ಬಾಜಪ: ಹೈಕಮ್ಯಾಂಡ್ ಸಂಸ್ಕೃತಿಯ ಸರ್ವಾಧಿಕಾರಿ ಧೋರಣೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ತಾನೇನು ಕಾಂಗ್ರೇಸ್ ಪಕ್ಷಕ್ಕಿಂತ ಭಿನ್ನವೇನಲ್ಲ! ಎನ್ನುವುದನ್ನು ಸಾಬೀತು ಪಡಿಸಲು ಬಾಜಪ ಪಣತೊಟ್ಟಂತೆ ಕಾಣುತ್ತಿದೆ. ಈ ಹಿಂದೆ ಕಾಂಗ್ರೇಸ್ಸಿನ ಹೈಕಮ್ಯಾಂಡ್ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ಬಾಜಪ ಇಂದು ಸ್ವತ: ಅದೇ ಹೈಕಮ್ಯಾಂಡ್ ಸಂಸ್ಕೃತಿಯನ್ನು ಅಳವಡಿಸಿಕೊಂಡು ತನ್ನ ಪಕ್ಷದ ಪ್ರಾದೇಶಿಕ ನಾಯಕರುಗಳ ರಾಜಕೀಯ ನಿರ್ದಾರ ಕೈಗೊಳ್ಳುವ ಸ್ವಾತಂತ್ರವನ್ನು, ಸ್ಥಳೀಯ ಕಾರ್ಯಕರ್ತರುಗಳ   ಅಭಿಪ್ರಾಯ ಸ್ವಾತಂತ್ರವನ್ನು ಹರಣ ಮಾಡುತ್ತ ಸಾಗುತ್ತಿದೆ.

ಬಹಳ ಹಿಂದಿನಿಂದಲೂ ಬಹುಶ: ಮಾಜಿ ಪ್ರದಾನಮಂತ್ರಿಗಳಾದ  ಇಂದಿರಾಗಾಂದಿಯವರ ಕಾಲದಿಂದಲೂ ಕಾಂಗ್ರೆಸ್ಪಕ್ಷ ಹೈಕಮ್ಯಾಂಡ್ ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿದ್ದು,  ರಾಜ್ಯನಾಯಕರುಗಳಿಗೆ  ಯವುದೇ ಸ್ವಾತಂತ್ರ  ನೀಡುತ್ತಿಲ್ಲವೆಂಬ ಆರೋಪವನ್ನು ಜನತಾ ಪರಿವಾರ, ಬಾಜಪ ಸೇರಿದಂತೆ ಬಹುತೇಕ ಎಲ್ಲ ವಿರೋಧ ಪಕ್ಷಗಳೂ ಮಾಡುತ್ತಲೇ ಬರುತ್ತಿವೆ. ಈ ಹೈಕಮ್ಯಾಂಡ್ ಸಂಸ್ಕೃತಿಗೆ ಗಾಂದಿ ಕುಟುಂಬದ ವಂಶ ಪಾರಂಪರ್ಯ ಅಡಳಿತವನ್ನು ಥಳುಕು ಹಾಕುತ್ತ, ಕಾಂಗ್ರೇಸ್ ಯಾವತ್ತಿಗೂ ಸ್ಥಳೀಯ ನಾಯಕತ್ವವನ್ನು ಬೆಳೆಯಲು ಮುಕ್ತ ಅವಕಾಶ ನೀಡುತ್ತಿಲ್ಲ ಎಂಬ ಅರೋಪವನ್ನು ಮಾಡುತ್ತಲೇ ಬಂದಿರುವುದನ್ನು ನಾವು ನೋಡಬಹುದಾಗಿದೆ. ಟಿಕೇಟ್ ಹಂಚಿಕೆಯಿಂದ ಹಿಡಿದು, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ತನಕವೂ ದೆಹಲಿಯ ನಾಯಕರುಗಳೇ ನಿರ್ದಾರ ತೆಗೆದುಕೊಳ್ಳುತ್ತಾರೆಂಬುದು ಕಾಂಗ್ರೇಸ್ ಮೇಲಿರುವ ಗುರುತರ  ಆರೋಪ.

ಒಂದು ರಾಷ್ಟ್ರೀಯ ಪಕ್ಷವಾಗಿ ತಾನು ಕಾಂಗ್ರೇಸ್ಸಿಗಿಂತ ವಿಭಿನ್ನವಾಗಿ ನಡೆದುಕೊಳ್ಳುವ ಪಕ್ಷವೆಂದು ತನಗೆ ತಾನೇ ಹೇಳಿಕೊಳ್ಳುತ್ತ ಬಂದ   ಬಾಜಪ ಇವತ್ತು ಹೈಕಮ್ಯಾಂಡ್ ಸಂಸ್ಕೃತಿಯಲ್ಲಿ ಕಾಂಗ್ರೇಸ್ಸನ್ನು ಮೀರಿಸುವಂತೆ ನಡೆದುಕೊಳ್ಳುತ್ತಿದೆ. ಇಡೀ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಂತೆ ನಡೆದುಕೊಳ್ಳುತ್ತಿರುವ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಬಾಜಪದ ರಾಷ್ಟ್ರಾದ್ಯಕ್ಷರೂ ಆದ ಮೋದಿಯವರ ಪರಮಾಪ್ತರಾದ ಅಮೀತ್ ಷಾ ಅವರುಗಳು  ಸದ್ಯಕ್ಕೆ ಬಾಜಪದ ಹೈಕಮ್ಯಾಂಡ್ ಅಗಿದ್ದು, ಪಕ್ಷದೊಳಗಿನ ಸಕಲ ನಿರ್ದಾರಗಳನ್ನು ಅವರೇ ತೆಗೆದುಕೊಳ್ಳುತ್ತಿರುವುದು ಇವತ್ತು ಗುಟ್ಟಾಗಿಯೇನೂ ಉಳಿದಿಲ್ಲ. ಅದು ಯಾವುದೇ ರಾಜ್ಯಗಳ ಚುನಾವಣೆಯೇ ಇರಲಿ ಮೋದಿ ಮತ್ತು ಷಾರವರ ಜೋಡಿಯೆ ಅಲ್ಲಿಯ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಪ್ರಣಾಳಿಕೆ ಪ್ರಚಾರಗಳವರೆಗು  ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ಸ್ಥಳೀಯ ನಾಯಕತ್ವವನ್ನು ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ ಇದಕ್ಕೆ ತೀರಾ ಇತ್ತೀಚೆಗಿನ  ಉದಾಹರಣೆಯೆಂದರೆ  ಮೊನ್ನೆ ಮುಗಿದ ಗುಜರಾತ್ ಚುನಾವಣೆ!

ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣಾ ಪ್ರಚಾರದವರೆಗು ಸಕಲವನ್ನೂ ನಿರ್ವಹಿಸಿದ್ದು ಮತ್ತದೇ ಮೋದಿ-ಷಾ ಜೋಡಿಯೇ. ಕನಿಷ್ಠ ಚುನಾವಣಾ ಪ್ರಚಾರಗಳ ರ್ಯಾಲಿಗಳಲ್ಲಿಯಾಗಲಿ, ಇತರೇ ಬಹಿರಂಗ ಸಭೆಗಳಲ್ಲಾಗಲಿ ಒಬ್ಬನೇ ಒಬ್ಬ ಗುಜರಾತಿ ಪ್ರಾದೇಶಿಕ ನಾಯಕನ ಪಾತ್ರ ಇತ್ತೆಂದು  ತೋರಿಸುವ ಯಾವ ಕುರುಹೂ ಇರಲಿಲ್ಲ. ಗುಜರಾತಿನ ಒಬ್ಬನೇ ಒಬ್ಬ ಸ್ಥಳೀಯ ನಾಯಕನಿಗೂ, ಮುಖ್ಯಮಂತ್ರಿ ರೂಪಾನಿಯವರೂ ಸೇರಿದಂತೆ, ಒಂದು ಪತ್ರಿಕಾ ಹೇಳಿಕೆ ನೀಡುವ ಸ್ವಾತಂತ್ರವೂ ಇರಲಿಲ್ಲ.  ಅಷ್ಟರ ಮಟ್ಟಿಗೆ  ಬಾಜಪದ ಆ ಎರಡು ವ್ಯಕ್ತಿಗಳ  ಹೈಕಮ್ಯಾಂಡ್   ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು.

ಇದೀಗ ಕರ್ನಾಟಕದಲ್ಲಿಯೂ ಅಂತಹುದೇ ಬೆಳವಣಿಗೆಗಳು ನಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ.ಮೊನ್ನೆ ಕರ್ನ಻ಟಕಕ್ಕೆ ಬಂದು ಹೋದ ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರು ಬಾಜಪದ ನಾಯಕರುಗಳಿಗೆ ನೀಡಿರುವ ಸೂಚನೆಗಳನ್ನು (ಖಂಡಿತಾ ಅವು ಸೂಚನೆಗಳಂತೂ ಅಲ್ಲ, ಬದಲಿಗೆ ಆದೇಶಗಳು ಎನ್ನಬಹುದಷ್ಟೆ!) ಸೂಕ್ಷ್ಮವಾಗಿ ಗಮನಿಸಿದರೆ ಬಾಜಪದ ಕೆಂದ್ರ ನಾಯಕರುಗಳಿಗೆ ರಾಜ್ಯಬಾಜಪದ ನಾಯಕರುಗಳ ಮೆಲೆ ವಿಶ್ವಾಸ ಇಲ್ಲದೇ ಇರುವುದನ್ನೂ, ಜೊತೆಗೆ ಅವರ ಸರ್ವಾಧಿಕಾರಿ ಧೋರಣೆಯನ್ನೂ  ಅರ್ಥಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು.

ಮೊದಲನೆಯದು, ಅಮಿತ್ ಷಾರವರು  ರಾಜ್ಯದ ಯಾವುದೇ ನಾಯಕರುಗಳು, ಪಕ್ಷದ ಪರಿವರ್ತನಾ ಯಾತ್ರೆಯಲ್ಲಾಗಲಿ ಇನ್ಯಾವುದೇ ಬಹಿರಂಗ ಸಭೆಗಳಲ್ಲಾಗಲಿ ಮುಂದಿನ ಚುನಾವಣೆಯ ಟಿಕೇಟು ಹಂಚಿಕೆಯ ಬಗ್ಗೆ ಮಾತನಾಡುವಂತಿಲ್ಲ ಎಂದು ಅಪ್ಪಣೆ ಕೊಡಿಸಿದ್ದಾರೆ.  ರಾಜ್ಯದ ಯಾವುದೇ ನಾಯಕರುಗಳೂ  ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ತಲೆಹಾಕಬಾರದೆಂಬುದು ಈ ಆದೇಶದ ಉದ್ದೇಶವಾಗಿದೆ. ಷಾರವರು ಮುಂದುವರೆಯುತ್ತ, ಯಾರೊಬ್ಬರೂ ಯಾವುದೇ ಸಮಾವೇಶದಲ್ಲಿ ಅಭ್ಯರ್ಥಿಯ ಹೆಸರನ್ನು  ಘೋಷಣೆ ಮಾಡಬಾರದೆಂದು ಆದೇಶ ನೀಡಿದ್ದಾರೆ. ಇದು  ಪರೋಕ್ಷವಾಗಿ ರಾಜ್ಯ ಬಾಜಪದ ಅದ್ಯಕ್ಷರಾದ ಶ್ರೀ ಯಡಿಯೂರಪ್ಪನವರನ್ನೇ  ಗುರಿಯಾಗಿಸಿಕೊಂಡು   ಮಾಡಿದ ಆದೇಶ ಎನ್ನಬಹುದು.

ಯಾಕೆಂದರೆ ಈಗಾಗಲೇ ಪರಿವರ್ತನಾ ಯಾತ್ರೆಗಳು ನಡೆದ ಹಲವಾರು ಕ್ಷೇತ್ರಗಳಲ್ಲಿ ವೇದಿಕೆಯ ಮೇಲೆಯೇ ಇಂತವರೇ ಈ ಕ್ಷೇತ್ರದ ಅಭ್ಯರ್ಥಿ ಎಂದು ಯಡಿಯೂರಪ್ಪನವರು ಘೋಷಣೆ ಮಾಡಿದ್ದು(ಅಂದಾಜು ಇಪ್ಪತ್ತೈದು ಅಭ್ಯರ್ಥಿಗಳನ್ನು ಯಡಿಯೂರಪ್ಪನವರು ಈಗಾಗಲೇ ಘೋಷಣೆ ಮಾಡಿಯಾಗಿದೆ.) ಇದನ್ನು ಸಹಿಸದ ಬಾಜಪದ ಇತರೇ ನಾಯಕರುಗಳ  ಚಿತಾವಣೆಯಂತೆ ಷಾರವರು  ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರಸಮಿತಿಯೇ ಮಾಡುತ್ತದೆಯಾದ್ದರಿಂದ ರಾಜ್ಯದ ಯವುದೇ ನಾಯಕರುಗಳೂ ಆ ಬಗ್ಗೆ ತುಟಿ ಬಿಚ್ಚುವಂತಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಅಲ್ಲಿಗೆ ಪಕ್ಷವೊಂದರ ರಾಜ್ಯಾದ್ಯಕ್ಷರಿಗೆ ಇರಬಹುದಾದ ಪರಮಾಧಿಕಾರವನ್ನು  ಬಾಜಪದ ಹೈಕಮ್ಯಾಂಡ್ ಕಿತ್ತುಕೊಂಡಂತಾಯಿತು. ನಾಮಪತ್ರದ ‘ಬಿ ಫಾರಂ’ಮ್ಮಿಗೆ ಸಹಿ ಹಾಕುವ ಅಧಿಕಾರ ಉಳ್ಳ ಅದ್ಯಕ್ಷರಿಗೇ  ಅಭ್ಯರ್ಥಿಗಳ ಆಯ್ಕೆಯ ಅಧಿಕಾರ ಇಲ್ಲವೆಂದಾದರೆ ಆ ಅದ್ಯಕ್ಷ ಗಾದಿ ಕೇವಲ ರಬ್ಬರ್ ಸ್ಟಾಂಪ್ ಮಟ್ಟಕ್ಕೆ ಇಳಿದಂತಾಗುತ್ತದೆ.ಪಕ್ಷದ ಟಿಕೇಟುಗಳನ್ನು ಅರ್ಹತೆ ಆಧರಿಸಿಯೇ ನೀಡಲಾಗುವುದೆಂಬ ಮಾತಿನ ಹಿಂದೆ ರಾಜ್ಯದ ನಾಯಕರುಗಳಿಗೆ ಅರಿವಾಗದ ಅಭ್ಯರ್ಥಿಗಳ ಅರ್ಹತೆ ಗೆಲ್ಲುವ ತಾಕತ್ತು ಕೇಂದ್ರದ ನಾಯಕರುಗಳಿಗೆ ಅರ್ಥವಾಗಿ ಬಿಡುತ್ತದೆ ಎನ್ನುವುದಕ್ಕಿಂತ ರಾಜ್ಯದ ನಾಯಕರುಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದೇ ಆಗಿದೆ. ಇದು ದೆಹಲಿಕೇಂದ್ರಿತಸರ್ವಾಧಿಕಾರಿ ಧೋರಣೆಯ ಪ್ರತೀಕವೇ ಆಗಿದೆ.

ಇನ್ನು ಮುಂದುವರೆದ ಷಾರವರು ವೀರಶೈವ ಲಿಂಗಾಯಿತ ವಿವಾದದಲ್ಲಿ ಬಾಜಪದ ರಾಜ್ಯ ನಯಕರುಗಳು ತಟಸ್ಥರಾಗಿರಬೇಕೆಂದೂ,  ಆ ಹೋರಾಟದಲ್ಲಿ ಯಾರೂ ಸಕ್ರಿಯವಾಗಿ ಪಾಲ್ಗೊಳ್ಳಬಾರದೆಂದೂ ಆದೇಶಿಸಿದ್ದಾರೆ. ಇದು ಒಂದು ಪಕ್ಷದ  ಕೇಂದ್ರ ನಾಯಕರುಗಳ ಸರ್ವಾಧಿಕಾರಿ ಧೋರಣೆಯ ಪರಮಾವಧಿ. ಲಿಂಗಾಯಿತ ಹೋರಾಟ ರಾಜ್ಯದ ಜನರ ಸ್ಥಳೀಯ ಸಮಸ್ಯೆಯಾಗಿದ್ದು ಒಂದು ರಾಜಕೀಯ ಪಕ್ಷವಾಗಿ ಒಂದು  ನಿರ್ದಿಷ್ಟ ನಿಲುವನ್ನು  ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ ವಾಗಿರುತ್ತದೆ. ಈ ವಿಚಾರದಲ್ಲಿ ತಮ್ಮ ಕ್ಷೇತ್ರದ ಜನತೆಗೆ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕಿರುವುದು ರಾಜ್ಯ ನಾಯಕರುಗಳ ಕರ್ತವ್ಯವೂ ಆಗಿರುತ್ತದೆ. ಆದರೆ  ಈ ಕುರಿತಾಗಿ ಮಾತನಾಡಬಾರದೆಂಬ ಷಾರವರ ಸೂಚನೆ ರಾಜ್ಯನಾಯಕರುಗಳ ಸ್ವಾತಂತ್ರವನ್ನೆ ಕಿತ್ತುಕೊಂಡಂತಾಗಿದೆ.

ಅದೇ ರೀತಿ ಮಹಾದಾಯಿ ವಿಚಾರದಲ್ಲಿಯೂ ರಾಜ್ಯದ ನಾಯಕರುಗಳು ಯಾವುದೇ ಹೇಳಿಕೆ ನೀಡಬಾರದೆಂದು  ತೀಳಿಸಲಾಗಿದ್ದು, ಸ್ಥಳೀಯ ರೈತರ ಸಮಸ್ಯೆಗಳನ್ನು ಚಚಿಸಲು ರಾಜ್ಯ ನಾಯಕರುಗಳಿಗೆ ಸ್ವಾತಂತ್ರ ಇಲ್ಲವಾಗಿದೆ. ಅಲ್ಲಿಗೆ ಚುನಾವಣೆಯನ್ನು ಗೆಲ್ಲುವುದೊಂದೆ  ಬಾಜಪದ ಕೇಂದ್ರ ನಾಯಕರುಗಳ ಗುರಿಯಗಿದ್ದು ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಚಚೆ ನಡೆಸಬಾರದೆಂಬುದು  ಅದರ ಘನ ಉದ್ದೇಶವೆಂಬುದು ಇದರಿಂದ ಮನದಟ್ಟಾಗುತ್ತದೆ.

ಇನ್ನು ಕಾಂಗ್ರೇಸ್ ಪಕ್ಷವೆ ನಮ್ಮ ಏಕೈಕ ವೈರಿ ಎಂದಿರುವ ಷಾರವರು  ಜಾತ್ಯಾತೀತ ಜನತಾದಳ ಪಕ್ಷವನ್ನಾಗಲಿ, ಅದರ ನಾಯಕರುಗಳನ್ನಾಗಲಿ ಹೆಚ್ಚು ಟೀಕಿಸಬಾರದೆಂದು ಪರೋಕ್ಷವಾಗಿ ಸೂಚಿಸಿದ್ದಾರೆ. ಇದರ ಅರ್ಥ ಮುಂದಿನ ಚುನಾವಣೆಯಲ್ಲಿ ಅತಂತ್ರ ವಿದಾನಸಭೆ ನಿರ್ಮಾಣವಾದರೆ ಜನತಾದಳದೊಂದಿಗೆ ಮೈತ್ರಿಗೆ ಮುಂದಾಗಿ ಸರಕಾರ ರಚಿಸುವುದು ಬಾಜಪದ ಉದ್ದೇಶವಾಗಿದೆ. ಸ್ಥಳೀಯ ರಾಜಕಾರಣದ ಏರುಪೇರುಗಳನ್ನು ನೋಡಿಕೊಂಡು  ಇನ್ನೊಂದು ಪಕ್ಷದೊಂದಿಗೆ ಮೈತ್ರಿಯ ನಿರ್ದಾರಗಳನ್ನು ತೆಗೆದುಕೊಳ್ಳುವುದು ಯಾವುದೇ ರಾಜ್ಯದ ರಾಜ್ಯ ನಾಯಕರುಗಳ ಹಕ್ಕಾಗಿರುತ್ತದೆ. ಯಾಕೆಂದರೆ ಸ್ಥಳೀಯವಾಗಿ ರಾಜಕೀಯ ಮಾಡುವ ನಾಯಕರುಗಳಿಗೆ ಈ ಬಗ್ಗೆ ಒಂದು ಖಚಿತ ದೃಷ್ಠಿಕೋನವಿರುತ್ತದೆ. ಯಾವ ಪಕ್ಷದೊದಿಗೆ ಮೈತ್ರಿ ಮಾಡಕೊಳ್ಳಬೇಕೆಂಬುದನ್ನೂ ಕೇಂದ್ರದ ನಾಯಕರುಗಳೇ ನಿರ್ದರಿಸುವುದಾದರೆ ರಾಜ್ಯದ ನಾಯಕರುಗಳಿಗೆ ಪಕ್ಷದ ನೀತಿ ನಿರೂಪಣೆಯಲ್ಲಿ ಯಾವುದೆ ಪ್ರಾಮುಖ್ಯತೆ ಇಲ್ಲದಂತಾಗುವುದು ನಿಶ್ಚಿತ. ಹೀಗೆ ಬಾಜಪದ ಹೈಕಮ್ಯಾಂಡ್ ರಾಜ್ಯದ ಬಾಜಪ ಘಟಕವನ್ನು   ನಿರ್ಲಕ್ಷಿಸಿ ತನ್ನ ನಿರ್ದಾರಗಳನ್ನು ರಾಜ್ಯನಾಯಕರುಗಳ ಮೆಲೆ ಹೇರುತ್ತಿದೆ. ಪ್ರಜಾಸತ್ತಾತ್ಮಕ  ಚಟುವಟಿಕೆಗಳಲ್ಲಿ ನಂಬಿಕೆ ಇರುವ ಯಾವ ರಾಜಕೀಯ ಪಕ್ಷವೂ ಹೀಗೆ ಏಕಮುಖವಾಗಿ  ತನ್ನ ನಿರ್ದಾರಗಳನ್ನು ತೆಗೆದುಕೊಳ್ಳುವುದಿಲ್ಲ.

   ಇಷ್ಟು ಮಾತ್ರವಲ್ಲದೆ ಒಂದು ಶಾಲೆಯ ಮುಖ್ಯೋಪಾದ್ಯಾಯರ ಶೈಲಿಯಲ್ಲಿ ಅಮಿತ್ ಷಾರವರು, ನಾನು ಮತ್ತೊಮ್ಮೆ ರಾಜ್ಯಕ್ಕೆ ಬೇಟಿ ಕೊಡುವಾಗ ಈಗ  ನಾನು ನೀಡಿರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ವರದಿ ನೀಡಬೇಕೆಂದು ತಾಕೀತು ಮಾಡಿ ಹೋಗಿದ್ದಾರೆ.   ಹೋಂ ವರ್ಕ ಮಾಡಲು ಮಕ್ಕಳಿಗೆ ಹೇಗೆ ಶಿಕ್ಷಕರು ಭಯ ಹುಟ್ಟಿಸುತ್ತಾರೋ ಆ ಮಾದರಿಯಲ್ಲಿಯೇ ಷಾ ಬಾಜಪದ ರಾಜ್ಯ ನಾಯಕರುಗಳನ್ನು ನಡೆಸಿಕೊಳ್ಳುತ್ತಿದ್ದಾರೆ.

ಇವೆಲ್ಲದರ ಜೊತೆಗೆ ಕರ್ನಾಟಕ ರಾಜ್ಯದ ಚುನಾವಣೆಗಳಲ್ಲಿ ಯಾವ ವಿಷಯಗಳು ಚರ್ಚೆಯಾಗಬೇಕೆಂಬುದನ್ನೂ ಕೇಂದ್ರದ ಬಾಜಪವೆ ನಿರ್ದರಿಸುವ ಮಟ್ಟಿಗೆ ಹೋಗಿದೆ. ತನ್ಮೂಲಕ ಅದು ಜನತೆಯ ಬಾವನಾತ್ಮಕ ವಿಚಾರಗಳನ್ನು ಚರ್ಚೆಗೆ ಎಳೆತಂದು ತನ್ನ ಮತಬ್ಯಾಂಕನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ರಾಜ್ಯದ ನೆಲಜಲಗಳ ಸಮಸ್ಯೆಗಳ  ಅಳಗಲಗಳನ್ನು ಸಂಪೂರ್ಣವಾಗಿ ಅರಿತ ರಾಜ್ಯನಾಯಕರುಗಳಿಗೆ ಚುನಾವಣಾ ವಿಷಯನ್ನು ನಿರ್ದರಿಸುವ ಹಕ್ಕು ಇರಬೇಕೇ ಹೊರತು, ದೆಹಲಿಯ ದೊರೆಗಳಿಗೆ ಅಲ್ಲ. ಈ ಮಾತು ಕಾಂಗ್ರೇಸ್ಸಿಗೆ ಎಷ್ಟು ಅನ್ವಯಿಸುತ್ತದೆಯೊ ಅಷ್ಟರ ಮಟ್ಟಿಗೆ ಬಾಜಪಕ್ಕೂ ಅನ್ವಯಿಸುತ್ತದೆ

 

Leave a Reply

Your email address will not be published.