ಬಿಜೆಪಿಯ ಹತಾಷ ರಾಜಕೀಯ

 ಅನು: ಶಿವಸುಂದರ್ 

ಬಿಜೆಪಿ ನಡೆಸುತ್ತಿರುವ ಹತಾಷ ರಾಜಕೀಯದ ಮೂಲ ಹೇಗಾದರೂ ಸರಿ ಅಧಿಕಾರಕ್ಕೆ ಮರಳಿ ಬರಲೇಬೇಕೆಂಬ ಹಪಾಹಪಿಯಲ್ಲಿದೆ.

ಚುನಾವಣಾ ರಾಜಕಾರಣದಲ್ಲಿ ವಿರೋಧಪಕ್ಷಗಳ ನಡುವೆ ಸೌಹಾರ್ದತೆ ಮತ್ತು ಮೈತ್ರಿಯನ್ನು ಬಲಪಡಿಸುವ ಕಡೆ ನಡೆಯುವ ಪ್ರತಿಯೊಂದು ಬೆಳವಣಿಗೆಗಳನ್ನು ಬಿಜೆಪಿ ಪಕ್ಷವು ತನ್ನ ಚುನಾವಣಾ ಸಾಧನೆಗೆ ಎದುರಾಗುವ ಆಪತ್ತೆಂದೇ ಪರಿಭಾವಿಸುತ್ತಿದೆ. ಹೀಗಾಗಿ ಇಂಥ ಪರಿಭಾವಿಸಲ್ಪಟ್ಟ ಆಪತ್ತನ್ನು ಎದುರಿಸಲು ಬಿಜೆಪಿಯು ಯಾವ ರಾಜಕೀಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ವಿರೋಧಿ ಬಣದ ಐಕ್ಯತೆಯ ಪ್ರಭಾವವನ್ನು ಇಲ್ಲವಾಗಿಸಲು ಬಿಜೆಪಿ ತೆಗೆದುಕೊಳ್ಳುತ್ತಿರುವ ಗುಪ್ತ ಹಾಗೂ ಅತಿ ನಗ್ನ ಕ್ರಮಗಳೆರಡೂ ನೈತಿಕವಾಗಿ ಹಾನಿಕಾರಕವಾದ ಕ್ರಮಗಳಾಗಿವೆ. ಸಾರ್ವಜನಿಕ ಜೀವನದ ಕೀಲಕ ಕ್ಷೇತ್ರಗಳಲ್ಲಿ ಕಾಣುತ್ತಿರುವ ಸರ್ಕಾರದ ವೈಫಲ್ಯವನ್ನು ಸಕಾರಣವಾಗಿ ಟೀಕಿಸುವರೆಲ್ಲರ ಮೇಲೂ ಅದು ಇದೇ ಕ್ರಮಗಳನ್ನು ಅನುಸರಿಸುತ್ತಿರುವಂತೆ ಕಾಣುತ್ತದೆ.

ಮಧ್ಯಂತರ ಬಜೆಟ್ಟಿನಲ್ಲಿರುವ ಅನಗತ್ಯವಾದ ಜನಾನುರಾಗಿ ಕಾರ್ಯಕ್ರಮಗಳು, ತನ್ನ ವಿರೋಧಿಗಳ ಬಗೆಗಿನ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡ ದಾಖಲೆಯನ್ನು ತಯಾರು ಮಾಡಿಕೊಂಡು ಅಗತ್ಯ ಬಂದಾಗ ಪ್ರಯೋಗಿಸುವುದು, ಕಾಲವಲ್ಲದ ಕಾಲದಲ್ಲಿ ಸಿಬಿಐನಂಥಾ ತನಿಖಾ ಸಂಸ್ಥೆಗಳನ್ನು ಅಸಾಧಾರಣವಾಗಿ ಬಳಕೆ ಮಾಡುವುದು, ಮತ್ತು ಅಂತಿಮವಾಗಿ ತನ್ನ ವಿರೋಧಿಗಳ ಮೇಲೆ ಪದಗಳ ಪ್ರಹಾರ ಮಾಡಿ ಪದಾಘಾತಕ್ಕೊಳಪಡಿಸುವುದು ಅದು ಅನುಸರಿಸುತ್ತಿರುವ ಕೆಲವು ಕ್ರಮಗಳಾಗಿವೆ. ಇಂಥಾ ಕ್ರಮಗಳ ರಾಜಕೀಯ ಬಳಕೆಯು ಅದರ ಹತಾಷ ಮನೋಸ್ಥಿತಿಯನ್ನಷ್ಟೇ ಸೂಚಿಸುತ್ತದೆ. ವಿರೋಧಿ ಪಾಳಯಕ್ಕಿಂತ ತನ್ನ  ಪರಿಸ್ಥಿತಿಯನ್ನು ಬಲಯುತವಾಗಿ  ಮಾಡಬಹುದಾದ ಯಾವುದೂ ಸಹ  ಬಿಜೆಪಿ ಬಳಿ ಇಲ್ಲದಿರುವುದರಿಂದಲೇ ಬಿಜೆಪಿ ಇಂಥಾ ಹೀನಾಯ ನಡೆಗಳನ್ನನುಸರಿಸುತ್ತಿದೆಯೆಂದು  ಅರ್ಥಮಾಡಿಕೊಳ್ಳಬಹುದಾಗಿದೆ.

ತನ್ನ ಆಡಳಿತದ ನಾಲ್ಕೂವರೆ ವರ್ಷಗಳ ಯಾವ ಸಾಧನೆಗಳೂ ತನ್ನ ಬೆಂಬಲಕ್ಕೆ ಬರುವಂತೆ ಕಾಣುತ್ತಿಲ್ಲವೆಂಬುದು ಬಿಜೆಪಿಗೆ ಅರ್ಥವಾಗಿದೆ. ೨೦೧೪ರ ಚುನಾವಣಾ ವಿಜಯದಲ್ಲಿ ಅದು ಗಳಿಸಿಕೊಂಡ ಆತ್ಮವಿಶ್ವಾಸದ ಬಲೂನಿಗೆ ಇತ್ತಿಚೆಗೆ ನಡೆದ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಮುಳ್ಳುಚುಚ್ಚಿದೆ. ಹೀಗಾಗಿ ಬಿಜೆಪಿಯು ಕಷ್ಟಪಟ್ಟು ಗಳಿಸಬೇಕಾದದ್ದನ್ನು ತಂತ್ರ-ಕುತಂತ್ರಗಳಿಂದ ಪಡೆದುಕೊಳ್ಳಲು ಯತ್ನಿಸುತ್ತಿದೆ. ಯಾವುದೇ ವಿಶ್ವಾಸಾರ್ಹ ಸಾಧನೆಗಳು ಬೆನ್ನಿಗಿಲ್ಲದ ಕಾರಣ ಬಿಜೆಪಿಯು ಇತರೆ ಮಾರ್ಗಗಳಿಂದ ವಿರೋಧಿಗಳನ್ನು ಹಣಿಯಲು ಯತ್ನಿಸುತ್ತಿದೆ.

ಎಲ್ಲಕ್ಕಿಂತ ನಿರ್ದಿಷ್ಟವಾಗಿ ಹೇಗಾದರೂ ಸರಿ ಅಧಿಕಾರದಲ್ಲುಳಿಯಬೇಕೆಂಬ ಹಪಾಹಪಿಯೇ ಚುನಾವಣಾ ಭೀತಿಯಿಂದ ಹೊರಬರಬಹುದಾದ ಸಾಧನಗಳನ್ನು ಹುಡುಕುವಂತೆ ಮಾಡುತ್ತದೆ. ಅದರ ಹತಾಷೆಯು ಮೂರು ಹಂತಗಳಲ್ಲಿ ವ್ಯಕ್ತವಾಗುತ್ತದೆ. ಮೊದಲನೆಯದಾಗಿ ಬ್ಯಾಂಕ್ ಮೋಸ ಮಾಡಿ ಪರಾರಿಯಾಗಿದ್ದ ವಂಚಕನನ್ನು ಲಂಡನ್‌ನಿಂದ ಹೊರದಬ್ಬುವಂತೆ ಮಾಡಿ ವಾಪಸ್ ಕರೆತರುತ್ತಿರುವುದು ತಮ್ಮ ಸರ್ಕಾರದ ಸಾಧನೆಯೆಬಂತೆ ಈಗಾಗಲೇ ಅದರ ವಕ್ತಾರರು ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಆ ಹೆಗ್ಗಳಿಕೆಯಲ್ಲಿ  ಒಂದು ಅಂತರ್ಗತ ಸಮಸ್ಯೆ ಇದೆ. ಏಕೆಂದರೆ ಆ ವಂಚಕನನ್ನು ಹೊರದಬ್ಬುವಂತೆ ಮಾಡಲಾಗಿರುವುದು ಸರ್ಕಾರದ ಸಾಧನೆಯನ್ನು ಎಷ್ಟು ಬಹಿರಂಗಪಡಿಸುತ್ತಿದೆಯೋ ಅದಕ್ಕಿಂತ ಹೆಚ್ಚು ಸರ್ಕಾರಿ ವೈಫಲ್ಯಗಳನ್ನು ಬಚ್ಚಿಡುತ್ತಿದೆ. ವಂಚಕನನ್ನು ಮರಳಿ ಕರೆತರುತ್ತಿರುವುದು ಪ್ರಕ್ರಿಯೆಯೊಂದರ ಫಲಿತಾಂಶವಷ್ಟೆ.

ಆದರೆ ಅದರ ಹಿಂದಿನ ಪ್ರಕ್ರಿಯು ಇಂಥಾ ವಂಚಕರು ಹುಟ್ಟಿಕೊಳ್ಳುವಲ್ಲಿ ಸರ್ಕಾರದ ಪಾತ್ರವು ಒಳಗೊಂಡಿರುವುದನ್ನು ಮುಚ್ಚಿಡುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯಾವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ತಮ್ಮ ಸರ್ಕಾರ ಯಶಸ್ವಿಯಾಯಿತೆಂದು ಹೇಳಲಾಗುತ್ತಿದೆಯೋ ಆ ಸಮಸ್ಯೆ ಸೃಷ್ಟಿಯಲ್ಲಿ ಇದೇ ಸರ್ಕಾರದ ಪಾತ್ರವಿತ್ತೆಂಬ ವೈರುಧ್ಯವನ್ನು ಸರ್ಕಾರವು ಒಪ್ಪಿಕೊಳ್ಳಲು ತಯಾರಿಲ್ಲ. ಆದರೆ ರಾಜಕಾರಣದಲ್ಲಿ ಮುಖ್ಯವಾಗುವುದು ಅಂತಿಮ ಫಲಿತಾಂಶವೇ ಆದ್ದರಿಂದ ಸರ್ಕಾರವು ಇಂಥಾ ವಂಚನೆಯು ಆಗಗೊಡದಂತೆ ತಡೆಯುವುದರಲ್ಲಿನ ತನ್ನ ವೈಫಲ್ಯದ ಆಪಾದನೆಗಳಿಂದ ತನ್ನನ್ನು ಹೊರತಾಗುಳಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದೆ. ಇದು ರೈತರನ್ನು ತಾವೇ ಮೊದಲು ಬಿಕ್ಕಟ್ಟಿಗೆ ದೂಡಿ ನಂತರ ತಾವೇ ಅವರಿಗೆ ಬಿಡಿಗಾಸಿನ ಪರಿಹಾರ ಕೊಟ್ಟ ತರ. ರೈತರಿಗೆ ವರ್ಷಕ್ಕೆ ೬೦೦೦ ರೂ ನಂತೆ ಕೊಡುವ ಚಿಕ್ಕಾಸಿನ ಪರಿಹಾರವು ಘನತೆಯುಳ್ಳ ಬದುಕನ್ನು ನಡೆಸಲು ಅನುವಾಗಬೇಕೆಂಬ ಅವರ ಹಕ್ಕಿನ ಉಲ್ಲಂಘನೆಯೆಂಬುದನ್ನು ಸರ್ಕಾರ ಕಡೆಗಣಿಸುತ್ತಿದೆ. ಇದು ಕೈಗಾರಿಕೋದ್ಯಮಿಗಳೆ ಮೊದಲು ತಾವೇ ಪರಿಸರ ಹಾನಿಯನ್ನುಂಟು ಮಾಡಿ ನಂತರ ತಾವೇ ಅದನ್ನು ಸರಿಪಡಿಸುವ ಪರಿಹಾರವನ್ನು ಸೂಚಿಸಿದಂತೆ. ಒಂದು ಘಟನೆಯನ್ನು ಉತ್ಪಾದಿಸುವ ಮೂಲಕ ಅಥವಾ ಘಟನೀಕರಣಕ್ಕೆ ಮುಂದಾಗುವ ಮೂಲಕ ಅವುಗಳನ್ನು ದಿಗ್ಭ್ರಾಂತಿ ಹುಟ್ಟಿಸುವ ರೀತಿಯಲ್ಲಿ ಜನರ ಮುಂದಿಟ್ಟು ಜನರ ಅಸಲಿ ಸಮಸ್ಯೆಗಳಾದ ಉದ್ಯೋಗ ಸೃಷ್ಟಿಯಲ್ಲಿ ಮತ್ತು ಕೃಷಿ ಕ್ಷೇತ್ರದ ನಿರ್ಲಕ್ಷ್ಯದಲ್ಲಿನ ತಮ್ಮ ವ್ಯವಸ್ಥಿತ ವೈಫಲ್ಯದತ್ತ ಜನರ ಗಮನ ಹರಿಯದಂತೆ ಮಾಡುವ ಒಂದು ಪರಿಯಾಗಿದೆ.

ಎರಡನೆಯದಾಗಿ, ತಮ್ಮ ಕ್ರೂಢೀಕೃತ ರಾಜಕೀಯದ ಭಾಗವಾಗಿ ಪರಸ್ಪರರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ತನ್ನ ಆಪ್ತ ವಿರೋಧಿಯ ಜೊತೆಗೂಡಿ ಸರ್ಕಾರವು ಚಿತ್ರಕಥೆಯನ್ನು ರಚಿಸುತ್ತದೆ. ನಂತರದಲ್ಲಿ ಸರ್ಕಾರದ ಆಪ್ತ ವಿರೋಧಿಯು ತನ್ನ ಸರ್ಕಾರವು ನೀಡಿದ ಭರವಸೆಗಳಿಗೆ ಸಾರ್ವಜನಿಕ ಸಮ್ಮತಿಯು ದೊರಕುವಂತೆ ಮಾಡುತ್ತಾರೆ. ಸಮಾಜದ ಸಾಕ್ಷಿಪ್ರಜ್ನೆ ಎಂದು ಕರೆಸಿಕೊಳ್ಳಲ್ಪಡುವ ಹಲವರು ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಾರೆ ಮತ್ತು ಅಂತಿಮವಾಗಿ ಸರ್ಕಾರ್ದಿಂದ ಕೆಲವು ಹುಸಿ ಭರವಸೆಗಳನ್ನು ಪಡೆದುಕೊಂಡು ತಮ್ಮ ಹೋರಾಟಗಳನ್ನು ಮುಕ್ತಾಯಗೊಳಿಸುತ್ತಾರೆ. ಈ ನೈತಿಕ ತ್ಯಾಗವು ಸರ್ಕಾರದಿಂದ ಕೇವಲ ಭರವಸೆಗಳ ಕಂತೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರಲ್ಲಿ ಮಾತ್ರ ಯಶಸ್ವಿಯಾಗುತ್ತವೆ. ಇವೆಲ್ಲವೂ ಚುನಾವಣಾ ಕಣದಲ್ಲಿ ತಮ್ಮ ಬುಡವನ್ನು ಭದ್ರಪಡಿಸಿಕೊಳ್ಳಲು ಕೈಗೊಂಡ ಸೂಕ್ಷ್ಮ ಕ್ರಮಗಳೇ ಆಗಿರುತ್ತವೆ. ಆದರೆ ಬಿಜೆಪಿಯು ತನ್ನ ಕೆಲವು ರಾಜಕೀಯ ವಿರೋಧಿಗಳನ್ನು ವೈಯಕ್ತಿಕ ಮಟ್ಟದಲ್ಲೂ ಹಣಿಯಲು ಮುಂದಾಗಿದೆ. ಹೀಗೆ ಆಳುವ ಸರ್ಕಾರವು ತಾನೇ ಕೆಲವು ಘಟನೆಗಳನ್ನು ಹುಟ್ಟಿಹಾಕಿ ಆ ನಂತರ ಅದರ ಸುತ್ತಾ ನಡೆಯುವ ರಾಜಕಾರಣದಲ್ಲಿ ತಾನೂ ಭಾಗವಹಿಸುತ್ತಾ ನಂತರ ಅದನ್ನೇ ತಮ್ಮ ಸರ್ಕಾರದ ಅದ್ಭುತ ಸಾಧನೆ ಎಂದು ಕೊಚ್ಚಿಕೊಳ್ಳುವ ವಂಚಕ ತಂತ್ರದಲ್ಲಿ ತೊಡಗಿಕೊಂಡಿದೆ.

ಮೂರನೆಯದಾಗಿ ಕೆಲವು ಬಿಜೆಪಿ ನಾಯಕರುಗಳು ನೈತಿಕವಾಗಿ ಹೀನಾಯವಾದ ತಂತ್ರಗಳನ್ನು ಅನುಸರಿಸುವಲ್ಲೂ ಹಿಂಜರಿಯುತ್ತಿಲ್ಲ. ಉದಾಹರಣೆಗೆ ಬಿಜೆಪಿಯ ಕೆಲವು ಹಿರಿಯ ನಾಯಕರು ಪ್ರಧಾನ ಮಂತ್ರಿಯ ಇಮೇಜನ್ನು ಹೆಚ್ಚಿಸುವ ಸಲುವಾಗಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಎಂಥಾ ಕೀಳು ಭಾಷೆಯನ್ನು ಬಳಸಲೂ ಹಿಂಜರಿಯುತ್ತಿಲ್ಲ.

ಆಳುವ ಪಕ್ಷ ಮತ್ತು ಸರ್ಕಾರಗಳು ತಮ್ಮ ಮೇಲಿನ ಸಕಾರಣ ವಿಮರ್ಶೆಗಳನ್ನು ಹೀಗೆ ಬಲಪ್ರಯೋಗಿಸಿ ಹತ್ತಿಕ್ಕುವ ಮೂಲಕ ವಿರೋಧ ಪಕ್ಷಗಳು ತಮ್ಮ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಬಾರದೆಂದು ಪರೋಕ್ಷ ಠರಾವು ಹೊರಡಿಸಿವೆ ಆದರೆ. ಹೀಗೆ ಪೊಳ್ಳು ಭರವಸೆಗಳನ್ನು ಉತ್ಪಾದಿಸುವ ಮತ್ತು ಮರು ಉತ್ಪಾದಿಸುವ ಮೂಲಕ ಅವುಗಳಿಗೆ ಸರಿಯಾದ ಸಮಯದಲ್ಲಿ ವಿರೋಧ ಪಕ್ಷಗಳು ಉತ್ತರವನ್ನು ಕೇಳುವಂತೆ ಮಾಡುವ ಸಹಜ ತುರ್ತನ್ನು ಸಹ ಹುಟ್ಟುಹಾಕುತ್ತಿದೆ.

ಕೃಪೆ: Economic and Political Weekly                                                    Feb 2, 2019.  Vol. 54. No.5

(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

Leave a Reply

Your email address will not be published.