜನಾಕರ್ಷಣೆಗೆ ಒಳಗಾಗಲು ಅನೇಕ ರೀತಿಯ ತೊಂದರೆಗಳಿರುತ್ತವೆ, ಮೆಲೋಡ್ರಾಮ ನಂತಹ ಸಿದ್ದ ಚೌಕಟ್ಟನ್ನು ಬಾಂಬೆ ಪಾರ್ಮುಲದಂತಹ ಆಕರ್ಷಕ ಚೌಕಟ್ಟನ್ನು ಮೀರಿ ಸಿನಿಮಾ ನಿರ್ಮಾಣವಾದಾಗ ಅದು ಗೆಲ್ಲುತ್ತದೆಯೇ?ಎಂಬ ಸಂಶಯಗಳೊಂದಿಗೆ ಸಂದೇಶ ಜನರಿಗೆತಟ್ಟುತ್ತದೆಯೇ ಎಂಬಂತಹ ಮುಖ್ಯ ಪ್ರಶ್ನೆಗಳು ಹೊಸ ಅಲೆಯ ಸಿನಿಮಾಗಳ ಕುರಿತು ಬರದೇ ಇರದು; ಆದರೂ ಜನರನ್ನು ಆಕರ್ಷಿಸಿ ಹೇಳಬೇಕಾದ ವಿಷಯ ಹೇಳಿ ಯಶಸ್ವಿ ಯಾಗುವುದು ಸವಾಲಿನ ಕೆಲಸಇದಕ್ಕೆ ಬೆಂಗಾಲಿ, ತಮಿಳು, ಮಲಯಾಳಂ ಭಾಷೆಗಳ ಹೊಸಲೆಯ ಸಿನಿಮಾಗಳನ್ನು ಉದಾಹರೆಣೆ ನೀಡುತ್ತಾರೆ.

ಇನ್ನೊಂದು ಮುಖ್ಯವಾದ ಅಂಶ ಈ ಪುಸ್ತಕವನ್ನು ಓದಿದ ನಂತರ ಅನ್ನಿಸುವುದು; ಸಿನಿಮಾ ಜನರನ್ನುಯಾವ ಉದ್ದೇಶಕ್ಕಾಗಿ ಆಕರ್ಷಿಸಬೇಕು? ಎಂಬುದು. ಅದು ಕೇವಲ ಮನರಂಜನೆಯೇ ಜನರ ಭ್ರಮೆ, ಅಥವಾ ವಾಸ್ತವದ ಭೀಕರತೆಯನ್ನು ಮರೆಸುವ ಸಾಧನವಾಗಿ? ಇಂತಹ ಅನೇಕ ಪ್ರಶ್ನೆಗಳನ್ನಿಟ್ಟುಕೊಂಡು ಲೇಖಕರುಚರ್ಚಿಸುತ್ತಾರೆ

ಮೊದಲ ಭಾಗದಲ್ಲಿ ಲೇಖಕರು ಹೇಳಬೇಕಾದ ಹೊಸ ಅಲೆಯ ಸಿನಿಮಾಗಳ ಬಗೆಗೆ ಒಂದು ಸೈದ್ದಾಂತಿಕ ನಿರೂಪಣೆ ಇದೆ. ಮುಂದಿನ ಭಾಗದಲ್ಲಿ ಈಗ್ರಹಿಕೆಯ ಮೂಲಕ ತಾವು ನೋಡಿರುವ ಸಿನಿಮಾಗಳನ್ನು ವಿಮರ್ಶಿಸಿದ್ದಾರೆ.ಅದುಕತೆಯ, ನಿರ್ದೇಶನದ, ಸಾಮಾಜಿಕ ವಾಸ್ತವತೆಯ ಜೊತೆಗೆ ಆಯಾ ಕಾಲಘಟ್ಟದ ಪ್ರಯತ್ನಗಳ ಕುರಿತು ಯೋಚಿಸಿರುವುದನ್ನು ಕಾಣಬಹುದು.

mrinalಎರಡನೇಭಾಗದಲ್ಲಿ ಭಾರತದ ಹೊಸ ಅಲೆಯ ಸಿನಿಮಾಗಳಲ್ಲಿ ಕೆಲವು ಮುಖ್ಯ ಸಿನಿಮಾಗಳನ್ನು ವಿಮರ್ಶಿಸಿದ್ದಾರೆ.
ರುತ್ವಿಕ್ ಘಟಕ್, ಸತ್ಯಜಿತ್‍ರೇ, ಗಿರೀಶ್ ಕಾಸರವಳ್ಳಿ, ಮೃಣಾಲ್ ಸೇನ್, ಎಂ ಎಸ್ ಸತ್ಯು, ಶಾಂಬೆನಗಲ್, ಶಾಂತಾರಾಂ, ಬಿ ವಿ ಕಾರಂತ್, ಗೋವಿಂದ ನಿಹಲಾನಿ, ಪರಾಂಜಪೆ, ಕೇತನ್ ಮೆಹ್ತ, ಮೀರಾನಾಯರ್, ಜಾನ್‍ಅಬ್ರಾಹಂ, ತಮ್ಹಾನೆ, ನಾಗ್ರಾಜ ಮಂಜಲೆರವರು ನಿರ್ದೇಶಿಸಿದ ಸಿನಿಮಾಗಳ ಬಗ್ಗೆ ಬರೆಯಲಾಗಿದೆ. ಈ ಎಲ್ಲಾ ಸಿನಿಮಾಗಳಲ್ಲಿ ನಿಯೋರಿಯಲಿಸಂ ಹಾಗೂ ಪ್ರಗತಿಪರ ಚಿಂತನೆಗಳು ಆ ಸಿನಿಮಾ ನಿರ್ದೇಶಕರು ಬಳಸಿರುವ ನೂತನ ಪ್ರಯೋಗಗಳನ್ನು ಗುರ್ತಿಸಿದ್ದಾರೆ.

ಪ್ರಗತಿಪರ ಯೋಚನೆಯುಳ್ಳ ನಿರ್ದೇಶಕರು, ಅವರುಆಯ್ಕಮಾಡುವ ಚಿತ್ರಕತೆ, ನಟ-ನಟಿಯರು, ಹೀಗೆ ಪ್ರತಿಯೊಂದನ್ನು ಸಂದರ್ಭಕ್ಕೆತಕ್ಕಂತೆ ಚರ್ಚಿಸಿದ್ದಾರೆ.ಕನ್ನಡ ಚಿತ್ರಗಳು ಈ ಸಂಧರ್ಭವನ್ನು ಮುಖಾಮುಖಿ ಯಾದ ಸಂದರ್ಭ, ಕನ್ನಡದ ಹೊಸಪ್ರಯೋಗಗಳು ಸಹ ಗುರ್ತಿಸಿದ್ದಾರೆ, ಕನ್ನಡ ಹೊಸ ಅಲೆ ಸಿನಿಮಾ ಬೇರೆಭಾಷೆಗಳ ಸಿನಿಮಾಗಳಂತೆ ಮುಖ್ಯ ನೆಲೆಗೆ ಬಾರದಿರುವುದರ ಬಗೆಗೂ ಬರೆದಿದ್ದಾರೆ.

ಈ ಪುಸ್ತಕ ಅನೇಕ ಸೈದ್ದಾಂತಿಕ ಯೋಚನೆಗಳ ಹಿನ್ನಲೆಯಲ್ಲಿ ಬರೆದರೂ ಅದು ಓದುಗರಿಗೆ ಸರಳವಾಗಿ ಅಥೈಸುವ ದಾಟಿಯಲ್ಲಿರುವುದು ಬಹಳಮುಖ್ಯವಾಗಿ ಗಮನಿಸಬೇಕಾದದ್ದು ಹಾಗೆಯೇ ವಿಮರ್ಶೆಯ ದೃಷ್ಟಿಯಿಂದ ವಿಮರ್ಶಕ ಒಂದು ಕಾಲಘಟ್ಟದಲ್ಲಿ ನಿಂತು ಬರೆಯುತ್ತಿರುತ್ತಾನೆಯಾದರೂ…ಆತ ಕಳೆದು ಹೋದಕಾಲದಲ್ಲಿ ಚಲಿಸುತ್ತಾ ವಾಸ್ತವದ ಸಂದರ್ಭಕ್ಕೆ ಮರಳಿ ಪುನರಾವಲೋಕನ ಮಾಡುತ್ತಾನೆ. ಹಾಗೆ ಮಾಡದಿದ್ದಲ್ಲಿ ಆ ವಿಮರ್ಶಕ ಸಫಲನಾಗುವುದು ಕಡಿಮೆ. ಈ ಪುಸ್ತಕದಲ್ಲಿ ಲೇಖಕರು ವಾಸ್ತವವನ್ನು ಹಿಂದಿನ ಕಾಲದ ಚಿಂತನೆಯಜೊತೆ ಪರಾಮರ್ಶಿಸಿದ್ದಾರೆ…

ಸಿನಿಮಾ ಕುರಿತ ಗಂಭೀರ ಚಿಂತನೆಯುಳ್ಳ ಪುಸ್ತಕ ಹಾಗೆಯೇ ಮುನ್ನುಡಿಯಲ್ಲಿ ವಿ ಬಿ ತಾರಕೇಶ್ವರ್‍ರವರು ಹೇಳಿರುವ ಹಾಗೆ ಸಾಮಾಜಿಕ ಬದ್ದತೆಯುಳ್ಳ ಚಿತ್ರ ನೋಡುಗರಾಗಿ ಲೇಖಕರು ವಿಮರ್ಶೆಯ ಮುಖ್ಯ ವಿಚಾರವನ್ನುಓದುಗರೊಂದಿಗೆ ಚರ್ಚಿಸಿದ್ದಾರೆ.

One Response to "ಬಿಸಿಲು ಬಯಲು ನೆಳಲು"

  1. ಗೋದೂರು ಪ್ರಸನ್  December 23, 2016 at 8:50 am

    ಒಳ್ಳೆ ಲೇಖನ. .ಇಷ್ಟವಾಯ್ತು

    Reply

Leave a Reply

Your email address will not be published.